ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ತುಳುವಿನ ಘನತೆ ಹೆಚ್ಚಿಸುವ ಕೃತಿ…

ಪುರುಷೋತ್ತಮ ಬಿಳಿಮಲೆ

ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಗ್ರಹ ಮತ್ತು ಸಂಶೋಧನೆಗಳು ನಡೆದಿವೆ. ಅವುಗಳ ಜೊತೆಗೆ ತುಳುವರು ಸಾಕಷ್ಟು ಭಾವುಕವಾದ ಮಾತುಗಳನ್ನು ತಮ್ಮ ಬಗ್ಗೆ ನಿರಂತರವಾಗಿ ಹೇಳಿಕೊಂಡೇ ಬಂದಿದ್ದಾರೆ. ತುಳುನಾಡಿನ ಎರಡು ಮುಖ್ಯ ಅಭಿವ್ಯಕ್ತಿಗಳಾದ ಭೂತಾರಾಧನೆ ಮತ್ತು ಯಕ್ಷಗಾನಗಳ ಬಗ್ಗೆ ನಡೆದಿರುವ ಶೈಕ್ಷಣಿಕ ಕೆಲಸಗಳು ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರ ಗಮನವನ್ನೂ ಸೆಳೆದಿವೆ. ಇಷ್ಟಿದ್ದರೂ ತುಳುವಿನ ಕುರಿತಾಗಿ ನಡೆದ ಸಂಶೋಧನೆಗಳು ಹೇಳಬೇಕಾದಷ್ಟನ್ನು ಹೇಳಿವೆ ಅಂತ ಈಗ ಅನ್ನಿಸುತ್ತಿಲ್ಲ.

ತುಳು ಭಾಷೆಯ ಪ್ರಾಚೀನ ರೂಪಗಳು, ಪಾಡ್ದನಗಳ ನಿಗೂಢ ಲೋಕ, ಯಕ್ಷಗಾನದ ಜೀವಂತಿಕೆಯ ಸೂತ್ರಗಳು, ನಾಗಾರಾಧನೆಯ ಸಾಂಕೇತಿಕತೆ ಮೊದಲಾದ ಹತ್ತು ಹಲವು ವಿಷಯಗಳ ಕುರಿತು ಮತ್ತೇನೋ ಹೇಳಲು ಬಾಕಿ ಉಳಿದಿವೆ ಅಂತ ಅನ್ನಿಸುತ್ತಲೇ ಇರುತ್ತದೆ. ಜೊತೆಗೆ ತುಳು ಸಂಸ್ಕೃತಿ ಅಂದರೆ ಭೂತ ಮತ್ತು ಯಕ್ಷಗಾನ ಮಾತ್ರವೇ ಅಲ್ಲವಲ್ಲ! ಅಲ್ಲಿನ ಅಜ್ಜಿ ಕತೆಗಳು, ಕಬಿತಗಳು, ಕುಣಿತದ ಹಾಡುಗಳು, ಗಾದೆಗಳು, ಒಗಟುಗಳು, ಸಾಹಿತ್ಯಿಕ ಅಭಿವ್ಯಕ್ತಿಗಳು, ವಿವಿಧ ಸಮುದಾಯಗಳು, ತುಳುವೇತರ ಭಾಷೆಗಳು, ಅನುವಾದಗಳೆಲ್ಲ ಯಾಕೆ ನಮ್ಮ ಅಧ್ಯಯನ ಸಂದರ್ಭದಲ್ಲಿ ಗೌಣವಾಗಿಬಿಟ್ಟವು ಎಂಬ ಇನ್ನೊಂದು ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ಹಿರಿಯರಾದ ಶ್ರೀ ಅಮೃತ ಸೋಮೇಶ್ವರ, ವಿವೇಕ ರೈ, ಪೀಟರ್ ಕ್ಲಾಸ್, ವೆಂಕಟರಾಜ ಪುಣಿಂಚಿತ್ತಾಯ, ಪ್ರಭಾಕರ ಜೋಷಿ ಮೊದಲಾದ ವಿದ್ವಾಂಸರು ತೆರೆದು ತೋರಿಸಿದ ತೌಳವ ಸಂಸ್ಕೃತಿಯ ಸೂಕ್ಷ್ಮಗಳನ್ನು ನಾವು ಮತ್ತಷ್ಟು ವಿಸ್ತರಿಸಿಕೊಳ್ಳಬೇಕಾದ ಬಗೆ ಯಾವುದು? ಇಂಥ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಪ್ರೊ. ಕೆ. ಚಿನ್ನಪ್ಪ ಗೌಡರ ಕರಾವಳಿ ಕಥನಗಳು’ ಪ್ರಕಟವಾಗುತ್ತಿದೆ. ನುರಿತ ಸಂಶೋಧಕರಾದ ಅವರು ತುಳು ಸಂಸ್ಕೃತಿಯ ವಿಭಿನ್ನ ಮುಖಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ, ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಹಾಗೆ ಮಾಡುವುದರ ಮೂಲಕ ನಮ್ಮ ಕಾಲದ ಅಗತ್ಯವೊಂದನ್ನು ಅವರು ಸಮರ್ಪಕವಾಗಿ ಪೂರೈಸಿದ್ದಾರೆ.

ಎಂಟು ಪ್ರೌಢ ಲೇಖನಗಳಿರುವ ಪ್ರಸ್ತುತ ಕೃತಿಯಲ್ಲಿ ಡಾ. ಕೆ. ಚಿನ್ನಪ್ಪ ಗೌಡರು, ಪಾಡ್ದನಗಳ ಲೋಕದೃಷ್ಟಿ, ಅಜ್ಜಿಕತೆಗಳ ಸೃಜನಶೀಲತೆ, ಕೆಲಸದ ಹಾಡುಗಳ ಕನಸುಗಾರಿಕೆ, ಉಳ್ಳಾಲ್ತಿ ಭೂತದ ಇತಿಹಾಸ, ಹೊಸ ತುಳು ಕಾವ್ಯ ಹಿಡಿಯುತ್ತಿರುವ ಹಾದಿ, ತುಳು ಕತೆಗಳ ಸ್ವರೂಪ, ತುಳು ಅನುವಾದಗಳ ಅಗತ್ಯ ಮತ್ತು ಯಕ್ಷಗಾನ ಪ್ರದರ್ಶನಗಳ ಇತಿಹಾಸದ ಬಗ್ಗೆ ವಿವರವಾಗಿ ಮತ್ತು ನಿಖರವಾಗಿ ಬರೆದಿದ್ದಾರೆ. ಅಗತ್ಯ ಮಾಹಿತಿಗಳ ತಾಳ್ಮೆಯ ಸಂಗ್ರಹ, ವಿಷಯಗಳನ್ನು ಅಚ್ಚುಕಟ್ಟಾಗಿ ಮಂಡಿಸಿ ವಿಶ್ಲೇಷಿಸುವ ವಿದ್ವತ್ತು, ಅಪೂರ್ವ ಒಳನೋಟಗಳುಳ್ಳ ಚಿಂತನಾಕ್ರಮ, ತುಳು-ಕನ್ನಡ ಭಾಷೆಗಳ ಮೇಲಣ ಅಪೂರ್ವ ಹಿಡಿತ, ವಸ್ತುವಿಗೆ ಅನುಗುಣವಾದ ಬರವಣಿಗೆಯ ವಿನ್ಯಾಸ ಇತ್ಯಾದಿ ಕಾರಣಗಳಿಂದಾಗಿ ಈ ಪುಸ್ತಕ ಬಹಳ ವಿಶಿಷ್ಟವಾಗಿದೆ. ಈ ಹೊತ್ತಿಗೆ ಇಂಥದ್ದೊ೦ದು ಪುಸ್ತಕ ಅಗತ್ಯವಾಗಿ ನಮಗೆಲ್ಲ ಬೇಕಾಗಿತ್ತು.

ಬಹುಶ: ಈ ಕೃತಿಯ ಎಲ್ಲ ಲೇಖನಗಳ ಬಗ್ಗೆ ನಾನಿಲ್ಲಿ ಮತ್ತೆ ವಿಸ್ತೃತವಾಗಿ ಬರೆಯಬೇಕಾಗಿಲ್ಲ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕೆಲಸ ಮಾಡುತ್ತಿರುವ ಯಾರೇ ಆದರೂ ಇವನ್ನು ಗಂಭೀರವಾಗಿ ಓದಿಕೊಳ್ಳಬಹುದು. ಚಿನ್ನಪ್ಪ ಗೌಡರು ೧೯೮೦ರ ದಶಕದಿಂದಲೇ ಭೂತಾರಾಧನೆಯ ಬಗೆಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಅವರು ಏನು ಬರೆದರೂ ಹೇಳಿದರೂ ಅದನ್ನು ಅಧಿಕೃತ ಎಂದೇ ಪರಿಗಣಿಸಲಾಗುತ್ತಿದೆ. ಈ ಪುಸ್ತಕದ ಮೊದಲ ಲೇಖನದಲ್ಲಿ ಅವರು ಭೂತಾರಾಧನೆಯ ಪ್ರಮುಖ ಭಾಗವಾದ ಪಾಡ್ದನದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ.

ಇತಿಹಾಸವು ಪಾಡ್ದನವಾಗಿ, ಪಾಡ್ದನವು ಪ್ರದರ್ಶನಪಠ್ಯವಾಗಿ ಪರಿವರ್ತನೆಗೊಂಡು ಚಲನಶೀಲಗೊಳ್ಳುವ ವಿಧಾನ ಮತ್ತು ಉದ್ದೇಶವು ದೈವಾರಾಧನೆಯ ಮುಖ್ಯವಾದ ತಾತ್ವಿಕತೆಯಾಗಿದೆ’’ - ಎಂದು ಹೇಳುವ ಅವರು, ಅದೇ ಚೌಕಟ್ಟಿನಲ್ಲಿ ಕಲ್ಕುಡ-ಕಲ್ಲುರ್ಟಿ, ಕೊರಗತನಿಯ, ಬಿಲ್ಲರಾಯ ಬಿಲ್ಲಾರ್ತಿ, ಮತ್ತು ಪಂಜುರ್ಲಿ ಪಾಡ್ದನಗಳನ್ನು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೋಟೆದ ಬಬ್ಬು ಬಾರಗ, ತನ್ನಿಮಾನಿಗ, ಮದನಗ, ಬಳಜೇಯಿಮಾನಿಗ, ಬಾಲೆಮಾಡೆದಿ, ದೇವುಪೂಂಜ, ಬಬ್ಬರ್ಯ, ಮೈಸಂದಾಯ, ಆಲಿಭೂತ ಮತ್ತು ಕಾಂತಾಬಾರೆ ಬೂದಾಬಾರೆ ಪಾಡ್ದನಗಳನ್ನೂ ಬಳಸಿಕೊಂಡಿದ್ದಾರೆ. ಅಸಾಮಾನ್ಯ ರಚನೆಗಳಾಗಿರುವ ಪಾಡ್ದನ ಗಳಲ್ಲಿ ಕಂಡುಬರುವ ನೀತಿ ಸಂಹಿತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಕಂಡುಹಿಡಿಯುವುದು, ಜಾತ್ಯಾಧಾರಿತ ಸಮಾಜಕ್ಕೆ ಪಾಡ್ದನಗಳು ಪ್ರತಿಕ್ರಿಯಿಸುವ ರೀತಿಗಳ ಹುಡುಕಾಟ, ದಲಿತ ಮತ್ತು ಕಾರ್ಮಿಕ ವರ್ಗದ ಹೋರಾಟಗಳನ್ನು ಹತ್ತಿಕ್ಕುವ ಶಕ್ತಿಗಳ ಶೋಧ, ಸಮುದಾಯದ ಹೋರಾಟಗಳನ್ನು ಅಧಿಕಾರ ಕೇಂದ್ರಗಳು ದುರ್ಬಲಗೊಳಿಸಲು ನಡೆಸಿದ ಹುನ್ನಾರಗಳ ಪರಿಶೀಲನೆಯೇ ಮೊದಲಾದ ಹಲವು ಸಂಗತಿಗಳನ್ನು ಲೇಖಕರು ಇಲ್ಲಿ ಕೈಗೆತ್ತಿಕೊಂಡು ಅವುಗಳಿಗೆ ಸೂಕ್ತವಾದ ಉತ್ತರಗಳನ್ನು ಕಂಡುಕೊ೦ಡಿದ್ದಾರೆ. ಇದಕ್ಕೆ ಸಂಬ೦ಧಿಸಿದ ಪಾಡ್ದನಗಳ ಮೂಲಪಠ್ಯದ ಮುಖ್ಯ ಭಾಗಗಳನ್ನು ತುಳುವಿನಲ್ಲಿಯೇ ನೀಡಿ, ಅದನ್ನು ಸುಲಲಿತವಾಗಿ ಕನ್ನಡಕ್ಕೂ ಅನುವಾದಿಸಿ, ಡಾ. ಗೌಡರು ತಮ್ಮ ಸಂಪ್ರಬ೦ಧಗಳನ್ನು ಬೆಳೆಸಿರುವುದರಿಂದ ಕನ್ನಡದ ವಿದ್ವಾಂಸರಿಗೂ ಈ ಕೃತಿ ಸಂಪುಟ ಬಹಳ ಉಪಯುಕ್ತ. ಪಾಡ್ದನಗಳ ಲಕ್ಷಣಗಳು, ಶೈಲೀಕೃತ ಭಾಷೆ, ವಸ್ತುವಿನ ವಿಶಿಷ್ಟತೆ, ನಾಯಕನ ಗುಣ ಸ್ವರೂಪ, ಮಾಯ-ಜೋಗದ ಕಲ್ಪನೆ, ಲೋಕದೃಷ್ಟಿ, ಹೋರಾಟದ ಹಾದಿಗಳನ್ನು ತೋರಿಸಿಕೊಟ್ಟ ಹೆಂಗಸರು ಮತ್ತಿತರ ವಿಷಯಗಳ ಬಗ್ಗೆ ಇಲ್ಲಿ ಮನೋಜ್ಞವಾದ ವಿಶ್ಲೇಷಣೆಯಿದೆ.

``ಲಿಖಿತ ಇತಿಹಾಸ ಮತ್ತು ಮೌಖಿಕ ಇತಿಹಾಸ ಇವು ಒಂದಕ್ಕೊ೦ದು ಪರ್ಯಾಯ ಅಲ್ಲ, ಬದಲಾಗಿ ಇವು ಸಮಾನಾಂತರ ಆಗಿರುತ್ತವೆ. ಇವು ಪರಸ್ಪರ ಸಂಧಿಸಲು ಸಾಧ್ಯವಿಲ್ಲ. ಇತಿಹಾಸದ ಭಿನ್ನ ಆಯಾಮಗಳನ್ನು ಇವುಗಳು ನಿರೂಪಿಸುತ್ತವೆ’’ ಎಂಬ ಅವರ ಮಾತು ಬಹಳ ಮಹತ್ವದ್ದು. ಇದೇ ಮಾದರಿಯನ್ನು ಅನುಸರಿಸಿ ಇನ್ನುಳಿದ ಪಾಡ್ದನಗಳ ಅಧ್ಯಯನವನ್ನು ಮುಂದುವರೆಸಲು ಅವಕಾಶವಿದೆ. ಪುಸ್ತಕದ ಎರಡನೇ ಲೇಖನವು ತುಳುವಿನ ಅಜ್ಜಿಕತೆಗಳ ಕುರಿತಾಗಿದೆ. ಈ ವಿಷಯದಲ್ಲಿಯೂ ಡಾ. ಚಿನ್ನಪ್ಪ ಗೌಡರ ತಿಳಿವಳಿಕೆ ಅಗಾಧವಾದುದು. ಅವರು ಡಾ. ಸುರೇಂದ್ರ ರಾವ್ ಜೊತೆಗೂಡಿ ತುಳುವಿನ ೬೦ ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸಿರೈನ್‌ಬಾಯ್’ (Rain boy) ಹೆಸರಿನಲ್ಲಿ ಪ್ರಕಟಿಸಿದ್ದು, ಅದು ಈಗಾಗಲೇ ಅಂತಾರಾಷ್ಟ್ರೀಯ ಓದುಗರ ಪ್ರಶಂಸೆಗೆ ಪಾತ್ರವಾಗಿದೆ. ತುಳು ಅಜ್ಜಿಕತೆಗಳ ಸಂಗ್ರಹದ ಇತಿಹಾಸ, ಕತೆಗಳನ್ನು ಹೇಳುವ ಸಂದರ್ಭ, ಕತೆಗಳ ಸಾಂಸ್ಕೃತಿಕ ಮಹತ್ವ ಇತ್ಯಾದಿಗಳನ್ನು ವಿವರಿಸಿರುವ ಲೇಖಕರು ಒಟ್ಟಿನಲ್ಲಿ ತುಳು ಅಜ್ಜಿಕತೆಗಳು ಸಾಂಸ್ಕೃತಿಕ ಪಠ್ಯಗಳಾಗಿ ಮುಖ್ಯವಾಗುತ್ತವೆ. ಅಜ್ಜಿ ಹೇಳುವ ಮಕ್ಕಳ ಕತೆಗಳು ಬಡವರ ಮತ್ತು ಅಶಕ್ತರ ಆಯುಧಗಳು. ಅವುಗಳನ್ನೇ ಸೃಷ್ಟಿಸಿದ ಸಮಾಜಕ್ಕೆ ಕನ್ನಡಿ ಹಿಡಿಯುತ್ತವೆ. ಈ ಕನ್ನಡಿ ಕಿಟಿಕಿಗಳೂ ಆಗಬಲ್ಲುವು’’ - ಎಂದು ಲೇಖನವನ್ನು ಮುಗಿಸಿದ್ದಾರೆ. ಜನಪದ ಕತೆಗಳ ಸಂಗ್ರಹ ಮತ್ತು ಅಧ್ಯಯನದ ಕೆಲಸಗಳು ಮುಗಿದೇ ಹೋದವು ಎಂದು ಅನ್ನಿಸುತ್ತಿರುವ ಹೊತ್ತಿಗೆ ಚಿನ್ನಪ್ಪ ಗೌಡರು ಬರೆದ ಈ ಲೇಖನವು ಚೇತೋಹಾರಿಯಾಗಿ ಕಾಣಿಸಿಕೊಳ್ಳುತ್ತಿದೆ. ಕನ್ನಡದಲ್ಲಿ ಕೆಲಸದ ಮತ್ತು ಕುಣಿತದ ಹಾಡುಗಳ ಸಂಗ್ರಹ ಸಾಕಷ್ಟಿದೆ. ಆದರೆ ಅವುಗಳ ಬಗ್ಗೆ ಆಳವಾದ ಅಧ್ಯಯನ ನಡೆದದ್ದು ಕಡಿಮೆ. ತ್ರಿಪದಿಗಳನ್ನು ಕೆಲಸದ ಹಾಡುಗಳೆಂದು ಕರೆದಿರುವುದು ಹೌದಾದರೂ ತ್ರಿಪದಿಗಳ ವಸ್ತು, ಲಯಗಳು ನಿರ್ದಿಷ್ಟ ಕೆಲಸದೊಂದಿಗೆ ಹೊಂದಿದ ಸಂಬ೦ಧದ ಸ್ವರೂಪವನ್ನು ವಿಶ್ಲೇಷಿಸಲಾಗಿಲ್ಲ. ಹಾಗೆಯೇ ಕುಣಿತ ಹಾಡುಗಳ ವಸ್ತುವಿಗೂ ಕುಣಿತಕ್ಕೂ ಇರುವ ಸಂಬ೦ಧ ಏನೆಂಬುದು ಅಷ್ಟಾಗಿ ಸ್ಪಷ್ಟವಿಲ್ಲ. ತುಳುವಿನಲ್ಲಿ ಕೆಲಸದ ಹಾಡುಗಳು ಕಬಿತೆಗಳೆಂದು ಪ್ರಸಿದ್ಧವಾಗಿವೆ. ಆದರೆಈ ಹಾಡುಗಳ ದೊಡ್ಡ ಮಟ್ಟಿನ ಸಂಗ್ರಹದ ಕೆಲಸ, ವ್ಯಕ್ತಿ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ಕಂಡುಬರುವ ಭಿನ್ನ ಪಠ್ಯಗಳ ದಾಖಲೀಕರಣ, ಹಾಡುಗಾರ ಕೇಂದ್ರಿತ ಕಬಿತಗಳ ಮತ್ತು ದುಡಿ ಹಾಡುಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಕಬಿತಗಳು ಮತ್ತು ದುಡಿ ಹಾಡುಗಳು ಕಣ್ಮರೆಯಾಗುವ ಮೊದಲು ಈ ಕೆಲಸ ಆಗಬೇಕಾಗಿದೆ’’ ಎಂದು ಹೇಳುವ ಡಾ. ಗೌಡರು, ಈ ತುಳು ಪ್ರಕಾರಗಳು ತುಳುನಾಡಿನ ಮಳೆ ಮತ್ತು ಬೇಸಾಯ ಪದ್ಧತಿಯೊಂದಿಗೆ ಹೇಗೆ ನಿಕಟ ಸಂಬ೦ಧ ಹೊಂದಿವೆ ಎಂಬುದನ್ನು ತಾಳ್ಮೆಯಿಂದ ಪರಿಶೀಲಿಸಿದ್ದಾರೆ. ಕೆಲಸದ ಮತ್ತು ಕುಣಿತದ ಹಾಡುಗಳು ತುಳು ಸಂಸ್ಕೃತಿಯ ಒಳಗಿನ ಧ್ವನಿಗಳನ್ನೂ ಕನಸುಗಳನ್ನೂ ಹೇಗೆ ಪುನರ್ ಸೃಷ್ಟಿಸಿವೆ ಎಂಬುದನ್ನೂ ಅವರು ನಮ್ಮ ಗಮನಕ್ಕೆ ತಂದಿದ್ದಾರೆ. ಕಬಿತಗಳಲ್ಲಿರುವ ದುಡಿಯುವ ಜನರ ಕನಸುಗಳ ಮೆರವಣಿಗೆ, ಅವುಗಳಲ್ಲಿ ಕಂಡುಬರುವ ರೂಪಕ, ಪ್ರತಿಮೆ ಮತ್ತು ಸಂದೇಶಗಳನ್ನು ಅವರು ಸರಿಯಾಗಿಯೇ ಗುರುತಿಸಿದ್ದಾರೆ. ದುಡಿಯುವ ಹೆಂಗಸರ ಲೋಕದೃಷ್ಟಿ ಮತ್ತು ಅವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ವಿನ್ಯಾಸಗಳನ್ನು ಕಬಿತಗಳಲ್ಲಿ ಕಾಣಬಹುದು’’ ಎಂಬ ಅವರ ಮಾತು ದಿಟವಾದುದು.ಮಹಿಳೆಯರು, ರೈತರು, ಕಾರ್ಮಿಕರು ಮೊದಲಾದ ಅಲಕ್ಷಿತ ಸಮುದಾಯಗಳ ಇತಿಹಾಸಗಳನ್ನು ಕಟ್ಟಲು, ಮರುಕಟ್ಟಲು ಕಬಿತಗಳು ಮತ್ತು ದುಡಿಹಾಡುಗಳು ಉಪಯುಕ್ತ’’ ಎಂಬ ಅವರ ಮಾತು ಬಹಳ ಮುಖ್ಯವಾಗಿದ್ದು ಮುಂದಿನ ಅಧ್ಯಯನಗಳಿಗೆ ದಿಕ್ಸೂಚಿಯಾಗಿದೆ.

ಪುಸ್ತಕದ ನಾಲ್ಕನೇ ಲೇಖನವು `ಉಳ್ಳಾಲ್ತಿ’ ಹೆಸರಿನ ಪ್ರಭಾವೀ ದೈವದ ಕುರಿತಾಗಿದೆ. ಉಳ್ಳಾಲ್ತಿಯು ಒಬ್ಬಳು ಹೆಣ್ಣು. ಹಾಗಾಗಿ ಅವಳದು ಮಹಿಳಾ ಜಗತ್ತಿನ ಕಥೆ. ಆಕೆಯು ಅರಸುಮನೆತನಕ್ಕೆ ಸೇರಿದವಳಾಗಿದ್ದು, ಸಾಮಾಜಿಕವಾದ ಕೆಲವು ನಿಯಮಗಳನ್ನು ಉಲ್ಲಂಘಿಸಿ ಹೋರಾಟದ ಬದುಕನ್ನು ನಡೆಸಿದ ಹೆಣ್ಣಾದ್ದರಿಂದ ಅವಳ ಕಥನಕ್ಕೆ ವಿಶೇಷವಾದ ಮನ್ನಣೆಯೂ ಇದೆ. ಆಕೆ ಇತರ ದೈವಗಳ ಹಾಗೆಯೇ ಅಸಹಜವೂ ಅಕಾಲಿಕವೂ ಆದ ಮರಣಕ್ಕೊಳಪಡುತ್ತಾಳೆ. ಆದರೆ ಆರಾಧನೆಯ ಸಂದರ್ಭದಲ್ಲಿ ಮುಖವರ್ಣಿಕೆ, ಕೆಂಪು ಬೊಟ್ಟು, ಚುಟ್ಟಿಯ ಸುಂದರ ಸಾಲುಗಳು, ಕಾಡಿಗೆ, ಮೂಗುತಿ, ಸೀರೆ, ಜಡೆ, ಆಭರಣಗಳು, ಮತ್ತಿತರವುಗಳಿಂದ ಭಿನ್ನವಾಗುತ್ತಾಳೆ. ಕುಣಿತ ಮತ್ತು ಆಚರಣೆಯ ವಿಧಾನಗಳೂ ಬೇರೆಯಾಗಿರುತ್ತವೆ. ಈ ಅಂಶಗಳು ಯಾವುದೇ ಸಂಶೋಧಕನಲ್ಲಿ ಕುತೂಹಲ ಹುಟ್ಟಿಸಬಲ್ಲವು. ಚಿನ್ನಪ್ಪ ಗೌಡರು ಈ ಬಗೆಯ ಮಹಿಳಾ ದೈವಗಳು ತುಳುನಾಡಿನ ಚರಿತ್ರೆ ಮತ್ತು ವರ್ತಮಾನದ ಸಮಾಜದೊಂದಿಗೆ ಹೊಂದಿರುವ ಸಂಬ೦ಧವನ್ನು ಸೂಕ್ಷö್ಮವಾಗಿ ಪರಿಶೀಲಿಸಿದ್ದಾರೆ.

ಪುಸ್ತಕದ ಮುಂದಿನ ಮೂರು ಲೇಖನಗಳು ತುಳು ಸಾಹಿತ್ಯದ ಕುರಿತಾಗಿವೆ. ಈ ಲೇಖನಗಳನ್ನು ಬರೆಯಲು ಚಿನ್ನಪ್ಪ ಗೌಡರು ಬೇರೆ ಬೇರೆ ಮೂಲಗಳಿಂದ ಕಲೆ ಹಾಕಿದ ಮಾಹಿತಿಗಳು ಅಪಾರ. ಸ್ವತ: ಒಳ್ಳೆಯ ಕವಿಯಾಗಿರುವ ಲೇಖಕರು ಈಚಿನ ತುಳು ಕವಿತೆಗಳು ಹಿಡಿಯುತ್ತಿರುವ ಹೊಸ ಹಾದಿಯನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಹಿಂದಿನ ಕವಿತೆಗಳು ಹಿಡಿದಿದ್ದ ಹಾದಿಯ ಸಾಧ್ಯತೆಗಳು ಮತ್ತು ಮಿತಿಗಳನ್ನು ವಿಶ್ಲೇಷಿಸಿದ್ದಾರೆ.

ರಾಷ್ಟ್ರೀಯತೆಗೆ ಪ್ರಾದೇಶಿಕ ಆಯಾಮವನ್ನು ನೀಡಿ ತುಳು ನಾಡು ನುಡಿಯ ಬಗೆಗೆ ಅಭಿಮಾನ ತಾಳಿ ಕವನಗಳನ್ನು ಬರೆದ ಹಿರಿಯರನ್ನು ಅವರು ನೆನಸಿಕೊಂಡಿದ್ದಾರೆ. ಜೊತೆಗೇ ಹೊಸ ತಲೆಮಾರಿನ ಕವಿಗಳು ತುಂಬ ಆರೋಗ್ಯಪೂರ್ಣವಾದ ಸಾಮಾಜಿಕ ಪ್ರಜ್ಞೆಯನ್ನು ತಳೆದಿರುವುದನ್ನು ಅವರು ಗಮನಿಸಿದ್ದಾರೆ. ಹೊಸ ಕಾಲದ ಹೊಸ ತುಳು ಕವಿಗಳು ಹೊಸತೊಂದು ತುಳು ಸಮಾಜವನ್ನು ಕಟ್ಟುವ ಕಡೆಗೆ ಹೆಜ್ಜೆಯಿಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’’ ಎಂಬುದು ಅವರ ಒಟ್ಟು ತೀರ್ಮಾನ. ಕರ್ನಾಟಕದ ಭಾಗವಾಗಿರುವ ತುಳುನಾಡಿನ ಕವಿಗಳನ್ನು ಹೊಸಗನ್ನಡದ ಕವಿಗಳೊಡನೆ ಹೋಲಿಸಿ, ತುಳು ಕವಿತೆಗಳು ಎಲ್ಲಿ ನಿಂತಿವೆ ಎಂದು ಹೇಳಿದ್ದರೆ ಬಹುಶ: ಈ ಲೇಖನಕ್ಕೆ ಇನ್ನಷ್ಟು ಆಯಾಮಗಳು ದೊರಕಬಹುದಿತ್ತು. ತುಳು ಕತೆಗಳ ಕುರಿತ ಮುಂದಿನ ಲೇಖನವು ಕವಿತೆಗಳ ಅಭ್ಯಾಸದ ಮಾದರಿಯಲ್ಲಿಯೇ ನಡೆದಿದೆ.

ಆಧುನಿಕ ಕಾಲಘಟ್ಟದಲ್ಲಿ ಕತೆಗಳನ್ನು ಬರೆದ ಲೇಖಕರು ಸಮಾಜದ ಅನ್ಯಾಯ, ಮೋಸ, ಅಸಮಾನತೆ, ಶೋಷಣೆ, ಹಿಂಸೆ ಇವುಗಳ ವಿರುದ್ಧ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆ ಗಳನ್ನು ತರುವ ಅಗತ್ಯವಿದೆ ಎಂಬ ಸಂದೇಶವನ್ನು ಪ್ರಬಲವಾಗಿ ಸಾರಿದ್ದಾರೆ’’ ಎಂಬುದನ್ನು ಈ ಲೇಖನವು ಸೋದಾಹರಣವಾಗಿ ಸ್ಥಾಪಿಸಿದೆ. ಈ ಹಂತದಲ್ಲಿ ಅವರು ಹೇಳುವ ದೇಶ ಮತ್ತು ದೇಶವಾಸಿಗಳನ್ನು ಪ್ರೀತಿಸುವವರಿಂದ ಮಾತ್ರ ರಚನಾತ್ಮಕ ಟೀಕೆಗಳು ಬರುತ್ತವೆ. ಟೀಕೆ, ವಿಮರ್ಶೆ ಮಾಡುವುದು ದೇಶದ್ರೋಹ ಅಲ್ಲ. ನಮ್ಮ ಸಂಸ್ಕೃತಿಯನ್ನು ಹಾಡಿ ಹೊಗಳಿದರೆ ಮಾತ್ರ ಅದು ದೇಶಪ್ರೇಮದ ಏಕಮಾತ್ರ ಸೂಚಕ ಎನ್ನಲಾಗದು. ಹೊಗಳಿಕೆಯೇ ದೇಶಭಕ್ತಿ ಎಂದು ಭಾವಿಸಿದರೆ ಅದು ತಪ್ಪುಗ್ರಹಿಕೆಯಾಗುತ್ತದೆ. ಸಮಾಜದ ಮೇಲೆ ಇರುವ ಕಾಳಜಿಯಿಂದ ಸಾಮಾಜಿಕ ವಿಮರ್ಶನ ಪ್ರಜ್ಞೆ ಹುಟ್ಟುತ್ತದೆ’’ ಎಂಬ ಮಾತುಗಳು ಬಹಳ ಧೈರ್ಯದ್ದು. ಆದ್ದರಿಂದಲೇ ಅದು ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ. ಈ ಭಾಗದ ಕೊನೆಯ ಲೇಖನವು ಅನುವಾದಗಳ ಕುರಿತಾಗಿದ್ದು ವಿಶೇಷವಾದ ಒಳನೋಟಗಳನ್ನು ಹೊಂದಿದೆ.

ತುಳುವಿನಿಂದ ಇಂಗ್ಲಿಷ್‌ಗೆ ಏಳು ಪುಸ್ತಕಗಳನ್ನು ಬಿ ಸುರೇಂದ್ರ ರಾವ್ ಅವರೊಡನೆ ಅನುವಾದಿಸಿದ ಅನುಭವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಲೇಖನವು, ಅನುವಾದಕ್ಕೆ ಆಯ್ದುಕೊಂಡ ಕೃತಿಗಳು, ಅನುವಾದದ ಸಂದರ್ಭದಲ್ಲಿ ಅನುಸರಿಸಿದ ವಿಧಾನಗಳು ಮತ್ತು ಅನುವಾದದ ಉದ್ದೇಶಗಳನ್ನು ಬಿಡಿಸಿ ಹೇಳುತ್ತದೆ. ಅವರೇ ಹೇಳಿಕೊಂಡ೦ತೆ,ಇದರಿಂದ ಒಟ್ಟಾರೆಯಾಗಿ ಅನುವಾದದ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಮತ್ತು ನಿರ್ದಿಷ್ಟವಾಗಿ ತುಳುವಿನಿಂದ ಇತರ ಭಾಷೆಗಳಿಗೆ ಅನುವಾದ ಮಾಡುವವರಿಗೆ ಶೈಕ್ಷಣಿಕ ಪ್ರಯೋಜನವಾದೀತು’’. ಈ ಮಾತಿನಲ್ಲಿ ಯಾರಿಗೂ ಯಾವುದೇ ಸಂಶಯ ಬೇಡ. ಪ್ರಾದೇಶಿಕ ಭಾಷೆಗಳಿಂದ ಜಾಗತಿಕ ಭಾಷೆಗಳಿಗೆ ಅನುವಾದ ಮಾಡುವವರು ಗಮನಿಸಲೇಬೇಕಾದ ಲೇಖನವಿದು. ಈ ಪುಸ್ತಕದ ಕೊನೆಯ ಲೇಖನ ಯಕ್ಷಗಾನದ ಕುರಿತಾಗಿದೆ. ತಮ್ಮ ಭೂತಾರಾಧನೆಯ ಕುರಿತಾದ ಅಧ್ಯಯನ ಸಂದರ್ಭದಲ್ಲಿ ಯಕ್ಷಗಾನಕ್ಕೆ ಭೂತಾರಾಧನೆಯೇ ಮೂಲವಾಗಿರಬೇಕೆಂದು’’ ಹೇಳಿ, ಶಿವರಾಮ ಕಾರಂತರ ವಾದವನ್ನು ತಳ್ಳಿಹಾಕಿದ್ದ ಚಿನ್ನಪ್ಪ ಗೌಡರು ಆನಂತರದ ದಿನಗಳಲ್ಲಿ ಯಕ್ಷಗಾನದ ಬಗ್ಗೆ ಬರೆದದ್ದು ಕಡಿಮೆಯೇ. ಆ ಮಿತಿಯನ್ನು ಅವರು ಈ ಲೇಖನದ ಮೂಲಕ ಮೀರಿದ್ದಾರೆ.

ಯಕ್ಷಗಾನದ ಪ್ರದರ್ಶನಗಳ ಮೂಲಕ ಅದರ ಇತಿಹಾಸವನ್ನು ಕಟ್ಟುವ ಕಠಿಣ ಕೆಲಸಕ್ಕಿಳಿದ ಲೇಖಕರು ಅಚ್ಚರಿ ಹುಟ್ಟಿಸುವ ಮಾಹಿತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ವಿಶಾಲವಾದ ಯಕ್ಷಗಾನ ಬಯಲಾಟಗಳ ಚರಿತ್ರೆ ಯನ್ನು ಮೊದಲನೆಯ ಘಟ್ಟ (ಕ್ರಿ ಶ ೧೬೦೦ ರವರೆಗೆ), ಎರಡನೆಯ ಘಟ್ಟ (೧೬೦೦ರಿಂದ ೧೮೦೦ರವರೆಗೆ), ಮೂರನೆಯ ಘಟ್ಟ (೧೮೦೦-೧೯೦೦) ಮತ್ತು ನಾಲ್ಕನೆಯ ಕಾಲಘಟ್ಟ (೧೯೦೦ರಿಂದೀಚೆ) ಎಂದು ವರ್ಗೀಕರಿಸಿಕೊಂಡ ಅವರು ಈ ವರ್ಗೀಕರಣದ ಮೂಲಕವೇ ಯಕ್ಷಗಾನ ಪ್ರದರ್ಶನಗಳ ಇತಿಹಾಸದ ಬಹುಮುಖೀ ನೆಲೆಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಯೋಗ ಮತ್ತು ಕಥಾವಸ್ತುಗಳನ್ನು ಆಧರಿಸಿಯೂ ವಿಭಜನೆಗಳನ್ನು ಮಾಡಿಕೊಳ್ಳಲು ಸಾಧ್ಯ ಎಂಬುದನ್ನೂ ಅವರು ಸೂಚಿಸಿದ್ದಾರೆ. ಲೇಖನದ ಕೊನೆಯಲ್ಲಿ ಯಕ್ಷಗಾನದ ಬಹುಮುಖೀ ಕೆಲಸಗಳತ್ತಲೂ ನಮ್ಮ ಗಮನ ಸೆಳೆದಿದ್ದಾರೆ.ಒಂದು ಅಂದಾಜಿನ ಪ್ರಕಾರ ಐವತ್ತರಷ್ಟು ಸಂಶೋಧನಾ ಪ್ರಬಂಧಗಳು, ಐನೂರಕ್ಕಿಂತ ಹೆಚ್ಚು ಮೌಲಿಕ ಅಧ್ಯಯನ ಗ್ರಂಥಗಳು ಪ್ರಕಟವಾಗಿವೆ. ಸಾವಿರಕ್ಕಿಂತ ಹೆಚ್ಚು ಪ್ರಸಂಗಗಳು ಸಂಪಾದನೆಯಾಗಿವೆ.

ಯಕ್ಷಗಾನ ಸಾಹಿತ್ಯಚರಿತ್ರೆ ರಚನೆಯಾಗಿದೆ. ಯಕ್ಷಗಾನ ಸಾಂಸ್ಕೃತಿಕ ಪದಕೋಶ ನಿರ್ಮಾಣವಾಗಿದೆ. ಯಕ್ಷಗಾನ ನಮ್ಮ ನಾಡಿನ ಕಲೆ, ಮಣ್ಣಿನ ಕಲೆ, ರಾಜ್ಯ ಮತ್ತು ರಾಷ್ಟ್ರೀಯ ಕಲೆ, ದೇಶದ ಪ್ರಾತಿನಿಧಿಕ, ಪರಿಪೂರ್ಣ ರಂಗಭೂಮಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕಳೆದ ನೂರು ವರ್ಷಗಳಲ್ಲಿ ಯಕ್ಷಗಾನ ಪರಂಪರೆಯ ಅಧ್ಯಯನ ಮತ್ತು ಸಾಂಸ್ಕೃತಿಕ ಇತಿಹಾಸದ ರಚನೆಯ ಕೆಲಸಗಳು ನಡೆದಿರುವುದರಿಂದ ಈ ಮನ್ನಣೆಯನ್ನು ಪಡೆಯಲು ಸಾಧ್ಯವಾಗಿದೆ’’ ಎಂಬ ಅವರ ಮಾತು ಯಕ್ಷಗಾನ ಕಲೆಯ ವರ್ಣರಂಜಿತ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಇಷ್ಟು ಮಾಹಿತಿ ನೀಡಿದ ಆನಂತರವೂ ಅವರು “ಇನ್ನಷ್ಟು ವಿವರಗಳನ್ನು ಕ್ರೋಢೀಕರಿಸಿ ನಿಯೋಜಿತ ಯಕ್ಷಗಾನದ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಬೇಕಾಗಿದೆ. ಇದಕ್ಕೆ ಮುಖ್ಯವಾಗಿ ಬೇಕಾಗುವ ಸೈದ್ಧಾಂತಿಕ ನಿಲುವುಗಳನ್ನು ಕೂಡ ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿದೆ’’ ಎಂಬ ಮಾತನ್ನು ವಿನಯದಿಂದ ಹೇಳಿ ಮುಂಬರುವ ದಿನಗಳಲ್ಲಿ ನಡೆಯಬೇಕಾದ ಕೆಲಸಗಳ ಕುರಿತು ಓದುಗರ ಗಮನಸೆಳೆದಿದ್ದಾರೆ.

ಹೀಗೆ ಯಾವ ಕೋನದಿಂದ ನೋಡಿದರೂ ಇದೊಂದು ಉಪಯುಕ್ತ ಲೇಖನ ಸಂಪುಟ ಎಂದು ಹೇಳಲು ಸಾಧ್ಯವಿದೆ. ತಮ್ಮ ಅನೇಕ ವರ್ಷಗಳ ಅಧ್ಯಾಪನ ಮತ್ತು ಸಂಶೋಧನೆಯ ಅನುಭವಗಳನ್ನು ಡಾ. ಚಿನ್ನಪ್ಪ ಗೌಡರು ಇಲ್ಲಿ ನಮ್ಮೊಂದಿಗೆ ಹಂಚಿಕೊ೦ಡಿದ್ದಾರೆ. ಮಾಹಿತಿಗಳ ಕ್ರೋಢೀಕರಣ, ಅವುಗಳ ವರ್ಗೀಕರಣ, ವಿಶ್ಲೇಷಣೆ ಮತ್ತು ಮುನ್ನೋಟಗಳ ವಿಷಯಗಳಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದ ವಿದ್ವತ್ತನ್ನು ಮೆರೆದಿದ್ದಾರೆ. ಹೀಗೆ ಮಾಡುವುದರ ಮೂಲಕ ತುಳುವಿನ ಘನತೆಯನ್ನು ಹೆಚ್ಚಿಸಿದ್ದಾರೆ. ಸಂಶೋಧನೆಗಳು ಪತನಮುಖಿಯಾಗಿರುವ ಇಂದಿನ ಸಂದರ್ಭದಲ್ಲಿ ಈ ಬಗೆಯ ಪುಸ್ತಕಗಳು ನಾವು ನಿರಾಶೆಗೆ ಒಳಗಾಗದಂತೆ ನೋಡಿಕೊಳ್ಳುತ್ತವೆ.

ಚಿತ್ರಗಳು: ಶಶಿರಾಜ ಕಾವೂರು

‍ಲೇಖಕರು Admin

May 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: