ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡೂ ನಮ್ಮ ದೇಶದ ಡಾಕ್ಟರುಗಳೂ

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

8

ಇಂಗ್ಲೆಂಡೂ ನಮ್ಮ ದೇಶದ ಡಾಕ್ಟರುಗಳೂ

ನಮ್ಮ ದೇಶದಲ್ಲಿ ಎಮ್ ಬಿ ಬಿ ಎಸ್ ಮಾಡಿದ ಡಾಕ್ಟರುಗಳಿಗೆಲ್ಲ ಒಂದೇ ಆಸೆ. ಇಂಗ್ಲಂಡಿಗೆ ಹೋಗಿ ಫೆಲೋಶಿಪ್ ಮಾಡಬೇಕೆಂಬುದು. ಅದು ಯಾವುದೇ ವಿಷಯದಲ್ಲಿರಬಹುದು. ಇಂಗ್ಲೆಂಡಿನವರೂ ಅಷ್ಟೇ. ಇಂತಹ ಸಂದರ್ಭಕ್ಕಾಗಿ ಕಾಯುತ್ತಲೇ ಇರುತ್ತಾರೆ. ಅವರ ಹತೋಟಿ ತಪ್ಪಿ ಬೆಳೆಯುತ್ತಿರುವ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ಸಂಭಾಳಿಸಲು ವೈದ್ಯರುಗಳು ಬೇಕು. ಅದೂ ಇಷ್ಟು ಅಗ್ಗದ ದರದಲ್ಲಿ ಬೇರೆಲ್ಲಿಂದ ಸಿಗುತ್ತಾರೆ ಅವರಿಗೆ. ಹಾಗೆಂದು ಸಿಕ್ಕಿದವರನ್ನೆಲ್ಲ ಸೆಳೆದುಕೊಳ್ಳುವ ಜಾಯಮಾನವೂ ಅಲ್ಲ ಅವರದ್ದು.

ನಮ್ಮ ದೇಶದಲ್ಲಿನ ಎಮ್ ಬಿ ಬಿ ಎಸ್, ಎಮ್ ಡಿ. ಮಾಡಿದವರೂ ಆ ದೇಶದಲ್ಲಿ ಡಾಕ್ಟರಿಕೆಯ ಬಗ್ಗೆ ಬಾಯಿ ತೆರೆಯ ಬೇಕಾದರೂ ಅಲ್ಲಿ ಜನರಲ್ ಮೆಡಿಕಲ್ ಕೌನ್ಸಿಲ್‍ನವರು ನಡೆಸುವ PLAB ಪರೀಕ್ಷೆಯನ್ನು ಮೊದಲು ಪಾಸು ಮಾಡಬೇಕು. ಪಾಪ! ಫೆಲೋಷಿಪ್ ಆಸೆಯಿಂದ ಬಂದು ಅಲ್ಲಿ ಕಷ್ಟ ಪಡುವ ಭಾರತೀಯ ಡಾಕ್ಟರುಗಳ ಅವಸ್ಥೆ ಕಂಡು ಈಗ ಇಂಡಿಯಾದಲ್ಲಿಯೇ PLAB ಪರೀಕ್ಷೆಯನ್ನು ನಡೆಸುವ ವ್ಯವಸ್ಥೆ ಪ್ರಾರಂಭಿಸಿದ್ದಾರೆಂದು ಕೇಳಿದೆ. ಆದರೆ ಹತ್ತು ವರ್ಷಗಳ ಹಿಂದೆ ಪರಿಸ್ಥಿತಿ ಬೇರೆಯಿತ್ತು.

ಶತಾಯ ಗತಾಯ ವೀಸಾ ಗಿಟ್ಟಿಸಿಕೊಂಡ ನಮ್ಮ ಡಾಕ್ಟರುಗಳು ಅಲ್ಲಿಗೆ ಬಂದು ಉಒಅ ಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಮತ್ತೆ ಪರೀಕ್ಷೆಗೆ ಅಣಿಯಾಗಬೇಕು. ಹಾಗೆ ಅವರಿಗೆ ಸಿಗುತ್ತಿದ್ದುದು ಮೂರು ತಿಂಗಳ ಸಮಯ ಮಾತ್ರ. ಆ ಅವಧಿಯೊಳಗೆ ಅವರು Pಐಂಃ ಪಾಸಾಗಿ ಫೆಲೋಶಿಪ್‍ಗೆ ನೋಂದಾಯಿಸಿಕೊಳ್ಳಬೇಕು. ಆಗಲೇ ಅವರಿಗೆ ಅಲ್ಲಿನ ಆಸ್ಪತ್ರೆಗಳಲ್ಲಿ ಡಾಕ್ಟರಾಗಿ ದುಡಿಯುವ ಅವಕಾಶ. ಇಲ್ಲ ಮತ್ತೆ ಮೂರು ತಿಂಗಳ ಅವಧಿಗೆ ವೀಸಾ ವಿಸ್ತರಣೆಗೆ ಬರೆದು ಕೊಳ್ಳಬೇಕು. ತಮ್ಮೆಲ್ಲ ತಾಕತ್ತನ್ನು ಕ್ರೋಢೀಕರಿಸಿದರೂ ಈ PLAB ಪರೀಕ್ಷೆ ತಮ್ಮಿಂದಾಗುವಂತಹುದಲ್ಲ ಎಂದೆನಿಸಿದರೆ ತೆಪ್ಪಗೆ ತಾಯ್ನಾಡಿಗೆ ಮರಳಬೇಕು.


ನಾನೊಬ್ಬ ಇಂಗ್ಲೆಂಡಿನಲ್ಲಿ ಇದ್ದುದು ನಮ್ಮಲ್ಲಿನ ಬಹಳಷ್ಟು ಉತ್ಸಾಹೀ ಡಾಕ್ಟರುಗಳಿಗೆ ಫೆಲೋಶಿಪ್ ಮಾಡಲು ಅನುಕೂಲವಾಗಿತ್ತು. ನನಗೆ ತೀರ ಹತ್ತಿರದವರು ಅವಕಾಶ ತಿರಸ್ಕರಿಸಿದರು. ತಿಳಿದವರು ಪರಿಚಯದವರಲ್ಲಿ ಆಗಲೇ ಡಾಕ್ಟರಾಗಿದ್ದ ಕೆಲವರು ಡಾಕ್ಟರುಗಳಾದ ನಾವು ಇಂಗ್ಲೆಂಡಿಗೆ ಹೋಗಬೇಕಿತ್ತು. ಅದು ಬಿಟ್ಟು ವಿಮಾ ಸಂಸ್ಥೆಯಲ್ಲಿ ಮೇನೇಜರಾದ ಇವನಿಗೆ ಅವಕಾಶ ಸಿಕ್ಕಿತಲ್ಲ ಎಂದು ಅಸಮಾಧಾನ ಪಟ್ಟುಕೊಂಡದ್ದೂ ಇದೆ.

ಅಷ್ಟು ದಿನದವರೆಗೆ ವಿಶ್ವಾಸ ಸ್ನೇಹದಿಂದ ನಡೆದುಕೊಂಡಿದ್ದವರು ಅಪರಿಚಿತರಂತೆ ನಡೆದುಕೊಂಡದ್ದೂ ಇದೆ. ಅಂತಹವರು ಸಹಾಯ ಯಾಚಿಸುವುದಿರಲಿ ನಾವು ಮರಳಿ ಇಂಡಿಯಾಕ್ಕೆ ಬಂದಾಗ ನಮ್ಮನ್ನು ವೈರಿಗಳಂತೆ ಕಂಡಿದ್ದಾರೆ. ಸ್ವಂತಕ್ಕೆ ಉಪಯೋಗಿಸಿಕೊಳ್ಳಬಹುದಾದ ಅವಕಾಶಗಳನ್ನು ತಿರಸ್ಕರಿಸಿದ `ಊರ ಕುರಿ ಕಾದು ದೊಡ್ದ ಬೋರೇ ಗೌಡ ಅನ್ನಿಸಿಕೊಂಡ’ ಎನ್ನುವ ಮನೋಭಾವದ ತೀರಾ ಹತ್ತಿರದ ಸಂಬಂಧಿಕರ ಮೂಲಕ ಅವರ ಪರಿಚಯಸ್ಥರು ಮತ್ತು ಗೆಳೆಯರು ಮಾತ್ರ ನಮ್ಮ ಇಂಗ್ಲೆಂಡಿನ ಉಪಸ್ಥಿತಿಯನ್ನು ಧಾರಾಳವಾಗಿಯೇ ಉಪಯೋಗಿಸಿಕೊಂಡಿದ್ದರು.

ಅಂತಹವರಲ್ಲಿ ಒಬ್ಬರಂತೂ ಸಾಕಷ್ಟು ಹೆಸರು ಗಳಿಸಿದ ವೈದ್ಯರು. ಅವರ ಜೀವನದ ಪರಮೋಚ್ಚ ಆಸೆ ಇಂಗ್ಲೆಂಡಿಗೆ ಹೋಗಿಬರುವುದು ಆಗಿತ್ತು. ತನ್ನ ಸಂಪರ್ಕವನ್ನೆಲ್ಲ ಬಳಸಿಕೊಂಡು ನನ್ನ ಮೂಲಕ ತನ್ನ ಕಾರ್ಯವನ್ನು ಸಾಧಿಸಿಕೊಂಡಿದ್ದರು. ಉಒಅ ರಿಜಿಸ್ಟ್ರೇಶನ್ನಿಗೆ ಆ ಕಾಲದಲ್ಲಿ ನಾಲ್ಕು ನೂರ ಐವತ್ತು ಪೌಂಡುಗಳನ್ನು ಅವರ ಹೆಸರಿನಲ್ಲಿ ತುಂಬುವುದರ ಮೂಲಕ ನನ್ನಿಂದ ಅವರ ಸೇವೆಯ ಆರಂಭ.

ಮತ್ತೆ ಅವರ ವೀಸಾಕ್ಕೆ ಸ್ಪಾನ್ಸಾರ್ ಲೆಟರ್ ಕಳುಹಿಸಿದ್ದೇ ಅಲ್ಲದೆ ಇಂಗ್ಲೆಂಡಿಗೆ ಹೊಸಬನಾಗಿದ್ದ ನಾನು ಯಾರು ಯಾರೋ ಪರಿಚಯದವರಿಗೆ ದುಂಬಾಲು ಬಿದ್ದು ಅದುವರೆಗೆ ಫೋಟೋದಲ್ಲೂ ನೋಡಿರದಿದ್ದ ಆ ಇಂಡಿಯಾದ ಉತ್ಸಾಹೀ ಡಾಕ್ಟರನ್ನು ದಿನಕ್ಕೆ ಸಾವಿರಗಟ್ಟಲೆ ಜನರನ್ನು ಬರಮಾಡಿಕೊಳ್ಳುವ ಆ ಹೀತ್ರೋ ವಿಮಾನ ನಿಲ್ದಾಣದಲ್ಲಿ ನಮ್ಮೆಲ್ಲ ಚಾಣಕ್ಷತೆಯ ಲೆಕ್ಕಾಚಾರಗಳ ಮೂಲಕ ಗುರುತು ಹಿಡಿದು ಬರಮಾಡಿಕೊಂಡಿದ್ದೆ. ಅಲ್ಲಿಂದ ಮೂವತ್ತೈದು ಮೈಲಿ ದೂರದ ಇಂತಹ ಡಾಕ್ಟರುಗಳೇ ಮಾಡಿಕೊಂಡಿದ್ದ ಹಾಸ್ಟೆಲೊಂದನ್ನು ಪತ್ತೆ ಹಚ್ಚಿ ಅವರನ್ನು ಅಲ್ಲಿ ಬಿಟ್ಟು ಬಂದಿದ್ದೆ.

ನಮ್ಮ ದೇಶದಲ್ಲಿ ಸಾಕಷ್ಟು ಹಣ ಮತ್ತು ಹೆಸರು ಮಾಡಿದ್ದ ವೈದ್ಯರು ಪೌಂಡಿನಲ್ಲಿ ಹಣ ಖರ್ಚು ಮಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಅಂತಹ ಒಂದು ಹಾಸ್ಟೆಲು ಲಗ್ತಾಗಿ ಸಿಕ್ಕಿದ್ದು ವರವೇ ಸರಿ. ಇಲ್ಲದಿದ್ದಲ್ಲಿ ಬಹುಶಃ ಭಾರತದಲ್ಲಿ ಐದು ವರ್ಷಗಳ ಕಾಲ ದುಡಿದದ್ದನ್ನು ಐದೇ ತಿಂಗಳಲ್ಲಿ ಕಳೆಯಬೇಕಾಗುತ್ತಿತ್ತು ಅಲ್ಲಿ. ವಾರ ವಾರ ತಪ್ಪದೇ ಅವರ ಸುಖ ದುಃಖ ವಿಚಾರಿಸಿಕೊಳ್ಳುತ್ತಿದ್ದೆ. ನಡುವಿನಲ್ಲಿ ಕಾರ್ಯನಿಮಿತ್ತ ಕಡಿದು ಹೋದ ನಮ್ಮ ಸಂಪರ್ಕ ಪುನಃ ಸ್ಥಾಪನೆಯಾದದ್ದು ವೀಸಾ ಅವಧಿ ಮುಗಿದರೂ PLAB ಪರೀಕ್ಷೆ ಪಾಸು ಮಾಡಲು ಸಾಧ್ಯವಾಗದೆ ವೀಸಾ ವಿಸ್ತರಣೆಯ ಅಗತ್ಯ ಬಿದ್ದಾಗ.

ಪುನಃ ನನ್ನ ಸ್ಪಾನ್ಸಾರ್ ಲೆಟರ್ ಬೇಕಿತ್ತು. ಮಾಡಿ ಕೊಟ್ಟಿದ್ದೆ. ಉಳಿದ ಹಾಗೆ ನನ್ನ ಅವರ ಸಂಪರ್ಕ ಉಂಟಾಗುತಿದ್ದುದೆ ಪ್ರತಿ ಮೂರು ತಿಂಗಳಿಗೊಮ್ಮೆ ಅವರ ವೀಸಾ ವಿಸ್ತರಣೆಯ ಕಾಲಕ್ಕೆ. ಪ್ರತಿ ಬಾರಿಗೂ ನನಗೆ ಖರ್ಚಾಗುತ್ತಿದ್ದುದು ಇಪ್ಪತ್ತೈದರಿಂದ ಮೂವತ್ತು ಪೌಂಡುಗಳು. ಮತ್ತು ಇಂಗ್ಲೆಂಡಿನಂತಹ ದೇಶದಲ್ಲಿ ಅತ್ಯಮೂಲ್ಯವಾದ ನನ್ನ ಸಮಯ! ಹೀಗೆ ನಡೆದದ್ದು ಮೂರು ಬಾರಿ. ಆದರೆ ಪರೀಕ್ಷೆ ಪಾಸಾದಾಗ ನನ್ನ ನೆನಪಾಗಲಿಲ್ಲ ಅವರಿಗೆ! ವೀಸಾ ವಿಸ್ತರಣೆಯ ಕಾಲಕ್ಕೆ ಉಪಯೋಗಿಸುತ್ತಿದ್ದ ನನ್ನ ಫೋನ್ ನಂಬರವಂತೂ ಇದ್ದೇ ಇತ್ತು ಅವರ ಹತ್ತಿರ.

ವ್ಯವಹಾರ ನಿಮಿತ್ತ ಬೇರೆ ಬೇರೆ ಡಾಕ್ಟರುಗಳನ್ನು ಭೇಟಿಯಾದಾಗ ಅಲ್ಲಲ್ಲಿ ಇವರ ವಿಷಯ ಕಿವಿ ಮೇಲೆ ಬೀಳುತ್ತಿತ್ತು. ಹಾಂ…ಹೌದಾ ಎಂದು ಸುಮ್ಮನಿರುತ್ತಿದ್ದೆ. ಅಲ್ಲಿ ಫೆಲೋಶಿಪ್ ಮಾಡಿ ಜೊತೆಗೇ ಹಣವೊಂದಿಷ್ಟನ್ನೂ ಮಾಡಿಕೊಂಡು ಈಗ ಇಂಡಿಯಾಕ್ಕೆ ಮರಳಿ ಬಂದು ಚನ್ನಾಗಿ ಸೆಟ್ಲ್ ಆಗಿದ್ದಾರಂತೆ. ನಾನೆಲ್ಲಿದ್ದೇನೆ ಹೇಗಿದ್ದೇನೆ ಎನ್ನುವುದೂ ಚನ್ನಾಗಿ ಗೊತ್ತಿದೆ ಅವರಿಗೆ. ಆದರೆ ಭೂಪತಿ ಇಲ್ಲಿಗೆ ಬಂದು ನಾಲ್ಕು ವರ್ಷವಾದರು ನನ್ನನ್ನು ಸಂಪರ್ಕಿಸಿಲ್ಲ. ನನಗೆ ಆ ನಿರೀಕ್ಷೆಯೂ ಇಲ್ಲ ಬಿಡಿ. ಅವರಿಗೂ ಅಷ್ಟೆ. ಇಲ್ಲಿ ವೀಸಾ ವಿಸ್ತರಣೆಯ ಅಗತ್ಯವೇನೂ ಇಲ್ಲವಲ್ಲ.

ನಾನು ಅಷ್ಟೆಲ್ಲವನ್ನು ಮಾಡಿದ್ದು ಎರಡು ಕಾರಣಗಳಿಗಾಗಿ. ಒಂದು ನನ್ನ ದೇಶದ ಒಬ್ಬ ಮನುಷ್ಯನಿಗಾದರೂ ಸಹಾಯ ಮಾಡುವಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ ಅಂದಮೇಲೆ ಖಂಡಿತವಾಗಿಯೂ ಏನಾದರೂ ಮಾಡಲೇ ಬೇಕು ಎನ್ನುವ ಆದರ್ಶಕ್ಕೆ ಬಲಿಬಿದ್ದುದರಿಂದ. ಎರಡನೆಯದಾಗಿ ಆ ಸಹಾಯ ಪಡೆಯುವ ವ್ಯಕ್ತಿಗಳು ನನ್ನ ಸಂಪರ್ಕಕ್ಕೆ ಬರುತಿದ್ದುದು ನನಗೆ ತೀರಾ ಬೇಕಾದವರ ಮೂಲಕ.

ಹಾಗೆ ನನ್ನ ಸಹಾಯ ಪಡಕೊಂಡವರಲ್ಲಿ ಕೋಟಿಗಟ್ಟಲೆ ಆಸ್ತಿಯಿದ್ದ ಶ್ರೀಮಂತರ ಮಕ್ಕಳಿದ್ದಾರೆ. ಪ್ರಮುಖ ರಾಜಕೀಯ ವ್ಯಕ್ತಿಗಳ ಸಂಬಂಧಿಕರಿದ್ದಾರೆ. ಮತ್ತು ಅವರೆಲ್ಲ ಈಗ ಅತ್ಯುತ್ತಮ ಸ್ಥಾನದಲ್ಲಿದ್ದಾರೆಂಬುದೂ ಹೌದು. ಆದರೆ ಯಾರೂ ಜೀವ ವಿಮಾ ನಿಗಮದ ಮೆನೇಜರನೊಬ್ಬ ತಮ್ಮ ಜೀವನದಲ್ಲಿಯ ಮಹತ್ತರ ತಿರುವಿಗೆ ಕಾರಣನಾಗಿದ್ದಾನೆ ಎನ್ನುವುದನ್ನು ಮರೆತೂ ಹೇಳಲಾರರು.

ಬಹುಶಃ ಪ್ರಪಂಚವೇ ಹಾಗೆ. ಆದರೆ ನನಗೆ ತೀರ ನೋವಿನ ಸಂಗತಿಯೆಂದರೆ ಯಾರಿಗೆ ಇಂತಹ ಅವಕಾಶವನ್ನು ಒದಗಿಸಲು ಸಾಧ್ಯವಾಗಿದ್ದರೆ ನನಗೆ ಅತೀ ಹೆಚ್ಚು ಸಂತೋಷವಾಗುತ್ತಿತ್ತೋ ಅಂತಹ ಅತೀ ಹತ್ತಿರದವರೊಬ್ಬರು ಬರೀ ಬೇರೆಯವರಿಗೆ ನನ್ನ ಮೂಲಕ ಸಹಾಯ ದೊರಕಿಸಿಕೊಡುವುದರಲ್ಲಿಯೇ ತೃಪ್ತಿ ಹೊಂದಿದರೇ ವಿನಃ ತಮ್ಮ ಸ್ವಂತಕ್ಕೆ ಏನೂ ತೆಗೆದುಕೊಳ್ಳಲಿಲ್ಲ – ಅಲ್ಲ ಅವರಿಗೆ ನಾನು ಏನೂ ಮಾಡಲಿಲ್ಲವಲ್ಲ – ಎನ್ನುವುದು. ಆ ನೋವೊಂದು ಮನಸ್ಸಿನ ಮೂಲೆಯಲ್ಲಿ ಕುಳಿತು ಕಾಡುತ್ತಲೇ ಇದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

January 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: