ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡಿನಲ್ಲಿ DIY…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

9

ಇಂಗ್ಲೆಂಡಿನಲ್ಲಿ DIY

ಇಂಗ್ಲೆಂಡಿನಲ್ಲಿ ಕೂಲಿಯಷ್ಟು ದುಬಾರಿ ಇನ್ಯಾವುದೂ ಇಲ್ಲ. ಮನೆ ಕೆಲಸಕ್ಕೆ ಜನ ಸಿಗುತ್ತಾರೆ. ಗಂಟೆಯ ಲೆಕ್ಕದಲ್ಲಿ ಮಜೂರಿ. ಒಂದು ಗಂಟೆಯ ಕೆಲಸಕ್ಕೆ ನಾಲ್ಕರಿಂದ ಆರು ಪೌಂಡು. ಅಂದರೆ ನಾನೂರರಿಂದ ಐನೂರು ರೂಪಾಯಿಗಳಷ್ಟು. ನಿಮ್ಮ ಅನಿವಾರ್ಯತೆಯನ್ನು ಹೊಂದಿಕೊಂಡು ಇನ್ನೂ ಹೆಚ್ಚಾದರೂ ಆದೀತು.

ನಾವು ಸಂಪಾದಿಸಿದ್ದನ್ನೆಲ್ಲ ಅವರಿಗೆ ಕೊಟ್ಟು ಕೈಮುಗಿಯಬೇಕು. ಹಾಗಾಗಿ ಮನೆ ಕೆಲಸಕ್ಕೆಂದು ನಮ್ಮಲ್ಲಿಯ ಹಾಗೆ ಜನ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗೇನಾದರೂ ಕೆಲಸದವರೆಂದು ಇದ್ದರೆ ಅದು ಅವರವರು ಸ್ವಂತ ದೇಶದಿಂದ ಬರುವಾಗ ಜತೆಗೇ ಕೆಲಸಕ್ಕೆಂದು ಯಾರನ್ನಾದರೂ ಕರೆ ತಂದಿದ್ದರೆ ಮಾತ್ರ. ಅಂತಲ್ಲಿ ಸಂಬಳ ಹೆಸರಿಗೆ ಮಾತ್ರ. ಹಾಗಾಗಿ ಬಹುತೇಕ ಮನೆಯಲ್ಲಿ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.

DIY ಅಂದರೆ Do It Yourself. ಕಾರ್ಪೆಟ್ ಹಾಕಿದ ನೆಲವನ್ನು ದಿನಾ ಗುಡಿಸಿ ಒರೆಸುವ ಕೆಲಸವಂತೂ ಇಲ್ಲವೇ ಇಲ್ಲ. ವಾರಕ್ಕೊಂದು ಯಾ ಎರಡು ಬಾರಿ ವ್ಯಾಕ್ಯೂಮ್ ಕ್ಲೀನರ್‍ನಲ್ಲಿ ಧೂಳು ತೆಗೆದರಾಯಿತು. ಬಟ್ಟೆ ತೊಳೆಯುವ ವಾಶಿಂಗ್ ಮೆಶೀನ್ ಅಂತು ನಿಮ್ಮ ಬಿಲ್ಟ್ ಇನ್ ಕಿಚನ್‍ನ ಭಾಗವೇ ಆಗಿರುತ್ತದೆ. ಮತ್ತೆ ಪಾತ್ರೆ ಮಾತ್ರ ನೀವು ತೊಳೆದುಕೊಳ್ಳಬೇಕಷ್ಟೆ. ಅದಕ್ಕೂ ಡಿಶ್ ವಾಶರ್ ಬಳಸುವವರು ಬಹಳ ಮಂದಿ. ಹಾಗಾಗಿ ಕೆಲಸದವರಿಗೆ ಕೊಡಲು ಕೆಲಸವೇ ಇಲ್ಲ.

ಮನೆಯ ಎದುರಿಗೆ ಮತ್ತು ಹಿಂದುಗಡೆ ಇರುವ ಚಿಕ್ಕ ಚಿಕ್ಕ ಲಾನ್‍ಗಳನ್ನು ನೀವೇ ಕತ್ತರಿಸಿಕೊಳ್ಳಬೇಕು. ಕಟ್ಟಿಂಗ್‍ನ ಯಂತ್ರ ಲಾನ್ ಮೊವರ್ ಬಾಡಿಗೆಗೆ ಸಿಗುತ್ತದೆ. ಇಲ್ಲ ತಿಂಗಳು ತಿಂಗಳು ನಿಮ್ಮ ಲಾನ್ ಮೊವ್ ಮಾಡಿ ಸುತ್ತಲಿನ ಬೇಲಿಯನ್ನು ಕತ್ತರಿಸಿ ಚನ್ನಾಗಿಡಲು ಗುತ್ತಿಗೆ ಕೊಡಬಹುದು. ಅಂತಹುದಕ್ಕೆ ಕಂಪೆನಿಗಳೇ ಇರುತ್ತವೆ. ನೀಟಾಗಿ ಕೆಲಸ ಮಾಡಿ ಕೊಟ್ಟು ಹೋಗುತ್ತಾರೆ – ನೀಟಾದ ಚಾರ್ಜಿಗೆ. ಹಾಗಾಗಿ ಅದನ್ನೂ ಸ್ವಂತಕ್ಕೆ ಮಾಡಿಕೊಳ್ಳುವವರೇ ಜಾಸ್ತಿ. ವಾರಕ್ಕೆ ಐದೇ ದಿನಗಳ ಕೆಲಸವಿರುವ ಅಲ್ಲಿ ಶನಿವಾರ ಭಾನುವಾರಗಳಂದು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿರುವ ಪ್ರದೇಶಗಳಲ್ಲಿ ಮನೆಗಳವರೇ ಈ ತೆರನ ಕೆಲಸದಲ್ಲಿ ತೊಡಗಿರುವುದನ್ನು ನೋಡಬಹುದು.

ಕ್ರಿಸ್‍ಮಸ್ ಮತ್ತು ಹೊಸ ವರ್ಷ ಬರುತ್ತದೆಂದ ಕೂಡಲೇ ತಿಂಗಳಿಗೆ ಮೊದಲೇ ಮನೆಗಳಿಗೆ ಸುಣ್ಣ ಬಣ್ಣ …ಇದೂ ಸ್ವಂತವೇ. ಎರಡು ಮೂರು ವೀಕ್‍ಎಂಡ್‍ಗಳಲ್ಲಿ ಮುಗಿಸಿ ಬಿಡುತ್ತಾರೆ. (ಡಿಸೆಂಬರ್ ತಿಂಗಳಲ್ಲಿ ಬೇರೆ ಬೇರೆ ತಯಾರಿಗಳಲ್ಲಿ ಮತ್ತು ಹೊಸ ವರ್ಷದ ಪಾರ್ಟಿಗಳನ್ನು ಎಟೆಂಡ್ ಮಾಡುವುದರಲ್ಲೇ ಕಳೆಯುತ್ತಾರೆ) ಇದಕ್ಕೂ D I Y ಕಿಟ್ಟ್‍ಗಳು ಸಿಗುತ್ತವೆ. ಕೆಲಸಕ್ಕೆ ಬೇಕಾಗುವ ಉಪಕರಣಗಳೇ ಅಲ್ಲದೆ Live Demonstration ಕ್ಯಾಸೆಟ್ಟುಗಳೊಂದಿಗೆ ಸಿಗುವ ಈ ಕಿಟ್ಟುಗಳು ಮಧ್ಯಮ ವರ್ಗದ ಜನರಿಗೊಂದು ವರ.

ಗಾರ್ಡನಿಂಗ್‍ನಿಂದ ಹಿಡಿದು ಗೋಡೆಗೆ ವಾಲ್ ಪೇಪರ್ ಹಚ್ಚುವುದರ ವರೆಗೆ ಪ್ಲಂಬಿಂಗ್‍ನಿಂದ ಹಿಡಿದು ಇಲೆಕ್ಟ್ರಿಕ್ ವೈರಿಂಗ್‍ನ ವರೆಗೆ ಪ್ರತಿಯೊಂದು ಕಾರ್ಯಕ್ಕೂ ಲಭ್ಯವಿವೆ. ಕೊನೆಗೆ ನಿಮ್ಮ ಅಡಿಗೆ ಮನೆಯಲ್ಲಿ ಕಿಚನ್ ಫಿಟ್ಟಿಂಗ್ ಸಹ ಸೇರಿದಂತೆ. ಅಷ್ಟೇ ಅಲ್ಲ ಗಂಟೆ ಗಟ್ಟಲೆ ಹಜಾಮನ ಅಂಗಡಿಯಲ್ಲಿ ಕಾಯುವುದು ಬೇಜಾರೆನಿಸಿದರೆ ಅದಕ್ಕೂ D I Y ಕಿಟ್ಟು ಇದೆ. ಅದೂ ವಿಡಿಯೋ ಕ್ಯಾಸೆಟ್ಟಿನೊಂದಿಗೆ. ತಲೆಯನ್ನು ಯಾವ ಕೋನದಲ್ಲಿ ಇಟ್ಟುಕೊಳ್ಳಬೇಕು.

ಕನ್ನಡಿಯೆದುರಿಗೆ ಹೇಗೆ ಕುಳಿತುಕೊಳ್ಳಬೇಕು ಮತ್ತು ಯಾವ ಯಾವ ಸೈಜಿನ ಕತ್ತರಿ (ಎಲೆಕ್ಟ್ರಿಕ್‍ನದು)ಯನ್ನು ಎಲ್ಲೆಲ್ಲಿ ಉಪಯೋಗಿಸಬೇಕೆಂಬುದರ ಬಗ್ಗೆ ಮಾರ್ಗ ದರ್ಶನದ ಜತೆಗೆ. ಎರಡು ಮೂರು ಹೇರ್ ಕಟ್ಟಿಂಗ್‍ನ ಚಾರ್ಜಿನಲ್ಲಿ ಸಿಗುವ ಈ ಕಿಟ್‍ನಿಂದ ಇಡೀ ಜೀವಮಾನದ ಹೇರ್ ಕಟ್ಟಿಂಗ್‍ನ ಖರ್ಚನ್ನು ಉಳಿಸಬಹುದು. ಆದರೆ ಹಜಾಮನ ಅಂಗಡಿಗೆ ಹೋಗಿ ಕುಳಿತು ಗಂಟೆ ಎರಡು ಗಂಟೆ ಕಾದು ಕುಳಿತು ಅಲ್ಲಿ ಕ್ಷೌರ ಮಾಡಿಸಿಕೊಳ್ಳುವುದರ ಮಜವೇ ಬೇರೆ. ವಿಶ್ವ ಕೋಶದಂತಿರುವ ಅವನು ಹೇಳುವ ಕಥೆಗಳನ್ನು ಕೇಳುವುದೇ ಮಜ. ಅವೆಲ್ಲದರಿಂದ ವಂಚಿತರಾಗಬೇಕಷ್ಟೆ. ಆ ಮಜದ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.

ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನೆಯ ಪೀಠೋಪಕರಣಗಳಿಗೂ ನೀವು ಬಡಗಿಯ ಮರ್ಜಿಯನ್ನು ಕಾಯಬೇಕಾದ್ದಿಲ್ಲ. ಅಂಗಡಿಗೆ ಹೋಗಿ ನಿಮಗೆ ಬೇಕಾದ ಅಳತೆಯ ಕುರ್ಚಿ, ಮೇಜು, ಮಂಚ, ಶೆಲ್ಫ್ ಹೀಗೆ ಏನೇನು ಬೇಕೋ ಅದೆಲ್ಲವನ್ನೂ ಖರೀದಿಸಿ ಅವರು ಕೊಡುವ ಬೇರೆ ಬೇರೆ ಪ್ಯಾಕೆಟ್ಟುಗಳನ್ನು ಕಾರಿನಲ್ಲಿ ಹಾಕಿಕೊಂಡು ಮನೆಗೆ ತಂದರಾಯಿತು.

ಮನೆಯಲ್ಲಿ ಆ ಪ್ಯಾಕೆಟ್ಟುಗಳನ್ನು ಬಿಚ್ಚಿ ಅವರೇ ಒದಗಿಸಿದ ಚಿತ್ರದ ಪ್ರಕಾರ ಪ್ಯಾಕೆಟ್ಟಿನ ಜೊತೆಯಲ್ಲಿಯೇ ಒದಗಿಸಿದ ಮೊಳೆ ಮತ್ತು ಗೋಂದುಗಳನ್ನು ಉಪಯೋಗಿಸಿ ಜೋಡಿಸಿದರಾಯಿತು. ನಿಮ್ಮ ಉಪಕರಣ ಪರ್ಫೆಕ್ಟಾಗಿ ತಯಾರಿಯಾಯಿತು. ಒಂದು ಚೂರೂ ನ್ಯೂನತೆ ಇರಲಿಕ್ಕಿಲ್ಲ. ಯಾವ ಯಾವ ಅಳತೆಯ ಮೊಳೆ ಮತ್ತು ಬೋಲ್ಟುಗಳನ್ನು ಉಪಯೋಗಿಸಬೇಕೋ ಅದಕ್ಕೆ ಒಗ್ಗುವಂತಹ ಸ್ಕ್ರೂ ಡ್ರೈವರ್ ಮತ್ತು ಸ್ಪ್ಯಾನರುಗಳನ್ನೂ ಒದಗಿಸಿರುತ್ತಾರೆ.


ನಮ್ಮ ದೇಶದಲ್ಲಿ ಅವರವರ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕೆನ್ನುವ ತತ್ವವನ್ನು ಸಾರಲು ನಾವು ಗಾಂಧಿಯನ್ನು ಬಳಸಿಕೊಳ್ಳುತ್ತೇವೆ. ಆದರೆ ಆ ದೇಶದಲ್ಲಿ ಅದು ಜನರಿಗೆ ರಕ್ತಗತವಾಗಿಯೇ ಬಂದಿದೆ. ಅದನ್ನು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಅವರಿಗೆ. ಅಲ್ಲಿನ ಆಫೀಸುಗಳಲ್ಲಿ ಜವಾನ ಎನ್ನುವ ಹುದ್ದೆಯೇ ಇಲ್ಲ ಮತ್ತು ಕಾರುಗಳಿಗೆ ಡ್ರೈವರ್ ಗಳು ಇಲ್ಲದಿರುವುದು.

ಇಂಡಿಯಾದ ಆಫೀಸಿನಲ್ಲಿ ಒಂದು ಫೈಲನ್ನು ಮೇಜಿನಿಂದ ಮೇಜಿಗೆ ಕೊಂಡೊಯ್ಯಲು ಜವಾನನಿಗಾಗಿ ಗಂಟೆಗಟ್ಟಲೆ ಕಾದು ಅಭ್ಯಾಸವಾಗಿದ್ದ ನಮಗೆ ಅಲ್ಲಿ ನಾವೇ ಸ್ವತಃ ಫೈಲನ್ನು ಒಯ್ಯಬೇಕಾಗಿ ಬಂದಾಗ ಮೊದ ಮೊದಲು ಸಂಕಟವಾದದ್ದಂತೂ ಹೌದು. ಆದರೆ ಸಂಜೆ ಆಫೀಸನ್ನು ಗುಡಿಸಲು ಬರುವ ಬಿಳೀ ಹೆಂಗಸು ಸ್ವಂತ ಕಾರಿನಿಂದಿಳಿದು ಕಸ ಗುಡಿಸುತ್ತ ಧೂಳು ಹೊಡೆಯುತ್ತ ನಡು ನಡುವೆ ಟಕ ಟಕ ಸೆಲ್ ಪೋನಿನಲ್ಲಿ ಶಾಲೆಯಿಂದ ಮನೆಗೆ ಬಂದಿರಬಹುದಾದ ಮಗಳನ್ನು ವಿಚಾರಿಸುತ್ತ ಟೀ ಮಾಡಿಕೊಂಡೆಯಾ ಸ್ಯಾಂಡ್‍ವಿಚ್‍ಗೆ ಬಿನ್‍ನಲ್ಲಿದ್ದ ಹೊಸ ಬ್ರೆಡ್ ತೆಗೆದುಕೋ ಎಂದೆಲ್ಲ ನಿರ್ದೇಶನ ಕೊಡುತ್ತಿರುವುದನ್ನು ಕಂಡ ನಮ್ಮ ಸಂಕಟ ಹೆಚ್ಚು ದಿನ ಉಳಿದಿರಲಿಲ್ಲ.

ಅಷ್ಟೇ ಅಲ್ಲ ಮುಂಚಿನಿಂದ ರೂಢಿಸಿಕೊಂಡು ಬಂದ ಅಭ್ಯಾಸದಂತೆ ಆಫೀಸು ವೇಳೆ ಕಳೆದ ಮೇಲೂ ಗಂಟೆಗಟ್ಟಲೆ ಆಫೀಸಿನಲ್ಲಿ ಕುಳಿತಿದ್ದರೆ ಆಕೆ ನೇರವಾಗಿಯೇ `ನೀವು ದಯವಿಟ್ಟು ನನಗೆ ಎಡೆ ಮಾಡಿ ಕೊಡಬೇಕು. ಯಾಕೆಂದರೆ ನನಗೆ ಕ್ಲಬ್ಬಿಗೆ ಹೋಗಲು ತಡವಾಗುತ್ತದೆ’ ಎಂದಾಗಲಂತೂ ಇಂಡಿಯಾದಿಂದ ಹೊಸತಾಗಿ ಹೋದ ನಾವೆಲ್ಲ ಪೆಚ್ಚು!

ಅಲ್ಲಿ ಯಾರ ಕಾರಿಗೂ ಡ್ರೈವರ್‍ನೆಂದು ಇರುವುದಿಲ್ಲ. ಗಂಡಸೇ ಇರಲಿ ಹೆಂಗಸೇ ಇರಲಿ ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಾರೆ. ಮರ್ಸಿಡೀಸ್ ಇರಲಿ ಜಾಗುವಾರ್ ಇರಲಿ. ಡ್ರೈವಿಂಗ್ ಸೀಟಿನಲ್ಲಿ ಇರುವವನು ಯಜಮಾನನೇ. ಬ್ರಿಟನ್ನಿನ ರಾಣಿ ಮಾತ್ರ ಇದಕ್ಕೆ ಅಪವಾದ. `ಶಾಫರ್ ಡ್ರಿವನ್ ಕಾರು’ ಎನ್ನುವುದು ಬಿಳಿಯರು ನಮ್ಮನ್ನು ಆಳುವಾಗ ಇಲ್ಲಿ ಅಗ್ಗಕ್ಕೆ ಸಿಕ್ಕುವ ಇಂಡಿಯನ್ನರನ್ನು ಬಳಸಿಕೊಂಡು ತಮ್ಮ ದೊಡ್ಡಸ್ತಿಕೆಯನ್ನು ಮೆರೆಯುವಾಗ ಹುಟ್ಟಿಕೊಂಡ ಶಬ್ಧವೇ ಹೊರತು ಅವರ ನಾಡಿನಲ್ಲಿ ಇಂತಹ ಒಂದು ಪದ್ಧತಿಯೇ ಇಲ್ಲ.

ಇಂದ್ರಿಯಗಳು ಶುದ್ಧವಿಲ್ಲದ ಶ್ರೀಮಂತ ಮುದುಕ ಮುದುಕಿಯರು ಮಾತ್ರ ಡ್ರೈವರನ್ನಿಟ್ಟುಕೊಂಡಾರು. ಸರಿ ಸುಮಾರು ಒಂದು ಚಿಕ್ಕ ಏರೋಪ್ಲೇನಿನಷ್ಟೆ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರನ್ನೂ ಯಜಮಾನನೇ ಓಡಿಸುವುದು ಸರ್ವೇ ಸಾಮಾನ್ಯ. ಅಷ್ಟೇ ಏಕೆ ಜಾನ್ ಮೇಜರ್‍ನ ಮಂತ್ರಿ ಮಂಡಲದಲ್ಲಿ ಆರ್ಥಿಕ ಖಾತೆಯ ಹೊಣೆ ಹೊತ್ತಿದ್ದ ಕೆನೆತ್ ಕ್ಲಾರ್ಕ್ ಕಳೆದ ಚುನಾವಣೆಯಲ್ಲಿ ತಮ್ಮ ಪಾರ್ಟಿ ಸೋತಾಗ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡಿ ತನ್ನ ವೈಯಕ್ತಿಕ ಸಾಮಾನುಗಳನ್ನು ತುಂಬಿಸಿಕೊಂಡ ಆ ಉದ್ದದ ವ್ಯಾನನ್ನು ತಾವೇ ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದುದನ್ನು ನೋಡಿದ ನಮಗೆಲ್ಲ ಆಶ್ಚರ್ಯವೋ ಆಶ್ಚರ್ಯ!. ಅಲ್ಲಿಯ ವರೆಗೆ ಜನ ಸ್ವಾವಲಂಬಿಗಳು ಅಲ್ಲಿ. ಮತ್ತೆ ಸ್ವಂತ ಕೆಲಸವನ್ನು ಮಾಡಿಕೊಳ್ಳುವಾಗ ಅವಮರ್ಯಾದೆಯ ಪ್ರಶ್ನೆಯೂ ಇಲ್ಲ.

‍ಲೇಖಕರು Avadhi

January 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: