ಪಿ ಪಿ ಉಪಾಧ್ಯ ಸರಣಿ ಕಥೆ 53 – ಅಪ್ಪನ ದುಃಖ ಮಿತಿ ಮೀರಿದೆ…

ಪಿ ಪಿ ಉಪಾಧ್ಯ

ಇಂದೂ ಹಾಗೆಯೇ. ಸುಮಾರು ಮೂರು ಗಂಟೆಯ ಹೊತ್ತಿಗೆ ಮನೆಗೆ ಬಂದವ ಅದೂ ಇದೂ ಮಾತನಾಡುತ್ತ ಅಪ್ಪನೊಂದಿಗೆ, ಅಮ್ಮನೊಂದಿಗೆ ಸಮಯ ಕಳೆಯುತ್ತ ಇದ್ದಾಗಲೇ ಆದಿ ಬಂದಿದ್ದ. ಅಲ್ಲೆಲ್ಲೋ ಹೊರಕೆಲಸಕ್ಕೆ ಹೋಗಿದ್ದಿರಬೇಕು. ಕೈ ಕಾಲು ತೊಳೆದುಕೊಂಡು ಬಂದಾಗ ಆಗಲೇ ಅಂತ್ಯನಿಗೆ ಕಾಫಿ ಮತ್ತು ಕುರುಕಲು ತಿಂಡಿಯನ್ನು ಕೊಟ್ಟಿದ್ದ ಅಮ್ಮ ಇವನಿಗೂ ತಂದಿಟ್ಟರು. ತಂದಿಟ್ಟ ತಿಂಡಿಯ ತಟ್ಟೆಯನ್ನು ಅಮ್ಮನಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಬದಿಗೆ ಸರಿಸುತ್ತ ‘ಅಲ್ಲ ಇವತ್ತು ಪೇಟೆಯಲ್ಲಿ ಶಂಕ್ರ ಸಿಕ್ಕಿದ್ದ, ಒಳ್ಳೆಯ ಕೆಲಸ ಸಿಕ್ಕಿದೆಯಂತೆ. ಅಮೆರಿಕದಲ್ಲಿಯೇ.

ಕೆಲಸಕ್ಕೆ ಸೇರುವ ಮೊದಲು ಅಪ್ಪ ಅಮ್ಮನನ್ನು ನೋಡಿಕೊಂಡು ಹಾಗೆಯೇ ಮನೆ ದೇವರಿಗೆ ಪೂಜೆ ಮಾಡಿಕೊಂಡು ಹೋಗುತ್ತೇನೆಂದು ಬಂದಿದ್ದ. ನಾಳೆ ನಮ್ಮ ಮನೆಗೂ ಬರುತ್ತೇನೆಂದ. ಅವ ಗಡಿಬಿಡಿಯಲ್ಲಿದ್ದುದನ್ನು ನೋಡಿದ ನಾನೇ ‘ಬೇಡ ಇನ್ನೊಮ್ಮೆ ಸ್ವಲ್ಪ ಹೆಚ್ಚು ದಿನಗಳ ರಜೆಯಲ್ಲಿ ಬಂದಾಗ ಬರುವಿಯಂತೆ’ ಎಂದು ಹೇಳಿದೆ. ನಾಳೆ ಸಂಜೆಯೇ ತಿರುಗಿ ಹೊರಟಿದ್ದಾನೆ’.

ಮಾಮೂಲಿ ಧಾಟಿಯಲ್ಲಿಲ್ಲದ ಅವನ ಮಾತುಗಳಲ್ಲಿ ಆತಂಕದ ಛಾಯೆಯಿತ್ತು. ಅಮ್ಮ ಮತ್ತು ಅಪ್ಪ ಇಬ್ಬರಿಗೂ ಆಶ್ಚರ್ಯ. ಸಾಮಾನ್ಯವಾಗಿ ತಮ್ಮೊಂದಿಗೆ ಮಾತನಾಡುವಾಗ ಈ ತರ ಇರುತ್ತಿರಲಿಲ್ಲ ಅವನು. ‘ಇದೇನಪ್ಪ ಇಂದು ವಿಶೇಷ’ ಎಂದು ಕೇಳಬೇಕೆಂದು ಅಮ್ಮ ಬಾಯಿ ತೆರೆಯುವ ಮೊದಲು ಇವನೇ ಹೇಳಿದ. ‘ಈ ಶಂಕ್ರ ಇರುವುದು ನಮ್ಮ ಅನಂತ ಇರುವಲ್ಲಿಯೇ. ಅವನೇ ಹೇಳಿದ. ಅನಂತ ಅಲ್ಲಿಯೇ ಒಂದು ಹೆಂಗಸಿನ ಜೊತೆಗೆ ಬದುಕನ್ನು ಪ್ರಾರಂಭಿಸಿದ್ದಾನಂತೆ. ಆಗಲೇ ಎರಡು ವರ್ಷಗಳೇ ಕಳೆದುವಂತೆ’. ಕೇಳಿದವರೆಲ್ಲರಿಗೂ ಶಾಕ್. ವಿಷಯ ಮನಸ್ಸಿನ ಆಳಕ್ಕೆ ಇಳಿಯುತ್ತಿದ್ದಂತೆ ತಾಯಿಯಂತೂ ಕುಗ್ಗಿಯೇ ಹೋಗಿದ್ದಳು. ಇಲ್ಲಿ ಯಾರಿಗೂ, ಕೊನೆಗೆ ತನಗೂ ತಿಳಿಸದೆ ಅಲ್ಲೊಂದು ಸಂಸಾರವನ್ನೇ ಪ್ರಾರಂಭಿಸಿದ ಅವನು ತನ್ನ ಮಗನೇ ಹೌದೇ ಎನ್ನುವ ಸಂಶಯ ಬರುವವರೆಗೆ.

ಅಂತ್ಯನಿಗೂ ಆಶ್ಚರ್ಯವಾದರೂ ಅದೇನೂ ಅಂತಹ ವಿಶೇಷದ್ದಾಗಿ ಕಾಣಿಸಲಿಲ್ಲ. ಆದರೂ ಎಂದೋ ಕುಟುಂಬ ಮತ್ತು ಈ ಸಂಬಂಧಗಳನ್ನೆಲ್ಲ ಬಿಟ್ಟು ಬಿಟ್ಟಿದ್ದ ಅವ ಇಷ್ಟರಮಟ್ಟಿಗೆ ಮುಂದುವರಿದದ್ದು ಅವನಿಗೆ ನೋವನ್ನುಂಟು ಮಾಡಿದ್ದಂತೂ ಹೌದು. ಅದಕ್ಕಿಂತ ಹೆಚ್ಚಾಗಿ ಅಮ್ಮನ ಮನಸ್ಸಿಗುಂಟಾದ ನೋವಿನ ಆಳ ಅವಳ ಪ್ರತಿಕ್ರಿಯೆಯಿಂದಾಗಿ ಮನಸ್ಸಿಗೆ ತಟ್ಟಿ ಕಂಗಾಲಾಗಿದ್ದ. ಹಾಗೆಂದು ಅಮ್ಮನನ್ನು ಸಮಾಧಾನ ಪಡಿಸಲೆಂದು ನೋಡಿದರೆ ಆಗಲೇ ತುಸು ಸುಧಾರಿಸಿಕೊಂಡವಳಂತೆ ಅದೇ ಅಮ್ಮ ‘ಇರಲಿ ಬಿಡು ಅವನಿಂದ ಇನ್ನೇನನ್ನು ತಾನೇ ನಿರೀಕ್ಷಿಸಲಿಕ್ಕೆ ಸಾಧ್ಯ’ ಎಂದಿದ್ದಳು. ಆದರೆ ಧ್ವನಿಯಲ್ಲಿನ ನಡುಕ ಮತ್ತು ಕಣ್ಣಿಂದ ಧುಮುಕಲು ತಯಾರಾಗಿದ್ದ ನೀರು ಮಾತ್ರ ಬೇರೆಯೇ ಕಥೆಯನ್ನು ಹೇಳುತ್ತಿದ್ದುವು.

ಹಾಗಾದರೆ ಅನಂತ ಇನ್ನು ಇಂಡಿಯಾಕ್ಕೆ ಬರುವುದೇ ಇಲ್ಲವೇ? ಎಲ್ಲರ ತಲೆಯಲ್ಲಿ ಸುಳಿಯುತ್ತಿದ್ದ ಪ್ರಶ್ನೆ ಅದೊಂದೇ. ಯಾರೂ ಬಾಯಿ ಬಿಟ್ಟು ಅದನ್ನು ಕೇಳಲಾರರು. ಹಾಗಾದರೆ ತನಗಿನ್ನು ಇಬ್ಬರೇ ಮಕ್ಕಳು ಎಂದು ಆ ತಾಯಿಯ ಮನಸ್ಸಿಗೆ ಬಂದರೆ ಆದಿ ಮತ್ತು ಅಂತ್ಯ ಇನ್ನು ಮೇಲಿಂದ ತಾವಿಬ್ಬರೇ ಈ ಮನೆಯ ಮಕ್ಕಳು ಎಂದುಕೊಂಡರು. ಅಪ್ಪ ಮಾತ್ರ ಎಲ್ಲದಕ್ಕೂ ಮೌನ ಪ್ರೇಕ್ಷಕ. ನೋವಿಲ್ಲವೆಂದಲ್ಲ. ಅದನ್ನೆಂದಿಗೂ ಎದುರಿಗೆ ತೋರಿಸಿಕೊಳ್ಳಲಾರರು. ಆ ನೋವಿನ ಲಕ್ಷಣವೂ ಹೊರಗೆ ಕಾಣಿಸದು. ಈಗಲೂ ಹಾಗೆಯೇ. ‘ಅವರವರು ಪಡೆದುಕೊಂಡು ಬಂದದ್ದು ಅವರವರಿಗೆ’ ಎನ್ನುವ ತೀರ ನಿರಾಸೆಯ ಮಾತೊಂದನ್ನಾಡಿ ಅಲ್ಲಿಂದ ಆಚೆ ಹೋದರು. ಅದು ಅಪ್ಪನ ದುಃಖ ಮಿತಿ ಮೀರಿದೆ ಎಂಬುದರ ಸೂಚನೆ.

| ಇನ್ನು ನಾಳೆಗೆ |

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: