ಪುಳ್ಚಾರ್ ಮತ್ತು ಖಡಕ್ ಮೀನುಸಾರು ಮೇಜುವಾನಿ…

ಗಿರಿಜಾ ಶಾಸ್ತ್ರಿ

‘ಪುಳ್ಚಾರಿಗೆ’ ವಿರುದ್ಧ ಪದ ‘ಖಡಕ್ ಮೀನು ಸಾರು’ ಆಗಬೇಕಿಲ್ಲ ಅಲ್ವಾ? ಇವೆರಡರ ಮಧ್ಯೆ ಎಷ್ಟೊಂದು ಖಾದ್ಯಗಳಿವೆ! ಬಗೆಬಗೆಯ ಅನ್ನಗಳು! ಭಾತ್ ಗಳು ಪುಳಿಯೋಗರೆ, ಹೋಳಿಗೆ, ಲಡ್ಡುಗೆ ಮೈಸೂರು ಪಾಕು! ದಮ್ ಬಿರಿಯಾನಿ!ಅಹಹ್ಹಹಾ… ಒಂದೇ ಬೈಠಕ್ ನಲ್ಲಿ ಎರಡೂ ಮೇಜವಾನಿಯನ್ನು ನಡೆಸಬಹುದಲ್ಲ?

ಕರ್ನಾಟಕದಲ್ಲಿರುವ ಬ್ರಾಹ್ಮಣೇತರರಾದ ಜೈನರು, ವಣಿಕರೂ, ವೀರಶೈವರಾರೂ ಪುಳ್ಚಾರ್ ಆಗಲೀ ಮೀನು ಸಾರನ್ನಾಗಲೀ ಉಣ್ಣುವುದಿಲ್ಲ. ಈ ಬೈನರಿಯಲ್ಲಿ ಅವರುಗಳ ಆಹಾರವೆಲ್ಲಿ? ಕೊಂಕಣಸ್ಥ ಬ್ರಾಹ್ಮಣರೂ, ಮಹಾರಾಷ್ಟ್ರದ ದೇಶಪಾಂಡೆಗಳೂ ಮೀನು ತಿನ್ನುತ್ತಾರೆ! ಮತ್ತೆ ಸಾಮಾನ್ಯೀಕರಿಸುವುದು ಎಷ್ಟು ಸರಿ?

ಹಾಗೆ ನೋಡಿದರೆ ‘ಪುಳ್ಚಾರ್’ ತಮಿಳು ಪದ. ಅದು ತಮಿಳು ಬ್ರಾಹ್ಮಣರ ನೀರು ಸಾರು. ಬಹಳ ಹಿಂದೆ ಕನ್ನಡ ಸಾಹಿತ್ಯದಲ್ಲಿ ‘ಪುಳಿ’ ಎನ್ನುವ ಶಬ್ದ ಬಳಕೆಯಲ್ಲಿತ್ತು. ಆದರೆ ಈಗಿನ ಪುಳ್ಚಾರ್ ಗೆ ಅದು ಸಂವಾದಿಯಲ್ಲ. ಮೈಸೂರು ಕಡೆ ಗೊಡ್ಡು ಸಾರು, ಹುಣಿಸೇ ರಸ,‌ಮೆಣಸಿನ ಸಾರು ಮುಂತಾದ ‘ಅಪ್ಪ ಅಮ್ಮ’ ಇಲ್ಲದ ನೀರು ಸಾರುಗಳಿವೆ. ಹವ್ಯಕರು ಅಪ್ಪೆ ಸಾರು ಎಂದು ಮಾಡುತ್ತಾರೆ. ಅದೂ ನೀರು ಸಾರೇ. ಇಂತಹ ಸಾರುಗಳನ್ನು ಬೇಕಾದರೆ ಪುಳ್ಚಾರ್ ಗೆ ಸಂವಾದಿಯಾಗಿ ಬಳಸಬಹುದು. ನೀರು ಸಾರುಗಳಲ್ಲೇ ಎಷ್ಟು ಬಗೆ!!!

ಮೈಸೂರು ಕಡೆ ‘ಹುಳಿ’ ‘ಹುಳಿ ತೊವ್ವೆ’ ಎಂದರೆ ಒಂದೊಕ್ಕೊಂದು ಹೊಂದುವ ತರಹಾವರಿ ತರಕಾರಿಗಳನ್ನು, ತೊಗರಿ ಬೇಳೆಯನ್ನು ಹಾಕಿ, ಕಾಯಿ, ಮಸಾಲೆ ಪದಾರ್ಥಗಳನ್ನೆಲ್ಲ ರುಬ್ಬಿ ಮಾಡಿದ ಗಟ್ಟಿ ಸಾರು. ಇಲ್ಲಿ ಆಕೆ ‘ಗೊಡ್ಡಲ್ಲ. ಹಲವು ಮಕ್ಕಳ ತಾಯಿ’!

ಹೀಗಾಗಿ ಪುಳ್ಚಾರ್ ಮತ್ತು ಮೀನುಸಾರು ಎರಡೇ ಅಲ್ಲ. ಹಾಗೆಂದರೆ ಉಳಿದ ಮುನ್ನೂರು ಮೂವತ್ತು ವಿಧದ ಅಡುಗೆಗಳಿಗೆ ಅನ್ಯಾಯಮಾಡಿದಂತೆ.

ನಮ್ಮದು ‘ಬಹುವಚನ ಭಾರತ’ ಮಾಂಸಾಹಾರಿಗಳ ಮನೆಗೆ ನಾನು ಹೋದರೆ ಅವರಿಗೆ ಕಷ್ಟ ಯಾಕೆಂದರೆ “ನೋಡಿ ನಾನ್ ವೆಜ್ ಅಂದ್ರೆ ಒಂದೇ ವರೈಟಿ ಮಾಡಿ ಬಡಿಸಿಬಿಡಬಹುದು. ಆದ್ರೆ ವೆಜ್ ಅಂದರೆ ರಾಮಾಯಣ‌! ಪಲ್ಯ , ಪಾಯಸ ಕೋಸಂಬರಿ ಬಗೆ ಬಗೆ ಮಾಡ್ಬೇಕಾಗ್ತದೆ” ಎನ್ನುತ್ತಾರೆ. “ನೀವು ಏನು ಬೇಕಾದರೂ ಮಾಡ್ಕೊಳಿ ಪರವಾಗಿಲ್ಲ. ನನಗೆ ಮೊಸರನ್ನ ಕೊಟ್ಟರೆ ಸಾಕು. ನೀವು ಏನೇ ಭಕ್ಷ್ಯ ಭೋಜನ ನಡೆಸಿದರೂ ಮೊಸರನ್ನ ಕೊಡದಿದ್ದರೆ ನನಗೆ ಸಮಾಧಾನ ಆಗೋದಿಲ್ಲ” ಎನ್ನುತ್ತೇನೆ.

ಮೀನು ಸಾರಿನ ಹಾಗೆ ಮೊಸರನ್ನವೂ ಒಂದು ಅಭ್ಯಾಸ. ರುಚಿ ಎನ್ನುವುದು ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ನಿರ್ಧಾರವಾಗಿ ಬಿಡುತ್ತದೆ. ಅವಳ ಆಹಾರಗಳು ಪ್ರಾದೇಶಿಕ ವಾಗಿ ಬೆಳೆಯುವ ಬೆಳೆಗಳ ಮೇಲೆ ನಿರ್ಧಾರಿತವಾಗಿರುತ್ತದೆ.

ಎಲ್ಲಾ ಆಹಾರಗಳ ಮೂಲದಲ್ಲಿ ಇರುವುದು ಶೋಷಣೆಯೇ. ಒಂದನ್ನು ತಿಂದು ಇನ್ನೊಂದು ಬದುಕುವುದೇ ಪ್ರಕೃತಿ ಧರ್ಮ.
ಮರಗಿಡಗಳಿಗೆ ನೋವಾಗುವುದಿಲ್ಲ ಎಂದು ಹೇಳಿದವರಾರು? ಆದಿವಾಸಿಗಳು ಕೋಪ ಬಂದಾಗ ಮರದ ಮುಂದೆ ನಿಂತು ಅದನ್ನು ಭರಪೂರ ಬೈಯುತ್ತಾರೆ . ಆಗ ಮರ ಒಣಗಿ ಹೋಗುತ್ತದೆ. ‘ಸಿದ್ಧಾರ್ಥ ಗಿಡಗಳ’ ಜೊತೆ ಮಾತನಾಡುತ್ತಾನೆ. ಸಂಗೀತಕ್ಕೆ ಗಿಡಗಳು ತೊನೆಯುತ್ತವೆ. ಇರಲಿ ಅವಕ್ಕೆ ನೋವಿನ ಅನುಭವ ಆಗುವುದಿಲ್ಲ ಎಂದ ಮಾತ್ರಕ್ಕೆ ಅವನ್ನು ತರಿದು ನಮ್ಮ ಹೊಟ್ಟೆ, ಮಾರುಕಟ್ಟೆಗಳನ್ನು ತುಂಬುವ ಹಕ್ಕು ಇದೆಯಾ?

ಕಿರುಬ ಕಾಡೆಮ್ಮೆಯನ್ಮು ಅಟ್ಟಿಸಿಕೊಂಡು ಹೋಗುವಾಗ, ಅದು ಪ್ರಾಣಭಯದಿಂದ ಓಡುವಾಗ ಹಿಂಸೆಯಾಗುತ್ತದೆ. ನೋವಾಗುತ್ತದೆ. ನಮ್ಮ ಆಹಾರ ವ್ಯವಸ್ಥೆಯಲ್ಲೇ ಹಿಂಸೆ ಇದೆ.

ಇದೆಲ್ಲಾ ಯಾಕಿರಬೇಕು? ಈ ಸೃಷ್ಟಿಯ ಅಗತ್ಯವಾದರೂ ಏನು? ಎಂದು ಅಷ್ಟಾವಕ್ರನಿಗೆ ಎನಿಸಿದ ಹಾಗೆ ನನಗೂ ಎನಿಸಿದ್ದಿದೆ. ಅಷ್ಟಾವಕ್ರಗೀತೆ ಪ್ರಾರಂಭವಾಗುವುದೇ ಈ ಪ್ರಶ್ನೆಯಿಂದ. ಈ ವಿಸ್ಮಯದಿಂದ.

ಆಹಾರ ವ್ಯವಸ್ಥೆಯ ಸಮತೋಲವನ್ನು ಕಾಪಾಡಿಕೊಳ್ಳುವುದಕ್ಕೆ ಈ ಹಿಂಸೆ ಅಗತ್ಯವಾದುದು ಎಂಬುದನ್ನು ನಮಗೆ ವಿಜ್ಞಾನ ಹೇಳುತ್ತದೆ. ಆದರೂ ನಾವು ಪುಣ್ಯಕೋಟಿಯ ಕರುವನ್ನು ಮಾತ್ರ ಉಳಿಸುತ್ತೇವೆ. ಮಗುವಾಗಿದ್ದಾಗ ನನ್ನ ಮಗ “ಹುಲಿಗೆ ಪಾಪು ಇರಲಿಲ್ಲವಾ” ಎಂದು ಬಿಕ್ಕಳಿಸುತ್ತಾ ಕೇಳಿದ ಪ್ರಶ್ನೆ ಈಗಲೂ ಕಾಡುತ್ತಿದೆ.

“ಹಸುವಿನ ಮಾಂಸದೊಳ್ ಉತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೇ?” ಕನಕದಾಸರು ಎಂದೋ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಅವರಿಗೆ ಈ ತರ್ಕ ಹೂಡಲು ‘ರಾಮಧಾನ್ಯ ಚರಿತೆ’ ಬರೆಯಲು ಅವರಿಗೆ ಅವರದ್ದೇ ಆದ ಸಾಮಾಜಿಕ ಕಾರಣಗಳಿದ್ದವು.

ನಾವೀಗ ಹುಲಿಯನ್ನು ಉಳಿಸಬೇಕಾಗಿದೆ ಯಾಕೆಂದರೆ ಅದರ ಸಂತತಿ ವಿನಾಶದ ಅಂಚಿನಲ್ಲಿದೆ. ಹಾಗೆಂದು ಹಸುಗಳನ್ನು ಕಸಾಯಿಗೆ ಕೊಡುವುದೇ? ಹುಲಿ ಮತ್ತು ಹಸುವಿನಂತೆ ಕಾಡಿನಲ್ಲಿ ಅಸಂಖ್ಯ ಪ್ರಾಣಿ ಪಕ್ಷಿಗಳಿವೆ, ಹುಳು ಹುಪ್ಪಟೆಗಳಿವೆ. ಎಲ್ಲವನ್ನೂ ಉಳಿಸುವ ಶಕ್ತಿ ಇಲ್ಲವಾದರೂ ನಾಶಮಾಡದೇ ಇರಬಹುದಲ್ಲ?

೧೯೭೯ ರಲ್ಲಿ ಹುಚ್ಚು ಆವೇಶವಿತ್ತು ಅದು ಸಹಜವೂ ಆಗಿತ್ತು. ಆಗ ಬೈನರಿಗಳಲ್ಲೇ ಮಾತನಾಡಿದೆವು.ನಾನೂ ಆ ಹುಚ್ವುಹೊಳೆಯಲ್ಲಿ ಕೊಚ್ಚಿ ಹೋದವಳೇ! ಅದು ಅಷ್ಟು ಹೊಸತಾಗಿತ್ತು. ಈಗ ನಲವತ್ತೆರೆಡು ವರುಷಗಳು ಸಾಗಿ ಬಂದಿದ್ದೇವೆ! ಈಗಲೂ ಆಗಿನಂತೆ ಎಡ ಇಲ್ಲವೇ ಬಲ ಎಂಬ ಬೈನರಿಗಳಲ್ಲೇ ಮಾತನಾಡಿದರೆ ಏನು ವ್ಯತ್ಯಾಸವಾಗುತ್ತದೆ? ನಾವು ಇತಿಹಾಸದಿಂದ ಏನನ್ನೂ ಕಲಿತೇ ಇಲ್ಲವಾ?

ಗೆಳತಿ ಭಾಗ್ಯ ಯಾವಾಗಲೂ ಹೇಳುತ್ತಿರುತ್ತಾರೆ -ಜಾತಿಭೇದ ಎನ್ನುವುದು ಹಿಂದೆ ಆಚರಣೆಯಲ್ಲಿತ್ತು ಆದರೆ ನಂಬಿಕೆಯಲ್ಲಿ ಇರಲಿಲ್ಲ. ಶಾಲುಸಾಬಿ ಇಲ್ಲದೇ ದೇವರ ಉತ್ಸವವೇ ಹೊರಡುತ್ತಿರಲಿಲ್ಲ. ಆದರೆ ಇಂದು ಆಚರಣೆಯಲ್ಲಿಲ್ಲ. ಆದರೆ ನಂಬಿಕೆಯಲ್ಲಿದೆ. ರಹೀಮ ಮತ್ತು ರಾಮ ಭಾಯಿ ಭಾಯಿ. ಒಟ್ಟಿಗೇ ಕುಳಿತು ಕುಡಿಯುತ್ತಾರೆ. ಉಣ್ಣುತ್ತಾರೆ. ಇಬ್ಬರ ಅಡುಗೆ ಮನೆಯೊಳಗೂ ಪರಸ್ಪರ ಪ್ರವೇಶವಿದೆ. ಆದರೂ “ದುಶ್ಮನ್ ಬಗಲ್ ಮೇ ಹೈ” ಯಾವಾಗ ಇರಿಯುತ್ತಾನೋ ಎಂಬ ಅನುಮಾನ ‘ ಯಾತಕ್ಕೂ ಒಂದು ಇರಲಿ’ ಎಂದು ಇಬ್ಬರೂ ಒಂದೊಂದು ಚೂರಿಯನ್ನು ತಮ್ಮ ಕಿಸೆಯಲ್ಲಿ ಇಟ್ಟುಕೊಂಡೇ ತಿರುಗುತ್ತಾರೆ.

ಗಲಭೆ ಪ್ರಾರಂಭವಾಗುವುದೇ ಪುಳ್ಚಾರ್ vs ಮೀನು ಸಾರಿನಿಂತಹ ಕ್ಷುಲ್ಲಕ ಸಂಗತಿಗಳಿಂದ. ನಮ್ಮ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಲು ಹೂಡಿದ ನೆಪವೇ ಅದಲ್ಲವೇ? ಒಂದು ತಪ್ಪನ್ನು ಇನ್ನೊಂದು ತಪ್ಪಿನಿಂದ ಸರಿಪಡಿಸುವುದು ಸಾಧುವೇ??

ನಮಗೆ ಯುದ್ಧಕ್ಕೆ ಪರ್ಯಾಯ ಬುದ್ಧನೇ ಅಲ್ಲವೇ? ಗೆಳತಿ ಮಾಲಿನಿ ಗುರು ಪ್ರಸನ್ನ ಅವರು ಅಡುಗೆ ಸಾಹಿತ್ಯ ಸಮ್ಮೇಳನ ಮಾಡುವ ಯೋಚನೆಯಲ್ಲಿದ್ದಾರೆ. ಆಗ ನಾವು ಪುಳ್ಚಾರ್ ಮತ್ತು ಖಡಕ್ ಮೀನು ಸಾರುಗಳ ನಡುವೆ ಇರುವ ಸಾವಿರ ಲಕ್ಷ ಸುವರ್ಣ ಖಾದ್ಯಗಳ ( golden mean, grey area) ಬಗ್ಗೆ ಚರ್ಚಿಸಲಿದ್ದೇವೆ. ಪುಳ್ಚಾರ್ ಅಥವಾ ಮೀನು ಸಾರ್ ತಿನ್ನುವವರು ಆ ಕಾರಣಕ್ಕಾಗಿಯೇ ದುರ್ಬಲರು / ಶಕ್ತಿವಂತರು ಎನ್ನುವುದಾದರೆ ಅದು ನಮ್ಮ ದೌರ್ಬಲ್ಯವೂ ಅಲ್ಲ ಶಕ್ತಿಯೂ ಅಲ್ಲ ಅದು ನಮ್ಮ ಸಂಸ್ಕೃತಿ ಎನ್ನುವುದನ್ನು ಸಾಬೀತುಪಡಿಸಲಿದ್ದೇವೆ.

ಪ್ರತಿಯೊಂದು ಖಾದ್ಯಗಳ ಸ್ಟಾಲ್ ಇಡಲಾಗುತ್ತೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ. ಮೇಜುವಾನಿ ನಡೆಸೋಣ.

‍ಲೇಖಕರು Admin

January 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: