ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಗ್ರಾಹಕ ದೊರೆ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

7

ಗ್ರಾಹಕ ದೊರೆ

ಇಂಡಿಯಾಕ್ಕೆ ವಾಪಾಸು ಬಂದಕೂಡಲೇ ತಿರುಗಾಡಲು ನಮಗೊಂದು ಕಾರು ಬೇಕಿತ್ತು. ಹೆಜ್ಜೆಗಳಷ್ಟೂ ನಡೆಯಲು ಸಾಧ್ಯವಾಗದಂತೆ ವಾಹನಕ್ಕೆ ಒಗ್ಗಿಕೊಂಡಿದ್ದ ನಮಗೆ ವಾಹನದ ಅಗತ್ಯ ಅಷ್ಟು ತೀವ್ರವಾಗಿತ್ತು. ಮಾರುಕಟ್ಟೆಯಲ್ಲಿ ಬಹಳಷ್ಟು ಕಾರುಗಳು ಲಭ್ಯವಿದ್ದಿದ್ದರೂ ಪರಿಚಯದ ಭೂತವೇ ಒಳ್ಳೆಯದೆಂದು ಒಂದು ಚಿಕ್ಕ ಕಾರನ್ನೇ ಆಯ್ದುಕೊಂಡಿದ್ದೆವು. ನಿಸಾನ್, ಆಡಿ, ಟೊಯೋಟಾದಂತಹ ದೊಡ್ಡ ದೊಡ್ಡ ಕಾರುಗಳನ್ನು ಓಡಿಸಿದವನಿಗೆ ಮೊದ ಮೊದಲು ಇದೊಂದು ಆಟಿಗೆಯ ಕಾರಿನಂತೆ ಕಂಡರೂ ನಿಧಾನವಾಗಿ ಅಭ್ಯಾಸವಾಗಿತ್ತು.

ನಾಲ್ಕು ವರ್ಷಗಳ ಕಾಲ ಶಿಸ್ತಿನ ಡ್ರೈವಿಂಗ್ ಮತ್ತು ಟ್ರಾಫಿಕ್ ನಿಯಮಗಳಿಗೆ ಅಭ್ಯಾಸವಾಗಿದ್ದವನಿಗೆ ಸುರುವಿನಲ್ಲಿ ಬಹಳ ಹಿಂಸೆಯಾಗಿತ್ತು. ನಾಲ್ಕು ವರ್ಷಗಳ ಕಾಲ ಅಲ್ಲಿ ಡ್ರೈವಿಂಗ್ ಮಾಡುವಾಗ ಅನುಭವಿಸುತ್ತಿದ್ದ ಆ ನಿಶ್ಶಬ್ದತೆಯ ಸುಖ ಇಲ್ಲಿ ನುಚ್ಚು ನೂರಾಗಿತ್ತು. ಬೇರೆಯವರಿಂದ ಹಾರ್ನ್ ಹೊಡೆಸಿಕೊಳ್ಳುವಷ್ಟು ಅವಮಾನಕರವಾದ ಡ್ರೈವಿಂಗ್ ಬೇರೆಯಿಲ್ಲ ಎನ್ನುವ ಪರಿಸ್ಥಿತಿಯಿಂದ ಇಲ್ಲಿನ ಮಾತೆತ್ತಿದರೆ ಹಾರ್ನ್, ಎಡ ಬಲಗಳಿಂದ ಕೊನೆಗೆ ಸಾಧ್ಯವಾದರೆ ಮೇಲಿನಿಂದಲೂ ಓವರ್ ಟೇಕ್ ಮಾಡಲು ಕಾಯುತ್ತಿದ್ದ ಇತರೇ ವಾಹನಗಳು ಅಬ್ಬ ಹುಚ್ಚು ಹಿಡಿಯುವುದೊಂದು ಬಾಕಿ.

ಎಲಿಸ್ ಇನ್ ವಂಡರ್ ಲ್ಯಾಂಡ್ ನಂತಾಗಿತ್ತು. ಸ್ವಲ್ಪವೇ ದಿನ. ಮತ್ತೆ ಹತ್ತರಲ್ಲಿ ಒಂದಾಗಿ ಹಲವರಲ್ಲಿ ಬೆರೆತು `ಛೆ.. ನಾನು ಹುಟ್ಟಿದ್ದೇ ಈತೆರನ ಅಶಿಸ್ತಿನ ಜೀವನ ನಡೆಸುವುದಕ್ಕೆ ಮತ್ತು ಅಂತಹುದೇ ಇತರರೊಂದಿಗೆ ಸೇರಿ ಬದುಕಲು. ಹಾಗಿರುವಾಗ ಬರೀ ನಾಲ್ಕು ವರ್ಷಗಳ ಕಾಲ ಶಿಸ್ತಿನ, ಕರಾರುವಕ್ಕಾಗಿ ನಿರ್ದೇಶಿಸಲ್ಪಟ್ಟ ಬದುಕನ್ನು ನಡೆಸಿ ಬಂದೆನೆಂದ ಕೂಡಲೇ ನಮ್ಮದೇ ಆದ ಈ ಸಂಪ್ರದಾಯವನ್ನು ಮರೆಯಲಾದೀತೇ ಎಂದುಕೊಳ್ಳುತ್ತ ಗುಂಪಿನಲ್ಲಿ ಗೋವಿಂದ ಎಂದಿದ್ದೆ. ಇದು ಡ್ರೈವಿಂಗಿಗೆ ಮಾತ್ರವಲ್ಲ. ಬಸ್ ಸ್ಟಾಂಡಿನಲ್ಲಿ, ರೈಲ್ವೇ ಸ್ಟೇಶನ್ನಿನಲ್ಲಿ ಟಿಕೇಟಿಗಾಗಿ ಕ್ಯೂ ನಿಲ್ಲುವುದರಿಂದ ಹಿಡಿದು ಮದುವೆಯ ಮನೆಗಳಲ್ಲಿ ಊಟದ ಎಲೆ ಹಿಡಿಯುವುದರ ವರೆಗೆ.


ನಾವು ಕೊಂಡ ಕಾರಿನ ಬಗ್ಗೆ ಬರುತ್ತೇನೆ. ಕೊಂಡ ತಿಂಗಳೊಪ್ಪತ್ತಿನಲ್ಲಿಯೇ ಆ ದಿನಗಳಲ್ಲಿ ಎಲ್ಲರೂ ಹೇಳುತ್ತಿದ್ದ ಆ ಚಿಕ್ಕ ಕಾರಿನಲ್ಲಿ ಕ್ಲಚ್ ಪ್ರಾಬ್ಲಮ್ – ಎನ್ನುವುದು ನನ್ನ ಗಮನಕ್ಕೂ ಬಂದಿತ್ತು. ಗರಾಜಿಗೆ ಹೋದರೆ “ಛೆ..ಛೆ..ಅದು ನಿಮ್ಮ ಡ್ರೈವಿಂಗ್‍ನ ಡಿಫೆಕ್ಟ್…ನಮ್ಮ ಕ್ಲಚ್ಚಿನದಲ್ಲ” ಎಂದಿದ್ದರು. ಜಗಳ ಮಾಡುವ ಮೂಡಿಲ್ಲದ ನಾನು ಅವರು ಹೇಳಿದ ದರವನ್ನು ತೆತ್ತು ರಿಪೇರಿ ಮಾಡಿಸಿಕೊಂಡು ವಾಪಾಸು ಬಂದಿದ್ದೆ. ನನ್ನದೇ ತಪ್ಪೆಂದು ಗಂಟಾ ಘೋಷವಾಗಿ ಹೇಳುವುದರ ಮೂಲಕ ವಾರಂಟಿಯ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು.

ಇನ್ನೆರಡು ತಿಂಗಳಿಗೆ ಅದೇ ಸಮಸ್ಯೆ ಎದುರಾದಾಗ ಅವರದ್ದು ಪುನಃ ಅದೇ ಉತ್ತರ. ನನ್ನ ತಾಳ್ಮೆಯ ಮಿತಿಯೂ ಮೀರಿತ್ತು. ಮೇಲಾಗಿ ನನ್ನ ಡ್ರೈವಿಂಗೇ ಕೆಟ್ಟದ್ದು ಎನ್ನುವ ಅವರ ಧಾಷ್ಟ್ರ್ಯ ನನ್ನನ್ನು ರೊಚ್ಚಿಗೇಳಿಸಿತ್ತು. ಜತೆಯಲ್ಲಿಯೇ ಜೇಬಿನಲ್ಲಿನ ಪೌಂಡಿನ ನೋಟುಗಳ ಭಾರವೂ ಕಡಿಮೆಯಾಗಿತ್ತಾದ್ದರಿಂದ ಈ ಬಾರಿ head on ತೆಗೆದುಕೊಳ್ಳುವುದೇ ಎಂದು ನಿರ್ಧರಿಸಿಯೇ ಹೋಗಿದ್ದೆ. ಅದೇ ಸಿಟ್ಟಿನಲ್ಲಿ ಗಂಟೆಗಟ್ಟಲೆ ಅವರ ಇಂಜಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಿಟಿಯನ್ನೆಲ್ಲ ಸುತ್ತಿಸಿದ್ದೆ. `ಹೇಗಿದೆ ಡ್ರೈವಿಂಗ್’ ಎನ್ನುವ ನನ್ನ ಪ್ರಶ್ನೆಗೆ ಉತ್ತರ ಕೊಡಲೂ ಬಾರದಷ್ಟು ದಂಗಾಗಿದ್ದ ಅವನು. ಹೂತು ಹೋದ ದನಿಯಲ್ಲಿ `ಪರ್ಫೆಕ್ಟ್..’ ಎಂದಿದ್ದ.

`ಹಾಗಾದರೆ ಕ್ಲಚ್ಚಿನ ವಾರಂಟಿ’
`ಕಂಪೆನಿಗೆ ಬರೆಯಬೇಕು’ ಅವನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಉತ್ತರ.

ನಾನೂ ಬರೆದೆ. ಬರೆದೇ ಬರೆದೆ…ನಡುವಿನಲ್ಲಿ ಪುನಃ ಅದೇ ಸಮಸ್ಯೆ ಉದ್ಭವಿಸಿ ಸ್ವಂತ ಹಣ ಕೊಟ್ಟು ರಿಪೇರಿಯನ್ನೂ ಮಾಡಿಸಿದೆ. ಒಂದು ದಿನ ಬೇಸತ್ತು ಗರಾಜಿಗೆ ಪೋನ್ ಮಾಡಿದರೆ “ಸರ್, ನಿಮ್ಮ ಕೇಸು ಡೀಲ್ ಮಾಡುತ್ತಿದ್ದ ಎಂಜಿನಿಯರ್ ಕೆಲಸ ಬಿಟ್ಟು ಹೋಗಿದ್ದಾರೆ”. ಎನ್ನುವ ಉತ್ತರ. ಹಾಗಾದರೆ ನನ್ನ ಕ್ಲಚ್ಚಿನ ವಾರಂಟಿಯ ಗತಿ? ದೇವರೇ ಗತಿ! ನನಗೆ ಕಂಪೆನಿಯವರಿಂದ ಬರಬೇಕಿದ್ದ 3200ರೂಪಾಯಿ ಮಾತ್ರ ಭದ್ರವಾಗಿ ಅವರ ಹತ್ತಿರವೇ ಇದೆ.

ಅದೇ ಇಂಗ್ಲೆಂಡಿನಲ್ಲಿದ್ದ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಅಂಶ ನಿಸಾನ್ ಕಾರುಗಳನ್ನೇ ಉಪಯೋಗಿಸುತ್ತಿದ್ದೆ. ಅಲ್ಲಿ ಸಿಗುತ್ತಿದ್ದ ಕಾರುಗಳಲ್ಲಿ ಅತಿ ಮೇಲ್ದರ್ಜೆಯ ಕಾರು ಎಂದೆನಿಸಿಕೊಳ್ಳದಿದ್ದರೂ ನಮಗೆ ಸಮಸ್ಯೆಯನ್ನೇನು ಕೊಡುತ್ತಿರಲಿಲ್ಲವಾದ್ದರಿಂದ ಪದೇ ಪದೇ ಅದನ್ನೇ ಕೊಳ್ಳುತ್ತಿದ್ದೆವು. ಜೊತೆಗೆ ಅದರ ಬೆಲೆಯೂ ಅಂತಹ ಹೆಚ್ಚಲ್ಲ ಎಂಬುದೂ ಕಾರಣ. ಹಾಗೆಯೇ ಅವರ `ಪ್ರೈಮೇರಾ’ ಮಾಡೆಲ್ ಹೊರ ಬಂದಾಗ ಹೊಸದಾಗಿ ಕಂಪೆನಿಯ ಹೆಸರಿನಲ್ಲಿ ಎರಡು ಕಾರನ್ನು ಖರೀದಿಸಿ ಉಪಯೋಗಿಸುತ್ತಿದ್ದೆವು.

1993ರ ಸುಮಾರಿಗೆ ಬಂದ ಮಾಡೆಲ್ ಅದು. ಪ್ರಥಮ ಬಾರಿಗೆ ಕಾರ್ಬುರೆಟ್ಟರ್ ಬದಲಿಗೆ ಕಂಪ್ಯೂಟರ್ ನಿಯಂತ್ರಿತ ಸ್ಪ್ರೇ ವ್ಯವಸ್ಥೆಯನ್ನು ಹೊಂದಿದ ಕಾರು ಎಂದು ಕೇಳಿದ ನೆನಪು. 95 ರ ಹೊತ್ತಿಗೆ ಆ ಮಾಡೆಲ್‍ನ ಒಂದೆರಡು ಕಾರುಗಳಲ್ಲಿ ಸಮಸ್ಯೆ ತಲೆದೋರಿದೆಯೆಂದು ದೂರುಗಳು ಬಂದುವಂತೆ. ಕೂಡಲೇ ಕಂಪೆನಿಯವರು ಆ ಎರಡು ವರ್ಷಗಳಲ್ಲಿ ಪ್ರೈಮೇರಾ ಕಾರುಗಳನ್ನು ಖರೀದಿಸಿದವರೆಲ್ಲರನ್ನೂ ಹುಡುಕಿ ಕಾಗದ ಬರೆದಿದ್ದರು.

“ನಿಮ್ಮ ಕಾರಿನ CPU ನಲ್ಲಿ ಏನಾದರೂ ಸಮಸ್ಯೆಯಿದ್ದರೆ ನಿಮ್ಮ ಹತ್ತಿರದ ನಿಸಾನ್ ಸರ್ವೀಸ್ ಪಾಯಿಂಟ್‍ಗೆ ಹೋಗಿ. ಉಚಿತವಾಗಿ ನಿಮ್ಮ ಕಾರಿನ CPU ವನ್ನು ಬದಲಾಯಿಸಿ ಕೊಡುತ್ತೇವೆ”. ಆ ಭಾಗದ ಬೆಲೆಯೆಷ್ಟು ಗೊತ್ತೇ? ಎರಡು ಸಾವಿರ ಪೌಂಡುಗಳು. ಅಂದರೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳು.

ಅಷ್ಟೇ ಅಲ್ಲ 96 ರಲ್ಲಿ ಅಂದರೆ ಕಾರು ಮಾರುಕಟ್ಟೆಗೆ ಬಂದು ಮೂರು ವರ್ಷಗಳ ನಂತರ ಅದರ hose pipe ಒಡೆದುದರ ಬಗ್ಗೆ ಒಂದೆರಡು ದೂರುಗಳು ಬಂದುವಂತೆ. ಕೂಡಲೇ ಕಂಪೆನಿಯವರು ಎಲ್ಲಾ ಕಾರುಗಳನ್ನು ವಾಪಾಸು ಕರೆಸಿ ತೀವ್ರ ಕ್ಷಮಾ ಯಾಚನೆಯೊಂದಿಗೆ ಪ್ರತಿಯೊಂದು ಕಾರಿನ hose pipe ನ್ನು ಉಚಿತವಾಗಿ ಬದಲಾಯಿಸಿ ಕೊಟ್ಟಿದ್ದರು. ಇವು ಒಂದೆರಡು ಉದಾಹರಣೆಗಳು ಮಾತ್ರ.

ಇತ್ತೀಚೆಗೆ ಫೋ ರ್ಡ್ ಕಾರಿನ ಕಂಪೆನಿ ಇದನ್ನೇ ಮಾಡಿತ್ತು. ಫೈರ್‍ಸ್ಟೋನ್ ಟೈರ್ ಕಂಪೆನಿಯವರೂ ಇದನ್ನೇ ಮಾಡಿದ್ದರು. ಆದರೆ ಅದೇ ಇಂಡಿಯನ್ ಕಂಪನಿಯೊಂದರ ರೇಡಿಯಲ್ ಟಯರ್ ತೆಗೆದುಕೊಂಡ ಎರಡೇ ತಿಂಗಳುಗಳೊಳಗೆ ಒಡೆದದ್ದನ್ನು ಕಂಪ್ಲೇಂಟ್ ಮಾಡಿದರೆ ಕಂಪೆನಿಯ ಎಂಜಿನಿಯರನ್ನು ಕಳುಹಿಸಿದ್ದರು. ಅವ ಬಂದವ ಆ ಟೈರಿನ ಉದ್ದ ಅಗಲ ದಪ್ಪವನ್ನೆಲ್ಲ ಅಳತೆ ಮಾಡಿ ನಂತರ `ಟೈರಿನ ಒಳಭಾಗದಿಂದ ಯಾವುದೋ ಹರಿತವಾದ ವಸ್ತುವೊಂದು ತಗುಲಿದ್ದರಿಂದ ಈ ಟೈರ್ ಒಡೆದಿದೆ’ ಎಂದು ಶರಾ ಬರೆದಿದ್ದ.

ಟೈರಿನ ಒಳಭಾಗದಲ್ಲಿ ಟ್ಯೂಬಲ್ಲದೆ ಬೇರೆ ಹರಿತವಾದ ವಸ್ತು ಏನಿರುತ್ತದೆ ಎಂದು ಚಿಂತೆ ಮಾಡುತ್ತಿರುವಾಗಲೇ `ಟೈರಿನ ಈ ಪರಿಸ್ಥಿತಿಗೆ manufacturing defect ಖಂಡಿತ ಕಾರಣವಲ್ಲ. ಆದರೂ ನಿಮಗೆ ಹೊಸ ಟೈರಿನ ಮೇಲೆ 25% ರಿಯಾಯಿತಿಯನ್ನು ಶಿಫಾರಸು ಮಾಡುತ್ತೇನೆ’ ಎಂದು ಹೇಳಿ ಬೈಕ್ ಹತ್ತಿ ಹೋಗಿಯೇ ಬಿಟ್ಟಿದ್ದ. ನಾನು ತೆರೆದ ಬಾಯಿ ಬಿಟ್ಟುಕೊಂಡು ನೋಡುತ್ತಲೇ ಇದ್ದೆ. ಎಲ್ಲಿಯ ಇಂಗ್ಲೆಂಡ್! ಎಲ್ಲಿಯ ಇಂಡಿಯ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

January 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: