ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾಳಿನ ದಾರಿ ದೂರ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

4

ಕಣ್ಣು ನಿದ್ದೆಯಲ್ಲಿ ಅದ್ದಿದಂತೆ ಎಳೆಯುತ್ತಿತ್ತು. ಮನಸ್ಸು ಹಿಂದಕ್ಕೆ ಮುಂದಕ್ಕೆ ಜೀಕುತ್ತಾ ಹೊಸದಾಗಿ ಏನೋ ಬಂಧ ಕಟ್ಟಿಕೊಳ್ಳುತ್ತಿತ್ತು. ಅಷ್ಟರಲ್ಲಿ ಫೋನ್‌ಕಾಲ್ ಬಂತು. ಇಂದಿನ ಜಗಳದ ಪರಿಣಾಮ ಸಹಾ ಮನೆಗೆ ಬರಲಾರರು ಎಂದು ನಿರೀಕ್ಷಿಸಿದ್ದೆ. ನಾನು ಫೋನ್ ರಿಸೀವ್ ಮಾಡದ ಕಾರಣಕ್ಕೆ ಅವರು ಒಂದೇ ಸಮನೆ ಕರೆ ಮಾಡುತ್ತಲೇ ಇದ್ದರು. ರಿಸೀವ್ ಮಾಡುವುದು ಬೇಡವಾಗಿತ್ತು. ಮನಸ್ಸು ಬೇಡ ಅಂದರೂ ಕೈ ಕೇಳಲಿಲ್ಲ ತೆಗೆದುಕೊಂಡೆ. ಮತ್ತವಾದ ಧ್ವನಿಯಲ್ಲಿ, ‘ಮೀಟಿಂಗ್ ಈಗ ಮುಗೀತು. ಸೀದಾ ಅಲ್ಲಿಗೆ ಬರ್ತಾ ಇದೀನಿ’ ಎಂದರು. ಕುಡಿದು ಮನೆಗೆ ಹೋದರೆ ಲಲಿತಕ್ಕ ಸೇರಿಸಲ್ಲ. ಬೆಳೆದ ಮಕ್ಕಳಿರುತ್ತಾರಲ್ಲಾ! ವಾಸ್ತವ ಅವರಿಗೂ ಗೊತ್ತು. ಅದಕ್ಕೆ ಇಲ್ಲಿಗೆ. ಇಲ್ಲಿರುವ ಮಗಳು ಅವರದ್ದಲ್ಲವಲ್ಲ ಅದಕ್ಕೆ ಯೋಚನೆ ಇಲ್ಲ. ನನ್ನ ಅನಿವಾರ್ಯತೆಗೆ ನಾನು ಬೇಡ ಅನ್ನುವುದೂ ಇಲ್ಲ. ಇವತ್ತಿನ ವಿದ್ಯಮಾನದಿಂದ ಅವರೂ ಡಿಸ್ಟರ್ಬ್ ಆಗಿರಬಹುದು ನನಗೆ ಸಮಾಧಾನ ಹೇಳುವ ಉದ್ದೇಶವಿದ್ದರೂ ಇರಬಹುದು. ನಾನು ಬನ್ನಿ ಎಂದು ಹೇಳಲಿಲ್ಲ ಕಾಲ್ ಕಟ್ ಮಾಡಿದೆ. ಅದು ಅವರಿಗೆ ಬನ್ನಿ ಎನ್ನುವುದರ ಸೂಚನೆ ಕೊಟ್ಟಿರುತ್ತದೆ; ಅದೂ ಗೊತ್ತು.

ಸ್ವಲ್ಪ ಹೊತ್ತಿಗೆ ಮನೆಯ ಮುಂದೆ ಕಾರೊಂದು ಬಂದು ನಿಂತ ಶಬ್ದವಾಯಿತು, ಕಿಟಕಿಯಿಂದ ನೋಡಿದೆ ಯಾರೋ ಸಹಾರನ್ನು ಇಳಿಸಿ ಗೇಟಿನ ತನಕ ಬಿಟ್ಟರು. ಮುಂದೆ ಬರದೆ ಇರುವಂತೆ ಅವರನ್ನು ತಡೆದು ವಾಪಾಸು ಹೋಗುವಂತೆ ಸೂಚಿಸಿದರು. ಇಡುವ ಹೆಜ್ಜೆಗೆ ಅಳತೆ ಇಲ್ಲದೆ ತಟ್ಟಾಡುತ್ತಲೆ ಬಾಗಿಲ ಬಳಿ ಬಂದರು. ಇನ್ನು ಬಾಗಿಲು ತೆರೆಯದೆ ಗತ್ಯಂತರವಿಲ್ಲ. ಇದು ನನಗೆ ಅಭ್ಯಾಸವಾಗಿ ಬಿಟ್ಟಿದೆ. ಜಗತ್ತಿಗೆ ಕೂಡಾ. ಹೀಗೆ ಬಂದಾಗ ಮೊದಮೊದಲು ಅಕ್ಕಪಕ್ಕ ಜನ ಬಗ್ಗಿ ನೋಡುತ್ತಿದ್ದರು. ಗುಸು ಗುಸು ಮಾಡುತ್ತಿದ್ದರು. ಸಹಾ ಜಗತ್ತೇ ಆರಾಧಿಸುವ ವ್ಯಕ್ತಿ. ತಮ್ಮ ಬರವಣಿಗೆಯಿಂದ ಸೂಜಿಗಲ್ಲಿನ ಹಾಗೆ ತಮ್ಮೆಡೆಗೆ ಸೆಳೆದುಕೊಳ್ಳಬಲ್ಲರು. ಜನ ಅವರ ಮಾತುಗಳ ಮೊನಚು, ಅಲ್ಲೇ ಹುಟ್ಟುವ ಅರ್ಥಗಳು ಅದನ್ನು ಪ್ರಸೆಂಟ್ ಮಾಡುತ್ತಿದ್ದ ಆಕರ್ಷಕ ಕ್ರಮ ಎಲ್ಲವನ್ನೂ ಮೆಚ್ಚುಗೆಯಿಂದ ನೋಡುತ್ತಾರೆ. ರಾಜಕಾರಣಿಗಳು ಅವರ ಅಭಿಪ್ರಾಯ ಕೇಳಲು ಬರುತ್ತಾರೆ. ಆದರೆ ಹಳ್ಳಿಗಾಡುಗಳಲ್ಲಿ ಹಾಡುತ್ತಾ ಗಾಡುತಾ ಹೋರಾಟವನ್ನು ಕಟ್ಟುತ್ತಿದ್ದ ನಾನು ಯಾರಿಗಾದರೂ ಯಾಕೆ ಗುರುತಿರಬೇಕು? ಇಲ್ಲೇನು ನಡಿತಾ ಇದೆ, ಇಂಥಾ ದೊಡ್ಡ ವ್ಯಕ್ತಿಗೆ ಯಾವುದೋ ಹೆಂಗಸಿನ ಜೊತೆ ಏನು ಸಂಬಂಧ ಎನ್ನುವ ಕುತೂಹಲ. ನಾನು ಕೆಲಸದ ನಿಮಿತ್ತ ಹೊರ ಬಂದರೆ ಕಿಟಕಿ ಬಾಗಿಲುಗಳ ಸಂದಿಯಿಂದ ಇಣುಕುತ್ತಿದ್ದರು. ಬರಬರುತ್ತಾ ಎಲ್ಲವೂ ಅಭ್ಯಾಸವಾಯಿತು.

ಗಂಡಸು ಬಿಗಿಯಾಗಿ ನಿಂತ ಎಂದರೆ ಜಗತ್ತು ಬಾಗುತ್ತೆ. ಇಟ್ಟುಕೊಂಡವಳಿಗೂ ಬೆಲೆ ಕೊಡುತ್ತೆ. ಅದೂ ಪ್ರಭಾವಿಯಾದರೆಯಂತೂ ಮುಗಿದೇ ಹೋಯಿತು. ದೊಡ್ಡವರ ವಿಷಯ ನಮಗೇಕೆ ಎನ್ನುತ್ತದೆ. ನನ್ನ ವಿಷಯಕ್ಕೆ ಆದದ್ದೂ ಇದೆ. ಮನೆ ಬಾಡಿಗೆ ಕೊಟ್ಟವ ಸಹಾರ ಸ್ನೇಹಿತರೇ ಆದ್ದರಿಂದ ಬೇರೆ ಸಮಸ್ಯೆಗಳು ಉದ್ಬವಿಸಲಿಲ್ಲ. ಆದರೂ ಸತೀಶನ ಮನೆಯಿಂದ ಇಲ್ಲಿಗೆ ಬಂದಾಗ (ಯಾಕೋ ಅದನ್ನು ನನ್ನ ಮನೆ ಅಂತ ಕರೆಯಬೇಕು ಅಂತ ಅನ್ನಿಸ್ತಾ ಇಲ್ಲ) ಎಂಥಾ ದೊಡ್ಡ ಗೊಂದಲ ಇತ್ತು! ತವರು ಮನೆ ನನ್ನದಲ್ಲ, ಗಂಡನ ಮನೆ ನನ್ನದಲ್ಲ, ಇನ್ನು ಈ ಮನೆಯನ್ನು ನನ್ನದು ಎಂದುಕೊಂಡು ಬರಲಿ? ಅದೂ ಸಹಾರ ಗುರುತೇ ಅಲ್ಲದ ಮಗುವೊಂದನ್ನು ಕಂಕಳಲ್ಲಿ ಇರುಕಿಕೊಂಡು! ಎಂಥಾ ದೊಡ್ಡ ಸಂಕಷ್ಟ ನನ್ನದು? ಹೊರಗಿನಿಂದ ಸಹಾ ಕೂಗುತ್ತಿದ್ದರು ‘ಚೈತನ್ಯ … ಚೈತನ್ಯ…’ ಎಷ್ಟು ಕುಡಿದಿದ್ದರೂ ದೇಹದ ಮೇಲೆ ನಿಯಂತ್ರಣ ಇರುತ್ತಿರಲಿಲ್ಲ, ಆದರೆ ಧ್ವನಿ ಮಾತ್ರ ಸ್ವಲ್ಪ ಅಲುಗುವುದಿಲ್ಲ. ಯೋಚನೆಗಳನ್ನೂ ಪ್ರಖರಗೊಳಿಸುವ ಧ್ವನಿಯದು. ನನ್ನ ಆಲೋಚನೆಗಳನ್ನು ಕಡೆದುಕೊಳ್ಳುತ್ತಾ ಬಾಗಿಲನ್ನು ತೆಗೆದೆ.

ಒಳ ಬಂದ ಸಹಾ ಸೋಫಾ ಮೇಲೆ ಕೂರುತ್ತಾ, ‘ಆಶಾ ಎಲ್ಲಿ?’ ಎಂದರು. ಅವರ ಚಪ್ಪಲಿಗಳನ್ನು ಕಾಲಿಂದ ಕಳಚಿದೆ. ಮತ್ತಷ್ಟು ಕಾಲುಗಳನ್ನು ನೀಡಿದರು. ‘ಮಲಗಿದಳು. ಮಲಗುವಾಗ ನಿಮಗೆ ಗುಡ್ನೈಟ್ ಹೇಳಲು ಕೂಡಾ ಹೇಳಿದಳು’ ಎಂದೆ. ಅವರು ಮೆಚ್ಚುಗೆಯಿಂದ ‘ಸ್ವೀಟ್ ಗರ್ಲ್’ ಎಂದರು ತೊದಲುತ್ತಾ. ನಾನು ಮಾತಾಡಲಿಲ್ಲ. ಚಪ್ಪಲಿಯನ್ನು ಪಕ್ಕಕ್ಕೆ ಇಟ್ಟೆ. ನಾನು ಹೀಗೆ ಚಪ್ಪಲಿ ಕಳಚುವುದನ್ನು ಅವರು ನಿರೀಕ್ಷಿಸುತ್ತಾರೆ. ಬಹುಶಃ ಅದಕ್ಕೆ ನನ್ನ ಮೇಲೆ ಪ್ರೀತಿ ಉಕ್ಕಿ ಬಂದಿರಬೇಕು, ‘ಮೇಡಂಗೆ ಕೋಪ ಇನ್ನೂ ಕಡಿಮೆ ಆಗಲಿಲ್ಲ’ ಎಂದು ಹತ್ತಿರ ಬಂದು ಕೈಗಳನ್ನು ಭುಜದ ಮೇಲೆ ಹಾಕಿದರು. ಮೊದಲ ಬಾರಿ ವಿಷಯ ಲಂಪಟನಾದ ವ್ಯಕ್ತಿ ಮೈಮೇಲೆ ಕೈಹಾಕಿದಂತನ್ನಿಸಿ ಹೀಂಕರಿಸುವ ಹಾಗೆ ಆಯಿತು. ‘ನಾಳೆ ಮಾತಾಡುವ ಈಗ ನೀವು ಇಲ್ಲೆ ಸೋಫಾ ಮೇಲೆ ಮಲಗಿ’ಎಂದೆ. ‘ಇದೇನು ಯಾವತ್ತೂ ಇಲ್ಲದ್ದು? ನಾನ್ಯಾಕೆ ಇಲ್ಲಿ ಮಲಗಬೇಕು? ಕೋಪಕ್ಕೂ ಹದ್ದಿರುತ್ತೆ ಚೇತೂ’ ಎಂದು ನನ್ನ ತಬ್ಬಿಕೊಳ್ಳಲು ಬಂದರು. ‘ಪ್ಲೀಸ್ ಸಹಾ ಇವತ್ತು ನನಗೂ ಮನಸ್ಸು ಸರಿಯಿಲ್ಲ’ ಎಂದೆ.

ಸಹಾ ನನ್ನ ಒಲಿಸಿಕೊಳ್ಳಲು ನೋಡಿದರು. ನನಗೆ ರೇಗು ಹತ್ತಿ ಅವರ ಕೈಗಳನ್ನು ಕೊಸರಿಕೊಂಡು ದೂರತಳ್ಳಿ, ‘ಕುಡುಕರ ಜೊತೆ ನಾನು ಮಲಗಲ್ಲ’ ಎಂದೆ. ಮಾತು ಮಿತಿ ಮೀರಿದ್ದು ನನ್ನ ಅರಿವಿಗೂ ಬಂದಿತ್ತು. ತಮ್ಮ ಬಯಕೆ ಈಡೇರದ ಫ್ರಸ್ಟ್ರೇಶನ್ ಅವರನ್ನು ಕಾಡಿರಬೇಕು. ನಾನು ನಾಲಗೆ ಕಚ್ಚಿಕೊಂಡು, ಮಾತು ಹೊರಳಿಸಿದೆ, ‘ನಮ್ಮ ಮಧ್ಯೆ ಆದದ್ದನ್ನೆಲ್ಲಾ ಆಶಾ ಹತ್ತಿರ ಹೇಳುವ ಅಗತ್ಯ ಏನಿತ್ತು? ಅವಳಿನ್ನೂ ಮಗು ಅನ್ನುವುದನ್ನೂ ಮರೆತುಬಿಡುತ್ತೀರಲ್ಲಾ?’ ಎಂದೆ. ನನ್ನ ಮಾತಿನಿಂದ ಕುಡಿದ ಅಮಲು ಇಳಿದುಬಿಟ್ಟಿತ್ತು. ‘ಏನಂದಿರಿ ಕುಡುಕ ಎಂದಾ? ಇದೇ ಕುಡುಕನೇ ಅಲ್ಲವಾ ನಿಮಗೆ ಹೊಸ ಜೀವನ ಕೊಟ್ಟಿದ್ದು? ಇದೇ ಕುಡುಕನನ್ನೇ ಅಲ್ಲವೇ ಪ್ರೀತಿಸಿದ್ದು, ಇವನ ಜೊತೆಗಲ್ಲವೇ ನೀವು ಮಲಗಿದ್ದು. ಆಗೆಲ್ಲಾ ನೆನಪಿಗೆ ಬಾರದೇ ಇದ್ದದ್ದು ಇವತ್ಯಾಕೆ ಬಂತು?’ ಎಂದರು. ಒಳಗೇ ಜೀವ ಒತ್ತಿಕೊಂಡಂತೆ ಅನ್ನಿಸಿ ಭಯ ಆಯಿತು. ಯಾವುದನ್ನು ತೋರಗೊಡದೆ ತುಂಬಾ ಧೈರ್ಯ ಎಂಬಂತೆ, ಸುಮ್ಮನೆ ಸೋಫಾ ಮೇಲೆ ಮಲಗಿ, ‘ಬೆಳಗ್ಗೆ ಎದ್ದ ಮೇಲೆ ಮಾತಾಡೋಣ’ ಎಂದು ರೂಮಿಂದ ರಗ್ಗನ್ನು ತಂದು ಅವರ ಮೇಲೆ ಹಾಕಿ ಒಳಗೆ ಹೋದೆ. ಅಳು ಒಳಗಿಂದ ಉಕ್ಕಿ ಬರುತ್ತಿದ್ದರೂ ಅಳಬಾರದು ಎನ್ನುವ ನನ್ನ ಪ್ರಯತ್ನಕ್ಕೆ ಒಡ್ಡು ಕಟ್ಟುವುದಾದರೂ ಹೇಗೆ? ನಾನು ಮಾತಿನ ವರಸೆಗೆ ಅಂದಿರಬಹುದು. ಆದರೆ ಇವರು ಇಂಥಾ ಮಾತನ್ನಾ ಆಡುವುದು? ಜೀವನ ಕೊಡುವುದು ಎಂದರೇನು? ಅದೊಂದು ತ್ಯಾಗದ ಹಾಗೆ ಮಾತಾಡ್ತಾರಲ್ಲಾ? ನಂಬಿ ಬಂದೆನಲ್ಲಾ ಅದಕ್ಕಾ ಈ ಅವಮಾನ? ಹಾಗಾದರೆ ನಾನು ಇವರ ಜೊತೆ ಮಲಗಿದ್ದು ಸುಳ್ಳಾ? ನಿಜವೇ ಆದರೂ ಮಾತಿನ ಹದ್ದು ಮೀರಿಬಿಟ್ಟರೆ ಆಗುವುದು ಅವಮಾನವೇ ತಾನೆ.

ನನಗೆ ನಿಜಕ್ಕೂ ಇವರಿಂದ ಬೇಕಾಗಿದ್ದು ಸಾಂತ್ವಾನವಾ ಆಸರೆಯಾ ವಾಂಛೆಯಾ? ಅರ್ಥವಾಗದೆ ಹೋಯಿತು. ಸಂಬಂಧಗಳ ಆಳಕ್ಕೆ ಮತ್ತಷ್ಟು ಎಳೆತರುವ ಎಲ್ಲವೂ ಅವಮಾನದ ಸಂಗತಿಗಳಾಗಿ ಕಾಡಿಬಿಟ್ಟಿತ್ತು. ‘ಅವಮಾನ ಮಾಡಿದವರನ್ನು ಮಾತ್ರ ಬಿಡಬೇಡ ಮಗಳೇ’ ಎಂದಿದ್ದ ಅಪ್ಪಯ್ಯ ನೆನಪಿಗೆ ಬಂದ. ಅವನೊಬ್ಬ ಸರಿಯಾಗಿದ್ದಿದ್ದರೆ ನನಗೆ ಈ ಸ್ಥಿತಿ ಯಾಕೆ ಬರುತ್ತಿತ್ತು ಎಂದೂ ಅನ್ನಿಸಿತು. ನನ್ನ ಕೋಣೆಗೆ ಬಂದು ಬಾಗಿಲು ಚಿಲಕ ಹಾಕಿ ಹಾಸಿಗೆಯಲ್ಲಿ ಅಡ್ಡಾದೆ. ‘ಅಪ್ಪಯ್ಯ’ ಎನ್ನುತ್ತಾ ಕೌಂಚಿ ಮಲಗಿ ಅಳಲು ಯತ್ನಿಸಿದೆ. ಆಗಲಿಲ್ಲ ಹೊಟ್ಟೆಯ ಸಂಕಟ ಮಾತ್ರ ಇನ್ನಿಲ್ಲದಂತೆ, ಅಗ್ನಿಪರ್ವತದಿಂದ ಲಾವಾ ಉಕ್ಕುವ ಹಾಗೆ ಉಕ್ಕುತ್ತಾ ಹೋಯಿತು. ಇವರು ಹೇಳಿದಾಗಲೆಲ್ಲಾ ಹಾಸಿಗೆಗೆ ಹೋಗಿಬಿಟ್ಟರೆ ನಾನು ಒಳ್ಳೆಯವಳು. ಇಲ್ಲದಿದ್ದರೆ ಮಲಗುವ ಎನ್ನುವ ಪದಕ್ಕೆ ಬೇರೆ ಬೇರೆ ಏನೇನೋ ಅರ್ಥಗಳು ಬರುತ್ತದಾ? ಯಾಕೆ ನನಗೆ ಆಯ್ಕೆಗಳಿಲ್ಲವಾ. ದಬ್ಬಾಳಿಕೆಯನ್ನು ಎದುರಿಸಬೇಕೆಂದೇ ಹೋರಾಟದ ಭಾಗವಾಗಿದ್ದ ನಾನು ಇವತ್ತು ಹೋರಾಟವೂ ಇಲ್ಲದೆ, ವಿವಶವಾಗಿಹೋಗಿದ್ದೇನಲ್ಲಾ? ಹಾಗಾದ್ರೆ ನಾನು ಯಾಕೆ ಇಲ್ಲಿಗೆ ಬಂದೆ ಬಂದ ಉದ್ದೇಶವಾದರೂ ಏನು? ಎಲ್ಲರ ಹಾಗೆ ಗಂಡಿನ ಆಸರೆಯಲ್ಲಿ ಬದುಕು ಕಳೆಯುವ ಹಂಬಲ ನನ್ನೊಳಗೂ ಇತ್ತೇ? ಸತೀಶ ಬದುಕಿದ್ದಾಗ ನನಗಿನ್ನೂ ಎಳೆ ಹರೆಯ.

ಸಹಾರ ಜೊತೆ ಹೋರಾಟದ ಹಾಡುಗಳನ್ನು ಹಾಡುತ್ತಾ ಊರಿಂದೂರಿಗೆ ಹೋದಾಗಲೂ ಅವನು ಒಂದೂ ಮಾತನ್ನೂ ಆಡಿರಲಿಲ್ಲ. ಬದಲಿಗೆ, ‘ನಿನ್ನ ಕಂಠಕ್ಕೆ ಇರೋ ಜಾದೂವಿನಿಂದ ಜನರ ಮನಸ್ಸು ಬದಲಿಸಿದರೆ ಅಷ್ಟೇ ಸಾಕು’ ಎಂದಿದ್ದ. ಯಾವತ್ತೂ ನನ್ನ ಮೇಲೆ ದರ್ಪ ತೋರಲಿಲ್ಲ. ಗಂಡ ಎನ್ನುವ ಅಧಿಕಾರಕ್ಕೆ ಬಿದ್ದು ನನ್ನ ಮೇಲೆ ದಬ್ಬಾಳಿಕೆ ಮಾಡಲಿಲ್ಲ. ಹಾಗಿದ್ದಾಗ ಇವರಿಗೆ ಯಾವ ಅಧಿಕಾರ ಇದೆ? ಇರ‍್ಯಾರು? ಇವರಿಗೋಸ್ಕರ ನಾನು ಯಾಕೆ ಒದ್ದಾಡಬೇಕು? ಇವರಿಂದ ಯಾಕೆ ನೋಯಬೇಕು? ತೊಂದರೆ ಆದರೆ ದೇಹದ ಒಂದು ಅಂಗವನ್ನೇ ತೆಗೆಸಿ ಹಾಕುತ್ತೇವೆ. ಇವರಿಂದ ನನಗೆ ಯಾಕೆ ಬಿಡುಗಡೆ ಇಲ್ಲ.

ಬಿಡುಗಡೆಯ ಅರ್ಥ ಈಗ ಬದಲಾದ ಹಾಗೆ ಅನ್ನಿಸತೊಡಗಿತು. `ವ್ಯಕ್ತಿತ್ವದ ಅರಿವೇ ಇಲ್ಲದಂತೆ ಬದುಕುವುದು ನರಕಕ್ಕಿಂತ ಘೋರ ಚೇತೂ. ನೀನು ಸ್ವತಂತ್ರವಾದ ನದಿ, ಭೋರ್ಗರೆಯುತ್ತೀಯೋ ಶಾಂತವಾಗಿ ಹರಿಯುತ್ತೀಯೋ ನಿನಗೆ ಬಿಟ್ಟಿದ್ದು. ಸಮಾಜವನ್ನು ಸರಿ ಮಾಡಬೇಕು ಅನ್ನುವುದನ್ನು ಬಿಟ್ಟರೆ ನಮಗೆ ಯಾವ ಉದ್ದೇಶವೂ ಇರಬಾರದು. ಕೊಳದಲ್ಲಿ ಬಿದ್ದ ಬೆಳಕು ನೀರನ್ನು ಬಗ್ಗಡ ಮಾಡಲಾರದು. ಬದಲಿಗೆ ಅದನ್ನು ಇನ್ನಷ್ಟು ಚೈತನ್ಯಪೂರ್ಣವಾಗಿಸುತ್ತದೆ. ದಾಂಪತ್ಯವೂ ಸೇರಿದಂತೆ ಜೀವನ ಮಿಕ್ಕೆಲ್ಲಾ ಎರಡನೆಯದು’ ಎಂದಿದ್ದ ಸತ್ತೀಶನ ಮಾತು ನೆನಪಾಯಿತು. ಆದರ್ಶದ ಪಾಠವನ್ನು ಹೇಳಿ ಹೀಗೆ ನನ್ನ ಒಂಟಿಯಾಗಿ ಬಿಟ್ಟು ಹೋದೆಯಾ? ದಾಂಪತ್ಯವೂ ಎರಡನೆಯದು ಎಂದ ನೀನು ಆಶಾಳನ್ನು ಯಾಕೆ ನನ್ನ ಕೈಗಿತ್ತೆ? ಚಿಕ್ಕ ಹುಡುಗಿ ನನಗೇನೂ ಗೊತ್ತಾಗಲಿಲ್ಲ. ನಿನಗಾದರೂ ಅರ್ಥ ಆಗಬಾರದಿತ್ತೇ, ನಾಳಿನ ದಾರಿಗಳು ದೂರಾವೇ ಎಂದು. ಈಗ, ದಿನೇ ದಿನೇ ಭಾರವೇ ಆಗುತ್ತಿರುವ ನೀನು ಹೇಳಿದ ಆದರ್ಶವನ್ನು ನನ್ನ ಹೆಗಲಲಿ ಹೊತ್ತು ನಡೆಯಲೇ? ಇರುವ ಜೀವನದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇ? ಈ ತೊಳಲಾಟಕ್ಕೆ ಉತ್ತರ ಏನು ಕೊಡಲಿ? ಹೇಗೆ ಕೊಡಲಿ?
ಈಗ ಭಯವಾಗತೊಡಗಿತು.

ಅಡ್ಡಡ್ಡವೂ, ಅಸಹ್ಯವೂ ಆಗಿದ್ದ ನಮ್ಮ ಮಾತನ್ನು ಆಶಾ ಕೇಳಿಸಿಕೊಳ್ಳಲಿಲ್ಲ ತಾನೆ? ಸರ‍್ರೆಂದು ಅವಳ ರೂಂನ ಕಡೆಗೆ ಹೋದೆ. ದೀಪ ಆರಿತ್ತು. ಮಲಗಿದ್ದಾಳೆ, ಬಹುಶಃ ನಮ್ಮ ಮಾತುಗಳನ್ನು ಕೇಳಿರಲಿಕ್ಕಿಲ್ಲ. ಅಕಸ್ಮಾತ್ ಆಗಿ ಕೇಳಿಬಿಟ್ಟಿದ್ದರೆ ನನ್ನ ಬಗ್ಗೆ ಏನೆಂದು ಯೋಚಿಸುತ್ತಿದ್ದಳೋ? ಇದೆಂಥಾ ಅಗ್ನಿ ಪರೀಕ್ಷೆ? ಎದೆಯ ದುಗುಡಕ್ಕೆ ಉತ್ತರ ಕೊಡಲೋ? ಹೊರಗಿನ ಬೆಂಕಿಯನ್ನು ನಂದಿಸಲೋ! ಸ್ವಲ್ಪ ಹೂತ್ತು ಉದ್ವೇಗಗಳನ್ನು ಕಲೆದುಕೊಂಡ ಮನಸ್ಸು ನಿಸೂರಾಗಿ ಸ್ವಲ್ಪ ಸಮಾಧಾನ ಆಯ್ತು. ಮತ್ತೆ ನನ್ನ ರೂಂನ ಕಡೆಗೆ ಹೊರಟಾಗ, ಹಾಲಿನಲ್ಲಿ ಮಲಗಿದ್ದ ಸಹಾರ ಗೊರಕೆ ಕೂಡಾ ಎಲ್ಲದರಿಂದ ಬಿಡುಗಡೆಯ ಸೂಚನೆಯಾಗಿ ಕೇಳಿತ್ತು. ಜಗತ್ತಿನ ಎಲ್ಲರಿಗೂ ಸುಶುಪ್ತಾವಸ್ಥೆಯನ್ನು ಕರುಣಿಸಿದ ಈ ರಾತ್ರಿ ನನಗೆ ಮಾತ್ರ ಎಚ್ಚರದ ಪರ್ವ ಕಾಲವಾಗಿ ಕಂಡಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

February 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: