ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡಿನಲ್ಲಿ ಹೇರ್ ಕಟ್ಟಿಂಗ್ ಮಜ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

10

ಇಂಗ್ಲೆಂಡಿನಲ್ಲಿ ಹೇರ್ ಕಟ್ಟಿಂಗ್‍ನ ಮಜ

ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯಲ್ಲಿ ಮನೆ ಮನೆಗೆ ಕ್ಷೌರ ಮಾಡಲು ಒಬ್ಬ ಮುದುಕ ಬರುತ್ತಿದ್ದ. ನಾವು ಹುಡುಗರಿದ್ದಾಗಲೂ ಮನೆಯವರ ಒತ್ತಾಯದ ಹೊರತಾಗಿಯೂ ಅವನಿಗೆ ತಲೆ ಕೊಟ್ಟವರೇ ಅಲ್ಲ. ಬಿಸಿಲಾದರೂ ಮಳೆಯಾದರೂ ಒಂದೂವರೆ ಮೈಲು ದೂರದ ಪೇಟೆಗೆ ನಡೆದುಕೊಂಡೇ ಹೋಗಿ ಅಲ್ಲಿ `ಹೇರ್ ಕಟ್ಟಿಂಗ್ ಸೆಲೂನ್’ ಎಂದು ಬೋರ್ಡ್ ಹಾಕಿಕೊಂಡ ಅಂಗಡಿಗೇ ಹೋಗಬೇಕು. ಅಲ್ಲಿ ಗರಿ ಗರಿಯಾದ ನೋಟು ಕೊಡುವವರಿಗೆ ಮತ್ತು ದೊಡ್ಡವರಿಗೆ ಮಣೆ ಹಾಕುವ ಚಿಲ್ಲರೆ ಕಾಸು ಜೇಬಿನಲ್ಲಿಟ್ಟುಕೊಂಡು ಬೆರಳುಗಳಲ್ಲಿ ತಿಕ್ಕುತ್ತ ಅದರಲ್ಲಿ ಎಷ್ಟನ್ನು ಉಳಿಸಿ ಹಿಂತಿರುಗುವ ದಾರಿಯಲ್ಲಿ ಮುಂಡಕ್ಕಿ ಉಪ್ಕರಿ ತಿನ್ನಬಹುದೆಂದು ಲೆಕ್ಕಹಾಕುತ್ತಿದ್ದ ನಮ್ಮಂತಹ ಮಕ್ಕಳ ಕಡೆ ಕಣ್ಣೆತ್ತಿಯೂ ನೋಡದ ಆ ಹಜಾಮನ ಕಟಾಕ್ಷ ನಮ್ಮ ಮೇಲೆ ಎಷ್ಟು ಹೊತ್ತಿಗೆ ಬೀಳುತ್ತದೆಯೋ ಎಂದು ಕಾಯುತ್ತ ಕೂಡಬೇಕು.

ನಮ್ಮ ಸರದಿ ಬಂದಾಗ ಯಾವತ್ತೂ ತಿರುಗದ ಆ ತಿರುಗು ಕುರ್ಚಿಯ ಮೇಲೆ ಕುಳಿತು ಸುಖವನ್ನು ಅನುಭವಿಸಬೇಕು. ಒರಟೊರಟಾಗಿ ಕತ್ತನ್ನು ತಿರುಚುತ್ತ ಕಿವಿ ಹಿಡಿದೆಳೆಯುತ್ತ ಬೆಳಿಗ್ಗಿನಿಂದ ದುಡಿದ ತನ್ನೆಲ್ಲ ಆಯಾಸವನ್ನು ನಮ್ಮ ಮೇಲೆ ತೋರಿಸಿಕೊಳ್ಳುತ್ತಿದ್ದ ಆ ಬಿಳಿ ಅಂಗಿಯ ಹಜಾಮನನ್ನು ಸಹಿಸಿಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಯಾವತ್ತೂ ಸಾಣೆ ಹಿಡಿಯದಿದ್ದ ಆ ಮೊಂಡು ಕತ್ತರಿಯಲ್ಲಿ ಬೇಕಾದಲ್ಲಿ ಕತ್ತರಿಸದೆ ಬೇಡವಾದಲ್ಲಿ ಕತ್ತರಿಸುತ್ತ ಮತ್ತೆ ಕೇಳಿದರೆ `ಬಿಡಿ ಬಿಡಿ ಎಂಟು ದಿನ ಬಿಟ್ಟರೆ ಸರಿ ಹೋಗುತ್ತದೆ’ ಎನ್ನುವ ಉಢಾಫೆಯ ಮಾತನ್ನು ಹೇಳುತ್ತ ಯಕ್ಷಗಾನದ ಪದವನ್ನು ನಡು ನಡುವೆ ಗುನುಗುನಿಸುತ್ತಿದ್ದ ಆ ಮುದುಕನ ಕೈಯಿಂದ ತಪ್ಪಿಸಿಕೊಳ್ಳುವುದು ಬೇಕಿತ್ತಷ್ಟೆ. ಅದಕ್ಕಾಗಿ ಎಂತಹ ಬೆಲೆಯನ್ನೂ ತೆರಲು ಸಿದ್ಧವಿದ್ದೆವು ನಾವು.

ಕ್ಷೌರ ಮಾಡಿಸಿಕೊಳ್ಳುವಂತಹ ತೀರಾ ಹಿಂಸೆಯ ಕ್ರಿಯೆಯಲ್ಲಿಯೂ ನಾನು ಆಸಕ್ತಿಯನ್ನು ಉಳಿಸಿಕೊಂಡಿರುವುದು ಎರಡು ಕಾರಣಗಳಿಂದಾಗಿ. ಒಂದು ಮಾತಿಲ್ಲದೆ ಚಕ ಚಕ ಸದ್ದು ಮಾಡುತ್ತ ಹುಲ್ಲು ಕುತ್ತರಿಯಂತಹ ಕೂದಲನ್ನು ಕ್ಷಣ ಮಾತ್ರದಲ್ಲಿ ಕೆಳಗೆ ಬೀಳಿಸುತ್ತಿದ್ದ ಆ ಕತ್ತರಿಯ ಸದ್ದಿನ ಕ್ಷಣಿಕ ಸುಖವನ್ನು ಅರೆ ನಿದ್ದೆ ಅರೆ ಎಚ್ಚರದಲ್ಲಿ ಅನುಭವಿಸುವುದು. ಎರಡನೆಯದಾಗಿ ಅದೆಲ್ಲಿಂದ ಆ ಕಲೆಯನ್ನು ರೂಡಿಸಿಕೊಂಡಿರುತ್ತಾರೋ ಆ ಕ್ಷೌರಿಕರು-ರಸವತ್ತಾಗಿ ಆಡುವ ಅವರ ಮಾತುಗಳನ್ನು ಕೇಳುವುದೇ ಆ ಸುಖ. ಒಂದು ತೆರನ ಎನ್‍ಸೈಕ್ಲೋಪೀಡಿಯಾ ಅವರು.

ಬೆಳಿಗ್ಗೆ ಬಾಗಿಲು ತೆರೆಯುವ ಮುಂಚೆ ಮುಂದೆ ಬಾಗಿಲು ತೆರೆದ ಮೇಲೆ ನಡು ನಡುವೆ ಗಿರಾಕಿಗಳಿಲ್ಲದ ವೇಳೆಯಲ್ಲಿ ತುದಿಯಿಂದ ಬುಡದವರೆಗೆ ಓದುತ್ತಿದ್ದ ಆ ಒಂದಾಣೆಯ ದಿನ ಪತ್ರಿಕೆಯಲ್ಲಿನ ಶಬ್ದ ಶಬ್ದಗಳೂ ಅವರಿಗೆ ಕಂಠ ಪಾಠ. ಜತೆಗೆ ಇವರೇ ಸೇರಿಸುವ ಮಸಾಲೆ ಬೇರೆ. ಮತ್ತೆ ಗಿರಾಕಿಗಳಿಂದ ಕೇಳಿದ ಸುದ್ದಿಗಳಿಗೆ ಬಣ್ಣ ಬಳಿಯುವುದಂತೂ ಇದ್ದೇ ಇದೆಯಲ್ಲ. ಅಂತೂ ಕುರ್ಚಿಯ ಮೇಲೆ ಕುಳಿತವರಿಗೆ ಅರೆ ನಿದ್ದೆ ಅರೆ ಎಚ್ಚರದ ನಡುವೆ ಸುದ್ದಿಯ ರಸದೌತಣ.

ಆದರೆ ಈ ಚಾಳಿ ನಮ್ಮ ಇಂಡಿಯಾದ ಹಜಾಮರಿಗಷ್ಟೇ ಎಂದಿದ್ದ ನನ್ನ ಅನಿಸಿಕೆ ಪೂರ್ತಿಯಾಗಿ ಸುಳ್ಳೆಂದು ಅರಿವಾದದ್ದು ಇಂಗ್ಲೆಂಡಿಗೆ ಹೋದ ನಾನು ಪ್ರಥಮ ಕ್ಷೌರದ ಅನುಭವ ಪಡೆಯಲು ನನ್ನ ಹಿರಿಯ ಮಿತ್ರರೊಬ್ಬರು ತೋರಿಸಿಕೊಟ್ಟ ಹಜಾಮನ ಆಂಗಡಿಗೆ ಹೋದಾಗ. ನಮ್ಮ ಗುಜರಾತಿನಿಂದ ಆಫ್ರಿಕಾದ ದಾರಿಯಾಗಿ ಬಂದವರಲ್ಲಿ ಹಜಾಮನ ಅಂಗಡಿಯನ್ನು ಇಟ್ಟವರೂ ಬಹಳ ಮಂದಿ ಇದ್ದಾರೆ. ಆದರೆ ಹರಿಯಾಣದಿಂದ ಬಂದಿದ್ದ ನನ್ನ ಆ ಹಿರಿಯ ಮಿತ್ರರಿಗೆ ಗುಜರಾತಿಗಳನ್ನು ಕಂಡರಾಗದು. ಅವರೆಲ್ಲ ಅಂತಹ ಕುಶಲ ಕೆಲಸಗಾರರಲ್ಲ ಎನ್ನುವುದು ಇವರ ತೀರ್ಮಾನ. ಹಾಗಾಗಿ ಅವರ ಪರಿಚಯದ ಮೇಲೆ ನಾನು ಹೋಗಿ ಕುಳಿತ ಅಂಗಡಿ ಒಬ್ಬ ಗ್ರೀಕ್‍ನವನದಾಗಿತ್ತು.

ಹೋದದ್ದೇ ತಡ ಅವನು ಕೆಂಚು ಮೀಸೆಯಡಿಯ ಬಾಯಿಯನ್ನು ಅಗಲವಾಗಿ ತೆರೆದು ಸ್ವಾಗತಿಸುತ್ತ ಸೋಫಾದ ಮೇಲೆ ಕುಳ್ಳಿರಿಸಿದ್ದ ಅಷ್ಟೇ ಅಲ್ಲ ಸರತಿಯ ಸಾಲನ್ನು ಮುರಿದು `ನಮ್ಮ ಇಂಡಿಯಾದ ಅತಿಥಿಗೆ ನಮ್ಮ ವಿಶೇಷ ಸೇವೆ’ ಎಂದು ನಾಟಕೀಯವಾಗಿ ಹೇಳುತ್ತ ನನ್ನನ್ನೇ ಮೊದಲು ಆಹ್ವಾನಿಸಿದ್ದ. ಮತ್ತೆ ಸುರು. ಕ್ಷೌರಿಕ ಇಂಡಿಯದಲ್ಲೇ ಇರಲಿ. ಇಂಗ್ಲೆಂಡಿನಲ್ಲೇ ಇರಲಿ. ಗುಜರಾತಿಯೇ ಇರಲಿ. ಗ್ರೀಕ್‍ನವನೆ ಇರಲಿ. ಒಂದೇ ತರ. ತೆರೆದ ಬಾಯಿಯನ್ನು ಮುಚ್ಚಿದ್ದರೆ ಹೇಳಿ.

ಕ್ಷೌರ ಮುಗಿಯುವುದರೊಳಗೆ ನನ್ನ ಜನ್ಮವನ್ನೆಲ್ಲ ಜಾಲಾಡಿ ಬಿಟ್ಟಿದ್ದ. ಅವನ ನೇಯ್ಗೆಯ ಇತಿಹಾಸದ ಬಲೆಯಲ್ಲಿ ನಾನೊಂದು ಮಿಕ ಬಿದ್ದುಬಿಟ್ಟಿದ್ದೆ. ಅದು ಬೇರೆ ನಾನು ಗುಜರಾತಿಯಲ್ಲ, ಗುಜರಾತಿನಿಂದ ಸಾವಿರ ಸಾವಿರದೈನೂರು ಕಿಲೋ ಮೀಟರ್ ದೂರದಲ್ಲಿದ್ದ ದಕ್ಷಿಣ ಇಂಡಿಯಾದಿಂದ ಬಂದವನೆಂಬುದನ್ನು ಕೇಳಿ ತಿಳಿದುಕೊಂಡದ್ದೇ ಅವನ ಉತ್ಸಾಹ ಮೇರೆ ಮೀರಿತ್ತು. ಹೇಗೆ ಎಪ್ಪತ್ತರ ದಶಕದಲ್ಲಿ ಉಗಾಂಡಾದಿಂದ ಇದಿ ಅಮೀನನಿಂದ ಒದೆಸಿಕೊಂಡು ಉಟ್ಟ ಬಟ್ಟೆಯಲ್ಲಿ ಇಂಗ್ಲೆಂಡಿಗೆ ಬಂದ ಅವರು ಕಾರ್ನರ್ ಶಾಪಿನಲ್ಲಿ ಸಿಗರೇಟು ನ್ಯೂಸ್ ಪೇಪರ್ ಮಾರುತ್ತ ಪ್ರಾರಂಭ ಮಾಡಿ ಈಗ ಹೇಗೆ ಇಡೀ ಬೀದಿ ಬೀದಿಗಳನ್ನೇ ತಮ್ಮದಾಗಿಸಿಕೊಂಡಿದ್ದಾರೆ `ನೋಡಿ ಆ ವಿ ಬಿ ಸನ್ಸ್ …ನಾವಿಲ್ಲಿ ಬರುವಾಗ ಗಂಡ ಹೆಂಡತಿ ಕಾರ್ನರ್ ಶಾಪಿನಲ್ಲಿ ಬೆಳೆಗ್ಗೆಯಿಂದ ದುಡಿಯುತ್ತಿದ್ದವರು ಇವತ್ತು ನೋಡಿ..’. ವಿ ಬಿ ಸನ್ಸ್ ಎನ್ನುವುದು ಏಶಿಯನ್ನರೆ ಹೆಚ್ಚಾಗಿರುವ ವೆಂಬ್ಲೆ, ಕಿಂಗ್ಸ್‍ಬರಿ ಪ್ರದೇಶದಲ್ಲಿ ಪ್ರಸಿದ್ಧವಾದ ದಿನಸಿ ಅಂಗಡಿ.

ಭಾರತ ಪಾಕಿಸ್ತಾನ ಶ್ರೀಲಂಕಾಗಳ ಮೂಲದವರಿಗೆ ಬೇಕಾದ ವಸ್ತುಗಳನ್ನು ಅವರವರ ದೇಶಗಳಲ್ಲಿ ಲಭ್ಯವಿರುವುದಕ್ಕಿಂತ ತಾಜಾ ರೀತಿಯಲ್ಲಿ ಒದಗಿಸುವ ಅಂಗಡಿ. ಅವರ ದಿನದ ವ್ಯವಹಾರ ಲಕ್ಷ ಲಕ್ಷ ಪೌಂಡುಗಳು. ಅಷ್ಟೆಲ್ಲ ಅವ ಹೇಳಿ ಮುಗಿಸುವಾಗ ಕ್ಷೌರದ ಕೆಲಸವೂ ಮುಗಿದಿತ್ತು. ಎಡೆ ಬಿಡದೆ ಮಾತಾಡುತ್ತಿದ್ದರೂ ಕೆಲಸದಲ್ಲಿ ಒಂದು ಚೂರೂ ತಪ್ಪಿರಲಿಲ್ಲ. ಎಲ್ಲ ಮುಗಿಸಿ ಚಿಕ್ಕ ವಾಕ್ಯೂಮ್ ಕ್ಲೀನರಿನಿಂದ ಮೈ ಮೇಲೆ ಬಿದ್ದ ಕೂದಲುಗಳನ್ನು ಕಚಗುಳಿಯಾಗುವಂತೆ ತೆಗೆದು ವಿನೀತನಾಗಿ ನಿಂತಿದ್ದ ಹತ್ತು ಪೌಂಡಿನ ಬಿಲ್ಲನ್ನು ಹಿಡಿದು.(ಒಂದು ಪೌಂಡಿಗೆ ಆಗ ಐವತ್ತೈದು ರೂಪಾಯಿಗಳು) `ಮತ್ತೆ ಬರಬೇಕು ಸರ್’. ಆ `ಸರ್’ ಎನ್ನುವುದನ್ನು ಒತ್ತಿ ಹೇಳಿದ್ದ. ನನಗೆ ಆಶ್ಚರ್ಯ. ಇಂಗ್ಲೆಂಡಿನಲ್ಲಿ ಅಷ್ಟು ಸುಲಭದಲ್ಲಿ ಯಾರನ್ನೂ ಸರ್ ಎಂದು ಸಂಬೋಧಿಸುವುದಿಲ್ಲ. ಅಷ್ಟು ವಿಶ್ವಾಸವಿದ್ದರೆ ಮೊದಲ ಹೆಸರಿನಲ್ಲಿ, ಇಲ್ಲದಿದ್ದರೆ ಮಿಸ್ಟರ್ ಎಂದೇ ಸಂಬೋಧಿಸುವುದು. ಅಂತೂ ಆ ಗ್ರೀಕ್ ಹಜಾಮ ನನ್ನನ್ನು ಬುಟ್ಟಿಯಲ್ಲಿ ಹಾಕಿಕೊಂಡಿದ್ದ.



ಇನ್ನೊಮ್ಮೆ ತಿಂಗಳು ಕಳೆದು ಹೋದಾಗ ಅಪ್ಪನಿರಲಿಲ್ಲ. ಮಗನಿದ್ದ. ಅಂತೂ ಇವತ್ತಾದರೂ ಅವನ ಮಾತಿನ ಝಳದಿಂದ ತಪ್ಪಿಸಿಕೊಂಡೆನಲ್ಲ ಎಂದು ಕುರ್ಚಿಯ ಮೇಲೆ ಕುಳಿತರೆ ಈ ಮಗ ಅಪ್ಪನಿಗಿಂತ ಒಂದು ಕೈ ಮೇಲು. ಈಗಷ್ಟೇ ಯೌವನವನ್ನು ದಾಟಿದ್ದ ಅವ ಹುಟ್ಟಿ ಬೆಳೆದದ್ದು ಇಂಗ್ಲೆಂಡಿನಲ್ಲೇ ಆದರೂ ಆ ದೇಶದ ಬಗ್ಗೆ ಅವನಿಗಿದ್ದ ತೀವ್ರ ಅಸಮಾಧಾನ ಅವನ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಅದೂ ಸುತ್ತ ಕುಳಿತು ಕಾಯುತ್ತಿದ್ದ ಗಿರಾಕಿಗಳಲ್ಲಿ ಯಾರೂ ಇಂಗ್ಲೀಷಿನವರು ಇಲ್ಲವೆಂಬುದನ್ನು ಗಮನಿಸಿದ ಅವನ ಸ್ವರ ಕೆಲವೊಮ್ಮೆ ತೀವ್ರವಾಗಿ ಏರುತ್ತಿತ್ತು.

ತೀರ ಅಂತರ್ಗತವಾಗಿ ತಾವು ಮತ್ತು ತಮ್ಮ ದೇಶದವರ ಬಗ್ಗೆ ವಿಶೇಷ ಪ್ರೀತಿಯಿರುವ ಆ ದೇಶದವರು ಸಮಾನ ಅರ್ಹತೆಯ ವಿದೇಶೀಯರ ಬಗ್ಗೆ ತಾರತಮ್ಯ ತೋರಿಸುತ್ತಾರೆ ಮತ್ತು ಪ್ರಪಂಚದ ಶ್ರೇಷ್ಠ ಮಾನವ ತಳಿ ತಾವೇ ಎಂದು ತಿಳಿದುಕೊಂಡಿದ್ದಾರೆ ಎಂದು ಅವರ ವರ್ತನೆಯನ್ನು ಟೀಕಿಸುತ್ತ ಅವರ ಬಗ್ಗೆ ತೀರ ಅಪಯಕಾರಿಯಾದ ಮಾತೊಂದನ್ನು ಆಡಿದ್ದ. ಗ್ರೀಸ್‍ನಿಂದ ಹೊಟ್ಟೆ ಪಾಡಿಗಾಗಿ ಇಲ್ಲಿಗೆ ವಲಸೆ ಬಂದು ಈ ದೇಶದಲ್ಲಿ ನೆಲೆ ನಿಂತಿದ್ದೇವೆ ಎಂಬ ಹಂಗಿನ ಭಾವನೆ ಅವನಲ್ಲಿರಲಿಲ್ಲ.

ಆ ದಿನಗಳಲ್ಲಿ ಬಿಸಿ ಬಿಸಿಯಾಗಿ ಚರ್ಚೆ ನಡೆಯುತ್ತಿದ್ದ ಬ್ರಿಟಿಷರ ಹೃದಯಕ್ಕೆ ತೀರ ಹತ್ತಿರವಾಗಿದ್ದ ರಾಜಕುಮಾರಿ ಡಯಾನಾಳ ಬಗ್ಗೆ ತನ್ನ ನಾಲಗೆಯನ್ನು ಹರಿ ಬಿಟ್ಟಿದ್ದ. ದಪ್ಪದ ಫುಟ್ಬಾಲ್ ತೊಡೆಗಳನ್ನು ಕಂಡರೆ ಜೊಲ್ಲು ಸುರಿಸುತ್ತ ಹಿಂದೆ ಹೋಗುವ ಅಂತಹ ವ್ಯಭಿಚಾರಿಯನ್ನು ಮೆಚ್ಚುವ ಈ ಜನ .. ಹ ಹ್ಹಾ.. ಎಂದು ತನ್ನ ತಿರಸ್ಕಾರವನ್ನೆಲ್ಲ ತೋರಿಸಿದ್ದ. ನನಗಂತೂ ಇರಿಸು ಮುರಿಸಾಗಿತ್ತು. ಡಯಾನಾ ಯಾರ ಹಿಂದೆ ಹೋದರೆ ನನಗೇನಂತೆ. ಹೊಟ್ಟೆ ಪಾಡಿಗೆ ದುಡಿಯಲು ಬಂದ ನನಗೆ ಚಂದದ ಹೇರ್ ಕಟ್ಟಿಂಗ್ ಆಗಬೇಕಿತ್ತಷ್ಟೆ.

ವಾತಾವರಣವನ್ನು ತಿಳಿಯಾಗಿಸಲು ಮತ್ತು ಮಾತಿನ ದಾರಿಯನ್ನು ಬದಲಿಸುವ ಸಲುವಾಗಿ `ಹೇ ..ನನ್ನ ತಲೆ ಮೇಲೆ ಕೂದಲೇ ಇಲ್ಲವಲ್ಲ.. ನೀನು ನನಗೆ ಡಿಸ್ಕೌಂಟ್ ಕೊಡಬೇಕು..’ಎಂದು ಆಗಲೇ ಬಹಳಷ್ಟು ಖಾಲಿಯಾಗಿದ್ದ ಮಂದಲೆಯನ್ನು ಬಳಚಿಕೊಳ್ಳುತ್ತಾ ಹೇಳಿದರೆ ಕೂಡಲೇ ಅಷ್ಟೇ ಹಗುರವಾಗಿ `ನೋ..ನೋ ಸರ್..ಉಳಿದವರಿಗಿಂತ ಹೆಚ್ಚು ಚಾರ್ಜ್ ಮಾಡಬೇಕು. ಯಾಕೆಂದರೆ ಅಲ್ಲೇನಾದರೂ ಉಳಿಸಬೇಕಲ್ಲ ಅದು ಕಷ್ಟದ ಕೆಲಸ’ ಎನ್ನುವುದೇ!

ತಾತ್ಕಾಲಿಕವಾಗಿ ಜಾಡು ತಪ್ಪಿದರೂ ಪುನಹ ತನ್ನ ಮೂಲ ಧಾಟಿಯನ್ನೆ ಪ್ರಾರಂಭಿಸಿದ್ದ. ಇಂಗ್ಲಿಷ್ ಸಂಸ್ಕೃತಿಯನ್ನು ಟೀಕಿಸುತ್ತ ಅಲ್ಲಿ ಹೆಚ್ಚುತ್ತಿರುವ ಕಾಲ್‍ಗರ್ಲ್ ಸಂಸ್ಕೃತಿಯನ್ನು ಹಳಿಯಲು ಆರಂಭಿಸಿದ್ದ. ಪಕ್ಕದ ಕುರ್ಚಿಗಳಲ್ಲಿ ಕುಳಿತಿದ್ದ ಗ್ರಾಹಕರಿಗೆ ಹೇರ್ ಕಟ್ಟಿಂಗ್ ಮಾಡುತ್ತಿದ್ದುದೆಲ್ಲ ಅವನೇ ಕೆಲಸಕ್ಕಿಟ್ಟುಕೊಂಡ ಹುಡುಗಿಯರು. ಇವನ ಮಾತು ಕೇಳಿಸಿಕೊಳ್ಳುತ್ತಿದ್ದ ಅವರು ಮುಸಿ ಮುಸಿ ನಗುತ್ತಿದ್ದರು. ಅಷ್ಟೇ ಅಲ್ಲ ಅವರಲ್ಲಿ ಕೆಲವರಾದರೂ ಆದಾಯವನ್ನು ಹೆಚ್ಚಿಸಿಕೊಳ್ಳುವ ಇರಾದೆಯಿಂದ ಸಂಜೆಯ ಹೊತ್ತು ಇವ ಹಳಿಯುತ್ತಿದ್ದ ಕಾಲ್‍ಗರ್ಲ್ ಕೆಲಸಕ್ಕೆ ಹೋಗುತ್ತಿದ್ದವರೂ ಇದ್ದಿರಬಹುದು.

ನನಗೆ ತೀರಾ ಮುಜುಗರವಾಗತೊಡಗಿತ್ತು. ಆದರೂ ಅವನು ಮಾತ್ರ ಬಿಡಲೊಲ್ಲ. ದೇವರ ದಯ ನನ್ನ ಕಟ್ಟಿಂಗ್ ಮುಗಿದಿತ್ತು. ಅವನು ವ್ಯಾಕೂಮ್ ಕ್ಲೀನರ್ ಹಾಕಿ ಪೌಡರು ಪೂಸುವುದನ್ನೂ ಕಾಯದೆ ಕುರ್ಚಿಯಿಂದ ಜಿಗಿದೆದ್ದು ಹಣಕೊಟ್ಟು ಥ್ಯಾಂಕ್ಸ್ ಪಡೆದು ಹೊರಬಂದಿದ್ದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

January 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: