ಪುರುಷೋತ್ತಮ ಬಿಳಿಮಲೆ ಓದಿದ ‘ವೀರಮಣಿ ಕಾಳಗ’

ಪುರುಷೋತ್ತಮ ಬಿಳಿಮಲೆ

ಮಾಧವ ಪೆರಾಜೆಯವರ ʼವೀರಮಣಿ ಕಾಳಗʼ ಅನುವಾದ

ಯಕ್ಷಗಾನದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಸಂಗಗಳಿವೆ. ಸಾವಿರಕ್ಕೂ ಮಿಕ್ಕು ಪ್ರಸಂಗಕರ್ತರಿದ್ದಾರೆ. ಈ ಪ್ರಸಂಗಗಳ ವಸ್ತು ವೈವಿಧ್ಯ ಅಪಾರವಾದುದು. ಯಕ್ಷಗಾನ ಪ್ರಸಂಗ ಲೇಖಕರಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ (೧೮೭೦-೧೯೨೨) ಗಳಿಗೆ ಮಹತ್ವದ ಸ್ಥಾನವೊಂದಿದೆ, ಕೌಶಿಕ ಚರಿತ್ರೆ, ವಿದ್ಯುನ್ಮತಿ ಕಲ್ಯಾಣ, ಚಂದ್ರಹಾಸ ಚರಿತೆ, ಭೀಷ್ಮ ವಿಜಯ,ಭೀಷ್ಮಾರ್ಜುನ ಕಾಳಗ, ರುಕ್ಮಾಂಗದ ಚರಿತ್ರೆ, ಮೊದಲಾದ ಯಶಸ್ವೀ ಪ್ರಸಂಗಗಳನ್ನು ಬರೆದ ಅವರು ಭಾಷಾ ಬಳಕೆ ಮತ್ತು ಘಟನೆಗಳ ಜೋಡಣೆಯಲ್ಲಿ ವಿಶೇಷ ಪ್ರತಿಭೆಯನ್ನು ಮೆರೆದಿದ್ದಾರೆ. ಅವರ ವೀರಮಣಿ ಕಾಳಗ ಇಂದಿಗೂ ಪ್ರಚಲಿತದಲ್ಲಿರುವ ಜನಪ್ರಿಯ ಪ್ರಸಂಗ.

ಪದ್ಮಪುರಾಣವನ್ನು ಆಧರಿಸಿ ಬರೆದ ಈ ಪ್ರಸಂಗದಲ್ಲಿ ಶಿವ ಭಕ್ತನಾದ ವೀರಮಣಿಗೂ ಶ್ರೀರಾಮನಿಗೂ ಸಂಘರ್ಷ ಏರ್ಪಡುತ್ತದೆ. ವೀರಮಣಿಯ ಪರವಾಗಿ ಅವನ ಅಳಿಯನಾದ ಶಿವನೂ, ರಾಮನ ಪರವಾಗಿ ಅವನ ಭಕ್ತನಾದ ಹನುಮಂತನಿಗೂ ನಡುವೆ ಘೋರ ಯುದ್ಧ ಏರ್ಪಡುತ್ತದೆ. ಕೊನೆಗೆ ಶ್ರೀರಾಮನೇ ಪ್ರತ್ಯಕ್ಷನಾಗಿ ಹರಿ-ಹರರ ನಡುವೆ ಬೇಧವಿಲ್ಲದ್ದರಿಂದ ಯುದ್ಧ ಅನಗತ್ಯ ಎಂದು ತಿಳಿಸಿ ಪ್ರಸಂಗಕ್ಕೆ ಮಂಗಳ ಹಾಡುತ್ತಾನೆ. ಹರಿ-ಹರ ಸಂಪ್ರದಾಯ ಅಥವಾ ಶಿವ-ರಾಮ ಪರಂಪರೆಯನ್ನು ಕೀರ್ತಿಸುವ ಈ ಪ್ರಸಂಗವು ರಂಗದಲ್ಲಿ ಬಹಳ ಯಶಸ್ವಿಯಾಗಿದೆ.

ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮಾಧವ ಪೆರಾಜೆಯವರು ಈ ಪ್ರಸಂಗವನ್ನು ಇದೀಗ ಸೊಗಸಾಗಿ ಅರೆಭಾಷೆಗೆ ಅನುವಾದ ಮಾಡಿದ್ದಾರೆ. ಸ್ವತ: ಪ್ರಸಂಗಕರ್ತರಾಗಿರುವ ಅವರ ಅನುವಾದವು ಸ್ವತಂತ್ರ ಕೃತಿಯೋ ಎಂಬಷ್ಟು ಸೊಗಸಾದ ಭಾಷಾ ಸೌಂದರ್ಯವನ್ನು ಹೊಂದಿದೆ. ಹಳಗನ್ನಡ, ನಡುಗನ್ನಡಗಳ ಮೇಲೆ ಅಪಾರ ಹಿಡಿತ ಹೊಂದಿರುವ ಅವರು ಅರೆಭಾಷೆಯನ್ನು ಭಾಮಿನಿ, ವಾರ್ಧಕ, ಕಂದಗಳಿಗೆ ಒಗ್ಗಿಸಿದ ರೀತಿ ಮನೋಜ್ಷವಾಗಿದೆ. ರೂಪಕ, ಝಂಪೆ, ಅಷ್ಟ, ತ್ರಿವುಡೆ, ಏಕ, ಮಟ್ಟೆ ಮೊದಲಾದ ತಾಳಗಳಲ್ಲಿಯೂ ಅರೆಭಾಷೆಯು ಆಕರ್ಷಕವಾಗಿ ಅಭಿವ್ಯಕ್ತಿಗೊಂಡಿದೆ. ಜನಸಾಮಾನ್ಯರ ನಡುವೆ ಪ್ರಚಲಿತದಲ್ಲಿರುವ ಬೋಳ,ಗಡ, ಬೆರ್ಸಿ, ಗೂಡೆ, ನೋಡೊಮೊ, ಬಾಕನ ಮೊದಲಾದ ಪದಗಳನ್ನು ಪೆರಾಜೆಯವರು ಬಳಸಿಕೊಂಡ ಕ್ರಮವೂ ಚೇತೋಹಾರಿಯಾಗಿದೆ-

ರಾವಣ ಕದ್ದಾ ಹೆಣ್ಣ್‌ ನ ತಂದವ
ಯಾವ ಜನವ ದೊಡ್ಡ
ನಾವ್‌ ಗೆಲ್ಲಾ ಕತೆ ಗೊತ್ತುಟುಬಲ ನಿನ
ಸಾವುಯ ಬೊಗಳ್ಬೇಡʼ
ಎಂಬಲ್ಲಿ ಬಳಕೆಯಾದ ʼನಾವ್ಗೆಲ್ಲಾ ಕತೆ ಗೊತ್ತುಟು ಬಲ, ನಿನ ಸಾವುಯʼ ಮೊದಲಾದ ಪ್ರಯೋಗಗಳು ಬಹಳ ಉತ್ತಮವಾಗಿವೆ.

ಸಣ್ಣ ಭಾಷೆಗಳು ಸಬಲೀಕರಣಗೊಳ್ಳಬೇಕಾದರೆ ಇಂತ ಕೆಲಸಗಳು ನಡೆಯುತ್ತಲೇ ಇರಬೇಕು. ಮಾಧವ ಪೆರಾಜೆಯವರಿಗೆ ಅಭಿನಂದನೆಗಳು.

ಮರೆಯುವ ಮುನ್ನ: ನಿರಂಜನರ ಕಲ್ಯಾಣ ಸ್ವಾಮಿಯೂ (ಅನು: ಸಂಗೀತಾ ರವಿರಾಜ್) ಅತ್ಯುತ್ತಮವಾಗಿ ಅರೆಭಾಷೆಗೆ ಬಂದಿದೆ.

‍ಲೇಖಕರು Admin

September 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: