ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಮರೆಯಾದ ನೆನಪು ಮೇಲೆದ್ದು ಮೆರೆದಾಗ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

11

ಬೆಳಗ್ಗೆ ಊರಿಗೆ ಹೊರಡಲಿಕ್ಕೆ ಸಹಾ ಸಿದ್ಧವಾಗಿ ಬಂದಿದ್ದರು. ಮಧ್ಯದಲ್ಲಿ ಎಲ್ಲಾದರೂ ತಿಂಡಿ ತಿನ್ನೋಣ ಎಂದು ಹೇಳಿದ್ದರೂ ಅತ್ತೆ ಮಾವರನ್ನು ನೋಡುವ ಉತ್ಸಾಹ, ಆತಂಕದ ಮಿಶ್ರಭಾವಕ್ಕೆ ಸಿಕ್ಕು ರಾತ್ರಿ ಇಡೀ ನಿದ್ದೆ ಮಾಡಿರಲಿಲ್ಲ. ಏನು ಮಾಡಲಿ ಎಂದು ಯೋಚಿಸಿ ಕಡೆಗೆ ಏನೂ ತೋಚದೆ ತಿಂಡಿ ಮಾಡಿಟ್ಟಿದ್ದೆ. ಸಹಾ, ‘ಯಾಕೆ ಮಾಡಿದೆ? ನೆನ್ನೆಯೇ ಹೇಳಿದ್ದೆನಲ್ಲಾ’ ಎಂದರಾದರೂ, ಅನ್ಯಮನಸ್ಕತೆಯಿಂದ ‘ಮಾಡಿದ್ದೇನೆ ತಿನ್ನಿ’ ಎಂದಾಗ ಮಾತನಾಡದೆ ತಿಂದಿದ್ದರು. ತಿಂಡಿ ತಿನ್ನುತ್ತಿದ್ದ ಅವರನ್ನೇ ಗಮನಿಸಿದೆ. ನಾನಿಲ್ಲಿಗೆ ಬಂದು ಹದಿನೆಂಟು ವರ್ಷಗಳು ಕಳೆದೇ ಹೋದವು. ಆಗ ಇದ್ದ ಸಹಾಗೂ ಈಗಿನ ಸಹಾಗೂ ಎಷ್ಟು ವ್ಯತ್ಯಾಸ! ತಲೆಕೂದಲು ಹಣ್ಣಾದರೂ ಉದುರಿಲ್ಲ. ಅದು ಮುಖಕ್ಕೆ ಎಂಥಾದ್ದೋ ಪ್ರಗಲ್ಭತೆಯನ್ನು ಕೊಟ್ಟಿತ್ತು. ವಯಸ್ಸು ದೇಹದ ಮೇಲೆ ಪರಿಣಾಮ ಬೀರಿಯೆ ಇಲ್ಲವೆನೋ ಎನ್ನುವಂತೆ ಸದಾ ಉತ್ಸಾಹದ ಚಿಲುಮೆ. ಯಾರಾದರೂ ತನ್ನನ್ನು ವಿಶೇಷವಾಗಿ ಗಮನಿಸುತ್ತಿದ್ದಾರೆ ಎಂದರೆ ಅದು ಇನ್ನೂ ನೂರ್ಮಡಿಸುತ್ತದೆ. ಪಾರ್ಟಿ ಕಟ್ಟುವುದರಲ್ಲಿ ಈ ಮನುಷ್ಯ ಹೇಗೆ ಉತ್ಸಾಹವನ್ನು ಇನ್ನೂ ಉಳಿಸಿಕೊಂಡಿದ್ದಾರೆ? ಹೇಗೆಲ್ಲಾ ಓಡಾಡುತ್ತಾರೆ? ಈ ಶಕ್ತಿ ಎಲ್ಲಿಂದ ಬಂತು? ಎನ್ನುವುದು ನನಗೆ ಅರ್ಥ ಆಗ್ತಾ ಇಲ್ಲ. ಹೀಗೆ ಯೋಚಿಸುವಾಗಲೇ ಕಾರು ಬಂದು ನಿಂತ ಶಬ್ದ ಕೇಳಿತು. ನಮ್ಮನ್ನು ಕರೆದುಕೊಂಡು ಹೋಗಲಿಕ್ಕೆ ಬಂದಿರಬೇಕು ಎಂದುಕೊಳ್ಳುವುದರೊಳಗೆ ಒಬ್ಬರು ಒಳಗೆ ಬಂದರು. ಆಶಾಗೆ ನೆನ್ನೆ ರಾತ್ರಿಯೇ ಹೇಳಿಬಿಟ್ಟಿದ್ದೆ, ‘ತಾತ ಅಜ್ಜಿಯನ್ನು ನೋಡಿ ಬರೋಣ, ಪಪ್ಪ ಹೇಗಿದ್ದರೂ ಅಲ್ಲಿಗೆ ಮೀಟಿಂಗ್‌ಗೆ ಹೋಗ್ತಾ ಇದ್ದಾರೆ, ಅವರೊಂದಿಗೆ ಅನಿವಾರ್ಯ ನಾನು ಹೋಗಲೇಬೇಕು. ನೀನು ಬಂದರೆ ತಾತ ಅಜ್ಜಿಗೆ ಖುಷಿಯಾಗಬಹುದು’ ಎಂದು. ಅವಳು ಎದ್ದು ರೆಡಿಯಾಗುತ್ತಿರಬೇಕು. ತುಂಬಾ ಶಿಸ್ತಿನ ಹುಡುಗಿ ನನ್ನ ಥರಾ ಅಲ್ಲ. ಆದರೆ ಆದೀತು, ಹೋದರೆ ಹೋದೀತು. ಹೀಗೆ ಬಂದರೆ ನನ್ನ ಯಾರು ನೋಡುವವರಿದ್ದಾರೆ ಎನ್ನುವ ಉದಾಸೀನ. ನನ್ನ ವಯಸ್ಸಿಗೆ ಬರುವಾಗ ಆಶಾ ಹೇಗಿರುತ್ತಾಳೋ ಗೊತ್ತಿಲ್ಲ. ಆದರೆ ನನಗೆ ಯಾವಾಗಲೂ ಅನ್ನಿಸುವುದು ಅವಳೊಂದು ಉತ್ಸಾಹದ ಚಿಲುಮೆ ಎಂದು.

ಎಲ್ಲರೂ ಹೊರಟೆವು, ನನ್ನ ಮನಸ್ಸಿನಲ್ಲಿ ಮಾತ್ರ ಉದ್ವಿಗ್ನತೆ ಕಡಿಮೆ ಆಗ್ತಾ ಇಲ್ಲ. ಅತ್ತೆ ಮಾವ ಹೇಗಿರಬಹುದು? ಅವರನ್ನು ಈಚೆಗೆ ನಾನು ನೋಡಿಯೇ ಇಲ್ಲ. ವಯಸ್ಸಾದ ಮುದಿಜೀವಗಳನ್ನು ಅಕ್ಕರೆಯಿಂದ ಕಾಣುವುದನ್ನು ಬಿಟ್ಟರೆ ಬೇರೆ ಏನು ಮಾಡುವುದು ಸಾಧ್ಯ? ಆಶಾ ಕಾರನ್ನು ಮಧ್ಯ ಮಧ್ಯದಲ್ಲಿ ನಿಲ್ಲಿಸುತ್ತಾ, ಕಂಡ ಹಣ್ಣುಗಳನ್ನು ಖರೀದಿಸಿದಳು. ಸಹಾ ‘ನನಗೊಂದು ಕೊಡು ಮಗಳೇ’ ಎಂದರೆ, ‘ಪಪ್ಪ ಬೇಕಿದ್ದರೆ ನೀವು ಕೊಂಡುಕೊಳ್ಳಬಹುದಲ್ಲ? ಇದನ್ನ ನಾನು ಅಜ್ಜಿತಾತರಿಗೆ ಅಂತ ತಗೊಂಡಿದ್ದು’ ಎಂದಿದ್ದಳು. ನನಗೆ ಕಸಿವಿಸಿಯಾಗಿ ‘ಒಂದು ಹಣ್ಣು ಕಡಿಮೆಯಾದರೆ ಪರವಾಗಿಲ್ಲ ಕೊಡು’ ಎಂದಿದ್ದಕ್ಕೆ ‘ಹೋಗುವುದೇ ಅಪರೂಪಕ್ಕೆ, ಅವರಿಗೆ ಅಂತ ತೊಗಂಡದ್ದನ್ನ ಅವರಿಗೇ ಪೂರ್ತಿ ಕೊಡುವ ಹಾಗಾಗಲಿ’ ಎಂದಳು. ಅವಳ ಮಾತುಗಳು ನನ್ನ ಕಣ್ಣಲ್ಲಿ ನೀರು ತರಿಸಿತ್ತು- ದೂರವಿದ್ದರೂ ಆಶಾ ತನ್ನ ಹೃದಯದಲ್ಲಿ ಅಜ್ಜಿ ತಾತರನ್ನು ಹೇಗಿರಿಸಿಕೊಂಡಿದ್ದಾಳಲ್ಲಾ ಎಂದು.

ಆಶಾ ನನ್ನ ಪಕ್ಕದಲ್ಲಿದ್ದರೆ ಆತ್ಮವಿಶ್ವಾಸ ಖಂಡಿತಾ ಹೆಚ್ಚಾಗುತ್ತದೆ. ಹೆಚ್ಚು ಮಾತಾಡಲ್ಲವಾದರೂ ಆಡುವ ಮಾತುಗಳಿಗೆ ತುಂಬಾ ತೂಕ ಇರುತ್ತದೆ. ತುಂಬಾ ಎಮೋಷನಲ್ ಅಲ್ಲ ಅಂತ ಹೊರಗೆ ತೋರಿಸಿಕೊಂಡರೂ, ಒಳಗೆ ಎಂದೂ ಒಡೆಯದ ಭಾವನೆಗಳ ಮೊಟ್ಟೆ. ಸಹಾರ ಜೊತೆಗೂ ಹಾಗೇ ನಡೆದುಕೊಳ್ಳುತ್ತಾಳೆ. ಅಂಟಿದರೆ ಉಂಟು ಇಲ್ಲದಿದ್ದರೆ ಇಲ್ಲ. ಸಹಾಗೆ ಈಗಲೂ ಅವಳಿಲ್ಲ ಅಂದರೆ ಜೀವನ ಇಲ್ಲ ಎನ್ನಿಸಿರಲಿಕ್ಕೂ ಸಾಕು. ಅವಳು ಚಿಕ್ಕ ಮಗು ಮೂರು ವರ್ಷದವಳಿರಬೇಕು, ಸಹಾರ ಕೈಯಿ೦ದ ಪಪ್ಪಾ ಸಿಗರೇಟು ಬೇಡ ಎಂದು ಕಿತ್ತುಹಾಕಿದ್ದಳು. ಬೇರೆ ಯಾರೇ ಮಾಡಿದ್ದರೂ ಸಹಾ ಕೋಪಗೊಳ್ಳುತ್ತಿದ್ದರು. ಆಶಾಳ ವಿಷಯಕ್ಕೆ ಮಾತ್ರ ಏನೂ ಹೇಳದೆ ದೊಡ್ಡದಾಗಿ ನಕ್ಕಿದ್ದರು.

ಕಾರು ಐಬಿಯ ಹತ್ತಿರ ನಿಂತಾಗ ಒಳಕ್ಕೂ ಬಾರದ ಆಶಾ ಅಜ್ಜಿಯ ಮನೆಗೆ ಹೋಗುತ್ತೇನೆ ಎಂದಳು. ನನಗೂ ಅವಳೊಂದಿಗೆ ಹೋಗುವ ಮನಸ್ಸಿತ್ತಾದರೂ ಸಹಾ ಸೂಕ್ಷ್ಮವಾಗಿ, ‘ಆಮೇಲೆ ಹೋದರೆ ಆಯಿತು. ಈಗ ಸ್ವಲ್ಪ ಪ್ರಿಪರೇಷನ್ ಇದೆ. ಸ್ವಲ್ಪ ರೆಸ್ಟ್ ಮಾಡಿ ಕಾರ್ಯಕ್ರಮಕ್ಕೆ ಹೋಗಬೇಕಿದೆ. ನೀನು ಹೊರಡು ಆಶಾ ಅಮ್ಮನನ್ನು ಸಂಜೆ ಕರೆದುಕೊಂಡು ಬರುತ್ತೇನೆ’ ಎಂದಿದ್ದರು. ಆಶಾ ನನ್ನ ಕಡೆಗೆ ಮಾರ್ಮಿಕವಾಗಿ ನೋಡಿ ಹೊರಟಳು. ಮೈಲಿ ಮುಜುಗರ ಆವರಿಸಿತು. ಅವಳಿಗೆ ತಿಳಿದಿದೆಯೇ? ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ಆದರೂ ಸಹಾಗೆ ಯಾಕೆ ಅರ್ಥ ಆಗುವುದಿಲ್ಲ. ನನಗೆ ಇಂಥವೆಲ್ಲಾ ವಿಚಿತ್ರ ಹಿಂಸೆ ಅನ್ನಿಸುತ್ತದೆ. ಹೊರ ಜಗತ್ತಿಗೆ ಮಾತೃ ಹೃದಯ ಎಂದೇ ಕಾಣಿಸುವ ಅವರಲ್ಲಿ ಒಬ್ಬ ಗಂಡಸು ಸದಾ ಜಾಗೃತನಾಗೇ ಇರುತ್ತಿದ್ದ.

ರೆಸ್ಟ್ ಎಂದರೆ ಸಹಾರಿಗೆ ಒಟ್ಟಿಗೆ ಮಲಗುವುದು ಎಂದೇ. ‘ಎಲ್ಲವನ್ನೂ ಕಳಕೊಳ್ಳಬೇಕು, ನನ್ನನ್ನು ಕೂಡಾ. ಆಗ ಸಿಗೋ ಪ್ಲಷರ್ ದೊಡ್ಡದು. ಅದು ಎರಡೇ ಕಡೆಯಲ್ಲಿ ಸಿಗುವುದು ಒಂದು ಆಧ್ಯಾತ್ಮ ಇನ್ನೊಂದು ಕಾಮ. ಕಾಮದಿಂದಲೇ ತಮ್ಮ ಯೋಚನೆಗಳು ಮೂರ್ತಗೊಳ್ಳುತ್ತವೆ’ ಎನ್ನುತ್ತಿದ್ದರು. ಯಾವ ಕೆಲಸ ಮಾಡಬೇಕು ಎಂದರೂ ಅದು ಬೇಕು… ಬೇಕೇಬೇಕು. ಇದೊಂದು ವಿಷಯಕ್ಕೆ ನನ್ನ ಯಾವ ಪರ್ಮೀಷನ್ ಕೂಡಾ ಕೇಳುತ್ತಿರಲಿಲ್ಲ. ನಾನು ಯಾವತ್ತಾದರೂ ಈ ವಿಷಯಕ್ಕೆ ಕೊಂಕು ನುಡಿದರೆ, ಚೇತೂ ನೋಡಿ ಮೊದಲು ಮನುಷ್ಯ ಕೂಡಾ ಹೀಗೆ ಬೇರೆ ಪ್ರಾಣಿಗಳ ಹಾಗೆ ಇದ್ದ. ಸಂತಾನದ ಕಾಲದಲ್ಲಿ ಮಾತ್ರ ಅವನಿಗೆ ಕಾಮಾಸಕ್ತಿ ಇತ್ತು. ಈ ಮನ್ಮಥನನ್ನು ಶಿವ ತನ್ನ ಮೂರನೆ ಕಣ್ಣನ್ನು ತೆರೆದು ಸುಟ್ಟನಲ್ಲಾ, ಅವತ್ತು ಅವನು ಅನಂಗನಾದ. ಶಿವ ಭಸ್ಮಪ್ರಿಯ ಆ ಮನ್ಮಥನ ಸುಟ್ಟ ಬೂದಿಯನ್ನು ಅಭ್ಯಾಸ ಬಲದಿಂದ ಮೈಪೂರ ಬಳಿದುಕೊಂಡ ನೋಡಿ ಶಿವನಿಗೆ ಪೂರ್ಣ ಹತ್ತಿಕೊಂಡು ಬಿಟ್ಟು ನನ್ನ ಸುಟ್ಟೆಯಲ್ಲವೇ ನಿನ್ನ ಏನು ಮಾಡುತ್ತೇನೆ ನೋಡು ಎಂದು ತನ್ನ ಚೇಷ್ಟೆಯನ್ನು ಶುರು ಮಾಡಿದ. ಅವತ್ತಿಂದ ಎಲ್ಲಾ ಕಾಲಗಳಲ್ಲೂ ಕಾಮದ ಬಯಕೆ ಮನುಷ್ಯನನ್ನು ಹತ್ತಿಕೊಂಡಿದ್ದು’ ಎಂದಿದ್ದರು. ನಾನು ಕೇಳಿದೆ, ‘ಇದೇನಿದು ನೀವು ಯಾವಾಗ ಪುರಾಣಗಳನ್ನು ಓದಿದಿರಿ’ ಎಂದು. ಸಹಾ ನಕ್ಕರು ಅವರಿಗೆ ಯಾವ ಪುರಾಣವೂ ಬೇಕಿಲ್ಲ, ತಮ್ಮನ್ನು ಸಮರ್ಥಿಸಿಕೊಳ್ಳಲು ಅವರೇ ಪುರಾಣವನ್ನೂ ಹೆಣೆದುಬಿಡುತ್ತಿದ್ದರು. ಬಹಳಷ್ಟು ಸಮಯ ಅವರೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಮಲಗುತ್ತಿದ್ದೆ. ಇವತ್ತೂ ಹಾಗೇ ಚಾಚಿದ ಕೈಗಳಲ್ಲಿ ಇಚ್ಚೆಯೇ ಇಲ್ಲದ ನಾನು ಬೊಂಬೆಯ ಹಾಗಿದ್ದೆ. ಬೇಡ ಅಂದಿದ್ದರೆ ಅವರು ಕೋಪ ಮಾಡಿಕೊಳ್ಳುತ್ತಿದ್ದರು. ಸತೀಶನದ್ದೇ ಊರು ಪಕ್ಕದಲ್ಲಿ, ಅವನು ನಡೆದಾಡಿದ ನೆಲ- ಯಾಕೋ ನನ್ನನ್ನು ಭಾವತೀವ್ರತೆಗೆ ನೂಕುತ್ತಿತ್ತು. ಸಹಾರ ಉತ್ಸಾಹಕ್ಕೆ ಮೈ ಚಾಚುವಾಗಲೆಲ್ಲಾ ನನ್ನತನವನ್ನು ಹರಾಜಿಗಿಟ್ಟ ಹಾಗೆ ಅನ್ನಿಸುತ್ತದೆ. ಹೇಳಿದರೆ ನಿನ್ನಿಂದ ನಾನು ಇನ್ನೇನು ಬಯಸುತ್ತೇನೆ? ಎನ್ನುವ ಸಹಾರಲ್ಲಿ ಭಾವನೆಗಳನ್ನು ಹುಡುಕುತ್ತೇನೆ ಸೋಲುತ್ತೇನೆ. ಸೋತು ಒಳಗೊಳಗೆ ಬಿಕ್ಕುತ್ತೇನೆ.

ಸತೀಶನ ಮನೆಯ ಮುಂದಿನ ತೆಂಗಿನ ಸೋಗೆಯ ಚಪ್ಪರದಡಿಯಲ್ಲಿ ನಿಂತು ತಾಳಿ ಕಟ್ಟಿಸಿಕೊಂಡಾಗ ಊರಿಗೂರೆ ಅಚ್ಚರಿಗೊಂಡಿತ್ತು. ದೊಡ್ಡವಳೇ ಆಗದ ನಾನು ಮದುವೆಯಾಗಿ ಏನು ಮಾಡುವುದು ಎಂದು. ಎಷ್ಟೋ ಜನ ಹೆಂಗೆಳೆಯರು ಅಲ್ವೇ ರಾಜ್ಯ ನಿಂಗ್ಯಾತರ ಮದುವೆಯೇ ಮೈನೆರೆಯದವಳಿಗೆ ಎಂದಿದ್ದರು, ಒಬ್ಬ ಮಾತಂಗಿ ಬಿಟ್ಟು. ಇಲ್ಲಿ ನನಗೀಗ ಇಲ್ಲಿರುವುದು ಬೇಡವಾಗುತ್ತಿದೆ, ಮನಸ್ಸು ಹಿಂದಕ್ಕೆ ಜಗ್ಗುತ್ತದೆ. ಈ ಕ್ಷಣ ಎಂದರೆ ಈ ಕ್ಷಣ ಸತೀಶನ ಮನೆಗೆ ಹೋಗಬೇಕು, ಅಲ್ಲಿನ ಎಲ್ಲವನ್ನೂ ನೋಡಬೇಕು, ಮುಟ್ಟಬೇಕು, ಅತ್ತೆಯ ಕೈಗಳನ್ನು ಕೆನ್ನೆಗೆ ಒತ್ತಿಕೊಂಡು ಸತೀಶನ ಸ್ಪರ್ಶವನ್ನು ಅನುಭವಿಸಬೇಕು. ಅರೆ ಇಷ್ಟು ದಿನಗಳಲ್ಲಿ ಯಾಕೆ ಹೀಗನ್ನಿಸಲಿಲ್ಲ? ಈ ನೆಲಕ್ಕೆ ಕಾಲಿಟ್ಟ ತಕ್ಷಣ ಹೇಗೆ ಮರೆಯಾದ ಸತೀಶನ ನೆನಪು ನೆಲದೊಳಗಿನ ಚಿಲುಮೆಯಂತೆ ಮೇಲೆದ್ದು ಮೆರೆಯುತ್ತಿದೆ? ತಡೆಯದೆ ಮತ್ತೆ ‘ಸಹಾ ಆಶಾಳ ಜೊತೆ ಒಮ್ಮೆ ನಾನೂ ಮನೆಯನ್ನು ನೋಡಿ ಮೀಟಿಂಗ್ ಹೊತ್ತಿಗೆ ವಾಪಾಸು ಬರುತ್ತೇನೆ’ ಎಂದೆ. ಸಹಾ ತೀಕ್ಷ್ಣವಾಗಿ, ‘ಆಶಾ ನೀನು ಹೋಗಿರು, ಖಂಡಿತಾ ಅಮ್ಮನಿಗೆ ಕೆಲಸ ಇದೆ. ನಾವು ಆಮೇಲೆ ಬರುತ್ತೇವೆ. ಅಜ್ಜಿ ತಾತನಿಗೆ ಹೇಳು’ ಎಂದರು. ಆಶಾ ಪ್ರತಿ ಮಾತನ್ನಾಡಲಿಲ್ಲ ಹೊರಟಳು.

ಎಲೆಕ್ಷನ್ ಬರ್ತಾ ಇದೆ. ಜನಪಕ್ಷದ ಕಡೆಯಿಂದ ಎಲೆಕ್ಷನ್ನಿಗೆ ನಿಲ್ಲಬೇಕು- ಎಲ್ಲೆಲ್ಲಿ, ಯಾರು, ಯಾರು ನಿಲ್ಲಬೇಕು ಎನ್ನುವ ಚರ್ಚೆಗೆ ಅವತ್ತಿನ ಮೀಟಿಂಗ್ ಇತ್ತು. ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದವರನ್ನು, ‘ನೀನು ಎಲೆಕ್ಷನ್ ಗೆ ನಿಂತುಬಿಡು’ ಎಂದು ಹೇಳುತ್ತಿದ್ದರೆ ನನಗೆ ಗಾಬರಿ. ಪಾರ್ಟಿ ಫಂಡ್ ಇಲ್ಲ, ಎಲೆಕ್ಷನ್ ಖರ್ಚಿಗೆ ಹಣ ಹೊಂದಿಸುವುದರ ಬಗ್ಗೆ ಯೋಚನೆ ಇಲ್ಲ. ತಮಗೆ ಗೊತ್ತಿರುವ ನಾಕು ಜನ ಉದ್ಯಮಿಗಳನ್ನ ಹಿಡಿದು, ಅವರು ಕೊಡುವ ಹಣದಲ್ಲಿ ಕರಪತ್ರಗಳನ್ನು, ಬ್ಯಾನರ್‌ಗಳನ್ನು ಪ್ರಿಂಟ್ ಹಾಕಿಸಿಬಿಟ್ಟರೆ ಸಾಕು ಎಂದು ಅವರು ಭಾವಿಸಿದಂತಿದ್ದರು. ಹೋದ ಸಲ ಎಲೆಕ್ಷನ್ ಗೆ ನಿಂತ ಎಷ್ಟು ಜನ ನಿಮ್ಮ ಮಾತನ್ನ ಕೇಳಿ ನಾನು ರಿಟೈರ್ ಆದ ಹಣವನ್ನು ಹಾಳು ಮಾಡಿಬಿಟ್ಟೆ ಎಂತಲೋ, ಮಗಳ ಮದುವೆಗೆ ಇಟ್ಟ ಹಣವನ್ನು ಪೋಲು ಮಾಡಿಬಿಟ್ಟೆ ಎಂದೋ, ಇನ್ನೂ ಏನೇನೋ ಕಾರಣಗಳಿಂದ ಸಂಕಟಪಟ್ಟಾಗ ಸಹಾಗೆ ಹೇಳಿದ್ದೆ, ‘ನಮ್ಮದು ಜನರನ್ನು ಸರಿಮಾಡುವ ಕೆಲಸ ಮಾತ್ರ, ನಮ್ಮಲ್ಲಿ ಅಷ್ಟು ವ್ಯವಸ್ಥೆ ಮಾತ್ರ ಇದೆ ಅಲ್ಲಿಗೆ ನಿಲ್ಲಿಸೋಣ. ರಾಜಕೀಯಕ್ಕೆ ಬೇರೆಯದೇ ವ್ಯವಸ್ಥೆ ಬೇಕು’ ಎಂದು. ಸಹಾ ಪವರ್ ಪಾಲಿಟಿಕ್ಸ್‌ನಲ್ಲಿ ತುಂಬಾ ನಂಬಿಕೆ ಇಟ್ಟಿದ್ದರು. ಸುತ್ತಾ ಇದ್ದ ರಾಘು ಥರದ ಕೆಲವು ಜನರು ಅವರನ್ನು ಎತ್ತಿಕಟ್ಟುತ್ತಿದ್ದರು. ಬ್ಲ್ಯಾಕ್‌ಮನಿ ಇದ್ದವರು ಕೆಲವರು ಉದಾರವಾಗಿ ಮುಂದೆ ಬಂದಿದ್ದರು. ಸುತ್ತಾಡಿಸಲಿಕ್ಕೆ ಕಾರನ್ನು ಕಳಿಸುವವರು. ಸಹಾರ ಶಕ್ತಿಯನ್ನು ಇಮ್ಮಡಿಗೊಳಿಸುವವರ ಹಾಗೆ ಮಾತಾಡುತ್ತಿದ್ದರು. ಸಹಾ ಕೂಡಾ ತಮ್ಮ ತೋಳುಗಳಲ್ಲಿ ಸಾಂತ್ವನ ಪಡೆಯಲೆಳೆಸುವ ಅವರೇ ತಮ್ಮ ಶಕ್ತಿ ಎಂತಲೂ ಭಾವಿಸಿದ್ದರು. ಪರಿಣಾಮ…

ಎಲ್ಲರಿಗೂ ಒಂದು ಮಿತಿ ಇದೆ. ಸಹಾ ಒಂದು ಕಾಲದ ದೊಡ್ದ ಹೋರಾಟಗಾರ. ತನ್ನ ಇಚ್ಚಾಶಕ್ತಿಯ ಮೂಲಕವೇ ಜನರನ್ನು ತಲುಪಿದವರು. ನನಗೆ ಅವರ ಹಾಡಿನ ಪ್ರತಿಯೊಂದು ಸಾಲು, ಅದರ ಅರ್ಥ, ಅದರ ಹಿಂದಿನ ಕಥೆ ಗೊತ್ತು, ನಾನು ಮನಸೋಇಚ್ಚೆ ಹಾಡಿದ್ದೇನೆ, ಅನುಭವಿಸಿದ್ದೇನೆ, ಕಣ್ಣೀರಿಟ್ಟಿದ್ದೇನೆ. ‘ನನ್ನ ಲಿರಿಕ್ಸ್ ಅನ್ನು ಚೈತನ್ಯನ ವಾಯ್ಸ್ ಎನ್ಹಾಯನ್ಸ್ ಮಾಡುತ್ತೆ ಅಂದ್ರೆ ನಂಬಬೇಕು’ ಎಂದು ಸತೀಶನ ಎದುರು ಹೇಳಿದ ಸತ್ಯವನ್ನು ಸಹಾ ಬೇರೆಯವರ ಎದುರು ಹೇಳಲಿಲ್ಲ. ಆದರೆ ಅವರ ಬಗ್ಗೆ ಅಂದು ಆರಂಭವಾದ ಅತಿ ದೊಡ್ಡ ಗೌರವ ಅವರ ಎಲ್ಲ ಸರಿ ತಪ್ಪುಗಳ ನಡುವೆಯೂ ಅವರೊಂದಿಗೆ ಹೆಜ್ಜೆ ಹಾಕುವ ಹಾಗೆ ಮಾಡಿದೆ. ಆದರೆ ಪ್ರತಿಭಟಿಸದೆ ದಾರಿಯೇ ಇಲ್ಲ. ವಿರೋಧಿಸುತ್ತಲೇ ಜೊತೆಗಿರುವ ಅನಿವಾರ್ಯತೆ ನನಗೆ, ಅವರಿಗೆ ಅದೊಂದು ಎಚ್ಚರ. ನನ್ನನ್ನು ಎಲ್ಲಾ ವಿಷಯ ಕೇಳುತ್ತಾರೆ, ಆದರೆ ಯಾವುದನ್ನೂ ತೆಗೆದುಕೊಳ್ಳುವುದಿಲ್ಲ. ಬೇರೆ ಯಾರೋ ಕೇಳಬಹುದಾದ್ದನ್ನು ನಾನೇ ಕೇಳುವುದರಿಂದ ಅವರಿಗೆ ಮುಂದೆ ಎದುರಾಗಬಹುದಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭ ಆಗುತ್ತದೆ.

ಈ ಎಲೆಕ್ಷನ್ ಕಾರಣಕ್ಕೆ ನಾನು ಸಹಾರ ಜೊತೆ ವಾದಕ್ಕಿಳಿದಿದ್ದು ಇದೆ. ಕಡೆಗೆ ರೋಸಿ, ‘ಹೀಗೆ ಕಂಡವರ ಮಕ್ಕಳನ್ನು ಬಾವಿಗೆ ನೂಕಿದರೆ ಹೇಗೆ? ನೀವೇ ನಿಲ್ಲಿ’ ಎಂದು ಹೇಳಿದ್ದೆ. ಮೊದಮೊದಲಿಗೆ ಅವರಿಗೆ ಅಂಥಾ ಆಸೆ ಕೂಡಾ ಇತ್ತು. ತಾನೊಬ್ಬ ದೊಡ್ಡ ರೈಟರ್, ಸಮಾಜದಲ್ಲಿ ತನಗೆ ಒಂದು ಐಡೆಂಟಿಟಿ ಇದೆ, ಜನ ತನ್ನ ಹಾಡುಗಳನ್ನು ಹುಚ್ಚರ ಹಾಗೆ ಹಾಡುತ್ತಾರೆ. ಇಡೀ ನಾಡು ನನ್ನ ಹಾಡುಗಳನ್ನು ಪ್ರಾರ್ಥನೆಯ ಹಾಗೆ ಎದೆಯಲ್ಲಿಟ್ಟುಕೊಂಡು ಬೆಳಕಾಗಿಸುತ್ತಾರೆ, ತನಗೆ ರಾಜ್ಯ ಕೇಂದ್ರ ಸರ್ಕಾರಗಳು ಗೌರವ ಬಿರುದುಗಳನ್ನು ಕೊಟ್ಟಿದೆ, ಜನಕ್ಕೆ ನಾನು ಗೊತ್ತಿದ್ದೇನೆ ನಾನು ನಿಂತರೆ ನನಗೆ ಓಟು ಗ್ಯಾರೆಂಟಿ ಅಂತ ನಂಬಿದ್ದರು. ಆದರೆ ಅವರಿಗೆ ಮೊದಲಿಂದಲೂ ಒಂದು ಗುಣ, ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುವುದು. ಅದೂ ವಿಚಿತ್ರವಾಗಿ. ನನಗೆ ಈಗಲೂ ಆಶ್ಚರ್ಯವಾಗುತ್ತೆ ಸಹಾಗೆ ಇಂಥಾ ಗುಣ ಹೇಗೆ ಬಂತು?

ಇದೆಲ್ಲಾ ನಡೆಯುವಾಗಲೇ, ಒಂದು ದಿನ ತರಕಾರಿ ತರಲು ಹೊರಟ ನನ್ನ ಜೊತೆ ತರಕಾರಿ ಮಾರ್ಕೆಟ್‌ಗೆ ಬಂದರು. ನನಗೆ ಅಚ್ಚರಿಯಾಗಿತ್ತು. ‘ಯಾಕೆ ಸಹಾ ಎಂದಿಲ್ಲದೆ ಇವತ್ತು ನನ್ನ ಜೊತೆ, ಅದೂ ತರಕಾರಿಗೆ?’ ಎಂದಿದ್ದೆ. ನಿಗೂಢವಾಗಿ ನಕ್ಕಿದ್ದರು. ಮಾರ್ಕೆಟಿನಲ್ಲಿ ನಾನು ತರಕಾರಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಹೂಮಾರುವ ಅಜ್ಜಿಯ ಜೊತೆ ಕುಳಿತು ಏನೋ ಮಾತಾಡುತ್ತಿದ್ದರು. ಅಜ್ಜಿ ಹೂ ಅಳೆಯುತ್ತಾ ಏನೋ ಹೇಳುತ್ತಿದ್ದಳು. ಕಡೆಗೆ ಸಹಾರ ಮುಖದಲ್ಲಿ ಮಂದಹಾಸ ಅಳಿದು ಹುಬ್ಬು ಗಂಟಿಕ್ಕಿಕೊಂಡಿತ್ತು. ನನಗೆ ಅವರಿಬ್ಬರ ನಡುವೆ ಏನು ಮಾತು ಕಥೆ ನಡೆದಿರಬಹುದು ಎನ್ನುವ ಕುತೂಹಲ. ನಾನೂ ಹೇಳಿ ಎಂದು ಕೇಳಲಿಲ್ಲ. ಸಹಾ ಹೇಳಲಿಲ್ಲ. ಆದ್ರೆ ಖಂಡಿತಾ ಗೊತ್ತು ಅವರ ಒಳಗನ್ನು ಕಲಕುವ, ಅವರ ನಂಬಿಕೆಗೆ ಪೆಟ್ಟಾಗುವ ಯಾವುದೋ ಘಟನೆ ಅಲ್ಲಿ ನಡೆದಿದೆ ಎಂದು. ಅಂದು ನಾನು ಜೊತೆಯಲ್ಲಿ ಬರುತ್ತಿದ್ದೇನೋ ಇಲ್ಲವೋ ಎನ್ನುವುದನ್ನೂ ಗಮನಿಸದೆ ಮನೆಯ ಕಡೆಗೆ ದಾಪುಗಾಲು ಹಾಕಿದ್ದರು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: