ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಪೋಲೀಸರೆಂಬ ಜನಸೇವಕರು..

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

4

ಪೋಲೀಸರೆಂಬ ಜನಸೇವಕರು

ಇತ್ತೀಚೆಗಷ್ಟೆ ನನ್ನ ಕಾರಿನ ಸ್ಟೀರಿಯೋ ಸಿಸ್ಟಮ್ ಕಳವಾಗಿತ್ತು. ಇಂಗ್ಲಂಡಿನಿಂದ ತಿರುಗಿ ಬಂದ ಹೊಸತರಲ್ಲಿ ಇನ್ನೂ ಪೌಂಡುಗಳನ್ನು ಪರಿವರ್ತಿಸಿದ ರೂಪಾಯಿಗಳು ಹಸಿ ಹಸಿಯಾಗಿದ್ದ ಕಾಲದಲ್ಲಿ ಹೊಸತಾಗಿ ಕೊಂಡುಕೊಂಡಿದ್ದ ಕಾರಿಗೆ ಹೊಸ ಹೆಂಡತಿಯನ್ನು ಶೃಂಗರಿಸುವಷ್ಟೇ ಸಂಭ್ರಮದಲ್ಲಿ ನವೀನ ಉಪಕರಣಗಳನ್ನು ಜೋಡಿಸುವ ಉತ್ಸಾಹದಲ್ಲಿ ಕೊಂಡಿದ್ದ ಒರಿಜಿನಲ್ ಜರ್ಮನಿಯ ಸ್ಟೀರಿಯೋ. ಬೆಲೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು. ಪೌಂಡುಗಳ ನೆರಳೂ ಇಲ್ಲದಂತೆ ಖಾಲಿಯಾದ ಕೈನಲ್ಲಿ ಈಗ ಬೇಕೆಂದರೂ ಅಂತಹುದನ್ನು ಕೊಳ್ಳಲಾಗದ ಪರಿಸ್ಥಿತಿ. ಸಂಕಟವಾಗಿತ್ತು. ಜತೆಗೆ ಸಹೋದ್ಯೋಗಿಗಳ ಒತ್ತಾಯ. ಫಲಿತಾಂಶ ಗೊತ್ತಿದ್ದೂ ಸ್ಟೇಶನ್ನಿಗೆ ಹೋಗಿದ್ದೆ. `ಕಾರನ್ನು ಎಲ್ಲಿಟ್ಟಿದ್ದಿರಿ’ ಅವರ ಮೊದಲ ಪ್ರಶ್ನೆ.

ಕಾರನ್ನು ಯಾರಾದರೂ ಲಾಕರುಗಳಲ್ಲಿಡುತ್ತಾರೆಯೆ ಎನಿಸಿದರೂ ಪ್ರಶ್ನೆ ಸ್ವಾಭಾವಿಕವಾಗಿಯೇ ಕಂಡಿತ್ತಾದ್ದರಿಂದ ನಿಜವನ್ನೇ ಹೆಳಿದ್ದೆ. `ಆಫೀಸಿನ ಕಾಂಪೌಂಡಿನಲ್ಲಿ’. `ಅಂದರೆ ಅಲ್ಲಿಯೇ ಕಳುವಾಗಿದೆ’ `ಹೌದು’ ಎಂದಿದ್ದೆ. `ಅಂದರೆ ನಿಮ್ಮ ಕಾಂಪೌಂಡಿನಲ್ಲಿಯೇ ಆಗಿದೆಯೆಂದಾಗ ಅದು ನಿಮ್ಮ ಅಜಾಗ್ರತೆಯೆಂದಾಗುತ್ತದೆ’ ನನ್ನ ಪ್ರವರ್ತಿಗೆ ಒಗ್ಗದ ಈ ತೆರನ ಪ್ರತ್ಯಾರೋಪ ತೀರ ಹೊಸತೆಂದೆನಿಸಿ ನಿರುತ್ತರನಾಗಿದ್ದೆ. ಈ ಪ್ರಪಂಚದಲ್ಲಿನ ಎಲ್ಲ ಕಳ್ಳತನಗಳೂ ದರೋಡೆಗಳೂ ಮಾಲೀಕರ ಅಜಾಗ್ರತೆಯಿಂದಲೇ ಆಗುತ್ತವೆ ಎಂದ ಹಾಗಾಯಿತು. ಅಂದರೆ ಅವು ಯಾವುದರ ಬಗ್ಗೆಯೂ ಪೋಲೀಸರ ಜವಾಬ್ದಾರಿಯೇ ಇಲ್ಲ! ಅಂತೂ ಏನೆಲ್ಲ ಚರ್ಚೆ ಮಾಡಿ ಅವರನ್ನು ಒಪ್ಪಿಸಿ ಕಂಪ್ಲೇಂಟನ್ನು ಸ್ವೀಕರಿಸುವಂತೆ ಮಾಡಿದ್ದೆ. ಮೂರು ತಿಂಗಳ ನಂತರ ಅವರ ಮಾಮೂಲಿ ನೋಟೀಸು. ಕನ್ನಡದಲ್ಲಿಯೇ ಇದ್ದರೂ ಅದರ ಅರ್ಥ ಅವರಿಗೇ ತಿಳಿಯಬೇಕು. ಯಾರ ಯಾರ ಹತ್ತಿರವೋ ಓದಿಸಿದ ಮೇಲೆ ತಿಳಿದದ್ದು `ಒಂದೋ ನೀವು ಸುಳ್ಳು ಹೇಳಿರಬೇಕು. ಅಥವಾ ….. ಎನ್ನುವ ಅರ್ಥದ ಪತ್ರವಂತೆ. `ಅದರರ್ಥ ನಿಮ್ಮ ಕೇಸು ಕ್ಲೋಸಾಗಿದೆ ಎಂದು’ ಅದನ್ನೂ ಆ ಕಾಗದ ಓದಿ ಹೇಳಿದವರೇ ಹೇಳಿದ್ದು.

ಆ ಕಾಗದದ ಧಾಟಿ ನನ್ನನ್ನು ತೀವ್ರ ರೊಚ್ಚಿಗೇಳಿಸಿತ್ತು. ಪುನಹ ಒಮ್ಮೆ ಹೋಗಿ ಗಲಾಟೆ ಮಾಡಿ ಬರಲೇ ಎನ್ನಿಸಿದ್ದರೂ ಅದರ ನಿಷ್ಫಲತೆಯ ಅರಿವಿದ್ದ ನಾನು ಕೆಸರಿಗೆ ಕಲ್ಲು ಎಸೆಯುವ ಕೆಲಸ ಬೇಡವೆಂದು ಸುಮ್ಮನಾಗಿದ್ದೆ.

ಸುಮಾರು ಮೂವತ್ತು ವರ್ಷಗಳ ಹಿಂದೆ ಮಲೆನಾಡು ಪ್ರದೇಶದ ಒಂದು ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತಿದ್ದೆ. ಬೀಗ ಹಾಕಿದ ಮನೆಯನ್ನು ಬಿಟ್ಟು ವ್ಯವಹಾರದ ನಿಮಿತ್ತ ಪರ ಊರಿಗೆ ಹೋದವ ಎರಡು ದಿನ ಬಿಟ್ಟು ವಾಪಾಸು ಬಂದಾಗ ಗೊತ್ತಾಗಿತ್ತು ಮುನ್ನಾದಿನ ರಾತ್ರಿ ಮನೆ ಬೀಗ ಒಡೆದು ಕಳ್ಳತನದ ಪ್ರಯತ್ನ ನಡೆದಿತ್ತೆಂದು. ಪಕ್ಕದ ಮನೆಯವರು ಕೊಟ್ಟ ಕಂಪ್ಲೇಂಟಿನ ಮೇಲೆ ಬಂದ ಪೋಲೀಸರು ಕಳ್ಳರು ತೆಗೆದುಕೊಂಡು ಹೋದ ಉತ್ತಮವಾದ ಬಟ್ಟೆಗಳು ಮತ್ತು ಕ್ಯಾಸೆಟ್ಟುಗಳ ಬಗ್ಗೆ ಚಿಂತೆಯೇ ಮಾಡದೆ ಕಳ್ಳರು ಬಿಟ್ಟು ಹೋಗಿದ್ದ ಆ ಕಾಲದಲ್ಲಿ ತೀರ ಪ್ರಸಿದ್ಧವಾಗಿದ್ದ ಸೋನಿ `ಟೂ-ಇನ್-ಒನ್’ ಸೆಟ್ಟನ್ನು ಎತ್ತಿಕೊಂಡು ಹೋಗಿದ್ದರು. ನಾನು ಹೋಗಿ ಅದನ್ನಾದರೂ ವಾಪಾಸು ಕೊಡಿ ಎಂದರೆ ಕಂಪ್ಲೇಂಟು ಬರೆಸಿಕೊಳ್ಳುವುದರ ಜತೆಗೆ ಅದು `ಕದ್ದ ಮಾಲು ಸಿಕ್ಕಿದ್ದು’ ಆದ್ದರಿಂದ ಕೋರ್ಟಿನಲ್ಲಿ ಹಾಜರುಪಡಿಸಲು ಬೇಕು ಎಂದೆಲ್ಲ ಹೇಳಿದವರು ನಾನು ವಾದ ಮಾಡಿದಾಗ `ಅದರ ಮೇಲೆ ಕಳ್ಳನ ಫಿಂಗರ್ ಪ್ರಿಂಟ್ ಇದೆ. ಅದಕ್ಕೇ ಬೇಕು’ಎಂದಿದ್ದರು. ಆಗಲೇ ಒಂದಿಷ್ಟು ಜನ ಪೋಲೀಸರು ಅದೇ ಟೇಪ್ ರಿಕಾರ್ಡರನ್ನು ಹಾಕಿಕೊಂಡು ಹಾಡು ಕೇಳುತಿದ್ದುದು ನನ್ನ ಕಿವಿಯ ಮೇಲೆ ಬಿದ್ದರೂ ಏನೂ ಮಾಡಲಾಗದೆ ವಾಪಾಸು ಬಂದಿದ್ದೆ. ಆಗಿನ ದಿನಗಳಲ್ಲಿ ಕಷ್ಟಪಟ್ಟು ಕೂಡಿ ಹಾಕಿದ ಹಣದಲ್ಲಿ ಐದು ಸಾವಿರ ಕೊಟ್ಟು ಕೊಂಡ ಆ ಟೇಪ್ ರಿಕಾರ್ಡರ್ ಬಹಳ ದಿನಗಳ ನಂತರ ಕೋರ್ಟಿನ ಮೂಲಕ ವಾಪಾಸು ಪಡೆಯುವಾಗ ಬರಿಯ ಡಬ್ಬವಾಗಿತ್ತಷ್ಟೆ.

ಬೀಗ ಹಾಕಿದ್ದ ಮನೆಗಳಲ್ಲಿ ರಾತ್ರಿ ನಡೆಯುತ್ತಿದ್ದ ಕಳ್ಳತನಗಳೆಲ್ಲವೂ ಪೋಲೀಸರ ನಿರ್ದೇಶನದಲ್ಲಿಯೇ ನಡೆಯುತ್ತಿದ್ದವೆಂದು ಜನ ಮಾತಾಡಿಕೊಳ್ಳುತ್ತಿದ್ದರು.

ಇಂಗ್ಲೆಂಡಿನಲ್ಲಿ ಜುಲೈ ತಿಂಗಳ ಒಂದು ಸಂಜೆ. ಜುಲೈನಲ್ಲಿ ಅಲ್ಲಿ ಕತ್ತಲಾಗುವುದು ರಾತ್ರಿ ಹತ್ತು ಗಂಟೆಯ ಮೇಲೆಯೇ. ಆ ದಿನಗಳಲ್ಲಿ ರಾತ್ರಿ ಊಟಕ್ಕೂ ದೀಪ ಹಾಕುವ ಅಗತ್ಯವೇ ಇರುವುದಿಲ್ಲ ಮತ್ತು ಉಳಿತಾಯ ಪ್ರಜ್ಞೆಯ ಬಹಳಷ್ಟು ಮಂದಿ ಅನಿವಾಸಿ ಭಾರತೀಯರು ತಿಂಗಳುಗಟ್ಟಲೆ ದೀಪ ಬೆಳಗಿಸದೆಯೇ ಕಾಲ ಕಳೆಯುತ್ತಾರೆ.

ಅಂತಹ ದಿನಗಳಲ್ಲಿ ನಾನು ಹೆಂಡತಿ ಮಕ್ಕಳೊಂದಿಗೆ ಶಾಪಿಂಗ್ ಮುಗಿಸಿಕೊಂಡು ಸಂಜೆ ಸುಮಾರು ಏಳರ ಹೊತ್ತಿಗೆ ವಾಪಾಸು ಬರುತ್ತಿದ್ದೆ. ಮನೆಯ ಹತ್ತಿರ ಬಂದಾಗ ಮನೆಯ ಎದುರಿನ ಡ್ರೈವ್ ವೇ ನಲ್ಲಿ ಹತ್ತಾರು ಹುಡುಗರು ಕೈಯಲ್ಲಿ ಹಾರೆ ದೊಣ್ಣೆ ಮತ್ತು ಇತರೇ ಮಾರಕ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದರು. ಸಾಮಾನ್ಯವಾಗಿ ಇಂಗ್ಲೆಂಡಿನಲ್ಲಿ ರೆಸಿಡೆನ್ಶಿಯಲ್ ಏರಿಯಾಗಳಲ್ಲಿ ಯಾರೂ ಹಾಗೆ ನಿಲ್ಲುವುದಿಲ್ಲ. ಬೇರೆಯವರ ಮನೆ ಮುಂದೆಯಂತೂ ಖಂಡಿತ ಇಲ್ಲ. ಇಂಗ್ಲಿಷ್ ಹುಡುಗರೊಂದಿಗೆ ಕೆಲ ಬಲಾಢ್ಯ ನೀಗ್ರೋ ಹುಡುಗರೂ ಇದ್ದರು. ಎಲ್ಲ ಹದಿ ಹರೆಯದವರು. ನಾವಿನ್ನೂ ಇಂಗ್ಲೆಂಡಿಗೆ ಬಂದು ವರ್ಷವಾಗಿತ್ತಷ್ಟೇ. ಎಲ್ಲಿಲ್ಲದ ಭಯ ಆವರಿಸಿದ್ದ ನಮಗೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಭಯ ಹೆಚ್ಚಾಗಿತ್ತು. ಮಕ್ಕಳು ಅಳುವುದೊಂದೇ ಬಾಕಿ. ಗಂಟಲಿನಲ್ಲಿ ಹೂತು ಹೋದ ದನಿಯಲ್ಲಿ ನನ್ನ ಹೆಂಡತಿ ಹೇಳಿದ್ದಳು `ವಾಪಾಸು ಹೋಗಿ ಸ್ವಲ್ಪ ತಡೆದು ಬರೋಣ’ ನಾನು ಉತ್ತರ ಕೊಡದಾಗ ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ತನ್ನ ತಂಗಿಯ ಮನೆಗಾದರೂ ಹೋಗಿಬರೋಣ ಎನ್ನುವ ಸಲಹೆಯನ್ನೂ ಕೊಟ್ಟಿದ್ದಳು. ಇದ್ದುದರಲ್ಲಿಯೇ ನನಗೊಂದು ಧೈರ್ಯ. ನಾವೇನೂ ತಪ್ಪು ಮಾಡಿಲ್ಲ. ಯಾರೊಡನೆ ಜಗಳವಾಡಿಯೂ ಇಲ್ಲ.

ಹೆಚ್ಚೆಂದರೆ ಎಲ್ಲೋ ಪ್ರೋಗ್ರಾಮ್  ತಪ್ಪಾಗಿ ಮನೆಯ ಬಗ್ರ್ಲರ್ ಅಲಾರ್ಮ್ ಹೊಡೆದುಕೊಂಡಿರಬೇಕು (ಸುಮ್ಮ ಸುಮ್ಮನೆ ನಿಮ್ಮ ಬಗ್ರ್ಲರ್ ಅಲಾರ್ಮ್ ಹೊಡೆದುಕೊಂಡರೂ ಅಪರಾಧವೇ ಅಲ್ಲಿ) ಅದಕ್ಕೇ ಎಲ್ಲಾ ಜಮಾಯಿಸಿರಬೇಕು ಎಂದುಕೊಳ್ಳುತ್ತ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತ ಮನೆಯ ಮುಂದೆ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಹುಡುಗರು ಓಡಿ ಬಂದಿದ್ದರು. ಕಾರಿನ ಗಾಜನ್ನಿಳಿಸಿ ಕೇಳಿದರೆ ಒಬ್ಬ ಬಿಳಿಯ ಹುಡುಗ-ನಮ್ಮ ಮನೆಯ ಹಿಂದಿನ ರಸ್ತೆಯಲ್ಲಿ ಕಾರಿನ ಗರಾಜು ನಡೆಸುತ್ತಿದ್ದಾನಂತೆ-ಹೇಳಿದ್ದ “ದಯವಿಟ್ಟು ಒಳಗೆ ಹೋಗಬೇಡಿ. ನಿಮ್ಮ ಮನೆಯ ಹಿಂದಿನ ಕಂಪೌಂಡು ಗೋಡೆಯನ್ನು ಯಾರೋ ಇಬ್ಬರು ಹತ್ತಿ ಹಾರಿದ್ದನ್ನು ನೋಡಿದೆವು. ಪೋಲೀಸರಿಗೆ ಆಗಲೇ ಸುದ್ದಿ ಮುಟ್ಟಿಸಿದ್ದೇವೆ. ಇನ್ನೇನು ಬಂದೇ ಬಿಡಬಹುದು…” ಎನ್ನುತ್ತಿದ್ದಂತೆಯೇ ಪೋಲೀಸ್ ಕಾರು ಬಂದಿತ್ತು.

ನಾವು ನಿರಾಳವಾಗಿ ನಿಟ್ಟುಸಿರು ಬಿಡುತ್ತಿದ್ದ ಹಾಗೆಯೇ ಕಾರಿನಿಂದ ಕೆಳಗಿಳಿದ ಪೋಲೀಸರು ಏನು ಎಂತಹುದು ಎಂದು ವಿಚಾರಿಸ ಹತ್ತಿದ್ದರು. ಹಿಂದೆಯೆ ಪೋಲೀಸ್ ನಾಯಿಗಳ ಪಡೆಯೂ ಬಂದಿತ್ತು. ಎರಡು ಹುಲಿಯಂತಹ ನಾಯಿಗಳನ್ನು ಮನೆಯ ಸುತ್ತ ಹೋಗಬಿಟ್ಟಿದ್ದರು. ಮನೆಯ ಕಾಂಪೌಂಡು ಅಲ್ಲಿ ಇಲ್ಲಿ ಸುತ್ತಾಡಿ ಮನೆಗೊಂದು ಸುತ್ತು ಹಾಕಿ ಬಾಲ ಅಲ್ಲಾಡಿಸುತ್ತ ಬಂದಿದ್ದವು. ಏನೂ ಸುಳಿವು ಸಿಕ್ಕಿಲ್ಲ ಎಂದು ಅದರ ಅರ್ಥ ಎಂದು ಹೇಳಿದ ಪೋಲೀಸರು ಕೂಡಲೇ ವಯರ್ಲೆಸ್ ಸಂದೇಶ ಕಳಿಸಿ ಮತ್ತೆರಡೇ ನಿಮಿಷದಲ್ಲಿ ಪೋಲೀಸ್ ಹೆಲಿಕಾಪ್ಟರ್ ತರಿಸಿದ್ದರು. ದಿಗ್‍ಭ್ರಮೆ ಹಿಡಿದವರಂತೆ ನಾವೆಲ್ಲ ನೋಡುತ್ತಲೇ ಇದ್ದೆವು. ವಿಷಯ ತಿಳಿದ ಹೆಂಡತಿ ಮಕ್ಕಳು ಕಾರಿನಿಂದ ಇಳಿಯುವ ಧೈರ್ಯ ವಹಿಸದಿದ್ದರೂ ನಿರಾಳವಾಗಿ ಉಸಿರಾಡಲು ಆರಂಭಿಸಿದ್ದರು.

ಪೋಲೀಸ್ ಹೆಲಿಕಾಪ್ಟರ್ ಕೆಳನಿಂತ ಪೋಲೀಸಿನವರಿಂದ ಸಿಗ್ನಲ್ ಪಡೆದುಕೊಳ್ಳುತ್ತ ಆ ಬೆಳಕಿನಲ್ಲೂ ಸರ್ಚ್ ಲೈಟ್ ಬೀರುತ್ತ ಮನೆಯ ಮೇಲೆ ಮೂರು ಸುತ್ತು ಹಾಕಿತ್ತು. ಮನೆಯ ಕಾಂಪೌಂಡು ಮತ್ತು ಹಿಂದಿನ ಪಾರ್ಕಿನಲ್ಲಿನ ದೊಡ್ಡ ದೊಡ್ಡ ಪೇದೆಗಳಲ್ಲಿಯೂ ಏನೂ ಇಲ್ಲವೆಂದು ಸಾರುತ್ತ ಹೊರಟು ಹೋಗಿತ್ತು. ನಾಯಿಯ ಪಡೆ ಪುನಹ ಜೀಪು ಸೇರಿತ್ತು. ಮೊದಲಿಗೆ ಬಂದ ಪೋಲೀಸಿನವರಿಬ್ಬರು ಮನೆಯ ಬಾಗಿಲಿನ ಬೀಗ ತೆರೆಸಿ ನನ್ನನ್ನು ಹಿಂದಿಟ್ಟುಕೊಂಡು ಮನೆಯ ಪ್ರತಿಯೊಂದು ಕೋಣೆಗಳನ್ನೂ ಬಚ್ಚಲು ಮನೆಯನ್ನೂ ಸೇರಿದಂತೆ ಹೊಕ್ಕು ಯಾರೂ ಎಲ್ಲಿಯೂ ಅಡಗಿ ಕುಳಿತಿಲ್ಲವೆನ್ನುವುದನ್ನು ಖಚಿತಪಡಿಸಿಕೊಂಡು ಹೊರಬಂದು ಕಾರಿನಲ್ಲಿ ಕಾಯುತ್ತ ಕುಳಿತಿದ್ದ ಹೆಂಡತಿ ಮಕ್ಕಳಿಗೆ ಸಾಂತ್ವನ ಹೇಳಿ ಇನ್ನೇನೂ ಭೀತಿಯಿಲ್ಲ ಒಳಗೆ ಹೋಗಬಹುದು ಎಂದು ಹೇಳಿ ಹೊರಟು ಹೋಗಿದ್ದರು. ಅಲ್ಲಿಯವರೆಗೆ ಹೊರಗಡೆ ನಿಂತು ನನ್ನ ಹೆಂಡತಿ ಮಕ್ಕಳೊಂದಿಗೆ ಮಾತಾಡುತ್ತ ನಡು ನಡುವೆ ಅವರಿಗೆ ಧೈರ್ಯ ತುಂಬುತ್ತಿದ್ದ ಹುಡುಗರ ಗುಂಪೂ ಚದುರಿತ್ತು – ನಮಗೆ ಸಹಜವಾದ `ಬನ್ನಿ ಕಾಫಿ ಕುಡಿದು ಹೋಗುವಿರಂತೆ’ ಎನ್ನುವ ನಮ್ಮ ಉಪಚಾರಕ್ಕೆ ಥ್ಯಾಂಕ್ಸ್ ಹೇಳುತ್ತ. ಇಲ್ಲಿ ಇಂಡಿಯಾದಲ್ಲಿ ಪ್ರತಿಯೊಂದು ಬಾರಿ ಪೋಲೀಸಿನವರೊಂದಿಗೆ ವ್ಯವಹರಿಸುವ ಸಂದರ್ಭ ಬಂದಾಗಲೂ ಅದು ನೆನಪಾಗುತ್ತಿರುತ್ತದೆ.

ಇತ್ತೀಚೆಗಂತು ಕೊಲೆಯಾಗಿ ಬಿದ್ದಿದ್ದ ಅನಾಥ ಹೆಣವೊಂದನ್ನು ತಮ್ಮ ಗಡಿಯಿಂದಾಚೆ ಎಳೆದು ಹಾಕಿ `ಅದು ನಮ್ಮ ವ್ಯಾಪ್ತಿಯೊಳಗೆ ಬರುವುದಿಲ್ಲ ಪಕ್ಕದ ಸ್ಟೇಶನ್ನಿನವರು ನೋಡಿಕೊಳ್ಳಬೇಕು ಅವರಿಗೆ ಸಂಬಂಧಪಟ್ಟಿದ್ದು’ ಎಂದು ಹೇಳಿ ಕೈ ತೊಳೆದುಕೊಂಡ ಪೋಲೀಸಿನವರ ಬಗ್ಗೆ ಪೇಪರಿನಲ್ಲಿ ಓದಿ ಅಚ್ಚರಿಪಟ್ಟದ್ದಂತೂ ಅಷ್ಟಿಷ್ಟಲ್ಲ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

December 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: