ಪಿ ಪಿ ಉಪಾಧ್ಯ ಸರಣಿ ಕಥೆ 58- ಅಂತ್ಯನ ಪುಸ್ತಕ ತಯಾರಾಗಿತ್ತು…

ಪಿ ಪಿ ಉಪಾಧ್ಯ

ಕೆಲವೇ ದಿನಗಳಲ್ಲಿ ಅಂತ್ಯನ ಪುಸ್ತಕ ತಯಾರಾಗಿತ್ತು. ಪುಸ್ತಕ ಎನ್ನುವುದಕ್ಕಿಂತ ಅದೊಂದು ಗೃಂಥವೆ೦ದರೇ ಹೆಚ್ಚು ಸಮಂಜಸವಾದೀತು. ಪ್ರಿಂಟಿ೦ಗಿಗೆ ಕೊಡುವುದರ ಮೊದಲು ಶಾಸ್ತ್ರೀಗಳಿಗೆ ತೋರಿಸಿದರೆ ‘ನನಗಲ್ಲ. ಪ್ರೊಫೆಸರಿಗೇ ಒಮ್ಮೆ ತೋರಿಸೋಣ ಎಂದರು. ಅಂತ್ಯನೂ ಒಪ್ಪಿದ.

ವಾರಾಂತ್ಯಕ್ಕೆ ಬಂದ ಪ್ರೊಫೆಸರರು ಸುಮಾರು ಮುನ್ನೂರೈವತ್ತು ಪುಟಗಳ ಆ ಪುಸ್ತಕವನ್ನು ಕುಳಿತ ಕುರ್ಚಿಯಲ್ಲೇ ಕುಳಿತು ಮಧ್ಯಾಹ್ನದ ಊಟಕ್ಕೆ ತಡವಾಗುತ್ತಿದ್ದುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಒಂದೇ ಸಲಕ್ಕೆ ಓದಿ ಮುಗಿಸಿದರು. ಅದರಲ್ಲಿನ ಹಲವು ಭಾಗಗಳನ್ನು ತಾನು ಮೊದಲೇ ಓದಿದ್ದು ಮತ್ತು ಮಧ್ಯ ಮಧ್ಯ ಅಂತ್ಯ ಕೇಳುತ್ತಿದ್ದ ಪ್ರಶ್ನೆಗಳಿಗೆ ತಾನೇ ಉತ್ತರಿಸುತ್ತಿದ್ದುದು ನೆನಪಿದ್ದ ಅವರಿಗೆ ಈಗ ಅಷ್ಟೇನೂ ಹೊತ್ತು ಬೇಕಾಗಲಿಲ್ಲ ಎನ್ನುವುದು ಅವರು ಹಾಗೆ ಬಿಡದೇ ಓದಲು ಒಂದು ಕಾರಣವಾದರೆ ಅವರ ಅತೀ ಆಸಕ್ತಿಯ ಆ ವಿಷಯವನ್ನು ಅಂತ್ಯ ಬರೆದ ರೀತಿ ಇನ್ನೊಂದು ಕಾರಣ.  

ಮುಗಿಸಿದವರ ಮುಖದ ಮೇಲೆ ಮಿನುಗುತ್ತಿದ್ದ ಮುಗುಳ್ನಗೆಯನ್ನು ಗಮನಿಸಿದ ಶಾಸ್ತ್ರೀಗಳಿಗೆ ತಿಳಿದು ಹೋಯಿತು. `ಅದ್ಭುತ… ಅದ್ಭುತವಾಗಿದೆ ಶಾಸ್ತ್ರೀಗಳೇ ನಿಮ್ಮ ಶಿಷ್ಯನ ಬರಹ. ಪ್ರಕಟಣೆ ಬೇಕಾದರೆ ನಾನೇ ವ್ಯವಸ್ಥೆ ಮಾಡುತ್ತೇನೆ. ಅಷ್ಟೇ ಅಲ್ಲ ಮುನ್ನುಡಿಯನ್ನೂ ಬರೆದು ಕೊಡುತ್ತೇನೆ.’

ಶಾಸ್ತ್ರೀಗಳಿಗೆ ಇದ್ದದ್ದೂ ಆಶ್ಚರ್ಯ. ಜೊತೆಗೆ ಸಂತೋಷವೂ. ಇನ್ನೂ ಏನೂ ಮಾತಾಡದೆ ಕುಳಿತಿದ್ದ ಅಂತ್ಯನ ಮುಖ ನೋಡಿದರು. ಅವನು ಏನು ಹೇಳುವುದಿದೆ. ಪ್ರೊಫೆಸರರ ಹತ್ತಿರ ಮುನ್ನುಡಿ ಬರೆಸಿಕೊಳ್ಳಲು ಕಾದಿರುವವರ ಸಾಲು ಎಷ್ಟು ದೊಡ್ಡದಿದೆ ಎನ್ನುವುದು ಅವನಿಗೂ ತಿಳಿದಿದೆ. ಹಿಂದೆ ಯಾವುದೋ ಒಂದು ಸಂದರ್ಭದಲ್ಲಿ ಯಕ್ಷಗಾನದ ಸಂಕೀರ್ಣತೆ ಮತ್ತು ಆ ಬಗ್ಗೆ ಪ್ರೊಫೆಸರ್ ಅವರು ನಡೆಸುತ್ತಿದ್ದ ಅಧ್ಯಯನ, ಅವರು ಸಂಗ್ರಹಿಸಿದ ಮಾಹಿತಿಗಳ ಬಗ್ಗೆ ಶಾಸ್ತ್ರೀಗಳು ಮಾತನಾಡುತ್ತ ‘ಎಂತೆ೦ತಹ ಪಂಡಿತರು, ಬರಹಗಾರರುಗಳೆಲ್ಲ ಪ್ರೊಫೆಸರರ ಸಲಹೆ ಕೇಳುವುದಕ್ಕೆ ಮತ್ತು ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವುದರ ಬಗ್ಗೆ ಕ್ಯೂ ಹಚ್ಚಿದ್ದಾರೆ’ ಎಂದು ಹೇಳಿದ್ದು ನೆನಪಿತ್ತು. ಅಂತಹುದರಲ್ಲಿ ಈಗ ತಾನಾಗಿಯೇ ಈ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡುವದಾಗಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಪ್ರಕಟಣೆಯ ಹೊಣೆಯನ್ನೂ ಹೊರುತ್ತೇನೆ ಎನ್ನುತ್ತಿದ್ದಾರೆ. ಸೀದಾ ಒಪ್ಪುವುದಲ್ಲದೆ ಬೇರೇನು ಹೇಳುವುದಕ್ಕಿದೆ ಅಂತ್ಯನಿಗೆ!

ಕೂಡಲೇ ಒಪ್ಪಿದ ಅಂತ್ಯ. ಪ್ರೊಫೆಸರರೇ ಮುತುವರ್ಜಿ ವಹಿಸಿ ಉತ್ತಮ ಮುದ್ರಣಾಲಯದಲ್ಲಿ ಅದನ್ನು ಮುದ್ರಿಸುವುದಲ್ಲದೇ ಪ್ರಸಿದ್ಧ ಪ್ರಕಟಣಾಲಯದವರೊಂದಿಗೆ ಮಾತನಾಡಿ ಪುಸ್ತಕದ ಪ್ರಕಟಣೆಗೂ ವ್ಯವಸ್ಥೆ ಮಾಡಿದರು. ಎರಡೇ ದಿನಗಳಲ್ಲಿ ಪ್ರೊಫೆಸರರು ಮುನ್ನುಡಿಯನ್ನೂ ಬರೆದರು ಮತ್ತು ಮುಂದೆ ಎರಡೇ ತಿಂಗಳಿನಲ್ಲಿ ಪುಸ್ತಕ ಪ್ರಕಟಣೆಗೆ ತಯಾರಾಯಿತು. ಹೆಸರಾಂತ ಸಾಹಿತಿಯಾಗಿದ್ದ ತಮ್ಮದೇ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥರನ್ನು ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳನ್ನಾಗಿಯೂ ಕರೆದರು. ಸಮಾರಂಭ ಮಾತ್ರ ಕೋಟದಲ್ಲಿಯೇ. ಅಂತ್ಯನ ಅಪ್ಪ, ಅಮ್ಮ ಮತ್ತು ಅಣ್ಣ ಅಲ್ಲದೇ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ವರ್ಗದವರೆಲ್ಲ ಭಾಗವಹಿಸಬೇಕಲ್ಲ.

ಸಮಾರಂಭದಲ್ಲಿ ಹೆಚ್ಚು ಮಾತನಾಡಿದ್ದು ಪ್ರೊಫೆಸರರೇ. ಅಂತ್ಯನನ್ನು ಹೊಗಳಿದ್ದೇ ಹೊಗಳಿದ್ದು. ಈ ವಯಸ್ಸಿನಲ್ಲಿ ಇಂತಹ ಜ್ನಾನ, ಇಂತಹ ಸಂಶೋಧನಾ ಬರವಣಿಗೆ ಮಾಡುವಂತಹ ತಾಕತ್ತು ಜೊತೆಗೆ ವಿನಮ್ರತೆ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿ ಹೊಗಳಿದರು. ಕೇಳುತ್ತಿದ್ದ ಅಂತ್ಯನ ಅಪ್ಪ, ಅಮ್ಮ ಮತ್ತು ಆದಿಯಂತೂ ಮೂಕರಾಗಿದ್ದರು. ಆದಿಗೆ ತಮ್ಮನ ಬಗ್ಗೆ ಅರಿವಿಲ್ಲದ್ದೇನಲ್ಲ. ಅಷ್ಟು ಜನರೆದುರಿಗೆ ಕಾಲೇಜಿನ ಪ್ರೊಫೆಸರರೊಬ್ಬರು ಹೊಗಳಿದ್ದು ತಮ್ಮನ ಮೇಲಿದ್ದ ಅವನ ಅಭಿಮಾನವನ್ನು ಹೆಚ್ಚಿಸಿತ್ತು.

ಮುಖ್ಯ ಅತಿಥಿಯಾಗಿ ಬಂದಿದ್ದ ಆ ಸಾಹಿತಿಯಂತೂ `ಅಲ್ಲ ಪ್ರೊಫೆಸರರು ಅಂತ್ಯನ ಬಗ್ಗೆ ಈ ಹಿಂದೆ ಹೇಳುತ್ತಿದ್ದಾಗ ಸುಮ್ಮನೆ ಪರಿಚಯದ ಹುಡುಗ ಎಂದು ಹೊಗಳುತ್ತಾರೆ ಎಂದುಕೊ೦ಡಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಅದೂ ಅಂತ್ಯನೊ೦ದಿಗೆ ಒಂದು ಹತ್ತು ನಿಮಿಷ ಮಾತನಾಡಿದಾಗಲೇ ತಿಳಿಯಿತು. ಪ್ರೊಫೆಸರರು ಹೇಳಿದ್ದು ಸುಮ್ಮನೇ ಅಲ್ಲ ಎಂದು. ಅದಕ್ಕಿಂತ ಹೆಚ್ಚಾಗಿ ಈ ಹುಡುಗನ ಜ್ಞಾನದ ಹರಹು ಮತ್ತು ಅದನ್ನು ಪ್ರಸ್ತುತಪಡಿಸುವ ರೀತಿ ನೋಡಿದಾಗ ಇವ ಪ್ರೊಫೆಸರರು ಹೇಳಿದ್ದಕ್ಕಿಂತ ತುಂಬಾ ಮುಂದಿದ್ದಾನೆ ಎಂದೂ ಅನ್ನಿಸಿತು. ಅಷ್ಟೇ ಅಲ್ಲ ಈತನಿಗೆ ಉಜ್ವಲವಾದ ಭವಿಷ್ಯವೂ ಇದೆ ಎನ್ನುವುದು ಈಗಲೇ ಕಾಣಿಸುತ್ತಿದೆ’ ಎಂದು ತೀರಾ ಭಾವುಕರಾಗಿ ಹೇಳಿದಾಗ ಆ ಮಾತುಗಳನ್ನು ಕೇಳಿದ ಸಭಿಕರಿಂದ ದೀರ್ಘ ಕರತಾಡನವೂ ಆಯ್ತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಪುಸ್ತಕದ ಪ್ರಟಣಾಕಾರರಂತೂ ಬಹುಶಃ ಈ ಪುಸ್ತಕ ಕನಿಷ್ಟ ಲಕ್ಷ ಪ್ರತಿಯಾದರೂ ಮುದ್ರಿಸಬೇಕಾಗಬಹುದು ಎಂದು ಆಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನಲಾರಂಭಿಸಿದರು. ಜೊತೆಗೇ ತಮ್ಮ ತೀರಾ ಪರಿಚಯದವರಾದ ಪೊಫೆಸರರ ಒತ್ತಾಯಕ್ಕೆ ಕಟ್ಟುಬಿದ್ದು ತಾವು ಆ ಪುಸ್ತಕದ ಪ್ರಟಣೆಯ ಕೆಲಸವನ್ನು ಒಪ್ಪಿಕೊಂಡದ್ದು ಎಂದು ಪದೇ ಪದೇ ಎಲ್ಲರಲ್ಲೂ ಹೇಳಿಕೊಂಡು ಬಂದದ್ದು ಎಂತಹ ಮೂರ್ಖತನದ ಕೆಲಸ, ಅಷ್ಟೇ ಅಲ್ಲ ಎಲ್ಲಿಯಾದರೂ ಈ ಪ್ರಕಟಣೆಗೆ ಒಪ್ಪಿಕೊಳ್ಳದೇ ಇದ್ದಿದ್ದರೆ ಎಂತಹ ಮೋಸವಾಗುತ್ತಿತ್ತು ತಮಗೆ ಎಂದೂ ಮನಸ್ಸಿಗೆ ಬರತೊಡಗಿತು.

‘ಈ ಸಮಾರಂಭಕ್ಕೋಸ್ಕರ ತುಸು ಹೆಚ್ಚಿನ ಮುತುವರ್ಜಿವಹಿಸಿ ಪುಸ್ತಕಗಳನ್ನು ತಯಾರಿ ಮಾಡುತ್ತೇನೆ. ಮತ್ತೆ ಮುಂದಿನವುಗಳ ಬಗ್ಗೆ ಇಷ್ಟು ಕಾಳಜಿ ವಹಿಸಬೇಕೆಂದೇನೂ ಇಲ್ಲ. ತುಸು ಅಗ್ಗದ ಕಾಗದಗಳನ್ನು ಬಳಸಿದರೂ ಆದೀತು’ ಎಂದು ಮುದ್ರಕರೊಂದಿಗೆ ಈ ಹಿಂದೆ ಆಡಿದ ಮಾತನ್ನು ಇಂದೇ ತಿರುಗಿ ಹೋದ ಮೇಲೆ ಹಿಂದೆ ಪಡೆಯಬೇಕು. ಸಾಧ್ಯವಾದರೆ ಇನ್ನೂ ತುಸು ಒಳ್ಳೆಯ ಕಾಗದಗಳನ್ನೇ ಬಳಸುವಂತೆ ಹೇಳಬೇಕು. ಇನ್ನೂ ಎಷ್ಟು ಕಾಲದವರೆಗೆ ಈಗ ಮುದ್ರಿಸಿದ ಈ ಪುಸ್ತಕಗಳು ಉಳಿಯಬೇಕೋ ಏನೋ ಎಂದೆಲ್ಲ ಅಂದುಕೊಳ್ಳುತ್ತ ತನ್ನ ಮೂರ್ಖತನಕ್ಕೆ ತನ್ನನ್ನೇ ಶಪಿಸಿಕೊಳ್ಳುತ್ತ ಕುಳಿತರು.

ಕಾರ್ಯಕ್ರಮ ಇನ್ನೇನು ಮುಗಿಯಬೇಕು. ಪ್ರೊಫೆಸರರಿಗೂ ಆಶ್ಚರ್ಯವಾಗುವಂತೆ ಅಂತ್ಯನೇ ಪುಸ್ತಕದ ಪ್ರಕಾಶಕರನ್ನು ವೇದಿಕೆಗೆ ಕರೆದಿದ್ದ. ತನ್ನ ಪುಸ್ತಕದ ಪ್ರಕಟಣೆಯಂತಹ ಗುರುತರದ ಜವಾಬ್ದಾರಿಯನ್ನು ಹೊತ್ತದ್ದಕ್ಕಾಗಿ ಇದೊಂದು ನನ್ನ ಕಿರುಕಾಣಿಕೆ ಎಂದು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದೇ ಅಲ್ಲದೆ ಒಂದು ಉಡುಗೊರೆಯನ್ನೂ ಕೊಟ್ಟ. ಪ್ರಕಾಶಕರಿಗೆ ಈಗ ಇದ್ದದ್ದೂ ಗೊಂದಲ.

ಬಂದ ಪ್ರೇಕ್ಷಕರೆಲ್ಲರಿಗೂ ಒಂದೊ೦ದು ಪ್ರತಿಯನ್ನು ಉಚಿತವಾಗಿ ಹಂಚಿದರು. ಕಾರ್ಯಕ್ರಮದ ದಿನದಂದು ಒಂದು ಇನ್ನೂರೈವತ್ತು ಪ್ರತಿಗಳು ಬೇಕು ಎಂದು ಅವರು ಕೇಳಿದಾಗ ಎದುರಿಗೆ ಹೇಳದಿದ್ದರೂ ಪ್ರಕಾಶಕರು ಒಳಗೊಳಗೇ ಎಣಿಸಿದ್ದರು. ಬಹುಶಃ ಬಂದವರೆಲ್ಲರನ್ನೂ ಒಂದೊ೦ದು ಪ್ರತಿಯನ್ನು ಕೊಳ್ಳುವಂತೆ ಒತ್ತಾಯಿಸಿಯಾರು ಮತ್ತು ಮುನ್ನೂರ ಐವತ್ತರ ಮುಖ ಬೆಲೆಯ ಪುಸ್ತಕವನ್ನು ಹೆಚ್ಚೆಂದರೆ ಒಂದಿಪ್ಪತ್ತೈದು ಪ್ರತಿಶತ ರೀಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಿಯಾರು ಎಂದು. ಈಗ ಅವರಿಗೆ ತೀರದ ಆಶ್ಚರ್ಯ. ಈ ಅಣ್ಣ ತಮ್ಮನ ಔದಾರ್ಯಕ್ಕೆ ಮಿತಿಯೇ ಇಲ್ಲವೇ ಎನ್ನುವ ಭಾವನೆ.

। ಇನ್ನು ನಾಳೆಗೆ ।

‍ಲೇಖಕರು Admin

July 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: