ಪಿ ಪಿ ಉಪಾಧ್ಯ ಅಂಕಣ- ಬೇಸಗೆಯ ಮಜ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

17

ಬೇಸಗೆಯ ಮಜ

ಬೇಸಗೆ ಬಂತೆಂದರೆ ಅಲ್ಲಿನ ಜನರಿಗೆ ಆನಂದವೋ ಆನಂದ. ವರ್ಷದ ಏಳೆಂಟು ತಿಂಗಳುಗಳು ಪೂರ್ತಿಯಾಗಿ ಮುಚ್ಚಿಕೊಂಡು ಜನರ ಗಧ್ರ್ರ ದೃಷ್ಟಿಯಿಂದ ಮರೆಮಾಡಿಟ್ಟುಕೊಂಡಿದ್ದ ದೇಹವನ್ನು ಬೆಳಕಿಗೊಡ್ಡುವ ತವಕ. ಶಿಶಿರ ನಿದ್ರೆಯ ಜಡತೆಯಿಂದ ಎದ್ದು ಮೈಕೊಡವಿ ಪ್ರಕೃತಿಯ ಬಿಸಿಗೆ ಸ್ಪಂದಿಸಲು ತಯಾರಾಗುತ್ತಾರೆ. ಬಿಸಿಲಿಗೆ ತೆರೆದುಕೊಳ್ಳುವ ಅವರ ತವಕವನ್ನು ನೋಡಿಯೇ ಆನಂದಿಸಬೇಕು. ಈಗೀಗ ಚಳಿಗಾಲದಲ್ಲಿಯೂ ಅಂತಹ ಚಳಿಯೇನೂ ಕಾಣಿಸದಿದ್ದರೂ ಅಭ್ಯಾಸಬಲ ಪ್ರವರ್ತಿ, ಸಂಪ್ರದಾಯ! ಬೇಸಗೆಯೆಂದರೆ ಸ್ವತಂತ್ರವಾಗಿರುವ ದಿನಗಳು ಎನ್ನುವ ಅನಿಸಿಕೆ. ಮನೆ ಕಾರು ಮತ್ತು ತಮ್ಮ ಕಚೇರಿಗಳಿಗೇ ತಮ್ಮನ್ನು ಮೀಸಲಾಗಿಟ್ಟ ಜನ ಆ ಮಿತಿಯಿಂದ ಬಿಡಿಸಿಕೊಂಡು ಗರಿ ಬಿಚ್ಚುತ್ತಾರೆ.

ಜನ್ಮ ಜನ್ಮಗಳಿಂದ ಸೂರ್ಯನ ಬಿಸಿಲನ್ನು ಕಂಡೇ ಇಲ್ಲವೇನೋ ಎನ್ನುವಂತೆ ಆಡುತ್ತಾರೆ. ರಸ್ತೆಗಳಲ್ಲಿ ತಿರುಗಾಡುವಾಗ, ಶಾಪಿಂಗ್ ಮಾಲ್‍ಗಳಲ್ಲಿ ವ್ಯಾಪಾರ ಮಾಡುವ ಮಂದಿ ಅತೀ ಕನಿಷ್ಟ ಬಟ್ಟೆಗಳಲ್ಲಿ ಓಡಾಡುತ್ತಿರುತ್ತಾರೆ. ಹೆಣ್ಣು ಗಂಡೆಂಬ ಬೇಧವಿಲ್ಲ. ನಮ್ಮ ದೇಶದಲ್ಲಾದರೆ ಅಂತಹ ಸಂದರ್ಭದಲ್ಲಿ ನೋಡುಗರ ಹುಚ್ಚಾಟವನ್ನು ನಿಯಂತ್ರಿಸಲು ಪೋಲೀಸರ ಪಡೆಯನ್ನೇ ಕರೆಯಬೇಕಾದೀತು. ಆದರೆ ಅಲ್ಲಿ ಯಾರೂ ಅಂತಹ ನೆಟ್ಟ ದೃಷ್ಟಿಯಿಂದ ನೋಡುತ್ತ ನಿಲ್ಲುವುದಿಲ್ಲ. ಕೆಟ್ಟ ದೃಷ್ಟಿ ಹರಿಸುವುದಿಲ್ಲ. ತಮ್ಮ ತಮ್ಮ ವ್ಯವಹಾರ ಮುಗಿಸಿ ಹೊರಟು ಬಿಡುತ್ತಾರೆ. ಅಂತಹ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಆಸಕ್ತಿ ತೋರಿಸುವುದು ಅವರ ಜಾಯಮಾನದಲ್ಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಇನ್ನೊಬ್ಬರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎನ್ನುವ ಕನಿಷ್ಟ ಸಾಮಾಜಿಕ ಶಿಸ್ತನ್ನು ಪ್ರತಿಯೊಬ್ಬರೂ ಪಾಲಿಸುತ್ತಾರೆ ಅಲ್ಲಿ. ಹೆಚ್ಚೆಂದರೆ ಮಾರನೇ ದಿನ ಅವರಿಗಿಂತ ಕಡಿಮೆ ಬಟ್ಟೆ ಧರಿಸಿ ತಾವೂ ಹೊರಗೆ ಹೊರಟಾರು.

ಬೇಸಗೆಯೆಂದರೆ ಅಲ್ಲಿನ ಜನರಿಗೆ ಪ್ರವಾಸ ಹೋಗುವ ಕಾಲವೂ ಹೌದು. ಚಳಿಗಾಲವಿಡೀ ಮಡಚಿಟ್ಟ ಪ್ರವಾಸದ ಸಾಮಗ್ರಿಗಳನ್ನು ಹೊರತೆಗೆಯುತ್ತಾರೆ ಅಥವಾ ಪ್ರವಾಸಕ್ಕೆ ಸಂಬಂಧಪಟ್ಟ ಸಾಮಾನುಗಳನ್ನು ಮಾರುವ ಅಂಗಡಿಗೆ ಎಡತಾಕುತ್ತಾರೆ. ವರ್ಷದ ಉಳಿದ ಭಾಗದಲ್ಲಿ ಕೂಡಿಟ್ಟ ಹಣವನ್ನು ಕಳೆಯಲು ಬೇರೆ ಬೇರೆ ಊರುಗಳಿಗೆ ಪ್ರಯಾಣ ಮಾಡುತ್ತಾರೆ. ಅವರವರ ಬಜೆಟ್ಟನ್ನು ಹೊಂದಿಕೊಂಡು ಅವರ ಪ್ರಯಾಣದ ಅವಧಿ ಮತ್ತು ದೂರ ನಿರ್ಧಾರವಾಗುತ್ತದೆ. ಇನ್ನೂ ಕೆಲ ಉತ್ಸಾಹಿಗಳು ಕ್ಯಾರವಾನ್‍ನಲ್ಲಿ ಹೊರಡುತ್ತಾರೆ. ಬೇಸಗೆಯ ಸಮಯದಲ್ಲಿ ಕೆಲವೊಮ್ಮೆ ಮೋಟಾರು ರಸ್ತೆಗಳಲ್ಲಿ ಕಾರುಗಳಿಗಿಂತ ಹೆಚ್ಚು ಕ್ಯಾರವಾನುಗಳೇ ಇರುತ್ತವೆ. ಬೇಕಾದದ್ದನೆಲ್ಲ ಸಂಗ್ರಹಿಸಿಟ್ಟುಕೊಂಡು ಮಲಗುವ, ಸ್ನಾನ ಮಾಡುವ ಮತ್ತು ಟಾಯ್ಲೆಟ್ಟಿನ ವ್ಯವಸ್ಥೆಯಿರುವ ಆ ಬಂಡಿಯನ್ನು ಎಳೆದುಕೊಂಡು ಹೋಗುವ ಈ ಮಂದಿ ತೀರಾ ಸಾಹಸಿಗಳು. ಇವರು ದೇಶ ದೇಶ ಸುತ್ತುತ್ತಾರೆ. ಬೇರೆಯವರ ಹಂಗಿಲ್ಲದೆ ಪಯಣಿಸುತ್ತಾರೆ. ವರ್ಷಗಳ ಕಾಲದ ಅನುಭವದಿಂದ ಕಂಡುಕೊಂಡಿದ್ದ ಜಾಗಗಳಲ್ಲಿ ಟೆಂಟ್ ಹೊಡೆದು ರಾತ್ರಿಗಳನ್ನು ಕಳೆಯುತ್ತಾರೆ. ಮರು ದಿನ ಮತ್ತೆ ಪಯಣ.

ಪ್ರವಾಸ ಹೋಗುವ ಈ ವಾರ್ಷಿಕ ಕಾರ್ಯಕ್ರಮ ನಿಗದಿತವಾದದ್ದು. ಏನಾದರೂ ಕೌಟುಂಬಿಕ ಅಥವಾ ವೈಯಕ್ತಿಕ ಅನಾಹುತಗಳಿಂದಾಗಿ ಈ ಕಾರ್ಯಕ್ರಮ ನಿಂತುಹೋಗಬೇಕಷ್ಟೆ. ಇಲ್ಲವೆಂದರೆ ಕರಾರುವಾಕ್ಕಾಗಿ ಪ್ರತಿ ಬೇಸಗೆಯಲ್ಲಿಯೂ ನಡೆಯಲೇಬೇಕು. ಪ್ರತಿಯೊಬ್ಬರ ಹಣ ಉಳಿತಾಯದ ಕಾರ್ಯಕ್ರಮದಲ್ಲಿಯೂ ವಾರ್ಷಿಕ ಪ್ರವಾಸಕ್ಕೇ ಆದ್ಯತೆ.

ಅಲ್ಲಿನ ಬೀಚುಗಳು ಜೀವ ತಾಳುವುದೂ ಬೇಸಗೆಯಲ್ಲಿಯೇ. ನಮ್ಮೂರ ಜಾತ್ರೆಯ ಸಂದಣಿಯಂತೆ ಜನ ಸೇರುತ್ತಾರೆ. ಆ ಚಿಕ್ಕ ದೇಶದ ಸುತ್ತಲೂ ಸಾಗರಗಳೇ. ಹಾಗಾಗಿ ನೀವು ರಸ್ತೆ ಹಿಡಿದು ಯಾವ ದಿಕ್ಕಿಗೆ ಹೋದರೂ ಐವತ್ತು ನೂರು ಮೈಲಿಗಳೊಳಗೆ ಸಮುದ್ರದ ದಂಡೆ ಸಿಕ್ಕಿಯೇ ಸಿಗುತ್ತದೆ. ಉತ್ತರ ಭಾಗಕ್ಕಂತೂ ಯಾರೂ ಹೋಗಲಾರರು. ಯಾಕೆಂದರೆ ಧ್ರುವ ಪ್ರದೇಶಕ್ಕೆ ಹತ್ತಿರವಿರುವ ಆ ಭಾಗದಲ್ಲಿ ಜನರ ವಾಸ್ತವ್ಯವೇ ಇಲ್ಲ ಮತ್ತು ನಾಗರಿಕ ಸೌಲಭ್ಯಗಳೂ ಇಲ್ಲ. ಹಾಗಾಗಿ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿನ ಆ ಬೀಚುಗಳನ್ನು ತೀವ್ರ ಕಾಳಜಿಯಿಂದ ಅಭಿವೃದ್ಧಿಗೊಳಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡಿರುತ್ತಾರೆ.

ಅಂತಹ ಬೀಚುಗಳಲ್ಲಿ ಸಮುದ್ರದ ಒಳಗೇ ಹೋಗಲು ಸಾಧ್ಯವಾಗುವಂತೆ ಸೇತುವೆಗಳು. pyre ಎಂದು ಕರೆಯುವ ಎರಡು ಮೂರು ಕಿಲೋಮೀಟರುಗಳಷ್ಟು ಉದ್ದದ ಆ ಸೇತುವೆಯ ತುದಿಯಲ್ಲಿಯೂ ಎಕ್ರೆಗಳಷ್ಟು ವಿಸ್ತಾರದ ವೃತ್ತಾಕಾರದ ಮನರಂಜನಾ ಕೇಂದ್ರ. ದಡದಿಂದ ಇಂತಹ ಸೇತುವೆಗಳ ತುದಿಗೆ ಹೋಗಲು ಚಿಕ್ಕ ಚಿಕ್ಕ ಟ್ರೈನುಗಳ ವ್ಯವಸ್ಥೆ. ನೀರಿನ ಮೇಲೆ ಭದ್ರವಾಗಿ ಕಟ್ಟಿದ ಅಟ್ಟಳಿಗೆಗಳ ಮೇಲೆ ಆಟಗಳ ಸೌಲಭ್ಯದ ಜೊತೆಗೆ ರೆಸ್ಟಾರೆಂಟುಗಳು ಶಾಪಿಂಗ್ ಮಾಲುಗಳು ಎಲ್ಲ. ಗಂಟೆಕಟ್ಟಲೆ ಕಳೆಯಲು ಬೇಕಾಗುವ ಸಾಮಗ್ರಿ. ಮನರಂಜನೆಯಲ್ಲಿ ಮಕ್ಕಳಿಗೇ ಆದ್ಯತೆ. ಮತ್ತೆ ಮಕ್ಕಳ ಜತೆ ಬರುವ ಹಿರಿಯರ ಮನ ಗೆಲ್ಲುವ ಪ್ರಯತ್ನ. ವಯಸ್ಸಾದವರು ಸಮಯ ಕಳೆಯಲು ಸಹಾಯಕವಾಗುವಂತಹ ಸೌಕರ್ಯಗಳು. ಪ್ರತಿ ಕಡೆಯಲ್ಲಿಯೂ ಇದೇ ತೆರನ ವೈವಿಧ್ಯಮಯ ಆಕರ್ಷಣೆಗಳು.

ಈ ಬೀಚು ಪೈರು ಮತ್ತು ಥೀಮ್ ಪಾರ್ಕುಗಳಲ್ಲಿ ಒಂದು ದಿನವೇನು ದಿನಗಳನ್ನೇ ಕಳೆಯಬಹುದು ನಿಮಗೆ ಮನಸಿದ್ದರೆ. ವಾರಾಂತ್ಯ ಕಳೆಯಲು ಬಂದವರು ಭಾನುವಾರ ಸಂಜೆಯ ಹೊತ್ತು ಈ ವಾರ ಮುಗಿಯಿತಲ್ಲ ಇನ್ನು ಮಾರನೆ ದಿನ ಬೇಗ ಎದ್ದು ಕೆಲಸಕ್ಕೆ ಹಾಜರಾಗಬೇಕಲ್ಲ ಎಂದು ಜೋಲು ಮೋರೆ ಹಾಕಿಕೊಂಡು ತಿರುಗಿ ಹೋಗಲು ತಯಾರಿ ಮಾಡುವ ಮಂದಿ.

ವಿಶೇಷ ಆಕರ್ಷಣೆಯೆಂದರೆ ಮಾನವನ ಮೂಲಭೂತ ಪ್ರವರ್ತಿಯಾದ ಜೂಜಾಡುವುದಕ್ಕೆ ವಿಪುಲ ಅವಕಾಶ. ನಾಣ್ಯಗಳನ್ನು ತೂರಿಸಿ ನಾಣ್ಯಗಳ ರಾಶಿಯನ್ನೇ ಗೆಲ್ಲಬಹುದಾದಂತಹ ಆಟಗಳಿಂದ ಹಿಡಿದು ತೀರ ಸೂಕ್ಷ್ಮವಾದ ಕಂಪ್ಯೂಟರ್ ಆಟಗಳ ವರೆಗೆ. ದಿನವೊಂದಕ್ಕೆ ಮಿಲಿಯಗಟ್ಟಲೆ ಪೌಂಡುಗಳ ವ್ಯವಹಾರ ಪೋಲೀಸರದ್ದೋ ಇತರೆ ಸೆಕ್ಯೂರಿಟ್ಯವರದ್ದೋ ಸುಳಿವೇ ಕಾಣದು.ಏನಿದ್ದರೂ ಅಲ್ಲಲ್ಲಿ ಹೂತಿಟ್ಟ ಕ್ಯಾಮರಾದ ಕಣ್ಣುಗಳಷ್ಟೆ. ನಿಮಗೆಲ್ಲಿಯಾದರೂ ಸಮಸ್ಯೆಯುಂಟದರೆ ಅಲ್ಲೊಂದು ಮೂಲೆಯಲ್ಲಿ ಕುಳಿತಿರುವ ಚಿಲ್ಲರೆ ನಾಣ್ಯಗಳು ಕಡಿಮೆ ಬಿದ್ದರೆ ಒದಗಿಸುವ ಹೆಂಗುಸೇ ಸಹಾಯ ಮಾಡಿಯಾಳು. ಮತ್ತೆಲ್ಲ ಸುಸೂತ್ರವಾಗಿ ಅವಷ್ಟಕ್ಕೆ ಅವೇ ನಡೆಯುತ್ತವೆ. ಜೂಜುಗಳಲ್ಲಿ ಕೈ ಖಾಲಿ ಮಾಡಿಕೊಂಡ ಮಂದಿ ತಣ್ಣಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ ಮತ್ತು ತಲೆಯಲ್ಲಿಯಾದರೂ ಬಿಸಿಯಾಗಿದ್ದರೆ ತಣ್ಣಗೆ ಮಾಡುವ ಸಲುವಾಗಿ ಬಿಯರ್ ಹೀರಲು ಧಾವಿಸುತ್ತಾರೆ.

ಅಲ್ಲಿ ಜೂಜಾಡುವುದನ್ನು ನಮ್ಮಲ್ಲಿಯ ಹಾಗೆ ಕದ್ದು ಮುಚ್ಚಿ ಆಡುವುದಿಲ್ಲ. ಅದೊಂದು ಹೀನ ಕ್ರಿಯೆಯೆಂದು ಪರಿಗಣಿಸುವುದೂ ಇಲ್ಲ. ಅದನ್ನೊಂದು ಆಟ ಎಂದೇ ಆಡುತ್ತಾರೆ. ಸ್ಪೋಟ್ರ್ಸ್ ಎಂದು ಪರಿಗಣಿಸುತ್ತಾರೆ. ನಾವಲ್ಲಿದ್ದ ಕಾಲದಲ್ಲಿ ಬಹಳಷ್ಟು ಜನಪ್ರಿಯವಾಗಿದ್ದ ಆನ್-ಲೈನ್ ಲಾಟರಿಯನ್ನು ಲಾಟರಿ ಆಡುವುದು ಎನ್ನುತ್ತಿದ್ದರೇ ವಿನಃ ಅದನ್ನೊಂದು ಕೆಳದರ್ಜೆಯ ಜೂಜು ಎಂದು ಪರಿಗಣಿಸುತ್ತಿರಲಿಲ್ಲ.

ಗಂಟೆಗಳ ಕಾಲ ಕಳೆಯಲು ಬೇಕಾಗುವಷ್ಟು ಇರುವ ವಿವಿಧ ಸೌಲಭ್ಯಗಳನ್ನು ಮತ್ತು ಮನರಂಜನೆಯ ಮಾಧ್ಯಮಗಳನ್ನು ಬಳಸಿಕೊಂಡು ಸುಸ್ತಾಯಿತೆನ್ನಿಸಿದರೆ ಮತ್ತೆ ಅದೇ ಟ್ರೈನಿನಲ್ಲಿ ವಾಪಾಸು. ಬೀಚಿನಲ್ಲಿ ಮೋಜು ಮಾಡಲು.

ಲವರ್ಸ್ ಬೀಚು, ನ್ಯೂಡ್ ಬೀಚ್‍ಗಳೆಂದು ಆ ಬೀಚುಗಳಲ್ಲಿನ ಪ್ರದೇಶವನ್ನು ಭಾಗ ಮಾಡಿರುತ್ತಾರೆ. ಅಂತಹ ಅಗತ್ಯವಿರುವವರು ಆಯಾ ಪ್ರದೇಶಗಳನ್ನೇ ಹುಡುಕಿಕೊಂಡು ಹೋಗುತ್ತಾರೆ. ಕುತೂಹಲದಿಂದಂತೂ ಯಾರೂ ಹೋಗುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಬೀಚಿನ ಮರಳಿನ ಮೇಲೆ ತಮ್ಮ ಬಟ್ಟೆಯನ್ನೆಲ್ಲ ಕಳಚಿ ಎಸೆದು ಅಂಗತ್ತನಾಗಿ ಮಲಗುತ್ತಾರೆ. ಹಾಗೆ ಮಲಗಿದವರು ಗಂಡಸರೇ ಇರಲಿ ಹೆಂಗಸರೇ ಇರಲಿ ಯಾರೂ ಅವರತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ತಮಗೂ ಹಾಗಿರಬೇಕೆನಿಸಿದರೆ ತಾವೂ ಬಟ್ಟೆ ಬಿಚ್ಚಿ ಮಲಗಿಯಾರು ಅಷ್ಟೆ. ಅಂತಹ ಜಾಗದಲ್ಲಿ ಯಾರಾದರೂ ಕುತೂಹಲದಿಂದ ಅಡ್ಡಾಡುತ್ತಿದ್ದರೆ ಅಥವಾ ವಿಚಿತ್ರವಾಗಿ ಆಡುತ್ತಿದ್ದರೆ ಅವರು ಯಾರಾದರೂ ಏಶಿಯನ್ನರೆ ಇದ್ದಿರುತ್ತಾರೆ ಅಷ್ಟೆ.

ಸುಳ್ಳು ಸಾಮಾಜಿಕ ಮೌಲ್ಯಗಳನ್ನು ಸೃಷ್ಟಿಸಿಕೊಂಡು ಮೋಸ ಮಾಡಿಕೊಳ್ಳುವ ಸಂಸ್ಕೃತಿಯ ಗೋಡೆಯನ್ನು ಕಟ್ಟಿಕೊಂಡಿರುವ ಆಷಾಢಭೂತಿಗಳಾದ ನಮಗೆ ಎಲ್ಲವೂ ವಿಸ್ಮಯವೇ. ಆದರೆ ಅಲ್ಲಿ ಮಲಗಿರುವವರು ಮಾತ್ರ ನಿರ್ಲಿಪ್ತರು. ತಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎನ್ನುವುದನ್ನು ಗಣನೆಗೇ ತೆಗೆದು ಕೊಳ್ಳುವುದಿಲ್ಲ.

ನಮ್ಮ ದೇಶದ ಸುತ್ತ ಇರುವಷ್ಟು ಉದ್ದದ ಬೀಚು ಪ್ರಪಂಚದ ಯಾವ ದೇಶದಲ್ಲೂ ಇಲ್ಲ. ಇಲ್ಲಿ ಲವರ್ಸ್ ಬೀಚು, ನ್ಯೂಡ್ ಬೀಚು ಮಾಡುವುದು ಬೇಡ. ಕನಿಷ್ಟ ಜನ ಸಂಜೆಯ ಹೊತ್ತು ಕಳೆಯಲು ಅನುಕೂಲವಾಗುವಂತೆ ರಸ್ತೆಯ ಅನುಕೂಲತೆಗಳು, ಕುಳಿತುಕೊಂಡು ಹೊಸಗಾಳಿಯನ್ನು ಸೇವಿಸಲು ಒಂದಿಷ್ಟು ಅವಕಾಶ ಮಾಡಿಕೊಟ್ಟರೆ ಅದೇ ಸಾಕು. ಎಲ್ಲ ಬೀಚುಗಳನ್ನು ಸೇರಿಸುವ ಒಂದು ವ್ಯವಸ್ಥೆ. ಕೇಳಬೇಡಿ. ಬೀಚುಗಳ ಪಕ್ಕದಲ್ಲಿ ಕಾಲು ಹಾಕಲಾರದಷ್ಟು ಹೊಲಸು. ಜನ ಸೇರುವ ಜಾಗದಲ್ಲಿ ಆ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ತಮ್ಮಷ್ಟಕ್ಕೆ ತಾವೇ ಕಳ್ಳರಾಗಿ ಪರಿವರ್ತಿತರಾಗಬಲ್ಲ ಭಿಕ್ಷುಕರು. ಹತ್ತು ನಿಮಿಷದಲ್ಲಿಯೇ ಉಸಿರುಕಟ್ಟಿ ಹೊರಗೋಡಿಬರಬೇಕು. ಆಹಾ! ನಾವು ಈ ದೊಡ್ಡ ದೇಶದ ದೊಡ್ಡ ಜನರು!

। ಮುಕ್ತಾಯ ।

‍ಲೇಖಕರು Avadhi

March 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: