ಪಿ ಪಿ ಉಪಾಧ್ಯ ಅಂಕಣ- ಕೈಕೋಚಿನ ಕೈ ತೋಟ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

11

ಕೈಕೋಚಿನ ಕೈ ತೋಟ

ಇಂಗ್ಲೆಂಡಿನಲ್ಲಿ ಆಫೀಸಿನವರು ಕೊಟ್ಟಿದ್ದ ಮನೆ ಸಾಕಷ್ಟು ದೊಡ್ಡದಿತ್ತು. ಬಾಡಿಗೆ ಕೊಡುವುದಾಗಿದ್ದರೆ ಸಂಬಳದ ಮುಕ್ಕಾಲು ಪಾಲು ಅದಕ್ಕೇ ಹೋಗುತ್ತಿತ್ತೋ ಏನೋ. ಅಷ್ಟು ದೊಡ್ಡ ಮನೆ. ಜತೆಗೆ ಹಿಂದೆ ಮತ್ತು ಮುಂದೆ ಧಂಡಿಯಾದ ಜಾಗವೂ ಇತ್ತು. ಅಷ್ಟಿದ್ದೂ ಅಮೆರಿಕಾದಿಂದ ಬಂದು ನಮ್ಮ ಅತಿಥಿಗಳಾಗಿ ಉಳಿದು ಮೂರು ದಿನಗಳ ಕಾಲ ನಮ್ಮ ಉಪಚಾರವನ್ನು ಅನುಭವಿಸಿದ ಗಂಡ ಹೆಂಡಿರಿಬ್ಬರು ವಾಪಾಸು ಹೋಗುವಾಗ ಅಮೇರಿಕದಲ್ಲಿ ಇಂತಹ ಮನೆಗಳಿಗೆ ಕಂಟ್ರೀ ಹೌಸ್ ಎನ್ನುತ್ತಾರೆಂದೂ ತಮ್ಮ ಅಲ್ಲಿಯ ಮನೆಯ ವಿಸ್ತಾರ ಮತ್ತು ಮೊವ್ ಮಾಡಲು ಟ್ರಾಕ್ಟರ್ ಬಳಸಬೇಕಾದಷ್ಟು ದೊಡ್ಡದಾದ ಮನೆಯ ಹಿಂದಿನ ಲಾನ್ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತ ಆ ಮನೆಯೆದುರು ಇದೊಂದು ಮನೆಯೇ ಅಲ್ಲವೇನೋ ಎನ್ನುವಂತೆ ಮಾತಾಡಿದ್ದರು. ಮೂರು ದಿನಗಳ ಕಾಲ ಪುಕ್ಕಟೆಯಾಗಿ ನಮ್ಮಲ್ಲಿದ್ದು ಪುಷ್ಕಳವಾಗಿ ನಾವು ಬಡಿಸಿದ್ದನ್ನು ಕೇಳಿ ಕೇಳಿ ಹಾಕಿಸಿಕೊಂಡು ಹೊಡೆದಿದ್ದ ಅವರು ನಮ್ಮ ಸಂಬಂಧಿಕರೂ ಅಲ್ಲ. ಕೊನೆಯ ಪಕ್ಷ ಪರಿಚಯದವರೂ ಅಲ್ಲ. ನನ್ನ ಸರ್ವೀಸಿನಲ್ಲಿಯೇ ನಾನು ನೋಡಿರದ ನಮ್ಮ ನಿವೃತ್ತ ಹಿರಿಯ ಅಧಿಕಾರಿಗಳೊಬ್ಬರ ಮಗ ಮತ್ತು ಸೊಸೆ ಅವರು!

ಅವರ ಹೀಗಳೆಯುವಿಕೆಯ ಹೊರತಾಗಿಯೂ ನಮಗೆ ತೀರ ದೊಡ್ದದಾಗಿ ಕಾಣುತ್ತಿದ್ದ ಆ ಜಾಗವನ್ನು ಹಾಗೆಯೇ ಬಿಡಲು ಮನಸ್ಸು ಬರಲಿಲ್ಲ. ಆ ಮನೆಗೆ ಕಾಲಿಟ್ಟ ದಿನದಿಂದಲೇ ಆ ಜಾಗ ಮನಸಿನಲ್ಲಿ ಕುಣಿಯುತ್ತಿತ್ತು. ಮೊದಲ ವರ್ಷ ಊರಿಗೆ, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದರಲ್ಲಿಯೇ ಚಳಿಗಾಲ ಕಾಲಿಟ್ಟಿತ್ತಾದ್ದರಿಂದ ನಮ್ಮ ಉತ್ಸಾಹವನ್ನು ತಡೆದಿಟ್ಟುಕೊಳ್ಳಬೇಕಾಯ್ತು.

ಚಳಿಗಾಲ ಮತ್ತು ಅದರ ಹಿಂದಿನ ಮೂರು ತಿಂಗಳು ಆ ನೆಲದಲ್ಲಿ ಏನೂ ಬೆಳೆಯಲಾರದು. ಆದರೆ ಮುಂದೆ ನಮ್ಮ ಗಮನಕ್ಕೆ ಬಂದ ಒಂದು ವಿಷಯವೆಂದರೆ ಉಳಿದ ಆರು ತಿಂಗಳ ಅವಧಿಯಲ್ಲಿಯೇ ಅಲ್ಲಿನ ಗಿಡ ಮರಗಳು ನಮ್ಮಲ್ಲಿ ವರ್ಷವಿಡೀ ಬೆಳೆಯುವಷ್ಟು ತೀವ್ರವಾಗಿ ಮತ್ತು ಅಗಾಧವಾಗಿ ಬೆಳೆಯುತ್ತಿದ್ದುದು. ಪ್ರಕೃತಿ ತೀರಾ ವಿಚಿತ್ರ!


ಮನೆಯ ಹಿಂದುಗಡೆ ಮತ್ತು ಮುಂದುಗಡೆ ಒಂದೊಂದು ತೆಂಗಿನ ಸಸಿಯನ್ನು ನೆಡಬೇಕೆನ್ನುವ ನನ್ನ ಆಸೆ ಆಸೆಯಾಗಿಯೇ ಉಳಿದದ್ದು ಎರಡು ಕಾರಣಗಳಿಂದಾಗಿ. ಮೊದಲನೆಯದು ನಮ್ಮ ಉತ್ಸಾಹ ಮೇರೆ ಮೀರಿ ಗಿಡಕ್ಕಾಗಿ ಹುಡುಕಾಡಿದಾಗ ಎಲ್ಲಿಯೂ ಗಿಡ ಸಿಗದೇ ಹೋದದ್ದು. ಮತ್ತೆ ಎರಡನೆಯದಾಗಿ ಕೊನೆಗೊಮ್ಮೆ ಬಹಳಷ್ಟು ಕಷ್ಟ ಪಟ್ಟು ಹುಡುಕಿದಾಗ ಒಂದು ಮೂಲೆಯಲ್ಲಿ ಸಿಕ್ಕಿದ ಗಿಡದ ಬೆಲೆ ನಮ್ಮನ್ನು ಹೆದರಿಸಿದ್ದು. ಒಂದು ತೆಂಗಿನ ಗಿಡದ ಬೆಲೆ ಮೂವತ್ತು ಪೌಂಡುಗಳು.

ಮೊದಲಿನಿಂದಲೇ ನನ್ನನ್ನು ಈ ಸಾಹಸಕ್ಕೆ ಇಳಿಯದಂತೆ ಹಿಂದಕ್ಕೆಳೆಯುತ್ತಿದ್ದ ನನ್ನ ಹೆಂಡತಿಯೂ ತನ್ನ ಶ್ರುತಿ ಸೇರಿಸಿದ್ದಳು. ಹಾಗಾಗಿ ಬಹಳಷ್ಟು ದಿನಗಳ ಪ್ರಯತ್ನದಿಂದ ಅಗೆದಗೆದು ರೆಡಿಮಾಡಿ ಇಟ್ಟ ಗುಂಡಿ ಹಾಗೆಯೇ ಉಳಿದಿತ್ತು. `ಯಾರು ಯಾರೋ ತಿನ್ನುವುದಕ್ಕೆ ನಾವು ಯಾಕೆ ಕಷ್ಟ ಪಡಬೇಕು’ ಎನ್ನುವುದು ನನ್ನ ಹೆಂಡತಿಯ ರಾಗ. ಹಳ್ಳಿಯಲ್ಲಿಯೇ ಹುಟ್ಟಿ ಗಿಡ ಮರಗಳೊಡನೆ ಮಾತನಾಡುತ್ತ ಜಗಳವಾಡುತ್ತ ಬೆಳೆದ ನನಗೆ ಬೆಂಗಳೂರಿನಂತಹ ಪೇಟೆಯಲ್ಲಿ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿನ ಕಾಂಕ್ರೀಟು ಮನೆಗಳನ್ನೇ ಪ್ರಪಂಚವೆಂದು ತಿಳಿದಿದ್ದ ಅವಳ ಮಾತು ನನಗೆ ವಿಚಿತ್ರವಾಗಿ ಕಂಡಿತ್ತು. “ನಾಲ್ಕು ವರ್ಷ ಇದ್ದು ಹೋಗುವ ನಮಗೆ ಅದೆಲ್ಲಾ ಯಾಕೆ” ಇದು ಅವಳ ಪ್ರಶ್ನೆ. “ನಾವು ನೆಟ್ಟ ಗಿಡದ ಫಲವನ್ನು ನಾವೇ ಉಣ್ಣಬೇಕೆಂಬ ನಿಯಮವಿದ್ದಿದ್ದರೆ ನಾವು ಯಾರೂ ಊಟ ಮಾಡುವ ಹಾಗಿರಲಿಲ್ಲ ಇವತ್ತು ಅಲ್ಲವೆ” ಎನ್ನುವ ನನ್ನ ಮಾತು ಅವಳ ಕಿವಿ ಮೇಲೆ ಬಿದ್ದಿರಲೇ ಇಲ್ಲ.

ಬದಲಿಗೆ ಹೊಂಡ ತೆಗೆಯುತ್ತಿದ್ದ ನನ್ನ ಮೈಯಲ್ಲಿ ಆ ಚಳಿಯಲ್ಲೂ ಬೆವರು ಸುರಿಯುವುದನ್ನು ಕಂಡ ಆಕೆ ತನ್ನ ಅಭಿಪ್ರಾಯಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದಳು. ಹಾಗೆಂದು ಅಷ್ಟಕ್ಕೇ ಕೈ ಬಿಡುವವನೇ ನಾನು! ಸೇಬು ಗಿಡಗಳನ್ನು ನೆಡುವ ಎಂದು ಖರ್ಚು ಮಾಡಿ ಪ್ರತಿಯೊಂದಕ್ಕೆ ನಾಲ್ಕೈದು ಪೌಂಡುಗಳನ್ನು ಕೊಟ್ಟು ಮೂರು ಸೇಬು ಗಿಡಗಳನ್ನು ತಂದು ನೆಟ್ಟಿದ್ದೆ. ನಾನೇ ಎಲ್ಲಿಯಾದರೂ ತಪ್ಪಿದ್ದೆನೋ ಅಥವಾ ಕಲ್ಲು ನೆಲ ಕೈ ಕೊಟ್ಟಿತೋ ಅಂತೂ ಆ ಗಿಡಗಳು ಚಿಗುರಲೇ ಇಲ್ಲ.

ನಾನು ಪಡುತ್ತಿದ್ದ ಕಷ್ಟವನ್ನು ನೋಡಿ ಮನೆಯಾಕೆ ಪುನಹ ಎಂದಿದ್ದಳು. `ಯಾಕಿದೆಲ್ಲ ಕಷ್ಟ. ನಮ್ಮ ಅವಧಿ ಮುಗಿಸಿ ಸುಮ್ಮನೆ ಹೋಗಿ ಬಿಡುವ’ ಎಂದು. ಆದರೂ ನನ್ನಲ್ಲಿನ ಕೃಷಿಕ ಸುಮ್ಮನಿರಬೇಕಲ್ಲ. ತರಕಾರಿ ತೋಟ ಮಾಡಲು ಹೊರಟಿದ್ದೆ. ಅದು ಮನೆಯ ಹಿಂದಿನ ಜಾಗದಲ್ಲಿ. ಸೊಂಟದೆತ್ತರಕ್ಕೆ ಹುಲುಸಾಗಿ ಬೆಳೆದ ಹುಲ್ಲು ಮತ್ತು ಮುಳ್ಳುಗಳನ್ನು ಕತ್ತರಿಸಿ ನೆಲವನ್ನು ಒಂದು ರೂಪಕ್ಕೆ ತರಲೇ ಮೂರು ನಾಲ್ಕು ವಾರಾಂತ್ಯಗಳು ಬೇಕಾಗಿದ್ದುವು. ಮತ್ತೆ ಇದ್ದ ಚಿಕ್ಕ ಹಾರೆಯನ್ನೇ ಉಪಯೋಗಿಸಿ ನೆಲ ಹದ ಮಾಡಲು ಇನ್ನೆರಡು ವಾರಾಂತ್ಯ. ಹೆಂಡತಿ ಮಕ್ಕಳು ಮನೆಯ ಹಾಲಿನ ಅಗಲವಾದ patio ಬಾಗಿಲನ್ನು ತೆರೆದು ಅರೆ ಚಳಿ ಅರೆ ಸೆಖೆಯ ಆನಂದವನ್ನು ಸವಿಯುತ್ತ `ನಿಮ್ಮ ಪಾತಿಗಳು ರೆಡಿಯಾಗುವಾಗ ಡಿಸೆಂಬರ್ ಬರುತ್ತದೆ.

ಮತ್ತೆ ಹಿಮದ ಮೇಲೆಯೇ ನಿಮ್ಮ ತೋಟ’ ಎಂದು ತಮಾಷೆ ಮಾಡುತ್ತಿದ್ದರು. ನನ್ನಲ್ಲಿನ ಹಠ ಹೆಚ್ಚಾಗುತ್ತಿತ್ತು. ಅದೇ ಹಠದಲ್ಲಿ ವರಾಂತ್ಯಗಳನ್ನಷ್ಟೇ ನಂಬಿಕೊಂಡರೆ ಕೆಲಸವಾಗಲಿಕ್ಕಿಲ್ಲವೆಂದುಕೊಂಡು ಸಂಜೆ ಆಫೀಸಿನಿಂದ ಬಂದವನೇ ಗುದ್ದಲಿ ಮತ್ತು ಹಾರೆ ಹಿಡಿದು ಹೊರಟದ್ದೂ ಇತ್ತು. ಹಾಗೆ ನೆಲ ರೆಡಿಯಾದಾಗ ಬೀಜದ ತಪಾಸಣೆ! ಏನು ಬಿತ್ತ ಬೇಕೆನ್ನುವ ಜಿಜ್ಞಾಸೆ. ಹೆಂಡತಿ ಮಕ್ಕಳು ಖಂಡಿತ ನನ್ನ ನೆರವಿಗೆ ಬರಲಾರರು. ನೆಲಗಡಲೆ ನೆಲದ ಮೇಲೆ ಮತ್ತು ಬೀನ್ಸ್ ನೆಲದಡಿಯಲ್ಲಿ ಬೆಳೆಯುತ್ತವೆ ಎನ್ನುವಷ್ಟು ಕೃಷಿ ಜ್ಞಾನವಿದ್ದ ಅವರ ಸಲಹೆ ಸಿಕ್ಕಿದರೂ ನನಗಾಗದು. ಟೊಮೆಟೋ, ಬದನೆ, ಬೆಂಡೆಯಂತಹ ಶ್ರೇಷ್ಠ ತರಕಾರಿ ಪ್ರಪಂಚದಲ್ಲಿಯೇ ಬೇರೆ ಇಲ್ಲ ಎಂದು ದೃಢವಾಗಿ ನಂಬಿದ್ದ ನನಗೆ ಬೇರೆ ಯಾವುದೂ ಒಪ್ಪಿಗೆಯಾಗದು. ಹಾಗಂತ ಆ ನೆಲಕ್ಕೆ ಒಗ್ಗಬೇಕಲ್ಲ ಎಂದು ಕಾಲಿ ಫ್ಲವರ್ ಬೀಟ್ ರೂಟ್ ಮತ್ತು ಸ್ಪಿನಾಚ್ ತಂದು ಹಾಕಿದ್ದೆ. ಜೊತೆಯಲ್ಲಿಯೇ ಟೊಮ್ಯಾಟೋ.

ಬಿತ್ತಿದ ಬೀಜಗಳು ಒಮ್ಮೆ ಮೊಳಕೆ ಬಂದು ಬಲಿಯುತ್ತಿದ್ದ ರೀತಿ ನೋಡಿ ನಮಗೇ ಆಶ್ಚರ್ಯ. ಹಾಗೆಯೇ ಪ್ರತಿ ಹೊಸ ಚಿಗುರು ಬಂದಾಗಲೂ ಸಂಭ್ರಮ. ಸ್ಪೀನಿಚ್ ಸೊಪ್ಪು ಇದ್ದುದರಲ್ಲಿಯೆ ಧಂಡಿಯಾಗಿ ಬೆಳೆದಿದ್ದನ್ನು ನಾವು ಬಳಸಿದ್ದೇ ಅಲ್ಲದೆ ಬೇರೆ ತಿಳಿದವರಿಗೆಲ್ಲ ಕೊಟ್ಟಿದ್ದೆವು. ಬೀಟ್ ರೂಟ್ ಅಂತೂ ಬೆಳೆದದ್ದೆಲ್ಲಾ ಬೆರೆಯವರಿಗೇ. ಜತೆ ಜತೆಯಲ್ಲಿಯೇ ಬೆಳೆದ ಟೊಮ್ಯಾಟೋ ಮಾತ್ರ ನಮಗೇ. ಆ ಮಣ್ಣಿನಲ್ಲಿ ಎಂತಹ ಸತ್ವ ಇದೆಯೆಂಬುದು ನಮಗೆ ಅರಿವಾದದ್ದು ಹೊಗೆ ಸೊಪ್ಪಿನ ಗಾತ್ರಕ್ಕೆ ಸ್ಪೀನಿಚ್ ಎಲೆಗಳು ಬೆಳೆದಾಗ. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಜರ್ಮನ್ ಮಹಿಳೆಯಿದ್ದಳು. ಆಕೆಯ ಗಂಡ ಇಂಡಿಯನ್. ಅವ ತನ್ನ ದೇಶದಲ್ಲಿ ಬೆಳೆಯುತ್ತಿದ್ದ ಹೊಗೆ ಸೊಪ್ಪಿನ ಗಿಡಗಳನ್ನು ನೋಡಿದ್ದಿರಬೇಕು. ಮತ್ತು ನಾವು ಇಂಡಿಯನ್ನರಾದ್ದರಿಂದ ಅದನ್ನೇ ಇಲ್ಲಿಯೂ ಬೆಳೆದಿದ್ದೇವೆ ಎಂದುಕೊಂಡದ್ದನ್ನು ಹೆಂಡತಿಗೂ ಹೇಳಿರಬೇಕು. ಒಂದು ಸಂಜೆ ಗಿಡಗಳಿಗೆ ನೀರು ಹನಿಸುತ್ತಿದ್ದಾಗ ತನ್ನ ಮನೆಯ ಹಿಂದಿನ ಗಾರ್ಡನ್ನಿನಲ್ಲಿ ತಿರುಗುತ್ತಿದ್ದ ಆ ಹೆಂಗಸು ಕುತೂಹಲ ತಡೆಯಲಾರದೆ ಕೇಳಿಯೇ ಬಿಟ್ಟಿದ್ದಳು `ಅದೇನು ಅಷ್ಟು ಚನ್ನಾಗಿ ಬೆಳೆದಿದೆ ನಿಮ್ಮ ತಂಬಾಕು’. ದೇವರ ದಯ ಆಕೆ ಅಫೀಮು ಅನ್ನಲಿಲ್ಲ. ಸಂಶಯದ ಮೇಲೆ ದೂರೂ ಕೊಡಲಿಲ್ಲ. ಒಂದು ವೇಳೆ ದೂರು ಕೊಟ್ಟಿದ್ದರೆ ನಾವು ಜೈಲಿಗೆ ಹೋಗಬೇಕಿತ್ತು.`ಅಲ್ಲ. ಇದು ಸ್ಪೀನಿಚ್’ಎಂದು ಹೇಳಿ ಆಕೆಯನ್ನು ನಂಬಿಸಲು ಒಂದಿಷ್ಟು ಸೊಪ್ಪನ್ನು ಆಕೆಗೂ ಕೊಡಬೇಕಾಯ್ತು.

ಮೊದಲನೇ ವರ್ಷ ನಮ್ಮ ತರಕಾರಿಯ ರುಚಿ ಹತ್ತಿದ ಪ್ರತಿಯೊಬ್ಬರೂ ಮಾರನೇ ವರ್ಷ ತಾವೇ ಕೇಳಲಾರಂಭಿಸಿದ್ದರು `ಈ ಬಾರಿ ಏನು ಹಾಕಿದ್ದೀರಿ. ಮನೆಯಲ್ಲಿಯೇ ಬೆಳೆದದ್ದು ತುಂಬಾ ಚನ್ನಾಗಿರುತ್ತದೆ’. ಹೊಗಳಿಕೆಗೆ ಉಬ್ಬಿದ ನಮ್ಮ ಕಿಚನ್ ಗಾರ್ಡನ್ ದೊಡ್ಡದಾಗ ಹತ್ತಿತ್ತು.
ಬೇಸಗೆಯ ದಿನಗಳಲ್ಲಿ ಸ್ಥಳೀಯ ಆಡಳಿತದವರು ನೀರು ಪೋಲು ಮಾಡಬಾರದೆಂದು `ರನ್ನಿಂಗ್ ವಾಟರ್‍ನಲ್ಲಿ ಕಾರು ತೊಳೆಯಬಾರದು ಪೈಪಿನಲ್ಲಿ ಗಾರ್ಡನ್ನಿಗೆ ನೀರು ಹನಿಸಬಾರದು’ ಎಂದೆಲ್ಲ ನಿಷೇಧವನ್ನು ಹೇರುತ್ತಾರೆ. ಆ ಸಂಬಂಧದಲ್ಲಿ ಘೋಷಣೆಯನ್ನು ಹೊರಡಿಸಿದ ನಂತರವೂ ಯಾರಾದರೂ ಅದನ್ನು ಮುಂದುವರಿಸಿದರೆ ಅದು ಶಿಕ್ಷಾರ್ಹ ಅಪರಾಧ.

ಒಂದು ಬೇಸಗೆಯಲ್ಲಂತೂ ಈ ತೆರನ ತಡೆಯನ್ನು ಅವರು ಘೋಷಿಸಿದಾಗ ನಮ್ಮ ಟೊಮ್ಯಾಟೊ ಹೂ ಬಿಡುವ ಸಮಯ. ಸ್ಪೀನಿಚ್ ತಂಬಾಕಿನ ಗಾತ್ರದ ಎಲೆಗಳನ್ನು ಬಿಡುತ್ತಿದ್ದ ಕಾಲ. ನೀರು ಹನಿಸದಿದ್ದರೆ ಎಲ್ಲ ವ್ಯರ್ಥ. ಅದಕ್ಕಿಂತ ಹೆಚ್ಚಾಗಿ ಅಷ್ಟು ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸಿದ ಗಿಡಗಳು ಬಾಡುವುದನ್ನು ನೋಡುವುದೇ! ತಪ್ಪೆಂದು ಗೊತ್ತಿದ್ದೂ ರಾತ್ರಿ ಹತ್ತಕ್ಕೆ ಕತ್ತಲಾಗುವವರೆಗೆ ಕಾದು ಮತ್ತೆ ನೀರು ಬಿಟ್ಟದ್ದುಂಟು. ಕದ್ದು ಬಿಟ್ಟ ನೀರಿನಿಂದ ಬೆಳೆದ ತರಕಾರಿಯ ರುಚಿ ಇನ್ನೂ ಹೆಚ್ಚು.

ವಿಮಾನದ ಮೂಲಕ ಆಫ್ರಿಕಾದ ದೇಶಗಳಿಂದ ಮತ್ತು ಮೆಕ್ಸಿಕೋದಿಂದ ಅಲ್ಲಿಗೆ ಬರುತ್ತಿದ್ದ ತರಕಾರಿಗಳು ಫ್ರೆಷ್…ಮತ್ತು ಅಗ್ಗವೂ ಕೂಡ. ಆದರೆ ಗೆಳೆಯರು ಹೇಳಿದಂತೆ (ಇನ್ನೊಬ್ಬರ) ಮನೆಯಲ್ಲಿ ಬೆಳೆದ ತರಕಾರಿಯ ರುಚಿ ಅದಕ್ಕೆ ಬಂದೀತೇ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

February 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: