ಪಿ ಪಿ ಉಪಾಧ್ಯ
ಮದುವೆಯಾಗಿದ್ದಷ್ಟೆ ಗಂಡ ಹೆಂಡಿರು ಇಬ್ಬರೆ
ಮನೆತುಂಬ ನಗುವಿರಲು ಮಗುವೊಂದು ಬೇಕು
ಅದು ಅವರಿಬ್ಬರಾಸೆ. ಮನ ತುಂಬಿದ ಬಯಕೆ
ವರುಷವೆರಡು ಕಳೆವಾಗ ಹುಟ್ಟಿತೊಂದೇ ಮಗುವು
ಈಡೇರಿತೇ ಬಯಕೆ? ಇಲ್ಲ.
ಮಗುವಿನಾಸೆಯ ಬದುಕ ತಮ್ಮದೆಂದೇ ಗಣಿಸಿ
ಅದರ ಆಟೋಟಗಳಲ್ಲಿ ಹುದುಗಿದ ಆ
ಅಪ್ಪ ಅಮ್ಮನಿಗೆ…
ಮಗ ಬೆಳೆಯಬೇಕೆತ್ತರಕೆ, ಶ್ರೀಮಂತಿಕೆ
ಧೀಮಂತಿಕೆಯಲ್ಲಿ ಎಲ್ಲರನು ಮೀರಿಸಬೇಕೆಂಬಾಸೆ
ಅದು ಅವರ ಅನುದಿನದ ಕನಸೇ ಆಯ್ತು.
ಕನಸ ನನಸಾಗಿಸುವಲ್ಲಿ ಮಗನ ಹೊಟ್ಟೆಯ ತುಂಬಿಸಿ
ತಾವು ತಣ್ಣೀರ ಕುಡಿದೇ ಮಲಗಿಕೊಂಡವರವರು
ಅವನ ಸುಖವನು ನೋಡುತ್ತ ಸ್ವಂತ ಸುಖವನೆ ಮರೆತು
ಜೊತೆಗೆ ತಮ್ಮ ಬದುಕನೂ ಮರೆತವರು.

ಹಾಗೆಯೇ ಬೆಳೆದು, ಬಲಿತು ಹೆಮ್ಮರವಾದ ಮಗ
ಹೆತ್ತು ಹೊತ್ತು ಸಾಕಿದವರಿಗೆ ನೆಳಲನೀಯಲು ಮಾತ್ರ ಮರೆತ..
ಮರೆತೇ ಬಿಟ್ಟ….
ತನ್ನ ಬದುಕನರಸುತ್ತ ಮುಂದೆ ಸಾಗುತ್ತಿದ್ದ ಅವ
ತಿರುಗಿ ನೋಡಲೇ ಇಲ್ಲ ತಾನು ಸಾಗಿ ಬಂದ ಹಾದಿಯತ್ತ
ಹಾಗೆಯೇ…. ಅವನ
ನೆನಪಿಂದ ಜಾರಿಯೇ ಹೋಯ್ತು ಅಪ್ಪ ಅಮ್ಮನ ಒಲವು ಕಷ್ಟ ನಷ್ಟ
ತನ್ನ ಬದುಕನು ಹುಡುಕುವಾತುರದಲ್ಲಿ
ಹಿಂದಿನದ ಮರೆತು ಮುಂದೆ ಸಾಗುತಲಿದ್ದವಗೆ
ಜೊತೆಯಾದಳು ಒಬ್ಬಳು ಹುಡುಗಿ – ಬೆಡಗಿ.
ಜೊತೆಗೂಡಿದವಳನ್ನು ಓಲೈಸುವಾಸೆಯಲಿ
ಕಳಚಿಕೊಂಡನು ತನ್ನೊಡಲ ಮೂಲವನು.
ಸುಲಭದಲಿ ಮರೆಯಾಯ್ತು ತನು ಮನದ ಸಂಬAಧ
ಮಾಯವಾದರು ಅವನ ಓಲೈಸಿದವರು
ಬದುಕಿಂದ, ಮನದಿಂದ, ಹೃದಯದಿಂದ
ಈಗವನ ಚಿಂತೆ ಬರೀ ತನ್ನ ಬಾಳ ಸಂಗಾತಿ,
ಮತ್ತವಳ ಹೊಟ್ಟೆಯಲಿ ಹುಟ್ಟಿದ ಕೂಸಿನ ಬಗ್ಗೆ
ತನಗಾಗಿ ದುಡಿದ, ತನಗಾಗಿಯೇ ಜೀವ ತೇಯ್ದ
ಹಿರಿದೆರಡು ಜೀವಗಳತ್ತ ಕಣ್ಣೂ ಹಾಯಿಸಲಾರ
ನಡು ಜೀವ ಮುಗಿದು ಕೊನೆಗಾಲಕ್ಕೆ ನುಗ್ಗುತ್ತ
ಬದುಕ ಸಾಗಿಸಲವರು ಹೆಣಗುತ್ತಿರುವುದರ ಕಡೆಗೆ
ಗಮನವೇ ಹರಿಸಲಾರ…
ವೇದವಾಕ್ಯವು ಅವಗೆ ಹೆಂಡತಿಯ ಮಾತುಗಳು
ತಲೆಯತಗ್ಗಿಸುವ, ತಲೆಯನಾಡಿಸುವ
ಕೋಲೇ ಬಸವನಂತೆ.
ಅಂತೆಯೇ ಹೂಂಗುಟ್ಟಿ ಬಿಟ್ಟು ಬಂದ…
ಅಪ್ಪನನು ಅಮ್ಮನನು ದೂರದನಾಥಾಲಯದಲ್ಲಿ
ಮನಕೆ ತಟ್ಟಲೇ ಇಲ್ಲ ಹೆಂಡತಿಯ ದಾಸನಿಗೆ
ಪುತ್ರ ಪ್ರೇಮದಲಿ ಅಂಧನಾದ ಆ ಅಪ್ಪನಿಗೆ…
ತನ್ನ ಮಗನೂ ದೊಡ್ಡವನಾಗುವನೊಂದು ದಿನ
ಮದುವೆ, ಹೆಂಡತಿ ಮಕ್ಕಳ ಕೂಡೆ ಬದುಕ ನಡೆಸುವ ಅವನೂ
ಕೋಲೇ ಬಸವನಾಗುವನು ಹೆಂಡತಿ ಹೇಳಿದ್ದಕ್ಕೆಲ್ಲ
ಹಾಗೆಯೇ…. ಒಂದು ದಿನ
ತೋರಿಸಿಯಾನು ತಮಗೂ ಅನಾಥಾಲಯದ ದಾರಿಯನು…!!!






0 Comments