ಪಿ ಪಿ ಉಪಾಧ್ಯ ಸರಣಿ ಕಥೆ 32 – ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ…

ಪಿ ಪಿ ಉಪಾಧ್ಯ

32

ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ...

ಊರಿನಲ್ಲಿ ಬಹಳ ದಿನಗಳಿಂದಲೂ ಒಂದು ಯುವಕ ಸಂಘ ಅಸ್ಥಿತ್ವದಲ್ಲಿತ್ತು. ಹತ್ತಿಪ್ಪತ್ತು ವರ್ಷಗಳ ಹಿಂದೆ ಆಗ್ಗೆ ಯುವಕರಾಗಿದ್ದ ಒಂದಿಷ್ಟು ಮಂದಿ ಸೇರಿ ಕಟ್ಟಿಕೊಂಡ ಸಂಘ. ಆ ಸಂಘ ಸಮಾಜಸೇವೆಯೇ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳೇ ತಮ್ಮ ಸಂಘದ ಉದ್ದೇಶವೆಂದು ಪಟ್ಟಿ ತಯಾರು ಮಾಡಿಕೊಂಡು ನೋಂದಣಿಯನ್ನೂ ಮಾಡಿಸಿಕೊಂಡು ಬಂದಿತ್ತು. ಸದಸ್ಯರ ಸಂಖ್ಯೆ ಕಡಿಮೆಯಾಯಿತೆನ್ನಿಸಿದಾಗ ಬಹಳ ಹಿಂದೆ ಯುವಕರಾಗಿದ್ದವರನ್ನೂ ಸೇರಿಸಿಕೊಂಡಿದ್ದರು. ಯಾವುದಕ್ಕಿಲ್ಲದಿದ್ದರೂ ಆಗಾಗ್ಗೆ ನಡೆಯುವ ಸಂಘದ ಮೀಟಿಂಗುಗಳಿಗೆ ಆಗುತ್ತಿದ್ದ ಕಾಫಿ ತಿಂಡಿಯ ಖರ್ಚಿಗೆ ಬೇಕಾಗುವ ಹಣ ಕೊಡಲಿಕ್ಕಾದರೂ ಜನ ಬೇಕಿತ್ತಲ್ಲ.

ಹಾಗಾಗಿ ಅಷ್ಟೆ. ಪ್ರಾರಂಭದ ವರ್ಷಗಳಲ್ಲಿ ಸಂಘ ಬಹಳ ಚಟುವಟಿಕೆಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡೂ ಬಂದಿತ್ತು. ಆದರೆ ದಿನ ಕಳೆಯುತ್ತ ಬಂದಾಗ ಅಂದಿನ ಯುವಕರಿಗೂ ವಯಸ್ಸಾಗುತ್ತಿದ್ದಂತೆ ಅವರ ಉತ್ಸಾಹ ಕಡಿಮೆಯಾಗ ಹತ್ತಿತ್ತು. ಜೊತೆಗೆ ಸಂಖ್ಯೆ ಬೇಕೆಂದು ಸೇರಿಸಿಕೊಂಡ ವಯಸ್ಸಾದವರ ಕೈಯಿಂದ ಅವರವರ ಮನೆಯ ಯಜಮಾನಿಕೆಯೂ ಕೈತಪ್ಪಿ ಮಕ್ಕಳ ಕೈಗೆ ಹೋಗುತ್ತಿದ್ದಂತೆ ಅವರಿಂದ ಸಂಘಕ್ಕೆ ಬರುತ್ತಿದ್ದ ಆರ್ಥಿಕ ಸಹಾಯವೂ ನಿಂತು ಹೋಗಿ ಸಂಘದ ಚಟುವಟಿಕೆಗಳೂ ನಿಂತಿದ್ದವು.

ಅಳಿದುಳಿದ ಯುವಕರು ಕೆಲಸವೋ ಮತ್ತೊಂದೋ ಎಂದು ಊರು ಬಿಟ್ಟು ಹೋದದ್ದರಿಂದಲೂ ಸಂಘ ಅನಾಥವಾಗಿತ್ತು. ಊರಿನ ಶಾಲೆಯ ಮೂಲೆಯಲ್ಲಿ ಯಾರೋ ಹಣಕೊಟ್ಟು ಬರೆಸಿದ್ದ ಸಂಘದ ಬೋರ್ಡು ಮಾತ್ರ ಸಂಘದ ನೋಂದಣಿ ಸಂಖ್ಯೆಯನ್ನೂ ಹೊತ್ತುಕೊಂಡು ಹಾಗೆಯೇ ನೇತಾಡುತ್ತಿತ್ತು. ಶಾಲೆಯ ಜಗಲಿಯ ಮೇಲೆಯೇ ಸೇರುತ್ತಿದ್ದ ಸಭೆ ನಿಂತು ಕಾಲವಾಗಿತ್ತು.

ಇತ್ತೀಚೆಗೆ ವಯಸ್ಸಿಗೆ ಕಾಲಿಡುತ್ತಿದ್ದ ಹುಡುಗರ ಸಂಖ್ಯೆ ಪುನಃ ಜಾಸ್ತಿಯಾಗ ಹತ್ತಿದಾಗ, ಅದೂ ಅಂತಹವರಲ್ಲಿ ಕೆಲಸವಿಲ್ಲದಿದ್ದವರೇ ಹೆಚ್ಚಾದಾಗ ಅವರೆಲ್ಲ ಸೇರಿ ಸಂಘಕ್ಕೆ ಪುನರ್ಜೀವನ ಕೊಡುವ ಉತ್ಸಾಹ ತೋರಿಸಿದ್ದರು. ಅದೂ ಆದಿಯಂತಹವನೊಬ್ಬ ತಮ್ಮ ನಡುವೆಯೇ ಇದ್ದಾನೆಂದಾದಾಗ ಅವರ ಹುಚ್ಚು ಕೆದರಿತ್ತು. ಯಾವನೋ ಒಬ್ಬನ ಕಣ್ಣಿಗೆ ಬಿದ್ದ ಶಾಲೆಯ ಮೂಲೆಯಲ್ಲಿದ್ದ ಆ ಬೋರ್ಡೂ ಧೂಳು ಗೀಳು ಒರೆಸಿಕೊಂಡು ಹೊಳೆಯತೊಡಗಿತ್ತು.

ಬೇಸಾಯವನ್ನೇ ಅವಲಂಬಿಸಿದ್ದು ಆ ಚೂರು ಪಾರು ಗದ್ದೆಗಳಲ್ಲಿ ಕೆಲಸ ಮಾಡುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವ ತಮ್ಮದೇ ತೀರ್ಮಾನ ತೆಗೆದುಕೊಂಡು ಮಾಡಲು ಬೇರೆ ಕೆಲಸವಿಲ್ಲದೆ ಅಲೆಯುತ್ತಿದ್ದ ಯುವಕರಿಗೆ ಇದೊಂದು ಒಳ್ಳೆಯ ಕೆಲಸ. ಆದಿಯನ್ನು ಒಪ್ಪಿಸಿದ್ದೇ, ಸಂಘದಲ್ಲಿ ಆಗಬೇಕಾಗಿದ್ದ ಸಣ್ಣ ಪುಟ್ಟ ಖರ್ಚುಗಳಿಗೆ ಅವರು ಬೇರೆ ಜನರನ್ನು ಹುಡುಕುವ ಅಗತ್ಯವೂ ಇರಲಿಲ್ಲ. ಹಾಗಾಗಿ ತಾನಾಗಿಯೇ ಸಂಘದ ಮುಂದಾಳ್ತನ ಮತ್ತು ಖರ್ಚುಗಳ ಹೊಣೆಯನ್ನು ಖುಷಿಯಿಂದಲೇ ಒಪ್ಪಿಕೊಂಡ ಆದಿಯನ್ನು ಸದಸ್ಯರೆಲ್ಲ ಸೇರಿ ಸಂಘದ ಪೋಷಕ ಅಧ್ಯಕ್ಷನೆಂದು ಘೋಷಿಸಿಯೇ ಬಿಟ್ಟರು.

ಆದಿ ಜೊತೆಯಾದನೆಂದ ಮೇಲೆ ಕೇಳಬೇಕೇ. ಯುವಕರು ಬಹಳ ಉತ್ಸಾಹದಿಂದ ಕೆಲಸ ಪ್ರಾರಂಭಿಸಿದ್ದರು. ಸುರುವಿನಲ್ಲಿ ಒಂದೆರಡು ವರ್ಷ ನಡೆಸಿ ಕೈಬಿಟ್ಟ ಕಾರ್ಯಕ್ರಮಗಳನ್ನು ಪುನಃ ಕೈಗೆತ್ತಿಕೊಂಡಿದ್ದರು. ಶ್ರಮದಾನವೇ ಮೊದಲಾದ ಕಾರ್ಯಕ್ರಮಗಳಿಗೆ ಆದಿ ತಾನೇ ಇಳಿದಿದ್ದ. ಆದಿ ಜೊತೆಗಿದ್ದಾಗ ಹುಡಗರಿಗೆ ದೆವ್ವದ ಶಕ್ತಿ. ಹತ್ತು ಹಲವು ವರ್ಷಗಳ ಕಾಲ ಮಾಡದೇ ಉಳಿದ ಕೆಲಸವನ್ನು ಒಂದೇ ಸಮ ಮಾಡಿದ್ದರು. ಮೈಗಳ್ಳತನದಿಂದ ಕೆಲಸಕ್ಕೆ ಬರದೇ ಇದ್ದ ಮಂದಿಯನ್ನು ಹುಡುಕಿ ಎಳೆದು ತಂದು ಕೆಲಸಕ್ಕೆ ಹಚ್ಚಿದ್ದರು. ಹತ್ತಿರದ ಪೇಟೆಯಿಂದ ಇವರ ಊರಿನೊಳಗೆ ಬರಬೇಕಿದ್ದು ನೆನೆಗುದಿಗೆ ಬಿದ್ದು ಪೂರ್ತಿಯಾಗದಿದ್ದ ರಸ್ತೆ ಪೂರ್ತಿಯಾಯ್ತು.

ಶಾಲೆಯ ಆಟದ ಮೈದಾನ ಕಾಸಿನ ಖರ್ಚಿಲ್ಲದೆ ಸಾಪಾಟಾಗಿ ಕಂಗೊಳಿಸತೊಡಗಿತು. ಅದರ ಸುತ್ತ ಕ್ರೋಟನ್, ಗುಲಾಬಿ, ಸಂಪಿಗೆ ಗಿಡಗಳನ್ನು ಹಾಕಿ ಅದಕ್ಕೆ ಖಾಯಂ ನೀರು ಹಾಕಿಸುವ ವ್ಯವಸ್ಥೆಯನ್ನೂ ಶಾಲೆಯ ಮೇಷ್ಟರುಗಳೊಂದಿಗೆ ಮಾತನಾಡಿ ಮಾಡಿದರು. ಆಗಿದ್ದ ಖರ್ಚೆಲ್ಲ ಬೆಳಿಗ್ಗೆ ಕೆಲಸ ಪ್ರಾರಂಭಿಸುವ ಮುನ್ನ ಹೊಟ್ಟೆ ತುಂಬ ತಿಂಡಿ ಮತ್ತು ಕಾಫಿ. ಆದಿಯ ಮನೆಯ ಅಡಿಗೆಯವಳು ಮಾಡಿಟ್ಟಿರುತ್ತಿದ್ದ ಪಾತ್ರೆ ತುಂಬ ತುಂಬಿರುತ್ತಿದ್ದ ಉಪ್ಪಿಟ್ಟನ್ನೋ ಒಗ್ಗರಣೆ ಅವಲಕ್ಕಿಯನ್ನೋ ಈ ಸ್ವಯಂ ಸೇವಕರೇ ತಂದು ಹಂಚಿಕೊಳ್ಳುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಮಾತ್ರ ಎಷ್ಟೇ ದೂರವಿದ್ದರೂ ಎಲ್ಲರೂ ಆದಿಯ ಮನೆಗೇ ಹೋಗಬೇಕು. ಅಲ್ಲಿ ಅಡಿಗೆಯವಳ ಜೊತೆ ಸೇರಿಕೊಂಡು ಕಮಲಮ್ಮನೇ ಎಲ್ಲರಿಗೂ ಉಪಚರಿಸಿ ಬಡಿಸಬೇಕು.

ಆಗಾಗ್ಗೆ ಶಾಮಣ್ಣನವರೂ ಪಂಕ್ತಿಯತ್ತ ಮುಖ ಹಾಕಿ ತಮ್ಮ ಕಾಲದ ಹುಡುಗರು ಮಾಡುತ್ತಿದ್ದ ಸಾಹಸಗಳನ್ನು ಹೇಳಬೇಕು. ಸಂಜೆಯ ಕಾಫಿ ಪುನಃ ಆದಿಯ ಮನೆಯಿಂದಲೇ ಬರುತ್ತದೆ. ಗಟ್ಟಿ ಹಾಲಿನ ಕಾಫಿ. ಕುಡಿದು ತೇಗಿದರೆಂದರೆ ಮತ್ತೆ ಗಂಟೆ ಎರಡು ಗಂಟೆಯ ಕೆಲಸಕ್ಕೆ ತೊಂದರೆಯಿಲ್ಲ. ಅಂತೂ ಪುನರುಜ್ಜೀವನ ಪಡೆದ ಅನತಿ ಕಾಲದಲ್ಲಿಯೇ ಯುವಕರ ಸಂಘ ಊರಿಗೆ ಹೊಸ ರೂಪವನ್ನೇ ಕೊಟ್ಟಿತ್ತು. ಪ್ರತಿಯೊಬ್ಬರೂ ಆದಿಯನ್ನು ಹೊಗಳುವವರೇ. ಅವ ಮುಂದೆ ನಿಂತದ್ದರಿಂದಲೇ ಇದು ಸಾಧ್ಯವಾಯ್ತು ಎನ್ನುವವರೇ. ಸಂಘದ ಉತ್ಸಾಹೀ ಯುವಕರ ಗುಂಪು ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ.

ಅವರೆಲ್ಲ ಸೇರಿ ಮುಂದಾಳ್ತನವನ್ನು ವಹಿಸಿ ಊರಿಗೆ ಇಷ್ಟೊಂದು ಅನುಕೂಲತೆಯನ್ನು ಒದಗಿಸಿಕೊಟ್ಟ ಆದಿಗೆ ಸನ್ಮಾನ ಮಾಡಬೇಕೆಂದು ಹೊರಟಿದ್ದರು. ಆದಿಯನ್ನೇ ಆ ಬಗ್ಗೆ ಕೇಳಿದರೆ ಖಂಡ ತುಂಡವಾಗಿ ಬೇಡವೆಂದಿದ್ದ. ಹುಡುಗರೆಲ್ಲ ಮನೆಗೆ ಲಗ್ಗೆ ಹಾಕಿ ಆದಿಯ ಹತ್ತಿರ ತಮ್ಮ ಯೋಜನೆಯನ್ನು ಹೇಳಿಕೊಳ್ಳುತ್ತಿದ್ದಾಗ ಅಲ್ಲಿಯೇ ಇದ್ದ ಕಮಲಮ್ಮ ಕೇಳಿಸಿಕೊಳ್ಳುತ್ತಿದ್ದರು. ಮಗನ ಸಾಧನೆಗಾಗಿ ಊರವರು ಸೇರಿ ಸನ್ಮಾನ ಮಾಡಲು ಎಳೆಸಿದ್ದು ಆ ತಾಯಿಗೆ ಸಂತೋಷವೇ. ಆದರೆ ಮಗ ಅದನ್ನು ಒಲ್ಲೆನೆಂದದ್ದು ಆಕೆಗೆ ಇನ್ನೂ ಹೆಚ್ಚಿನ ಸಂತೋಷವನ್ನು ಕೊಟ್ಟಿತ್ತು.

ಘಟ್ಟದ ಮೇಲಿನ ಶಾಲೆಯಲ್ಲಿ ಕಲಿತು ಹಣದ ದೊಡ್ಡಸ್ತಿಕೆಯಲ್ಲೇ ಬೆಳೆದ ಆಕೆ ಇಂತಹುದನ್ನೆಲ್ಲ ನೋಡಿದವಳೇ. ವಯಸ್ಸಾಗುತ್ತ ಬಂದ ಹಾಗೆ ಅಲ್ಲಿನ ಜನ ತಾವೇ ದುಡ್ಡುಕೊಟ್ಟು ಹಾರ ಹಾಕಿಸಿಕೊಳ್ಳುತ್ತಿದ್ದುದನ್ನೂ ನೋಡಿದ್ದಳು. ಆ ಸಮಯಕ್ಕೆ ಆಕೆಗೆ ಏನೂ ಅನ್ನಿಸಿರದಿದ್ದರೂ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಮಾವ ಮತ್ತು ಗಂಡ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವುದನ್ನು ಕಂಡಾಗ ತನ್ನೂರಿನವರದೆಲ್ಲ ಅಸಹ್ಯವೆನಿಸಿತ್ತು. ತಮ್ಮವರೆಲ್ಲ ಅದೆಷ್ಟು ಹಾಸ್ಯಾಸ್ಪದವಾಗಿ ವರ್ತಿಸುತ್ತಿದ್ದರಲ್ಲ ಎನ್ನಿಸಿದ್ದೂ ಇತ್ತು. ಹೇಳಿಕೊಂಡರೆ ತನಗೇ ಅವಮಾನ ಎಂದು ತನಗನ್ನಿಸುತ್ತಿದ್ದುದನ್ನು ತನ್ನೊಳಗೇ ಇಟ್ಟುಕೊಳ್ಳುತ್ತಿದ್ದಳು ಆಗ. ಈಗ ಮಗ ಹೀಗೆಂದಾಗಲಂತೂ ಆಕೆಗೆ ಹೇಳಿಕೊಳ್ಳಲಾಗದ ಸಂತೋಷ.

ಆದರೆ ಹುಡುಗರು ಬಿಟ್ಟಿರಲಿಲ್ಲ. `ಆದಿಯಣ್ಣ… ಊರ ಹಿರಿಯರನ್ನೂ ಒಪ್ಪಿಸಿದ್ದೇವೆ. ನೀವು ಒಪ್ಪ್ಪಿಕೊಳ್ಳಲೇ ಬೇಕು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರನ್ನೂ ಕರೆಸುತ್ತೇವೆ. ನೀವು ಒಲ್ಲೆನೆಂದರೆ ಅವರೂ ಬರುವುದಿಲ್ಲ. ಅವರು ಬಂದರೆ ಊರಿಗೂ ಲಾಭವಲ್ಲವೇ..’ ಎಂದು ಅಂಗಲಾಚಿದ್ದರು. ಕೆಲವರಂತೂ ಅವನ ಕೈ ಹಿಡಿದು ಬೇಡಿದ್ದರು. ಇವನೊಂದಿಗೆ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಇಬ್ಬರಿಗಂತೂ ಕಣ್ಣಲ್ಲಿ ನೀರು ಬರಲಿಕ್ಕೇ ಪ್ರಾರಂಭವಾಗಿತ್ತು. ಏನು ಮಾಡುವುದಕ್ಕೂ ತೋಚದೆ ಪರದಾಡುತ್ತಿದ್ದಾಗ ಹುಡುಗರಿಗೆಲ್ಲ ಕಾಫಿ ತಿಂಡಿಯನ್ನು ಅಡಿಗೆಯವಳ ಕೈಯ್ಯಲ್ಲಿ ತೆಗೆಸಿಕೊಂಡು ಬರುತ್ತಿದ್ದ ಕಮಲಮ್ಮನೇ `ಆದಿ… ಹುಡುಗರು ಅಷ್ಟೆಲ್ಲ ಕೇಳಿಕೊಳ್ಳುತ್ತಿದ್ದಾರೆ.. ಒಪ್ಪಿಕೊಳ್ಳೋ..’ ಎಂದಿದ್ದರು. ಬೇರೆ ದಾರಿಯೇ ಇಲ್ಲದೆ `ಹೂಂ..’ ಎಂದಿದ್ದ. ಹುಡುಗರೆಲ್ಲ ಯಾವುದೋ ಯುದ್ಧ ಗೆದ್ದವರಂತೆ ಸಡಗರದಿಂದ ಕುಣಿಯುತ್ತ ಹೋಗಿದ್ದರು.

ಅಂದಿನಿಂದ ವಾರಕ್ಕೆ ಸನ್ಮಾನ. ಜಿಲ್ಲೆಯ ಉಸ್ತುವಾರಿ ಸಚಿವರ ಕೈಯ್ಯಲ್ಲಿ ಸನ್ಮಾನ ಎನ್ನುವುದು ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ತಂದಿತ್ತು. ಜೊತೆಗೆ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮ. ಅಂತ್ಯನೂ ಪಾತ್ರಧಾರಿ. ಅಭಿಮನ್ಯು ಪ್ರತಾಪದಲ್ಲಿ ಅವನೇ ಅಭಿಮನ್ಯು. ಎಲ್ಲ ಸೇರಿ ಊರಲ್ಲೆಲ್ಲ ಹಬ್ಬದ ವಾತಾವರಣ. ಯುವಕ ಸಂಘದ ಸದಸ್ಯರುಗಳಿಗಂತೂ ಪುರುಸೊತ್ತಿಲ್ಲದ ಕೆಲಸ.

ಜನರಿಗೆ ಆಹ್ವಾನ ಪತ್ರಿಕೆ ಕಳುಹಿಸುವುದರಿಂದ ಹಿಡಿದು ಸ್ಟೇಜನ್ನು ತಯಾರು ಮಾಡುವುದರ ವರೆಗೆ. ತಾವೇ ರೆಡಿ ಮಾಡಿದ್ದ ಊರ ಶಾಲೆಯ ಮೈದಾನದಲ್ಲೇ ಕಾರ್ಯಕ್ರಮ. ಎಲ್ಲ ಕೆಲಸಗಳಲ್ಲೂ ಆದಿಯೂ ಸೇರಿಕೊಂಡಿದ್ದ. `ಇದೇನಿದು ಅಣ್ಣ.. ನಿಮ್ಮ ಸನ್ಮಾನ.. ನೀವೇ ಕೆಲಸ ಮಾಡುವುದೇ..’ ತೀರ ಭಾವನೆಗೊಳಗಾದಾಗ ಸಂಘದ ಸದಸ್ಯರಿಗೆ ಅವ ಅಣ್ಣನೇ. ಆದಿ ಎನ್ನುವ ಪದ ಬಿಟ್ಟು ಹೋಗಿರುತ್ತದೆ. `ಅಯ್ಯೋ… ಅದಕ್ಕೇನಂತೆ.. ನಮ್ಮದೇ ಸಂಘ. ನಮ್ಮವರೇ ಅಲ್ಲವೇ ನೀವೆಲ್ಲ..’ ಎಂದು ಕೈಯ್ಯಲ್ಲಿ ಹಿಡಿದಿದ್ದ ಕೆಲಸವನ್ನು ಬಿಡದೇ ಅವನೆಂದಾಗ ಹುಡುಗರಿಗೆ ಇನ್ನಷ್ಟು ಉತ್ಸಾಹ.

|ಇನ್ನು ನಾಳೆಗೆ |

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: