ಪಿ ಪಿ ಉಪಾಧ್ಯ ಸರಣಿ ಕಥೆ 51 – ಅನಂತ ದೊಡ್ಡ ಹೆಸರು ಮಾಡುತ್ತಿದ್ದಾನೆ ಅಮೆರಿಕದಲ್ಲಿ…

ಪಿ ಪಿ ಉಪಾಧ್ಯ

ಅನಂತ ಅಮೆರಿಕ್ಕೆ ಹೋಗಿ ಆಗಲೇ ಆರೇಳು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಅವನಿಂದ ಯಾವುದೇ ಸುದ್ದಿಯೂ ಇಲ್ಲ. ಕಲಿಯುವುದೆಲ್ಲವೂ ಮುಗಿದಿರಬೇಕು. ಅವರೆಲ್ಲ ಕೇಳಿ ತಿಳಿದ ಪ್ರಕಾರ ಹೆಚ್ಚೆಂದರೆ ಎರಡು ವರ್ಷದಲ್ಲಿ ಮುಗಿಯುವ ಕೋರ್ಸ್ ಅವನು ತೆಗೆದುಕೊಂಡಿದ್ದು. ಅಮ್ಮಮ್ಮ ಎಂದರೆ ಇನ್ನೊಂದು ವರ್ಷ. ಅಂದರೆ ಮೂರು ವರ್ಷ. ಹಾಗಾದರೆ ಈಗ ಏನು ಮಾಡುತ್ತಿರಬಹುದು ಅವ! ಹಿಂದೊಮ್ಮೆ ಇಲ್ಲೇ ಪಕ್ಕದ ಊರಿನವನೊಬ್ಬ ಯಾವುದೋ ಕೋರ್ಸ್ಗೆಂದು ಅಮೆರಿಕಕ್ಕೆ ಹೋಗಿ ಅಲ್ಲಿ ಕಲಿಯುವುದು ಸಾಧ್ಯವಾಗದೇ ಅರ್ಧಕ್ಕೇ ವಾಪಾಸು ಬಂದವ ಅಲ್ಲಿ ಅನಂತನನ್ನು ಭೆಟ್ಟ್ಟಿಯಾದುದ್ದರ ಬಗ್ಗೆಯೂ ಮತ್ತು ಅಲ್ಲಿಯೂ ಕಲಿಕೆಯಲ್ಲಿ ಮುಂದಿದ್ದ ಅನಂತ ಯೂನಿವರ್ಸಿಟಿಯಲ್ಲಿಯೇ ಒಳ್ಳೆಯ ಹೆಸರು ಮಾಡಿದುದಾಗಿಯೂ ಹೇಳಿದ್ದ.

‘ನಮಗೆಲ್ಲ ಆಗುವುದಲ್ಲ ಮಾರಾಯ್ರೇ. ಅದಕ್ಕೇ ಬಿಟ್ಟು ಬಂದೆ. ಅದು ಬೇರೆ ಇಲ್ಲಿ ಮನೆಯವರದ್ದೂ ಒಂದೇ ವರಾತ… ಇಲ್ಲೇ ಏನಾದರೂ ಕೆಲಸ ಹುಡುಕಿಕೊಂಡು ನಮ್ಮೊಂದಿಗೇ ಇರುವುದನ್ನು ಬಿಟ್ಟು ಅಷ್ಟು ದೂರದ ಊರಿಗೆ ಯಾಕೆ ಹೋದೆ ಎಂದು. ನನಗೂ ಮನೆಯವರೆಲ್ಲರನ್ನು ಬಿಟ್ಟು ವರ್ಷಗಳ ಕಾಲ ಇರಲು ಸಾಧ್ಯವಾಗಲಿಲ್ಲ. ಅದಕ್ಕೇ ತಿರುಗಿ ಬಂದು ಬಿಟ್ಟೆ’ ಎಂದಿದ್ದ. ಅವನ ಮನೆಯಲ್ಲಿಯೂ ಅವನಪ್ಪ ಅಮ್ಮ ಅಲ್ಲದೆ ಒಬ್ಬ ತಮ್ಮ ಮತ್ತು ಒಬ್ಬಳು ತಂಗಿ. ಮದುವೆಯೂ ಆಗಿಲ್ಲ ಇನ್ನೂ. ಅಂಥವನೇ ಊರು ಮನೆ ಬಿಟ್ಟು ಇರಲು ಆಗುವುದಿಲ್ಲ ಎಂದು ತಿರುಗಿ ಬಂದಿದ್ದಾನೆ. ಅದೇ ಅನಂತ ಊರಿಗೆ ತಿರುಗಿ ಬರುವುದು ಹೋಗಲಿ. ಇಲ್ಲಿ ಎಲ್ಲರೂ ಇದ್ದಾರಾ ಸತ್ತಿದ್ದಾರಾ ಎಂದು ಕೇಳುವುದನ್ನೂ ಮರೆತು ಅಲ್ಲಿಯೇ ಹುದುಗಿ ಹೋಗಿದ್ದಾನೆ ಎಂದರೆ! ಇಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಅವನು ಯಾವಾಗಲೂ ಹಚ್ಚ ಹಸಿರಾಗಿಯೇ ಇದ್ದಾನೆ. ಆದರೆ ಯಾರೂ ಅವನ ಬಗ್ಗೆ ಬಾಯಿ ತೆರೆದು ಮಾತನ್ನು ಮಾತ್ರ ಆಡುವುದಿಲ್ಲ. ಅದು ನೋವಿನಿಂದ ಅಷ್ಟೆ. ತಾಯಿ ದಿನಾ ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಕೈ ಮುಗಿಯುವ ಹೊತ್ತಿನಲ್ಲಿ ಅನಂತನ ಬಗ್ಗೆ ಕೇಳಿಕೊಳ್ಳದ ದಿನಗಳೇ ಇಲ್ಲ. ಉಳಿದವರು ಪ್ರಕಟವಾಗಿ ತೋರಿಸಿಕೊಳ್ಳುತ್ತಿರಲಿಲ್ಲ. ಆದರೆ ಎಲ್ಲರಿಗೂ ಅವನ ನೆನಪಾದಾಗಲೆಲ್ಲ ಕಣ್ಣು ಹನಿಗೂಡುವುದನ್ನು ಮಾತ್ರ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಯಾರಾದರೂ ಎದುರಿಗೆ ಇದ್ದರೆ ಮುಖ ತಿರುಗಿಸುತ್ತಾರೆ ಅಷ್ಟೆ.

ಒಮ್ಮೆಯಂತೂ ಪ್ರೊಫೆಸರರು ಬಂದವರು ಶಾಸ್ತ್ರೀಗಳೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಅನಂತನ ಸುದ್ದಿ ಎತ್ತಿದ್ದರು. ಅವರು ಮಾತನ್ನು ಮುಂದುವರಿಸುವ ಮೊದಲು ಶಾಸ್ತ್ರೀಗಳೇ ಹೇಳಿದ್ದರು `ಅವರ ಮನೆಯವರೇ ಆ ಹುಡುಗನ ಆಸೆ ಬಿಟ್ಟಿದ್ದಾರೆ. ಅಮೆರಿಕಕ್ಕೆ ಹೋದ ದಿನದಿಂದ ಅವನು ಇವರಲ್ಲಿ ಯಾರ ಸಂಪರ್ಕವನ್ನೂ ಇಟ್ಟುಕೊಂಡಿಲ್ಲ ಅವನು. ಅಷ್ಟು ಯಾಕೆ… ನಾವೇ ಹೋಗಿದ್ದೆವಲ್ಲ ಆಗಲೂ ಅವನೊಂದಿಗೆ ಕಲಿಯುತ್ತಿರುವ ನಮ್ಮ ದೇಶದ ಹುಡುಗರೆಲ್ಲ ನಮ್ಮ ಕಾರ್ಯಕ್ರಮಕ್ಕೆ ಬಂದರೂ ಅವನು ಮಾತ್ರ ಬಂದಿರಲಿಲ್ಲ. ಅದೂ ಅವನ ತಮ್ಮನೇ ಪ್ರದರ್ಶನದ ಕೇಂದ್ರ ಎಂದು ತಿಳಿದೂ…’

ಆವತ್ತು ಮಾತಾಡಲು ಬೇರೆ ತುಂಬ ವಿಷಯಗಳು ಇದ್ದುದರಿಂದ ಅನಂತನ ಸುದ್ದಿ ಮುಂದುವರಿದಿರಲಿಲ್ಲ. ಆದರೆ ಇಲ್ಲಿಗೆ ಬಂದಾಗೆಲ್ಲ ಪ್ರೊಫೆಸರರು ಮಾತಿನ ಮಧ್ಯ ಮಧ್ಯ ಅನಂತನ ವಿಷಯವನ್ನೂ ಪ್ರಸ್ತಾಪಿಸುತ್ತಲೇ ಇರುತ್ತಿದ್ದರು. ಅವನ ಅಮೆರಿಕ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವನದೇ ಪ್ರೊಫೆಸರ್ ಒಬ್ಬರು ಈ ಪ್ರೊಫೆಸರರ ಸ್ನೇಹಿತರಾಗಿದ್ದು ಯಾವಾಗಲೂ ಅನಂತನ ಬಗ್ಗೆ ಹೇಳುತ್ತಲೇ ಇರುತ್ತಿದ್ದರು. ಅಲ್ಲಿ ಅಂತಹ ಸ್ಪರ್ಧೆಯ ನಡುವೆಯೂ ಈ ಇಂಡಿಯಾದ ಅದೂ ತಮ್ಮ ಹಳೆ ವಿದ್ಯಾರ್ಥಿಯೊಬ್ಬ ಎಂತಹ ಸಾಧನೆಗಳನ್ನು ಮಾಡುತ್ತಿದ್ದ ಎನ್ನುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಹಾಗೆ ವಿಶೇಷವಾದುದನ್ನೇನಾದರೂ ಕೇಳಿಸಿಕೊಂಡ ಈ ಪ್ರೊಫೆಸರರು ಮುಂದಿನ ಸಲ ಕೋಟಕ್ಕೆ ಬಂದಾಗ ನೆನಪಿನಿಂದ ಆ ಸುದ್ದಿಯನ್ನು ಶಾಸ್ತ್ರೀಗಳಿಗೆ ಹೇಳುತ್ತಿದ್ದರು.

ಈಗಲೂ ಹಾಗೆಯೇ. ಅಲ್ಲಿ ಅನಂತ ಸಾಧನೆಯನ್ನೇನಾದರೂ ಮಾಡಿದರೆ ಅದು ಕೂಡಲೆ ಆ ಪ್ರೊಫೆಸರರಿಗೆ ಗೊತ್ತಾಗುತ್ತಿತ್ತು. ಅದನ್ನು ಕೂಡಲೇ ಅವರು ಈ ಪ್ರೊಫೆಸರರಿಗೆ ಹೇಳುತ್ತಿದ್ದರು. ಹಾಗೆ ಹೇಳುವಾಗ ಅವರಲ್ಲಿ ತನ್ನ ಶಿಷ್ಯ ಎನ್ನುವ ಸಂತೋಷವಿರುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ತಾನು ಪ್ರಯತ್ನಪಟ್ಟು ಅವನನ್ನು ಕಳುಹಿಸಿದ್ದರಿಂದಲೇ ಇದೆಲ್ಲ ಸಾಧ್ಯವಾಯಿತು ಎನ್ನುವ ಹೆಮ್ಮೆಯೂ ಕಾಣಿಸುತ್ತಿತ್ತು. ಒಮ್ಮೆಯಂತೂ ಅವನ ಯಾವುದೋ ಒಂದು ಸಂಶೋಧನೆಯನ್ನು ಅಮೆರಿಕಾದ ಎಲ್ಲ ಯೂನಿವರ್ಸಿಟಿಯವರೂ ಮೆಚ್ಚಿ ಅವನನ್ನು ತಮ್ಮಲ್ಲಿಗೆ ಭಾಷಣಕ್ಕೆ ಆಹ್ವಾನಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡವರು ‘ಇಲ್ಲೇ ಎಲ್ಲಾದರೂ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತ ಬರುವ ಸಂಬಳದಲ್ಲಿ ಬದುಕು ಸಾಗಿಸಲು ಕಷ್ಟಪಡುತ್ತ ಇರಬೇಕಾಗಿದ್ದವನನ್ನು ತಾನೇ ಪ್ರೋತ್ಸಾಹಿಸಿ ಧೈರ್ಯತುಂಬಿ ಅಮೆರಿಕಾಕ್ಕೆ ಕಳುಹಿಸಿದ್ದರಿಂದಲೇ ಇದು ಸಾಧ್ಯವಾಯಿತು’ ಎಂದಿದ್ದರು. ಈ ಪ್ರೊಫೆಸರರಿಗೂ ಹೆಮ್ಮೆಯೆನಿಸಿತ್ತು. ಅದೇ ಮುಂದಿನ ವಾರ ಕೋಟಕ್ಕೆ ಹೋದಾಗ ಶಾಸ್ತ್ರೀಗಳೊಂದಿಗೆ ಅದನ್ನು ಹಂಚಿಕೊoಡರು. ‘ನಿಮ್ಮ ಅನಂತ ದೊಡ್ಡ ಹೆಸರು ಮಾಡುತ್ತಿದ್ದಾನೆ ಅಮೆರಿಕದಲ್ಲಿ. ಅವನ ಸಂಶೋಧನೆಯೊoದು ಅಲ್ಲಿನ ಎಲ್ಲ ಯೂನಿವರ್ಸಿಟಿಗಳಲ್ಲಿಯೂ ಮನೆ ಮಾತಾಗಿದೆಯಂತೆ’ 

ಶಾಸ್ತ್ರೀಗಳಿಗೂ ಸಂತೋಷವೇ. ತಮ್ಮ ಊರಿನ ಹುಡುಗ, ಅದಕ್ಕಿಂತ ಹೆಚ್ಚಾಗಿ ತಮ್ಮ ಸಂಸ್ಥೆಗೆ ಅನ್ನದಾತರಾದ ಶಾಮಣ್ಣನವರ ಮಗ ಹೆಸರು ಮಾಡುತ್ತಿದ್ದಾನೆಂದರೆ… ಆದರೆ ಆ ಹುಡುಗ ತನ್ನ ಮೂಲದೊಂದಿಗಿನ ಸಂಬoಧವನ್ನು ಕಡಿದುಕೊಳ್ಳುತ್ತಿದ್ದಾನಲ್ಲ ಎನ್ನುವ ನೋವು… ಹಾಗಾಗಿಯೇ ಏನೂ ಪ್ರತಿಕ್ರಿಯೆ ತೋರಿಸದೆ ಸುಮ್ಮನೇ ಇದ್ದು ಬಿಟ್ಟರು. ಆದರೂ ಈ ಎಲ್ಲ ಸುದ್ದಿ ಮತ್ತು ಅವನ ಸಾಧನೆಗಳು ಯಾರಿಗೆ ತಿಳಿದರೆ ಹೆಚ್ಚು ಖುಶಿಯಾಗುತ್ತಿತ್ತೋ ಅವರಿಗೇ ತಲುಪುತ್ತಿಲ್ಲ ಎನ್ನುವುದನ್ನು ಮಾತ್ರ ಸೂಚ್ಯವಾಗಿ ಹೇಳಿದರು. ಕೇಳಿದ ಪ್ರೊಫೆಸರರಿಗೆ ಆಶ್ಚರ್ಯ.

ಆದರೂ ಅವರು ಇಲ್ಲಿಗೆ ಬಂದಾಗೆಲ್ಲ ತಮ್ಮ ಸ್ನೇಹಿತನ ಮೂಲಕ ಅನಂತನ ಬಗ್ಗೆ ತಿಳಿದುಬಂದ ಸುದ್ದಿಗಳನ್ನು ಹೇಳುವುದನ್ನು ನಿಲ್ಲಿಸಲಿಲ್ಲ. ಹಾಗಾಗಿ ಶಾಸ್ತ್ರೀಗಳಿಗೆ ಸುಮಾರಾಗಿ ಅನಂತನ ಬಗ್ಗೆ ತಿಳಿಯುತ್ತಿರುತ್ತದೆ. ಪ್ರೊಫೆಸರರೊಂದಿಗೆ ಶಾಸ್ತ್ರೀಗಳು ಮಾತಾಡುವುದನ್ನು ಅಲ್ಲೇ ಎಲ್ಲಿಯಾದರೂ ಇರುತ್ತಿದ್ದ ಅಂತ್ಯ ಕೇಳಿಸಿಕೊಂಡರೆ ಉಂಟು. ಕೇಳಿಸಿಕೊಂಡರೂ ಅಂತ್ಯ ಆ ಬಗ್ಗೆ ಅಂತಹ ಆಸಕ್ತಿಯನ್ನೇನೂ ತೋರಿಸುತ್ತಿರಲಿಲ್ಲ. ಮನಸ್ಸಿನಲ್ಲಿಯೇ ದುಃಖ ಪಡುತ್ತ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ ತಾನು ಹಾಗೆ ಕೇಳಿಸಿಕೊಂಡದ್ದು ಅವರಿಗೆ ಅದು ತಿಳಿಯುವುದು ಬೇಡ ಎಂದು. ಹಾಗಾಗಿಯೇ ಶಾಸ್ತ್ರೀಗಳಾಗಿಯೇ ಅನಂತನ ವಿಷಯವನ್ನು ಅಂತ್ಯನೊoದಿಗೋ ಅಥವಾ ಆಗಾಗ್ಗೆ ತನ್ನನ್ನು ನೋಡಲು ಬರುತ್ತಿದ್ದ ಆದಿಯೊಂದಿಗೋ ಹೇಳುತ್ತಿರಲಿಲ್ಲ.

ಆ ಎಲ್ಲ ಸುದ್ದಿಗಳು ತನ್ನ ಮೂಲಕ ಅವರಿಗೆ ತಲುಪಿದರೆ ಅವರಿಗೆ ನೋವಾಗಬಹುದೇನೋ ಎನ್ನುವ ಆಲೋಚನೆ ಅವರದ್ದು. ಹಾಗಿರುವಾಗಲೇ ಒಂದು ದಿನ ಗಿಳಿಯಾರಿನ ಶಂಕ್ರ ಆದಿಯನ್ನು ಹುಡುಕಿಕೊಂಡು ಬಂದಿದ್ದ. ಶಂಕ್ರನ ಅಪ್ಪ ಆದಿಗೆ ಹಳೆಯ ಗುರುತು. ಕಲಿಯುವುದರಲ್ಲಿ ಹುಷಾರಿದ್ದ ಶಂಕ್ರನನ್ನು ಮುಂದೆ ಕಲಿಸಲು ಆರ್ಥಿಕ ಸಹಾಯವನ್ನು ಅವನಪ್ಪ ಕೇಳಿಕೊಂಡು ಬಂದಾಗಲೆಲ್ಲ ಆದಿ ಇಲ್ಲವೆನ್ನದೆ ಮಾಡುತ್ತಿದ್ದ. ಅವನ ಎಂಜಿನಿಯರಿoಗಿಗೂ ಅಷ್ಟೆ. ಮುಂದೆ ಅಮೆರಿಕಕ್ಕೆ ಹೋಗುವಾಗಲೂ ಅಷ್ಟೆ.

ಆದಿ ತನ್ನದೇ ತಮ್ಮನಿಗೆ ಮಾಡಲಿಕ್ಕಾಗದ ಸಹಾಯವನ್ನು ಈ ಶಂಕ್ರನಿಗೆ ಮಾಡಿದ್ದ. ಶಂಕ್ರ ಮತ್ತು ಅವನಪ್ಪ ಅದನ್ನು ನೆನಪಿಟ್ಟುಕೊಂಡದ್ದಷ್ಟೇ ಅಲ್ಲ. ಅವಕಾಶ ಸಿಕ್ಕಿದಾಗಲೆಲ್ಲ `ಈ ಆದಿ ಒಬ್ಬ ಇಲ್ಲದಿದ್ದರೆ ನಾವು ಏನಾಗಿರುತ್ತಿದ್ದೆವೋ’ ಎಂದು ಶಂಕ್ರನ ಅಪ್ಪ ಹೇಳಿದರೆ ಶಂಕ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ನಮ್ಮ ಆದಿ ಅಣ್ಣ ಇಲ್ಲದಿದ್ದರೆ ನಾನು ಇದೇ ಊರಿನಲ್ಲಿ ಗಂಟಿ ಮೇಯಿಸಿಕೊಂಡು ಇರಬೇಕಿತ್ತು’ ಎನ್ನುತ್ತಿದ್ದ. ಅದೆಲ್ಲ ಆದಿಯ ಗಮನಕ್ಕೆ ಬಂದಾಗ ಅವ ಗದರಿಕೊಳ್ಳುವುದಿತ್ತು. ಆದರೆ ಅವರು ಮಾತ್ರ ಅವನ ಗದರುವಿಕೆಗೆ ಕಿವಿಗೊಡುತ್ತಲೇ ಇರಲಿಲ್ಲ.

| ಇನ್ನು ನಾಳೆಗೆ |

‍ಲೇಖಕರು Admin

June 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: