ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಟ್ಟ ನಕ್ಷತ್ರಗಳಿಗೆ ಹೊಳಪು ಬರಿಸಿದ ಅಂಜಲಿ ರಾಮಣ್ಣ

ರೇಣುಕಾ ರಮಾನಂದ

ಈಗಲೂ ಮೂರು ದಿನಕ್ಕೆ ಹರಿದು ಹೋಗುವ ಪ್ಲಾಸ್ಟಿಕ್ ಕೊಟ್ಟೆಯನ್ನೇ ಶಾಲಾಬ್ಯಾಗ್ ಎಂದು ಒಪ್ಪಿಕೊಂಡು ಶಾಲೆಗೆ ಬರುವ ಸಾವಿರಾರು ಸರ್ಕಾರಿ ಶಾಲೆಯ ಮಕ್ಕಳಿದ್ದಾರೆ ನಮ್ಮ ರಾಜ್ಯದಲ್ಲಿ..ಈ ಸಾಲಿಗೆ ಹರಿದ, ಯಾರೋ ಕೊಟ್ಟ ಹಳೆಯ ಸ್ಕೂಲು ಬ್ಯಾಗುಗಳಿಗೆ ಹೊಲಿಗೆ ಹಾಕಿಕೊಂಡು ಬರುವವರೂ.. ತೊಳೆದ ಸಿಮೆಂಟು ಚೀಲ ಕತ್ತರಿಸಿ ಕೈಹೊಲಿಗೆಯಲ್ಲಿ ಸ್ಕೂಲುಬ್ಯಾಗಿನ ಆಕಾರಕ್ಕೆ ಪಾಡು ಮಾಡಿಕೊಂಡು ಬರುವವರೂ…ಹಿಡಿಕೆ ಇಲ್ಲದೇ ತರಕಾರಿ ತರಲು ಉಪಯೋಗವಿಲ್ಲ ಎಂದು ತಿಪ್ಪೆಗೆಸೆದ ಕೈಚೀಲವನ್ನು ಹೆಕ್ಕಿಕೊಂಡು ಬಂದು ತೊಳೆದು ಅದಕ್ಕೆ ಹಿಡಿಕೆ ಇಲ್ಲದ ಕಾರಣ ಅದನ್ನು ಕಂಕುಳಲ್ಲಿ ಇರುಕಿಕೊಂಡು ಶಾಲೆಗೆ ಬರುವ ಪುಟ್ಟ ಮಕ್ಕಳೂ ಸೇರಿದ್ದಾರೆ.

ಈಗಷ್ಟೇ ಅರಳುಗಣ್ಣು ಬಿಟ್ಟುಕೊಂಡು ಶಾಲೆಗೆ ತೆರೆದುಕೊಳ್ಳುವ ಪುಟ್ಟ ಮಕ್ಕಳು ಇದೇ ಸತ್ಯ ಎಂದು ಒಪ್ಪಿಕೊಂಡಿರುವುದನ್ನು ನೋಡಿ ನೋಡಿ ಸಂಕಟವಾಗುತ್ತಿತ್ತು ಎದೆಯೊಳಗೆ.ನಾಲ್ಕೈದು ಮಕ್ಕಳಿಗೆ ನನ್ನಿಂದಾದ ಕರ್ತವ್ಯ ಮಾಡಿದರೂ ಇನ್ನೂ ಇನ್ನೂ ಬಾಕಿ ಇರುವ ಪುಟ್ಟ ಪುಟ್ಟ ಆಸೆಗಣ್ಣುಗಳನ್ನು ನೋಡಿ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು..ಗುಣಮಟ್ಟದ ಶಿಕ್ಷಣವನ್ನು ಗುರಿಯಾಗಿಸಿಕೊಂಡ ವ್ಯವಸ್ಥೆಯಲ್ಲಿ ಮೂಲಸೌಕರ್ಯಗಳೇ ಇಲ್ಲದ ಮಗುವಿನ ಸಂಕಟ ಯಾರಿಗೂ ಅರ್ಥವಾಗದು. ಓದಲು ಬರೆಯಲಾದರೂ ಒಂದಷ್ಟು ಖುಷಿಯ ಸಂಗತಿಗಳು ಜೊತೆಗಿದ್ದು ಮನಸ್ಸು ಹಗುರಾಗಿರಬೇಕಲ್ಲ ಕುಡಿದು ತೂರಾಡುತ್ತ ಮನೆಗೆ ಬಂದು ಅನ್ನದ ತಣಿಗೆಯನ್ನು ತೂರುವ ಕೆಲ ಈ ಪುಟ್ಟ ಮಕ್ಕಳ ಅಪ್ಪಂದಿರಿಗೆ ಬೆನ್ನಿಗೆ ಡುಬು ಡುಬು ಗುದ್ದಲು ಮನೆಮಂದಿ ಇವತ್ತಾದ್ರೂ ಕೈಗೆ ಸಿಕ್ಕರೆ ಸಾಕು ಎಂಬುದೊಂದೇ ತಲೆಯಲ್ಲಿರುತ್ತದೆಯೇ ಹೊರತು ಹುಟ್ಟಿಸಿದ ಮಕ್ಕಳಿಗೆ ಹುಲ್ಲಾದರೂ ಮೇಯಿಸೋಣ ಎಂಬುದಿಲ್ಲ..

ಅವ್ವಂದಿರೋ ಹಗಲು ರಾತ್ರಿ ಒಳಹೊರಗೆ ದುಡಿದುಡಿದು ಸುಸ್ತಾಗುತ್ತಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಕಳೆದ ಸುಮಾರು ವರ್ಷಗಳಿಂದ ನನ್ನ ಕೈಲಾದ ಮಟ್ಟಿಗೆ ಜೂನ್ ತಿಂಗಳ ಆರಂಭಕ್ಕೆ ಪ್ರತಿ ಮಗುವಿಗೊಂದು ಉತ್ತಮ ಗುಣಮಟ್ಟದ ಸ್ಕೂಲ್‌ಬ್ಯಾಗ್ ,ಒಂದು ಛತ್ರಿ, ಶೈಕ್ಷಣಿಕ ಸಾಮಗ್ರಿಗಳು, ನೋಟ್ಬುಕ್ಗಳು ಮುಂತಾದವುಗಳನ್ನು ದೊರಕಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳನ್ನೂ ದಾನಿಗಳನ್ನೂ ಸಂಪರ್ಕಿಸುತ್ತಿದ್ದೇನೆ..

ಈ ನನ್ನ ಕೈಂಕರ್ಯಕ್ಕೆ ಸಹೋದರ ಶಿಕ್ಷಕರಾದ ರಾಜೇಶ ನಾಯಕರೂ ಜೊತೆಗೂಡಿದ್ದಾರೆ. ಹತ್ತರಲ್ಲಿ ಒಂಭತ್ತು ಕಡೆ ನಿರಾಶೆಯಾದರೂ ಒಂದು ಕಡೆಯಿಂದ ಸ್ವಯಂ ಸ್ಪೂರ್ತಿಯ ಜೀವಗಳು ತಾವಾಗಿಯೇ ಮುಂದೆ ಬಂದಿವೆ.. ಇವುಗಳಲ್ಲಿ ಹೆಸರು ಹೇಳಲು ಇಚ್ಛಿಸದ ಮನಸ್ಸುಗಳೇ ಬಹಳಷ್ಟು.. ಹಾಗಂತ ಹೇಳಿ ಅವರು ಲಕ್ಷ ಲಕ್ಷ ಎಣಿಸುವ ವರಮಾನದವರಲ್ಲ. ಕೋಟಿ ಎಂಜಲು ಹಣಕ್ಕಾಗಿ ಬಾಯಲ್ಲಿ ಅಮೇಧ್ಯವನ್ನು ಕಟ್ಟಿಕೊಂಡು ನೈತಿಕತೆಯನ್ನು ಮಾರಿಕೊಂಡು ತಿರುಗುತ್ತಿರುವವರೂ ಅಲ್ಲ.

ಅವರೆಲ್ಲ ನಮ್ಮ ನಿಮ್ಮ ಹಾಗಿನ ಮಧ್ಯಮವರ್ಗದವರು…ಬೊಗಸೆ ಅಕ್ಕಿಯಲ್ಲಿ ಮುಷ್ಟಿ ದಾನಮಾಡುವೆ ಯಾರಿದ್ದೀರಿ ಎಂದು ಹುಡುಕುವ ಅಚ್ಚ ಬಿಳಿಯ ಮನಸ್ಸಿನವರು…ಎಷ್ಟೆಲ್ಲ ಇದ್ದರೂ ಆ ಕ್ಷಣಕ್ಕೆ ಕೊಡುವುದು ಬೇಡ ಎಂದುಕೊಂಡು ಮೌನವಾಗುಳಿದ ಜೀವಗಳಿಗೂ ಇಂಥವರನ್ನು ಕಂಡು ಮನಸ್ಸು ಬದಲಾಗುವ ದಿನ ಬರಲಿ ಎಂದು ಆಶಿಸಿ ಮುಂದಿನ ವಿಷಯಕ್ಕೆ ಬರುತ್ತೇನೆ.

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ

ಜೀವದ ಗೆಳತಿ ಮಕ್ಕಳಿಗಾಗಿ ಒಂದಷ್ಟು ಹಣ ಕೊಟ್ಟಿದ್ದಳು.ಅದರಿಂದ ಮಕ್ಕಳಿಗೆ ಏನು ಕೊಳ್ಳಬಹುದು(ಕಳೆದ ವರ್ಷ ಅವಳೇ ಕೊಟ್ಟ ಶಾಲಾಬ್ಯಾಗು ಇನ್ನೂ ಚನ್ನಾಗಿಯೇ ಇರುವುದರಿಂದ,ಮತ್ತು ಒಂದು ಸಂಸ್ಥೆಯವರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಅಗತ್ಯ ಪರಿಕರಗಳನ್ನು ಪೂರೈಸಿರುವುದರಿಂದ) ಎಂಬುದಾಗಿ ಪೇಸ್ಬುಕ್ ಪೋಷ್ಟ್ ಹಾಕಿದ್ದೆ. ಈ ಪೋಷ್ಟ ನೋಡಿದ ಅಂಜಲಿ ರಾಮಣ್ಣ ಮೇಡಂ ತಕ್ಷಣ ಇನ್ಬಾಕ್ಸಿಗೆ ಬಂದು ರೇಣುಕಾ ಎಷ್ಟು ಬ್ಯಾಗು ಬೇಕು ನಾನು ಕಳಿಸುವೆ ಎಂಬುದಾಗಿ ಮೆಸೇಜ್ ಹಾಕಿ ಹದಿನೈದು ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಬ್ಯಾಗುಗಳನ್ನು ಪುಟ್ಟ ನಕ್ಷತ್ರಗಳಿಗಾಗಿ ಕಳಿಸಿಕೊಟ್ಟಿದ್ದಾರೆ.  ಇನ್ನೇನಾದರೂ ಬೇಕಿದ್ದರೆ ಕೇಳಿ ರೇಣುಕಾ ಅಂತ ಕೂಡ ಮೆಸೇಜ್ ಹಾಕಿದ್ದಾರೆ..

ನನಗ್ಯಾಕೋ ಒಬ್ಬರಿಂದಲೇ ಇಷ್ಟೊಂದೆಲ್ಲ ಪಡೆಯುವಾಗ ಜೀವ ಸಂಕುಚಿತವಾಗುತ್ತದೆ.ಅವರಲ್ಲದೇ ಇನ್ಯಾರಾದರೂ ಕೊಟ್ಟರೆ ಚೆನ್ನಿತ್ತು ಅನಿಸುತ್ತದೆ.. ನಮ್ಮ ಶಾಲೆಯ ಒಂದನೇ ವರ್ಗಕ್ಕೆ ಪ್ರವೇಶವಾದ ಹೊಸ ಮಕ್ಕಳಿಗೂ ಇನ್ನಿತರ ಸುತ್ತಲಿನ ಶಾಲೆಗಳ ಬ್ಯಾಗುಗಳಿಲ್ಲದ ತೀರ ಬಡ ಮಕ್ಕಳಿಗೆ ಇವನ್ನು ವಿತರಿಸಿದ್ದೇನೆ.. ಕೊಟ್ಟ ಕೂಡಲೇ ಎದೆಗಪ್ಪಿಕೊಂಡು ಇದು ತನಗೆಂಬುದು ಸತ್ಯವೋ ಸುಳ್ಳೋ ಎಂದು ಅಚ್ಚರಿಗಣ್ಣಾಗಿ ಆ ದಿನ ಲಘುವಿಶ್ರಾಂತಿಗೆ.. ಆಟಕ್ಕೆ ಬಿಟ್ಟರೂ ಹೊರಗೆ ಹೋಗದೇ ಪಾಟಿಚೀಲ ಅವಿತು ಕುಳಿತುಬಿಟ್ಟ ಮಕ್ಕಳ ಎಲ್ಲ ಖುಷಿ ಸಂಭ್ರಮವನ್ನೂ ಅಂಜಲಿ ರಾಮಣ್ಣ ಅವರಿಗೆ ರವಾನಿಸಿದ್ದೇನೆ…

ಅವರಿಗೂ ಇವರಿಗೂ ಸೇತುವೆಯಾದ ಸಾರ್ಥಕ್ಯಭಾವ ಮಾತ್ರ ನನ್ನದು.. ಈ ಮಧ್ಯ ಗೆಳತಿ ಕೊಟ್ಟ ಹಣದ ಅಷ್ಟೂ ಮೊತ್ತ ಹಾಗೇ ಎಪ್ಡಿಯಾಗಿ ಕುಳಿತಿದೆ. ಹೆಚ್ಚುವರಿಯಾಗಿ ಬೇರೆ ಶಾಲೆಗೆ ಹೋಗುತ್ತಿದ್ದೇನೆ. ಅಲ್ಲಿಯ ಮಕ್ಕಳ ನಿರೀಕ್ಷೆಯ ಅರಳುಗಣ್ಣುಗಳು ಕಣ್ಣಮುಂದಿವೆ. ಆ ಹಣವೂ ಒಂದು ಪುಟ್ಟ ಸಾರ್ಥಕತೆಗಾಗಿ ಕಾದಿದೆ…

ರೈತರ ಸಾವು, ಮೂಲಸೌಲಭ್ಯಗಳ ಕೊರತೆ, ಎಗ್ಗಿಲ್ಲದೆ ಮಾರಾಟವಾಗುತ್ತಿರುವ ಕಂಟ್ರಿ ಸಾರಾಯಿ, ಶಾಲೆಗೆ ಹೋಗಲು ಕಾಲುಸಂಕ ಮೀರಿ ಹರಿವ ಹೊಳೆಯ ಭರತ ಇಳಿಯಲಿ ಎಂದು ಕಾದಿರುವ ಪುಟ್ಟ ಮಕ್ಕಳಿಗಾಗಿಯಾದರೂ ಒಂದು ಸೇತುವೆ ನಿರ್ಮಿಸಿಕೊಡದ ಜನಪ್ರತಿನಿಧಿಗಳು, ರಾಜ್ಯರಾಜಕಾರಣದ ಈ ಅಲ್ಲೋಲಕಲ್ಲೋಲ, ಕೋಟಿ ಕೋಟಿ ಕಪ್ಪುಹಣದ ವಹಿವಾಟು. ಹಣಕ್ಕಾಗಿ ನಾಡನ್ನು ಚರಂಡಿ ಪಾಲು ಮಾಡಲೂ ರೆಡಿ ಇರುವ ಅದೇ ಜನಪ್ರತಿನಿಧಿಗಳು ಇವೆಲ್ಲವುಗಳ ನಡುವೆ ತನ್ನ ಕೈಲಾದ ಕರ್ತವ್ಯವನ್ನು ಯಾರ ಹೊಗಳಿಕೆ ಬಯಸದೇ ಪ್ರಚಾರಕ್ಕೆಳಸದೇ ಮಾಡುತ್ತ ಮೌನವಾಗಿ ಇರುವ ಅಂಜಲಿ ರಾಮಣ್ಣನವರಂತವರನ್ನೆಲ್ಲ ನೋಡಿದಾಗ ಮತ್ತೆ ಮತ್ತೆ ಕಾಡುವುದು ಕುವೆಂಪು ಅವರ ಈ ಸೊಲ್ಲು

ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ
ದುಡಿದವನು ಗೌರವಕಾಶಿಸದೆ

ಲೋಕದೊಳೇನೇ ನಡೆಯುತಿರಲಿ
ತನ್ನೀ ಕಾರ್ಯವ ಬಿಡನೆಂದೂ

 

‍ಲೇಖಕರು avadhi

24 July, 2019

5 Comments

  1. Manthesha Kumar. B.N.

    Very nice write up mam..n hats up to anjali mam..

    • ರೇಣುಕಾ ರಮಾನಂದ

      ಧನ್ಯವಾದಗಳು ಸರ್…

    • Anjali Ramanna

      Thank you.

  2. T S SHRAVANA KUMARI

    ತುಂಬಾ ಒಳ್ಳೆಯ ಲೇಖನ.

  3. ರೇಣುಕಾ ರಮಾನಂದ

    ಥ್ಯಾಂಕ್ಯೂ ಮ್ಯಾಡಂ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading