ಪಿ ಪಿ ಉಪಾಧ್ಯ
1. ಭ್ರಾಂತಿ
ಕಡಲತಡಿಯಲಿ ಹವಳ
ಶಿಖರದೆತ್ತರ ಧವಳ
ನಡುವಿನಲಿ ಚದುರಿದ್ದ
ಗಟ್ಟ್ಟಿ ರೊಟ್ಟಿಯ ತುಣಕು
ಕೋಟಿ ಬಾಯ್ದೆರೆದಿದ್ದು
ಚೂರುಗಳು ಸಾಕಾಗಲಿಲ್ಲ
ಕಚ್ಚಾಟ ಕಾದಾಟ ಮತ್ತೆ
ಗೆದ್ದವರ ಕೈಯ್ಯಲ್ಲಿ ಮಣ್ಣ ಹೆಂಟೆ
ಹಸಿದವರು ಸಾಗಿದರು
ಸಾಗುತ್ತ ಕೂಗಿದರು
ಈ ಕಿಚ್ಚಿನ ಕೂಗು
ಬರಿ ಕ್ರಾಂತಿಯ ಸೋಗು
ಕೈಯ್ಯ ಬಾವುಟಕ್ಕಿದೆಯಲ್ಲ
ಹಿಡಿಯಾದ ಕೋಲು
ದಂಡಯಾತ್ರೆಯ ಬಣ್ಣ
ಈ ಮರಣ ಯಾತ್ರೆಯ ಜಾತ್ರೆಗೆ
ಕವಡೆಯೇ ಮೇಲಿಲ್ಲಿ ಜೀವಕಿಂತ

ಹಿಂದಿರುವ ಮುಂದಾಳು
ಮಾರ್ಜಾಲ ಸನ್ಯಾಸಿ
ದೈತ್ಯ ಮಾಂತ್ರಿಕನ ಕೈಯ್ಯಲ್ಲಿ
ಉದ್ದ ಮಾಯದ ದಂಡ
ಸ್ವರದಲ್ಲಿ ಕಿನ್ನರಿಯ ಮೋಡಿ
ಹವಳ ಹರಿಯುತಿದೆ ಕರಗಿ
ಧವಳಗಿರಿ ಉರಿಯುತಿದೆ ಹತ್ತಿ
ಹವಳ ಧವಳದ ನಡುವೆ
ವಿಸ್ತಾರ ನೆಲದಲ್ಲಿ ಚಲ್ಲಿ ಹರಿಯುತಿದೆ ರಕ್ತ
ಇದೆ ಏನು ಸಿದ್ಧಾಂತ ಕ್ರಾಂತಿ
ಅಲ್ಲ ಬರೀ ಭ್ರಾಂತಿ!!!
2. ಎಲ್ಲ ಹೊಸತೇ ಬೇಕು…
ಅವರಿಬ್ಬರಿಗೂ ಹೊಸ ಬದುಕಿನ ಆಸೆ
ಹೊಸ ಜೀವನದ ಬಯಕೆ
ಹೊಸ ಮನೆ, ಹೊಸ ಕಾರು
ಹೊಸ ಊಟ, ಹೊಸ ತಿಂಡಿ ಎಲ್ಲ
ಹೊಸತೇ ಬೇಕು ಹೊಸತೇ ಆಗಬೇಕು
ಯಾಕೆಂದರೆ ಅವರು ಮದುವೆಯಾಗಿದ್ದಷ್ಟೆ.
ಅವರಿಬ್ಬರೂ ಗಂಡ ಹೆಂಡಿರು.
ಹೊಸತ ಕೇಳುವ ಹೊಸತ ಹುಡುಕುವ
ತವಕ ತುಂಬಿದ ಆ ಮನಸುಗಳಲಿ
ಅಲೆ ಅಲೆಯಾಗಿ ಮೂಡುವ ಬಯಕೆ
ಅವರಿಬ್ಬರ ಮನದಲೂ ಒಂದೇ
ಅದೇ ಹಾಡು, ಅದೇ ರಾಗ
ಅವರಿಬ್ಬರೂ ಗಂಡ ಹೆಂಡಿರು
ಹೊಸ ಬಾಳ ಬಾಳಬೇಕು
ಹೊಸ ಬದುಕ ಬದುಕಬೇಕು.
ಅದಕೆಂದೇ ಹೋರಾಟ
ಅದಕೆಂದೇ ಹೊಡೆದಾಟ
ಅವೆಲ್ಲದರ ಗುರಿ ಒಂದೇ
ಹೊಸದು ಹಿಡಿಯುವ ತವಕ
ಅವರಿಬ್ಬರೂ ಗಂಡ ಹೆಂಡಿರು.

ಹೊಸತು ಬೇಕೆಂಬ ಆ ತೀರದ ಆಸೆಯಲಿ
ಇಲ್ಲದ್ದ ಬಯಸಿದ್ದು ಇದ್ದುದೆಲ್ಲವ ಮರೆತು
ಕಡೆಗಣಿಸಿದ್ದು, ಕಾಲಲ್ಲಿ ಒದ್ದದ್ದು
ಹೊಸತರೆಡೆಗೇ ಕಣ್ಣಿಟ್ಟು ನಡೆಯುತ್ತ
ಎಡವಿದ್ದು ಎಡವಿ ಬಿದ್ದದ್ದು
ಮತ್ತೆ ಎದ್ದದ್ದೂ ಅದೇ ಹೊಸತರ ಕನಸಿನಲ್ಲೇ
ಅವರಿಬ್ಬರೂ ಗಂಡ ಹೆಂಡಿರು
ಆ ಹೊಸತೋ ಅದೊಂದು ಮರೀಚಿಕೆ
ಅಲ್ಲಿದೆ ಇಲ್ಲಿದೆ ಎಲ್ಲೆಲ್ಲೂ ಇದೆ
ಓಡಿದಷ್ಟೂ ಮುಂದೋಡುವ ಕೈಗೆಟುಕದ ಕುದುರೆ
ಸಿಕ್ಕಿತೋ ಅದು ಅವರ ಭಾಗ್ಯ
ಇಲ್ಲ ಓಡುವುದೊಂದೇ ಅವರ ದುರ್ಭಾಗ್ಯ
ಅವರಿಬ್ಬರೂ ಗಂಡ ಹೆಂಡಿರು
ಕೊನೆಗೊಂದು ಪ್ರಶ್ನೆ
ಎಲ್ಲವೂ ಹೊಸತೇ ಬೇಕೆನ್ನುವ ಅವರು
ಕೇಳುವರೇನು ಹೊಸ(!) ಹುಟ್ಟೊಂದನು?
ಹೊಸ ಬಾಳು ಹೊಸ ಬದುಕು ಎನ್ನುತ್ತ
ಹೊಸದರತ್ತಲೇ ದೃಷ್ಟಿ ಹಾಯಿಸುವ
ಅವರು ಬಯಸುವರೇನು ಹೊಸ(!)
ಸಂಗಾತಿಯೊಬ್ಬನ(ಳ)ನ್ನು?
ಅದು ಹೇಗೆ ಪಾಪ!
ಅವರಿಬ್ಬರೂ ಗಂಡ ಹೆಂಡಿರು… !!!






0 Comments