ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಗಾಳಿ ತೂಗಿದ ಮರದ ಲಾಲಿಗೆ ಜಗತ್ತೇ ಮಗು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

17

ಆಶಾಗೆ ಚಿಕನ್ ಅಂದ್ರೆ ಪ್ರಾಣ. ಅತ್ತೆ ಮಾಡಿದ್ದ ಚಿಕನ್ ಸಾರಿನ ಬಗ್ಗೆ ಇನ್ನೂ ಮಾತುಕಥೆ ನಡೆಯುತ್ತಲೇ ಇತ್ತು. ಸತೀಶನಿಗೂ ಚಿಕನ್ ಇಷ್ಟ. ಈ ಇಷ್ಟಾಇಷ್ಟಗಳು ಹೇಗೆ ರಕ್ತದಲ್ಲೇ ಬಂದುಬಿಡುತ್ತವೆ ಎನ್ನುವುದೇ ಅಚ್ಚರಿ! ಸತೀಶನ ಇಂಥಾ ಚಹರೆಗಳಿಂದ ಅತ್ತೆ ಮಾವರಿಗೆ ಆಶಾ ಇನ್ನೂ ಇಷ್ಟವಾದಳು. ಇಷ್ಟವಾಗದೆ ಇರುವುದಕ್ಕೆ ಕಾರಣಗಳನ್ನ ಹುಡುಕಿಕೊಳ್ಳಬೇಕೇ ಹೊರತು ಇಷ್ಟವಾಗುವುದಕ್ಕಲ್ಲವಲ್ಲ. ʻಆಶಾ ಮಲಗಿಕೊಳ್ಳಬಾರದೇ, ತಾತನಿಗೂ ನಿದ್ದೆ ಬರ್ತಿರುತ್ತೆ, ಬಿಟ್ಟರೆ ರಾತ್ರಿ ಪೂರ್ತಿ ಮಾತಾಡ್ತಾನೇ ಇರ್ತೀಯʼ ಎಂದೆ. ʻತಾತ ನಿನ್ನ ಪಕ್ಕ ಮಲಕೊಳ್ಳಲಾ?ʼ ಎಂದಳು. ಯಾಕೋ ನನ್ನ ತಾತ ನೆನಪಾದ. ಆ ಸೌಖ್ಯವೇ ಬೇರೆ ಆದರೂ ಮಾವನ ಕಾಲಿನ ಸ್ಥಿತಿ ವಿಪರೀತವಾದ್ದರಿಂದ, ʻಬೇಡ ಪುಟ್ಟಮ್ಮʼ ಎಂದೆ. ಆಶಾ ಪಟ್ಟು ಬಿಡಲಿಲ್ಲ, ʻನಾನು ಇಲ್ಲಿ ಕೆಳಗೆ ಮಲಗ್ತೀನಿ. ತಾತ ನಾನೂ, ನೀನು ಎಷ್ಟು ಹೊತ್ತಾದ್ರೂ ಮಾತಾಡ್ಬಹುದುʼ ಎಂದಳು. ಮಾವನ ಮಂಚದ ಪಕ್ಕದಲ್ಲೇ ಅವಳಿಗೆ ಅತ್ತೆ ಹಾಸಿಗೆ ಹಾಸಿಕೊಟ್ಟರು. ನನಗೂ ಹಜಾರದಲ್ಲೇ ಹಾಸಿ, ʻಮಲಗು ಚೈತನ್ಯಾʼ ಎಂದರು. ಈಗ ಸತೀಶ ಒಬ್ಬ ಇಲ್ಲ. ಅವನೊಬ್ಬ ಇದ್ದಿದ್ದರೆ ಈ ದಿನ ಇಷ್ಟು ವಿಶೇಷ ಅನ್ನಿಸುತ್ತಲೇ ಇರುತ್ತಿರಲಿಲ್ಲ.

ಆಶಾ ನನ್ನ ಹೊಟ್ಟೆಯಿಂದ ಜಾರಿ ಈ ಪ್ರಪಂಚಕ್ಕೆ ಬಂದಳಲ್ಲ, ಆಗ ಅತ್ತೆ ಅವಳನ್ನು ಎಳೆ ಬಾಳೆ ಎಲೆಯ ಹಾಗೆ ನಾಜೂಕಾಗಿ ಹಿಡಿದಿದ್ದರು. ನೋವಿನ ನರಳಿಕೆಯಿಂದ ಮುಕ್ತಿ ಪಡೆದ ಆ ಕ್ಷಣ ಕಂದನ ಅಳು ನನ್ನಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸಿತ್ತು. ಮಗುವನ್ನು ನನ್ನ ಮುಂದೆ ಕಾಣುವಂತೆ ಹಿಡಿದು ನೋಡು ಇದು ಜಗತ್ತಿನ ಅತಿದೊಡ್ಡ ಸೋಜಿಗ ಎಂದಿದ್ದರು. ಸೊಂಟವನ್ನು ನೀವಿಕೊಳ್ಳುತ್ತಾ ಏಳಲು ಹೋದ ನನ್ನ ತಡೆದು, ಮಗನಿಗೆ, ʻಸತೀಶ ನಿಂಗೆ ಮಗಳು ಹುಟ್ಟಿದಳು ಕಣೋʼ ಎಂದು ಅವರು ಆನಂದದಿಂದ ಕೂಗಿದ ಕೂಗು ಇನ್ನೂ ಕಿವಿದೆರೆಯಲ್ಲೇ ಇದೆ. ಒಳಬಂದು ಮೈಯ್ಯೂ ತೊಳೆಯದ ಮಗುವನ್ನು ಕೈಗೆ ತೆಗೆದುಕೊಂಡ ಸತೀಶ ಭಾವುಕನಾಗಿದ್ದ, ನಮ್ಮದೇ ಜೀವದ ಕುಡಿಗಳಾದರೂ ಮಕ್ಕಳು ಎಂಥಾ ಅದ್ಭುತ. ನಮ್ಮೆಲ್ಲ ಗಮನವನ್ನು ಸೆಳೆಯುತ್ತಾ ನಮ್ಮ ಲೋಕದೊಳಗೆ ಅವು ಬಂದವು ಎನ್ನುವ ಭ್ರಮೆ ಹುಟ್ಟಿಸಿ ಅವುಗಳ ಲೋಕದೊಳಗೆ ನಮ್ಮನ್ನು ಕೊಂಡೊಯ್ಯುತ್ತವೆ. ಸತೀಶ ಅವತ್ತು ಆನಂದದಿಂದ ಮಾತೂ ಹೊರಡದವನಾಗಿದ್ದ. ಕೈಲಿ ಹಿಡಿದು ಮಗುವನ್ನು ದಿಟ್ಟಿಸಿ ನೋಡುತ್ತಾ, ʻಚೇತೂ ನಮ್ಮ ಬದುಕಿಗೆ ದಿಕ್ಕುಗಳಿಗೆ ಆಶಾದಾಯಕವಾಗಿದ್ದಾಳೆ. ಅದಕ್ಕೆ ಇವಳು ಆಶಾʼ ಎಂದಿದ್ದ. ಅದೇ ನಾಮಕರಣ. ಅದಕ್ಕಾಗಿ ಯಾವ ಆಚರಣೆಯನ್ನೂ ಮಾಡಲಿಲ್ಲ.

ಎತ್ತಿಕೊಳ್ಳಲು ಬರೋದಿಲ್ಲ… ಕುತ್ತಿಗೆ ಹುಷಾರು… ತಲೆಯ ಮೃದುಭಾಗವನ್ನು ಮುಟ್ಟಬೇಡ… ಇದ್ಯಾವುದನ್ನೂ ಸತೀಶ ಕೇಳಿಸಿಕೊಳ್ಳುತ್ತಿರಲಿಲ್ಲ ಅಂತಲ್ಲ, ಅವನಿಗೆ ಮಗುವಿನ ನೆತ್ತಿಯ ವಾಸನೆ ಇಷ್ಟ ಆಗುತ್ತಿತ್ತು. ಅದನ್ನು ಮೂಸುತ್ತಾ ಕುಳಿತಿರುತ್ತಿದ್ದ. ತಂದೆಗಿಲ್ಲದ ಭಾಗ್ಯ ತಾಯಿಯದ್ದು. ಅವಳಿಗೆ ನೀನು ಏನು ಬೇಕೋ ಅದನ್ನ ಕೊಡುತ್ತೀಯ. ಹಸಿವಾದಾಗ ಹಾಲು, ತೊಡೆ ಮೇಲಿನ ಲಾಲಿ, ಬಿಸಿಯಪ್ಪುಗೆ. ಆದರೆ ನನಗೆ ಹಾಗೆ ಅವಳಿಗೇನು ಬೇಕೋ ಅದನ್ನ ಕೊಡಲಿಕ್ಕೆ ಸಮಯ ಬೇಕು. ಆಗ ನೀನು ಕೇಳಿದ್ದನು ಇಲ್ಲ ಎನ್ನುವ ಹಾಗೆ ಕೊಡುತ್ತೇನೆ. ಈಗ ನನ್ನದೇನಿದ್ದರೂ ಬೆಚ್ಚಗಿನ ಭಾವವನ್ನು ಅನುಭವಿಸುವುದು ಮಾತ್ರ ಎನ್ನುತ್ತಿದ್ದ.

ಅತ್ತೆ ಮಾವ, ಸತೀಶ ಹೊರಗಿನಿಂದ ಬರುವಷ್ಟರಲ್ಲಿ ಅವನಿಗಾಗಿ ಮೊಮ್ಮಗಳ ಒಂದೊಂದು ಆಟವನ್ನು ಕಥೆಯನ್ನೋ, ಆತಂಕವನ್ನೋ ಹೊತ್ತು ನಿಲ್ಲುತ್ತಿದ್ದರು. ಒಮ್ಮೆ ಆಶಾ ಬಿದ್ದಿದ್ದರಿಂದ ಜೋರಾಗಿ ಅಳಲಿಕ್ಕೆ ಆರಂಭಿಸಿದ್ದಳು. ಗಾಬರಿಯಾಗಿದ್ದ ಅತ್ತೆಗೆ, ʻಮಕ್ಕಳು ಏಳೋದೂ ಬೀಳೋದು ತುಂಬಾ ಕಾಮನ್ನು, ಸತೀಶ ಬಂದ ತಕ್ಷಣ ಹೇಳಬೇಡಿʼ ಎಂದಿದ್ದರೂ, ಅವರ ಆತಂಕಕ್ಕೆ, ದುಃಖಕ್ಕೆ ನನ್ನ ಮಾತುಗಳು ಎಂಥಾ ಒಡ್ಡನ್ನು ಕಟ್ಟಬಲ್ಲದು? ಮಗ ಬಂದ ತಕ್ಷಣ ಎಲ್ಲವನ್ನೂ ಹೇಳಿಬಿಟ್ಟಿದ್ದರು. ಅವತ್ತು ರಾತ್ರಿ ಎಲ್ಲರೂ ಎದ್ದಿದ್ದೆವು. ಬಿದ್ದು ನೋವಾಗಿದ್ದರಿಂದಲೋ, ಬಿದ್ದ ಭಯಕ್ಕೋ ಆಶಾಗೆ ಜ್ವರ ಬಂದುಬಿಟ್ಟಿತ್ತು. ಒಂದು ವರ್ಷವೂ ಇಲ್ಲ, ಮಗುವಿನ ಆಟಗಳನ್ನು ಅತ್ತೆ ಮಾವ ಎಷ್ಟು ನೆನಪಿಟ್ಟುಕೊಂಡಿರಬಹುದು!

ಅತ್ತೆ ತಮ್ಮ ಸೊಂಟಕ್ಕಿದ್ದ ಚೀಲದಿಂದ ಎಲೆ ಅಡಿಕೆ ತೆಗೆದರು. ಮುಂದಿನ ಹಲ್ಲುಗಳು ಸಡಿಲ ಆಗಿರುವುದು ನೋಡಿದರೆ ಗೊತ್ತಾಗುತ್ತೆ. ದವಡೆ ಹಲ್ಲುಗಳದ್ದು ಏನು ಪಾಡೋ ಗೊತ್ತಿಲ್ಲ. ಆದರೂ ಮಲಗುವ ಮುನ್ನ ಅದು ಅವರಿಗೆ ಅಭ್ಯಾಸ. ಸತೀಶನಿಗೆ ಮಾತಾಡುತ್ತಾ ವಿರಾಮವಾಗಿ ಎಲೆಅಡಿಕೆ ಹಾಕುವುದು ತುಂಬಾ ಇಷ್ಟ. ಹಾಗೆ ಎಲೆಅಡಿಕೆಗೆ ಕೂತ ಎಂದರೆ ಅವತ್ತು ಅವನು ಪೂರ್ತಿ ಅರಾಮಾಗಿದ್ದಾನೆ ಎಂದು. ಅತ್ತೆ ಎಲೆಅಡಿಕೆಯನ್ನು ಮುಂದೆ ಸರಿಸಿ, ʻಸಹದೇವರಿಗೂ ನಾಳೆ ಇಲ್ಲಿಗೆ ಊಟಕ್ಕೆ ಬರಲಿಕ್ಕೆ ಹೇಳು. ಕಾಟ್ರಿ ಬಲೆ ಹಾಕಿದ್ದನಂತೆ ಮೊಲ ಹಿಡಿದು ತಂದಿದ್ದಾನೆ. ಆರೋಗ್ಯಕ್ಕೂ ಒಳ್ಳೆಯದ್ದುʼ ಎಂದರು. ಸಿಕ್ತು ಎನ್ನುತ್ತಾ ಮೊಲದ ಕಿವಿಗಳನ್ನು ಎತ್ತಿ ಹಿಡುದು ತನ್ನ ಬೇಟೆಯನ್ನು ತೋರುತ್ತಿದ್ದ ಮಾತಂಗಿಯ ನೆನಪು ಇದ್ದಕ್ಕಿದ್ದ ನುಗ್ಗಿ ಬಂತು. ಅಮ್ಮ ಅಜ್ಜಿ, ಗೌರತ್ತೆ ಕೂಡಾ ಹೀಗೆ ಕೂತು ಎಲೆಅಡಿಕೆ ಹಾಕುತ್ತಾ ಊರವರ ಮಾತುಗಳನ್ನು ಆಡುತ್ತಿದ್ದರೆ, ನಾನು ಮಾತಂಗಿ ನಮ್ಮ ಜೀವನದ ಕನಸುಗಳನ್ನು ಗಟ್ಟಿಮಾಡಿಕೊಳ್ಳುತ್ತಾ ಹೋಗಿದ್ದೆವಲ್ಲವೇ? ಎಲ್ಲಿದ್ದಾಳೋ ಆ ಮಾತಂಗಿ? ನನ್ನ ಬಾಲ್ಯ ಸಂವೃದ್ಧವಾಗಿದ್ದೇ ಅವಳ ಸ್ನೇಹದಿಂದ. ಹರೆಯದ ಕನಸುಗಳನ್ನು ಹಂಚಿಕೊಂಡಿದ್ದು ಕೂಡಾ ಅವಳ ಬಳಿಯೇ. ʻಅತ್ತೆ ಮಾತಂಗಿ ಹೇಗಿದ್ದಾಳೆ?ʼ ಎಂದೆ. ʻಏನು ಮಾತಂಗಿಯೋ ಏನೋ… ಸಾಲಾಗಿ ಹೆತ್ತು ಮೈಲಿ ಸಾರವೇ ಇಲ್ಲ, ಹೆಣದ ಹಾಗಾಗಿದ್ದಾಳೆ. ಎಂದಾದರೂ ನಿನ್ನ ನೆನಪಾದಾಗ ಬಂದು ಕಟ್ಟೆಗೆ ಕೂತು ಮಾತಾಡಿಕೊಂಡು ಹೋಗುತ್ತಾಳೆ. ಗಂಡನದ್ದು ಅದೇ ಹಳೇ ಚಾಳಿ, ಮಿತವಿಲ್ಲದ ಜೀವನ. ಅದೇ ದರ್ಪ ಧಿಮಾಕುʼ ಎಂದರು ಅತ್ತೆ. ನಾಳೆ ಅವಳನ್ನು ಹುಡುಕಿ ಹೋಗಿ ನೋಡಬೇಕು, ಹೇಗಿದ್ದೀಯೇ? ಎಂದು ಮಾತಾಡಬೇಕು ಎಂದುಕೊಂಡೆ.

ಸ್ವಾಮಣಪ್ಪ ತಲತಲಾಂತರದಿಂದ ಬಂದಿದ್ದ ನಮ್ಮ ಮನೆಯನ್ನು ವಶಕ್ಕೆ ತೆಗೆದುಕೊಂಡ ಮೇಲೆ ಮಾತಂಗಿಯ ಅಪ್ಪ ಚಿಕ್ಕಬುಡ್ಡಿ ಮಾವ ಕರುಣೆಯಿಂದ ಕೊಟ್ಟ ಪಾಳುಬಿದ್ದ ಪಕ್ಕದ ಕೊಟ್ಟಿಗೆಗೆ ನಾಕು ಸೋಗೆ ಏರಿಸಿ ಬಿಸಿಲಿಗೆ ಅಡ್ಡ ಮಾಡಿಕೊಂಡೆವೇ ಹೊರತು, ಮಳೆ ಗಾಳಿಗಲ್ಲ. ಮಳೆ ಬಂದರೆ ಮಣ್ಣಿನ ಗೋಡೆಯ ಮಾತಂಗಿಯ ಮನೆಯೇ ಆಸರೆ. ಮಾತಂಗಿಗೆ ನಾನೆಂದರೆ ಇಷ್ಟ. ನನಗೂ ಕೂಡಾ. ಅಕ್ಕ, ಅಣ್ಣಂದಿರ ಸಂಬಂಧಗಳು ಕಳಚಿಹೋಗಿ ಒಂಟಿಯಾಗಿದ್ದ ಹೊತ್ತಲ್ಲಿ ಮಾತಂಗಿ ನನಗೆ ಬೆಚ್ಚಗಿನ ಭಾವನೆಯನ್ನು ತುಂಬಿದವಳು. ನಮ್ಮೆಲ್ಲಾ ಕುರಿಗಳನ್ನು ಕಳಕೊಂಡ ಮೇಲೆ ಬಿಡುವಿದ್ದಾಗಲೆಲ್ಲಾ ಮಾತಂಗಿಯ ಜೊತೆ ಕುರಿಗಳನ್ನು ಕಾಯಲು ಹೋಗುತ್ತಿದ್ದೆ. ಮಳೆಯ ಎಷ್ಟೋ ರಾತ್ರಿಗಳು ಅವರ ಮನೆಯಲ್ಲೇ ಕಳೆದಿದ್ದೇವೆ. ಅದಲ್ಲದೆಯೂ ಬಾರೆ ಎಂದು ಅಜ್ಜಿ ಅಮ್ಮನಿಗೆ ಹೇಳಿ ಅವರ ಮನೆಗೆ ಕರೆದೊಯ್ಯುತ್ತಿದ್ದಳು. ಅವಳಿಗೆ ಮೊಲವೆಂದರೆ ಇಷ್ಟ. ಅವಳಿಗೆ ಎಂಥಾ ಜ್ಞಾನ ಇತ್ತೆಂದರೆ ಶಬ್ಧ ಕೇಳೇ ಹೋಗಿದ್ದು ಯಾವ ಪ್ರಾಣಿ ಎಂದು ಹೇಳುತ್ತಿದ್ದಳು. ಶಬ್ಧ ಕೇಳಿದ ತಕ್ಷಣವೇ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಅವಳ ಎಲ್ಲ ಗಮನವೂ ಶಬ್ಧದ ಕಡೆಗೆ ಕೇಂದ್ರಿತವಾಗಿ ಹೋದ ಪ್ರಾಣಿಯನ್ನು ಹಣಿಯುವ ತಂತ್ರ ಹೆಣೆಯುತ್ತಿದ್ದಳು. ಸಂದಿಯಲ್ಲಿ ಓಡಾಡುತ್ತಿದ್ದ ಮೊಲವನ್ನು ಎಲ್ಲೂ ತಪ್ಪಿಸಿಕೊಂಡು ಹೋಗಲಾರದ ಜಾಗಕ್ಕೆ ತಳ್ಳಿ, ಕಟ್ಟಿ ಹಾಕಿ, ಗಬಕ್ಕೆಂದು ತನ್ನ ಎರಡು ಕೈಗಳಿಂದ ಹಿಡಿದು ಬಿಡುತ್ತಿದ್ದಳು. ಅವಳ ನೀಳವಾದ ತೋಳುಗಳು ಅದಕ್ಕೆಂದೇ ಮಾಡಿದ ಹಾಗಿತ್ತು. ನನಗೋ ಆಶ್ಚರ್ಯ, ಅವಳ ತೋಳುಗಳನ್ನು ಸವರಿ, ʻಎಷ್ಟು ಚೆನ್ನಾಗಿದೆ?!ʼ ಎನ್ನುತ್ತಿದ್ದೆ. ʻಇಂಥಾ ತೋಳು ನಿನಗೂ ಬೇಕಾ?ʼ ಎಂದು ಕೇಳಿದ್ದಳು. ʻಬೇಕಾ ಎಂದರೆ ಬಂದುಬಿಡಲಿಕ್ಕೆ ಅದೇನು ಮಾಯಾಮಂತ್ರವಾ! ಹಾಗೆಲ್ಲ ಬರಲಿಕ್ಕೆ ಸಾಧ್ಯವೇ ಇಲ್ಲ ಬಿಡುʼ ಎಂದಿದ್ದೆ. ʻಯಾಕೆ ಆಗಲ್ಲ. ನನಗೂ ನಿನ್ನ ಹಾಗೇ ಸಣ್ಣ ತೋಳುಗಳೇ ಇದ್ದಿದ್ದು. ಆಗೆಲ್ಲ ನನಗೆ ಹೀಗೆ ಮೊಲ ಹಿಡಿಯುವುದು ಆಗ್ತಾನೇ ಇರ್ಲಿಲ್ಲ. ಆದ್ರೆ ನನಗೆ ಮೊಲದ ಮಾಂಸ ಅಂದ್ರೆ ತುಂಬಾ ಇಷ್ಟ. ಏನ್ ಮಾಡೋದು ಅಪರೂಪಕ್ಕೆ ಯಾರಾದ್ರೂ ಮೊಲ ಒಂದನ್ನ ಬೇಟೆ ಆಡಿದ್ರೆ ಅವರ ಮನೆಗೆ ಸಾಕಾಗ್ತಿತ್ತು, ಬೇರೆಯವರಿಗೆ ಕೊಡೋಕಾದ್ರೂ ಆಗ್ತಾ ಇತ್ತಾ? ಆಗೆಲ್ಲಾ ಮೊಲದ ಮಾಂಸ ನೆನೆಸಿಕೊಂಡು ಸಂಕಟಪಡ್ತಾ ಇದ್ದೆ. ಒಂದು ದಿನ ರಾತ್ರಿ ಹುಣ್ಣಿಮೆ ದಿನ ಚಂದ್ರ ಪೂರ್ತಿ ಆಗಿರ್ತಾನೆ ನೋಡು ಅವತ್ತು ಅವನನ್ನು ನೋಡಿದೆ. ಅವನೊಳಗೆ ಮೊಲ ನಗ್ತಾ ಇತ್ತು. ನನಗೆ ಅದು ಬೇಕು ಅನ್ನಿಸಿತು. ಬೇಕು ಅಂತ ಶ್ರದ್ಧೆಯಿಂದ ಕೇಳುದ್ರೆ ಆ ದೇವುರು ಏನನ್ನ ಕೊಡಲ್ಲ ಹೇಳು? ನಾನು ಅವನ ಕಡೆಗೆ ಕೈಚಾಚಿ, ʻನನಗೆ ನಿನ್ನ ಮೊಲಬೇಕುʼ ಅಂತ ಕೇಳಿಕೊಂಡೆ. ಚಂದ್ರ ನಗುತ್ತಾ, ʻಈ ಮೊಲಾನ ಏನ್ ಮಾಡ್ತೀಯಾ?ʼ ಅಂತ ಕೇಳಿದ ಎಂದವಳ ಮಾತನ್ನ ಅರ್ಧಕ್ಕೆ ತುಂಡರಿಸುತ್ತಾ, ʻಸುಳ್ಳೆಲ್ಲಾ ಹೇಳಬೇಡ ಚಂದ್ರ ಎಲ್ಲಾದ್ರ‍್ರೂ ಮಾತಾಡ್ತಾನಾ?ʼ ಎಂದೆ. ನನ್ನ ಕಡೆಗೆ ದುರುದುರು ನೋಡುತ್ತಾ ʻಸುಮ್ಮನೆ ಕೇಳು. ಇಲ್ಲದಿದ್ರೆ ನನಗೆ ಈ ಮೊಲಗಳನ್ನ ಹಿಡಿಯುವ ತಾಕತ್ತು ಹೇಗೆ ಬರ್ತಾ ಇತ್ತುʼ ಎಂದು ಗದರಿದ್ದಳು. ಆಮೇಲೆ ಅವಳೇನು ಹೇಳಿದಳು ಅದನ್ನ ಮಾತ್ರಾ ನಾನು ಕೇಳಿದ್ದೆ. ಅವಳು ಮುಂದುವರೆಸಿ, ʻಹಾ ಚಂದ್ರನನ್ನ ನಾನು ಹಾಗೆ ಕೇಳಿದ್ನಾ? ಅವನು ನಿನಗೆ ನನ್ನ ಒಳಗೆ ಇರೋ ಮೊಲ ಯಾಕೆ ಬೇಕು ಎಂದ. ಅದಕ್ಕೆ ನಾನು ಅದನ್ನ ಸಾಯಿಸಿ ತೊಗಲು ತೆಗೆದು ಒಳ್ಳೆ ಖಾರ ಉಪ್ಪು ಹಾಕಿ ಬೇಯಿಸಿಕೊಂಡು ತಿನ್ನಬೇಕು ಎಂದೆ. ಅದಕ್ಕೆ ಚಂದ್ರ ನಕ್ಕು ʻಅಯ್ಯೋ ಹುಚ್ಚಮ್ಮಾ ನನ್ನ ಹೊಟ್ಟೆಯಲ್ಲಿರೋ ಮೊಲಾನ ಕೊಡೋಕ್ಕೆ ನನಗೇನೂ ಬೇಜಾರಿಲ್ಲ. ಇದನ್ನ ಕೊಟ್ಟುಬಿಟ್ರೆ ನೀನು ಒಂದು ದಿನ ಮಾತ್ರ ತಿನ್ನಬೌದು. ಆಮೇಲೆ ಆಸೆ ಆದ್ರೆ ಏನ್ ಮಾಡ್ತೀಯಾ?ʼ ಎಂದ. ಅವನ ಮಾತು ನನಗೂ ಸರಿಯಲ್ಲವಾ? ಅನ್ನಿಸಿ, ʻಹಾಗಾದ್ರೆ ಏನ್ ಮಾಡ್ಲಿʼ ಎಂದೆ. ಅದಕ್ಕವನು ನನ್ನ ಕಡೆಗೆ ಕೈಚಾಚಿ ಇನ್ನು ಮುಂದೆ ಎಲ್ಲೇ ಮೊಲ ಕಂಡರೂ ಅದನ್ನ ಹಿಡಿಯುವ ಶಕ್ತಿಕೊಡು ಎಂದು ಕೇಳಿಕೋ ಎಂದಿದ್ದʼ ಎಂದಳು. ನಾನು ಪಕಪಕ ನಕ್ಕು, ʻಅಲ್ಲ ಕಣೆ ದೇವರು ಪ್ರತ್ಯಕ್ಷ ಆದಮೇಲೆ ಮತ್ತೆ ಹಾಗೆ ಕೇಳಿಕೋ ಹೀಗೆ ಕೇಳಿಕೋ ಅಂತ ಯಾಕೆ ಹೇಳುತ್ತಾನೆ? ನೀನು ಏನು ಕೇಳಿದ್ರೆ ಅದಕ್ಕೆ ತಥಾಸ್ತು ಅಂತ ತಾನೆ ಹೇಳಬೇಕು. ಅವನೇ ನಿನಗೇನು ಬೇಕು ಅಂತ ಉಪಾಯವನ್ನೂ ಹೇಳಿ ಅದಕ್ಕೆ ಏನು ಮಾಡಬೇಕು ಅಂತಾನೂ ಹೇಳ್ತಾನಾ?ʼ ಎಂದೆ ಬುದ್ಧಿವಂತಳ ಹಾಗೆ. ಅದಕ್ಕವಳು ʻಅಯ್ಯೋ ಇವಳೊಬ್ಬಳಿಗೆ ಬುದ್ಧಿ ಇರೋದು ಮಹಾ. ಅಲ್ಲ ಕಣೆ ಚಂದ್ರ ನನಗೆ ಉಪಾಯ ಹೇಳಿ ಕೊಡದೆ ನಾನು ಇದನ್ನ ಹೇಗೆ ಕೇಳೋಕ್ಕೆ ಸಾಧ್ಯ? ನಾವು ಮಕ್ಕಳಲ್ವಾ ಅದಕ್ಕೆ ದೇವರೇ ಸಹಾಯ ಮಾಡ್ತಾನೆ. ಮುಂದೆ ಬೇಕಿದ್ರೆ ಕೇಳು ಬೇಡದಿದ್ರೆ ಬಿಡುʼ ಎಂದಿದ್ದಳು. ನನಗೆ ತಣಿಯದ ಕುತೂಹಲ. ಅವಳ ಮಾತನ್ನ ಕೇಳಿದ್ದೆ. ʻನಾನು ಆಕಾಶದ ಕಡೆಗೆ ಕೈಚಾಚಿ ಚಂದ್ರನನ್ನು ಬೇಡಿಕೊಂಡೆ. ಚಂದ್ರ ಅಸ್ತು ಎಂದ. ನಾನು ಅವನನ್ನು ನೋಡಿದೆ. ಅವನಲ್ಲಿನ ಮೊಲ ನನ್ನ ಹಿಡೀತೀಯಾ ಅಂದ ಹಾಗಾಯಿತು. ನಾನು ನನ್ನ ಕೈಗಳನ್ನು ಅದರತ್ತ ಚಾಚಿದೆ. ನನ್ನ ಕೈಗಳು ಬೆಳೆಯತೊಡಗಿದವು. ಚಂದ್ರ ಬೆಚ್ಚಿ ಬೆದರಿದ. ನಾನು ಹೇಳಿದ್ದು ನನ್ನೊಳಗಿನ ಮೊಲವನ್ನಲ್ಲ, ಬಿಟ್ಟು ಬಿಡು ಈ ಮೊಲಾನೆ ನನಗೆ ಅಲಂಕಾರಾಂತ ಬೇಡಿಕೊಳ್ಳತೊಡಗಿದ. ನನಗೆ ಪಾಪ ಅನ್ನಿಸಿತು. ಆಯ್ತು ಚಂದ್ರ ನೀನು ಹೇಳಿದ ಹಾಗೆ ನಾನು ನಿನ್ನ ಮೊಲವನ್ನು ಮಾತ್ರ ಬಿಡ್ತೀನಿ. ಅಕಸ್ಮಾತ್ ನನಗೆ ನೆಲದ ಮೇಲೆ ಮೊಲ ಸಿಗಲಿಲ್ಲ ಅಂದುಕೋ ಆಗ ನಿನ್ನ ಮೊಲವನ್ನು ಬಿಡಲ್ಲ ಅಂತ ಹೆದರಿಸಿದ್ದೀನಿʼ ಎಂದಿದ್ದಳು. ಅವಳ ಕಥೆಯನ್ನು ಕೇಳುತ್ತಾ ನಾನು ಬೆವೆತು ಹೋಗಿದ್ದೆ. ನನಗವಳು ದೇವತೆಯ ಹಾಗೆ ಕಂಡಿದ್ದಳು. ನಾನು ಅವಳು ಹೇಳಿದ್ದನ್ನು ನಂಬಿದ್ದೆ. ನನಗಿಲ್ಲದ ಶಕ್ತಿ ಇಲ್ಲದಿದ್ದರೆ ಅವಳಿಗೆ ಹೇಗೆ ಬರುತ್ತೆ? ದೊಡ್ಡವಳಾದ ಮೇಲೂ ಮಾತಂಗಿ ನನ್ನ ಅಣಕಿಸಿ, ʻದಡ್ಡಮ್ಮಾ ನಾನು ಹೇಳಿದ್ದನ್ನು ನಂಬಿ ಬಿಟ್ಟೆಯಲ್ಲಾʼ ಎನ್ನುತ್ತಿದ್ದಳು. ನಿಜ ನಾನು ದಡ್ಡಿಯೇ, ಭಾವುಕವಾದ ನನ್ನ ಅಂತಃಕರಣ ಪ್ರಮೇಯಗಳನ್ನು ಹುಡುಕುತ್ತಿರಲಿಲ್ಲ. ಅದು ಚಂದ್ರ ಕೊಟ್ಟನೋ ಅವಳ ಹುಟ್ಟಿನಿಂದಲೇ ಬಂದಿದ್ದೋ, ಅವಳ ಕಥೆಯೆಲ್ಲಾ ಸುಳ್ಳು ಅಂತ ಗೊತ್ತಾದ ಮೇಲೂ, ನನಗೆ ಅವಳ ಬೇಟೆಯಾಡುವ ಶಕ್ತಿಯ ಮೇಲೆ ವಿಶೇಷವಾದ ಗೌರವ ಹಾಗೇ ಉಳಿದಿತ್ತು.

ಹಜಾರದಲ್ಲಿ ಹಾಸಿದ್ದ ಹಾಸಿಗೆಯ ಮೇಲೆ ಮಲಗಿ ಆಕಾಶ ನೋಡಿದೆ ಅರ್ಧ ಚಂದ್ರ ಮತ್ತು ಅರ್ಧ ಮೊಲ ಕಾಣುತ್ತಿತ್ತು. ದೀರ್ಘವಾಗುವ ರಾತ್ರಿಗಳು ಖಂಡಿತಾ ಮರೆವೆಯನ್ನು ಕೊಡಲಾರದು ಎಂದುಕೊಂಡೆ. ಅತ್ತೆ ಆಗಲೆ ನಿದ್ದೆಗೆ ಜಾರಿಯಾಗಿತ್ತು. ವಯಸ್ಸೇನು ಕಡಿಮೆಯೇ. ಇವತ್ತು ನಾವೆಲ್ಲಾ ಬಂದೆವೆಂದು ಉತ್ಸಾಹದಿಂದ ಓಡಾಡಿದ್ದು ಬೇರೆ, ಆಯಾಸವಾಗಿತ್ತು. ತಾತನ ಮಾತಿಗೆ ಹೂಂಗುಡುತ್ತಿದ್ದ ಆಶಾ ನಿಶ್ಯಬ್ಧವಾಗಿ ನಿದ್ದೆಗೆ ಜಾರಿದ್ದಳು. ಮಾವ ಹೊರಳಾಡುತ್ತಿದ್ದ ಶಬ್ಧ ಕೇಳುತ್ತಿತ್ತು. ಕಾಲುನೋವು ಹೇಗಿದೆಯೋ ಕೇಳಲೆ ಅನ್ನಿಸಿತು. ಅಕಸ್ಮಾತ್ ನಿದ್ದೆ ಬರುವ ಹಾಗಿದ್ದರೆ, ನನ್ನ ಮಾತುಗಳು ಅವರನ್ನು ಮತ್ತೆ ಎಚ್ಚರಗೊಳಿಸುತ್ತವೆ, ಬೇಡ ಎನ್ನಿಸಿ ಸುಮ್ಮನಾದೆ. ರಾತ್ರಿಯ ಹಿತ ಮನಸ್ಸಿಗೆ ತಾಕಿ ಮಲಗಿಕೋ ಚೈತನ್ಯ ಇಂದಿನ ಲಾಲಿ ನನ್ನದು ಎಂದು ಮನೆಯ ಮುಂದಿನ ಮಾವಿನಮರ ಗಾಳಿಗೆ ತೂಗಿ ಹೇಳಿತು. ಜಗತ್ತೇ ಮಗುವಾಗುವಾಗ ನನ್ನದ್ಯಾವ ಲೆಕ್ಕ! ಗೊತ್ತಿಲ್ಲದಂತೆ ನಿದ್ದೆ ನನ್ನೂ ಆವರಿಸಿತ್ತು.

ಬೆಳಗ್ಗೆ ಏಳುವಾಗಲೇ ಹಿತ್ತಲಲ್ಲಿ ಆಶಾ, ಮಾವ ಇನ್ನೂ ಯಾರು ಯಾರೋ ಮಾತಾಡ್ತಾ ಇದ್ದದ್ದು ಕೇಳುತ್ತಿತ್ತು. ಯಾವಾಗ ಬೆಳಗಾಯಿತು ಸಮಯ ಎಷ್ಟಾಯಿತೋ ಎನ್ನುವ ಆತಂಕದಲ್ಲೇ ಹಾಸಿಗೆಯನ್ನು ಸುತ್ತಿ ಪಕ್ಕಕ್ಕಿಟ್ಟೆ. ಗೋಡೆಯ ಗಡಿಯಾರ ನಿಂತು ಯಾವ ಕಾಲವೋ ಆಗಿತ್ತು. ಅತ್ತೆ ಮಾವ ಇಬ್ಬರಿಗೂ ಅದರ ಅಗತ್ಯ ಇರಲಿಲ್ಲ. ಮುಖ ತೊಳಿಯಲಿಕ್ಕೆ ಹಿತ್ತಲಿಗೆ ಹೋದೆ. ಆಶಾ, ಮಾವ ಜಗ್ಗತ್ತಿನ ಉತ್ಸಾಹವನ್ನೇ ಹೊದ್ದವರಂತೆ ಮಾತಾಡುತ್ತಿದ್ದರು. ಮಾವ ಮೊಮ್ಮಗಳಿಗೆ ವಿವರಿಸಿ ಹೇಳುತ್ತಿದ್ದರು. ಕಾಟ್ರಿ ಮೊಲ ಕ್ಲೀನ್ ಮಾಡ್ತಾ ಇದ್ದ. ಮೊದಲ ಬಾರಿಗೆ ಆಶಾ ಇದನ್ನೆಲ್ಲಾ ನೋಡುತ್ತಿರುವುದು. ಅವಳಿಗೆ ಇಂಥಾ ವಿಷಯಗಳಲ್ಲಿ ಕುತೂಹಲ. ಅತ್ತೆ ತಂದಿತ್ತ ಕಾಫಿಯನ್ನು ಕುಡಿದು, ʻಮಾತಂಗಿಯನ್ನು ನೋಡಿ ಬರುತ್ತೇನೆʼ ಎಂದೆ. ಅತ್ತೆ, ʻನೀನ್ಯಾಕೆ ಹೋಗಬೇಕು… ಹೇಳಿ ಕಳುಸ್ತೀನಿ ಅವಳೇ ಬರ್ತಾಳೆʼ ಎಂದರು. ʻಇಲ್ಲ ಅತ್ತೆ ಅವಳು ನನ್ನ ಗುರುತು ಹಿಡೀತಾಳೋ ಇಲ್ಲವೋ? ತುಂಬಾ ವರ್ಷಗಳೇ ಆಯ್ತಲ್ಲವಾ? ಹಾಗೆ ಊರನ್ನೂ ನೋಡಿ ಬರ್ತೇನೆʼ ಎಂದೆ. ʻಒಬ್ಬಳೇ ಹೇಗೆ ಹೋಗ್ತೀಯಾ? ಊರು ತುಂಬಾ ಬದಲಾಗಿದೆ, ಕಾಟ್ರಿಯನ್ನೇ ಜೊತೆಗೆ ಕಳುಸ್ತೀನಿ ಇರುʼ ಎಂದರು. ʻಬೇಡ ಅತ್ತೆ ಎಲ್ಲಾ ನೆನಪಿದೆ… ಯಾವುದನ್ನು ಮರೆಯಲಿ… ಹುಟ್ಟಿ ಬೆಳೆದ ಊರಲ್ಲವಾ…?ʼ ಎಂದೆ. ಅತ್ತೆ ಅರೆಮನಸ್ಸಿನಿಂದ ʻಹೂಂ ಬೇಗ ಬಂದುಬಿಡುʼ ಎಂದರು. ಯಾರ ಉತ್ಸಾಹಕ್ಕೂ ಭಂಗ ಬರದ ಹಾಗೆ ಅಲ್ಲಿಂದ ಹೊರಟೆ. ಇಬ್ಬನಿ ಹೊದ್ದ ಮರಗಿಡಗಳು ಈಗ ಕಾಡಿನ ದಟ್ಟತೆಯನ್ನು ಕಳಕೊಂಡು ಊರಾಗುವತ್ತ ಹೊರಟಿದ್ದವು. ನಾನು ತೀವ್ರತೆ ಕಳಕೊಳ್ಳದ ಘಟನೆಗಳ ಜೊತೆ ಹೊರಟಿದ್ದೆ ನನ್ನ ಪ್ರೀತಿಯ ಮಾತಂಗಿಯನ್ನು ನೋಡಲಿಕ್ಕೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: