ಪಿ ಪಿ ಉಪಾಧ್ಯ ಸರಣಿ ಕಥೆ 18- ಕಂಬಳದ ಯಶಸ್ಸು ಹಸಿರಾಗಿಯೇ…

ಪಿ ಪಿ ಉಪಾಧ್ಯ

18

ಕಂಬಳದ ಯಶಸ್ಸು ಹಸಿರಾಗಿಯೇ…

ಹಾಗೆಯೇ ಒಂದು ಸಂಜೆ ಪೇಟೆಯಲ್ಲಿ ಪೈಗಳ ಅಂಗಡಿಯಲ್ಲಿ ಮಾತಾಡುತ್ತ ಕುಳಿತಾಗ ಪೈಗಳೇ ಕೇಳಿದರು. ಅಲ್ಲ ಆದಿ ನಿಮ್ಮದೊಂದಿಷ್ಟು ಅರಾಲು ಗದ್ದೆಗಳಿದ್ದಾವಲ್ಲ. ಅಲ್ಲಿ ಮಳೆಗಾಲದಲ್ಲಿ ಭತ್ತ ಬೆಳೀತೀರಿ. ಭತ್ತದ ಕುಯ್ಲಾದ ಮೇಲೆ ಗದ್ದೆಗಳನ್ನು ಹಾಗೇ ಹಡು ಬಿಡುವುದು. ಅದು ಹೋಗಲಿ. ಹಾಗೆ ಬೆಳೆಯುವ ಭತ್ತದಿಂದ ನೀವು ಅದಕ್ಕಾಗಿ ಮಾಡಿದ ಖರ್ಚಾದರೂ ಹುಟ್ಟುತ್ತದೆಯೇ' ಅದೇ ವಿಚಾರ ಬಹಳ ದಿನದಿಂದ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆದಿ ಹೌದು ಪೈಗಳೇ… ಮಾಡಿದ ಖರ್ಚಿನ ಅರ್ಧದಷ್ಟೂ ಬರುವುದಿಲ್ಲ ಆ ಭತ್ತದ ಬೆಳೆಯಿಂದ… ಹಾಗೆಂದು ಗದ್ದೆಗಳನ್ನು ಹಾಗೆಯೇ ಬಿಡುವ ಹಾಗಿಲ್ಲವಲ್ಲ…’

ಅಲ್ಲ ಅಷ್ಟೊಂದು ಗದ್ದೆಗಳಿವೆ. ಆ ಬತ್ತ ಬೆಳೆದು ಕೈ ಸುಟ್ಟುಕೊಳ್ಳುವುದಕ್ಕಿಂತ ನೀವೂ ಯಾಕೆ ಬೂದುಕುಂಬಳ ಬೆಳೆಯಬಾರದು? ಈಗ ಹೆಚ್ಚಿನವರು ಅದನ್ನೇ ಮಾಡುತ್ತಿದ್ದಾರೆ. ಅದಕ್ಕೆ ಒಳ್ಳೆಯ ಬೆಲೆಯೂ ಇದೆ. ಮಾರಾಟದ ಚಿಂತೆ ನಿಮಗೆ ಬೇಡ. ಅದಕ್ಕೆ ಎಲ್ಲ ವ್ಯವಸ್ಥೆ ನಾನೇ ಮಾಡುತ್ತೇನೆ' ಎಂದರು. ಆ ಅರಾಲು ಗದ್ದೆಗಳಲ್ಲಿ ಮಳೆಗಾಲದ ಒಂದು ಬೆಳೆ ಬಂದರೆ ಅದೇ ದೊಡ್ಡದು. ಮಳೆ ಬಂದು ಗದ್ದೆಗಳಲ್ಲಿ ನೀರಾಯಿತೆಂದರೆ ಕಾರು ತಿಂಗಳಲ್ಲಿ ನೆಟ್ಟಿ ಮಾಡಿ ಬಿಡುವುದು. ಮತ್ತೆ ಅತ್ತ ಮುಖ ಹಾಕುವುದು ದಿವಾಳಿ ತಿಂಗಳ ಕೊಯ್ಲಿಗೇ. ಆಳುಗಳೂ ಅತ್ತ ಮುಖ ಹಾಕುವುದಿಲ್ಲ. ಕಳೆ ಕೀಳುವುದೋ ಅಪರೂಪಕ್ಕೊಮ್ಮೆ ಅಂಗಡಿ ಗೊಬ್ಬರ ಹಾಕುವುದೋ ಇದ್ದರೆ ಅದು ಬಯಲು ಗದ್ದೆಗಳಿಗೆ ಮಾತ್ರ.

ಹಾಗಿರುವ ಅರಾಲು ಗದ್ದೆಗಳಲ್ಲಿ ಅವರಿಗೆ ಕೊನೆಗೆ ಸಿಗುವುದು ದನಕರುಗಳಿಗೆ ಒಳ್ಳೆಯ ಗ್ರಾಸವಾಗುವ ಒಣ ಹುಲ್ಲು ಮಾತ್ರ. ಕಾಲಕಾಲದಿಂದ ತಮ್ಮದಾಗಿದ್ದ ಆ ಗದ್ದೆಗಳಲ್ಲಿ ಬೇಸಾಯ ಮಾಡುವುದೊಂದು ಶಾಸ್ತ್ರ ಅಷ್ಟೆ. ಹಾಗೇ ಬಿಟ್ಟರೆ ಸುರುವಿಗೆ ಬೇಡಿ ಕಾಡಿ ಯಾರಾದರೂ ಮಳೆಗಾಲದ ತರಕಾರಿ ನೆಟ್ಟುಕೊಳ್ಳಲು ಬರುತ್ತಾರೆ. ಮೊದಲ ವರ್ಷ ಕೇಳಿ ನೆಡುತ್ತಾರೆ. ಎರಡನೆ ವರ್ಷ ಕಳೆದ ವರ್ಷ ಕೇಳಿದ್ದೇ ಸಾಕು ಎಂದು ನೆಡುತ್ತಾರೆ.

ಮುಂದಿನ ವರ್ಷಗಳಲ್ಲಿ ಹಾಗೆ ತರಕಾರಿ ನೆಡುವುದು ಅಭ್ಯಾಸವೇ ಆಗಿ ಕೇಳಬೇಕೆನ್ನುವುದು ಮರೆತು ಹೋಗಿ ಗದ್ದೆಯೇ ಅವರದ್ದಾಗಿ ಬಿಡುತ್ತದೆ. ಹಾಗಾಗಿ ಲಾಭವೋ ನಷ್ಟವೋ ಯಜಮಾನರುಗಳು ಆ ಗದ್ದೆಗಳನ್ನು ಹಾಗೆಯೇ ಬಿಡುವುದಿಲ್ಲ. ಬೇಸಾಯ ಮಾಡಿಯೇ ಮಾಡುತ್ತಾರೆ. ನೆಡುವ ಮತ್ತು ಕೊಯ್ಯುವ ಕೆಲಸವನ್ನು ವರ್ಷ ವರ್ಷ ಚಾ ಚೂ ತಪ್ಪದೆ ನಡೆಸುತ್ತಾರೆ. ಆ ಕೆಲಸಗಳಿಗಾಗಿ ಕೊಡುವ ಕೂಲಿಯೂ ಅದರಲ್ಲಿ ಹುಟ್ಟುವುದಿಲ್ಲ ಎಂದು ಗೊತ್ತಿದ್ದೂ. ಸಾರಾ ಸಗಟಿನಲ್ಲಿ ನಡೆದು ಹೋಗುತ್ತದೆ ಅಷ್ಟೆ. ಅದೇ ಈಗ ಪೈಗಳ ಮಾತಿನಿಂದ ಆದಿಯ ತಲೆಯಲ್ಲಿ ಹೊಸ ಐಡಿಯಾ ಬಂತು. ಆ ಅರಾಲು ಗದ್ದೆಗಳಲ್ಲಿ ಹಾಗೆ ಲಾಭವಿಲ್ಲದ ಭತ್ತ ಬೆಳೆಯುವುದಕ್ಕಿಂತ ಪೈಗಳು ಹೇಳಿದ ಹಾಗೆ ಬೂದು ಕುಂಬಳ ಬೆಳೆದರೆ ಹೇಗೆ ಎಂದು.

ಲಾರಿಗಳ ಮೇಲೆ ಲಾರಿಗಳು ಲೋಡು ತುಂಬಿಸಿಕೊ೦ಡು ಬೊಂಬಾಯಿ ಪೇಟೆಗೆ ಹೋಗುವ ಆ ಕುಂಬಳಕ್ಕೆ ಅಲ್ಲಿ ಚಿನ್ನದ ಬೆಲೆ ಎಂದು ಬೇರೆಯವರು ಮಾತಾಡಿಕೊಳ್ಳುತ್ತಿದ್ದುದನ್ನೂ ಆದಿ ಕೇಳಿದ್ದಾನೆ. ಊರಲ್ಲಿ ಆಗಲೇ ಒಂದೆರಡು ಮುಡಿ ಸಾಗುವಳಿ ಮಾಡುತ್ತಿದ್ದ ಮಂದಿ ಮಳೆಗಾಲದ ಭತ್ತದ ಬೆಳೆಯ ನಂತರ ಧಾನ್ಯ ಅಥವಾ ಎರಡನೇ ಭತ್ತದ ಬೆಳೆಯ ಬದಲಿಗೆ ಕುಂಬಳ ಬೆಳೆಯಲು ಪ್ರಾರಂಭಿಸಿದ್ದನ್ನೂ ನೋಡಿದ್ದಾನೆ. ವ್ಯಾಪಾರಿಗಳು ಕೇಜಿಯೊಂದಕ್ಕೆ ನಾಲ್ಕೈದು ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಗದ್ದೆಯ ಬದಿಗೇ ಬರುತಿದ್ದುದೂ ಹೌದು. ಕನಿಷ್ಟ ಹತ್ತಿಪ್ಪತ್ತು ಕೇಜಿಯಷ್ಟು ದೊಡ್ಡದಾಗುತ್ತಿದ್ದ ಕಾಯಿಗಳಿಗೆ ಒಂದಕ್ಕೇ ನೂರು ರೂಪಾಯಿ. ಎಂತಹವರಿಗೂ ಬಾಯಿಯಲ್ಲಿ ನೀರೂರಬೇಕು. ಆದಿಗೆ ಅದೆಲ್ಲದಕ್ಕಿಂತ ಹೆಚ್ಚು ಪೈಗಳ ಆಶ್ವಾಸನೆ. ಆದಿ ಮನಸ್ಸು ಮಾಡಿದ ಮೇಲೆ ತಡಬಡವಿಲ್ಲ. ಅಪ್ಪನೊಡನೆ ಅತೀ ಉತ್ಸಾಹದಿಂದ ಮಾತನಾಡಿದ. ಕಂಬಳದ ಯಶಸ್ಸು ಇನ್ನೂ ಹಸಿರಾಗಿಯೇ ಇತ್ತಲ್ಲ. ಕೂಡಲೇ ಒಪ್ಪಿದರು.

ಅಮ್ಮನದ್ದಂತೂ ಮಗನ ಯಾವ ಸಾಹಸದ ಬಗ್ಗೆಯೂ ತಕರಾರಿಲ್ಲ. ಅಂತೂ ಆ ವರ್ಷ ಮಳೆಗಾಲದಲ್ಲಿ ಹತ್ತಿಪ್ಪತ್ತು ಮುಡಿಗಳಷ್ಟಿದ್ದ ಶಾಮಣ್ಣನವರ ಅರಾಲು ಗದ್ದೆಗಳಲ್ಲಿ ಒಂದರಲ್ಲೂ ನೆಟ್ಟಿಯಿಲ್ಲ. ನೋಡಿದ ಜನ ತಮ್ಮೊಳಗೇ ಹೇಳಿಕೊಳ್ಳತೊಡಗಿದರುಏನೋ ಕಂಬಳದ ಗೆಲುವು ಶಾಮಣ್ಣನವರಿಗೆ ತಲೆಗೇರಿರಬೇಕು. ಇಲ್ಲವೆಂದರೆ ನೂರು ನೂರೈವತ್ತು ಮುಡಿ ಭತ್ತ ಬೆಳೆಯಬಹುದಾದ ಗದ್ದೆಗಳನ್ನು ಹೀಗೆ ಹಡು ಬಿಡುತ್ತಿದ್ದರೇ’ ಎಂದು.

ಒ೦ದು ಒಂದೂವರೆ ತಿಂಗಳೊಳಗೆ ಮಳೆ ಹಿಂದಾಗಿ ಗದ್ದೆಗಳೆಲ್ಲ ತುಸು ಒಣಗುತ್ತ ಬಂದಾಗಲೇ ಅವರಿಗೆಲ್ಲ ಗೊತ್ತಾಗಿದ್ದು ಅದೆಲ್ಲ ಆದಿಯ ಪ್ಲಾನು ಎಂದು. ಒಂದು ದಿನ ಬೆಳಗಾ ಬೆಳಗ್ಗೆ ಆದಿಯ ನೇತೃತ್ವದಲ್ಲಿ ಹತ್ತಾರು ಆಳುಗಳು ಹಾರೆ ಗುದ್ದಲಿ ಹಿಡಿದು ಆ ಗದ್ದೆಗಳನ್ನು ಅಗೆಯಲು ಸುರು ಮಾಡಿದರು. ಮತ್ತೆ ಒಂದೆರಡು ದಿನಕ್ಕೇ ಬೀಜವನ್ನೂ ಬಿತ್ತಿದರು. ಮಳೆಗಾಲ ಪೂರ್ತಿಯಾಗಿ ಮುಗಿದ ಮೇಲೆ ಆ ಬೆಳೆಗೆ ತೀರಾ ಅಗತ್ಯವಾಗಿದ್ದ ನೀರಿಗೆ ಅನುಕೂಲವಾಗುವಂತೆ ಆ ಗದ್ದೆಗಳ ನಡುವಿನ ಜಾಗದಲ್ಲಿ ಒಂದು ದೊಡ್ಡ ಬಾವಿಯನ್ನೂ ತೋಡಿಸಿದ.

ಆದಿ ಕೆಲಸಕ್ಕೆ ಹೊರಟನೆಂದರೆ ಮತ್ತೆ ಹಿಂದೆ ಮುಂದೆ ನೋಡುವವನಲ್ಲ. ಆಳುಗಳ ಜೊತೆಯಲ್ಲಿ ಆಳಿನಂತೆಯೇ ದುಡಿಯುತ್ತಾನೆ. ಅಮ್ಮನೇ ಬಂದು ಹೇಳಬೇಕು. ತಮ್ಮ ಮಗ ಹಾಗೆ ಮೈ ಕೈ ಮಣ್ಣು ಮಾಡಿಕೊಂಡು ದುಡಿಯುವುದನ್ನು ಕಂಡವರು ಏನೆಂದಾರು ಎನ್ನುವ ಚಿಂತೆ ಅವರಿಗೆ. ಜೊತೆಗೆ ನಾಳೆಗೆ ಹೆಣ್ಣು ಕೊಡುವವರು ಮುಂದೆ ಬರಬೇಕಲ್ಲ. ಹಾಗಾಗಿ ಈಗ ಕುಂಬಳ ನೆಡುವಾಗಲೂ ಅಷ್ಟೆ ಮಾಣಿ.. ಅವರ ಜೊತೆ ನೀನು ಯಾಕೆ ಕೈ ಮೈಯ್ಯೆಲ್ಲ ಮಣ್ಣು ಮಾಡಿಕೊಳ್ಳುತ್ತೀಯ.. ಸುಮ್ಮನೇ ಮೇಲುಸ್ತುವಾರಿ ನೋಡಿಕೊಂಡರೆ ಸಾಲದೇ' ಎಂದು. ವಯಸ್ಸಾಗುತ್ತ ತಿಳುವಳಿಕೆ ಬರುತ್ತಿದ್ದಂತೆ ಅಮ್ಮನ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ ದೊಡ್ಡಸ್ತಿಕೆಯ ಬಗ್ಗೆ ಅರಿವಾಗಿತ್ತು ಆದಿಗೆ.

ಈಗ ಆ ದೊಡ್ಡಸ್ತಿಕೆಯ ಜೊತೆಗೆ ಮಗನ ಬಗ್ಗೆ ಕಾಳಜಿಯನ್ನೂ ಬೆರೆಸಿ ಅಮ್ಮ ಹೇಳುವಾಗ ಅದು ತಪ್ಪೆನಿಸುತ್ತಲೂ ಇರಲಿಲ್ಲ. ಇನ್ನು ಮುಂದೆ ಅಮ್ಮ ಹೇಳಿದ ಹಾಗೆಯೇ ಮಾಡಬೇಕು ಎಂದು ಮನಸ್ಸಿಗೆ ಬರುತ್ತಿದ್ದುದೂ ಹೌದು. ಆದರೆ ಕೆಲಸದವರೊಂದಿಗೆ ಬೆರೆತಾಗ, ಅವರಿಗೆಅದು ಮಾಡಿ ಇದು ಮಾಡಿ’ ಎಂದು ನಿರ್ದೇಶಿಸುತ್ತ ಆಚೀಚೆ ತಿರುಗುವಾಗ ಅದೆಲ್ಲ ನೆನಪಿಗೆ ಬರುತ್ತಿರಲಿಲ್ಲ. ಆ ನೆಲದೊಂದಿಗೆ ತನ್ನದು ಜನ್ಮ ಜನ್ಮಗಳ ಸಂಬ೦ಧವೋ ಎನ್ನಿಸುತ್ತಿತ್ತು. ಹಾಗಾಗಿ ತಾನೂ ಕೆಲಸದವರೊಂದಿಗೆ ಕೆಲಸದವನಾಗಿ ಮಣ್ಣೊಂದಿಗೆ ಮಣ್ಣಾಗಿ ಬೆರೆಯುತ್ತಿದ್ದ, ದುಡಿಯುತ್ತಿದ್ದ.

ಈ ಕುಂಬಳ ಕೃಷಿಯೂ ಹಾಗೆಯೇ. ನೆಲದಲ್ಲಿ ಬೀಜ ಹೂಳಿದವರು ಕೆಲಸದವರು. ದಿನಾ ಅದಕ್ಕೆ ಬೆಳಿಗ್ಗೆ ಸಾಯಂಕಾಲ ನೀರು ಹನಿಸುತ್ತಿದ್ದವರೂ ಅವರೇ. ಆದರೆ ಬೆಳಿಗ್ಗೆಯೆದ್ದು ಅಡಿಗೆಯವಳು ಮಾಡಿಟ್ಟ ಕಾಫಿಯನ್ನು ಕುಡಿದವನೇ ಅಲ್ಲಿಗೆ ಹಾಜರಾಗುತ್ತಿದ್ದ ಆದಿ. ಬೀಜ ಮೊಳಕೆಯೊಡೆಯಿತೇ… ಹನಿಸುತ್ತಿದ್ದ ನೀರಿನ ಪಸೆ ಬೆಳಗಾಗುವುದರೊಳಗೆ ಆರಿ ಹೋಯಿತೇ.. ಇಲ್ಲ ಹಗಲಿಡೀ ಅತ್ತಿತ್ತ ಸುಳಿದಾಡುತ್ತ ಹುಳ ಹುಪ್ಪಟೆಗಳಿಗಾಗಿ ಕಾಲಿನಲ್ಲಿ ಭೂಮಿಯನ್ನು ಕೆದಕುತ್ತಿದ್ದ ಆ ಗದ್ದೆಗಳ ಪಕ್ಕದ ಮನೆಗಳವರ ಕೋಳಿ ಕುಂಬಳ ಬೀಜ ನೆಟ್ಟಲ್ಲಿಗೂ ಬಂದು ಕೆದಕಿ ತಿಂದು ಬಿಟ್ಟಿದ್ದವೇ ಎಂದು ನೋಡಲು. ಬೀಜ ನೆಡುವ ಮುನ್ನವೇ ಸುತ್ತ ಮುತ್ತಲಿನವರಿಗೆಲ್ಲ ಆಳುಗಳ ಮೂಲಕ ಹೇಳಿ ಕಳುಹಿಸಿದ್ದ.

ಈ ಸಲ ಕುಂಬಳ ಬೀಜ ನೆಡುತ್ತಿದ್ದೇವೆ. ಎಲ್ಲರೂ ಕೋಳಿಗಳು ಗದ್ದೆಗೆ ಬರದ ಹಾಗೆ ನೋಡಿಕೊಳ್ಳಿ' ಎಂದು. ಆ ಜನರಿಗೆ ಒಡೇರ ಮೇಲೆ ಅಭಿಮಾನವಿದೆ. ಒಡೇರ ಮಾತಿನ ಹೆದರಿಕೆಯಿದೆ. ಅದನ್ನು ಮೀರಿಯೂ ಕೋಳಿಗಳನ್ನು ಬಿಡಲಾರರು. ಆದರೆ ಸಾಕಿದವರ ಕಣ್ಣು ತಪ್ಪಿಸಿ ಅವು ಎಲ್ಲಿಯಾದರೂ ಬಂದರೆ... ಅದನ್ನೇ ಬೆಳಿಗ್ಗೆ ಸಂಜೆ ಹೋದಾಗ ನೋಡುವುದು. ಐದು ಹತ್ತು ಸೆಂಟ್ಸ್ಗಳಷ್ಟಿದ್ದ ತಮ್ಮ ಗದ್ದೆಗಳಲ್ಲಿ ಕುಂಬಳ ಬೆಳೆದು ಮೇಲು ಖರ್ಚಿಗೆ ಸಾವಿರ ಎರಡು ಸಾವಿರ ಮಾಡಿಕೊಳ್ಳುತ್ತಿದ್ದ ಮಂದಿಗೆಲ್ಲ ಆಶ್ಚರ್ಯವೋ ಆಶ್ಚರ್ಯ.

ಈ ಎಕ್ರೆಗಟ್ಟಲೆ ಗದ್ದೆಗಳಲ್ಲಿ ಬೆಳೆಯುವ ಕುಂಬಳ ಕಾಯಿಗಳನ್ನು ಬೊಂಬಾಯಿಗೆ ಸಾಗಿಸಲು ಹತ್ತಿಪ್ಪತ್ತು ಲಾರಿಗಳೇ ಬೇಕಾದಾವು. ನಮ್ಮದಾದರೆ ಒಂದು ಲಾರಿ ತುಂಬಬೇಕಾದರೆ ಹತ್ತಿಪ್ಪತ್ತು ಮನೆಗಳವರದ್ದನ್ನು ಒಟ್ಟು ಮಾಡಬೇಕು ಎಂದು. ಹಾಗೆ ಎಣಿಸುವಾಗ ಅವರಲ್ಲಿ ಕೆಲವರಾದರೂಅವರು ನೇರವಾಗಿಯೇ ಬೊಂಬಾಯಿಗೆ ಸಾಗಿಸುವುದಾದರೆ ನಮ್ಮದನ್ನೂ ಅದರೊಂದಿಗೆ ಸೇರಿಸಿದರೆ ಒಂದು ನಾಲ್ಕು ಕಾಸು ಹೆಚ್ಚು ಬಂದೀತೇನೋ’ ಎಂದೂ ಆಶಿಸಿದ್ದರು.

। ಇನ್ನು ನಾಳೆಗೆ ।

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: