ಅವಳೆದೆಯಲ್ಲಿ ಹೆಮ್ಮರದ ಮತ್ತೊಂದು ಕವಲಿನ ಸ್ಪರ್ಶ..

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ವಿನತೆ ಶರ್ಮ ಕವಿತೆಗಳ ಬಗ್ಗೆ ಟಿಪ್ಪಣಿ ಬರೆಯಲಿರುವವರು ಹೆಚ್.ಎಸ್.ರೇಣುಕಾರಾಧ್ಯ.

ನಮ್ಮ ಈ ವಾರದ ಕವಿ- ಡಾ.ವಿನತೆ ಶರ್ಮಾ.

ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಪತ್ರಿಕೋದ್ಯಮ, ಸೈಕಾಲಜಿ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ವಿನತೆ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.

ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನತೆಯವರು ವೃತ್ತಿಯಲ್ಲಿ ಶಿಕ್ಷಣ, ಮನಶ್ಶಾಸ್ತ್ರ ಹಾಗೂ ಪರಿಸರ ತಜ್ಞೆ.

ಏಕ್ಷನೇಬಲ್ ಲಿವಿಂಗ್ ಟ್ರಸ್ಟ್ ನ ಸ್ಥಾಪಕ ನಿರ್ದೇಶಕಿ. ಆರ್ಥಿಕ ಸ್ವಾವಲಂಬನೆ, ನಾಗರಿಕ ಹಕ್ಕುಗಳು ಹಾಗೂ ಸಾಮಾಜಿಕ ಸುಧಾರಣೆ, ಶಿಕ್ಷಣ, ಪರಿಸರ, ಸಮಾಜ ಸೇವೆ.. ಹೀಗೆ ವಿನತೆಯವರ ಕ್ರಿಯಾಶೀಲತೆಗೆ ಹಲವು ಕವಲುಗಳು.

ಸಾಹಿತ್ಯ, ಕವಿತೆ, ಕತೆ, ಬರವಣಿಗೆ ಆ ಎಲ್ಲ ಕ್ರಿಯಾಶೀಲತೆಗೆ ಅಕ್ಷರ ರೂಪ ಕೊಡುವ ಮಾಧ್ಯಮವೆಂಬುದು ಅವರ ನಂಬಿಕೆ.

ಎಲೆಯಾಗುವೆ ಮತ್ತೆ

ಕಳಚಿಕೊಂಡೆ
ಕೊಂಬೆ ಕೈ ಬಿಟ್ಟಿತು
ಎಂಬ ದೂಷಣೆಯಿಲ್ಲ,
ತಾಯಿಂದ ಬೇರ್ಪಟ್ಟೆ,
ದುಃಖವಿಲ್ಲ
ಕಳಚಿಕೊಂಡೇಬಿಟ್ಟೆ,
ಭಯವಿಲ್ಲ
ಬೀಳುತ್ತಿದ್ದೀನಿ
ಹಗುರವಾಗಿ, ತೇಲುತ್ತಾ
ಹೊಸ ಗಾಳಿಯಲ್ಲಿ
ಸ್ವತಂತ್ರವಾಗಿ, ಗೂಡ
ತೊರೆದು ಹಾರಿಹೋದ
ಹಕ್ಕಿಯಂತೆ,
ಹಾರುತ್ತಿದ್ದೀನಿ
ಗೊತ್ತಿದೆ, ಹೊಸ ಗೂಡ
ಕಟ್ಟಲಾರೆ,
ನನ್ನದೇ ಮನೆಯ
ಕನಸಿಲ್ಲ,
ಈ ಕ್ಷಣ ಸಾಕು
ಅಲೆ ಅಲೆಯಾಗಿ ತೇಲಿ
ಬಿದ್ದು ನೆಲ ಸೇರಿ
ಮಣ್ಣ ಕೈ ಬೆಸೆಯುವೆ,
ಆ ಎರೆಹುಳುವಿನ
ಸಂಗಾತಿಯಾಗಿ
ಚಿರವಾಗುವೆ
ಎಲೆಯಾಗುವೆ ಮತ್ತೆ,
ಮತ್ತೆ.

ಋತುಮಾನಗಳ ಸೇತುವೆ

ಬಂತೊಮ್ಮೆ ಮತ್ತದು ಈ ಕಾಲ
ನೆನೆಗುದಿಗೆ ಬೀಳದೆ ಬೇಸರಿಸದೆ
ನನ್ನದಲ್ಲ ಈ ಕೆಲಸ ಎಂದನದೇ
ಉದಾಸೀನ ತೋರದೆ
ಜಡಭರತನಾಗದೇ
ಕಳ್ಳ ಹೆಜ್ಜೆಯಿಡುತ
ಆವರಿಸಲು ಬಂತದು ಈ ಕಾಲ
ಜೀವಜಾಲದ ನಿಜವ ಸಾರಿತು.

ಬಣ್ಣದ ಶಾಯಿಯ ಆಯ್ಕೆಗಳ
ಮೇರೆ ಮೀರಿ ಕಲೆಗಾರನ
ಕಲ್ಪನೆಯ ಕುಂಚಕ್ಕೆ ಹೊಸ
ಸವಾಲೆಸಗಿ ಎಲ್ಲೆ ದಾಟಿ ಮತ್ತೊಮ್ಮೆ
ಬಣ್ಣದೋಕುಳಿಯ ಸೃಷ್ಟಿಗೆ
ಸಜ್ಜಾಗಿ, ಸಂಭ್ರಮಿಸಿ ವರಿಸಲು
ವಧುವರರು ಒಂದಾದ ಮೇಳದಂತೆ
ಬಂದಿತು ಇಗೋ ಆ ಕಾಲ.

ಕನಕಾಂಬರದ ಕೋಮಲತೆ
ದಾಸವಾಳ ವೈವಿಧ್ಯತೆಯ
ವಿಜೃಂಭಿಸುವ ಆ ಹೂ
ಪಕಳೆಗಳಂತೆ ಬಿಚ್ಚಿದೆ
ಈ ಶರತ್ಕಾಲದ ಅಂದಚೆಂದ
ಕೆಂಪು ಕೇಸರಿ ಕಂದುಗಳ ಎಲೆ ಚೆಲ್ಲಾಟ
ಹಸಿರು ಹಳದಿಗಳ ಮರ ಮೈಮಾಟ
ಏನಿದು ಬೆರಗು ಏನಿದು ಅಚ್ಚರಿ.

ಪುಟ ತಿರುವಿದಷ್ಟೂ ಕೊನೆಯಿಲ್ಲ
ಅದರ ವಿಸ್ಮಯಕೆ ಎಣೆಯಿಲ್ಲ
ಕೊಂಬೆಯಿಂದ ಜಾರಿದ ಎಲೆ
ಬಿಡಿಸಿದ ಹತ್ತಿಯಂತೆ ಹಗುರ
ಕಳಚಿ ಕೆಳಬಿದ್ದ ಎಲೆಗಳ ಹಾಸು
ನೆಟ್ಟನಿಂತ ಬರಿಮೈ ಮರ
ಋತುಮಾನಗಳ ಸೇತುವೆ
ಈ ಶರತ್ಕಾಲ ನಿಸರ್ಗದ ಮಹತ್ಕಾಲ

ಒಪ್ಪಿಕೆ

“ಸೇರಿಸಿಕೊ, ಹೊಸತನ ಅಲ್ಲವೇ.”
ಅವನಿಗೇನೋ ಹೆಮ್ಮೆ
ಅವಳೆದೆಯಲ್ಲಿ
ಹೆಮ್ಮರದ ಮತ್ತೊಂದು
ಕವಲಿನ ಸ್ಪರ್ಶ.

ಯಾಕೆ? ಪ್ರಶ್ನೆಯೇನೋ ಗಟ್ಟಿ
ಉತ್ತರ ಮರೀಚಿಕೆ
ಸೇರಿಸಿಕೊಂಡರೆ ಏನಾಗತ್ತೆ!
ಎಲ್ಲರ ಒಮ್ಮತ.
ಅವರದ್ದೇನೋ ಅಪ್ಪಣೆ.

ಅವನದ್ದು ನಿರೀಕ್ಷೆ
ಅವಳದು? ಉಹುಂ,
ಅದೇ ಭಾವನೆ, ಹುಡುಕಾಟ.
ಒಪ್ಪಲಾ, ಒಪ್ಪಿಕೊಳ್ಳಲೇಬೇಕಾ,
ಹೆಮ್ಮರದತ್ತ ಮರುನೋಟ.

ಎಲ್ಲಿದೆ ಇದರ ಮೂಲ-
ಎದೆಯಲ್ಲಾ, ತಲೆಯಲ್ಲಾ,
ಅವನ ಪ್ರೀತಿಯಲ್ಲಾ,
ಅವರ ಮನೆತನದಲ್ಲಾ,
ಎಲ್ಲೆಲ್ಲೂವಾ.

ಸೇರಿಸಿಕೊಂಡರೆ – ಏನಾಗತ್ತೆ?
ಬಣ್ಣ ಬದಲಾಯಿಸುತ್ತಾ?
ರೂಪ? ಗುರುತು, ಪರಿಚಯ,
ಸ್ವಂತಿಕೆ?
ಇರುವಿಕೆ, ನನ್ನತನ?

ಹೆಮ್ಮರದಲ್ಲಿ
ಎನ್. ರಾಗಿಣಿಯಾಗಿದ್ದವಳು
ರಶ್ಮಿ ಜರಡಿ ಆದಳು.
ಮಾನಸ ಮತ್ತೇನೋ ಆದಳು.
ಕಳೆದು ಹೋದರವರು.

ಅವನವಳು,
ಅವರ ಮನೆಯವಳು,
ಅವರಲ್ಲಿ ಅವಳು.
ಅವರ ಕವಚದಲ್ಲಿ
ಅವಳ ಸ್ಥಾನ.

ಹೆಸರಲ್ಲೇನಿದೆ ಮಹಾ.
ಸೇರಿಸಿಕೊ ನನ್ನದ್ದನ್ನ,
ಹೆಮ್ಮೆ ನನಗೆ. ಹೊಸತನ ನಿನಗೆ.
ಅವನ ಮಾತಿಗೆ
ಅವಳ ಭಾವನೆಯೇ ಉತ್ತರ.

ನನ್ನ ಹೆಸರು
ನಾನು ಅಲ್ಲವೇ?
ಜೊತೆಗಾರ- ಒಪ್ಪಿಕೊ
ಹೀಗೇ ನನ್ನನ್ನ
ನಾನೊಪ್ಪಿಕೊಂಡಂತೆ ನಿನ್ನನ್ನ.

ದೇವಿಯರು ನಕ್ಕಾಗ

ಕೊಳದೊಳಗಿನ ನೆರಳು
ದಿಟ್ಟಿಸಿ ನಿಂತ ನೀರೆ
ಅವಳದಲ್ಲ ಆ ಭ್ರಮೆ
ಕನ್ನಡಿಯಲ್ಲಿದ್ದ ಸತ್ಯಕ್ಕೆ
ಅವರ ಅನಿವರತ ಹುಡುಕಾಟ.

ಅವರಿಗೂ ಇತ್ತು ಗುರಿ
ಬೀಜ ಬಿತ್ತುವ ಪರಿ
ಕೇಳಲಿಲ್ಲ ಭೂಮಿಯ.
ಚೌಕಟ್ಟು ನಿಯಮಗಳ
ಬಂಧಿತ ಮೈ ಮನಸ್ಸು.

ಕೊಳದ ನೆರಳ ಹುಡುಗಿಯ
ನಗು ಅವರ ಮರೀಚಿಕೆ
ಹೊನ್ನ ಜಿಂಕೆಯೇರಿ ಓಡುತ್ತಾ
ನಕ್ಕ ದೇವಿಯರಿಗೆ ಬಾರೆಂಬ ಬಿನ್ನಹ
ತುಳಿದ ತಮ್ಮದೇ ಅರ್ಧಕ್ಕೆ
ಪರಂಪರೆಯ ಕುಡಿಕೆಯಲ್ಲಿ
ಬಚ್ಚಿಟ್ಟಿರುವ ಅರ್ಥಕ್ಕೆ
ಪರಿಪರಿಯ ಹುಡುಕಾಟ.

ವಿಧಿವಿಧಾನದಲ್ಲಿ ಅರಳುವ
ಪುರುಷೋತ್ತಮರು
ಹುಟ್ಟಿಸುವ ರಕ್ತಸಿಕ್ತ
ದೇವಿಯರ ಕೊಂಕು
ಮರುಕಳಿಸುವ ದಶಮಿಗಳಲ್ಲಿನ
ನಿಜ-ಭ್ರಮೆ ಜೀಕುವಿಕೆ.

ಪ್ರೇಮ ಸಂಗಾತಿ

ಕಾಡಬೇಡ ನೀ
ಆವರಿಸಿಕೊಂಡದ್ದು ಸಾಕು
ಅವ್ಯಕ್ತವಾಗಿರಲು ಬೇಕು
ನೀ ಕಾಡಿದಷ್ಟೂ ನಿನ್ನನ್ನೇ
ಕನವರಿಸುತ್ತೇನೆಂಬ ಚಿಂತೆ.
ದಿನವೆಲ್ಲಾ ನಿನ್ನನ್ನಪ್ಪಿಕೊಂಡದ್ದು
ಸಾಲದೇ ಪಕ್ಕ ಸರಿದು
ಇನಿಯನಿಗೆ ಬಾ ಹೇಳು
ಮೋಹಿನಿಯಂತೆ ನೀ ಕಾಡಿ
ನಿನ್ನನ್ನು ಹಿಂಬಾಲಿಸಿ
ರಾತ್ರಿ ನಿದ್ದೆಯಲಿ ನಾ ನಡೆದರೆ
ಆ ನನ್ನ ಫ್ಲಾಟ್ ಮೇಟ್
ಅಂಬ್ಯುಲೆನ್ಸಗೋ ಇಲ್ಲಾ
ಪೋಲೀಸರಿಗೋ ಮಾಡುವ
ತುರ್ತು ಕರೆಯ ಭಯ.
ಓದಿ ಓದಿ ಕುರುಡಿಯಾಗುತ್ತೀಯ!
ಬಾಲ್ಯದಲ್ಲಂದ ಅಪ್ಪನ ಮಾತು
ಅರ್ಧ ನಿಜವಾಗಿ
ಬಿಟ್ಟಿದೆಯಲ್ಲಾ ಎಂಬ
ಹೊಟ್ಟೆಕಿಚ್ಚು,
“ಎಲ್ಲೋ ಯಾವುದೋ
ಲೈಬ್ರರಿಯಲ್ಲಿ
ಒಂದಿನ ನೀನು
ಕಳೆದೇ ಹೋಗುತ್ತೀಯ”
ಅಮ್ಮನ ಮಾತು
ಸುಳ್ಳು ಎಂಬ ಗರ್ವ
ನೇರಳೆ ಬಣ್ಣ
ತೊಟ್ಟ ಫೆಮಿನಿಸ್ಟ್ ಗಳು,
ಕೆಂಪು ಕಪ್ಪು ಹಸಿರಿನ
ಚಳುವಳಿಗಳು
ಯಾವ ಹೊದ್ದಿಕೆ ಸರಿ
ಎಂದು ಪೇಚಾಡಿದ
ಅಲೆಮಾರಿಗಳು
ಎಲ್ಲವೂ ನನ್ನ
ಪ್ರೇಮ ಸಂಗಾತಿಗಳೇ
‘ಫುಲ್ ಬುಕ್’ ಕೊಡಿಸದೆ
ಗೆಲ್ಲಿಸಿದ ಬುಕ್ಕೇ
ನಿನ್ನ ಶಾಶ್ವತ
ಬುಕಿಂಗ್ ನನ್ನ ತೆಕ್ಕೆ.

 

 

‍ಲೇಖಕರು Avadhi GK

January 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lalitha siddabasavayya

    ಕವನವೆಂಬ ಹೆಸರಿನಡಿ ಹುಸಿ ಅನುಭಾವ , ಹುಸಿ ಕ್ರಾಂತಿ , ಹುಸಿ ಸಾಮಾಜಿಕ ಕಳಕಳಿಗಳ ವರದಿಗಳೆ ಕಣ್ಣಿಗೆ ರಾಚುವಾಗ ಇಂತಹ ಕವನಗಳು ಬಹಳ ಆಪ್ಯಾಯ ಅನಿಸುತ್ತವೆ

    ಪ್ರತಿಕ್ರಿಯೆ
  2. Sarojini Padasalgi

    ತುಂಬಾ ಸುಂದರ ಕವಿತೆಗಳು.ನವಿರಾದ ಭಾವನೆಗಳ , ಅಪೂರ್ವ ಭಾವಗಳ ಹರಿವಿನ ಝರಿ.ಮತ್ತೆ ಮತ್ತೆ ಓದ ಹಚ್ಚುತ್ತವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: