ಪಿ ಪಿ ಉಪಾಧ್ಯ ಸರಣಿ ಕಥೆ 59- ಅಂತ್ಯನೇ ಮುಖ್ಯ ಅತಿಥಿ…

ಪಿ ಪಿ ಉಪಾಧ್ಯ

ಅಂತೂ ಕಾರ್ಯಕ್ರಮ ಮುಗಿಯಿತು. ಅಂತ್ಯದಲ್ಲಿ ಒಂದು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲು ಶಾಸ್ತ್ರೀಗಳ ಮೂಲಕ ಪ್ರೊಫೆಸರರೇ ಹೇಳಿದ್ದರು. ಆ ಜವಾಬ್ದಾರಿಯನ್ನು ಅಣ್ಣ ಆದಿ ತಾನೇ ವಹಿಸಿಕೊಂಡಿದ್ದ. ಎಲ್ಲರೂ ಎದ್ದು ಪಕ್ಕದ ಊಟದ ಹಾಲಿಗೆ ಹೋದಾಗಲೇ ತಿಳಿದದ್ದು ಯಾವ ರೀತಿಯ ಲಘು ಉಪಹಾರ ಎಂದು. ಒಳಗೆ ಹೋಗುತ್ತಲೇ ಕುಡಿಯಲು ಮೂರು ನಾಲ್ಕು ತರಹದ ಲಘು ಪಾನೀಯಗಳು. ಬೇರೆ ಬೇರೆ ಹಣ್ಣಿನ ಜೂಸುಗಳು. ಮುಂದೆ ಮೂರು ಸ್ವೀಟುಗಳು. ಎರಡು ಖಾರದ ಕುರುಕಲು ತಿಂಡಿಗಳು. ಹಾಗೆಯೇ ಮುಂದೆ ಹೊಗೆಯಾಡುತ್ತಿದ್ದ ಉಪ್ಪಿಟ್ಟು ಅವಲಕ್ಕಿ. ಜೊತೆಗೆ ಮೂಲೆಯಲ್ಲಿ ದೊಡ್ಡ ಸ್ಟವ್ ಒಂದನ್ನಿಟ್ಟು ಬಿಸಿ ಬಿಸಿಯಾಗಿ ತಯಾರಿಸಿಕೊಡುತ್ತಿದ್ದ ಮಸಾಲೆ ದೋಸೆ.

ಕೊನೆಯಲ್ಲಿ ಕಾಫಿ, ಟೀ ಮತ್ತು ಬಾದಾಮಿ ಹಾಲು. ಪ್ರೊಫೆಸರರೇ ದಂಗು ಬಡಿದಿದ್ದರು. ಜೊತೆಯಲ್ಲಿಯೇ ಇದ್ದ ಶಾಸ್ತ್ರೀಗಳು `ನಮ್ಮ ಆದಿ ವಹಿಸಿಕೊಂಡ ಮೇಲೆ ಕೇಳಬೇಕೇ ಪ್ರೊಫೆಸರರೇ..’ ಎಂದರು. ಬೇಡ ಬೇಡವೆಂದರೂ ಪ್ಲೇಟಿಗೆ ತುಂಬಿಸುತ್ತಿದ್ದ ತಿಂಡಿಯನ್ನು ಎಲ್ಲರೂ ಪಟ್ಟಾಗಿಯೇ ಹೊಡೆದಿದ್ದರು.  ಎಷ್ಟೊಂದು ತಿಂದಿದ್ದರೆ೦ದರೆ ಪ್ರೊಫೆಸರರೇ ಹೇಳಿದರು ‘ಶಾಸ್ತ್ರೀಗಳೇ ಹೊಟ್ಟೆ ಭಾರವಾಗಿದೆ. ಇವತ್ತು ಇಲ್ಲೇ ಉಳಿದು ಬೆಳಿಗ್ಗೆ ಮೊದಲ ಬಸ್ಸಿಗೇ ಹೊರಟುಬಿಡುತ್ತೇವೆ..’ ಎಂದು ಮುಖ್ಯ ಅತಿಥಿಯಾಗಿ ಬಂದ ಸಾಹಿತಿಯೂ ಅಷ್ಟೆ. ಸುಮ್ಮನೇ ಗೋಣು ಆಡಿಸಿದ್ದರು.

ಎಲ್ಲ ಮುಗಿಸಿ ಆದಿ ಮನೆಗೆ ಹೋಗುವಾಗ ರಾತ್ರಿ ಹನ್ನೊಂದು. ತಮ್ಮನನ್ನು ಕರೆದಿದ್ದ. ‘ಬೇಡ ಪ್ರೊಫೆಸರರು ಮತ್ತು ಮುಖ್ಯ ಅತಿಥಿಯವರೂ ಇಲ್ಲೇ ಉಳಿದಿದ್ದಾರೆ. ನಾನು ಇಲ್ಲೇ ಇರುತ್ತೇನೆ. ಹೇಗೂ ವಾರಾಂತ್ಯಕ್ಕೆ ಬಂದೇ ಬರುತ್ತೇನಲ್ಲ’ ಎಂದ. ಆಗಲೇ ಅವರ ಅಪ್ಪ ಅಮ್ಮ ಇಬ್ಬರೂ ಮನೆಗೆ ಹೋಗಿ ಆಗಿತ್ತು.

ಅಂತೂ ಮುಂದೆ ತಿಂಗಳುಗಳ ಕಾಲ ಊರಲ್ಲೆಲ್ಲ ಅದೇ ಮಾತು. ಅಂತ್ಯನ ಪುಸ್ತಕ ಬಿಡುಗಡೆಯ ಕುರಿತೇ. ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಹೊಗಳಿದ್ದೇ ಹೊಗಳಿದ್ದು. ಬರದವರೂ ತಾವೇನು ಕಮ್ಮಿ ಅಂತ ಅಂತ್ಯ ಬರೆದ ಪುಸ್ತಕಕ್ಕೆ ಎಂತಹ ದೊಡ್ಡ ಪ್ರಶಸ್ತಿ ಬಂದರೂ ಬರಬಹುದಂತೆ ಎನ್ನ ತೊಡಗಿದರು.

ಅಂತ್ಯನ ಪುಸ್ತಕ ಯಾರೂ ನಿರೀಕ್ಷಿಸಿರದಿದ್ದ ಮಟ್ಟಕ್ಕೆ ಪ್ರಚಾರ ಗಿಟ್ಟಿಸಿತ್ತು. ಮತ್ತು ಹಾಗೆಯೇ ಮಾರಾಟವಾಗತೊಡಗಿತು. ಊರಿನ ತುಂಬ ಚರ್ಚೆಗೂ ಒಳಗಾಗತೊಡಗಿತು ಕೂಡ. ಸಾಮಾನ್ಯವಾಗಿ ಅದನ್ನು ಓದುವವರೆಲ್ಲರೂ ಸ್ವಲ್ಪ ಮಟ್ಟಿಗಾದರೂ ಯಕ್ಷಗಾನದ ಬಗ್ಗೆ ತಿಳಿದವರೇ ಆಗಿರುತ್ತಿದ್ದುದರಿಂದ ಚರ್ಚೆಯಲ್ಲಿನ ಮಾತುಗಳೆಲ್ಲವೂ ತೂಕದವೇ ಆಗಿರುತ್ತಿದ್ದವು. ಒಂದು ಹತ್ತಿಪ್ಪತ್ತು ಕಡೆಗಳಲ್ಲಾದರೂ ಪುಸ್ತಕದ ಬಗ್ಗೆ ಚರ್ಚಾಕೂಟ ಏರ್ಪಾಡಾಗಿ ಅಲ್ಲಿಯೂ ಒಳ್ಳೆಯ ಅಭಿಪ್ರಾಯವೇ ವ್ಯಕ್ತವಾಗಿದ್ದುವು. ಒಂದೆರಡು ಕಡೆಗಳಲ್ಲಿ ಅಂತ್ಯನನ್ನೇ ಮುಖ್ಯ ಅತಿಥಿಯಾಗಿ ಕರೆದುದೇ ಅಲ್ಲದೆ ಅದ್ದೂರಿಯ ಸನ್ಮಾನವನ್ನೂ ಮಾಡಿದರು. ಅಂತಹ ಕಡೆಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ಅಂತ್ಯನೇ ಮಧ್ಯ ಪ್ರವೇಶಿಸಿ ಅವರು ಹೊಗಳುವುದನ್ನು ತಡೆದದ್ದೂ ಇತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕೆಗಳಲ್ಲಿ ಬಂದ ವಿಮರ್ಶೆ. ಒಂದು ದಿನಪತ್ರಿಕೆಯಂತೂ ತನ್ನ ಸಾಪ್ತಾಹಿಕ ಪುರವಣಿಯಲ್ಲಿ ಇಡೀ ಒಂದು ಪುಟವನ್ನು ಇದಕ್ಕಾಗಿಯೇ ಮೀಸಲಿಟ್ಟು ಬರೆದ ಬರಹದಲ್ಲಿ ಯಕ್ಷಗಾನ ಕಲೆಯ ಬಗ್ಗೆ ಇಂತಹ ಪುಸ್ತಕವೊಂದು ಈ ಹಿಂದೆ ಬರಲಿಲ್ಲ. ಇನ್ನು ಮುಂದೆಯೂ ಬರುವುದು ಕಷ್ಟ ಎನ್ನುವ ಮಾತುಗಳನ್ನು ಬರೆದಿತ್ತು.

ಹಾಗೆಯೇ ಕೆಲವೇ ದಿನಗಳಲ್ಲಿ ಪುಸ್ತಕ ಬೇರೆ ಬೇರೆ ಭಾಷೆಗಳಿಗೆ ಅನುವಾದವೂ ಆಗಿತ್ತು. ಮೊದಲಿಗೆ ಅಂತ್ಯನಿಗೆ ಅವರ ಪ್ರಕಾಶಕರ ಮೂಲಕ ಬಂದ ಕೋರಿಕೆ ಹಿಂದೀ ಭಾಷೆಯ ಬರಹಗಾರನೊಬ್ಬನಿಂದ. ದೆಹಲಿಯ ವಾಸಿಯಾಗಿದ್ದ ಅವ ಅಂತ್ಯನ ದೆಹಲಿಯ ಪ್ರದರ್ಶನವನ್ನು ನೋಡಿದುದಾಗಿಯೂ ಆಗಲೇ ಅಂತ್ಯನ ಬಗ್ಗೆ ಉತ್ತಮ ಅಭಿಪ್ರಾಯವೊಂದು ಹುಟ್ಟಿದುದಾಗಿಯೂ ಈಗ ಈ ಪುಸ್ತಕವನ್ನು ಓದಿದ ಮೇಲೆ ಅದು ದುಪ್ಪಟ್ಟಾಗಿದೆಯೆಂದೂ ಹೇಳಿ ಮೂಲತಹ ಕನ್ನಡದವನೇ ಆದ ತಾನು ಕೇಂದ್ರ ಸರಕಾರದ ಕೆಲಸದಲ್ಲಿದ್ದ ತನ್ನಪ್ಪ ಕೆಲಸದ ನಿಮಿತ್ತ ಮೂವತ್ತು ನಲುವತ್ತು ವರ್ಷಗಳ ಹಿಂದೆ ದೆಹಲಿಗೆ ಬಂದ೦ದಿನಿ೦ದ ತಾವೂ ದೆಹಲಿ ವಾಸಿಗಳೇ ಆಗಿದ್ದರೂ ಮನೆ ಮಾತು ಮಾತ್ರ ಕನ್ನಡವೇ ಎಂದೂ ಹೇಳಿದ್ದ. ಆದರೆ ಹಿಂದೀ ಮೀಡಿಯಂನಲ್ಲಿಯೇ ಓದಿದ ತಾನು ಬರೆಯುವುದು ಮಾತ್ರ ಹಿಂದಿಯಲ್ಲಿ.

ಹಿಂದಿ ಪತ್ರಿಕೆಗಳಿಗೆ ಖಾಯಂ ಆಗಿ ಬರೆಯುತ್ತೇನೆ. ಹಾಗೆಯೇ ನಾಲ್ಕಾರು ಪುಸ್ತಕಗಳನ್ನೂ ಬರೆದಿರುವುದಾಗಿ ಹೇಳಿ ಅವುಗಳ ಹೆಸರನ್ನು ಬರೆದಿದ್ದ. ಅವುಗಳಲ್ಲಿ ಒಂದೆರಡು ಕನ್ನಡಕ್ಕೆ ಭಾಷಾಂತರವಾಗಿದೆ ಎಂದೂ ತಿಳಿಸಿದ್ದ. ಕೊನೆಯಲ್ಲಿ ಈಗ ಯಕ್ಷಗಾನದಂತಹ ಕಲೆಯ ಬಗ್ಗೆ ನೀವು ಬರೆದ ಪುಸ್ತಕ ತನ್ನ ಮೇಲೆ ಎಷ್ಟೊಂದು ಪರಿಣಾಮ ಮಾಡಿದೆಯೆಂದರೆ ಅದನ್ನು ಹಿಂದಿಗೆ ಅನುವಾದಿಸಲೇ ಬೇಕು ಎನ್ನುವ ಆಸೆ ಹುಟ್ಟುವಷ್ಟು. ಅದು ಬೇರೆ ಮಂಗಳೂರು ಕಡೆಯವರಾದ ತಂದೆಯವರೂ ಆ ಬಗ್ಗೆ ತನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದೂ ಸೇರಿಸಿದ್ದ.

ಆ ಕೇಳಿಕೆಗೆ ತನ್ನದೇ ಆದ ಅಭ್ಯಂತರವೇನೂ ಇಲ್ಲದಿದ್ದರೂ ಅಂತ್ಯ ಆ ಕಾಗದವನ್ನು ಶಾಸ್ತ್ರೀಗಳಿಗೆ ತೋರಿಸಿದ. ಮಾಮೂಲಿಯಂತೆಯೇ ಶಾಸ್ತ್ರೀಗಳು ಪ್ರೊಫೆಸರರ ಅಭಿಪ್ರಾಯವನ್ನೊಂದು ಕೇಳಿಕೊಳ್ಳುವ ಎಂದರು. ಅಂತೆಯೇ ಮಾರನೆಯ ವಾರ ಬಂದ ಫ್ರೊಫೆಸರರಿಗೆ ಆ ಕಾಗದವನ್ನು ತೋರಿಸಿದ. ಕಾಗದವನ್ನು ನೋಡಿದ ಪ್ರೊಫೆಸರರ ಮುಖ ಇಷ್ಟಗಲವಾಗಿತ್ತು. ‘ನನಗೆ ಗೊತ್ತಿತ್ತು ಒಂದು ದಿನ ಅಂತ್ಯನ ಪುಸ್ತಕ ಈ ಮಟ್ಟವನ್ನು ಮುಟ್ಟುತ್ತದೆ ಎಂದು. ಇದಿನ್ನೂ ಪ್ರಾರಂಭವಷ್ಟೆ. ಇನ್ನೂ ಎಷ್ಟೋ ಭಾಷೆಗಳಿಗೆ ಇದು ಅನುವಾದವಾಗುವುದಿದೆ’ ಎಂದು ಕೂಡಲೇ ಒಪ್ಪಿಗೆಯೆಂದು ತಿಳಿಸು ಎಂದರು.

ಅವರಂದ೦ತೆಯೇ ಆಯ್ತು. ಹಿಂದೀ ಅನುವಾದಕ್ಕೆ ಒಪ್ಪಿಗೆ ಕಳುಹಿಸಿದ ಬೆನ್ನಿಗೇ ತಮಿಳು, ತೆಲುಗು ಮತ್ತು ಮರಾಠಿ ಭಾಷೆಗಳ ಲೇಖಕರಿಂದ ಅನುವಾದಕ್ಕೆ ಅನುಮತಿ ಕೋರಿ ಪತ್ರಗಳು ಬಂದವು. ಎಲ್ಲವಕ್ಕೂ ಅಂತ್ಯ ಯಾವುದೇ ಕಂಡೀಷನ್ನುಗಳನ್ನೂ ಹಾಕದೆ ಅನುಮತಿ ನೀಡಿದ. ಆದರೆ ಹಾಗೆ ಪ್ರತಿಯೊಬ್ಬರಿಗೆ ಅನುಮತಿ ನೀಡುವಾಗಲೂ ಶಾಸ್ತ್ರೀಗಳಿಗೆ ಅನುಮತಿ ಕೋರಿ ಬಂದ ಪತ್ರಗಳನ್ನು ತೋರಿಸುವದನ್ನು ಮತ್ತು ಅವರ ಒಪ್ಪಿಗೆ ಪಡೆಯುವುದನ್ನು ಮಾತ್ರ ತಪ್ಪಿಸಲಿಲ್ಲ.

ಹಾಗೆ ಅನುಮತಿ ಕೇಳಿ ಬಂದ ಪತ್ರಗಳಲ್ಲಿ ಶಾಸ್ತ್ರೀಗಳನ್ನು ಮತ್ತು ಪ್ರೊಫೆಸರರನ್ನು ದಂಗುಬಡಿಸಿದ್ದು ಆಕ್ಸ್ಫರ್ಡ್ ಯುನಿವರ್ಸಿಟಿಯ ಪ್ರೊಫೆಸರರೊಬ್ಬರ ಪತ್ರ. ಇಂಡಿಯಾದಲ್ಲಿ ಒಂದೆರಡು ವರ್ಷಗಳ ಕಾಲ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದ ತನಗೆ ಹಿಂದಿಯ ಜ್ಞಾನ ಇದೆಯೆಂತಲೂ ಅಂತ್ಯನ ಪುಸ್ತಕದ ಹಿಂದೀ ಅವತರಿಣಿಕೆಯನ್ನು ಓದಿದ ತಾನು ಎಷ್ಟೊಂದು ಪ್ರಭಾವಿತನಾಗಿದ್ದೇನೆಂದರೆ ‘ನೀವು ಒಪ್ಪಿಗೆ ಕೊಟ್ಟರೆ ಈ ಪುಸ್ತಕವನ್ನು ಇಂಗ್ಲೀಷಿಗೆ ಅನುವಾದಿಸುತ್ತೇನೆ ಮತ್ತು ಆಕ್ಷ್ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿಯೇ ಪ್ರಿಂಟ್ ಮಾಡಿಸಿ ಅಲ್ಲಿಯೇ ಪಬ್ಲಿಷ್ ಮಾಡಿಸುತ್ತೇನೆ’ ಎಂದು ಬರೆದಿದ್ದರು.

। ಇನ್ನು ನಾಳೆಗೆ ।

‍ಲೇಖಕರು Admin

July 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: