ಪಿ ಪಿ ಉಪಾಧ್ಯ
ಕೇಳಿರಿ… ಕೇಳಿರಿ…
ಗಮನವಿಟ್ಟು ಕೇಳಿರಿ
ಹಿರಿಯರು ಹೇಳುವ ಮಾತನ್ನು
ಕಿರಿಯರು ಕೇಳುವ ಪ್ರಶ್ನೆಯನು
ಗೆಳೆಯರು ಕೊಡುವ ಸಲಹೆಯನು…
ಬದುಕೆಂದರೆ…
ಬಲು ಬೆಲೆ ಬಾಳುವ ಬಾಳು
ನೋಡಿಕೊಳ್ಳಿ ಅದೆಂದಿಗೂ ನಶಿಸದಂತೆ
ಬದುಕೆ೦ದರೆ ಬಲು ಬಳಕೆಯ ವಸ್ತು
ಕಾಯ್ದುಕೊಳ್ಳಿ ಅದನೆಂದೂ ಕೆಡದಿರುವಂತೆ
ಇದು ಅವರೆಲ್ಲರೂ ಹೇಳುವ ಮಾತು
ಬದುಕಿಡೀ ನೀವು ಕೇಳುವ ಮಾತು
ಹಾಗೆಂದು…
ಅದು ಸುಲಭವೇನಲ್ಲ
ಬದುಕುವುದೆಂದರೆ ಮುಳ್ಳಿನ ಮೇಲಿನ ಹೆಜ್ಜೆ
ಚುಚ್ಚುವ ಮುಳ್ಳೋ ಚೂಪೇ ಚೂಪು
ನರಳುವ ನೋವು ಅನುಭವಿಸಿದರೇ ಗೊತ್ತು

ಅದಕ್ಕೇ…
ಕಲಿಯಬೇಕು ಒಲಿಯಬೇಕು
ಕಲಿಸಬೇಕು ಒಲಿಸಬೇಕು
ಬಾಳೆಂಬ ಬಳಪವ ಬಳಸಲು
ಒಲುಮೆಯಿಂದ ಇರಲೇಬೇಕು
ನಿಜ ಬದುಕಿನ ಸವಿಯನು ಸವಿಯಲು
ಇಷ್ಟು ಮಾಡಿಯೂ…
ಸುಖದ ಬದುಕು ಮಾತ್ರ ಮರೀಚಿಕೆಯೇ
ಕನಸಲೊಮ್ಮೆ ಆಗ ಈಗ ಕಾಣ ಸಿಕೊಂಡು
ಮರು ಕ್ಷಣದಲ್ಲಿಯೇ ಮಾಯ!
ಹುಡುಕಿದರೆಲ್ಲೂ ಸಿಗದಂತಹ
ಅದುವೆ ಬದುಕು, ಅದುವೆ ಬಾಳು
ಹಾಗೆಯೇ…
ಬದುಕೆಂದರೆ ಅದೊಂದು ಕಲೆಯೂ
ಕಲಿಯಲೆಷ್ಟು ಕಾಲ ಬೇಕು…
ಹುಟ್ಟಿನಿಂದ ಸಾಯೋವರೆಗೂ
ಕಲಿಯುವಾಗಂತೂ ಸುಸ್ತೇ ಸುಸ್ತು
ಯಾಕೆಂದರೆ…
ಅ೦ತ್ಯವಿಲ್ಲ ಕಲಿಕೆಗೆ.
ಆದರೆ ಅಂತ್ಯವಿದೆ ಬದುಕಿಗೆ
ಉಳಿಸಲೆಷ್ಟು ಕಷ್ಟ ಜೀವ…
ಕೊನೆಗೂ ಉಳಿಯಲಾರದು
ನಾನು, ನನ್ನವರೆಂಬುದೆಲ್ಲ ಬದುಕಿನಲ್ಲಿನ ಮಿಳಿತವೇ
ನಿಮ್ಮ ಬದುಕಿನಂತ್ಯವೇ ಅವೆಲ್ಲವುಗಳ ಅಂತ್ಯವೂ
ಮು೦ದೆ ಅವರು ಯಾರೋ ನೀವು ಯಾರೋ…
ಆದರೆ…
ನೀವು ಬದುಕಿದ್ದಾಗ ಇಲ್ಲದಂತ
ಮಿತಿಯಿಲ್ಲದ ಕಾಳಜಿ ನಿಮ್ಮ ಸಾವಿನಂತರ
ಅವರ ಮಾತಿನಲ್ಲಿ, ನೆನಪಿನಲ್ಲಿ
ನಿಮ್ಮ ಬದುಕು ನಿರಂತರ
ದಿನ ಬೆಳಗಾದರೆ ಒಲಿವ ನಿಮ್ಮ ನೆನಪಿಗೆ
ಬಾಯಿ ತುಂಬ ಮಾತುಗಳೇ
ಹೊಗಳಿಕೆಗಳು…. ತೆಗಳಿಕೆಗಳು….
ಮತ್ತೆ ಸುರಿವ ಕಣ್ಣಿರೂ…
ಕೊನೆಯದೊಂದು ಪ್ರಶ್ನೆ…
ಕೇಳಿ ನಿಮ್ಮ ಹಿರಿಯಗೆ,
ಹೇಳಿ ನಿಮ್ಮ ಕಿರಿಯಗೆ,
ಹಾಗೇ ನಿಮ್ಮ ಗೆಳೆಯಗೂ…
ಬೆಲೆಯಿದೆಯೇ ಬದುಕಿಗೆ… ಹೌದೆಂದರೆ ಎಲ್ಲಿದೆ…
ಹುಡುಕಬೇಕು… ಹುಡುಕುತ್ತ ಕೊರಗಬೇಕು
ಹಾಗೆಯೇ ನರಳಬೇಕು
ಬದುಕಿನಾಳದ ಸತ್ಯ ತಿಳಿವ ಹೊತ್ತಿಗೆ
ನಾವೂ ಇಲ್ಲ ನೀವೂ ಇಲ್ಲ.
ಅದುವೆ ನಮ್ಮ ಜೀವನ
ಅದೇ ನಮ್ಮ ನಿಮ್ಮ ಬಾಳ್ವೆಯೂ!






0 Comments