ಪಿ ಪಿ ಉಪಾಧ್ಯ ಸರಣಿ ಕಥೆ 13 – ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ…

ಪಿ ಪಿ ಉಪಾಧ್ಯ

13

ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ.

ಅಂತಹ ತಂದೆಯ ಹೆದರಿಕೆಯಲ್ಲಿಯೇ ಬದುಕುತ್ತಿದ್ದರೂ ಮಗನಾದ ಶಾಮಣ್ಣನಿಗೆ ಅಪ್ಪನಂತೆ ತಾನೂ ಊರಲ್ಲಿ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಸಿಕೊಳ್ಳಬೇಕೆಂಬ ಬಯಕೆ ಆಗಲೇ ಹುಟ್ಟಿತ್ತು. ಅದು ತಾನಾಗಿಯೇ ಬರಲಿಕ್ಕಿಲ್ಲ ಎನ್ನುವುದರ ಅರಿವೂ ಇತ್ತು. ಆದರೆ ಅದಕ್ಕಾಗಿ ಏನು ಮಾಡಬೇಕು ಎನ್ನುವುದರ ಬಗ್ಗೆ ಅಂತಹ ಸ್ಪಷ್ಟವಾದ ಅರಿವು ಇಲ್ಲದ್ದು ಇನ್ನೊಂದು ಸಮಸ್ಯೆ.

ಹಾಗೆ ಇರುತ್ತಿರುವಾಗಲೇ ಅವರ ಮನಸ್ಸಿಗೆ ಬಂದದ್ದು ಕಂಬಳದ ಕೋಣಗಳನ್ನು ಸಾಕುವ ಆಲೋಚನೆ. ಒಮ್ಮೆ ತಲೆಯಲ್ಲಿ ಅದು ಹೇಗೋ ಹೊಕ್ಕ ಆ ಐಡಿಯಾ ಹಾಗೆಯೇ ಉಳಿದು ತೀವ್ರವಾಗಿ ಕಾಡಲಿಕ್ಕೆ ತೊಡಗಿದ್ದೂ ಹೌದು. ಹಾಗೊಂದು ವೇಳೆ ತನ್ನ ಬಯಕೆ ಈಡೇರುವಂತಾದರೆ ತಾನು ಅಪ್ಪನಷ್ಟಲ್ಲದಿದ್ದರೂ ಸ್ವಲ್ಪವಾದರೂ ದೊಡ್ಡ ಮನುಷ್ಯನಾಗಿ ಕಾಣಿಸಿಕೊಳ್ಳಬಹುದು ಎನ್ನುವುದು ಅವರದೇ ಅನಿಸಿಕೆ. ಸುತ್ತ ಮುತ್ತ ಊರುಗಳಲ್ಲಿ ದೊಡ್ಡ ಮನುಷ್ಯರೆನಿಸಿಕೊಂಡವರೆಲ್ಲ ಒಂದೊ೦ದು ಜೊತೆ ಕಂಬಳದ ಕೋಣಗಳನ್ನು ಸಾಕಿಕೊಂಡಿದ್ದವರೇ. ಅಲ್ಲ ಕಂಬಳದ ಕೋಣಗಳಿದ್ದವೆಂದರೆ ಅವರು ದೊಡ್ಡ ಮನುಷ್ಯರೇ ಆಗಿರುತ್ತಿದ್ದರು. ಆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿ ಬಿಡಲಿ ಅಥವಾ ಭಾಗವಹಿಸಿ ಗೆಲ್ಲಲಿ ಅಥವಾ ಸೋಲಲಿ ತಾವೂ ಕಂಬಳದ ಕೋಣಗಳನ್ನು ಹೊಂದಿದ್ದೇವೆ ಎನ್ನುವುದೇ ಒಂದು ದೊಡ್ಡಸ್ತಿಕೆಯ ಕುರುಹು.

ಕಂಬಳದ ದಿನ ಅವುಗಳನ್ನು ಶೃಂಗರಿಸುವುದೇನು. ವಾದ್ಯ ಸಮೇತ ಹುಲಿವೇಷ, ತಟ್ಟೀರಾಯ ಮೊದಲಾದ ವೇಷಗಳೊಂದಿಗೆ ಮೆರವಣಿಗೆಯಲ್ಲಿ ಅವುಗಳನ್ನು ಕಂಬಳ ನಡೆಯುವ ಊರಿಗೆ ಕರೆದುಕೊಂಡು ಹೋಗುವುದೇನು. ಆಹಾ.. ಪ್ರತಿಯೊಂದರಲ್ಲೂ ಮಜಾ. ಆ ಮೆರವಣಿಗೆಯ ಮುಂದಿನಲ್ಲಿ ತಲೆಗೊಂದು ಜರಿ ರುಮಾಲು ಸುತ್ತಿದ ಯಜಮಾನರನ್ನು ಮಳೆ ಅಥವಾ ಬಿಸಿಲಿನ ಕುರುಹೇ ಇಲ್ಲದಿದ್ದರೂ ಆಳೊಬ್ಬ ದೊಡ್ಡ ಕೊಡೆ ಹಿಡಿದು ಕರೆದುಕೊಂಡು ಹೋಗುವುದೆಂದರೇನು. ಹುಡುಗನಾಗಿದ್ದ ಶಾಮಣ್ಣನಿಗೆ ಪ್ರತಿಯೊಂದೂ ಆಪ್ಯಾಯಮಾನವಾಗಿ ಕಾಣುತ್ತಿದ್ದ ಆ ಕಾಲದಲ್ಲಿ ಅಧಿಕಾರ ತನ್ನ ಕೈಗೆ ಬಂದೊಡನೆಯೇ ತಾನೂ ಒಂದು ಕೈ ನೋಡಿಯೇ ಬಿಡಬೇಕು ಎಂದುಕೊ೦ಡದ್ದೂ ಹೌದು.

ಆದರೆ ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ. ಅವರ ಆಸೆಯನ್ನು ಅಪ್ಪನ ಕಾಲದಲ್ಲಿ ಪೂರೈಸಿಕೊಳ್ಳುವುದು ಹೋಗಲಿ ಅವರ ಕಾಲಾನಂತರ ಒಬ್ಬನೇ ಮಗನಾಗಿದ್ದ ತನಗೆ ತನ್ನಿಂದ ತಾನೇ ಸಿಗುವ ಮನೆಯ ಯಜಮಾನಿಕೆ ಕೈಗೆ ಬಂದಾಗ ತಾನೇ ಪೂರೈಸಿಕೊಳ್ಳುತ್ತೇನೆ ಎನ್ನುವ ಅವರ ಯೋಜನೆಯೂ ಮರೀಚಿಕೆಯಾಗಿತ್ತು ಈ ಹೆಂಡತಿಯಿ೦ದಾಗಿ. ಹೆಸರಿಗೆ ಮಾತ್ರ ತಾನು ಯಜಮಾನ. ಕಾರುಭಾರವೆಲ್ಲ ಅವಳದ್ದೇ. ಇಲ್ಲದಿದ್ದರೆ ಬೆಣ್ಣೆ ದೋಸೆ ತಿನ್ನುವಂತಹ ತನ್ನ ಪುಟ್ಟ ಆಸೆಯನ್ನೂ ಆ ಹೆಂಡತಿಗೆ ಗೊತ್ತಾಗದ ಹಾಗೆ ಕಾರಂತರ ಹೋಟೆಲಿನಲ್ಲಿ ಪೂರೈಸಿಕೊಳ್ಳುವಂತಹ ಸಂದರ್ಭ ಪ್ರಾಪ್ತಿಯಾಗುತ್ತಿತ್ತೇ. ಹಣ ಕಾಸಿನ ವ್ಯವಹಾರವೂ ಅಷ್ಟೆ. ಕಮಲಮ್ಮನ ಭದ್ರ ಮುಷ್ಟಿಯೊಳಗೆ ಸೇರಿ ಹೋಗಿತ್ತು.

ಪೇಟೆಗೆ ಹೊರಡುವಾಗ ಕಮಲಮ್ಮನ ಹತ್ತಿರ ಹೇಳಿಯೇ ದುಡ್ಡು ತೆಗೆದುಕೊಳ್ಳಬೇಕು. ತಿರುಗಿ ಬಂದ ಮೇಲೆ ಖರ್ಚಿನ ಲೆಕ್ಕ ಕೊಡಬೇಕು. ಆಗೆಲ್ಲ ಖರ್ಚು ಮಾಡುವುದನ್ನು ಮಾಡಿ ವಾಪಾಸು ಬರುವಾಗ ದಾರಿಯುದ್ದಕ್ಕೂ ತಿಣಕಿದ್ದಿದೆ ಹೇಗೆ ಹೆಂಡತಿಗೆ ಒಪ್ಪಿಗೆಯಾಗುವಂತಹ ಲೆಕ್ಕ ಹೇಳುವುದು ಎಂದು. ಕಾರಂತರ ಹೋಟೆಲಿನಲ್ಲಿ ತಿಂದದ್ದಕ್ಕೆಲ್ಲ ದುಡ್ಡು ಕೊಡಬೇಕಾಗಿರದ್ದರಿಂದ ಬಚಾವು. ಹಾಗಾಗಿ ಹೆಂಡತಿಗೆ ಆ ಬಗ್ಗೆ ಲೆಕ್ಕ ಒಪ್ಪಿಸುವ ಅಗತ್ಯವೂ ಇಲ್ಲ. ಅದು ಅವಳಿಗೆ ತಿಳಿಯುವ ಹಾಗೂ ಇಲ್ಲ. ಆದರೆ ಉಳಿದಂತೆ ಲೆಕ್ಕವನ್ನು ಕೊಡಲೇ ಬೇಕಲ್ಲವೇ. ಹಾಗಿರುವಾಗ ಕಂಬಳದ ಕೋಣಗಳನ್ನು ಸಾಕುವುದು ಹೋಗಲಿ ಅವುಗಳ ಬಗ್ಗೆ ಆಲೋಚಿಸಲೂ ಅವಕಾಶವಿರಲಿಲ್ಲ.

ಅವರು ಅಂತಹ ನಿರಾಸೆಯ ತುತ್ತ ತುದಿಯಲ್ಲಿದ್ದಾಗಲೇ ಆದಿ ಕಂಬಳದ ಕೋಣಗಳನ್ನು ಸಾಕುವ ಸುದ್ದಿಯನ್ನು ಎತ್ತಿದ್ದು. ಅದೂ ಅನಿರೀಕ್ಷಿತವಾಗಿ. ಅವನು ಯಾರ ಹತ್ತಿರವೋ ತನ್ನ ಬಯಕೆಯನ್ನು ಹೇಳಿಕೊಳ್ಳುತ್ತಿದ್ದುದು ಶಾಮಣ್ಣನವರ ಕಿವಿ ಮೇಲೆ ಬಿದ್ದದ್ದು ಮತ್ತು ಹಾಗೆಯೇ ಅವರು ಪುಳಕಗೊಂಡದ್ದು.

ತನ್ನ ಮಗ ತನ್ನ ಹಾಗೆಯೇ ಎನ್ನುವ ಖುಶಿಯೊಂದಿಗೆ ತನ್ನ ಪ್ರತಿಯೊಂದು ಆಸೆಗೂ ಅಡ್ಡಿ ಬರುವ ಹೆಂಡತಿ ಮಗನ ಬಯಕೆಗೆ ಅಡ್ಡ ಬರಲಾರಳು ಎನ್ನುವ ನಂಬಿಕೆಯೂ ಸೇರಿ ಎಂದೋ ಎಳ್ಳುನೀರು ಬಿಟ್ಟಿದ್ದ ಅವರ ಆಸೆ ಗರಿಗೆದರಿತ್ತು.

ಹಾಗಾಗಿ ಮಗ ಹೆದರಿ ಹೆದರಿ ತನ್ನ ಆಸೆಯನ್ನು ಹೇಳಿಕೊಂಡಾಗ ಅವರ ಮನಸ್ಸಿನ ಮೂಲೆಯಲ್ಲಿ ಕುಳಿತು ಕಂಬಳದ ಕೋಣಗಳ ಮೆರವಣಿಗೆಯ ಡೋಲಿನ ಶಬ್ದ ಕೇಳಿದಾಗಲೆಲ್ಲ ಪುಟಿದು ತೊಂದರೆ ಕೊಡುತ್ತಿದ್ದ ನೆನಪು ಮರು ಜೀವ ಪಡೆದಿತ್ತು. ಜರಿ ರುಮಾಲಿ ಸುತ್ತಿ ಆಳುಗಳಿಂದ ಕೊಡೆ ಹಿಡಿಸಿಕೊಂಡು ಅತ್ತಿತ್ತ ನೋಡುತ್ತ ಕಂಬಳದ ಕೋಣಗಳ ಎದುರಿಗೆ ತಾನು ಹೋಗುವ ಕನಸು ಮರುಕಳಿಸಿತ್ತು. ಮಗನಿಗೆ ಬೇಡ ಎಂದಾರೆಯೇ. ತೀರ ಪ್ರೋತ್ಸಾಹಕರ ಪ್ರತಿಕ್ರಿಯೆ ತೋರಿಸಿದ್ದರು. ಅಲ್ಲ ಮಾರಾಯ.. ಸ್ವಲ್ಪ ನೋಡಿಕೊಂಡು ಮಾಡು.. ಇದೂ ಒಂದು ಸುರಟಿ ಎಮ್ಮೆಯ ವ್ಯಾಪಾರದ ಹಾಗೆ ಆಗದಂತೆ ನೋಡಿಕೋ' ಎಂದವರು ಮಗನ ಆಸೆಗೆ ಅಡ್ಡಿ ಬರಲಾರಳು ಆಕೆ ಎಂದು ಗೊತ್ತಿದ್ದೂ ಅಮ್ಮನನ್ನೂ ಒಂದು ಮಾತು ಕೇಳಿಕೋ’ ಎಂದೂ ಸೇರಿಸಿದ್ದರು.

ಮಾತಿನ ನಡುವಿನಲ್ಲಿ ಸುರಟಿ ಎಮ್ಮೆಯ ಸುದ್ದಿ ಬಂದದ್ದು ಸ್ವಲ್ಪ ಚುಚ್ಚಿದರೂ ಅವರು ಇಷ್ಟು ಸುಲಭದಲ್ಲಿ ಒಪ್ಪಿದ್ದು ಅಪ್ಪನ ಹಳೇ ಬಯಕೆಯ ಬಗ್ಗೆ ಒಂದು ಚೂರೂ ಸುಳಿವೇ ಇಲ್ಲದಿದ್ದ ಆದಿಗೆ ವಿಶೇಷವಾಗಿ ಕಂಡಿತ್ತು. ಮೊದಲಿನಿಂದಲೂ ತನ್ನ ಬಗ್ಗೆ ಅಪ್ಪನಿಗೆ ಹೆಮ್ಮೆಯೇ ಎನ್ನುವುದು ಗೊತ್ತಿದೆ ಅವನಿಗೆ. ಮೊದಲ ಮಗನನ್ನು ಎಷ್ಟು ಬೇಕಾದರೂ ಕಲಿಸುತ್ತೇನೆ ಎಂದು ಹೊರಟಿದ್ದ ಅಪ್ಪನಿಗೆ ನಿರಾಶೆಯಾಗುವಂತೆ ಒಳ್ಳೆಯ ಮಾರ್ಕುಗಳನ್ನು ಪಡೆದೂ ಹೈಸ್ಕೂಲಿಗಿಂತ ಮುಂದೆ ಹೋಗಲು ತಾನು ಸುತರಾಂ ಒಪ್ಪದಿದ್ದರೂ ಮಗನ ಬಗ್ಗೆಯಿದ್ದ ಹೆಮ್ಮೆ ಮಾತ್ರ ನಶಿಸಿರಲಿಲ್ಲ. ಆದರೆ ಇತ್ತೀಚಿನ ತನ್ನ ಸುರುಟಿ ಎಮ್ಮೆ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡ ಮೇಲೆ ಅಪ್ಪ ತನ್ನ ಮೇಲೆ ಬೇಜಾರು ಮಾಡಿಕೊಂಡಿರಬಹುದು ಎನ್ನುವ ಅವನೇ ಮೈಮೇಲೆಳೆದುಕೊಂಡ ಹೆದರಿಕೆಯೊಂದು ಕಾಡುತ್ತಿತ್ತು.

ಹಾಗಾಗಿಯೇ ತನ್ನ ಆಸೆಗೆ ಭಂಗ ತರುವ ನಿರುತ್ತೇಜಕ ಮಾತನ್ನೇನಾದರೂ ಅಪ್ಪ ಹೇಳಿಯಾರೇನೋ ಎನ್ನುವ ನಿರೀಕ್ಷೆಯಲ್ಲಿದ್ದ ಅವನಿಗೆ ಅಪ್ಪನ ಮಾತುಗಳನ್ನು ಕೇಳಿ ಸಂಭ್ರಮವೋ ಸಂಭ್ರಮ. ಜೊತೆಗೇ ಅಪ್ಪನಿಗೆ ತನ್ನ ಮೇಲಿನ ನಂಬಿಕೆ ಕುಸಿಯಲಿಲ್ಲ ಎನ್ನುವುದೂ ಅಷ್ಟೇ ಸಂತೋಷ ತಂದುಕೊಟ್ಟಿತ್ತು. ಅಮ್ಮನನ್ನು ಒಪ್ಪಿಸುವುದಂತೂ ಯಾವತ್ತಿನಂತೆ ಇವತ್ತೂ ಕಷ್ಟವಾಗಲೇ ಇಲ್ಲ ಅವನಿಗೆ. ಅಂತೂ ಮನೆಗೊಂದು ಜೊತೆ ಕಂಬಳದ ಕೋಣ ಬರುವುದು ನಿರ್ಧಾರವಾಗಿಯೇ ಬಿಟ್ಟ್ಟಿತು.

ಇನ್ನೂ ಶಾಲೆಗೆ ಹೋಗುತ್ತಿದ್ದು ಹೈಸ್ಕೂಲು ಮೂರನೇ ವರ್ಷದಲ್ಲಿದ್ದ ತಮ್ಮ ಅನಂತನಿಗೂ ಸಂಭ್ರಮವೇ ಸಂಭ್ರಮ. ತಮ್ಮ ಮನೆಗೂ ಕಂಬಳದ ಕೋಣ ಬರುತ್ತದೆ. ತಾನೂ ಇನ್ನು ಮೇಲಿಂದ ಗೆಳೆಯರೊಂದಿಗೆ ಕೊಚ್ಚಿಕೊಳ್ಳಬಹುದು ಎನ್ನುವ ಹೆಮ್ಮೆ. ಶಾಲೆಯಲ್ಲಿ ಯಾವಾಗಲೂ ಪಕ್ಕದೂರಿನ ಪಟೇಲರ ಮಗ ಮತ್ತು ಒಂದಿಬ್ಬರು ಶ್ರೀಮಂತ ಹುಡುಗರು ತಮ್ಮ ಮನೆಯಲ್ಲಿದ್ದ ಕಂಬಳದ ಕೋಣಗಳ ಬಗ್ಗೆ ಹೇಳಿಕೊಳ್ಳುತ್ತಿದ್ದದನ್ನು ಕೇಳಿದ್ದ ಅವ. ಅದೆಲ್ಲ ನಮ್ಮಂತಹ ಶ್ರೀಮಂತರಿಗೆ ಮಾತ್ರ ಸಾಧ್ಯ. ಬಡವರಿಗಲ್ಲ. ಅದೂ ಹೊತ್ತಿಗೆ ಹನ್ನೆರಡು ಕೊಬ್ಬರಿ ಹತ್ತು ಸೇರು ಹುರಳಿ ಪ್ರತಿ ಕೋಣಕ್ಕೂ ಕೊಡಬೇಕಾಗುತ್ತದೆ.

ವರ್ಷಕ್ಕೇ ಹತ್ತು ಕೊಬ್ಬರಿ ಉಪಯೋಗಿಸದ ಮಂದಿಗೆ ಅದೆಲ್ಲ ಎಲ್ಲಿ ಸಾಧ್ಯವಾಗುತ್ತದೆ' ಎಂದೆಲ್ಲ ಉಳಿದವರನ್ನು ಹೀಯಾಳಿಸಿ ಮಾತನಾಡುತ್ತಿದ್ದರು. ಅವರು ಹಾಗೆ ಹೇಳುವಾಗಲೆಲ್ಲ ಅನಂತನಿಗೆ ಇರಿಸು ಮುರುಸಾಗುತ್ತಿತ್ತು. ತಾವು ಶ್ರೀಮಂತರೆ೦ದು ಅವರೆಲ್ಲರಿಗೂ ಗೊತ್ತಿದೆ. ಮನೆಯಲ್ಲಿ ಒಳ ಕೆಲಸಕ್ಕೆ ಹೊರ ಕೆಲಸಕ್ಕೆಂದು ಬೇರೆ ಬೇರೆ ಆಳುಗಳಿದ್ದಾರೆ. ಅಮ್ಮ ಅಡಿಗೆ ಮನೆಗೆ ಹೋಗುವುದಿದ್ದರೆ ಅದು ವಿಶೇಷದ ದಿನಗಳಲ್ಲಿ ಮತ್ತು ತನಗೆ ತೀರಾ ಬೇಕಾದ ನೆಂಟರು ಬಂದಾಗ ತನ್ನದೇ ಆದ ಸ್ಪೆಶಲ್ ಅಡಿಗೆಯನ್ನು ಮಾಡಲು ಮಾತ್ರ. ಉಳಿದ ದಿನಗಳಲ್ಲಿ ಅಡಿಗೆ ನೀಲುವಿಗೆ ಬೈಯ್ಯಲು ಹೋಗುತ್ತಾಳೆ ಅಷ್ಟೆ.ಅದು ಮಾಡಿದ್ದು ಸರಿಯಾಗಲಿಲ್ಲ. ಇದು ಮಾಡಿದ್ದು ಸರಿಯಾಗಲಿಲ್ಲ.

ನಮ್ಮಪ್ಪನ ಮನೆಯಲ್ಲಿ ಇವತ್ತೂ ಐವತ್ತು ಜನರಿಗೆ ಒಬ್ಬಳೇ ಅಡಿಗೆಯವಳು ಗೊತ್ತಾ. ಅದಕ್ಕೂ ಯಾರೂ ತಲೆ ಹಾಕುವ ಅಗತ್ಯವೂ ಇಲ್ಲ. ಹೊತ್ತು ಹೊತ್ತಿಗೆ ಬಳ್ಳೆ ಹರವಿಕೊಂಡು ಕುಳಿತರಾಯ್ತು. ಅವಳೇ ಬಡಿಸಿಬಿಡುತ್ತಾಳೆ. ಅದೇನು ಒಂದೆರಡು ಬಗೆಯೇ. ಬೆಳಿಗ್ಗೆ ತಿಂಡಿಗೇ ನಾಲ್ಕು ಬಗೆಯಾಗಬೇಕು. ಮಧ್ಯಾಹ್ನ ಊಟಕ್ಕೆ ಅದೆಷ್ಟೋ. ರಾತ್ರಿ ಪುನಃ ಎಲ್ಲ ಹೊಸದಾಗಿಯೇ ಆಗಬೇಕು. ಅದೆಲ್ಲವನ್ನೂ ಒಬ್ಬಳೇ ನೋಡಿಕೊಳ್ಳುತ್ತಾಳೆ. ಅದೇ ಇಲ್ಲಿರುವ ಮೂರು ಮತ್ತೊಂದು ಜನರಿಗೆ ಮಾಡಿ ಬಡಿಸಲು ಅಷ್ಟು ಕಷ್ಟವಾಗುತ್ತದಲ್ಲ ನಿನಗೆ’ ಎಂದು ದಬಾಯಿಸಲು ಮಾತ್ರ.

ತಮ್ಮ ಮನೆಯಲ್ಲಿ ಬೇಸಾಯದ ಕೆಲಸ ಮುಗಿದು ದಿವಾಳಿ ತಿಂಗಳಲ್ಲಿ ಎರಡು ಭತ್ತದ ತಿರಿ ಕಟ್ಟಲಿಕ್ಕೇ ಇಡೀ ಎರಡು ದಿನ ಕೂಲಿ ತೆಗೆದುಕೊಳ್ಳುವ ಮೂರು ಆಳುಗಳ ಜೊತೆಗೆ ಊರಿನ ಹತ್ತಿಪ್ಪತ್ತು ಮಂದಿಯಾದರೂ ಇರುತ್ತಾರೆ. ಬೆಳಿಗ್ಗೆ ಪೊಗದಸ್ತಾಗಿ ತಿಂಡಿ ತಿಂದು ಕೆಲಸ ಆರಂಭಿಸುವ ಅವರು ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ತಿರಿ ಕಟ್ಟಿದ್ದು ಮುಗಿದು ಊಟಕ್ಕೆ ಕೂರುವಾಗ ಅಮ್ಮನ ಉಸ್ತುವಾರಿಯಲ್ಲಿ ನೀಲಮ್ಮ ಮಾಡಿಟ್ಟಿದ್ದ ಅಡಿಗೆಯನ್ನು ಬಡಿಸಲು ಅವರಲ್ಲೇ ಒಂದಿಬ್ಬರು ತಯಾರಾಗುತ್ತಿದ್ದರು. ಆ ಘಮ ಘಮಿಸುವ ಅಡಿಗೆ, ಗೇರು ಬೀಜಗಳು ತೇಲುತ್ತಿರುತ್ತಿದ್ದ ಪಾಯಸ ಹೊಡೆಯುವ ಅವರು `ಏನೆಂದರೂ ನಮ್ಮ ದೊಡ್ಮನೆ ಸಮಕ್ಕೆ ಬರುವಂತವರು ಈ ಹದಿನಾಲ್ಕು ಗ್ರಾಮದಲ್ಲೇ ಯಾರೂ ಇಲ್ಲ ಬಿಡಿ’ ಎಂದು ಹೇಳುತ್ತಿದ್ದುದನ್ನೂ ಕೇಳಿದ್ದಾನೆ. ಮಾರನೆಯ ದಿನ ಇದರದ್ದೇ ಪುನರಾವರ್ತನೆ. ಇನ್ನೊಂದು ತಿರಿ ಕಟ್ಟುವುದು. ಅಷ್ಟೇ ಜನ. ಅದೇ ತೆರನ ಕಾಫಿ ತಿಂಡಿ. ಅದೇ ತೆರನ ಮಧ್ಯಾಹ್ನದ ಊಟ. ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ.

ತಮ್ಮ ಸ್ಕೂಲ್ ಫೀಸಿಗೂ ಅಷ್ಟೆ. ತಾನು ಬಡವರಲ್ಲವೆಂದು ತನಗೂ ಆ ಇತರ ಶ್ರೀಮಂತರ ಮಕ್ಕಳ ಹಾಗೆಯೇ ಸ್ಕೂಲ್ ಫೀಸಿನಲ್ಲಿ ಮಾಫಿಯಿಲ್ಲ. ಆದರೆ ಆ ಹುಡುಗರು ಎಂದೂ ತನ್ನ ಹಾಗೆ ವಾಯಿದೆಯೊಳಗೆ ಫೀಸ್ ಕಟ್ಟಿದವರೇ ಅಲ್ಲ. ವಾಯಿದೆ ಕಳೆದು ಹೆಡ್ ಮಾಸ್ಟರರ ಹತ್ತಿರ ಬೈಸಿಕೊಂಡ ಮೇಲೆಯೇ ಕಟ್ಟುತ್ತಿದ್ದುದು. ಅಂದ ಮೇಲೆ ತಾನು ಬಹುಶಃ ಆ ಶ್ರೀಮಂತರೆದು ಹೇಳಿಕೊಳ್ಳುತ್ತಿದ್ದ ಮಕ್ಕಳಿಗಿಂತಲೂ ಹೆಚ್ಚಿನ ಶ್ರೀಮಂತನಿರಬೇಕು. ಆದರೆ ಅವರೆಲ್ಲ ಕೊಚ್ಚಿ ಕೊಳ್ಳುತ್ತಿದ್ದಂತೆ ಬರೀ ಶ್ರೀಮಂತರ ಮನೆಯಲ್ಲಿ ಮಾತ್ರ ಇರಬೇಕಾದ ಕಂಬಳದ ಕೋಣಗಳು ತಮ್ಮ ಮನೆಯಲ್ಲೂ ಯಾಕೆ ಇಲ್ಲ ಎನ್ನುವುದರ ಬಗ್ಗೆ ಅವ ಒಂದೂವರೆ ಮೈಲು ನಡೆದು ಹೋಗಬೇಕಿದ್ದ ಶಾಲೆಯ ದಾರಿಯಲ್ಲಿ ಬಹಳಷ್ಟು ಸಲ ತಲೆ ಬಿಸಿ ಮಾಡಿಕೊಂಡು ಆಲೋಚಿಸಿದ್ದರೂ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಅಣ್ಣನ ನಿರ್ಧಾರದಿಂದಾಗಿ ಅವನಿಗಂತೂ ಬಹಳ ಸಂತೋಷವಾಗಿತ್ತು.

। ಇನ್ನು ನಾಳೆಗೆ ।

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: