ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ’ರಾಮಣ್ಣ ಮೇಷ್ಟ್ರ್ರ ಪುರಾಣವೂ…’

ಭಾಗ ೨

(ಭಾಗ ೧ ಓದಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ ಮಧ್ಯಾಹ್ನ ಸ್ಕೂಲು ಬಿಟ್ಟ ನಂತರ ಗೊಣ್ಣೆ ಮರದ ಕೆಳಗೆ ಠಳಾಯಿಸುತ್ತಿದ್ದ ಚಿಟ್ಟಿ ಮತ್ತವಳ ವಾನರ ಸೈನ್ಯ ಲೋಳೆ ಲೋಳೆಯಾದ ಹಣ್ಣಿಗೆ ಬಾಯಿಟ್ಟು ಸುಖವೆಲ್ಲಾ ತಮ್ಮದೇ ಎನ್ನುವ ಹಾಗೆ ರಸವನ್ನು ಹೀರುತ್ತಿದ್ದರೆ ದೂರದಲ್ಲಿ ರಾಮಣ್ಣ ಮೇಷ್ಟ್ರು ತಂಬಿಗೆ ತಕ್ಕೊಂಡು ಬಿಳಿಯದೋ ಅಥವಾ ಕರಿಯದೋ ಬಣ್ಣ ಹೋಗಿದೆಯೋ ಎಂದು ಅರ್ಥವಾಗದಂಥ ತುಂಡು ಚೆಡ್ಡಿಯನ್ನು ಹಾಕಿಕೊಂಡು ತಮ್ಮ ಉದ್ದ ಕಾಲನ್ನ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹಾಕುತ್ತಾ ಬರುತ್ತಿದ್ದುದನ್ನ ನೋಡಿ ಗೊಣ್ಣೆಹಣ್ಣಿನ ಮರದ ಹಿಂಬದಿಯಲ್ಲಿ ಪೊದೆಯ ಸಂದಿಯಲ್ಲಿ ಮರದ ಮೇಲೆ ಹೀಗೆ ಬಚ್ಚಿಟ್ಟುಕೊಂಡುಬಿಟ್ಟಿದ್ದರು.
ಆಚೆ ಕಡೆ ಈಚೆ ಕಡೆ ಕಣ್ಣು ಹಾಯಿಸುತ್ತಾ ಬಂದ ರಾಮಣ್ಣ ಮೇಷ್ತ್ರಿಗೆ ಚಿಟ್ಟಿಯ ಲಂಗ ಮರದ ಮರೆಯಿಂದ ಕಂಡೆಬಿಟ್ಟಿತ್ತು. ಯಾವಳೇ ಅವ್ಳು ಮರದ ಸಂದಿ ಕೂತು ಬಗ್ಗಿ ನೋಡ್ತಾ ಇರೋಳು ಎನ್ನುತ್ತಾ ಕೂಗು ಹಾಕಿದ ತಕ್ಷಣ ಚಿಟ್ಟಿಯ ಮೈ ಬೆವರಿ ಅಲ್ಲಿಂದ ಓಟ ಕಿತ್ತಿದ್ದಳು. `ಲೇ ನೀನಾ? ಇಂಥಾ ಬುದ್ಧಿ ಕಲ್ತಿದ್ದೀಯಾ? ಇರು ನಿನ್ನ ಸುಮ್ಮನೆ ಬಿಡಲ್ಲ ನಿಮ್ಮಪ್ಪ ಅಮ್ಮಂಗೆ ಹೇಳ್ತೀನಿ. ನಿಂಗೆ ಸಯರ್ಾಗಿ ಮಾಡಿಸ್ತೀನಿ’ ಎನ್ನುತ್ತಾ ಕೂಗಿದ್ದು ನಿಧಾನಕ್ಕೆ ದೂರವಾಗಿ ಏದುಸಿರು ಬಿಡುತ್ತಿದ್ದ ಚಿಟ್ಟಿ ಒಂದು ಕಡೆ ಉಸ್ಸೆಂದು ಕುಳಿತೇಬಿಟ್ಟಳು. ಹಿಂದೆ ಭಾರತಿ, ಮಂಗಳಿ, ಸರೋಜಾ, ನಕ್ಕತ್ ಎಲ್ಲರೂ ಬಂದು ಸೇರಿಕೊಂಡರು. ಮಂಗಳಿ `ಸಧ್ಯ ಮೇಷ್ಟ್ರು ನನ್ನ ನೋಡಲಿಲ್ಲ. ಇಲ್ಲ ಅಂದಿದ್ರೆ . . . . .’ ಎನ್ನುತ್ತಾ ಎದೆಯ ಮೇಲೆ ಕೈ ಇಟ್ಟಾಗ ಚಿಟ್ಟಿಗೆ ಕೋಪ ನೆತ್ತಿಗೆ ಹತ್ತಿಬಿಟ್ಟಿತ್ತು.
`ಏನೇ ನಾನೇನಾದ್ರೂ ಪರ್ವಾಗಿಲ್ಲ ನೀನ್ ಮಾತ್ರ ಚೆನ್ನಾಗಿರ್ಬೇಕಲ್ವಾ ?’ಎಂದು ಅವಳ ಮೇಲೆ ಹೋದಾಗ ಭಾರತಿ, ಸರೋಜಾ ನಕ್ಕತ್ ಅವಳನ್ನ ತಡೆದಿದ್ದರು. ಇಬ್ಬರ ಮಧ್ಯೆ ರಾಜಿ ಸಂಧಾನ ಆದ ನಂತರ ಕುತೂಹಲ ತಡೀಲಾರದೆ ಚಿಟ್ಟಿ ಭಾರತಿಯನ್ನ `ಮೇಷ್ಟ್ರು ಯಾಕೆ ನನ್ನ ಹಾಗ್ ಬೈದ್ರು? ನಾನೇನ್ ಮಾಡ್ದೆ? ಅವ್ರು ಬಯಲಿಗೆ ಹೋಗೋದನ್ನ ನಾನ್ ನೋಡಿ ಏನಾಗ್ಬೇಕಿದೆ? ಎಷ್ಟು ಕೆಟ್ಟದಾಗಿ ಮಾತಾಡ್ಬಿಟ್ರು’ ಎಂದಳು. ಅಷ್ಟು ಹೇಳುವ ಹೊತ್ತಿಗೆ ಅವಳಿಗೆ ಕಣ್ಣಲ್ಲಿ ಧಾರಾಕಾರ ನೀರು.
ಭಾರತಿ `ಅಯ್ಯೋ ಇದಕ್ಯಾಕೆ ಅಳ್ತೀಯಾ ಇದ್ರಲ್ಲಿ ನಿನ್ನ ತಪ್ಪೇನೂ ಇಲ್ಲ. ಅವ್ರು ನಿಮ್ಮ ಅಪ್ಪ ಅಮ್ಮನ ಹತ್ರಹೋಗೋದೂ ಇಲ್ಲ. ಸುಮ್ಮನಿರು’ ಎಂದು ಸಮಾಧಾನ ಮಾಡತೊಡಗಿದಳು. `ಇಲ್ಲ. ಅಪ್ಪ ಅಮ್ಮನ ಹತ್ರ ಹೋಗ್ತಾರೆ. ನನ್ನನ್ನು ಅವ್ರು ಸುಮ್ನೆ ಬಿಡಲ್ಲ’ ಎನ್ನುತ್ತಾ ಕೊರಗತೊಡಗಿದಾಗ ಭಾರತಿಗೆ ಎಲ್ಲಿಲ್ಲದ ಸಿಟ್ಟು ಬಂತು. ` ಅಯ್ಯೋ ಹೋಗಿ ಏನಂತ ಹೇಳ್ತಾರೆ ನೀನ್ ಬಗ್ಗಿ ನೋಡೋಕ್ಕೆ ಅವ್ರಿಗೇನು ಅದಿದ್ಯಾ? ಎಂದುಬಿಟ್ಟಳು. ಚಿಟ್ಟಿಗೆ ಅದು ಅಂದ್ರೆ ಏನು ಅನ್ನುವುದು ಅರ್ಥ ಆಗಲಿಲ್ಲ. ಮಂಗಳಿಯ ಮುಖ ಮಾತ್ರ ಸಣ್ಣಗಾಯಿತು. ಅವಳ ಅಪ್ಪ ವೆಂಕಣ್ಣನವರು ರಾಮಣ್ಣ ಮೇಷ್ಟ್ರು ದಾಯಾದಿಗಳು. ವರಸೆಯಲ್ಲಿ ಅವಳಿಗೆ ಮೇಷ್ಟ್ರು ಚಿಕ್ಕಪ್ಪ ಆಗಬೇಕು. ಇದೆಲ್ಲಾ ಆ ಕ್ಷಣಕ್ಕೆ ಹೊಳೆಯದ ಚಿಟ್ಟಿ ಮಾತ್ರ ತನ್ನ ಬೆರಗುಗಣ್ಣಿಂದ `ಅದು ಅಂದ್ರೆ ಏನು?’ ಎಂದು ಕೇಳಿದಾಗ ಭಾರತಿಗೆ ಉತ್ತರ ಹೇಳಲಾಗದ ಸ್ಥಿತಿ. ಯಾಕೆಂದರೆ ಅವಳಿಗೂ ಅದರ ಬಗ್ಗೆ ಗೊತ್ತಿಲ್ಲ. ಆದ್ರೂ ಸೋಲೊಪ್ಪಿಕೊಳ್ಳುವ ಹಾಗಿಲ್ಲ. ಮೇಷ್ಟ್ರು ಭಾವಿಯ ಮೇಲೆ ಕಾಲಿಟ್ಟು ನೀರನ್ನ ಎಳೀವಾಗ ಗೂಡಂಗಡಿಯ ಕೃಷ್ಣಪ್ಪ `ಮೇಷ್ಟ್ರೇ ಕಾಲು ಕೆಳಗಿಡಿ. ಸುಮ್ನೆ ಯಾಕ್ ಮಾನ ಕಳ್ಕೋತೀರಾ?’ ಅಂತ ಹೇಳಿದ್ದು ಯಾಕೆಂದು ಗೊತ್ತಿಲ್ವಾ?. ಚಿಟ್ಟಿಯ ಕಣ್ಣು ಪಳ್ಳನೆ ಹೊಳೆದವು `ಹೌದಲ್ವಾ? ದೊಡ್ಡದಾಗಿ ಜಗಳ ಆಗಿತ್ತಲ್ಲ ಅವತ್ತು!’ ಅವಳ ಉದ್ಗಾರದ ಹಿಂದೆ ಹೇಗಾದ್ರೂ ಸರಿ ನಾನು ಬಚಾವಾದ್ರೆ ಸಾಕು ಅನ್ನುವ ಭಾವ ಇತ್ತು. ಇನ್ನೂ ಹತ್ತಿರಕ್ಕೆ ಬಂದು `ಮೇಷ್ಟ್ರಿಗೆ ಐವತ್ತಾದರೂ ಅದಕ್ಕೇ ಮದ್ವೆ ಆಗಿಲ್ಲ’ ಅಂದುಬಿಟ್ಟಿದ್ದಳು. ಆ ಮಾತನ್ನಾ ಕೇಳಿದ್ದೆ ತಡ ಮಂಗಳಿಗೆ ತೀರಾ ಅವಮಾನವಾದಂತಾಗಿ ಅಲ್ಲಿಂದ ಓಡಿಬಿಟ್ಟಳು. ಇನ್ನೇನು ಅವಾಂತರ ಆಗುತ್ತೋ ಎಂದು ಯೋಚಿಸುತ್ತಾ ನಿಂತ ಎಲ್ಲರ ನಡುವೆ `ಅದು’ ಚಿಟ್ಟಿಯ ತಲೆಯಲ್ಲಿ ಉಳಿದುಬಿಟ್ಟಿತ್ತು.

ಮನೆಗೆ ಬಂದ ಚಿಟ್ಟಿಗೆ ಅಮ್ಮ, ಅಜ್ಜಿ ಯಾತಕ್ಕೋ ಜಗಳ ಆಡಿದ್ದು ದುಸು ಮುಸು ಮಾಡುತ್ತಾ ಅಮ್ಮ ಅಡುಗೆ ಮನೆಯಲ್ಲಿ ಪಾತ್ರೆಗಳನ್ನ ಎತ್ತಿ ಹಾಕುತ್ತಾ ಇದ್ದರೆ, ಅಜ್ಜಿ ಅಂಗಳದಲ್ಲಿ ಕೂತು `ನನ್ನ ಕಷ್ಟದಲ್ಲಿ ಒಂದೇ ಒಂದು ಪಾಲು ಯಾರಾದ್ರೂ ಪಟ್ಟಿದ್ದಾರಾ? ಎಲ್ಲಾ ಮಾತಾಡೋಕ್ಕೆ ಬರ್ತಾರೆ’ ಎನ್ನುತ್ತಾ ಗೊಣಗುತ್ತಾ ಕೂತಿದ್ದಳು. ಚಿಟ್ಟಿ ಅಜ್ಜಿಯ ಕಣ್ಣನ್ನು ತಪ್ಪಿಸಿ ಒಳಗೆ ಜಾರಿಕೊಳ್ಳಲು ನೋಡುವಾಗ `ಏ ಇವ್ಳೆ ಬಾರೆ ಇಲ್ಲಿ’ ಎನ್ನುತ್ತಾ ಕೂಗಿಬಿಟ್ಟಿದ್ದಳು.` ಅಜ್ಜಿ’ ಎನ್ನುತ್ತಾ ಹತ್ತಿರಕ್ಕೆ ಹೋದ ಚಿಟ್ಟಿಯನ್ನು ಪಕ್ಕದಲ್ಲಿ ಕೂಡಿಸಿಕೊಂಡು ಗೊಳೋ ಅಂತ ಅಳತೊಡಗಿದ್ದಳು. ದಿಕ್ಕು ತೋಚದ ಚಿಟ್ಟಿ `ಅಳಬೇಡ ಅಜ್ಜಿ ಅಪ್ಪ ಬಂದಾಗ ಹೇಳಿ ಅಮ್ಮನಿಗೆ ಹೊಡೆಸೋಣ ಬಿಡು ‘ ಎನ್ನುತ್ತಾ ತನಗೆ ತಿಳಿದ ಹಾಗೆ, ಅಳುತ್ತಿದ್ದ ಅಜ್ಜಿಯನ್ನು ಸಮಾಧಾನ ಮಾಡತೊಡಗಿದಳು.
`ಅಯ್ಯೋ ನನ್ತಾಯೀ ನಿಮ್ಮಮ್ಮ ನಾನು ನಾಕು ಮಾತಂದ್ರೆ ನನ್ನ ಪಾತ್ರೆಗಳನ್ನೆಲ್ಲಾ ಎತ್ತಿ ಹಾಕ್ತಾಳೆ. ಇನ್ನ ಹೊಡೆಸಿದ್ರೆ ಬಿಡ್ತಾಳಾ? ಊರ ಜನ್ರನ್ನ ಕರ್ಸಿ ನನ್ನ ಮಾನ, ಮರ್ಯಾದೆ ಎಲ್ಲಾ ತೆಗೆದು ಬಿಡ್ತಾಳೆ’ ಎನ್ನುವಾಗ ಚಿಟ್ಟಿಗೆ ಈಗ ಅಮ್ಮಾ ಒಳಗಿಂದ ಬಂದ್ರೆ ಏನು ಅನ್ನೋ ಹೆದರಿಕೆ. ಅವಳಿಂದ ತಪ್ಪಿಸಿಕೊಂದರೆ ಸಾಕು ಎನ್ನುವಂತೆ `ಅಜ್ಜಿ ತುಂಬಾ ಅರ್ಜೆಂಟು ಬಚ್ಚಲು ಮನೆಗೆ ಹೋಗಬೇಕು’ ಎನ್ನುತ್ತಾ ದೈನ್ಯವಾಗಿ ಮುಖ ಮಾಡಿದಳು. `ಹೋಗೇ ಹೋಗೇ ನನ್ತಾಯಿ. ಹೆಣ್ಮಕ್ಕಳು ಅದನ್ನ ಮಾತ್ರ ಕಟ್ಕೋ ಬಾರ್ದು’ ಎನ್ನುತ್ತಾ ಕಣ್ಣು ಮೂಗನ್ನ ವರೆಸಿಕೊಳ್ಳತೊಡಗಿದಳು. ಸಿಕ್ಕ ಅವಕಾಶಕ್ಕೆ ಚಿಟ್ಟಿ ಮನಸ್ಸಿನಲ್ಲೇ ಸಂತೋಷಪಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದಳು. ಆದರೆ ಭಾರತಿ ಹೇಳಿದ` ಅದು’ ಅವಳನ್ನ ಬೆನ್ನು ಬಿಡದೆ ಕಾಡುತ್ತಿತ್ತು ಯಾರನ್ನ ಕೇಳಲಿ?
ಸಂಜೆಯ ಹೊತ್ತಿಗೆ ಮನೆಯ ವಾತಾವರಣ ತಿಳಿಯಾದಂತೆನ್ನಿಸಿತು. ಅಪ್ಪ ತಂದ ಹಲಸಿನ ಹಣ್ಣನ್ನು ಅಜ್ಜಿಯೆ ಹೆಚ್ಚಿದ್ದಳು . ಅಜ್ಜಿಯನ್ನು ಅಪ್ಪ `ಕರಡಿ’ ಅಂತ ಕರೀತಿದ್ದ. ತನ್ನ ಬೆರಳುಗಳಲ್ಲಿ ಹಲಸಿನ ಹಣ್ಣನ್ನು ಹೆಚ್ಚಿ ಬಿಡುತ್ತಿದ್ದಳು. ಚಿಟ್ಟಿ ಪುಟ್ಟಿ ಇಬ್ಬರೂ ಪುಟ್ಟ ಸೀನನನ್ನು ಕೂಡಿಸಿಕೊಂಡು ಅವನಿಗೂ ಹಣ್ಣನ್ನು ತಿನ್ನಿಸುವ ಪ್ರಯತ್ನ ಮಾಡುತ್ತಿದ್ದರು. ಅಮ್ಮ ಅಡುಗೆ ಮನೆಯಲ್ಲಿ ಶನಿವಾರವಾದ್ದರಿಂದ ದೋಸೆ ಹೊಯ್ಯುತ್ತಿದ್ದಳು. ಈ ಹೊತ್ತಲ್ಲಿ ಹಲಸಿನ ಹಣ್ನನ್ನ ಹೆಚ್ಚಿದ್ದಕ್ಕೆ ಸ್ವಲ್ಪ ಅಸಮಾಧಾನ ಇದ್ದರೂ ಹಿಟ್ಟು ಉಳಿದರೆ ನಾಳೆ ತಿಂಡಿಗಾಗುತ್ತೆ ಎನ್ನುವ ಲೆಕ್ಕಾಚಾರ ಇದ್ದಿದ್ದರಿಂದ ಅದನ್ನ ತೋರಿಸಿಕೊಳ್ಳದೆ ತನ್ನ ಪಾಡಿಗೆ ತಾನಿದ್ದಳು. ಅಜ್ಜಿ `ನಿಮ್ಮಮ್ಮನಿಗೆ ಕೊಟ್ಟು ಬಾ’ ಎಂದು ನಾಕು ತೊಳೆಯನ್ನು ಅಲ್ಲೆ ಇದ್ದ ತಟ್ಟೆಗೆ ಹಾಕಿ ಚಿಟ್ಟಿಯ ಕೈಲಿ ಕೊಟ್ಟಾಗ ಒಲ್ಲದ ಮನಸ್ಸಿಂದ ಒಳಗೆ ನಡೆದಿದ್ದಳು. ಕಾಲು ತೊಳೆದು ಬಂದ ಅಪ್ಪ ತಟ್ಟೆಗೆ ದೋಸೆ ಹಾಕಿಸಿಕೊಳ್ಳುತ್ತಾ ಕೂತಿದ್ದ . ಮೆಲ್ಲನೆ ಒಳಬಂದ ಚಿಟ್ಟಿ `ತಗೋ’ ಎಂದು ತಟ್ಟೆಯನ್ನು ಮುಂದೆ ಹಿಡಿದಳು. `ನೀನೇ ತಂದ್ಯಾ ಅಜ್ಜಿ ಕೊಟ್ಟಿದ್ದಾ?’ ಅಮ್ಮ ತಕ್ಷಣ ಪ್ರಶ್ನಿಸಿದ್ದಳು. `ಅಜ್ಜೀನೆ ತಗೊಂಡ್ ಹೋಗಿ ಕೊಟ್ಟಿ ಬಾ ಅಂದ್ಳು’ ಎಂದಾಗ ಅಮ್ಮ `ಸರಿ’ ಎನ್ನುತ್ತಾ ತಟ್ಟೆಯನ್ನು ತೆಗೆದುಕೊಂಡಳು. ದೋಸೆ ತಿನ್ನುತ್ತಿದ್ದ ಅಪ್ಪನ ಮುಖದಲ್ಲಿ ಕಂಡೂ ಕಾಣದ ಹಾಗೆ ಮಂದಹಾಸ.
ಹಜಾರಕ್ಕೆ ಹೋಗಲು ತಿರುಗಿದ ಚಿಟ್ಟಿಗೆ ಯೋಚೆನೆ ಬಂದಿದ್ದೆ ತಡ ಕೇಳಿಯೇಬಿಟ್ಟಳು `ಅಮ್ಮಾ ಅದು ಅಂದ್ರೆ ಏನು?’ ಅಮ್ಮನ ಮುಖದಲ್ಲಿ ಗೊಂದಲ. ಅಪ್ಪ ಆರ್ಧ ಎತ್ತಿದ್ದ ತುತ್ತನ್ನ ಹಾಗೆ ಹಿಡಿದು ಚಿಟ್ಟಿಯ ಕಡೆಗೆ ನೋಡಿದ. `ಅಂದ್ರೇನೇ?’ ಎಂದು ಅಪ್ಪನನ್ನು ಒಮ್ಮೆ ಚಿಟ್ಟಿಯನ್ನೊಮ್ಮೆ ನೋಡುತ್ತಾ ಕೇಳಿದಾಗ `ಅದೇಮ್ಮಾ ರಾಮಣ್ನ ಮೇಷ್ಟ್ರಿಗೆ ಅದಿಲ್ಲವಂತೆ. ಅವ್ರು ಮದ್ವೇನೂ ಆಗೋಕ್ಕೆ ಬರಲ್ವಂತೆ. ಅದಕ್ಕೆ ಕೇಳಿದೆ- ಅದು ಅಂದ್ರೆ ಏನು?’. ಅಮ್ಮನ ಮುಖದಲ್ಲಿ ಗಾಬರಿ . `ಈ ಮುಂಡೇವಕ್ಕೆ ಯಾರಿದೆಲ್ಲಾ ಹೇಳ್ತಾರೆ ಏಯ್ ಮುಚ್ಚೇ ಬಾಯ್ನ’ ಎನ್ನುತ್ತಾ ಅವಳ ಕಡೆಗೆ ಹೊಡೆಯಲು ಬರುವಾಗಲೇ ಅಪ್ಪ ತಿಂಡಿಯನ್ನ ಅರ್ಧಕ್ಕೆ ಬಿಟ್ಟು ಎದ್ದು ಹೋದ. ಚಿಟ್ಟಿಗೆ ತಾನು ಕೇಳಿದ್ದು ತಪ್ಪು ಆನ್ನಿಸಿತ್ತು. ಅಮ್ಮ `ರೀ’ ಎನ್ನುತ್ತಾ ಕೂಗುತ್ತಿದ್ದರೂ ಕೇಳದೆ ಅಪ್ಪ ಹೊರಟೇ ಹೋಗಿದ್ದ. ಕೋಪವನ್ನೆಲ್ಲ ಚಿಟ್ಟಿಯ ತಲೆಯ ಮೇಲೆ ಮೊಟಕಿ `ಹೋಗೆ ಆಚೆ’ ಎಂದಿದ್ದಳು.
ನಕ್ಕತ್ ಆಡುತ್ತಿದ್ದ ಭಾರತಿ ಚಿಟ್ಟಿಯ ಕಡೆಗೆ ಓಡಿ ಬಂದಿದ್ದಳು. ಅವಳ ಮುಖದಲ್ಲಿ ಗಾಬರಿ `ಏನಾಯ್ತು?’ ಎನ್ನುವ ಭಾರತಿಯ ಪ್ರಶ್ನೆಗೆ `ಮೇಷ್ಟ್ರನ್ನ ನೋಡೋಕ್ಕೆ ಹುಡ್ಗಿ ಬಂದಿದ್ದಾಳಂತೆ’ ಎಂದಳು. `ಏನು? ಹುಡ್ಗೀನಾ? ಯಾಕೆ?’ ಎನ್ನುವ ಚಿಟ್ಟಿಯ ಅಮಾಯಕ ಪ್ರಶ್ನೆಗೆ ನಕ್ಕತ್ ಕೋಪದಿಂದ `ನಿನ್ನ್ ತಲೆ. ಮದ್ವೆ ಆಗೋಕ್ಕೆ ‘ ಎಂದಾಗ ಚಿಟ್ಟಿಗೆ ಗಾಬರಿ. `ಭಾರತಿ ಮೇಷ್ತ್ರಿಗೆ ಅದಿಲ್ಲ ಮದ್ವೆ ಆಗಲ್ಲ ಅಂತ ನೀನೇತಾನೆ ಹೇಳಿದ್ದು. ಈಗ ಹೇಗೆ ಮದ್ವೆ ಆಗೋಕ್ಕೆ ಆಗುತ್ತೆ?’ ಎನ್ನುತ್ತಾ ಅಮಾಯಕವಾಗಿ ಕೇಳಿದಳು. ನಕ್ಕತ್ `ಇದೇ ಮಾತನ್ನ ನಿಮ್ಗೆ ಹೇಳು ಅಂತ ಮಂಗಳಿ ಹೇಳಿ ಕಳಿಸಿದಳು’ ಎಂದಾಗಲಂತೂ ಭಾರತಿ ಕಣ್ಣಲ್ಲಿ ಗಾಬರಿ. ಮಂಗಳಿ `ಮೇಷ್ಟ್ರಿಗೆ ಈ ವಿಷ್ಯಾನ ಹೇಳಿದ್ಲಂತಾ?’ ಎಂದಾಗ, `ಗೊತ್ತಿಲ್ಲ ಆದ್ರೆ ಅವಳು ಇದನ್ನೆಲ್ಲಾ ಹೇಳಲಿಕ್ಕಿಲ್ಲ ಅಂತ ಅಂದ್ಕೋತೀನಿ. ಫ್ರಂಡ್ ಅಲ್ವಾ?’ ಎನ್ನುತ್ತಾ ಗಂಭೀರವಾಗಿ ನಕ್ಕತ್ತ್ ಹೇಳಿದಾಗ ಭಾರತಿಯ ಸಮಾಧಾನದ ನಿಟ್ಟುಸಿರು. ಚಿಟ್ಟಿ ಮಾತ್ರ `ಪಾಪ ಕಣೆ ಆ ಹುಡುಗೀಗೆ ಹೇಳಿಬಿಡೋಣ ಮೇಷ್ಟ್ರನ್ನ ಮದ್ವೆ ಆಗ್ಬೇಡ ಅಂತ’ ಎಂದಾಗ ಭಾರತಿ `ಏಯ್ ಸುಮ್ನಿರೆ ಏನೋ ನಮ್ಮ ಪುಣ್ಯ ನಾವ್ ಮಾತಾಡಿದ್ದು ಯಾಗರ್ೂ ಗೊತ್ತಾಗಿಲ್ಲ’ ಎಂದಾಗ ಚಿಟ್ಟಿ `ಎಲ್ಲಾ ಹೀಗೆ ಅನ್ನಿ’ ಎನ್ನುತ್ತಾ ಮುಖ ಊದಿಸಿಕೊಂಡಿದ್ದಳು.
ಮೇಷ್ಟ್ರಿಗೆ ಬಂದ ಹುಡುಗಿ ಹೇಗಿರಬಹುದು ಎನ್ನುವ ಕಾತರ. ಭಾರತಿಯ ಮನೆಯ ಕಿಟಕಿಯಲ್ಲಿ ಕೂತು ನೋಡುವಾಗ ಮೇಷ್ಟ್ರ ಮನೆಯಿಂದ ಹೊರಗೆ ಬಂದಿದ್ದು, ಮೇಷ್ಟ್ರು, ಅರವತ್ತರ ಆಸು ಪಾಸಿನಲ್ಲಿದ್ದ ಹೆಂಗಸು, ಇನ್ನೂ ವಯಸ್ಸಾದ ಗಂಡಸು ಹಾಗೂ ನಲವತ್ತು ವಯಸ್ಸಿನ ಹೆಂಗಸು. `ಎಲ್ಳೇ ಹುಡುಗಿ ಬರ್ಲೇ ಇಲ್ಲ!’ ಎನ್ನುತ್ತಾ ಚಿಟ್ಟಿ ಕಿಟಕಿಯಿಂದ ಇಣುಕುವಾಗ ಹಿಂದೆಯಿಂದ ಬಂದ ಭಾರತಿಯ ಅಣ್ಣ ಸುರೇಶ `ಕಾಣ್ತಾ ಇಲ್ವಾ ಅದೇ ಹುಡುಗಿ’ ಎನ್ನುತ್ತಾ ನಲವತ್ತರ ಪ್ರಾಯದ ಹೆಂಗಸನ್ನ ತೋರಿಸಿ ನಕ್ಕಾಗ ಚಿಟ್ಟಿಯ ಮನಸ್ಸಿನಲ್ಲಿ ನಿರಾಸೆ. `ಇವ್ಳು ಹುಡ್ಗೀನಾ?’ ಎನ್ನುವ ಅವಳ ಉದ್ಗಾರಕ್ಕೆ `ಇನ್ನೇನು ನಿಮ್ಮೇಷ್ಟ್ರು ಇಪ್ಪತ್ತು ವರ್ಷದ ಹುಡ್ಗಾನಾ?’ ಎಂದು ಕಿಸಿಕಿಸಿ ನಕ್ಕು ಸುರೇಶ ಸಾಗಿದಾಗ ಎಲ್ಲರ ಮುಖದಲ್ಲಿ ನಿರಾಸೆ ಮಡುಗಟ್ಟಿತ್ತು.
ಯೋಚನೆ ಮಾಡ್ತಾ ಇದ್ದ ಚಿಟ್ಟಿಗೆ ಅಮ್ಮ ಕೂಗಿದ್ದೂ ಕೇಳಲಿಲ್ಲ. `ನಿನ್ನ ತಲೆ ಎಲ್ಲೆಲ್ಲಿ ಓಡುತ್ತೋ ಮಹಾ ತಾಯಿ ಅಲ್ವೇ ಆಗಿಂದ ಕೂಗ್ತಾನೇ ಇದೀನಿ. ಆ ಅನ್ನೋದ್ ಬೇಡ್ವಾ? ಏನೇ ಯೋಚ್ನೆ ಮಾಡ್ತಾ ಇದ್ದೀಯಾ?’ ಎಂದಾಗ `ಅದೂ ಮೇಷ್ಟ್ರಿಗೆ ಮದ್ವೆ ಅಂತೆ’ ಎಂದು ಚಿಟ್ಟಿ ತೊದಲಿದಳು. `ಸಧ್ಯ ಯಾರ್ ಹತ್ರಾನೂ ಏನೂ ಮಾತಾಡ್ಬೇಡ. ನಿಂದೆಲ್ಲಾ ಸ್ವಲ್ಪ ಅತಿನೇ’ ಎಂದು ಅಮ್ಮ ಎಚ್ಚರಿಸಿದ್ದಳು
ಮಾರನೆಯ ದಿನ ಸ್ಕೂಲಿಗೆ ಮೇಷ್ಟ್ರು ಬಂದ್ರು. ಎಲ್ಲರ ಕಣ್ಣುಗಳಲ್ಲೂ ಅಚ್ಚರಿ. ಪಂಚೆ ಬಿಟ್ಟರೆ ಬೇರೆ ಬಟ್ಟೆ ಗೊತ್ತಿಲ್ಲದ ಮೇಷ್ಟ್ರು ಅವತ್ತು ಹೊಸ ಪ್ಯಾಂಟು ಶರ್ಟನ್ನ ಹಾಕಿಕೊಂಡು ನೀಟಾಗಿ ಗಡ್ದ ಹೆರೆಸಿಕೊಂಡು ಕೈಲಿ ವಾಚನ್ನ ಕಟ್ಟಿಕೊಂಡು ಬಂದಿದ್ದರು. ಎಲ್ಲರಿಗೂ ಮಾತಾಡಲೂ ಹೆದರಿಕೆ. ಮೇಷ್ಟ್ರು ಇದ್ದಕ್ಕಿದ್ದ ಹಾಗೆ ಬೆಳೆದು ಬಿಟ್ಟಿದ್ದಾರೆ ಅನ್ನಿಸಿಬಿಟ್ಟಿತ್ತು. ಅವರು ಬಂದವರೆ ಕುಚರ್ಿಯಲ್ಲಿ ಕೂತು ಪಾಠ ಮಾಡತೊಡಗಿದಾಗ ಯಾರೂ ಕಮಕ್ಕ್ ಕಿಮಕ್ ಅನ್ನಲಿಲ್ಲ. ಆದ್ರೆ ಮಾತು ಮಾತಿಗೂ ಮೇಷ್ಟ್ರ ಕಣ್ಣು ಮಾತ್ರ ಹೊಸದಾಗಿ ತಮ್ಮ ಕೈಯ್ಯನ್ನು ಅಲಂಕರಿಸಿದ್ದ ವಾಚಿನ ಕಡೆಗೆ ಹೋಗುತ್ತಿತ್ತು. ಮೇಷ್ಟ್ರು ಮದ್ವೆ ಆದ್ರೆ ಇನ್ನೆಷ್ಟು ಗಂಭೀರ ಆಗಬಹುದು ಎಂದು ಯೋಚಿಸುತ್ತಾ ಕೂತಿದ್ದ ಚಿಟ್ಟಿಗೆ, ಮೇಷ್ಟ್ರು `ಏಯ್ ಚಿಟ್ಟಿ’ ಎಂದು ಕೂಗಿದಾಗಲೇ ಈ ಕಡೆಗೆ ಜ್ಞಾನ. ಎದ್ದು ನಿಂತ ಅವಳನ್ನ `ಏನು ಯೋಚನೆ ಮಾಡ್ತಾ ಇದ್ದೆ?’ ಎಂದಾಗ `ಅದೂ ಸಾರ್ ನಿಮ್ಮ ವಾಚು. . . .’ ಎಂದಾಗ ಮೇಷ್ಟ್ರು `ಏನು ವಾಚು?’ ಎನ್ನುತ್ತಾ ಕಣ್ನನ್ನ ಕೆಕ್ಕರಿಸಿದರು. `ನಿಮ್ಮ ವಾಚು ತುಂಬಾ ಚೆನ್ನಾಗಿದೆ ಸಾರ್’ ಅಂದುಬಿಟ್ಟಳು. ಯಾರಾದ್ರೂ ಕೇಳಿದ್ರೆ ಸಾಕು ಎನ್ನುವಂತೆ ಮೇಷ್ಟ್ರು ವಾಚಿನ ಪುರಾಣ ತೆಗೆದೇ ಬಿಟ್ಟರು. `ಇದನ್ನ ಕೊಡಿಸಿದ್ದು ಯಾರು ಗೊತ್ತಾ?’ ಎಂದು ಕೇಳಿದರು. ಚಿಟ್ಟಿ `ಇಲ್ಲ’ ಎನ್ನುವಂತೆ ಅಮಾಯಕವಾಗಿ ತಲೆ ಆಡಿಸಿದಳು. `ಇದನ್ನ ಕೊಡಿಸಿದ್ದು ನಮ್ಮ ಮನೆಯವರು, ಮುಂದಿನ ಶ್ರಾವಣಕ್ಕೆ ಮದುವೆ. ಆ ಮೇಲೆ ಮಗು. ಎಲ್ಲರ ಹೊಟ್ಟೆ ಉರೀಬೇಕು ಹಾಗಿತರ್ಿನಿ’ ಎನ್ನುತ್ತಾ ಪಾಠದ ಶೈಲಿಯಲ್ಲೇ ಹೇಳತೊಡಗಿದಾಗ ಎಲ್ಲರೂ ಬೆರಗುಗಣ್ಣಿಂದ ಏಳು ಸಮುದ್ರ ದಾಟಿ ಏಳು ಬೆಟ್ಟ ದಾಟಿ ಬಂದ ರಾಜಕುಮಾರನನ್ನು ನೋಡುವ ಹಾಗೆ ನೋಡುತ್ತಿದ್ದರು.
ತಾನು ತಪ್ಪು ಮಾಡಿದೆ ಎಂದು ಚಿಟ್ಟಿಗೆ ಅನ್ನಿಸಿದ್ದೆ ಆಗ. ಮೇಷ್ಟ್ರ ಬಗ್ಗೆ ನಾವು ಮಾತಾಡಿದ್ದು ಮೇಶ್ಟ್ರಿಗೇನಾದ್ರೂ ಗೊತ್ತಾದ್ರೆ ಅನ್ನಿಸಿ ಪಾಪಪ್ರಜ್ಞೆ ಅವಳನ್ನ ಕಾಡತೊಡಗಿತು. ಹೊರಗೆ ಬಂದ ಎಲ್ಲರೂ ತಾವು ಮದ್ವೇಗೆ ಮೇಷ್ಟ್ರಿಗೆ ಏನು ಉಡುಗೊರೆ ಕೊಡಬೇಕು ಎಂದು ಮಾತಾಡತೊಡಗಿದ್ದರು. ಹತ್ತಿರ ಬಂದರೆ ಸಾಕು ಗಪ್ಪೆಂದು ವಾಸನೆ ಬಡಿದು ವಯಕ್ ಎಂದು ಹೊಟ್ಟೆಯಲ್ಲಿದ್ದದ್ದೆಲ್ಲಾ ಹೊರಗೆ ಬಂದಂತೆನ್ನಿಸಿದ್ದನ್ನು ನೆನೆಸಿಕೊಂಡು `ಟೂತ್ ಪೇಸ್ಟ್ ಮತ್ತು ಬ್ರಷ್ ಕೊಡಿಸ್ತೀನಿ’ ಅಂತ ಒಬ್ಬರು, ಇನ್ಯಾರೋ ಸಗಣಿ ಎತ್ತಿ ಸ್ನಾನವನ್ನೂ ಮಾಡದೆ ಬರುತ್ತಿದ್ದ ಅವರ ಮೈಯ್ಯ ಕಮಟುವಾಸನೆಯನ್ನು ನೆನೆಸಿಕೊಂಡು `ಘಮಗುಡುವ ಮೈಸೋಪು ಕೊಡುಸ್ತೀನಿ’ ಎಂದಿದ್ದರು. ಅದನ್ನೆಲ್ಲಾ ನೋಡುತ್ತಾ ಚಿಟ್ಟಿ ಏನನ್ನೂ ಪ್ರತಿಕ್ರಿಯಿಸದೆ ತನ್ನ ಬ್ಯಾಗನ್ನ ಹೆಗಲಿಗೆ ಹಾಕಿ ಹೊರಟೇಬಿಟ್ಟಳು.
ಅವತ್ತು ಚಿಟ್ಟಿ ಊಟ ಮಾಡಲಿಲ್ಲ. ಹಿಡಿದ ಪುಸ್ತಕದ ಮೇಲೆ ಧ್ಯಾಸವಿಲ್ಲ. ರಾತ್ರಿ ಬರದೆ ಬರದೆ ಬಂದ ನಿದ್ದೆಯಲ್ಲ್ಲೂ ಯಾರೋ ಬಂದು `ನೀನು ತಪ್ಪು ಮಾಡಿದ್ದೀಯ’ ಎನ್ನುತ್ತಾ ಕಣ್ಣಿಗೆ ತಿವಿದ ಹಾಗೆ, ಹೊಡೆದ ಹಾಗೆ ಕನಸು ಬಿದ್ದು ಬೆಚ್ಚಿದ್ದಳು. ಅಮ್ಮಾ ಅವಳನ್ನ ಭದ್ರವಾಗಿ ಹಿಡಿದುಕೊಂಡು `ಕನಸು ಬಿತ್ತಾ ಮಗೂ ‘ ಕೇಳಿದಳು. ಆಗ ಚಿಟ್ಟಿಗೆ ನಾಚಿಕೆಯೆನ್ನಿಸಿ ಅಮ್ಮನ ಎದೆಗೆ ಅವುಚಿಕೊಂಡಳು.
ಊರಲ್ಲೆಲ್ಲಾ ಮೇಷ್ಟ್ರು ಗತ್ತಿನಿಂದ ಓಡಾಡಿದರು. ಅವರ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ `ಏನ್ ಮೇಷ್ಟ್ರೇ ಮದ್ವೆ ಅಂತೆ? ಅಂತೂ ನಮ್ಗೆ ಊಟ ಹಾಕಿಸ್ತೀರಲ್ಲಾ ಅಶ್ಟೇ ಸಾಕು’ ಎಂದು ಜನ ಅಂದಾಗ ರಾಮಣ್ಣ ಮೇಷ್ಟ್ರ ಮುಖ ಊರಗಲ ಆಗಿತ್ತು. ಆದ್ರೆ ವಾರ ಕಳೆಯುವುದರೊಳಗೆ ಬಂದ ಸುದ್ದಿ ಮಾತ್ರ ಆಘಾತಕರ. ಮದುವೆ ಆಗಬೇಕಿದ್ದ ಹುಡುಗಿ ಮೇಷ್ಟ್ರ ಹತ್ರ ಬಂದು `ಮೋಸ ಮಾಡಲಿಕ್ಕೆ ಬೇರೆ ಯಾರೂ ನಿಂಗೆ ಸಿಗಲಿಲ್ಲವಾ? ಅದಿಲ್ಲದವ ಮದ್ವೆ ಆಗೋದಾದ್ರೂ ಹೇಗೆ? ಕೊಡು ನನ್ನ ವಾಚನ್ನ’ ಅಂತ ಕಸಿದುಕೊಂಡು ಹೋದಳಂತೆ. ಮೇಷ್ಟ್ರ ಮುಖದ ಕಳೆ ಕೂಡಾ ವಾಚಿನ ಜೊತೆಗೇ ಹೋಗಿಬಿಟ್ಟಿತ್ತು. ಕ್ಲಾಸಿಗೆ ಬಂದು ಬಂದವರೆ ಕಣ್ಣನ್ನೂ ಕೆಂಪಗೆ ಮಾಡಿಕೊಂಡು `ನಂಗೇನು ಟೂತ್ ಪೇಸ್ಟ್ ಗತಿ ಇಲ್ವಾ?ಬ್ರಷ್ ತಗೊಳ್ಳೋಕ್ಕಾಗಲ್ವಾ? ನನ್ನ ಬಗ್ಗೆ ಯಾರ್ ಯಾರ್ ಏನೇನ್ ಹೇಳಿದ್ರಿ ಅಂತ ಗೊತ್ತಿದೆ. ನಿಮ್ಮಿಂದಾನೆ ನನ್ನ ಮದ್ವೆ ಹಾಳಾಯ್ತು’ ಎನ್ನುತ್ತಾ ಹುಣಸೆ ಬರಲಿಂದ ಸಿಕ್ಕ ಎಲ್ಲರಿಗೂ ಬಾರಿಸಿದರು. ಹೆಡ್ ಮೇಷ್ಟ್ರು ಬಸವರಾಜಪ್ಪ ಮೇಷ್ಟ್ರನ್ನ ತಡೆದು `ಏನ್ ಮಾಡ್ತಾ ಇದೀರಾ? ಮಕ್ಕಳ ಜೀವಕ್ಕೇನಾದ್ರೂ ಆದ್ರೆ ಏನ್ ಮಾಡ್ತೀರ?’ ಎಂದಾಗ ಹುಣ್ಸೆ ಬರಲನ್ನು ಎಸೆದು ದುಃಖಿಸುವವರ ಹಾಗೆ ಮುಖ ಮಾಡಿಕೊಂಡು ಹೊರಗೆ ಸಾಗಿದ್ದರು. ದುರಂತ ಎಂದರೆ ಮತ್ತೆ ಯಾವತ್ತೂ ಮೇಷ್ಟ್ರನ್ನ ನೋಡಲು ಯಾವ ಹುಡುಗಿಯೂ ಬರಲೇಇಲ್ಲ. ಚಿಟ್ಟಿಗೆ ಈಗ ಸ್ವಲ್ಪ ಸಮಾಧಾನ. ಆದರೆ ಅವಳ ಎರಡನೆಯ ಪ್ರಶ್ನೆಗೂ ಉತ್ತರ ಕೊಡುವವರು ಯಾರೂ ಇರಲಿಲ್ಲ.
(ಮುಂದುವರೆಯುವುದು…)

‍ಲೇಖಕರು G

July 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: