ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಆಯಾಸವಾಗುವ ತನಕ ಅಲ್ಲ, ಅರ್ಥವಾಗುವ ತನಕ ಮಾತ್ರ ಹುಡುಕು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

15

ಸತೀಶನ ಸಹವಾಸಕ್ಕೆ ಬಿದ್ದು ದೊಡ್ಡ ದೊಡ್ದ ಮಾತುಗಳನ್ನು ಕಲಿತ ನಾನು ಮೊದಲ ಮಹಾನ್ ರೆವಲ್ಯೂಷನರಿ ತೀರ್ಮಾನ ತೆಗೆದುಕೊಂಡಾಗ ಬರಿಯ ಹದಿನೆಂಟೇ ವರ್ಷ. ಇನ್ನು ಸಂಪ್ರದಾಯದ ಹಾಡುಗಳನ್ನು ನಾನು ಹಾಡಲ್ಲ ಎನ್ನುವ ತೀರ್ಮಾನಕ್ಕೆ ಬಂದಾಗ ದೊಡ್ಡದೊಂದು ಪ್ರತಿರೋಧ ನನ್ನ ಹಳ್ಳಿಯಲ್ಲೇ ಹುಟ್ಟಿಕೊಂಡಿತು. ಊರವರೆಲ್ಲಾ ನಾನು ಕಲಿಯುತ್ತಿದ್ದ ಹೋರಾಟದ ಹಾಡುಗಳು, ಕ್ರಾಂತಿ ಎಲ್ಲವೂ ನನ್ನ ಜೀವನವನ್ನು ಕೊಂದೇ ಬಿಡುತ್ತೆ ಎನ್ನುವ ತೀರ್ಮಾನಕ್ಕೆ ಬಂದು ಅಮ್ಮ ಅಜ್ಜಿಗೆ ಚಾಡಿ ಹೇಳಿದರು. ಅಮ್ಮನಿಗೆ ನನ್ನ ಮೇಲೆ ಕಣ್ಣು. ಅಷ್ಟರಲ್ಲಿ ಬಂದಿದ ನಾಲ್ಕಾರು ಸಂಬಂಧಗಳನ್ನು ನಾನು ಬೇಡ ಅಂದುಬಿಟ್ಟಿದ್ದೆನಲ್ಲಾ, ನನಗೇನಾದರೂ ಪ್ರೀತಿ, ಪ್ರೇಮ ಅಂತ ಆಗಿರಬಹುದೇನೋ ಎಂಬ ಅನುಮಾನ ಇದ್ದರೂ ತೋರಿಸಲಿಲ್ಲ. ಇದ್ಯಾವುದೂ ನನಗೆ ಗೊತ್ತಿಲ್ಲ ಅಂತ ಅಲ್ಲ. ಆದರೆ ಎಲ್ಲದಕ್ಕೂ ಜಾಣಕಿವುಡು, ಜಾಣಕುರುಡು. ನನಗೆ ಯಾರ ಮನೆಯಲ್ಲೋ ಮುಸುರೆ ತಿಕ್ಕಿಕೊಂಡು ಪಾದಸೇವೆ ಮಾಡುವುದಕ್ಕೆ ನಾನು ಹುಟ್ಟಿಲ್ಲ ಎನ್ನುವ ಅರಿವು ಮೂಡಿಬಿಟ್ಟಿದ್ದರಿಂದ ಬಂದ ಸಂಬಂಧಗಳನ್ನು ತಿರಸ್ಕರಿಸಿದ್ದೆ. ಊರ ಜನ ಇದೇ ಕಾರಣಕ್ಕೆ ಸತೀಶನ ಜೊತೆಯ ನನ್ನ ಓಡಾಟಕ್ಕೆ ಹೊಸ ಬಣ್ಣ ಕೊಟ್ಟರು. ಅವರ ದೃಷ್ಟಿಯಲ್ಲಿ ನಾನು ಮೀರಿ ಹೋದವಳು. ಹೆಣ್ಣುಮಕ್ಕಳಿಗಿರಬೇಕಾದ ನಯ, ವಿನಯ ಇಲ್ಲದವಳು, ಗಂಡುಬೀರಿಯ ಹಾಗೆ ಅಷ್ಟು ಜನರ ಮಧ್ಯೆ ಒಂಟಿಯಾಗಿ ಮಾತಾಡುವವಳು… ಹೀಗೆ ಯಾವ್ಯಾವ ಅಭಿದಾನ ಬೇಕೋ ಅಷ್ಟನ್ನೂ ಕೊಟ್ಟುಬಿಟ್ಟಿದ್ದರು. ಸ್ನೇಹದ ಹಂತದಲ್ಲಿದ್ದ ನನ್ನ ಸತೀಶನ ಸಂಬಂಧ ಪ್ರೀತಿಗೆ ತಿರುಗಲಿಕ್ಕೆ ಇವೆಲ್ಲವೂ ವೇಗವರ್ಧಕಗಳಾಗಿ ಕೆಲಸ ಮಾಡತೊಡಗಿದವು. ಹೇಗಾಯಿತು? ಏನಾಯಿತು? ಎಂದು ಈಗಲೂ ನನಗೆ ಅಚ್ಚರಿಯೇ. ಸಣ್ಣ ಊರುಗಳಲ್ಲಿ ಕೆಮ್ಮಿದರೂ, ಸೀನಿದರು ಸುದ್ದಿಯೇ. ಜಾತಿಯಲ್ಲದ ಜಾತಿಯ ಹುಡುಗನ ಜೊತೆ ನನ್ನ ಓಡಾಟಕ್ಕೆ ಅರ್ಥ ಹುಡುಕದೇ ಇದ್ದಾರಾ? ಆದರೂ ಜಗತ್ತಿನ ಕಣ್ಣಿಗೆ ನಾನಿನ್ನೂ ದೊಡ್ಡವಳಾಗದೇ ಇದ್ದಿದ್ದರಿಂದ ನನ್ನೊಳಗೆ ಹೆಣ್ತನದ ಭಾವನೆಗಳು ಬರಲಿಕ್ಕಿಲ್ಲವೇನೋ ಎಂದು ಕೆಲವರ ಅನಿಸಿಕೆಯಾಗಿತ್ತು. ಮಾತಂಗಿ ಮಾತ್ರ ಗುಟ್ಟಾಗಿ ನನ್ನ ಕೇಳಿದ್ದಳು, ʻನಿಜ ಹೇಳು ನೀನಿನ್ನೂ ಆಗಿಲ್ಲವೇನೆʼ ಅಂತ. ಇಷ್ಟೆಲ್ಲ ನಡೆಯುತ್ತಿದ್ದರೂ, ಊರಿಗೂರೇ ಪ್ರತಿರೋಧ ವ್ಯಕ್ತಪಡಿಸಿದರೂ ಅಮ್ಮ, ಅಜ್ಜಿ ಮಾತೇ ಆಡಲಿಲ್ಲ. ಬದಲಿಗೆ ಸತೀಶನ ಪೂರ್ವೋತ್ತರಗಳಲ್ಲಿ ತಮ್ಮನ್ನು ಹುಡುಕಲು ಆರಂಭಿಸಿದ್ದರು, ʻಅವನು ಯಾರಂತ ಅಂದುಕೊಂಡಿದ್ದೀ? ನಮ್ಮ ಗೋವಿಂದು ಸರೋಜರ ಮಗ. ನನ್ನ ತವರು ಸರೋಜನ ತವರೂ ಒಂದೇ. ಇಬ್ಬರೂ ಸಾತ್ವಿಕರುʼ ಎಂದಿದ್ದಳು. ಅವಳಿಗೆ ಅತ್ತೆ ಚೆನ್ನಾಗಿ ಗೊತ್ತಿತ್ತು. ತಮಗಿಂತ ಕೆಳಜಾತಿಯವನಿಗೆ ಊಟವನ್ನು ತಟ್ಟೆಯಲ್ಲಿ ಕೊಟ್ಟ ಕಾರಣಕ್ಕೆ ಸ್ವಾಮಣ್ಣಪ್ಪನ ಅಪ್ಪ ಅಪ್ಪಾಜಪ್ಪ ಏಳು ವರ್ಷ ಆ ಕುಟುಂಬವನ್ನೇ ಊರಿಂದ ಬಹಿಷ್ಕಾರ ಹಾಕಿದ್ದರು. ಭಯದಿಂದ ಊರಲ್ಲಿ ಯಾರೂ ಅಪ್ಪಾಜಪ್ಪನನ್ನು ವಿರೋಧಿಸಲೂ ಸಾಧ್ಯವಾಗಲಿಲ್ಲ. ಹುಟ್ಟಿದ ಮಕ್ಕಳನ್ನು ಒಂದರ ಹಿಂದೆ ಒಂದರಂತೆ ಕಳಕೊಂಡ ಅತ್ತೆ, ಮಾವ ಉಳಿದ ಕೈಗೂಸು ಸತೀಶನನ್ನೂ ಬೆನ್ನಿಗೆ ಕಟ್ಟಿಕೊಂಡು ಕಾಡಿನ ಅಂಚಿನಲ್ಲಿ ಗುಡಿಸಲು ಹಾಕಿಕೊಂಡು ಅನಿವಾರ್ಯಕ್ಕೆ ಬದುಕನ್ನು ಕಟ್ಟಿಕೊಂಡಿದ್ದರು. ಅತ್ತೆ, ಮಾವ ಬಹಿಷ್ಕಾರದ ಅವಧಿ ಮೀರಿದ ಮೇಲೂ ಊರೊಳಗೆ ಬರಲಿಲ್ಲ. ಊರಲ್ಲಿ ಗೆರೆಗಳು, ನಿಷೇಧಗಳು, ನಿಯಮಗಳು. ಕೆಟ್ಟತನಗಳೇ ಇಲ್ಲದ ಸಹಜ ಕಾಡು ಎಷ್ಟೋ ಮೇಲು ಎಂದು ಮಾವ ಹೇಳುವುದನ್ನು ನಾನೂ ಕೇಳಿದ್ದೆ. ಈ ತಮ್ಮ ನಿರ್ಧಾರದಿಂದ ಅವರು ಎಂದೂ ಪಶ್ಚಾತ್ತಾಪ ಪಟ್ಟಿರಲಿಲ್ಲ.         

ಹೋರಾಟದ ಕಾವು ದೇಶವ್ಯಾಪೀ ಹರಡುತ್ತಿದ್ದಂತೆ ಸಣ್ಣಪುಟ್ಟ ಹಳ್ಳಿಗಳಲ್ಲಿದ್ದ ಜನರಿಗೂ ನಿಧಾನವಾಗಿ ತಲುಪಲು ಶುರುವಾಗಿತ್ತು. ಎಲ್ಲ ಊರುಗಳಲ್ಲೂ ಹೋರಾಟಗಾರರ ದಂಡೇ ಹುಟ್ಟಿಕೊಂಡಿತ್ತು. ಕೆಂಪು ಬಾವುಟದ ಹಾರಾಟದಿಂದ ಜನರಲ್ಲಿ ಅಗಾಧವಾದ ಅರಿವು ಮೂಡಿತ್ತು. ಅಕ್ಷರ ಕಲಿತ ನಮ್ಮ ಮಕ್ಕಳು ತಮ್ಮೆದುರೇ ನಾಯಕರಾಗುತ್ತಿದ್ದುದನ್ನು ಕಂಡು ಅಕ್ಷರದ ಬಗ್ಗೆ ಅಪಾರವಾದ ಗೌರವ ಮೂಡಿಬಿಟ್ಟಿತ್ತು. ನಮ್ಮನ್ನು ಇನ್ನು ಯಾರೂ ಮೋಸ ಮಾಡಲಾರರು ಎನ್ನುವ ಆತ್ಮವಿಶ್ವಾಸವೇ ಎಲ್ಲರಿಗೂ ದೊಡ್ಡ ಧೈರ್ಯವಾಗಿತ್ತು. 

ಕಾಲ ಧರ್ಮದಿಂದ, ಹೋರಾಟ ತಂದ ಅರಿವಿನಿಂದ ತಮಗಾದ ಅನ್ಯಾಯಕ್ಕೆ ಪರಿಹಾರ ಕೇಳುವುದು ಹಕ್ಕೆಂದು ಅರಿವಾಗಿದ್ದೆ  ಜಮೀನಿನ ವಿಷಯಕ್ಕೆ ಎಷ್ಟೋ ಜನ ಸ್ವಾಮಣ್ಣಪ್ಪನ ಹತ್ತಿರ ತಗಾದೆ ತೆಗೆದಿದ್ದರು. ಊರನ್ನು ನಡೆಸುತ್ತಿದ್ದ ಅವನು ಹೇಳುವವರಿಗೆ ಮಾತಿನಿಂದಲೂ, ಕೇಳದವರಿಗೆ ದೊಣ್ಣೆಯಿಂದಲೂ ಅನಾದಿಕಾಲದಿಂದ ಉತ್ತರ ಕೊಡುತ್ತಲೇ ಬಂದಿದ್ದ. ಲಿಂಗಜ್ಜನ ಮಗ ವೀರಣ್ಣ ಪೇಟೆಯಿಂದ ದುಡಿದು ತಂದ ಒಂದಿಷ್ಟು ಹಣವನ್ನು ಸ್ವಾಮಣ್ಣಪ್ಪರಿಗೆ ಕೊಟ್ಟು ʻನಮ್ಮ ಜಮೀನನ್ನು ನಮಗೇ ಬಿಟ್ಟು ಕೊಡಿʼ ಎಂದು ಕೇಳಿದ್ದ. ಇದು ಸ್ವಾಮಣ್ಣಪ್ಪರನ್ನು ಕೆರಳಿಸಿತ್ತು. ʻನಾಕು ಕಾಸು ಕಂಡ ತಕ್ಷಣ ನನ್ನ ಸರಿಸಮಕ್ಕೂ ನಿಂತು ಮಾತಾಡುವ ಹಾಗೆ ಆಗಿಬಿಟ್ಟೆ ಅಲ್ಲಾ?ʼ ಎನ್ನುತ್ತಾ, ʻಏಯ್ ಅವನನ್ನು ಹೊರಗೆ ಕಳಿಸಿ. ಅವನಿರುವ ಜಾಗಕ್ಕೆ ನೀರು ಹಾಕಿ ತೊಳೆಯಿರಿʼ ಎಂದಿದ್ದ. ʻನಮ್ಮ ಜಮೀನಿಗಿಲ್ಲದಿರೋ ಮೈಲಿಗೆ, ಅದರಲ್ಲಿ ಬಂದ ಬೆಳೆಯನ್ನು ತಿನ್ನಲು ಇಲ್ಲದಿರುವ ಮೈಲಿಗೆ, ನಮಗೆ ಹೇಗ್ ಬರುತ್ತೆ? ನಮ್ಮ ಮೈಲಿಗೆ ಜಮೀನು ನಮಗೆ ಬಿಟ್ಟುಕೊಟ್ಟುಬಿಡಿʼ ಎಂದಿದ್ದ ವೀರಣ್ಣನಿಗೂ ಸ್ವಾಮಣ್ಣಪ್ಪರಿಗೂ ಜಗಳ ಆಗಿ, ʻನಿನ್ನ ಜಮೀನನ್ನು ನಿಮ್ಮಪ್ಪ ಯಾವತ್ತೊ ನನಗೆ ಬರಕೊಟ್ಟಾಗಿದೆ. ಒಂದು ನಾಲಗೆ ಇರಬೇಕು ಅಪ್ಪ ಕೊಟ್ಟ, ಮಗ ಕೇಳೋಕ್ಕೆ ಬಂದ. ಈಗ ಏನಿದ್ದರೂ ನಮ್ಮ ಬಳಿ ಜೀತ ಮಾಡಿಕೊಂಡು ಇರಬೇಕು ಅಷ್ಟೇʼ ಅಂದಿದ್ದ. ಛಾವಡಿಯಲ್ಲಿ ಕುಳಿತಿದ್ದ ವೀರಣ್ಣ ಸಿಡಸಿಡ ಅಂತ ಸಿಡಿದೆದ್ದು ಹಾರಾಡಿದ್ದ. ʻನಮ್ಮಪ್ಪಯ್ಯನ ಹತ್ತಿರ ನೀವು ಜಮೀನನ್ನು ಅಡಮಾನಕ್ಕೆ ಇರಿಸಿಕೊಂಡಿದ್ದೀರಿ. ಮಾರಿರುವ ಹಾಗೆ ನಮಗೇ ಗೊತ್ತಿಲ್ಲ. ಇದು ಮೋಸ ಅಲ್ಲವಾ?ʼ ಎಂದಿದ್ದ. ಲಿಂಗಜ್ಜ ಕೂಡಾ, ʻನಮ್ಮ ತಾತ ಮುತ್ತಾಂದಿರ ಆಸ್ತಿ ಅಂತ ಇರೋದು ಈ ಗೇಣು ಭೂಮಿ ಮಾತ್ರ. ಅದನ್ನ ನೀವು ಹೀಗೆ ಕಬ್ಜ ಮಾಡಿಕೊಂಡರೆ ಹೇಗಯ್ಯ? ಓದು ಬರಾ ಬರಲ್ಲ ಅಂತ ಅಡಮಾನ ಪತ್ರದಲ್ಲಿ ನಿಮಗೆ ಏನು ಬೇಕೋ ಅದನ್ನ ಬರೆದುಕೊಳ್ಳಬಹುದಾ?ʼ ಎಂದಿದ್ದ. ಅವನ ಮಾತುಗಳನ್ನು ಕೇಳಿ ಕೋಪಗೊಂಡ ಸ್ವಾಮಣ್ಣಪ್ಪ ತನ್ನ ಎಡಕಾಲಿಂದ ಲಿಂಗಜ್ಜನ ಎದೆಗೆ ಒದ್ದಿದ್ದ. ವಯಸ್ಸಿಗೂ ಮೀರಿ ದುಡಿತದಿಂದ ಕುಗ್ಗಿದ ದೇಹ, ಜರ್ಜರಿತವಾದ ಮನಸ್ಸು, ಕಳೆದುಕೊಳ್ಳುವ ಭೀತಿ ಲಿಂಗಜ್ಜನನ್ನು ಮತ್ತಷ್ಟು ಕುಗ್ಗಿಸಿತ್ತು. ಯಾವ ಕರುಣೆಯೂ ಇಲ್ಲದೆ ಗೌಡರ ಕಡೆಯವರು ಲಿಂಗಜ್ಜ ವೀರಣ್ಣರನ್ನು ಹೊರ ತಳ್ಳಿ, ಅವರು ಹೊರಡುವ ಮುಂಚೆಯೆ ಕೂತಿದ್ದ ಜಾಗಕ್ಕೆ ನೀರು ಹಾಕಿ ಮೈಲಿಗೆ ಕಳೆದಿದ್ದರು.

ಲಿಂಗಜ್ಜ ವೀರಣ್ಣನಿಗೆ ಸಾರಿ ಸಾರಿ ಹೇಳಿದರೂ ವೀರಣ್ಣ ಕೇಳುವ ಸ್ಥಿತಿಯಲ್ಲಿರಲಿಲ್ಲ. ʻನಮ್ಮ ಜಮೀನು ನಮ್ಮ ಹಕ್ಕು ಅವನು ಕೊಡಲೇಬೇಕುʼ ಎನ್ನುವ ಮಾತನ್ನೇ ಪದೇಪದೆ ಹೇಳಲಾರಂಭಿಸಿದ. ನಾನು ಈ ವಿಷಯವನ್ನು ಸತೀಶನಿಗೆ ತಲುಪಿಸಿದ್ದೆ. ಅವನು ಅತೀ ವಿಷಣ್ಣನಾಗಿ, ʻಇದಕ್ಕೆ ನೋಡು ಓದುಬರಹ ಇರಬೇಕು ಅನ್ನುವುದು. ಅದೊಂದು ಗೊತ್ತಿದ್ದಿದ್ದರೆ ಯಾರೂ ಮೋಸ ಮಾಡಲಿಕ್ಕೆ ಆಗುವುದಿಲ್ಲʼ ಎಂದಿದ್ದ. ಈ ಘಟನೆಯ ನಂತರ ಊರ ಅಪ್ಪಾಮ್ಮಂದಿರೆಲ್ಲ ಮಕ್ಕಳಿಗೆ ಓದುವಂತೆ ತಾಕೀತು ಮಾಡುತ್ತಿದ್ದರು. ಸತೀಶ ಸ್ವಾಮಪ್ಪಣ್ಣನ ಹತ್ತಿರ ಹೋಗಿ ಮಾತಾಡಿದ. ಸ್ವಾಮಣ್ಣಪ್ಪ ಮಾತ್ರ ಯಾವುದನ್ನೂ ಲೆಕ್ಕಿಸದೆ, ʻಏನೋ ಹುಡುಗಾ, ನೀನು ಆ ಓಡಿ ಹೋದವನ ಮಗಳ ಹಿಂದೆ ಸುತ್ತುತ್ತಾ ಇದ್ದೀಯಂತೆ. ನಿಮ್ಮಪ್ಪನ್ನ ಊರಿಂದ ಹೊರಗೆ ಹಾಕಿದ್ದೆ. ನಿನ್ನೂ ಊರೊಳಗೆ ಬರದಿರುವ ಹಾಗೆ ಮಾಡಿಬಿಡುತ್ತೇನೆʼ ಎಂದು ಮಾತು ತಿರುಗಿಸಿದ್ದ. ʻನನ್ನ ನೀವು ಹೇಗೂ ಮಾಡಿ ಪರವಾಗಿಲ್ಲ, ನಿಮ್ಮ ಹಿಡಿತದಿಂದ ತಪ್ಪಿಸಿಕೊಳ್ಳುವುದು ನನಗೆ ಗೊತ್ತು. ಪಾಪ ಅಮಾಯಕ ಲಿಂಗಜ್ಜನ ಜಮೀನು ಅವನಿಗೆ ಬಿಟ್ಟುಕೊಡಿʼ ಎಂದ ಸತೀಶನಿಗೆ, ʻಇದೆಲ್ಲಾ ನನ್ನ ಹತ್ರ ಬೇಡ. ಊರು ನಾನು ಹೇಳಿದ ಹಾಗೆ ಕೇಳುತ್ತೆ, ಅಂದಮೇಲೆ ನೀನೂ ಕೇಳಬೇಕು ಅಷ್ಟೇ. ನಿನ್ನ ಸಾಮ್ರಾಜ್ಯ ಏನಿದ್ದರೂ ನಿನ್ನ ಕಾಡು, ಈ ಊರಲ್ಲʼ ಅಂದ ಸ್ವಾಮಣ್ಣಪ್ಪ. ಸತೀಶನಿಗೂ ಸಿಟ್ಟು ಬಂದು, ʻನೋಡೋಣ ಕಾನೂನು ಇದೆ. ಅದು ನಮ್ಮೆಲ್ಲರಿಗಿಂತ ದೊಡ್ಡದು ಎಂದು ನಂಬುವವ ನಾನುʼ ಎಂದು ಬಂದಿದ್ದ. ವೀರಣ್ಣನೂ ಪಟ್ಟುಬಿಡಲಿಲ್ಲ ಸ್ವಾಮಣ್ಣಪ್ಪ ಕೂಡಾ. ಇದು ಯಾವ ಹಂತ ತಲುಪಬಹುದು ಎನ್ನುವ ಆತಂಕ ಊರ ಮಂದಿಯದ್ದಾಗಿತ್ತು. 

ಇದೆಲ್ಲಾ ಆಗಿ ವಾರವೊಂದರಲ್ಲೇ ಲಿಂಗಜ್ಜ ಸತ್ತ. ವಯಸ್ಸು ಅವನ ದೇಹವನ್ನು ಮಾಗಿಸಿತ್ತು. ಸ್ವಾಮಣ್ಣಪ್ಪ ಹೊಡೆದ ಹೊಡೆತ ದೇಹಶಕ್ತಿ ಕುಂದಿತ್ತು. ಅವಮಾನವೋ, ಹೊಡೆತದ ನೋವೋ ಗೊತ್ತಿಲ್ಲ. ಸ್ವಾಮಣ್ಣಪ್ಪನಿಂದಾನೇ ತನ್ನ ಅಪ್ಪ ಸತ್ತ. ಅವನು ಬದುಕಿದ್ದಾಗಲಂತೂ ಏನೂ ಮಾಡಲಾಗಲಿಲ್ಲ ಕಡೆಪಕ್ಷ ಸಾವಿನಲ್ಲಾದರೂ ದಿಲ್ದಾರ್ ಆಗಿರಲಿ ಎಂದು ವೀರಣ್ಣ ದೊಡ್ದ ಹಾರ ತಂದ. ತಮಟೆ ಬಾರಿಸುವವರನ್ನು ಕರೆಸಿದ. ರಾತ್ರಿಯಿಡೀ ಭಜನೆ ಇಡಿಸಿದ. ಎಲ್ಲವನ್ನೂ ಸ್ವಾಮಣ್ಣಪ್ಪ ಗಮನಿಸುತ್ತಲೇ ಇದ್ದ. ʻನೋಡು ನಾನೂ ನಿನಗೇನು ಕಡಿಮೆ ಇಲ್ಲ ಅಂತ ತೋರಿಸುವುದಕ್ಕೆ ನನ್ನೆದುರು ಇವೆಲ್ಲಾ ಮಾಡುತ್ತಿದ್ದಾನೆʼ ಎಂದು ಭಾವಿಸಿದ, ಹಲ್ಲುಕಡಿದ. ತಕ್ಕ ಶಾಸ್ತಿ ಮಾಡುವುದಾಗಿ ನಿರ್ಧಾರಿಸಿದ್ದ. ವೀರಣ್ಣ ತನ್ನ ಜಮೀನಿನಲ್ಲೇ ಲಿಂಗಜ್ಜನ ಸಮಾಧಿ ಮಾಡಲಿಕ್ಕೆ ಕುಣಿಯನ್ನು ತೋಡಲು ಜನರನ್ನು ಕಳಿಸಿದ. ಕುಣಿ ತೆಗೆಯಲು ಅಳತೆ ಮಾಡಲು ಹೋದವರ ಮೇಲೆ ಹಲ್ಲೆ ನಡೆದು, ʻಇದು ಗೌಡರ ಜಾಗ. ಇದರಲ್ಲಿ ಲಿಂಗಜ್ಜನನ್ನು ಹೂಳಲು ಸ್ವಾಮಣ್ಣಪ್ಪ ಜಾಗ ಕೊಡಲ್ಲʼ ಅಂತ ವೀರಣ್ಣನಿಗೆ ಹೇಳಿ ಕಳಿಸಿದ್ದರು. ಕೆರಳಿದ ವೀರಣ್ಣ ʻನನ್ನ ಅಪ್ಪನನ್ನು ಅವನದೇ ಹೊಲದಲ್ಲಿ ಹೂಳುವೆ. ನನ್ನ ತಡೆಯುವವರು ಯಾರು?ʼ ಎಂದು ಪಟ್ಟಿಗೆ ನಿಂತ. ʻಹೆಣವನ್ನು ಇಟ್ಟುಕೊಂಡು ಇದ್ಯಾವ ಪಂಚಾಯ್ತಿ? ನಮ್ಮ ಜಾಗದಲ್ಲಿ ಹೂಳುವಂತೆ ನಡೆʼ ಎಂದು ದಾಯಾದಿಗಳು ಹೇಳಿದರೂ ವೀರಣ್ಣ ಕೇಳಲು ತಯಾರಿಲ್ಲ. ಲಿಂಗಜ್ಜನನ್ನು ಅವನ ಜಮೀನಿನಲ್ಲೇ ದಫನ್‌ ಮಾಡಲಾಯಿತು. ನಂತರ ನಡೆದದ್ದು ಎಲ್ಲಾ ಸಹಿಸಲಸಾಧ್ಯವಾದವುಗಳೇ. ಕಾನೂನಿನ ತೊಡಕನ್ನು ದಾಟಿ ಗೌಡ ಆ ಜಮೀನನ್ನು ತನ್ನದನ್ನಾಗಿಸಿಕೊಂಡಿದ್ದ, ಪೊಲೀಸರು, ʻಆಧಾರಗಳಲ್ಲಿ ಜಮೀನು ಗೌಡರದ್ದೇ ಆದ್ದರಿಂದ ಇದು ತಪ್ಪು. ನಿಮ್ಮ ತಂದೆಯ ಸಮಾಧಿಯನ್ನು ಬೇರೆ ಕಡೆ ಸ್ಥಳಾಂತರ ಮಾಡಿʼ ಎಂದಿದ್ದರು. ಹೂಳಿದ್ದ ಶವವನ್ನು ತೆಗೆಯುವುದು ಬೇಡ ಊರಿಗೆ ಒಳ್ಳೆಯದಾಗಲ್ಲ ಎಂದು ಊರೆಲ್ಲಾ ಕೇಳಿಕೊಂಡರೂ ಕೇಳದ ಸ್ವಾಮಣ್ಣಪ್ಪ, ʻನನ್ನ ಎದುರು ಹಾಕಿಕೊಂಡರೆ ಏನಾಗುತ್ತದೆ ಎಂದು ಇಡೀ ಊರೇ ನೋಡಲಿʼ ಎಂದ. ವೀರಣ್ಣ ಹುಚ್ಚನ ಹಾಗೇ ಊರೆಲ್ಲಾ ಅರಚಾಡಿ ಭೋರಿಟ್ಟು ಅತ್ತಿದ್ದ. ಆ ಘಟನೆ ಅವನ ಜೀವನದ ಅತ್ಯಂತ ಆಘಾತಕಾರಿಯಾಗಿತ್ತು. ಎಲ್ಲರೂ ಅಸಹಾಯಕರೇ. ಹಣ, ಜಾತಿ, ಅಂತಸ್ತು, ರಾಜಕೀಯ ಮೇಲಾಟಗಳು ಈ ದೇಶವನ್ನು ಆಳುತ್ತಿದ್ದಾಗ ಪ್ರತಿಭಟಿಸುವ ಶಕ್ತಿಯನ್ನೆ ವ್ಯವಸ್ಥೆ ಕಸಿದುಕೊಂಡುಬಿಟ್ಟಿತ್ತು. ಯಾರೂ ಏನು ಮಾಡಲು ಸಾಧ್ಯವಾಗಲಿಲ್ಲ. ಇನ್ನು ಆಶಾಕಿರಣಗಳನ್ನು ಹುಡುಕಿಕೊಳ್ಳುವುದಾದರೂ ಎಲ್ಲಿಂದ? ವ್ಯವಸ್ಥೆಯನ್ನು ಅಣಕಿಸುವ ಹಾಗೇ ತನ್ನ ಭೂಮಿಯಿಂದ ಹೊರಬಿದ್ದ ಲಿಂಗಜ್ಜ ಎಲ್ಲರ ಬದುಕಿನ ಸಾವಿನ ಮಧ್ಯದ ಅಂತರವನ್ನು ಕಳೆದುಬಿಟ್ಟಿದ್ದ. ಜನ ತೀರ್ಮಾನ ಮಾಡಿ ಊರಿಗೆ ಸೇರಿದ ಗೋಮಾಳದಲ್ಲಿ ಲಿಂಗಜ್ಜನನ್ನು ಮರು ದಫನ್ ಮಾಡಿದ್ದರು. ಈ ಕರುಣಾಜನಕ ಸ್ಥಿತಿಯನ್ನು, ವಿಷಾದಗಾಥೆಯನ್ನೂ ಹುಟ್ಟಿದಾಗಿನಿಂದ ನೋಡಿರಲಿಲ್ಲವೆಂದು ಊರಿನ ಹಿರಿಯರು ಮಾತಾಡಿಕೊಂಡಿದ್ದರು. ಸತೀಶ ಸಿಡಿದೆದ್ದು ʻನಿನ್ನಂಥಾ ಶಕ್ತಿಗಳನ್ನು ಬಗ್ಗುಬಡೆಯುವ ದಿನವೊಂದು ಬಂದೇ ಬರುತ್ತದೆʼ ಎಂದು ಸ್ವಾಮಣ್ಣಪ್ಪನ ಮುಖಕ್ಕೆ ಹೇಳಿದ್ದ. ಅಲ್ಲೊಂದು ವಿಷಬೀಜ ಮೊಳಕೆಯೊಡೆಯುತ್ತಿದೆ ಎನ್ನುವ ಅರಿವೂ ಇಲ್ಲದೆ.   

ಅಲ್ಲಿಂದ ಬಂದವನೇ ಆವೇಶವನ್ನು ಕಳಕೊಂಡು ನನ್ನೆದುರು ಕುಳಿತು ಕಣ್ಣೀರಾಗಿದ್ದ. ನಾನೂ ವ್ಯವಸ್ಥೆಯಲ್ಲಿ ಕಳಕೊಂಡವಳೇ, ನನ್ನ ಮನೆ, ಸಂಬಂಧ, ತಾತ, ಅಪ್ಪ, ಅಣ್ಣ, ತಮ್ಮ, ಆಡುಕುರಿ, ದನ, ಕರು… ಕಡೆಗೆ ರೇಡಿಯೋ ಮತ್ತು ಟಾರ್ಚನ್ನು ಕೂಡಾ.  ಈ ದೇಶದ ಮುಕ್ಕಾಲುವಾಸಿ ಬಡ ಜನತೆಯ ಕತೆ ಇದೇ. ಇದ್ದವರೇ ಎಲ್ಲವನ್ನೂ ನುಂಗುವ ಈ ದುರಂತಕ್ಕೆ ನಾವು ಸಾಕ್ಷಿ ಆಗ್ತಾ ಇದೀವಿ ಎಂದಿದ್ದ. ನಾನು ಸಂತೈಕೆಯ ಮಾತುಗಳನ್ನಾಡಿದ್ದೆ – ಅದನ್ನ ಬಿಟ್ಟು ನನಗೆ ಏನೂ ಗೊತ್ತಿಲ್ಲ. ಇದ್ದಕ್ಕಿದ್ದ ಹಾಗೆ ನನ್ನ ಕೈಗಳನ್ನ ಹಿಡಿದು, ʻನೀನು ನನ್ನ ಜೊತೆಯಲ್ಲಿದ್ದರೆ ಎಲ್ಲವನ್ನು ಜಯಿಸುವ ಶಕ್ತಿ ತಾನಾಗೇ ಒದಗಿ ಬರುತ್ತದೆʼ ಎಂದಿದ್ದ. ಹದಿನೆಂಟರ ಹುಡುಗಿಗೆ ಜಗತ್ತು ಏನು ಗೊತ್ತು? ಆ ಮಾತು ನನ್ನ ಕಿವಿದೆರೆಗೆ ಬಿದ್ದಾಗ ಆಕಾಶದ ನೀಲಿ ಉಂಗುರವಾಗಿ ನನ್ನ ಬೆರಳಿನಲ್ಲಿ ಹೊಳೆಯಬೇಕಿತ್ತು. ಆದರೆ ವಿಸ್ತಾರವಾಗುವ ವಿಷಾದವೊಂದು ಇಬ್ಬರ ಎದೆಯಲ್ಲಿ ಗೂಡುಕಟ್ಟಿ, ಎಷ್ಟೋ ಹೊತ್ತು ಇಬ್ಬರೂ ಮಾತಾಡದೆ ಕುಳಿತಿದ್ದೆವು. ನಮ್ಮಿಬ್ಬರಿಗೂ ಗೊತ್ತಿತ್ತು ನಾವು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುವುದರಿಂದ ಜಗತ್ತು ಬದಲಾಗದು, ನಾವು ಜೊತೆಗಿರುವುದು ಎಂದರೆ ನಮ್ಮನ್ನು ನಾವು ಸಂತೈಸಿಕೊಳ್ಳಲಿಕ್ಕೆ, ಮತ್ತು ಜಗತ್ತಿನ ಯಾವುದನ್ನಾದರೂ ಎದುರಿಸಲಿಕ್ಕೆ ಮಾತ್ರ ಎಂದು.

ವೀರಣ್ಣ ಹುಚ್ಚನಂತಾಗಿದ್ದ ದೇಹ, ಮನಸ್ಸುಗಳ ಮೇಲೆ ತನ್ನ ಹಿಡಿತವನ್ನೇ ಕಳಕೊಂಡಿದ್ದ. ಊಟ ಮಾಡಿದರೆ ಮಾಡಿದ ಇಲ್ಲದಿದ್ದರೆ ಇಲ್ಲ. ಲಿಂಗಜ್ಜನ ಸಮಾಧಿಯನ್ನು ಕಾಯುವ ವೀರಕಾವಲಿನವನಂತೆ ಕೋಲನ್ನು ಹಿಡಿದು ಅಲ್ಲೇ ಇರಲಾರಂಭಿಸಿದ. ಯಾರಾದರೂ ಹೋದರೆ ಅಟ್ಟಿಸಿಕೊಂಡು ಬರುತ್ತಿದ್ದ. ಗೌಡ ಏನಾದರೂ ಇಲ್ಲಿ ಬಂದರೆ ಅವನನ್ನು ಮುಗಿಸುತ್ತೇನೆ ಎನ್ನುತ್ತಿದ್ದ. ʻಸಾಹುಕಾರನನ್ನು ಎದುರು ಹಾಕಿಕೊಳ್ಳದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ?ʼ ಎಂದರು ಜನ. ಅದೇನು ವೀರಣ್ಣನ ಮೇಲಿನ ಅನುಕಂಪವೋ, ʻಸಾಹುಕಾರನನ್ನು ಎದುರು ಹಾಕಿಕೊಳ್ಳಬಾರದೆನ್ನುವ ವಿವೇಕ ಇಲ್ಲʼ ಎಂದು ಅವಹೇಳನ ಮಾಡಿದ್ದೋ ಗೊತ್ತಾಗದೆ ಹೋಗಿತ್ತು. ಎರಡು ದಿನ ಎಲ್ಲ ರೋಚಕ, ಮೂರನೆಯ ದಿನ ಮಾಮೂಲು. ನಾಕನೆ ದಿನ ಅಸಡ್ಡೆ. ಇದು ನಮ್ಮ ಜೀವನ.        

ವಿಷಯ ತಿಳಿದು ಸಹಾ ಅನೇಕ ಜನರ ಜೊತೆ ಊರಿಗೆ ಬಂದರು, ʻಇದು ಈ ಹಳ್ಳಿಯ ಕಥೆ ಮಾತ್ರವಲ್ಲ. ಈಗ ನಾವು ಯಾರ ಪರವಾಗಿ ಹೋರಾಡಬೇಕು? ಎದುರಿಸಿ ನಿಂತ ವೀರಣ್ಣ ಈಗ ಹುಚ್ಚನಾಗಿದ್ದಾನೆ. ಇಲ್ಲಿ ಮಾತ್ರ ಅಲ್ಲ ಜಗತ್ತಿನ ಎಲ್ಲ ಕಡೆಯೂ ಇಂಥಾ ಶೋಷಣೆ ಇಲ್ಲದವರ ಮೇಲೆ ನಡೆಯುತ್ತಲೇ ಇದೆ. ಜಾತಿ, ಹಣ ಮುಖ್ಯವಾಗುತ್ತಿದೆ. ಇದೊಂದು ಕೇಸ್ ಅಂತ ನೋಡದೆ ಯಾವ ಬಡವರಿಗೆ ಭೂಮಿ ಇಲ್ಲವೋ ಅಂಥಾ ಬಡವರಿಗೆ ಭೂಮಿಯನ್ನು ಕೊಡಿಸಬೇಕು, ಅಂಥಾದ್ದೊಂದು ಕೆಲಸ ನಾವು ಮಾಡಬೇಕು, ಅಧಿಕಾರಿಗಳಲ್ಲಿ ಮಾತಾಡಬೇಕು… ಸರಕಾರಕ್ಕೆ ಮನವಿ ಸಲ್ಲಿಸಬೇಕು. ಸತತವಾಗಿ ಫಲೋಅಪ್ ಮಾಡಬೇಕು. ಇದೆಲ್ಲಾ ಆಗಬೇಕು ಎಂದರೆ ದೊಡ್ಡದೊಂದು ಇಚ್ಛಾಶಕ್ತಿ ನಮ್ಮೆಲ್ಲರ ಎದೆಯಲ್ಲಿ ಮೊದಲು ಚಿಗುರೊಡೆಯಬೇಕುʼ ಎಂದರು. ನಾನು ಆವೇಶಕ್ಕೆ ಬಿದ್ದು ʻಬಡವರು ಎಂದರೆ ಎಲ್ಲವನ್ನೂ ಮಾರಿಕೊಳ್ಳಲಿಕ್ಕೆ ಇಲ್ಲ ಎನ್ನುವುದನ್ನು ಶ್ರೀಮಂತರಿಗೆ ಮೊದಲು ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಇನ್ನೊಂದು ಕಡೆ ನೀವು ಕೊಡಿಸುವ ಜಮೀನೂ ಇಂಥವರ ಪಾಲೇ ಆಗುತ್ತದೆʼ ಎಂದೆ. ಸಹಾ ನನ್ನ ಕಡೆಗೆ ಅಚ್ಚರಿಯಿಂದ ನೋಡಿದರು. ನಾನು ಬರಿಯ ಮಾತಾಡಿಲ್ಲ ಒಳಗಿನ ನೋವಿಗೆ ಕನ್ನಡಿಯಾಗಿದ್ದೆ ಎನ್ನುವುದು ಅವರಿಗೆ ಅರ್ಥ ಆಯಿತು. ʻರಾಜಲಕ್ಷ್ಮೀ ಅಂತ. ಒಳ್ಳೆ ಹಾಡುಗಾರ್ತಿ. ನಿಮ್ಮ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾಳೆ. ಅದರಲ್ಲೂ ʻನನ್ನ ಮನೆಯ ಮುರಿದ ಛಾವಣಿಯಿಂದ ಸೂರ್ಯ ಒಳಬರುತ್ತಾನೆ, ಜಗತ್ತೆ ತಾಕತ್ತಿದ್ದರೆ ತಡೆ ನೋಡೋಣʼ ಎನ್ನುವ ಹಾಡನ್ನು ಈಕೆಯ ಬಾಯಿಂದ ಕೇಳಬೇಕುʼ ಎಂದು ಸತೀಶ ಪರಿಚಯಿಸಿದ್ದ. ಮೆಚ್ಚುಗೆ ವ್ಯಕ್ತಪಡಿಸಿದ್ದ ಸಹಾ ನನ್ನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ʻನಾವು ಸಮಸ್ಯೆಯನ್ನು ಮೇಲಿಂದ ಮಾತ್ರ ನೋಡದೆ ಎಲ್ಲ ಮಗ್ಗುಲುಗಳಿಂದ ಪರಿಶೀಲಿಸಬೇಕು, ಅದಕ್ಕೆ ಒಂದು ತಯಾರಿಬೇಕು, ನೋಡೋಣ ನಮ್ಮ ಕೈಯಿಂದ ಏನು ಸಾಧ್ಯವಾಗಬೇಕೋ ಅದನ್ನೆಲ್ಲಾ ಮಾಡೋಣ. ಅದಕ್ಕೂ ಮುಂಚೆ ನಾವು ಏನನ್ನ ಮಾಡಬೇಕು ಎನ್ನುವ ಕಾರ್ಯಸೂಚಿ ಸಿದ್ಧವಾಗಬೇಕು. ಆದರೆ ಎಲ್ಲೂ ಹಿಂಸಾಚಾರ ಆಗಕೂಡದುʼ ಎಂದಿದ್ದರು. ನಾನು ಮಾತಾಡಿದ ಎರಡು ಸಾಲುಗಳು ನನ್ನ ಒಳಗೆ ದೊಡ್ಡ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಮುಂದೆ ಮಾತಾಡಬಹುದಾದ ಮಾತುಗಳ ಪೀಠಿಕೆಯಾಗಿತ್ತು. ನಾನು ಬರೀ ಯಾರೋ ಬರೆದ ಹಾಡುಗಳಿಗೆ ಮಾತ್ರ ಧ್ವನಿಯಾಗಬಲ್ಲವಳಲ್ಲ ನನ್ನೊಳಗೆ ಮೊಳೆಯುವ ಮಾತುಗಳಿಗೂ ಧ್ವನಿಯಾಗಬಲ್ಲೆ ಅನ್ನಿಸಿತ್ತು. ಹೊರಡುವಾಗ ಸಹಾ ನನ್ನ ನೋಡಿ, ʻನಿಮ್ಮನ್ನು ನೋಡಿದ್ರೆ ಮಿಂಚನ್ನು ನೋಡಿದ ಹಾಗಾಗುತ್ತೆ. ನಿಮ್ಮಂಥವರು ನಮ್ಮ ಈ ಚಳವಳಿಗೆ ಬೇಕು, ಕಾರ್ಯಕ್ರಮ ಇದ್ದಾಗ ಬಂದು ಹಾಡಿ, ಹೋರಾಟದಲ್ಲಿ ಪಾಲ್ಗೊಳ್ಳಿʼ ಎಂದಿದ್ದರು. ಸತೀಶನಿಗೆ ಸಂತೋಷವಾಗಿತ್ತು. ʻನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತದೆʼ ಎಂದು ಅವನು ನನ್ನ ಹೆಗಲ ಮೇಲೆ ಕೈಯಿಟ್ಟಿದ್ದ.

ದಡಕ್ಕೆಂದು ಎಚ್ಚರವಾಯಿತು, ನಿಜಕ್ಕೂ ಹೆಗಲ ಮೇಲೆ ಕೈ ಇರುವುದು ಸತೀಶನದ್ದಾ? ಎಂದು ನೋಡುವಾಗ ಅತ್ತೆಯ ಕೈ ನನ್ನ ಹೆಗಲ ಮೇಲಿತ್ತು. ʻಯಾಕೆ ಗಾಬರಿಯಾಯಿತಾ?ʼ ಎಂದ ಅವರ ಮುಖ ನೋಡಿದೆ. ʻಎಷ್ಟು ಹೊತ್ತಿನ ತನಕ ಕೂತೇ ಇರ್ತೀಯ, ಒಳಗೆ ಬಾ ಹಾವೋ, ಚೇಳೋ ಇದ್ದೀತುʼ ಎಂದಾಗ ಭೂತಕಾಲದಿಂದ ವಾಸ್ತವಕ್ಕೆ ಧಕ್ಕೆಂದು ಬಂದಿದ್ದೆ. ನನ್ನ ಪಕ್ಕ ಕುಳಿತು, ʻಚೇತು ನಿನ್ನ ಗೊಂದಲ ಏನೆಂದು ನನಗೆ ಗೊತ್ತು ಮಗು. ಅದು ತಪ್ಪೆಂದೂ ಹೇಳುತ್ತಿಲ್ಲ. ಆದರೆ ಆಯಾಸವಾಗುವ ತನಕ ಹುಡುಕ ಬೇಡ. ಅರ್ಥ ಆಗುವವರೆಗೂ ಮಾತ್ರ ಹುಡುಕುʼ ಎಂದರು. ಅವರ ಕೈಗಳನ್ನು ನನ್ನ ಕೈಗೆ ತೆಗೆದುಕೊಂಡು ಕಣ್ಣುಗಳಿಗೆ ಒತ್ತಿಕೊಂಡೆ. ಜ್ವರಕ್ಕೂ ಮೀರಿದ ಬಿಸಿ ಅವರ ಕೈಗಳಲ್ಲಿತ್ತು.    

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: