ಪಿ ಪಿ ಉಪಾಧ್ಯ ಸರಣಿ ಕಥೆ 5 – ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ…

ಪಿ ಪಿ ಉಪಾಧ್ಯ

5

ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ

ಹಾಗೆಯೇ ಒಂದು ದಿನ ಮನೆಯ ಆಳು ಮತ್ತು ಅಡಿಗೆಯವಳನ್ನು ಕರೆದುಕೊಂಡು ನೇರವಾಗಿ ಸರಸ್ವತಿಯ ಮನೆಗೇ ಹೋದಳು. ಸರಸ್ವತಿಗೆ ಆಶ್ಚರ್ಯ. ಅಲ್ಲಿಯವರೆಗೆ ನೋಡಿರದ ಹೆಂಗಸನ್ನು ಕಂಡವಳು ಒಳಗೆ ಕರೆದರೆ ಹಾಗೆಲ್ಲ ಒಳಗೆ ಬಂದು ಕುಳಿತುಕೊಳ್ಳಲು ಬಂದಿಲ್ಲ. ನನಗೆ ಯಾವುದೂ ಇತ್ಯರ್ಥವಾಗಬೇಕು ಇಂದು' ಎಂದು ಹೂಂಕರಿಸಿದಾಗ ಸರಸ್ವತಿಗೆ ಅರ್ಥವಾಗತೊಡಗಿತ್ತು. ಜೊತೆಗೆ ಅವಳು ಹೇರಿಕೊಂಡು ಬಂದ ಚಿನ್ನ ಪೂರ್ತಿಯಾಗಿ ಹೇಳಿತ್ತು. ಆದರೂ ಕೇಳಿದಳುಅಲ್ಲಮ್ಮ, ನೀವು ಯಾರು.. ಏನಾಗಬೇಕು ನಿಮಗೆ..’
ಏನು ನಾಟಕ ಮಾಡ್ತೀಯ.. ನನ್ನ ಗಂಡನನ್ನು ಒಳಗೆ ಹಾಕಿಕೊಂಡವಳು ನನಗೂ ಮಂಕು ಬೂದಿ ಹಾಕಲು ನೋಡುತ್ತೀಯ' ಇನ್ನು ಮರೆಮಾಚುವುದರಲ್ಲಿ ಅರ್ಥವಿಲ್ಲ ಎಂದುಕೊAಡ ಸರಸ್ವತಿಅಲ್ಲ ತಾಯೀ ನೀವು ದೊಡ್ಡವರು.

ನಿಮಗೆ ಹೇಳುವ ಶಕ್ತಿಯಿಲ್ಲ ನನಗೆ. ಆದರೆ ಗಂಡನನ್ನು ಮನೆಯಲ್ಲಿ ಸರಿಯಾಗಿ ನೋಡಿಕೊಂಡರೆ ಅವರು ಯಾಕೆ ಹೊರಗಡೆ ಹೋಗುತ್ತಾರೆ. ನಿಮ್ಮ ಮನೆಯವರೇ ಹೇಳಿದ್ದಾರೆ ಮದುವೆಗೆ ಮುಂಚೆ ಬಂದವರು ಮದುವೆಯ ಸುದ್ದಿ ಹೇಳಿ ಇನ್ನು ಮೇಲಿಂದ ಬರೋದಿಲ್ಲ ನಾನೂ ಮದುವೆ ಮಾಡ್ಕೋತೀನಿ ಅಂದಿದ್ದರು. ನಾನೇನು ಅವರನ್ನು ಕರೆಯಲಿಕ್ಕೆ ಹೋಗಿದ್ದೆನೇ…. ಅವರಾಗಿಯೇ ಪುನಃ ಬರಲು ಪ್ರಾರಂಭಿಸಿದ್ದು’ ಎಂದೆಲ್ಲ ಹೇಳ ಹೊರಟರೆ ಕಮಲಮ್ಮ ತಡೆದು ನಿನ್ನ ಪುರಾಣ ಎಲ್ಲ ಬೇಕಾಗಿಲ್ಲ ನನಗೆ. ನಾಳೆಯಿಂದ ಅವರು ಬಂದರೆ ಬಾಗಿಲು ತೆರೆಯಕೂಡದು ನೀನು' ಎಂದರು. ಮುಗ್ಧ ಸರಸ್ವತಿಗೂ ಕೋಪ ಬಂತು. ತಾನು ಹೇಳುವುದನ್ನು ಕೇಳುವುದಕ್ಕೂ ತಯಾರಿಲ್ಲದ ಆ ದೊಡ್ಡವರ ಮನೆಯ ಹೆಣ್ಣಿನ ಉದ್ಧಟತನ ಕೆರಳಿಸಿತ್ತುನೋಡಿ ಅಮ್ಮ ಹಾಗೆ ನೋಡ ಹೋದರೆ ಶಾಮೊಡೇರು ನನಗೇ ಹೆಚ್ಚು ಸಲ್ಲಬೇಕು. ಕಳೆದ ಆರೇಳು ವರ್ಷಗಳಿಂದ ಅವರಿಗೆ ನಾನು, ನನಗೆ ಅವರು ಅಂತ ಗಂಡ ಹೆಂಡತಿಗಿಂತ ಹೆಚ್ಚಾಗಿ ಬದುಕ್ಕೊಂಡು ಬಂದಿದ್ದೇವೆ. ಹಾಗಿರುವಾಗ ನಿನ್ನೆ ಮೊನ್ನೆ ಬಂದ ನೀವು ಎಂತದು ಹೇಳುವುದು. ನೆಟ್ಟಗೆ ಸಂಸಾರ ಮಾಡುವುದು ಕಲ್ತುಕೊಳ್ಳಿ’ ಎಂದು ಹೇಳಿ ಬಾಗಿಲು ಹಾಕಿಕೊಂಡಿದ್ದಳು.

ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗಿದ ಕಮಲಮ್ಮ ಅದನ್ನ ಇನ್ನೂ ದೊಡ್ಡದು ಮಾಡುತ್ತ ಹೋದರೆ ತಮ್ಮ ಮರ್ಯಾದೆಗೇ ಕುಂದು ಎಂದು ಹೆದರಿ ಇದ್ದ ಹಾಗೆ ಇದ್ದುಬಿಡಲಿ' ಎಂದು ಸುಮ್ಮನಾಗಿಬಿಟ್ಟರು. ಜೊತೆಗೇ ಸರಸ್ವತಿ ಹೇಳಿದ್ದ 'ಗಂಡನೊಂದಿಗೆ ನೆಟ್ಟಗೆ ಸಂಸಾರ ಮಾಡುವುದನ್ನು ಕಲ್ತುಕೊಳ್ಳಿ' ಎಂದದ್ದೂ ಮನಸ್ಸಿಗೆ ನಾಟಿ ತನ್ನದೂ ತಪ್ಪು ಇರಬಹುದೇನೋ ಎನ್ನಿಸಿದರೂ ಆಕೆಯ ದೊಡ್ಡಸ್ತಿಕೆಯ ಗತ್ತು ಮಾತ್ರ ಕಡಿಮೆಯಾಗಲಿಲ್ಲ. ಮುಂದೆಯೂ ಶಾಮಣ್ಣನವರ ಸರಸ್ವತಿಯ ಮನೆಯ ಪ್ರಯಾಣ ನಿರಾತಂಕವಾಗಿ ಸಾಗಿದರೂ ಮನೆಯಲ್ಲಿ ತುಸು ಶಾಂತಿಯ ವಾತಾವರಣ ಸೃಷ್ಟಿಯಾಗಿದ್ದು ಮಾತ್ರ ಸುಳ್ಳಲ್ಲ.

ಆವತ್ತಿನಿಂದ ಈವತ್ತಿನವರೆಗೆ ಅದು ಹಾಗೆಯೇ ನಡೆದುಕೊಂಡು ಬಂದಿತ್ತು. ಗಿರಿಜ ಸತ್ತು ಒಬ್ಬಂಟಿಗಳಾದ ಮೇಲಂತೂ ಸರಸ್ವತಿ ಪೂರ್ತಿಯಾಗಿ ಶಾಮಣ್ಣನವರನ್ನೇ ನೆಚ್ಚಿಕೊಂಡಿದ್ದಳು. ವಯಸ್ಸಾಗುತ್ತ ಬಂದ ಹಾಗೆ ದೈಹಿಕವಾಗಿ ಅವರ ಸಂಗ ಬೇಕು ಅನ್ನಿಸದಿದ್ದರೂ ಮಾನಸಿಕವಾಗಿ ಮಾತ್ರ ಸರಸ್ವತಿ ಅವರನ್ನು ತುಂಬ ಹಚ್ಚಿಕೊಂಡಿದ್ದಳು. ಶಾಮಣ್ಣ ಅವಳಿಗೆ ತಾಳಿಯೊಂದನ್ನು ಕಟ್ಟಲಿಲ್ಲ ಎನ್ನುವುದೊಂದು ಬಿಟ್ಟರೆ ಆಕೆ ಹೆಂಡತಿಗಿಂತ ಹೆಚ್ಚಾಗಿ ನಡೆದುಕೊಂಡಿದ್ದಳು. ತಾಳಿ ಕಟ್ಟಿಸಿಕೊಂಡ ಹೆಂಡತಿಯಾದರೂ ಆಗಾಗ್ಗೆ ಹಕ್ಕು ಚಲಾಯಿಸುವ ಪ್ರಯತ್ನ ಮಾಡಿಯಾಳು.

ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ. ಅಂತಹುದರಲ್ಲಿ ಈ ಸರಸ್ವತಿ ತಾಳಿಯನ್ನು ಕಟ್ಟದೆಯೂ ನಿಯತ್ತಿನಿಂದ ಇಂದಿನ ವರೆಗೆ ಅವರ ಹೆಸರು ಹೇಳಿಕೊಂಡೇ ಬದುಕಿದ್ದಾಳೆ. ಅವಳು ಬದುಕಿರುವ ವರೆಗೆ ಏನೂ ತೊಂದರೆಯಾಗದಂತೆ ಅವಳಿಗೆ ಆದಾಯ ಬರುವ ಖಾಯಂ ವ್ಯವಸ್ಥೆಯನ್ನೂ ಶಾಮಣ್ಣ ಮಾಡಿದ್ದಾರೆ. ಅದೆಲ್ಲ ತಿಳಿದ ಅವರ ಮಕ್ಕಳದ್ದೂ ಆ ಬಗ್ಗೆ ಏನೂ ತಕರಾರಿರಲಿಲ್ಲ. ಹಾಗಾಗಿ ನಡೆಯುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಸರಸ್ವತಿಗೆ ಸಾಮಾನ್ಯವಾಗಿ ಎರಡು ಕುಟುಂಬದ ನಡುವೆ ಆಸ್ತಿಯ ಸಂಬಂಧ ಜಗಳಕ್ಕೆ ಕಾರಣವಾಗಬಹುದಾಗಿದ್ದ ಮಕ್ಕಳೂ ಹುಟ್ಟಿರಲಿಲ್ಲವಾದ್ದರಿಂದ ಯಾರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಶಾಮಣ್ಣನವರ ಅಕ್ಕಪಕ್ಕದವರು ಮತ್ತು ಸಂಬಂಧಿಕರದ್ದೂ ಅಷ್ಟೆ. ಸರಸ್ವತಿಯನ್ನು ತೀರಾ ಆದರಿಸದಿದ್ದರೂ ಕಡೆಗಣಿಸಲೂ ಇಲ್ಲ. ವಿಶೇಷದ ದಿನಗಳಲ್ಲಿ ಬಂದು ಮನೆಯಲ್ಲಿ ಕೆಲಸದವರೊಂದಿಗೆ ಸೇರಿ ಕಸ ಮುಸುರೆ ಬಳಿಯುವುದು ಮೊದಲಾದುವುಗಳನ್ನು ಮಾಡುತ್ತ ಕಡೇ ಪಂಕ್ತಿಯ ತುದಿಯಲ್ಲಿ ಕೂತು ಊಟ ಮಾಡಿಕೊಂಡು ಹೋಗುತ್ತಿದ್ದ ಅವಳನ್ನು ಅವರೆಲ್ಲ ಸರಸೋತಿ ಎಂದೇ ಕರೆಯುತ್ತ ಹೇಗಿದ್ದೀಯ’ ಎಂದು ವಿಚಾರಿಸುತ್ತಾರೆ. ಹೋಗುವಾಗ ಮಾಡಿದ್ದು ಉಳಿದಿದ್ದರೆ ಒಂದಿಷ್ಟನ್ನು ದೂರದಿಂದ ಅವಳ ಮಡಿಲಿಗೆ ಸುರಿದು `ತೆಗೆದುಕೊಂಡು ಹೋಗು’ ಎನ್ನುತ್ತಾರೆ. ಆದರೆ ಕಮಲಮ್ಮ ಮಾತ್ರ ಊಹೂಂ.. ತಪ್ಪಿಯೂ ಆಕೆಯತ್ತ ನೋಡುವುದಿಲ್ಲ.

ಕಮಲಮ್ಮನ ಹಠಮಾರಿತನದ ನಡುವೆಯೂ ಅವರಿಗೆ ಮೂರು ಮಕ್ಕಳು ಹುಟ್ಟಿದ್ದುವು. ಅವರೇ ಆದಿ, ಅನಂತ ಮತ್ತು ಅಂತ್ಯ. ಮದುವೆಯಾದ ನಾಲ್ಕು ವರ್ಷ ಕಳೆದು ಆದಿ ಹುಟ್ಟಿದರೆ ಮತ್ತೆ ನಾಲ್ಕು ವರ್ಷದ ನಂತರ ಅನಂತ. ಮತ್ತೆ ಎಂಟು ವರ್ಷದ ನಂತರ ಅಂತ್ಯ. ಮೊದಲನೆಯ ಮಗ ಆದಿಯನ್ನು ಹೊಟ್ಟೆಯಲ್ಲಿಟ್ಟುಕೊಂಡಾಗ ಕಮಲಮ್ಮನಿಗೆ ಸಂಭ್ರಮವೋ ಸಂಭ್ರಮ. ತುಸು ತಡವಾಗಿಯಾದರೂ ತನ್ನ ಹೆಣ್ತನವನ್ನು ಸಾಬೀತು ಪಡಿಸಿದೆ ಎನ್ನುವ ತೃಪ್ತಿಯೊಂದಿಗೆ ತವರಿನವರ ನಿರೀಕ್ಷೆಯನ್ನೂ ಹುಸಿಗೊಳಿಸಲಿಲ್ಲವಲ್ಲ ಎನ್ನುವ ಸಮಾಧಾನ.

ಇತ್ತ ಶಾಮಣ್ಣನವರಿಗೂ ಹಿಗ್ಗು. ಬಯಕೆಯ ತೃಪ್ತಿಗಾಗಿ ಸರಸ್ವತಿಯ ಬಳಿಗೆ ಹೋದರೂ ತನ್ನದೇ ಮನೆಯಲ್ಲಿ ತನ್ನದಾದ ವಾರೀಸು ಬರುವುದು ತಡವಾದಾಗ ಅವರಲ್ಲಿ ತುಸು ಚಿಂತೆ ಮೂಡಿದ್ದಿತ್ತು. ತನ್ನ ಹೊರಗಿನ ಚಟುವಟಿಕೆಗಳಿಂದಾಗಿ ತನ್ನಲ್ಲಿ ಆ ಸಾಮರ್ಥ್ಯವೇ ಇಲ್ಲವಾಯ್ತೇನೋ ಎನ್ನುವ ಸಂಶಯವೂ ಅವರನ್ನು ಬಾಧಿಸಿತ್ತು ಅದಕ್ಕೆ ಸರಿಯಾಗಿ ಮದುವೆಯಾಗಿ ವರ್ಷಗಳು ಕಳೆದರೂ ತನ್ನ ಮುಟ್ಟು ನಿಲ್ಲದಾಗ ಕಮಲಮ್ಮನೂ ಅವರನ್ನು ಹಂಗಿಸಿದ್ದಿತ್ತು. ಅವರನ್ನು ಹಂಗಿಸುವುದು ತನ್ನ ಜನ್ಮಸಿದ್ಧ ಹಕ್ಕೆಂದೇ ಆಕೆ ಭಾವಿಸಿದ್ದು ಒಂದಾದರೆ ಏನಾದರೂ ಕೊರತೆಯಿದೆಯೆಂದಾದರೆ ಅದು ಅವರಲ್ಲೇ ಎಂದು ಮೂದಲಿಸುವುದೂ ಬೇಕಾಗಿತ್ತು.

ಊರೆಲ್ಲ ಬಿತ್ತಲು ಸುರು ಮಾಡಿದರೆ ಇನ್ನೇನಾಗುತ್ತದೆ. ನಮ್ಮದೇ ಗದ್ದೆಯಲ್ಲಿ ಬೀಜವೇ ಮೊಳೆಯುವುದಿಲ್ಲ' ಎಂದು ನೇರವಾಗಿಯೇ ಹೆಂಡತಿ ಗಂಡನಿಗೆ ಹೇಳಬಾರದ ಮಾತನ್ನು ಹೇಳಿದ್ದಳು. ಅಂತಹ ಗಂಭೀರ ಪರಿಸ್ಥಿತಿಯಲ್ಲೂ ಹೆಂಡತಿಯ ಉಪಮೆ ಮತ್ತು ಆಕೆ ಅದನ್ನು ರಾಗವಾಗಿ ಹೇಳಿದ ರೀತಿ ಶಾಮಣ್ಣನವರಲ್ಲಿ ಆಶ್ಚರ್ಯ ಮೂಡಿಸಿದರೂ ಆ ಅಪರಾಧೀ ಭಾವನೆ ಅವರನ್ನು ಕೊರೆಯುವುದನ್ನು ಮಾತ್ರ ಬಿಟ್ಟಿರಲಿಲ್ಲ. ಹಾಗಿರುವಾಗ ಹೆಂಡತಿಗೆ ನೀರು ನಿಂತಿತೆನ್ನುವ ಸುದ್ದಿ ಅವರಿಗೆ ತೀವ್ರ ಸಂಭ್ರಮ ಉಂಟು ಮಾಡಿದ್ದರಲ್ಲಿ ವಿಶೇಷವೇನಿಲ್ಲ. ಅತ್ತ ಸುದ್ದಿ ಕೇಳಿದ ತವರಿನಲ್ಲಿಯೂ ಸಂಭ್ರಮ.

ಬಹಳ ವರ್ಷಗಳಲ್ಲಿ ಪ್ರಥಮ ಬಾರಿಗೆ ಹೊಸ ಜೀವವೊಂದರ ಆಗಮನದ ನಿರೀಕ್ಷೆ. ಆರು ತಿಂಗಳಿಗೊಮ್ಮೆಯೂ ಬಂದು ಹೋಗಲು ಹಿಂದೆ ಮುಂದೆ ನೋಡುತ್ತಿದ್ದ ತವರಿನವರು ಹದಿನೈದು ದಿನಗಳಿಗೊಮ್ಮೆ ಘಟ್ಟವಿಳಿದು ಬರ ಹತ್ತಿದ್ದರು. ಅಣ್ಣನೋ ತಮ್ಮನೋ ಅಥವಾ ತಂದೆಯೋ ಬರುವಾಗ ಬುಟ್ಟಿ ತುಂಬ ತುಂಬಿಸಿದ ತಿಂಡಿಗಳು, ಹಣ್ಣುಗಳು. ಈ ಊರಿನವರು ಕೇಳಿಯೂ ತಿಳಿಯದಂತಹವು. ಶಾಮಣ್ಣನವರಿಗೂ ಆಶ್ಚರ್ಯ.ಈ ಪ್ರಪಂಚದಲ್ಲಿ ಇಂತಹದೆಲ್ಲ ತಿಂಡಿಗಳೂ ಇವೆಯೇ’ ಎಂದು. ಹೆಂಡತಿ ಕೈಯ್ಯೆತ್ತಿ ಕೊಟ್ಟರೂ ಕೊಡದಿದ್ದರೂ ಮುಕ್ಕಿಯೇ ಮುಕ್ಕಿದ್ದರು.

ಮುಂದೆಯೂ ಅಷ್ಟೆ. ಆದಿಗೆ ಮೂರು ತುಂಬಿ ಸ್ವಲ್ಪ ದಿನಕ್ಕೇ ಕಮಲಮ್ಮನಿಗೆ ಮತ್ತೊಮ್ಮೆ ಮುಟ್ಟು ನಿಂತಿತ್ತು. ಮೊದಲ ಸಲದಷ್ಟು ಸಂಭ್ರಮವಿಲ್ಲದಿದ್ದರೂ ಅದ್ದೂರಿಗೇನೂ ಕಡಿಮೆಯಿರಲಿಲ್ಲ. ಮಗುವೂ ಹುಟ್ಟಿತು. ಗಂಡು ಮಗು. ಮುಂದೆ ವರ್ಷಗಳು ಕಳೆದರೂ ಸೂಚನೆಯೇನೂ ಕಾಣದಿದ್ದಾಗ ಇನ್ನು ಮಕ್ಕಳಾಗಲಿಕ್ಕಿಲ್ಲ ಎಂದುಕೊಂಡಿದ್ದರು ಎಲ್ಲರೂ. ಕಮಲಮ್ಮನ ಮನಸ್ಸಿನಲ್ಲಿ ಮಾತ್ರ ಒಂದಾದರೂ ಹೆಣ್ಣಾಗಿದ್ದರೆ ಆಗುತ್ತಿತ್ತು ಎನ್ನುವ ಆಸೆಯಿದ್ದಿತ್ತು. ಕೊನೆಯ ಪಕ್ಷ ಗೌರಿಹಬ್ಬದ ಬಾಗಿನ ಕೊಡಲಿಕ್ಕಾದರೂ ಒಬ್ಬಳು ಮಗಳು ಬೇಕೆನ್ನಿಸಿತ್ತು. ಮದುವೆಯಾಗಿ ಇಷ್ಟು ವರ್ಷ ಕಳೆದರೂ ಆಕೆಯ ತವರು ಮನೆಯವರು ಇಂದಿಗೂ ಗೌರಿ ಹಬ್ಬಕ್ಕೆ ಮಗಳನ್ನು ಕರೆದು ಉಡಿತುಂಬಿಸಿ ಬಾಗಿನ ಕೊಟ್ಟು ಕಳುಹಿಸುವುದನ್ನು ತಪ್ಪಿಸಿರಲಿಲ್ಲ.

। ಇನ್ನು ನಾಳೆಗೆ ।

‍ಲೇಖಕರು Admin

May 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: