ಆಕೆ ‘ಮದರ್’

ಸಿದ್ದನಗೌಡ ಪಾಟೀಲ್

೩೮ವರ್ಷಗಳ ಹಿಂದೆ ಕೊಪ್ಪಳದ ಹತ್ತಿರದ ಕುದರಿಮೋತಿ ಗ್ರಾಮದಲ್ಲಿ ಮಠದ ಸ್ವಾಮಿಯೊಬ್ಬ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿಸಿ ,ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಘಟನೆ,ಅದನ್ನು ಖಂಡಿಸಿ ರಾಜ್ಯದಾದ್ಯಂತ ನಡೆದ ತೀವ್ರವಾದ ಪ್ರತಿಭಟನೆ,ಅದನ್ನು ಗಂಭೀರವಾಗಿ ಪರಿಗಣಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರು ಸದನ ಸಮಿತಿ ರಚಿಸಿ ಈ ಘಟನೆಯ ವಿಚಾರಣೆ ನಡೆಸಿದ್ದು ಇತಿಹಾಸ.

ಈ ಸ್ವಾಮಿಯ ದೌರ್ಜನ್ಯದ ಘಟನೆಗೆ ಪ್ರತಿರೋಧ ಆರಂಭ ಹೀಗಿತ್ತು:
ಅಂದು ನಾನು ಬಳ್ಳಾರಿಯಲ್ಲಿ ಸಂಘಟನೆಯ ಕೆಲಸ ಮುಗಿಸಿ ಕೊಪ್ಪಳಕ್ಕೆ ಇನ್ನೊಂದು ಸಭೆಗೆ ಹೋಗಿದ್ದೆ.ಸಭೆಯಲ್ಲಿ ಅಂದಿನ ವಿದ್ಯಾರ್ಥಿ ಸಂಘಟನೆಯ ನಾಯಕರಾಗಿದ್ದ ಮಹಾಂತೇಶ ಕೊತಬಾಳ, ರುದ್ರಗೌಡ ಪಾಟೀಲ ,ಲಿಂಗರಾಜ ನವಲಿ ಮುಂತಾದವರು ಕುದರಿಮೋತಿಯಲ್ಲಿ ನಡೆದ ಘಟನೆಯ ಕುರಿತು ಮಾಹಿತಿ ನೀಡಿದರು.ತಕ್ಷಣ ಎ ಐ ಎಸ್ ಎಫ್ ನಿಂದ ಸ್ವಾಮಿಯ ನಡೆಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಯಿತು.ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ ಮುಂತಾದ ಬಂಡಾಯ ಸಾಹಿತ್ಯ ಸಂಘಟನೆಯ ಸಂಗಾತಿಗಳನ್ನು ಸಂಪರ್ಕಿಸಿ, ಮಾರನೆದಿನವೇ ಕೊಪ್ಪಳದ ಸಂತೆ ಇರುವುದರಿಂದ ಒಂದು ಕರಪತ್ರ ಮುದ್ರಿಸಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.

ರಾತ್ರಿ ಮಹಾಂತೇಶ ಅವರ ಮನೆಯಲ್ಲಿ ಕುಳಿತು ಕರಪತ್ರ ಬರೆಯುತ್ತಿದ್ದೆ, ಮಹಾಂತೇಶ ಅವರ ತಾಯಿ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ನಮಗೆ ಚಹಾ ಮಾಡಿ ಕೊಟ್ಟರು.ರಾತ್ರಿ ಇಡೀ ಕರಪತ್ರ ಮುದ್ರಣವಾಗಿ ಸಿದ್ಧವಾಯಿತು.ಮಾರನೇದಿನ ಕೊಪ್ಪಳದ ಸಂತೆಯಲ್ಲಿ ಕರಪತ್ರ ಹಂಚಿ ಪ್ರತಿಭಟನಾ ಮೆರವಣಿಗೆ ಹೊರಟಿತು.ಆಗ ನಮಗೆಲ್ಲ ಒಂದು ಆಶ್ಚರ್ಯ,ರೋಮಾಂಚನ ಕಾದಿತ್ತು.ರಾತ್ರಿ ಮಹಾಂತೇಶನ ಮನೆಯಲ್ಲಿ ನಮ್ಮೃಮಾತುಗಳನ್ನು ಕೇಳುತ್ತಾ ಚಹಾ ಮಾಡಿಕೊಟ್ಟ ತಾಯಿ ರತ್ನಮ್ಮ ನೂರಾರು ಜನ ಯುವಕರು,ಪುರುಷರಿದ್ದ ಮೆರವಣಿಗೆಯ ಮುಂದೆ ನಿಂತಿದ್ದರು ಕೈಯಲ್ಲಿ ಕರಪತ್ರ ಹಿಡಿದು.ಇಡೀ ಮೆರವಣಿಗೆಯಲ್ಲಿ ಅವರೊಬ್ಬರೇ ಮಹಿಳೆ. ಕಣ್ಣು ತೇವವಾಗಿತ್ತು,ಗಾರ್ಕಿಯ “ತಾಯಿ” ಕಾದಂಬರಿಯ “ತಾಯಿ” ನೆನಪಾಗಿದ್ದಳು.

ರಾಜ್ಯದಾದ್ಯಂತ ಅಂದು ಹರಡಿದ ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿ ಹೋರಾಟಕ್ಕೆ ಚಾಲನೆ ನೀಡಿದ್ದ ಆ ತಾಯಿ ರತ್ನಮ್ಮ ಕೊತಬಾಳ ಇಂದು ಬೆಳಗ್ಗೆ ತಮ್ಮ ೮೪ನೇ ವಸಯಸ್ಸಿನಲ್ಲಿ ಕೊಪ್ಪಳದಲ್ಲಿ ನಿಧನರಾದರು.

ನನಗೆ ಅಂದು ಪ್ರತಿಭಟನಾ ಮೆರವಣಿಗೆಯ ಮುಂದೆ ನಿಂತಿದ್ದ ಆ ತಾಯಿಯೇ ನೆನಪಾಗುತ್ತಿದ್ದಾಳೆ.
ಹೋಗಿ ಬಾ ತಾಯಿ ನಮನಗಳು.

‍ಲೇಖಕರು Admin

January 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: