ಪಿ ಪಿ ಉಪಾಧ್ಯ ಸರಣಿ ಕಥೆ 50 – ನಮ್ಮ ಕಲೆ ಮುಂದುವರಿಯುವುದರ ಬಗ್ಗೆ ಹೆದರಬೇಕಿಲ್ಲ…

ಪಿ ಪಿ ಉಪಾಧ್ಯ

ಮಾರನೆಯ ದಿನವೂ ಅವರ ಚರ್ಚೆ ಮುಂದುವರಿಯಿತು. ಪ್ರೊಫೆಸರರಿಗೆ ಅಂತ್ಯನೊoದಿಗೆ ಮಾತನಾಡಿದಷ್ಟೂ ಸಾಲದು ಅನ್ನಿಸಹತ್ತಿತು. ‘ಜಾನಪದ ಕಲೆ ಮುಂದೆಯೂ ಉಳಿಯಬೇಕಾದರೆ, ಈಗಿನ ಸಾಮಾನ್ಯ ಜನರೂ ಅದನ್ನು ಮೆಚ್ಚಿ ಓಲೈಸುವಂತಾಗಬೇಕಾದರೆ ಸಣ್ಣ ಪುಟ್ಟ ಬದಲಾವಣೆಯ ಅಗತ್ಯವಿದೆ. ಆದರೆ ಆ ಬದಲಾವಣೆ ಕಲೆಯ ಮೂಲ ರೂಪಕ್ಕೆ ಧಕ್ಕೆ ತರುವಂತಿರಬಾರದು’ ಎನ್ನುವ ಅವನ ತರ್ಕ ಅವರಿಗೆ ಬಹಳ ಒಪ್ಪಿಗೆಯಾಗಿತ್ತು. ಬಹಳ ದಿನಗಳಿಂದ ಅವರನ್ನು ಕಾಡುತ್ತಿದ್ದುದು ಅದೇ ಸಮಸ್ಯೆ.

ಈಗಿನ ಸಮುದಾಯವೂ ಯಕ್ಷಗಾನದಂತಹ ಕಲೆಯನ್ನು ಸ್ವೀಕರಿಸಿ ಮೆಚ್ಚಿ ಅದು ಮುಂದೆಯೂ ಉಳಿಯುವಂತಾಗಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತಿತ್ತು. ನಮ್ಮ ಕಾಲದವರು, ಅದರಲ್ಲೂ ಹೆಚ್ಚಿನವರು ಬಹಳ ಕಷ್ಟದಿಂದ ನಿಜವಾಗಿಯೂ ಮೆಚ್ಚಿದ್ದಾರೋ ಅಥವಾ ಹಾಗೆ ಮೆಚ್ಚಿದಂತೆ ತೋರಿಸಿಕೊಳ್ಳುತ್ತಿದ್ದಾರೋ ಎನ್ನುವ ಸಂಶಯವನ್ನು ಹುಟ್ಟು ಹಾಕುವಂತಹ ಪರಿಸ್ಥಿತಿಯಿರುವಾಗ ಎಷ್ಟು ದಿನ ಈ ಕಲಾಪ್ರಕಾರ ಮುಂದುವರಿದೀತು ಎನ್ನುವ ಭಯವೂ ಕಾಡುತ್ತಿತ್ತು.

‘ಅಲ್ಲ ಅಂತ್ಯ, ಯಾವ ಯಾವ ಭಾಗಗಳಲ್ಲಿ ಕಲೆಯ ಮೂಲ ರೂಪಕ್ಕೆ ಭಂಗ ಬರದಂತೆ ಏನೇನು ಬದಲಾವಣೆಗಳನ್ನು ಮಾಡಬಹುದು? ಆ ಬಗ್ಗೆ ಏನಾದರೂ ವಿವರವಾಗಿ ಹೇಳಲು ಸಾಧ್ಯವಾದೀತೇ…’ ಈಗ ಅಂತ್ಯನೆoಬ ಒಬ್ಬ ಚಿಕ್ಕ ಹುಡುಗನೊಂದಿಗೆ ಮಾತನಾಡುತ್ತಿದ್ದೇನೆ ತಾನು ಎನ್ನುವುದು ಪ್ರೊಫೆಸರರ ಮನದಿಂದ ಮಾಯವಾಗಿತ್ತು. ಸರೀಕರೊಂದಿಗೆ ಅಥವಾ ತುಸು ಹೆಚ್ಚು ತಿಳಿದವರೊಂದಿಗೆ ಮಾತನಾಡುವಂತೆ ಮಾತನಾಡ ತೊಡಗಿದರು.

‘ಮೊದಲನೆಯದಾಗಿ ನಮ್ಮ ಪ್ರಸಂಗಗಳ ಉದ್ದವನ್ನು ಕಡಿಮೆ ಮಾಡಬಹುದು. ನೋಡುಗರ ತಾಳ್ಮೆಯೂ ಕಡಿಮೆಯಾಗುತ್ತಿದೆ ಮತ್ತು ಅವರಿಗಿರುವ ಸಮಯದ ಕೊರತೆಯೂ ರಾತ್ರಿ ಬೆಳಗಾಗುವವರೆಗಿನ ಪ್ರಸಂಗವನ್ನು ನೋಡದಂತೆ ಮಾಡುತ್ತದೆ. ಹಾಗೆ ಕಡಿತ ಮಾಡುವಾಗ ಕಥೆಯ ಮುಖ್ಯ ಭಾಗಕ್ಕೆ ತೊಂದರೆ ಬರದಂತೆಯೂ ನೋಡಿಕೊಳ್ಳಬೇಕು. ಯಕ್ಷಗಾನದಲ್ಲಿ ಪ್ರಮುಖ ಪಾತ್ರ ವೀರ ರಸಕ್ಕೆ. ಹಾಸ್ಯ, ಶೃಂಗಾರ, ರೌದ್ರ, ಮತ್ತು ಶೋಕ ರಸಗಳೂ ಪ್ರಮುಖವೇ ಆದರೂ ಅವನ್ನು ತೀರಾ ಹಿಂಜಬಾರದು. ಒಂದು ಕಾಲದಲ್ಲಿ ರಾತ್ರಿ ಪ್ರಾರಂಭವಾಗುವ ಪ್ರಸಂಗವನ್ನು ಮಾರನೆಯ ದಿನ ಬೆಳಗಾಗುವವರೆಗೆ ಅಂದರೆ ಎಂಟು ಹತ್ತು ಗಂಟೆಗಳ ಕಾಲ ಎಳೆಯ ಬೇಕಿರುವ ಅನಿವಾರ್ಯತೆಯಿತ್ತು.

ಎರಡು ಮೂರು ಪ್ರಸಂಗಗಳನ್ನು ಆಡಿದರೂ ಸಮಯ ಕಳೆಯುವ ಅಗತ್ಯದಿಂದಾಗಿ ಪ್ರಸಂಗಗಳನ್ನು ಹಿಂಜಬೇಕಿತ್ತು. ಆದರೆ ಈಗ ಹಾಗಿಲ್ಲ. ಒಂದೂವರೆ ಗಂಟೆಗಳ ಪ್ರಸಂಗವೂ ಸಾಕು. ಅದಕ್ಕಿಂತ ಉದ್ದವಾದರೆ ಕಡಿಮೆಯಾಗುತ್ತಿರುವ ತಾಳ್ಮೆಯ ಪ್ರೇಕ್ಷಕ ಕೂರುವುದೂ ಕಷ್ಟವಾಗಬಹುದು. ಒಂದು ಕಾಲವಿತ್ತು. ದೂರ ದೂರದಿಂದ ಬರುತ್ತಿದ್ದ ಹಳ್ಳಿಯ ಜನರಿಗೆ ಸಂಜೆ ಬಂದರೆ ಬೆಳಗಾಗುವವರೆಗೆ ಕುಳಿತಿರುವ ಅನಿವಾರ್ಯತೆಯಿತ್ತು. ಕಣ್ಣು ಕೂರುತ್ತಲೋ ಅಥವಾ ಅಲ್ಲೇ ಎಲ್ಲೋ ಮೂಲೆಯಲ್ಲಿ ತುಸು ಮಲಗಿಯೋ ಕಾಲ ಕಳೆಯುತ್ತಿದ್ದ ಅವರು ಬೆಳಿಗ್ಗಿನ ವರೆಗೆ ಪ್ರೇಕ್ಷಕರಾಗಿ ಇರುತ್ತಿದ್ದರು. ಆದರೆ ಈಗ ಅಂತಹ ಅನಿವಾರ್ಯತೆಯಿಲ್ಲ. ಹಾಗಾಗಿ ಅಂತಹ ಪ್ರಸಂಗಗಳಲ್ಲಿ ಯಾವುದೇ ರಸವನ್ನೂ ಅನವಶ್ಯಕವಾಗಿ ಹಿಂಜದೆ ಒಟ್ಟಿನಲ್ಲಿ ಜನರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುವಂತಹ ಸನ್ನಿವೇಶವನ್ನು ಸೃಷ್ಟಿಸುವಂತಾದರೆ ನಮ್ಮ ಕಲೆ ಮುಂದುವರಿಯುವುದರ ಬಗ್ಗೆ ಹೆದರಬೇಕಿಲ್ಲ ಅನ್ನಿಸುತ್ತದೆ.’

ಪ್ರೊಫೆಸರರಿಗೆ ಅತ್ಯಂತ ಸಮಂಜಸವಾಗಿ ಕಂಡ ತರ್ಕ. ಒಪ್ಪಿದರು. ‘ಅಲ್ಲ ಅಂತ್ಯ ಇದನ್ನೆಲ್ಲ ನಿನ್ನ ಪುಸ್ತಕದಲ್ಲಿ ಸೇರಿಸಬೇಕು. ಜೊತೆಗೆ ಬೇರೆ ಇನ್ನೇನು ನಿನ್ನ ಆಲೋಚನೆಗೆ ಬರುತ್ತದೋ ಎಲ್ಲವನ್ನೂ ಸೇರಿಸಿ ಬರೆ. ಒಟ್ಟಿಗೆ ಮುನ್ನೂರು ಪುಟಗಳಷ್ಟಾದರೂ ಆಗಲಿ. ಎಲ್ಲ ಬರೆದ ಮೇಲೆ ನನಗೊಮ್ಮೆ ತೋರಿಸು.’

`ಅದನ್ನೇ ಮಾಡುತ್ತಿದ್ದೇನೆ ಸರ್. ನಮ್ಮ ದೇಶ ವಿದೇಶಗಳ ಕಾರ್ಯಕ್ರಮಗಳಿಗೆ ಹೊರಡುವ ಮೊದಲು ನಾನು ನಿಮ್ಮೊಂದಿಗೆ ಚರ್ಚಿಸಿ ಬರೆದದ್ದೇ ಹತ್ತಿರ ಹತ್ತಿರ ಇನ್ನೂರೈವತ್ತು ಪುಟಗಳಷ್ಟಾಗಿದೆ. ಈಗಿನದೆಲ್ಲ ಸೇರಿಸಿದರೆ ಇನ್ನೂ ಒಂದು ನೂರು ಪುಟಗಳಷ್ಟು ಆಗಬಹುದು. ಎಲ್ಲ ಮುಗಿಸಿದ ಮೇಲೆ ಖಂಡಿತ ನಿಮಗೆ ತೋರಿಸುತ್ತೇನೆ.’

ಅಲ್ಲಿಗೆ ಅವರ ಚರ್ಚೆ ಮುಗಿದ ಹಾಗೆ. ಪ್ರೊಫೆಸರರು ಮತ್ತು ಅವರೊಂದಿಗೆ ಬಂದವರಿಗೂ ಊರಿಗೆ ಹೋಗಬೇಕಾಗಿತ್ತು. ಕೇಂದ್ರದಲ್ಲಿಯೇ ಬೆಳಿಗ್ಗಿನ ಕಾಫಿ ತಿಂಡಿ ಮುಗಿಸಿ ಬಸ್ಸು ಹತ್ತಿದ್ದರು. ಬಸ್ಸು ಹತ್ತಿಸಲು ಶಾಸ್ತ್ರೀಗಳು ಹೋದರು. ಜೊತೆಯಲ್ಲಿಯೇ ಇದ್ದ ಆದಿ ಅವರೆಲ್ಲರೂ ಬೇಡ ಬೇಡ ಎನ್ನುತ್ತಿದ್ದರೂ ಕೇಳದೆ ಟಿಕೆಟಿನ ಹಣವನ್ನು ತಾನೇ ಕೊಟ್ಟ.

| ಇನ್ನು ನಾಳೆಗೆ |

‍ಲೇಖಕರು Admin

June 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: