ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : `ಅವ್ನು ನನ್ನ ಮೇರಿ ಜಾನ್ ಅಂದ…'

ತಾರಾ ಹುಂಜಾನನ ಮೇರಿಜಾನ್ ಆಗಿದ್ದು!

(ಇಲ್ಲಿಯವರೆಗೆ…)

ಅರಿಸಿನದ ನೀರು ಮೈಮೇಲೆ ಬಿದ್ದ ತಕ್ಷಣವೇ ಚಿಟ್ಟಿಯ ಮೈಕಾಂತಿ ಅರಳಿತ್ತು. ಐವರು ಮುತ್ತೈದೆಯರು ಜರಡಿಯನ್ನು ಚಿಟ್ಟಿಯ ತಲೆಯ ಮೇಲೆ ಹಿಡಿದು ಹರಿಸಿನದ ನೀರನ್ನ ಎರೆಯುತ್ತಿದ್ದರೆ ಅವಳು ಗಂಧರ್ವ ಜಗತ್ತಿಗೆ ಸಂದವಳೇನೋ ಅನ್ನಿಸುತ್ತಿತ್ತು. ಎತ್ತರಕ್ಕಿದ್ದ ಅವಳ ತೆಳುದೇಹ ತುಂಬಿದ ಹಾಗಾಯಿತು. ದೇಹದ ತಿರುವುಗಳಲ್ಲಿ ಸ್ಪಷ್ಟತೆ ಕಾಣಿಸಿಕೊಂಡು ಅಮ್ಮ ಚಿಟ್ಟಿಯನ್ನು ಬೆರಗಿನಿಂದ ನೋಡಿದಳು. ಅಜ್ಜಿಗೆ ಸಂಭ್ರಮ ಮೊಮ್ಮಗಳು ಹೆಣ್ಣಾದಳಲ್ಲ! ತನ್ನ ಪೆಟ್ಟಿಗೆಯಲ್ಲಿದ್ದ ಅಕ್ಕಸಾಲಿ ತೆಗೆದುಕೊಳ್ಳದೆ ಉಳಿದಿದ್ದ ಬಿಳಿಬಂಗಾರದ ನಾಗರಬಿಲ್ಲೆ, ಜಡೆ ಕುಚ್ಚು ಎಲ್ಲಾ ಬಯಲಿಗೆ ಬಂತು. ಮೊಮ್ಮಗಳು ದೊಡ್ಡವಳಾದರೆ ಹಾಕಬೇಕೆಂದು ಕಂಡಿದ್ದ ಕನಸನ್ನ ಹೇಳಿಕೊಂಡು ಸಂತಸ ಪಡುತ್ತಿದ್ದಳು. `ಇದೆಲ್ಲಾ ಹಾಕಲು ಇನ್ನೂ ಸಮಯ ಇದೆ ಮೈಲಿಗೆ ಕಳೀಬೇಕು’ ಎಂದರು ಬಂದವರು. ತಾನೀಗ ಮುಟ್ಟಿಸಿಕೊಳ್ಳಬಾರದವಳು ನೋವಿನ ಜಾಗದಲ್ಲಿ ವಿಷಾದ ತೇಲಿಹೋಯಿತು
ಸ್ನಾನ ಮುಗಿಸಿಬಂದ ಚಿಟ್ಟಿಗೆ ಮೈಪೂರಾ ಆಯಾಸ. ಯಾವುದೂ ಬೇಡ. ಅಮ್ಮ ಮಾತ್ರ `ಅದ್ ಮಾಡು ಇದ್ ಮಾಡು ಹೀಗಿರು ಹಾಗಿರು’ ಅಂತ ಹೇಳುತ್ತಲೇ ಇದ್ದರು. ಸ್ನಾನಾ ಆದ ಮೇಲೂ ಚಿಟ್ಟಿಯ ಮೈಯ್ಯಿಂದ ರಕ್ತ ಸೋರುವುದು ನಿಲ್ಲಲಿಲ್ಲ. `ಅಮ್ಮಾ ಸ್ನಾನ ಮಾಡ್ದಿದ್ ಮೇಲೂ ಇದು ನಿಲ್ತಾ ಇಲ್ವಲ್ಲೇ?’ ಎಂದದ್ದಕ್ಕೆ `ಇದು ಸಧ್ಯಕ್ಕೆ ನಿಲ್ಲಲ್ಲ ತಗೋ’ ಎನ್ನುತ್ತಾ ತನ್ನ ಹಳೆಸೀರೆಯನ್ನು ತೆಗೆದು ಅದನ್ನ ಕತ್ತರಿಸಿ ಉದ್ದಕ್ಕೆ ದಪ್ಪಕ್ಕೆ ಮಡಚಿದಳು. `ಅಮ್ಮ. ಇದ್ಯಾಕೆ?’ ಚಿಟ್ಟಿಯ ಮುಗ್ಧ ಪ್ರಶ್ನೆಗೆ ಅಮ್ಮನಿಗೆ ಪಾಪ ಅನ್ನಿಸಿತು. ದೂರದಿಂದಲೇ ಅದನ್ನು ಅವಳ ಮುಂದೆ ಇಟ್ಟು `ಹಾಕ್ಕೋ’ ಎಂದಳು.
ಅರೆ ಇದನ್ನ ಹೇಗೆ ಹಾಕ್ಕೋಳ್ಳೋದು? ಅಮ್ಮ ಕಷ್ಟ ಪಟ್ಟು ಹೇಳಿಕೊಟ್ಟಳು. ಇಲ್ಲಾಂದ್ರೆ ಬಟ್ಟೆಯೆಲ್ಲಾ ರಕ್ತ ಆಗುತ್ತೆ. ಅಮ್ಮ ದೂರ ನಿಂತು ಹೀಗೆ ಹೀಗೆ ಅಂತ ಹೇಳ್ತಾ ಇದ್ದಿದ್ದಕ್ಕೋ ತನ್ನ ಮೈಯ್ಯಿಂದ ಇಷ್ಟು ರಕ್ತ ಹರಿದು ಹೋಗುತ್ತಿದ್ದುದ್ದಕ್ಕೋ ದುಃಖ ಹೆಚ್ಚಾಗಿ ಅಮ್ಮನನ್ನು ತಬ್ಬಿಕೊಳ್ಳಬೇಕು ಅನ್ನಿಸಿತ್ತು. `ಅಮ್ಮಾ ನೀನು ದೂರ ನಿಲ್ಲಬೇಡ, ನಂಗೆ ಹೀಗೆ ಮೈಲಿಗೆ ಆಗೋದು ಇಷ್ಟ ಇಲ್ಲ ಇದನ್ನ ನಿಲ್ಲಿಸು’ ಎನ್ನುತ್ತಾ ಅಳತೊಡಗಿದಳು ಚಿಟ್ಟಿ. `ಹಸೀ ಮೈ ಅಳಬೇಡ ನಂಜಾಗುತ್ತೆ ಏನಾಗಿದೆ ಅಂಥಾದ್ದು ಹೆಣ್ಣ್ಣಾಗಿ ಹುಟ್ಟಿದ ಮೇಲೆ ಇದೆಲ್ಲಾ ಮಾಮೂಲಿ ತಾನೇ’ ಎಂದಳು ಅಜ್ಜಿ. `ಮೊದ್ಲೇ ಗಾಬರೀಲಿದ್ದಾಳೆ ಹೀಗ್ ನೀವ್ ಮಾತಾಡಿದ್ರೆ ಇನ್ನಷ್ಟು ಗಾಬ್ರಿಯಾಗುತ್ತೆ ಸುಮ್ಮನಿರಬಾರದೇ?’ ಎಂದಳು ಅಮ್ಮ. `ಹುಂ ಮುದ್ಕಿಮಾತು ಯಾರ್ ಕೇಳ್ತಾರೆ’ ಎನ್ನುತ್ತಾ ಅಜ್ಜೀ ಸಂಭ್ರವನ್ನು ಕಳೆದುಕೊಂಡು ಖಿನ್ನತೆಯನ್ನುಅಂಟಿಸಿಕೊಂಡಳು.
ಈಗ ಶುರುವಾಗಿದ್ದು ಹಿಂಸೆ. ಕಾಲಿನ ಮಧ್ಯೆ ಕೂತ ಬಟ್ಟೆ ಅವಳ ಎರಡೂ ತೊಡೆಯನ್ನು ಭದ್ರವಾಗಿ ಹಿಡಿದಿದ್ದು, ಸ್ವಲ್ಪ ಹೊತ್ತಿನಲ್ಲೇ ಕೊರೆಯ ತೊಡಗಿತ್ತು. ಮೂಲೆಯಲ್ಲಿ ಕೂತಿದ್ದ ಚಿಟ್ಟಿ `ಅಮ್ಮಾ’ ಎಂದು ಕೂತಳು. ಅಮ್ಮ ಪ್ರತಿತಿಂಗಳೂ ಹೀಗೆ ಮೂಲೆಯಲ್ಲಿ ಕೂತು ಕೂತ ಕಡೆಯಿಂದಲೇ ತನಗೆ ಪಾಠವನ್ನು ಹೇಳುತ್ತಾ ತಪ್ಪು ಮಾಡಿದಾಗ ಪಕ್ಕದಲ್ಲಿದ್ದ ಕೋಲನ್ನು ಅವಳ ಕಡೆಗೆ ಎಸೆಯುತ್ತಿದ್ದಳು. ಅದನ್ನ ತಪ್ಪಿಸಿಕೊಂಡು `ನೀನ್ ನನ್ನ ಏನೂ ಮಾಡೋಕ್ಕಾಗಲ್ಲ. . . ‘ ಅಂತ ಚಿಟ್ಟಿ ಅಮ್ಮನನ್ನು `ಮುಟ್ಟು ನೋಡೋಣ?’ ಅಂತ ಹಂಗಿಸುತ್ತಿದ್ದಳು. ಪಾಪ ದೂರ ಕೂತ ಅಮ್ಮ ಎಷ್ಟೆಲ್ಲಾ ಅನುಭವಿಸಿರಬೇಕು. ತಾನವಳನ್ನ ಗೇಲಿ ಮಾಡ್ತಾ ಇದ್ದೆ. ಅಮ್ಮ ಓಡಿ ಬಂದಳು. `ಏನಾಯ್ತು ಚಿಟ್ಟಿ?’ `ಅಮ್ಮ ನಂಗಿದು ಬೇಡ ಕೊರಿಯುತ್ತೆ’ ಎನ್ನುತ್ತಾ ಚಿಟ್ಟಿ ಅಳತೊಡಗಿದಳು. ಅಮ್ಮನ ಓಲೈಕೆಯಾಗಲೀ, ಅಜ್ಜಿಯ ಸಂತೈಕೆಯಾಗಲೀ ಕೆಲಸ ಮಾಡಲೇ ಇಲ್ಲ. ಕೊನೆಗೂ ಚಿಟ್ಟಿ ಆ ಬಟ್ಟೆಯನ್ನು ಕಿತ್ತೆಸೆದಳು. ಅವಳ ಲಂಗ ರಕ್ತದಿಂದ ನೆನೆಯುತ್ತಿದ್ದುದ್ದನ್ನ ನೋಡಿ ಅಮ್ಮನ ಕಣ್ಣುಗಳಲ್ಲಿ ನೀರು ತುಂಬಿತು. ದೇವ್ರೆ ಹೆಣ್ಣಿಗೆ ಯಾಕೆ ಇಂಥಾ ಶಿಕ್ಷೆಯನ್ನ ಕೊಟ್ಟೆ?
ಚಿಟ್ಟಿಗೆ ಗಾಬರಿಯಾಯ್ತು. ದೇವ್ರು ಶಿಕ್ಷೆ ಕೊಟ್ರೆ ಹೀಗಾಗುತ್ತಾ? ಶಿಕ್ಷೇನ ಯಾಕೆ ಕೊಟ್ಟ? ನಾನ್ ಮಾಡಿದ್ದ ತಪ್ಪಾದ್ರೂ ಏನು? ಅವಳ ಪ್ರಶ್ನೆಗಳಿಗೆ ಅಮ್ಮನಲ್ಲಿ ಉತ್ತರವಿಲ್ಲ. ಆದರೂ ಸಂಬಾಳಿಸಿಕೊಂಡು `ನಾವು ಹೆಣ್ಣ್ಣಾಗಿ ಹುಟ್ಟಿದ್ದೇ ತಪ್ಪು’ ಎಂದು ಚಿಟ್ಟಿಯ ಉತ್ತರಕ್ಕು ಕಾಯದೆ ಒಳಗೆ ಹೊರಟುಬಿಟ್ಟಳು. ತನ್ನ ನಿರ್ಬಲವಾದ ಕೈಗಳನ್ನು ಗಾಳಿಯಲಿ ಆಡಿಸುತ್ತಾ `ಬಾ. . .’ ಎಂದು ಕರೆದು ಹೇಳಿದ ನಂಜಕ್ಕನ ಮಾತು ಚಿಟ್ಟಿಗೆ ನೆನಪಾಯಿತು, `ನೀನು ಹೆಣ್ಣ್ಣಾಗಿ ಹುಟ್ಟಿ ತಪ್ಪ್ ಮಾಡ್ಬಿಟ್ಟೆ, ಗಂಡಾಗಿದ್ದಿರೆ ಸಂಕಟಾನೇ ಇತರ್ಾ ಇಲರ್ಿಲ್ಲ. ನಿನ್ನಂಥಾವ್ರು ಬದುಕ್ಬಾದರ್ು, ಬಾ ನಿನ್ನ ಮೆಟ್ಟ್ ಹಿಸ್ಕು ಸಾಯಿಸ್ಬಿಡ್ತೀನಿ’ ಎಂದ ನಂಜಕ್ಕ ಅವಳ ಕಣ್ಣೆದುರಿಗೆ ನಿಂತು ಅವಳನ್ನ ಅಣಕಿಸತೊಡಗಿದಳು. ಸೋರಿಹೋಗುತ್ತಿದ್ದ ರಕ್ತದ ನಡುವೆ ಕೂತ ಚಿಟ್ಟಿ ಪಾದ ಕಾಣದ ಹಾಗೆ ಲಂಗವನ್ನು ಎಳೆದುಕೊಂಡು ಮುಖವನ್ನು ಮಂಡಿಯಲ್ಲಿ ಮುಚ್ಚಿ ಕೂತಳು.
ಉತ್ತರವಿರದ ಸಾವಿರ ಪ್ರಶ್ನೆಗಳು ಚಿಟ್ಟಿಯ ಎದುರಿಗಿತ್ತು, ಉತ್ತರ ಹೇಳುವವರು ಮಾತ್ರಾ ಯಾರೂ ಇಲ್ಲ. ಲಂಗ ಜಮಖಾನ ಅದರ ಮೇಲೆ ಹಾಸಲು ಕೊಟ್ಟಿದ್ದ ಹಳೆಯ ಸೀರೆ ಎಲ್ಲವೂ ರಕ್ತದಿಂದ ತೊಯ್ದಿತ್ತು. ಹೀಗೆ ತನ್ನ ದೇಹದಿಂದ ರಕ್ತ ಸೋರಿ ಹೋದರೆ ತಾನು ಸಾಯದೇ ಉಳಿದೇನೇನು? ಎನ್ನುವ ಅನುಮಾನವೂ ಅವಳನ್ನ ಕಾಡತೊಡಗಿತು. ಆದ್ರೆ ಅಚ್ಚರಿ ಎಂದರೆ ದಿನ ಕಳೆಯುವುದರೊಳಗೆ ಆ ರಕ್ತ, ಹಸಿತನ ಎಲ್ಲಕ್ಕೂ ಚಿಟ್ಟಿ ಅಭ್ಯಾಸ ಬಿದ್ದುಬಿಟ್ಟಳು. ಮಾರನೆ ದಿನ ಮೆತ್ತಗಿನ ಬಟ್ಟೆಯನ್ನು ತಾನೇ ಮಡಚಿ ತನಗೆ ಹೇಗೆ ಅನುಕೂಲವೋ ಹಾಗೇ ಹಾಕಿಕೊಂಡಳು. ಬಟ್ಟೆಯೆಲ್ಲಾ ರಕ್ತದ ಕಲೆಯಾಗುವುದು ತಪ್ಪಿತು. ಕೆಸರಾದ ಭೂಮಿ ಸೂರ್ಯನ ಶಾಖಕ್ಕೆ ಒಣಗಲೇ ಬೇಕಲ್ಲ. ಚಿಟ್ಟಿಯ ಮೈಯ್ಯ ಮುಜುಗರ ಕಳೆಯುವಂತೆ ಮೂರು ನಾಕು ದಿನಗಳಲ್ಲಿ ಮಾಮೂಲಿನ ಸ್ಥಿತಿಗೆ ಬಂತು.
ರೇಡಿಯೋ ಹಾಕಿಕೊಂಡು ಸಿನಿಮಾ ಹಾಡಿಗೆ ಡಾನ್ಸ್ ಮಾಡುವ ಇರಾದೆ ಬಂದಾಗ ಯಾವಾಗಲಾದರೊಮ್ಮೆ ಚಿಟ್ಟಿ ಸೀರೆ ಉಟ್ಟು ವಯ್ಯಾರದಿಂದ ನಡೆಯುತ್ತಿದ್ದಳು. ಆದರೆ ಈ ಸಲ ಸೀರೆ ಉಡುವಾಗ ಸೌಭಾಗ್ಯಮ್ಮನ ಮಗ ಸೀತಾರಾಮು ಅಚಾನಕ್ ಆಗಿ ನೆನಪಾದ. ಅವನ ನೋಟದಲ್ಲಿ ಇದ್ದ ಮೊನಚು ಎಂಥಾದ್ದೋ ಆಸೆ ನೆನಪಾಗಿ ಚಿಟ್ಟಿಯ ಮೈಯ್ಯಲ್ಲಿ ಕಂಪನ ಹುಟ್ಟಿತು. ಅರೆ ತನಗೇನಾಗಿದೆ?
ಈಗ ಊರಿಗೆ ಗೊತ್ತಾಗಿತ್ತು ಚಿಟ್ಟಿ ದೊಡ್ಡವಳಾಗಿದ್ದು! ಇದು ಅಮ್ಮನಿಗೆ ಅರ್ಧ ಇಷ್ಟ ಅರ್ಧ ಇಷ್ಟವಿಲ್ಲದ ಹಾಗೆ ಇತ್ತು. ಅಪ್ಪನ ಹತ್ರ `ಚಿಟ್ಟಿಯೇನಾದ್ರೂ ಸ್ಕೂಲಲ್ಲಿ ದೊಡ್ಡವಳಾಗದೇ ಹೋಗಿದ್ರೆ ಈ ಆರತಿಯನ್ನ ಇಟ್ಟುಕೊಳ್ಳುತ್ತಿರಲಿಲ್ಲ’ ಎಂದಿದ್ದನ್ನ ಕೇಳಿಸಿಕೊಂಡಿದ್ದಳು.
ಚಿಟ್ಟಿ `ನೀನೀಗ ದೊಡ್ಡವಳಾಗಿದ್ದೀಯಾ ಹೇಗೆಂದರೆ ಹಾಗೆ ಓಡಾಡಬೇಡ. ಯಾರ ಜೊತೆಗೂ ಮಾತಾಡಬೇಡ. ಯಾರ ಮನೆಗೂ ಹೋಗಬೇಡ. ಯಾರಾದರೂ ಏನಾದರೂ ಅಂದರೂ ನನಗಲ್ಲ ಅನ್ನುವ ಹಾಗೇ ಬಂದುಬಿಡು’ ಹೀಗೆ ಅಮ್ಮ ಸಾಲು ಸಾಲು ಬುದ್ಧಿವಾದವನ್ನು ಹೇಳಿದ್ದಳು. `ಹಾಳು ಹುಡ್ಗಿ ಮತ್ತೇ ಸೀಬೆ, ನೆಲ್ಲಿ, ಮಾವು ಅಂತ ಮರಕ್ಕೆ ಹತ್ತೀತು ಸ್ವಲ್ಪ ಬುದ್ಧಿ ಹೇಳು’ ಎಂದು ಅಜ್ಜಿ ಅವಳನ್ನ ಎಲ್ಲಿಗೂ ಹೋಗದಿರುವಂತೆ ಕಟ್ಟಿ ಹಾಕುವ ಪ್ರಯತ್ನ ಮಾಡಿದ್ದಳು.
ಇದೆಲ್ಲಕ್ಕಿಂತ ಹೆಚ್ಚಾಗಿ ಚಿಟ್ಟಿಗೆ ನೋವೆನ್ನಿಸಿದ್ದು ಅಮ್ಮ ತನ್ನ ಫ್ರಾಕ್ಗಳನ್ನೆಲ್ಲಾ ಎತ್ತಿಟ್ಟಾಗ. ಎರಡು ವರ್ಷಗಳ ಹಿಂದೆ ದೀಪಾವಳಿಗೆ ಅಪರೂಪಕ್ಕೆ ಅಪ್ಪ ಕೊಡಿಸಿದ್ದ ಬದನೆ ಬಣ್ಣದ ನಿಟ್ಟೆಡ್ ಫ್ರಾಕ್ ಅವಳಿಗೆ ಒಪ್ಪುತ್ತಿತ್ತು. ಅದನ್ನ ಹಾಕಿಕೊಂಡಾಗಲೆಲ್ಲಾ ಎಲ್ಲರೂ ಅವಳನ್ನು ಅಸೂಯೆಯಿಂದ ನೋಡುತ್ತಿದ್ದರು. ಇನ್ನು ಮುಂದೆ ತಾನು ಆ ಫ್ರಾಕನ್ನ ಹಾಕುವ ಹಾಗಿಲ್ಲ ಅನ್ನೋದನ್ನ ನೆನೆದು ಚಿಟ್ಟಿಗೆ ದುಃಖವಾಯಿತು. `ಚಿಟ್ಟಿ ಇದಕ್ಕೆಲ್ಲಾ ಅಳ್ತಾರಾ? ಹಾಕ್ಕೋ ಬಾದರ್ು ಅಂತ ಹೇಳಿದ್ದು ಯಾಕೆ ಗೊತ್ತಾ?’ ಎನ್ನುತ್ತಾ ಅಮ್ಮ ಅವಳ ಕಾಲುಗಳನ್ನ ತೋರಿಸುತ್ತಾ `ಹೀಗೆ ಕೂದಲು ಕಾಣ್ತಾ ಇದ್ರೆ ನೋಡಿದವರು ಏನಂತಾರೆ ಹೇಳು?’ ಎಂದಳು. ಅವಳ ಮಾತಿನ ಅಸ್ಪಷ್ಟತೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ ಚಿಟ್ಟಿಗೆ ಏನೂ ದಕ್ಕಾದಾಯಿತು. ಆಗಲೇ ಅವಳಿಗೆ ತನ್ನ ಕಾಲ ಮೇಲೆ ಕೂದಲು ಬೆಳೆಯುತ್ತಿರುವುದರ ಕಡೆಗೆ ಗಮನ ಹೋದದ್ದು. ಅಮ್ಮನ ನಯವಾದ ಕಾಲಿನಲ್ಲಿ ಇಲ್ಲದ ಕೂದಲು ತನ್ನ ಕಾಲಿನಲ್ಲಿ ಬಂದಿದ್ದಾದ್ರೂ ಹೇಗೆ ಅರಿಯದೆ ಕಂಗಾಲಾದಳು. `ದಿನ ಅರಿಸಿನ ಹಚ್ಚು ಎಲ್ಲಾ ಸರಿಯಾಗುತ್ತೆ ಅದ್ರ ಬಗ್ಗೆ ಯೋಚ್ನೆ ಮಾಡ್ಬೇಡ’ ಅಂದಿದ್ದಳು ಅಮ್ಮ.
`ಎಲ್ಲ ಸರಿ ಹೋಗುತ್ತೆ, ಸರಿಯಾಗುತ್ತೆ’ ಎಂದೇ ಅಮ್ಮ ಉತ್ತರ ಕೊಡುತ್ತಿದ್ದಳು ಹಾಗಾದ್ರೆ ಈಗ ಯಾವುದೂ ಸರಿ ಇಲ್ಲ ಅಂತ ತಾನೇ? ಊರೂರು ಸುತ್ತುತ್ತಾ ಕಂಡ ಮರಗಳಿಗೆ ಕೋತಿಯ ಹಾಗೆ ಹತ್ತುತ್ತಾ ಸ್ವಚ್ಚಂದವಾಗಿ ಕಾಲ ಕಳೆಯುತ್ತಿದ್ದ ಚಿಟ್ಟಿಗೆ ಎಲ್ಲಾ ಕಡೆಯಿಂದ ತನ್ನನ್ನು ಕಟ್ಟಿ ಹಾಕುತ್ತಿದ್ದಾರೆ ಎನ್ನಿಸಿತು. `ಅಮ್ಮಾ ನಾನು ಸ್ಕೂಲಿಗೆ ಹೋಗೋದು ಯಾವಾಗ?’ `ಹದಿನಾರು ದಿನಗಳು ಹಸಿ ಮೈಯ್ಯೇ ಇನ್ನೆರಡು ದಿನ ಹೋಗುವಿಯಂತೆ.’ ಬಳೆಗಾರನನ್ನು ಕರೆಸಿ ಕೈತುಂಬಾ ಅಮ್ಮ ತೊಡಿಸಿದ್ದ ಹೂವಿನ ಹಸಿರು ಬಳೆ, ಅಪ್ಪ ಜಾತ್ರೆಯಲ್ಲಿ ತಂದುಕೊಟ್ಟಿದ್ದ ಸೀಮೆಬೆಳ್ಳಿಯ ಗೆಜ್ಜೆ ಚಿಟ್ಟಿಯ ಇರುವಿಕೆಯನ್ನು ಸಾರುವಂತೆ ಘಲ್ ಘಲ್ ಎನ್ನುತ್ತಲೇ ಇತ್ತು.
ಹದಿನಾರು ದಿನಗಳೂ ಸೂರ್ಯನ ಬೆಳಕಿಗೆ ಮೈ ಒಡ್ಡದೆ ಮನೆಯ ರೂಮಿನೊಳಗೇ ಕೂತ ಚಿಟ್ಟಿಯನ್ನು ಮಾತಾಡಿಸಿಕೊಂಡು ಹೋಗಲು ಶುಕ್ರವಾರದ ಮುತ್ತೈದೆ ಪದ್ದಮ್ಮ, ಪ್ರೀತಿಯಿಂದ ತಿಂಡಿ ಕೊಡುತ್ತಿದ್ದ ಶಾಂತ, ನಕ್ಕತ್ತು, ಮಂಗಳ, ಸರೋಜ, ಭಾರತಿ, ಆರೋಗ್ಯ ಎಲ್ಲ ಬಂದಿದ್ದರು. ಅವರೊಂದಿಗೂ ಚಿಟ್ಟಿ ಮಾತಾಡಿದಳು. ಆದರೆ ಅವಳ ಒಳಗೆ ಯಾಕೋ ಶೂನ್ಯವೊಂದು ತುಂಬಿದ ಹಾಗನ್ನಿಸುತ್ತಿತ್ತು. ಸ್ನಾನ, ಸ್ನಾನ ಆದಮೇಲೆ ತಿಂಡಿ, ಆಮೇಲೆ ವಿಶ್ರಾಂತಿ, ಅದರ ಮಧ್ಯೆ ಕೊಬ್ಬರಿ ಬೆಲ್ಲ, ಮಧ್ಯಾಹ್ನ ಊಟ, ಮತ್ತೆ ಸಂಜೆ ತುಪ್ಪ ಹಾಕಿದ ಉಪ್ಪಿಟ್ಟು, ರಾತ್ರಿ ಊಟ ಮತ್ತು ನಿದ್ದೆ ಇದೇ ಚಿಟ್ಟಿಯ ದಿನಚರಿ. ಜೀವಮಾನ ಪೂತರ್ಿ ನನಗೆ ಇದೇ ಗತಿಯಾದರೆ ಹೇಗೆ?… ಚಿಟ್ಟಿಗೆ ಮೈ ಜುಂ ಎನ್ನಿಸಿತು.
ಸ್ಕೂಲಿಗೆ ಹೋಗಲು ಇಷ್ಟವಿಲ್ಲದ ಪುಟ್ಟಿ ಚಿಟ್ಟಿಯ ಪಕ್ಕ ತಾನೂ ಒಂದು ಚಾಪೆಯನ್ನು ಹಾಸಿಕೊಂಡು ಕೂತಳು. ಅಮ್ಮ `ಏನೇ ಇದು?’ ಅಂದಿದ್ದಕ್ಕೆ `ಚಿಟ್ಟಿಯ ಹಾಗೆ ನಾನೂ ದೊಡ್ಡವಳಾಗಿದ್ದೀನಿ. ಸ್ಕೂಲಿಗೆ ಹೋಗಲ್ಲ’ ಎಂದಳು. ಚಿಟ್ಟಿ ಅವಳ ಬಾಯನ್ನ ಮುಚ್ಚುತ್ತಾ `ಬೇಡ ಕಣೆ ಪುಟ್ಟಿ ನೀನು ಹೀಗೆ ಇರು ಯಾವತ್ತೂ ದೊಡ್ಡವಳಾಗಬೇಡ’ ಎಂದಿದ್ದಳು. ಚಿಟ್ಟಿ ಆ ಮಾತನ್ನ ಆಡುವ ಹೊತ್ತಿಗೆ ಅಮ್ಮನ ಮುಖದಲ್ಲಿ ವಿಶಾದವಿತ್ತು `ಯಾವತ್ತಾದ್ರೂ ನೀನೂ ಹೀಗೇ ಕುತ್ಕೊಳ್ಳೋವ್ಳೇ, ಏಳೇ ಸ್ಕೂಲಿಗೆ ಹೊತ್ತಾಯ್ತು ಬಿಟ್ಟು ಬತರ್ಿನಿ’ ಎಂದು ಕರೆದೊಯ್ದಳು. ಮತ್ತೆ ಚಿಟ್ಟಿ ಒಂಟಿ ಅಂಗಾತ ಮಲಗಿ ಮಾಳಿಗೆ ಜಂತೆಯನ್ನು ನೋಡುತ್ತಿದ್ದಳು. ಜಂತೆಯ ಸಂದಿಯಲ್ಲಿ ಇಲಿಯೋ ಹಾವೋ ಹರಿದ ಸದ್ದು ಕೇಳಿಸಿತು.

***

`ಆರತಿ ಬೆಳಗಿರೆ ಜನಕಜ ನಂದನೆ ಸೀತಾದೇವಿಯರಿಗೆ. . .’ ಎಂದು ಸರ್ವಾಲಂಕಾರಭೂಷಿತಳಾದ ಚಿಟ್ಟಿಗೆ ಆರತಿ ಮಾಡಿದ ಮುತ್ತೈದೆಯರು ದೃಷ್ಟಿ ತೆಗೆದು ಕೆನ್ನೆಯ ಮೇಲೆ ಬೊಟ್ಟಿಟ್ಟರು. ಚಿಟ್ಟಿಗೆ ಆ ಒಂದು ಕ್ಷಣ ಮಾತ್ರ ತುಂಬಾ ಹೆಮ್ಮೆ ಅನ್ನಿಸಿತು. ತಾನೇನೋ ಎಲ್ಲರಿಗಿಂತ ವಿಶೇಷ ಎನ್ನುವ ಭಾವ ಮೂಡಿತು. ಬಂದವರೆಲ್ಲಾ ಹಣೆಗೆ ಕುಂಕುಮ ಹಚ್ಚಿಗೆ ಕೆನ್ನೆಗೆ ಅರಿಸಿನವನ್ನು ಬಳಿದು ಅವಳ ಕೈಗೆ ತಮಗೆ ಆಗುವಷ್ಟು ಮುಯ್ಯನ್ನು ಕೊಟ್ಟಿದ್ದರು.
ದಿನ ಹರಿಸಿನ ಹಚ್ಚಿ ಅಮ್ಮ ಸ್ನಾನ ಮಾಡಿಸಿದ್ದರಿಂದಲೋ ಅಥವಾ ಆ ಹದಿನಾರು ದಿನಗಳು ಸೂರ್ಯನ ಕಿರಣಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳದ ಕಾರಣಕ್ಕೋ ಏನೋ, ಚಿಟ್ಟಿಯ ಮೈಬಣ್ಣ ದಂತದಂತೆ ಹೊಳೆಯುತ್ತಿತ್ತು. ಸೌಭಾಗ್ಯಮ್ಮ ಅವಳನ್ನೇ ದಿಟ್ಟಿಸುತ್ತಾ ಕಣ್ಣನ್ನ ತುಂಬಿಕೊಂಡು `ನಿನ್ನ ಯಾವ ಹುಡ್ಗಾನೇ ಆದ್ರೂ ಮಾತಿಲ್ಲದೆ ಒಪ್ಪಿಕೊಂಡು ಹೋಗ್ತಾನೆ’ ಎಂದಿದ್ದರು. ಚಿಟ್ಟಿಗೆ ಏನನ್ನಿಸಿತೋ ಏನೋ ಪಕ್ಕೆಂದು ಅವರ ಕಾಲಿಗೆ ನಮಸ್ಕರಿಸಿದ್ದಳು.
ಅಪ್ಪ ಸ್ಕೂಲ್ ಯೂನಿಫಾರಂನ್ನು ಹೊಸದಾಗಿ ಹೊಲಿಸಿಕೊಂಡು ಬಂದಿದ್ದ. ಅದೂ ಸ್ಕಟರ್್ಗೆ ಬದಲಾಗಿ ಉದ್ದ ಲಂಗ ಆಗಿತ್ತು. ಚಿಟ್ಟಿಗೆ ಬೇಸರವಾದರೂ ಬೇರೆ ದಾರಿಯಿರಲಿಲ್ಲ. ಇದನ್ನ ಹಾಕಿಕೊಂಡ್ದು ಮರ ಹತ್ತಲು ಸಾಧ್ಯವೇ ಇಲ್ಲ. ಹಾಗೇನಾದ್ರೂ ಹತ್ತಿದ್ರೆ ಯಾವುದಾದರೂ ಕೊಂಬೆಗೆ ಸಿಕ್ಕಿಕೊಂಡು ಲಂಗ ಹರಿಯುತ್ತೆ, ಇಲ್ಲಾಂದ್ರೆ ಲಂಗ ತೊಡರಿ ನೆಲಕ್ಕೆ ತಾನು ಬೀಳುತ್ತೇನೆ ಎಂದು, ಇನ್ನು ಮುಂದೆ ಮರ ಹತ್ತುವ ತನ್ನ ಕೌಶಲ್ಯ ವ್ಯರ್ಥವಾಗುವುದನ್ನ ನೆನೆದು ಹಿಂದಿನ ದಿನದ ಸಂಭ್ರವನ್ನು ಮರೆತು `ತಾನು ದೊಡ್ಡವಳಾಗಬಾರದಿತ್ತು’ ಎಂದುಕೊಂಡಳು. ಸ್ಕೂಲಿಗೆ ಹೊರಟು ನಿಂತ ಚಿಟ್ಟಿಯನ್ನ ನಿಲ್ಲಿಸಿ ಅಮ್ಮ ಸ್ವೆಟರ್ ತಂದುಕೊಟ್ಟು `ಹಾಕ್ಕೊಂಡ್ ಹೋಗೇ’ ಎಂದಳು.
ಚಿಟ್ಟಿ ಮನೆಯಿಂದ ಹೊರಕ್ಕೆ ಬಂದಳು! ಹಾಯೆಂದು ತಾಕಿದ ತಂಗಾಳಿಗೆ ಅವಳ ಮನಸ್ಸು ಪುಳಕಗೊಂಡಿತು. ಜೋರಾಗಿ ಉಸಿರನ್ನ ಒಳಗೆ ತೆಗೆದುಕೊಂಡು ನಿರಾಳವಾದಳು. ಅವಳ ಸಂತೋಷವನ್ನು ನೋಡಿ ಸೂರ್ಯ ಕೂಡಾ ನಕ್ಕು ತನ್ನ ಹಿತವಾದ ಸ್ಪರ್ಷವನ್ನು ಅವಳಿಗೆ ನೀಡಿದ. ಅಂಗಳದಲ್ಲಿ ಅರಳಿದ್ದ ಹಳದಿ ಸೇವಂತಿಕೆ ಬಂಗಾರದ ಹೂವೇನೋ ಎನ್ನುವಂತೆ ಕಾಣುತ್ತಿತ್ತು. ಸ್ವತಂತ್ರ ಅಂದ್ರೆ ಇದೇನಾ? ಅಷ್ಟರವರೆಗೆ ಎಲ್ಲೋ ಇದ್ದ ಟಾಮಿ ಓಡಿ ಬಂದು ಅವಳ ಕೈಯ್ಯನ್ನು ಮೂಸಿತು. ಅದರ ತಲೆಯ ಮೇಲೆ ಕೈಆಡಿಸಿ ಹೂವನ್ನು ಕಿತ್ತು ತಲೆಯಲ್ಲಿಟ್ಟು ಸ್ಕೂಲಿಗೆ ಹೊರಟಳು. ಅವಳ ಮನಸ್ಸಿನ ತುಂಬಾ ಉದ್ವೇಗ. . . ಮೊದಲ ಬಾರಿಗೆ ಸ್ಕೂಲಿಗೆ ಹೋಗ್ತಾ ಇದೀನಿ, ಇದೇ ಮೊದಲ ಬಾರಿಗೆ ಎಲ್ಲರನ್ನೂ ನೋಡ್ತಾ ಇದೀನಿ ಅನ್ನಿಸಿತು. ಜೊತೆಗೆ `ಏನೇ ಚಿಟ್ಟಿ?’ ಎಂದು ಯಾರಾದರೂ ಕೇಳಿಬಿಟ್ಟರೆ? ಎನ್ನುವ ಒಂದಿಷ್ಟು ಆತಂಕ ಅವಳಲ್ಲಿ ಮನೆ ಮಾಡಿತ್ತು.
ಅವತ್ತಿನಮಟ್ಟಿಗೆ ಚಿಟ್ಟಿ ಹೀರೋಯಿನ್ ಎಲ್ಲರೂ ಅವಳ ಸುತ್ತಲೇ. ಚಂದ್ರಮ್ಮ ಟೀಚರ್ ಕೂಡಾ ಅವಳನ್ನ ಏನೂ ಅನ್ನದೆ ಹೋದರು. ಯಾವ ಮೇಷ್ಟ್ರುಗಳೂ ಅವಳನ್ನ ಯಾವ ಪ್ರಶ್ನೆಯೂ ಕೇಳಲಿಲ್ಲ. ದೈಹಿಕ ಶಿಕ್ಷಣದ ಪಿರಿಯಡ್ ಬಂದಾಗ ಮಾತ್ರ ಅದಕ್ಕೆ ಹೋಗದೆ ಚಿಟ್ಟಿ ಒಂದು ಕಡೆ ಕೂತಳು. ಅದೂ ಅಮ್ಮನ ಆಣತಿಯನ್ನು ನೆನೆದು. ಅವಳು ಹಾಗೆ ಕೂತಿದ್ದನ್ನ ನೋಡಿ ನಾಲ್ಕು ಮಕ್ಕಳ ತಂದೆ ಮುನಿಯಪ್ಪ ಮೇಷ್ಟ್ರ ಉರಿಗಣ್ಣಿನಿಂದ ಅವಳನ್ನ ನೋಡಿದರು. ಆ ನೋಟದಲ್ಲಿ ಏನೋ ಅಡಗಿತ್ತು ಅದನ್ನ ಅರ್ಥ ಮಾಡಿಕೊಳ್ಳುವುದು ಚಿಟ್ಟಿಗೆ ಅಸಾಧ್ಯವಾಗಿತ್ತು.
ಹೀಗೆ ಸ್ಕೂಲನ್ನ ಮುಗಿಸಿದ ಮೇಲೆ ಮಾಮೂಲಿನಂತೆ ಎಲ್ಲರೂ ಕಾಡು ಸುತ್ತಲು ಹೊರಟರು. ಭಾರತಿಗೆ ಚಿಟ್ಟಿಯನ್ನು ತಮ್ಮ ಜೊತೆ ಕರೆದೊಯ್ಯಲಿಕ್ಕಾಗದೇ ಹೋಗುತ್ತಿರುವುದಕ್ಕೆ ವಿಶಾದ ಅನ್ನಿಸಿ `ಸ್ವಲ್ಪ ದಿನ ಕಣೆ ಬೇಜಾರು ಮಾಡಿಕೊಳ್ಳಬೇಡ’ ಎಂದು ಸಮಾಧಾನ ಮಾಡಿದ್ದಳು. ಹೀಗೆ ಒಂಟಿಯಾದ ಚಿಟ್ಟಿಗೆ ಜೊತೆಯಾದವಳೇ ತಾರಾ, ರೈಟರ್ ಕೇಶವನ ಮಗಳು.
ತಾರಾ ಸುಂದರಿಯೇನಲ್ಲ ಸಾಧಾರಣ ಬಣ್ಣ ವಯಸ್ಸಿಗೆ ಮೀರಿ ಮೈಕೈ ತುಂಬಿಕೊಂಡು ಕೊಂಚ ದಪ್ಪ ಎನ್ನುವಂತೆ ಕಾಣುತ್ತಿದ್ದಳು. ಚಿಟ್ಟಿಯ ಜೊತೆ ನಡೆಯುತ್ತಾ `ಬಿಡು ಚಿಟ್ಟಿ ಇನ್ನು ಎಲ್ಲ ಹುಡುಗರೂ ನಿನ್ನ ಕಡೆಗೆ ನೋಡ್ತಾರೆ’ ಎಂದಳು ಅಸೂಯೆಯಿಂದ. ಚಿಟ್ಟಿಗೆ ಏನು ಹೇಳಬೇಕೆಂದು ತೋಚದೆ ಹೋಯಿತು. `ಅರೆ ಇಷ್ಟು ದಿನ ನೋಡದೆ ಇದ್ದವರು ಈಗ್ಯಾಕೆ ನನ್ನ ನೋಡ್ತಾರೆ?’ ಎಂದಳು. `ಇನ್ನು ಮುಂದೆ ನಿಂಗೆ ಎಲ್ಲಾ ಗೊತ್ತಾಗುತ್ತೆಬಿಡು’ ಎಂದಿದ್ದಳು ತಾರಾ. ಚಿಟ್ಟಿಗೆ ಅವಳ ಬಗ್ಗೆ ಕುತೂಹಲ `ತಾರಾ ನೀನೂ ದೊಡ್ಡೋಳಾಗಿದ್ದೀಯಲ್ಲಾ ನಿನ್ನ ಯಾರೇ ನೋಡ್ತಿದ್ದಾರೆ?’ ಹುಂಜಾನನ ಕುಡಿನೋಟಕ್ಕಾಗಿ ಹಂಬಲಿಸಿ ಜಾತ್ರೆಯ ತುಂಬಾ ಓಡಾಡುತ್ತಿದ್ದುದನ್ನ ನೆನೆಸಿಕೊಂಡು ಕೇಳಿದಳು ಚಿಟ್ಟಿ. `ಒಬ್ಬ ಇದ್ದಾನೆ ದರವೇಶಿ, ಹಾಂ ಅನ್ನಲಿಲ್ಲ ಹುಂ ಅನ್ನಲಿಲ್ಲ. ನಾನು ಹಿಂದೆ ಬಿದ್ದಾಗ ಪ್ರೀತಿಸ್ತಾನೆ. ಅವನ ಕಣ್ಣೆದುರಿಂದ ದೂರ ಆದಾಗ ನೆನಪೇ ಮಾಡಿಕೊಳ್ಳಲ್ಲ, ಅವನಾಯ್ತು ಅವನ ಕೆಲಸ ಆಯ್ತು’ ಎಂದು ಮುಖದಲ್ಲಿ ಒರಟುತನವನ್ನು ತಂದುಕೊಂಡು ಬೈಯ್ಯತೊಡಗಿದಳು. ಚಿಟ್ಟಿ ಉಕ್ಕುತ್ತಿದ್ದ ನಗೆಯನ್ನು ತಡೆದುಕೊಂಡಳು. ಹೀಗೆ ಬೈಯ್ಯುತ್ತಲೇ ತಾರಾ ತನ್ನ ಮನೆಯ ಕಡೆಗೆ ಹೋದಳು. ಅವಳ ಮನೆಯ ಪಕ್ಕದಲ್ಲೇ ಇದ್ದ ಅವರದ್ದೇ ಹೊಟೇಲಿನಲ್ಲಿ ಕೆಲಸ ಮಾಡ್ತ್ತಾ ಇದ್ದ ಐದಿಡ್ಲಿ ನಾಗ ಬಗ್ಗಿ ನೋಡಿದ. ತನ್ನ ನೋಡಿ ಅವನು ನಕ್ಕಿರಬಹುದು ಎನ್ನುವ ಅನುಮಾನ ಚಿಟ್ಟಿಯಲ್ಲಿ ಮೂಡಿತು.
ಮನೆ ತಲುಪುವ ವೇಳೆಗೆ ಅಮ್ಮ ಬಾಗಿಲಲ್ಲೇ ನಿಂತಿದ್ದಳು. ಯಾವತ್ತೂ ಕೇಳದವಳು `ಯಾಕೆ ಚಿಟ್ಟಿ ತಡ?’ ಎಂದಳು. `ತಾರಾ ಸಿಕ್ಕಿದ್ದಳು ಹೀಗೆ ಮಾತಾಡ್ತಾ ಬಂದೆ’ ಎಂದಳು ಚಿಟ್ಟಿ. `ಸರಿ ಬಟ್ಟೆ ಬದಲಾಯಿಸು ತಿಂಡಿ ಬಿಸಿ ಇದೆ’ ಎಂದು ಒಳನಡೆದಳು ಅಮ್ಮ. ತಾರಾ ಎಷ್ಟು ಚೆನ್ನಾಗಿ ಬೈದಳಲ್ಲಾ ಎನ್ನಿಸಿ ಮತ್ತೆ ನಗು ಬಂತು. ಅಜ್ಜಿ `ಹೆಣ್ಣು ಮಕ್ಳು ಸುಮ್ನೆ ನಗಬಾದರ್ು ಚಿಟ್ಟಿ’ ಎಂದಳು. `ಅಯ್ಯೋ ನಿಂದೊಂದು ಹೋಗಜ್ಜಿ’ ಎಂದು ಒಳ ಸಾಗಿದಳು ಚಿಟ್ಟಿ
ಮಾರನೆಯ ದಿನ ಸ್ಕೂಲಿಗೆ ಹೋಗುವ ಹೊತ್ತಿಗೆ ತಾರಾ ಚಿಟ್ಟಿಯನ್ನ ಹುಡುಕಿ ಬಂದಿದ್ದಳು! ಚಿಟ್ಟಿಗೆ ಅಚ್ಚರಿ ಯಾವತ್ತೂ ಇಲ್ಲದೇ ಇದ್ದವಳು ಹೀಗ್ಯಾಕೆ ಎಂದು. ಅಷ್ಟರಲ್ಲಿ ಅಲ್ಲಿಗೆ ಬಂದ ಭಾರತಿಗೂ ಅವಳನ್ನ ಹಾಗೆ ನೋಡಿ ಅಚ್ಚರಿಯೇ. `ಏನೇ ತಾರಾ’ ಎಂದಳು. `ಚಿಟ್ಟಿಯನ್ನ ಒಬ್ಬಳೇ ಮಾಡಿದ್ದೀರಾ? ಅದಕ್ಕೆ ನಾನ್ ಬಂದೆ’ ಎಂದಳು ಕಾಳಜಿ ಇರುವವಳಂತೆ. `ಚಿಟ್ಟಿ ನಿಂಗೇನೋ ಗ್ರಹಚಾರ ಕಣೆ’ ಎಂದಳು ಭಾರತಿ ನಗುತ್ತಾ. ಅಷ್ಟರಲ್ಲಿ ಶಾಂತ ಬಗ್ಗಿ ನೋಡಿ `ಭಾರತಿ ನನ್ನೆಜಮಾನ್ರು ಹೊಸ ಸೀರೆ ತಂದಿದ್ದಾರೆ. ಸಂಜೆ ಒಂದು ಗಳಿಗೆ ಮೈ ಮೇಲೆ ಹಾಕಿ ಕೊಡೇ’ ಎಂದರು. `ಆಯ್ತು ಶಾಂತಾ’ ಎಂದು ಭಾರತಿ ಧಾರಾಳತೆಯನ್ನು ಮೆರೆದಳು. `ಹಾಗೇ ಕೈಗೆ ಮುಳ್ಳು ಚುಚ್ಚಿಲ್ಲವಾ ಶಾಂತಾ’ ಎಂದು ಬೇರೆ ವಿಚಾರಿಸಿಕೊಂಡಳು.
`ದೇವಿ ಶಾರದೆ ನಿನ್ನ ಚರಣಕೆ ಶಿರವ ಬಾಗುತ ನಮಿಪೆವು. . .’ ಸಂಜೆಯ ಪ್ರಾರ್ಥನೆಯೊಂದಿಗೆ ಪುಸ್ತಕಗಳನ್ನು ಒಳಗೆ ಹಾಕಿ ಹೊರಟ ಚಿಟ್ಟಿಗೆ ಮತ್ತೆ ಜೊತೆಯಾಗಿದ್ದು ತಾರಾ. ಯಾಕೋ ತುಂಬಾ ಖುಷಿಯಲ್ಲಿದ್ದಳು. ಅವಳನ್ನ ನೋಡಿದ ತಕ್ಷಣ ತಾನು ಬೆಳಗ್ಗೆ ಎದ್ದು ಪಂಚಕನ್ಯೆಯರನ್ನ ನೆನೆಸಿಕೊಳ್ಳುತ್ತೇನಲ್ಲ ಅದರಲ್ಲಿ ಇಬ್ಬರು ತಾರಾ ಇದ್ದಾರೆ ಎನ್ನುವುದು ನೆನಪಾಯಿತು. `ನಿನ್ನ ಹೆಸರಿನ ಇಬ್ಬರು ತಾರಾ ಇದ್ದಾರೆ ಒಬ್ಬಳು ಚಂದ್ರನ ಹೆಂಡತಿ ಇನ್ನೊಬ್ಬಳು ವಾಲಿ ಹೆಂಡತಿ’ ಎಂದಳು. ತಾರಾ ಅದಕ್ಕೆ ನಗುತ್ತಾ `ಹುಂಜಾನನ ಹೆಂಡತಿ ತಾರಾ ಇಲ್ಲವಾ?’ ಎಂದಳು. ಚಿಟ್ಟಿ ಅವಳನ್ನ ಅಚ್ಚರಿಯಿಂದ ನೋಡಿದಳು, ತನಗಿಂತ ಎರಡು ವರ್ಷ ದೊಡ್ಡವಳಿರಬೇಕು ಅಷ್ಟೇ. ಇಷ್ಟೆಲ್ಲಾ ಹೇಗೆ ನಡೀತು? ತಾರಾ ಅದೇ ಖುಷೀಲೇ `ಅವ್ನು ನನ್ನ ಮೇರಿ ಜಾನ್ ಅಂದ. ಎಂಥಾ ಸಂತೋಷ ಆಯ್ತು ಗೊತ್ತಾ? ಇದಕ್ಕೋಸ್ಕರ ನಾನು ಎಷ್ಟ್ ದಿನದಿಂದ ಕಾಯ್ತಾ ಇದ್ದೆ. ನಿನ್ನೆ ಅಚಾನಕ್ ಸಿಕ್ಕ ನನ್ನ ಕೈಯ್ಯಿಂದ ಹೇಗ್ ತಪ್ಪಿಸ್ಕೊಂಡ್ ಹೋಗ್ತೀಯ ಅಂತ ಅವನ ಕಾಲರ್ ಹಿಡ್ದೆ ಅವನು ನನ್ನ ಸೊಂಟಾನ . . . ‘ ಎಂದು ನಾಚುತ್ತಾ `ಈ ವಿಷ್ಯಾನ ಅಪ್ಪಿ ತಪ್ಪಿ ಕೂಡಾ ಯಾರ ಹತ್ರಾನೂ ಬಾಯ್ಬಿಟ್ಟೀಯಾ ಜೋಕೆ’ ಎಂದಳು.
ಅವತ್ತು ಮಸೀದೀಲಿ ತನ್ನನ್ನು `ಹೇಯ್ ಮೇರಿಜಾನ್’ ಅಂದ ಹುಂಜಾನ ಇವತ್ತು ತಾರಾನ ಜಾನ್ ಆಗಿರುವುದಾದರೂ ಹೇಗೆ? ಹಾಗಾದ್ರೆ ಇದನ್ನ ಯಾರು ಯಾರ ಹತ್ರಾನೂ ಈ ಮಾತನ್ನ ಹೇಳಬಹುದೇ? ಹಾಗೆ ಹೇಳಿದ ತಕ್ಷಣ ಇಬ್ಬರೂ ಪ್ರೇಮಿಗಳಾಗುತ್ತಾರೆಯೆ? ಹಾಗಾದ್ರೆ ಸೀತಾರಾಮು ತನ್ನ ಪ್ರೇಮಿಯೇ ಹೀಗೆಲ್ಲಾ ಯೋಚನೆ ಮಾಡುವಾಗಲೇ ಗಿಡದ ಮರೆಯಿಂದ ಶಿಳ್ಳೆಯೊಂದು ಕೇಳಿಸಿತು. ತಿರುಗಿ ನೋಡಿದ ತಾರಾಗೆ ಏನೋ ಸೋಚನೆ ಸಿಕ್ಕ ಹಾಗಾಗಿತ್ತು `ನೀನ್ ನಡ್ಯೇ ನಾನು ಬತರ್ಿನಿ’ ಎನ್ನುತ್ತಾ ಅಲ್ಲೇ ನಿಂತಳು. ಅಲ್ಲಿ ಏನಾಗಬಹುದು ಎನ್ನುವ ಕುತೂಹಲಕ್ಕೆ ಬಿದ್ದ ಚಿಟ್ಟಿ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಳು.
(ಮುಂದುವರಿಯುವುದು…)

‍ಲೇಖಕರು avadhi

September 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. g.n.nagaraj

    ಬಹಳ ಸಂಕೀರ್ಣವಾದ,ಸೂಕ್ಷ್ಮವಾದ ಘಟ್ಟಕ್ಕೆ ಕಾದಂಬರಿ ಪ್ರವೇಶಿಸುತ್ತಿದೆ.ದೂರ ಕುಳಿತ ದಿನಗಳ ನೋವಿನ ಚಿತ್ರಣ ಚೆನ್ನಾಗಿ ಬಂದಿದೆ. ಚಿಟ್ಟಿಯ ಜೊತೆಗೆ ಹೋಲಿಕೆಯಾಗಿ ಅವಳಿಗೊಬ್ಬ ತಮ್ಮನೋ,ಅಣ್ಣನೋ ಇದ್ದರೆ ಚೆನ್ನಾಗಿತ್ತೇನೋ ? ಈ ಸಂಚಿಕೆಯಲ್ಲಿ ಶಾಲೆ ಬಿಟ್ಟ ನಂತರ ಗೆಳತಿಯರೆಲ್ಲಾ ಕಾಡಿನ ಕಡೆ ಹೊರಟಾಗ ಚಿಟ್ಟಿ ತಾನು ದೊಡ್ಡವಳಾಗಬಾರದಿತ್ತು ಎಂಬ ಒಂದೇ ಮಾತಿನಲ್ಲಿ ಒಪ್ಪಿಕೊಂಡು ಬಿಟ್ಟಿದ್ದಾಳೆ. ಅಷ್ಟು ಸರಳವೇ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: