ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕಾಣಿಸುವ ಚಿತ್ರಗಳು ನಮ್ಮನ್ನು ವಂಚಿಸುತ್ತಲೇ ಇರುತ್ತವೆ.

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

27

`ಹಣ ಇದ್ದಾಗ ಬ್ರಾಂಡೆಡ್ ಇಲ್ಲದಿದ್ದಾಗ  ಭಟ್ಟಿ ಸರಾಯಿ. ಒಟ್ಟಿನಲ್ಲಿ ಸದಾ ನಶೆ ಬೇಕು. ಈ ಗಂಡಸರ ನಶಾ ಇಳಿಯುವುದೇ ಅಲ್ಲ. ಒಮ್ಮೆ ಹೆಂಡ, ಇನ್ನೊಮ್ಮೆ ಹೆಣ್ಣು, ಮತ್ತೊಮ್ಮೆ ತಮ್ಮ ಅಹಂ… ಹೀಗೆ ಇನ್ನೂ ಏನೇನೋ’ ಎಂದು ಹೇಳಿದೆ. ಸಹಾ ತಮ್ಮ ಕೈಲಿದ್ದ ಸಿಗರೇಟಿನ ಬೂದಿ ಷರ್ಟಿನ ಮೇಲೆ ಬೀಳದಂತೆ ಮುಂದೆ ಬಗ್ಗಿದರು. ಕೋಪ ಬಂದು ಅವರ ಕೈಲಿದ್ದ ಸಿಗರೇಟನ್ನು ಕಸಿದುಕೊಂಡು, `ಇದೂ ಕೂಡಾ ನಶಾನೆ’ ಎಂದೆ. ಅವರು ಮಾತಾಡಲಿಲ್ಲ. ಬದಲಿಗೆ ದೀರ್ಘವಾದ ಶ್ವಾಸ ತೆಗೆದುಕೊಂಡರು. ಜಾಣತನಕ್ಕೆ ಅವರಲ್ಲಿ ಕೊರತೆಯೇ ಇರಲಿಲ್ಲ. ನನಗೆ ಇನ್ನೂ ಸಂಕಟ ಅನ್ನಿಸಿದ್ದು ಮಹದೇವಯ್ಯನ ಕವಿತೆಯಲ್ಲಿ ತಾಯೊಬ್ಬಳ ಬಗ್ಗೆ ಗಿರಾಕಿಗಾಗಿ ಕಾಯುತ್ತಾಳೆ ಎಂದು ಕೆಟ್ಟದಾಗಿ ಬರೆದದ್ದಕ್ಕೆ. ನೋವಾಯಿತು. ಸಹಾ, `ಅವಳು ನಿನ್ನ ತಾಯಿಯಪ್ಪಾ, ನಿನಗೆ ಹಾಲನ್ನು ಕೊಟ್ಟವಳು ಅವಳ ರಕ್ತ ನಿನ್ನಲ್ಲಿದೆ ಹಾಗೆಲ್ಲಾ ಅನ್ನಬಾರದು’ ಎನ್ನಬೇಕಿತ್ತು. ವಿಚಿತ್ರವಾಗಿ ಬದಲಿಗೆ ಕವಿತೆ ಇನ್ಟೆನ್ಸ್ ಆಗಿದೆ ಎಂದಿದ್ದರು. ಅವನನ್ನು ಉತ್ತೇಜಿಸಿದ್ದರು. `ಹೆಣ್ಣಿನ ಸ್ಥಿತಿಯನ್ನು ಯಾವ ಕಾಲದಿಂದಲೂ ಸಮಾಜ ಹೀಗೇ ಎಕ್ಸ್ಪ್ಲಾಯ್ಟ್ ಮಾಡ್ತಾನೇ ಬಂದಿದೆ ನೀವೂ ಈ ವಿಷಯದಲ್ಲಿ ಹೀಗೇನಾ?’ ಎಂದರೆ, ಅದಕ್ಕೆ ಸಹಾ, `ಅವರವರ ಭಾವವನ್ನು ನಾವು ಬದಲಿಸಲಿಕಾಗಲ್ಲ, ಅದವರ ಅನುಭವವನ್ನು ಆಧರಿಸಿರುತ್ತದೆ’ ಎಂದುಬಿಟ್ಟಿದ್ದರು.

ಇದು ನನಗಿಷ್ಟವಾಗಿರಲಿಲ್ಲ. `ಸಹಾ ಅವಳು ಹಾಗಾದಳು ಅಂದರೆ ಅದಕ್ಕೆ ಕಾರಣ ಈ ಸಮಾಜವೂ ತಾನೆ. ನಾವು ಹೋರಾಟ ಮಾಡ್ತಾ ಇರೋದೇ ಶೋಷಣೆ ಮಾಡುವವರ ವಿರುದ್ಧ. ನಾವೇ ಶೋಷಣೆ ಮಾಡಬಾರದು. ಆಕೆಯ ಪರಿಸ್ಥಿತಿ ಏನಾಗಿತ್ತು ಅದನ್ನ ಯೋಚಿಸಿ’ ಎಂದೆ. ಸಹಾ ನನ್ನೆಡೆಗೆ ನೋಡಿ ದೀರ್ಘವಾದ ಉಸಿರನ್ನು ಬಿಟ್ಟು, `ನಿಮ್ಮ ಕೈಲಾದರೆ ಹೋರಾಟ ಮಾಡಿ’ ಎಂದುಬಿಟ್ಟಿದ್ದರು. ನನಗದು ದೊಡ್ಡ ಆಘಾತ. ಅಕ್ಷರಶಃ ಕನಲಿ ಹೋಗಿದ್ದೆ. ನಮ್ಮ ಪ್ರಶ್ನೆಗಳು ನಮಗೆ ಮಾತ್ರ ಪ್ರಶ್ನೆಗಳಾ? ಉತ್ತರ ಹುಡುಕುವ ಜರೂರತ್ತು ನಿಮಗಿಲ್ಲವಾ? ಅವು ಪ್ರಶ್ನೆಗಳಾಗೇ ಉಳಿಯ ಬೇಕಾ? ಒಬ್ಬ ಗಂಡು ತನ್ನ ತಾಯಿಯನ್ನು ನೀತಿಗೆಟ್ಟವಳು ಅಂದರೆ ಅವನ ಭಾವ ಇಂಟೆನ್ಸ್ ಹೇಗಾಗುತ್ತೆ? ಅವನ ಮನಸ್ಸು ಕಲುಷಿತ ಆಗಿದೆ ಎಂದು ತಾನೆ’ ಎಂದೆ. ಸಹಾ ಅದನ್ನೂ ಸಮರ್ಥಿಸಿಕೊಂಡಿದ್ದು ವಿಚಿತ್ರವಾಗಿ, `ಅದು ಅವಳ ತಪ್ಪೆಂದು ಅವನೆಲ್ಲಿ ಬರೆದಿದ್ದಾನೆ? ತನ್ನ ತಾಯನ್ನು ಪುರುಷರು, ಅದರಲ್ಲೂ ಮೇಲ್ಜಾತಿಯವರು ಬಳಸಿಕೊಳ್ಳಲು ಕಾಯುತ್ತಿದ್ದಾರೆ, ಅವಳು ಬಲಿಪಶು ಆಗುತ್ತಿದ್ದಾಳೆ ಎಂದಲ್ಲವೆ? ಚೈತನ್ಯ ನೀವು ಅತಿಯಾಗಿ ಯೋಚಿಸಬೇಡಿ, ಅದು ಅವನು ತಾಯಿ ಎಂದು ಬರೆದರೆ, ಸ್ವಂತ ತಾಯಿ ಅಂತ ಯಾಕೆ ನಿರ್ಧಾರಕ್ಕೆ ಬರುತ್ತೀರಿ? ಜಗತ್ತಿನ ಹೆಣ್ಣುಗಳೆಲ್ಲರೂ ತಾಯಂದಿರೇ ತಾನೆ?’ ಎಂದರು. ನನ್ನ ಕಣ್ಣಾಲಿಗಳು ತುಂಬಿ ಬಂದವು. ಅವನು ಹೆಂಡತಿಯನ್ನು ಅನುಮಾನಿಸುವುದರಲ್ಲಿ ಯಾವ ಸಂಶಯವೂ ಉಳಿಯಲಿಲ್ಲ. ಸಹಾ ಏನೂ ಹೇಳಲಿಲ್ಲಾ. ಮಹದೇವಯ್ಯ ಸಹಾರ `ಇಂಟೆನ್ಸ್’ ಎನ್ನುವ ಮಾತನ್ನು ನಂಬಿಬಿಟ್ಟ. ನಾನು ಅಸಹಾಯಕಳಾಗಿದ್ದೆ. ಸಹಾ ಕ್ಷಮಿಸಲಾಗದ ತಪ್ಪನ್ನು ಮಾಡಿಬಿಟ್ಟಿದ್ದರು. ಆದರೆ ಅದನ್ನು ಅವರು ಎಂದೂ ಒಪ್ಪಲೇ ಇಲ್ಲ. ಯಾಕೆಂದರೆ ತಪ್ಪು ಮಾಡಲಿಕ್ಕೆ ಗಂಡಸಿಗೆ ಅಧಿಕಾರವನ್ನು ಈ ಸಮಾಜವೇ ಕೊಟ್ಟುಬಿಟ್ಟಿದೆ.      

ಅರ್ಥಗಳು ಪದಗಳಿಂದ ಬೇರೆಯಾಗಿ ಬರೀ ಸದ್ದುಗಳಾಗಿದ್ದವು. ನಾನು ಅಳುತ್ತಿದ್ದೆ. ನಂಬಿಕೆಯ ಆಸರೆಯೊಂದು ಕಳಚಿಹೋದಂತೆ. ಯಾವ ನದಿಯಲ್ಲಿ ಮೀನಿದೆ ಎಂದುಕೊಂಡು ಹತ್ತಿರ ಹೋದೆನೋ ಆ ನದಿಯೇ ಬತ್ತಿಹೋದಂತೆ ಕಂಗಾಲಾದೆ. ಯಾಕೋ ಇವಾರೆಲ್ಲಾ ನನಗೆ ಅವಮಾನ ಮಾಡುತ್ತಿದ್ದಾರೆ ಅನ್ನಿಸಿಬಿಟ್ಟಿತ್ತು. `ನೀವೇ ಹೀಗೆಂದರೆ ಹೇಗೆ? ದಮನಿತರ ಪರವಾದ ನಿಮ್ಮ ಧ್ವನಿ ನಿಮ್ಮ ಸ್ನೇಹಿತನ ಕಾರಣಕ್ಕಾಗಿ ಬದಲಾಗಿಬಿಟ್ಟಿತ್ತೇ?’ ಎಂದೆ. ಅವರಿಗೆ ಬೇಕು ಅನ್ನಿಸಿದರೆ ಅದರ ವಿರುದ್ಧ ದ್ವನಿ ಎತ್ತುತ್ತಿದ್ದರು. ಇಲ್ಲದಿದ್ದರೆ ನ್ಯಾಯ ಕೊಡಿಸುವ ದಾರ್ಷ್ಟ÷್ಯದಲ್ಲಿ ಮಾತಾಡಿ ಎಲ್ಲವನ್ನೂ ತುಂಡರಿಸಿಬಿಡುತ್ತಿದ್ದರು. ಅವರ ಸ್ನೇಹಿತ ಕೃಷ್ಣನ ವಿಷಯದಲ್ಲಿ ಆಗಿದ್ದು ಇದೆ. ಅವನ ಅಪ್ಪನ ಜಮೀನಿನಲ್ಲಿ ತೋಟ ಮಾಡಲಿಕ್ಕೆ ಹೊರಟ. ಅವನಿಗೆ  ಸ್ನೇಹಿತ ಎನ್ನುವ ಕಾರಣಕ್ಕೆ ಕಾಲೇಜಿನ ಪ್ರೊಫೆಸರ್ ಒಬ್ಬರು ಹಣ ಕೊಟ್ಟಿದ್ದರು. ಕೃಷ್ಣ ತೋಟ ಮಾಡಿದ. ನಾಲ್ಕಾರು ವರ್ಷಗಳು ಕಳೆಯುವಾಗ ಒಳ್ಳೆಯ ಆದಾಯ ಕೂಡಾ ಬಂತು. ಆದರೆ ತೆಗೆದುಕೊಂಡ ಹಣ ವಾಪಾಸು ಮಾಡಲೇ ಇಲ್ಲ. ಕೊಟ್ಟವ ಬಂದು ಸಹಾರ ಹತ್ತಿರ ಗೋಳಾಡಿದ, `ಈಗ ಒಳ್ಳೆಯ ಸ್ಥಿತಿಯಲ್ಲಿದ್ದಾನೆ ನನ್ನ ಹಣನನಗೆ ಕೊಡಿಸಿ’ ಎಂದು. ಸಾಲ ಕೊಟ್ಟವ ಸರ್ಕಾರಿ ನೌಕರ. ಹಾಗಾಗಿ ಸಹಾ ಅವನಿಗೆ ರೆಗ್ಯುಲರ್ ದುಡಿಮೆ ಇದೆ ಎನ್ನುವ ನಿರ್ಧಾರಕ್ಕೆ ಬಂದ ಹಾಗಿತ್ತು. ಅದು ಅವರ ಪಾಲಿನ ಸರಿ. ಆದರೆ ಕೊಟ್ಟವರ ಸರಿ ಏನೆಂದು ಕೇಳಲೇ ಇಲ್ಲ. ತನ್ನ ಸಂಬಳದ ಮೇಲೆ ಸಾಲ ಮಾಡಿ ಹಣ ಕೊಡಿಸಿದ್ದ ಅವರು ಸಾಲ ತೀರಿಸಿ ತೀರಿಸಿ ಸಾಕಾಗಿದ್ದರು. ಈಗ ಮಗಳ ಮದುವೆ ಹಣ ಬೇಕು. ವಾಪಾಸು ಕೇಳಲಿಕ್ಕೆ ಕೃಷ್ಣ ಕೈಗೆ ಸಿಕ್ಕುತ್ತಿಲ್ಲ. ಬಡ್ಡಿ ಬೇದ ಅಸಲು ಕೊಡಿಸಿ ಎಂದರು. ಆಗಲೂ ಹೀಗೆ ನಾನು ಹೇಳಲಾರೆ ಎಂದುಬಿಟ್ಟಿದ್ದರು. ಸಹಾ ಯಾರ ಕಷ್ಟವೂ ಕಷ್ಟವೇ ಒಮ್ಮೆ ಕೃಷ್ಣನಿಗೆ ಹೇಳಿ ಎಂದು ಯಾರೆಲ್ಲಾ ಹೇಳಿದ್ದರೂ ಕೇಳಲೇ ಇಲ್ಲ. ಹಣ ಕೊಟ್ಟವರು ಎದೆಯೊಡೆದು ಸತ್ತೇ ಹೋದರು. ಹೇಳುವವರು ಕೇಳುವವರು ಯಾರಿದ್ದಾರೆ? ಸಾಕ್ಷ್ಯವೇ ಕಳೆದುಬಿಟ್ಟಿತ್ತು. ನ್ಯಾಯವನ್ನು ಹೀಗೂ ತೀರ್ಮಾನ ಮಾಡುತ್ತಾರಾ?!

ನನಗೆ ಈಗಲೂ ಅಚ್ಚರಿಯಾಗುತ್ತದೆ ಸಹಾರ ಹತ್ತಿರ ಬೇಕಾದ ಎಲ್ಲಕ್ಕು ಉತ್ತರವಿರುತ್ತದೆ. ಯಾಕೆಂದರೆ ಅವರು ಈಗಾಗಲೇ ನಿರ್ಧರಿಸಿಬಿಟ್ಟಿರುತ್ತಿದ್ದರು. ನನ್ನನ್ನು ಅವರ ಜೊತೆ ಕರೆತರುವಾಗಲೂ ಇಂಥಾದ್ದೇ ಸ್ಟಾçಟಜಿ ಮಾಡಿದ್ದರು. `ಚೈತನ್ಯ ನನಗೆ ಹೆಣ್ಣುಗಳು ಹೊಸತಲ್ಲ. ಕಟ್ಟಿಕೊಂಡವಳಂತೆ ಒಲಿದು ಬಂದವರೂ ಬಹಳ. ಆದರೆ ಯಾರ ಜೊತೆಯೂ ಇರಬೇಕು ಅನ್ನಿಸಲಿಲ್ಲ. ಎಲ್ಲ ಕ್ಷಣದ ಕರ್ಷಣಗಳೇ. ಈಗ ನನ್ನ ನಿನ್ನ ನಡುವೆ ಸಂಭವಿಸಲಾರದ್ದೊಂದು ಸಂಭವಿಸಿದೆ ಎಂತಲೂ ಅಲ್ಲ. ಆದರೆ ನಮ್ಮ ಈ ಸಂಬಂಧ ಖಂಡಿತಾ ನನ್ನ ಜೀವನಕ್ಕೊಂದು ಹೊಸ ಆಯಾಮ. ಈ ಸಮಾಜದಲ್ಲಿ ಇದ್ದೇವೆ. ಹೆಂಡತಿ, ಮಕ್ಕಳು ಜವಾಬ್ದಾರಿ. ಈ ಜವಾಬ್ದಾರಿ ಇಲ್ಲದ ಸ್ವಚ್ಚಂದವಾದ ಪ್ರೀತಿಯೊಂದನ್ನು ನಾನು ಇಷ್ಟ ಪಡುತ್ತೇನೆ. ಅದು ನನ್ನ ಪಾಲಿಗೆ ಬಿಡುಗಡೆ. ಅದು ನಿನ್ನಲ್ಲಿ ಕಾಣುತ್ತಿದೆ’ ಎಂದರು. ನನಗೆ ಸ್ಪಷ್ಟವಾಗಿ ಗೊತ್ತಾಗಿತ್ತು ಹೆಜ್ಜೆಗಳು ತಪ್ಪುತ್ತಿವೆ, ನನ್ನ ದಾರಿ ಕವಲಾಗುತ್ತಿದೆ ಎಂದು. ಸಹಾ ನನಗೊಂದು ತಡೆಯಲಾಗದ ಪ್ರವಾಹವಾಗಿ ಕಾಣುತ್ತಿದ್ದರು. ಆ ಆವೇಶಕ್ಕೆ ನಾನು ನಡುಗಿದ್ದೆ. ನನಗಿದು ಹೊಸತು. ಅವರು ಹೇಳುತ್ತಲೇ ಇದ್ದರು, `ನನ್ನ ಅರ್ಹತೆ ಅನರ್ಹತೆಗಳು ನಿನಗೆ ಗೊತ್ತಿವೆ. ಜಗತ್ತು ಇದನ್ನ ಪಾಪ ಎನ್ನಲಿ ತೊಂದರೆ ಇಲ್ಲ. ಆದರೆ ನನ್ನನ್ನು ನೀನು ತೀವ್ರವಾಗಿ ಪ್ರೀತಿಸುವ ಕ್ಷಣಗಳು ಮಾತ್ರ ಕಾಪಾಡುತ್ತದೆ. ಅದಕ್ಕಾಗಿ ಕಾಯುತ್ತೇನೆ, ಅದು ಸಿಕ್ಕಾಗ ಮೈ ಕಂಪಿಸಿ ಆರ್ದ್ರವಾಗುತ್ತದೆ. ಆ ಕ್ಷಣಗಳಲ್ಲಿ ನನ್ನ ಹೆಸರನ್ನು ನಿನ್ನ ಬಾಯಿಂದ ಕೇಳಬೇಕು…ಹೇಳುತ್ತೀಯಲ್ಲಾ ಚೇತೂ…’ ಮಾತಾಡುತ್ತಲೇ ಇದ್ದರು. ಯಾವ ಜಾದು ಇತ್ತು ಆ ಮಾತುಗಳಲ್ಲಿ? ಯಾವ ಕಾರಣಕ್ಕೆ ನಾನು ಕರಗಿದ್ದೆನೋ ಅದು ಈಗ ಮೂರ್ಖತನವಾಗಿ ಕಾಣುತ್ತಿದೆ. ಇಲ್ಲ ನಾನು ಕರಗಬಾರದು, ಅವರ ಬಿಡುಗಡೆ ನನಗೆ ಬಂಧನ ಎಂದು ಅವತ್ತು ಅರ್ಥವಾಗಲೇ ಇಲ್ಲ. ನಾನು ಹೋರಾಟಗಾರನೊಬ್ಬನ ಪತ್ನಿ. ನನ್ನೊಳಗೆ ಇರುವುದು ಸತೀಶನ ಛಲ, ಅವನ ನಂಬಿಕೆ, ಅವನದ್ದೇ ಭರವಸೆ. ಜಗತ್ತಿನೆದುರು ಅವನು ನನಗೆ ಕೊಟ್ಟ ಗುರುತು ಕಾಲಚಕ್ರದಲ್ಲಿ ಮರೆಯಾಗದ್ದು, ಮುಪ್ಪಾಗದ್ದು. ಕರಗಲಾರೆ ಎನ್ನುವ ನನ್ನ ನಿರ್ಧಾರಗಳು ಇಂಥಾ ಹೊತ್ತಲ್ಲಿ ಬಲವಾಗತೊಡಗಿದ್ದು.

ಮಹದೇವಯ್ಯನ ಪುಸ್ತಕಕ್ಕೆ ಅದ್ಭುತವಾದ ಮುನ್ನುಡಿಯನ್ನೂ ಬರೆದುಕೊಟ್ಟರು. ಸತ್ಯವನ್ನು ಹೇಳಲಿಕ್ಕೆ ಧೈರ್ಯವಿದ್ದರೆ ಸಾಕು. ಆದರೆ ಸುಳ್ಳುಗಳನ್ನು ನಿಜ ಮಾಡಲಿಕ್ಕೆ ತುಂಬಾ ದೊಡ್ಡ ಪ್ರತಿಭೆ ಬೇಕು. ನನಗೆ ಚೆನ್ನಾಗಿ ಗೊತ್ತು ಕಾಣಿಸುವ ಚಿತ್ರಗಳು ಹೀಗೆ ನಮ್ಮನ್ನು ವಂಚಿಸುತ್ತಲೇ ಇರುತ್ತವೆ. ಪುಸ್ತಕ ಬಿಡುಗಡೆಯ ದಿನ ನೆಪ ಮಾತ್ರಕ್ಕು ಸ್ಟೇಜ್ ಮೇಲೆ ತನ್ನ ಹೆಂಡತಿಯನ್ನು ನೆನೆಯಲಿಲ್ಲ. ವಲ್ಲಿ ಅದನ್ನು ಅವನಿಂದ ನಿರೀಕ್ಷಿಸಿಯೂ ಇರಲಿಲ್ಲ. ತುಂಬಾ ಮೆಚ್ಯೂರ್ಡ್ ಆಗಿ ನಡೆದುಕೊಂಡಳು. ತನ್ನ ಮಾತಿನ ಉದ್ದಕ್ಕೂ ತನಗೆ ನೋವಿದೆ ಎನ್ನುವುದನ್ನು ಬಿಟ್ಟರೆ ಇನ್ನೊಬ್ಬರ ನೋವೂ ತನ್ನ ನೋವಿನ ಹಾಗೆ ಎಂದವನು ಭಾವಿಸಲೂ ಇಲ್ಲ. ನನಗವನಿಗೆ ಕೆನ್ನೆಗೆ ಬಾರಿಸುವಷ್ಟು ಕೋಪ ಬಂದಿತ್ತು. ಕಾರ್ಯಕ್ರಮ ಆದ ಮೇಲೆ ` ವಲ್ಲಿಯ ಬಗ್ಗೆ ನಿನಗೆ ದೊಡ್ದ ಕೃತಜ್ಞತೆ ಜತೆ ಇರಬೇಕು ಯಾವುದಕ್ಕಲ್ಲದಿದ್ದರೂ ನಿನ್ನ ಮಗುವಿನ ತಾಯಿಯೆಂದು ಮತ್ತು ನಿನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದಾಳೆ ಎಂದು. ಒಂದು ಪಕ್ಷ ನಿನ್ನ ಹೆಂಡತಿ ಇನ್ನೊಬ್ಬನ ಜೊತೆ ಹೋದರೆ ಅದಕ್ಕೆ ಹೊಣೆ ಅವಳೊಬ್ಬಳೇನಾ? ನಿನ್ನ ಜೊತೆ ತನ್ನ ಕನಸುಗಳನ್ನು ಹಂಚಿಕೊಂಡು ಬದುಕಲಿಕ್ಕೆ ಬಂದವಳು ನಿನ್ನ ಬಿಟ್ಟು ಇನ್ನೊಬ್ಬನ ಜೊತೆ ಹೋದರೆ ಅವಳಿಗೆ ಏನು ಕೊಡಬೇಕಾದ್ದನ್ನು ಕೊಡಲಿಲ್ಲ ಎಂದು ತಾನೇ? ಇದರಲ್ಲಿ ನಿನ್ನ ಪಾತ್ರವೂ ಇದೆ, ಮೊದಲು ನಿನ್ನ ಮನಸ್ಸನ್ನು ಸರಿ ಮಾಡಿಕೋ’ ಎಂದೆ. ಸಹಾ ನನ್ನೇ ಬೈದರು, `ಚೈತನ್ಯ ನೀವು ಸುಮ್ಮನಿರಿ ಅದು ಅವರ ಕುಟುಂಬದ ವಿಷಯ’ ಎಂದು. `ನೀವವನನ್ನು ಉತ್ತೇಜಿಸ್ತಾ ಇದೀರಿ’ ಎಂದೆ. ನಮ್ಮದು ನಿತ್ಯದ ಕಾದಾಟ ಮತ್ತೆ ಸರಿ ಹೋಗುತ್ತೇವೆ. ಆದರೆ…

ಸಹಾ ಮಹದೇವಯ್ಯನಿಗೆ ಕೈತುಂಬಾ ಅವಕಾಶಗಳನ್ನು ಕೊಟ್ಟರು, ಬರಿಯ ಸಹಾ ಬರೆಯುತ್ತಿದ್ದ ಹಾಡಿಗೆ ನಾನು ಧ್ವನಿಯಾಗುತ್ತಿದ್ದ ನಾನು ಮಹದೇವಯ್ಯನ ಹಾಡಿಗೂ ನನಗೆ ತಿಳಿದ ಹಾಗೆ ರಾಗಗಳನ್ನು ಹಾಕಿ ಹಾಡಿದೆ. ನನಗೆ ಯಾವುದೇ ಪದ್ಯದ ಪ್ರತಿ ಸಾಲಿನ ಪ್ರತಿ ಪದದ ಅರ್ಥವೂ ಗೊತ್ತಾಗುತ್ತಿತ್ತು. ಅದಕ್ಕೆ ಜೀವ ತುಂಬಲು ಯತ್ನಿಸುತ್ತಿದ್ದೆ. ನನ್ನ ಕಂಠದಲ್ಲಿ ಹಾಡುಗಳು ಅತ್ಯದ್ಭುತ ಎನ್ನುವ ಹಾಗೆ ಅನ್ನಿಸುತ್ತಿತ್ತು. ನನಗೇ ಗೊತ್ತಿಲ್ಲದೆ ನಾನು ಹೋರಾಟದ ಹಾಡುಗಳ ಚೈತನ್ಯ ಆಗಿಬಿಟ್ಟೆ. ಬದುಕಿನ ಬವಣೆಗಳು ಕಂಠಕ್ಕೆ ಅಂಟಿಕೊಂಡು ನೋವಿನ ರಾಗವನ್ನೂ ಪ್ರತಿಭಟನೆಯ ಕಾವನ್ನು ಹೆಚ್ಚಿಸಿತ್ತು. ಸಂಘಟನೆ, ಹೋರಾಟ ಎಲ್ಲದರ ಭಾಗವಾಗಿದ್ದ ಹಾಡುಗಳಲ್ಲಿ ಬೆಳೆಯತೊಡಗಿದೆ. ನನ್ನ ಜೀವನಕ್ಕೆ ತಿರುವು ಕೊಟ್ಟ ಹಾಡುಗಳು ಬರೆದವರ ಹಿಂದಿನ ವ್ಯಕ್ತಿತ್ವದ ಪರಿಶೀಲನೆಗೆ ಇಳಿದುಬಿಟ್ಟಿತ್ತು.

ಒಂದು ದಿನ ಮೀಟಿಂಗ್ ಮುಗಿದ ಮೇಲೆ ಮಹದೇವಯ್ಯ ತುಂಬಾ ಕುಡಿದುಬಿಟ್ಟಿದ್ದ. ತನಗಿನ್ನು ಆ ಹೆಂಡತಿಯ ಮುಖ ನೋಡುವುದೂ ಬೇಡ ಅನ್ನಿಸಿದೆ ಎಂದೆಲ್ಲಾ ಬಡಬಡಿಸಿದ್ದ. ಇದೆಲ್ಲ ಇದ್ದಿದ್ದೆ ಎಂದು ಭಾವಿಸಿ ಅವನ ಊರಿಗೆ ಕೊನೆಯ ಬಸ್ಸಾದ್ದರಿಂದ ಹೊರಡುವಂತೆ ಸಹಾ ಬಸ್ಸನ್ನೂ ಹತ್ತಿಸಿಬಿಟ್ಟಿದ್ದರು. ಅವರಿಗೆ ಊರಿಗೆ ಹೋಗುವಷ್ಟರಲ್ಲಿ ನಶಾ ಇಳಿದುಬಿಟ್ಟಿರುತ್ತೆ ಅನ್ನುವುದಷ್ಟನ್ನೇ ಯೋಚಿಸಿದ್ದರು. ಆದರೆ ಊರು ಸೇರುವ ಹೊತ್ತಿಗೆ ಅವನು ಹೆಣವಾಗಿದ್ದ. ಬಸ್ಸಲ್ಲೆ ಅವನ ಜೀವ ಹೋಗಿಬಿಟ್ಟಿತ್ತು. ಸರಾಯಿಯ ಜೊತೆ ವಿಷ ಬೆರೆಸಿಕೊಂಡು ಕುಡಿದಿದ್ದ. ಈ ಸಣ್ಣ ಸುಳಿವೂ ಕೂಡಾ ನಮಗ್ಯಾರಿಗೂ ಗೊತ್ತಾಗಲೇ ಇಲ್ಲ. ಕಡೆಗೂ ತಾನು ನಂಬಿದ್ದೆ ಸತ್ಯ ಎಂದು ಭಾವಿಸಿ ಬುದ್ಧಿ ಕಲಿಸುವ ಹುಚ್ಚಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ. ಆಗಲೂ ಸಹಾ ನಿಮ್ಮ ಒಂದು ಮಾತು ಅವನನ್ನು ಬದುಕಿಸುತ್ತಿತ್ತು ಎಂದರೂ ಅವರು ಪ್ರತಿಕ್ರಿಯಿಸಲಿಲ್ಲ. ನನಗೆ ನೋವಾಗಿತ್ತು. ಕಣ್ಣೆದುರಿನ ಹುಡುಗ ಹೀಗೆ ಜೀವ ತೆಗೆದುಕೊಂಡರೆ ಯಾರಿಗೆ ಸಹಿಸಲಿಕ್ಕಾಗುತ್ತೆ? ಮೂವತ್ತನಾಲ್ಕರ ಅವನಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಪೂರ್ಣವಾಗಿ ಇಲ್ಲವಾಯಿತೇ? ಅವನ ಪುಟ್ಟ ಹೆಂಡತಿ ತನ್ನ ಕಂಕುಳಲಲ್ಲಿ ಮಗುವನ್ನು ಇಟ್ಟುಕೊಂಡು ದಿಕ್ಕು ತೋಚದೆ ಅಸಹಾಯಕಳಾಗಿ ನಿಂತಿದ್ದಳು. ಅವಳಿಗೆ ಧೈರ್ಯ ಹೇಳುವುದಕ್ಕೂ ನನಗೆ ಆಗಲಿಲ್ಲ.

ಸಹಾ ಓಡಾಡಿ ಪೋಸ್ಟ್ಮಾರ್ಟಂನಲ್ಲಿ ತಮ್ಮೆಲ್ಲ ಪ್ರಭಾವವನ್ನು ಬಳಸಿ ಹೃದಯಾಘಾತ ಎಂದು ಬರೆಸಿದರು. ಉಪಕಾರ ಮಾಡಿದೆ ಎನ್ನುವ ಭಾವನೆ ಅವರಲ್ಲಿತ್ತು. ಮಹದೇವಯ್ಯನ ತಾಯಿ ಕೂಡಾ ಮಾತಾಡಲಿಲ್ಲ. ಆಲದ ಮರದಂಥಾ ಮಗ ಹೇಳಲಿಲ್ಲ ಕೇಳಲಿಲ್ಲ. ಮೀಟಿಂಗ್ ಮುಗಿಸಿ ಬರುವನೆಂದು ಕಾದಿದ್ದ ಅವಳಿಗೆ ಮಗ ಇನ್ನು ಬರಲಾರ ಎನ್ನುವುದು ತಿಳಿದ ತಕ್ಷಣ ಶೂನ್ಯವನ್ನು ದಿಟ್ಟಿಸುತ್ತಾ ಕುಳಿತು ಬಿಟ್ಟಿದ್ದಳು. `ತ್ಯಾಗ ಬಲಿದಾನಗಳಿಂದಲೇ ಆಗಿರುವ ಸಂಘಟನೆ, ನ್ಯಾಯಕ್ಕಾಗಿ ಎಲ್ಲಾ ಟೆನ್ಷನ್‌ಗಳನ್ನೂ ಎದೆ ಮೇಲೆ ಎಳೆದುಕೊಂಡ ಪರಿಣಾಮವೇ ಈ ಸಾವು’ ಎಂದೆಲ್ಲಾ ಜನ ಮಾತಾಡಿದರು. ಕಥೆ ಗೊತ್ತಿದ್ದವರು `ಯಾವ ಹೋರಾಟ ಮಾರಾಯ ಮನೆಯಲ್ಲೇ ಯುದ್ಧ ನಡೀತಾ ಇತ್ತು, ಪರಿಣಾಮ ಸತ್ತ. ಕಾರಣ ಅವನ ಹೆಂಡತಿಯ  ಸಂಬಂಧಗಳು’ ಎಂದರು. ಆದರೆ ಉತ್ತರ ಹೇಳಬೇಕಿದ್ದ ವಲ್ಲಿ ಮಾತಾಡಲಿಲ್ಲ. ಜಗತ್ತಿಗೆ ನ್ಯಾಯದ ಪಾಠ ಹೇಳುವವರ್ಯಾರು ಅವಳ ಪರವಾಗಿ ಧ್ವನಿ ಎತ್ತಿರಲಿಲ್ಲ. ಇನ್ನೊಬ್ಬರ ಎದೆಯ ನೋವನ್ನು ತನ್ನದೆಂದು ಭಾವಿಸಿ ಪದ್ಯ ಬರೆಯುತ್ತಿದ್ದ ಗಂಡನಿಗೆ ಅರ್ಥವಾಗಲಿಲ್ಲ ಎಂದರೆ ಇನ್ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಆದರೆ ಅವಳು ಕೇಳಿದ ಒಂದು ಪ್ರಶ್ನೆ `ನಿನ್ನ ಹೆಂಡತಿ ಸರಿಯಿರಬಹುದಲ್ಲಾ? ನಿನ್ನ ನಿರ್ಧಾರಗಳನ್ನು ಒಮ್ಮೆ ಪರಿಶೀಲಿಸು ಅಂತ ನೀವ್ಯಾಕೆ ಹೇಳಲಿಲ್ಲ’ ಎನ್ನುವುದಕ್ಕೆೆ ಸಹಾರ ಬಳಿ ಉತ್ತರವಿರಲಿಲ್ಲ. ಇದ್ದರೂ ಹೇಳುವ ನೈತಿಕತೆಯನ್ನು ಅವರು ಉಳಿಸಿಕೊಂಡಿರಲಿಲ್ಲ. ಕೊನೆಗೂ ಈ ಪ್ರಕರಣದಲ್ಲಿ ಅವಳು ನಿರ್ಧಾರಕ್ಕೆ ಬಂದಿದ್ದು ತನ್ನ ಗಂಡನದ್ದು ಆತ್ಮಹತ್ಯೆ ಅಲ್ಲ ಕೊಲೆ. ಅದನ್ನು ಮಾಡಿದ್ದೂ ಸಹಾ ಎಂದು!

‍ಲೇಖಕರು avadhi

August 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: