ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿ ಮೊದಲಬಾರಿಗೆ ಹಾರುವುದ ಕಲಿತಿತ್ತು

(ಇಲ್ಲಿಯವರೆಗೆ)

‘ಊಟ ಮಾಡ್ ಬಾ’॒ ಅಮ್ಮನ ಕೂಗಿಗೆ ಚಿಟ್ಟಿ ಮಾತಾಡಲಿಲ್ಲ. ಮಾತಾಡದ ಅವಳ ಪಕ್ಕದಲ್ಲಿ ಕೂತ ಅಮ್ಮ ‘ನೋಡು ನಿನ್ನ ಒಳ್ಳೇದಕ್ಕೆ ಎಲ್ಲಾ ಮಾಡ್ತಾ ಇರೋದು, ನಿನ್ನ ವಯಸ್ಸಿಗೆ ನಂಗೆ ಮದ್ವೆಯಾಗಿ ನೀನು ಹುಟ್ಟಿದ್ದೆ. ಯಾವುದೂ ತಪ್ಪಲ್ಲ, ಕಾಲ ಯಾವುದಾದರೇನು? ನೀನು ಹೆಣ್ಣು ತಾನೆ? ಊಟಕ್ಕೆ ಎದ್ದು ಬಾ’ ಎಂದಳು ಯಾವತ್ತೂ ಇಲ್ಲದ ಅಧಿಕಾರವಾಣಿಯಲ್ಲಿ. ಚಿಟ್ಟಿಗೆ ಊಟ ಮಾತ್ರವಲ್ಲ; ಅಮ್ಮನ ಮಾತೂ ಬೇಕಿರಲಿಲ್ಲ. ಅವಳದ್ದು ಒಂದೇ ಹಟ ‘ನಾನೂ ಕಾಲೇಜಿಗೆ ಹೋಗ್ತೀನಿ’. ‘ನೋಡು ನೀನ್ ಕಾಲೇಜಿಗೆ ಹೋಗಿ ಸಾಧಿಸ್ಬೇಕಾದ್ದು ಏನೂ ಇಲ್ಲ. ನಿನ್ನ ಎಡಬಿಡಂಗಿತನದಿಂದ ಇಲ್ದಿದ್ದೂ ಸಮಸ್ಯೆ ತಂದಿಟ್ಕೋತೀಯ ಅಷ್ಟೇ. ಅದಕ್ಕೆ ಹೇಳಿದ್ದು ಒಳ್ಳೇ ಹುಡುಗನ್ನ ನೋಡಿ ಮದುವೆ ಮಾಡ್ತೀವಿ ಸುಮ್ನೆ ಒಪ್ಕೋ. ನಾವೇನೂ ನಿನ್ನ ದ್ವೇಶಿಗಳಲ್ಲ. . . ’ ಅಮ್ಮ ಹೇಳುತ್ತಲೇ ಇದ್ದಳು, ಚಿಟ್ಟಿಗೆ ಅದ್ಯಾವುದೂ ಕಿವಿದೆರೆಯ ಮೇಲೆ ಬೀಳೋದು ಬೇಕಿರಲಿಲ್ಲ.

‘ಅಮ್ಮ ಅನ್ನುವ ಅಮ್ಮ ಹೀಗಾ ಮಾತಾಡೋದು? ಬರೋನು ಯಾವ ದೇಶದ ಮಹಾರಾಜ ಆದ್ರೆ ನಂಗೇನು ನನ್ನ ಮನಸ್ಸು ಒಪ್ಪೋ ಹಾಗೇ ತಾನೇ ನಾನಿರಬೇಕು? ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ನನ್ನ ಜೀವನವನ್ನು ಮುಗಿಸಿಕೊಂಡುಬಿಡಬೇಕಾ? ಇಲ್ಲ ನಾನು ಓದಿ ಕಾರಲ್ಲಿ ಓಡಾಡಬೇಕು, ಎದುರು ಸಿಕ್ಕವರೆಲ್ಲಾ ನನಗೆ ಸೆಲ್ಯೂಟ್ ಹೊಡೀಬೇಕು, ಕೊನೆಗೆ ಮದುವೆ ಆಗುವ ಹುಡುಗ ಕೂಡಾ ನನ್ನ ಮುಂದೆ ಕೈ ಕಟ್ಟಿಕೊಂಡು ನಿಂತು ನಾನು ಹೇಳಿದ್ದನ್ನು ಕೇಳಬೇಕು’. ‘ಎಸ್‌ಎಸ್ ಎಲ್ ಸಿನ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಮಾಡಿದ್ದೀಯ, ನೀನ್ ಸೈನ್ಸ್ತ ಗೊಳ್ಳೋಕ್ಕಾಗುತ್ತಾ ಇಲ್ಲ. ಇನ್ನು ಆರ್ಟ್ಸ್ ತಗೊಂಡು ಯಾವ ಆಫೀಸರ್ ಆಗ್ತೀಯ ಬಿಡು’ ಎಂದು ಅಮ್ಮ ರೇಗಿದ್ದಳು.

‘ಅಮ್ಮ ನನಗೆ ಸಿಗೋ ಅವಕಾಶ ಯಾವುದೇ ಆದರೂ ಪರವಾಗಿಲ್ಲ ಅದನ್ನು ನಾನು ಬಳಸಿಕೊಳ್ತೀನಿ ಬೆಳೀತೀನಿ ನನಗೆ ಓದೋಕ್ಕೆ ಒಂದು ಅವಕಾಶ ಕೊಡಮ್ಮಾ’ ಎಂದಳು ಚಿಟ್ಟಿ ದೈನ್ಯದಿಂದ. ‘ಇಲ್ಲ ಕಣೆ ನಿನ್ನ ಮಾತನ್ನು ಕೇಳೋ ಸ್ಥಿತಿಲಿ ನಾನಿಲ್ಲ, ನೀನ್ ಏನೂ ಹೇಳ್‌ಬೇಡ. ನನ್ನ ನಿರ್ಧಾರ ಕೊನೇದು ಅಷ್ಟೇ’ ಎಂದುಬಿಟ್ಟಿದ್ದಳು. ಚಿಟ್ಟಿಯ ಕಣ್ಣ ತುದೀಲಿ ತುಂಬಿಕೊಂಡಿದ್ದ ನೀರು ಅವಳಿಗೆ ಕಂಡರೂ ಕಾಣಲಿಲ್ಲ ಎನ್ನುವ ಜಾಣತನದಲ್ಲಿ ಎದ್ದು ಹೋದಳು. ಅಮ್ಮ ಇಷ್ಟು ನಿಷ್ಕರುಣಿಯಾಗಲು ಸಾಧ್ಯವಾ? ನನ್ನ ಕಣ್ಣ ನೀರನ್ನು ನೋಡಿದರೆ ಕನಲಿ ಹೋಗುತ್ತಿದ್ದ ಅಮ್ಮ ಇವಳೇನಾ? ತಮ್ಮ ಇಚ್ಚೆಗೆ ವಿರುದ್ಧವಾಗಿ ಯಾರಾದರೂ ಏನಾದರೂ ಮಾಡುತ್ತಾರೆ ಎಂದರೆ ಅವರನ್ನು ಹೀಗೆ ನಿರ್ಲಕ್ಷ್ಯಕ್ಕೆ ಒಳಗುಮಾಡುವುದಾ?

ಕಲ್ಲವ್ವ ತನ್ನ ಆಸೆಯನ್ನು ಮೀರಿ ಹೊರಟುಹೋದ ಮಗಳು ಆರೋಗ್ಯ, ಅವಳನ್ನು ಚರ್ಚ್‌ಗೆ ಬಿಟ್ಟು ಬಂದಿದ್ದ ಗಂಡ ಭೈರ ಡಿಸೋಜಾ ಇಬ್ಬರೂ ತನ್ನ ಪಾಲಿಗೆ ಸತ್ತೇ ಹೋದರು ಎಂದು ಹೇಳುತ್ತಾ ಕಳ್ಳು ಕುಡಿದು ಆವೇಶದಿಂದ ಊರೆಲ್ಲಾ ಸುತ್ತಾಡುತ್ತಿದ್ದಾಗ ಇದೇ ಅಮ್ಮ ಬೈದುಕೊಂಡಿರಲಿಲ್ಲವಾ-ಮಕ್ಕಳ ಆಸೆಗಿಂತ ಬೇರೆ ಏನಿದೆ ಅಂತ? ಈಗ ಮಾತ್ರ ನನ್ನ ಮಾತನ್ನೂ ಕೇಳಿಸಿಕೊಳ್ಳಲ್ಲ ಅಂತ ಯಾಕೆ ಎದ್ದು ಹೋದಳು? ಬೇರೆಯವರಿಗೊಂದು ಮಾತು ತನಗೊಂದು ಮಾತು, ಇದು ಸರೀನಾ? ಯಕ್ಷ ಪ್ರಶ್ನೆಗಳಲ್ಲಿ ಮುಳುಗಿದ ಚಿಟ್ಟಿಯ ಮೈ ಮನಸ್ಸುಗಳು ಭಾರವಾಗಿ ಉಳಿದವು.

‘ಇನ್ನು ನನಗೆ ಯಾವ ದಾರಿಯೂ ಇಲ್ಲ. ಯಾರೋ ಒಬ್ಬ ಬರ್ತಾನೆ. ಅವನ್ಯಾರು ಅಂತಾನೂ ನನಗೆ ಗೊತ್ತಿರಲ್ಲ. ಅಂಥವನ ಕೈಲಿ ತಾನು ತಾಳಿ ಕಟ್ಟಿಸಿಕೊಳ್ಳುತ್ತೇನೆ. ಹಾಗೆ ಕಟ್ಟಿಸಿಕೊಂಡು ಅವನು ಹೇಳಿದ ಹಾಗೇ ಕೇಳ್ತಾ ಅವನ ಕಾಲನ್ನು ಒತ್ತುತ್ತಾ ಬಿದ್ದಿರುತ್ತೇನೆ’- ಹಾಗೆಂದುಕೊಂಡ ಮರುಕ್ಷಣವೇ ಅವಳ ಕಣ್ಣೆದುರು ಮುಖವಿಲ್ಲದ ಒಬ್ಬ ವ್ಯಕ್ತಿಯ ಕಾಲನ್ನು ಒತ್ತುತ್ತಾ ಕೂತಿರುವ ತನ್ನನ್ನು ಕಾಣುತ್ತಾಳೆ. ಹಾಗೆ ಕಂಡ ತಾನು ಲಕ್ಷ್ಮಿಯಾಗಿ ಕಿರೀಟ ಇಟ್ಟುಕೊಂಡುಬಿಡುತ್ತಾಳೆ. ಮೈಮೇಲೆ ಸಖತ್ ಆಭರಣ. ತಲೆ ತುಂಬಾ ಹೂವು, ಹಣೆಯ ತುಂಬಿದ ಕುಂಕುಮ. ಎಳಸಾದ ಗಲ್ಲ ಮುದ್ದು ಮುದ್ದು- ಎಷ್ಟು ಚೆಂದ ತಾನು! ಥತ್ಥೇರಿ ಯಾವ ಕಿರೀಟ ಇಟ್ಟುಕೊಂಡರೆ ಏನು ಬಂತು, ಎಷ್ಟು ಚೆನ್ನಾಗಿ ಕಂಡರೆ ಏನು ಬಂತು? ಹಾಳು ಗಂಡಸಿನ ಕಾಲನ್ನು ಒತ್ತುವುದನ್ನು ಬಿಟ್ಟರೆ ತನಗೆ ಏನು ಕೆಲಸ ಇದೆ ಎಂದು ಬೇಸರಿಸಿಕೊಂಡಳು. ಇದನ್ನು ತಾನು ಮಾಡುವುದು ಬೇಡ ಎನ್ನುವ ಗಂಡಸನ್ನು ಬೇಕಾದರೆ ಮದುವೆಯಾಗಬಹುದೇನೋ ಎಂದುಕೊಂಡಳು. ಹಿಂದೆ- ಅರೆ ಮದುವೆಯೇ ಬೇಡ, ಮುಂದೆ ತುಂಬಾ ಓದಬೇಕೆಂದುಕೊಂಡವಳಿಗೆ ಇದೆಂಥಾ ಆಸೆ? ಇಲ್ಲ. . . ಇಲ್ಲ ಮದುವೆಯನ್ನೇ ಅಗಲಾರೆ ಎಂದು ಮತ್ತೆ ದೃಢವಾದ ನಿರ್ಧಾರಕ್ಕೆ ಬಂದಳು. ಅಷ್ಟರಲ್ಲಿ ಹೊರಗಿನಿಂದ ಓಡಿ ಬಂದ ಪುಟ್ಟಿ ‘ನೋಡೇ ಬೆಳ್ಳಕ್ಕಿ ಎಷ್ಟ್ ಉಂಗ್ರಾನ ಕೊಟ್ಟಿದೆ’ ಅಂತ ಉಗುರನ್ನು ತೋರಿಸಿದಳು. ಉಗುರಿನ ಮೇಲೆ ಮೂಡಿದ್ದ ಬಿಳಿಬಿಳಿ ಚುಕ್ಕಿಯನ್ನು ಕಣ್ಣರಳಿಸಿ ನೋಡಿದ ಚಿಟ್ಟಿ ತನ್ನ ಉಗುರನ್ನು ನೋಡಿಕೊಂಡಳು. ಒಂದೇ ಒಂದು ಉಂಗುರದ ಗುರುತೂ ಇರಲಿಲ್ಲ.

ಬೆಳ್ಳಕ್ಕಿಯನ್ನು ಕೇಳಿ ಹಾರುತ್ತಿದ್ದ ಅದರ ಬೆನ್ನು ಹತ್ತಿದಾಗಲೇ ಸಿಗದ ಉಂಗುರ ಈಗ ಸಿಗುತ್ತಾ? ‘ಬಿಡೆ ಇಂಥಾ ಉಂಗುರಗಳಿಂದ ಏನಾಗಬೇಕಿದೆ? ಇನ್ನು ನಮ್ಮ ಚಿಟ್ಟಿಗೆ ನಿಜವಾದ ಉಂಗುರವೇ ಸಿಗುತ್ತೆ’ ಎಂದು ಅಮ್ಮ ಹೇಳಿದಾಗ ಪುಟ್ಟಿ ‘ಹೇಗೆ?’ ಎಂದು ಅಮ್ಮನ ಬೆನ್ನು ಬಿದ್ದಳು. ಅವಳ ಕಾಟ ತಡಿಲಾರದೆ ‘ನಿಮ್ಮ ಭಾವ ಬರ್ತಾರಲ್ಲ ಅವರು ತಂದುಕೊಡ್ತಾರೆ, ಪುಣ್ಯಾತ್ಮ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದ್ದಾನೆ’ ಎಂದಳು ಅಮ್ಮ. ‘ಇಲ್ಲ ಯಾರೂ ನಂಗೆ ಏನೂ ತಂದುಕೊಡೋದು ಬೇಡ ನಂಗೆ ಯಾರಿಂದಲೂ ಏನೂ ಆಗೋದು ಬೇಡ’ ಎಂದು ಹೇಳಬೇಕೆಂದುಕೊಂಡಳಾದರೂ ಅಮ್ಮನ ದೃಢವಾದ ಮಾತುಗಳಿಗೆ ಉತ್ತರ ಕೊಡುವ ಚೈತನ್ಯ ಅವಳಲ್ಲಿ ಇರಲಿಲ್ಲ. ‘ಭಾವ ನಂಗೆ ತಂದುಕೊಡಲ್ವಾ?’ ಎಂದಳು ಪುಟ್ಟಿ ಕೆನ್ನೆ ಊದಿಸಿಕೊಂಡು. ‘ನಿಂಗಾ! ಹೋಗೆ ತಲಹರಟೆ’ ಎಂದು ಅಮ್ಮ ಅವಳ ಕೆನ್ನೆಗೆ ಮೆಲ್ಲಗೆ ಹೊಡೆದಳು. ‘ನಂಗೆ?’ ಎಂದು ಕೇಳಿ ಬಂದ ಸೀನುವಿನ ಕೆನ್ನೆಗೂ ಅಮ್ಮ ‘ನಿಂಗೂ ಕೊಡ್ತೀನಿ ಬಾ’ ಎಂದು ಮೆಲ್ಲಗೆ ಹೊಡೆದಳು, ಸೀನು ಗಹಗಹಿಸಿ ನಕ್ಕ. ಆಕ್ಷಣಕ್ಕೆ ಅವನು ಸೀನು ಅನ್ನಿಸಲೇ ಇಲ್ಲ. ಈಚೆಗೆ ಅವನು ದೊಡ್ಡ ಗಂಡಸು ಅನ್ನಿಸಲಿಕ್ಕೆ ಶುರುವಾಗಿದ್ದ. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಜನ ಸಂತೆಯ ಹಾಗೆ ಸೇರುತ್ತಿದ್ದರು. ಚಿಟ್ಟಿಯ ಮುಂದೆ ಉಂಗುರದ ರಾಶಿಯೇ ಬಿದ್ದಿತ್ತು. ಎಲ್ಲವೂ ಚಿನ್ನದ ಉಂಗುರಗಳೇ! ಅದರಲ್ಲಿನ ಒಂದೊಂದನ್ನು ನೋಡುತ್ತಾ ತನ್ನ ಬೆರಳಿಗೆ ಆಗುವ ಉಂಗುರಗಳನ್ನು ತೆಗೆದುಕೊಳ್ಳುತ್ತಿದ್ದಳು.

ಗಂಡಿನ ಕಡೆಯವರು ಯಾರೋ ಒಬ್ಬರು ‘ನಿಂಗೆ ಯಾವುದು ಇಷ್ಟವೋ ಅದನ್ನೆಲ್ಲಾ ತೆಗೆದುಕೋ’ ಎನ್ನುತ್ತಿದ್ದರು. ಒಂದಕ್ಕಿಂತ ಒಂದು ಚಂದದ ಉಂಗುರಗಳು. ಚಿಟ್ಟಿ ಕಣ್ಣ ತುಂಬುವ ಅವುಗಳನ್ನು ಆರಿಸಿ ಆರಿಸಿ ಇಟ್ಟುಕೊಳ್ಳುತ್ತಿದ್ದಳು. ಅಮ್ಮ ‘ಸಾಕು ಕಣೇ ಚಿಟ್ಟಿ ಇನ್ನೆಷ್ಟು ತಗೋತೀಯ?’ ಎಂದಳಾದರೂ ಅವಳ ಮಾತುಗಳು ಚಿಟ್ಟಿಯ ಕಿವಿಯನ್ನು ಮುಟ್ಟಲಿಲ್ಲ. ಅವಳ ಕಣ್ಣುಗಳಲ್ಲಿ ಆಸೆ ಎನ್ನುವುದು ಮಡುಗಟ್ಟಿ ಹೊರಗೆ ತುಳುಕತೊಡಗಿತ್ತು. ಆಸೆ ಬುರುಕಳ ಹಾಗೆ ಉಂಗುರಗಳನ್ನು ಆರಿಸಿ ಆರಿಸಿ ಕೈತುಂಬಾ ತುಂಬಿಸಿಕೊಂಡಳು. ಅಷ್ಟರಲ್ಲಿ ಯಾರೋ ‘ಆಯ್ತಲ್ಲಾ ಇನ್ನು ಮದುವೆ ಶಾಸ್ತ್ರ ಮುಗಿಸಿಬಿಡೋಣ’ ಎಂದರು. ಅಷ್ಟರವರೆಗೂ ಉಂಗುರದ ಆಸೆಗೆ ಬಿದ್ದು ಜಗತ್ತನ್ನೆ ಮರೆತಿದ್ದ ಚಿಟ್ಟಿ ಆ ಮಾತುಗಳನ್ನು ಕೇಳಿ ಬೆಚ್ಚಿಬಿದ್ದಳು. ತನ್ನ ಕೈಲಿರುವ ಎಲ್ಲಾ ಉಂಗುರಗಳನ್ನು ನೋಡುತ್ತಾ ಅಲ್ಲಿಂದ ಮೆಲ್ಲಗೆ ಎದ್ದು ಹೊರಟಳು. ‘ಏಯ್ ಚಿಟ್ಟಿ ಎಲ್ಲಿಗೆ ಹೋಗ್ತಾ ಇದೀಯಾ? ನಿಂತ್ಕೋ’ ಎಂದಳು ಅಮ್ಮಾ. ಅವಳ ಮಾತುಗಳನ್ನೂ ಕೇಳದೆ ಚಿಟ್ಟಿ ತನ್ನ ಕೈಗಳಲ್ಲಿದ್ದ ಉಂಗುರಗಳನ್ನು ಬಚ್ಚಿಟ್ಟುಕೊಂಡು ‘ಇಲ್ಲ ನಾನು ಹೋಗಬೇಕು… ನಾನು ಹೋಗಬೇಕು’ ಎನ್ನುತ್ತಾ ಅಲ್ಲಿಂದ ಓಡತೊಡಗಿದಳು. ಮದುವೆಗೆ ಅಂತ ಬಂದ ಜನ ‘ಅಯ್ಯೋ ಮದ್ವೆ ಹುಡ್ಗಿ ಓಡ್ ಹೋಗ್ತಾ ಇದಾಳೆ ಹಿಡ್ಕೊಳ್ಳಿ’ ಎಂದು ಕೂಗತೊಡಗಿದರು. ಚಿಟ್ಟಿ ಮಾತ್ರ ಯಾವುದೂ ತನಗಲ್ಲ ಎನ್ನುವಂತೆ ಅಲ್ಲಿಂದ ಓಡತೊಡಗಿದಳು. ಅದೊಂದು ಕಾಡಿನ ದಾರಿ, ಚಿಟ್ಟಿ ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದ ಎಲ್ಲರನ್ನೂ ಹಿಂದಿಕ್ಕಿ ಮುಂದೆ ಮುಂದೆ ಗಾಳಿಯ ಹಾಗೆ ಓಡತೊಡಗಿದ್ದಳು.

ಅವಳಲ್ಲಿ ಒಂದು ದೊಡ್ದ ವಿಶ್ವಾಸ ನಾನು ಂiರ ಕೈಗೂ ಸಿಗಲಾರೆ, ನನ್ನ ಇವರ್ಯಾರೂ ಹಿಡಿಯಲಾರರು ಎಂದು. ಹಾಗೇ ಅಂದುಕೊಂದು ಸಾಗುತ್ತಿದ್ದ ಅವಳಿಗೆ ಇದ್ದಕ್ಕಿದ್ದ ಹಾಗೇ ದಾರಿಯಲ್ಲಿ ದೊಡ್ಡ ನದಿ ಎದುರಾಗಿಹೋಯಿತು. ಈಜುಬಾರದ ತಾನು ಹೇಗೆ ಈ ನದಿಯನ್ನು ದಾಟುವುದು? ಸುತ್ತಾ ನೋಡಿದಳು ಯಾವ ದೋಣಿಯೂ ತೆಪ್ಪವೂ ಕಾಣಲಿಲ್ಲ. ಕಾಡನ್ನೂ ಹೇಗೋ ದಾಟಿ ಹೋಗಿಬಿಡಬಹುದು ಎಂದುಕೊಂಡ ಅವಳಿಗೆ ಈಗ ಬಂದ ಸಂಕಷ್ಟಕ್ಕೆ ಕಣ್ಣುಗಳು ತುಂಬಿಕೊಂಡವು. ಹಿಂದೆ ಜನ ಮುಂದೆ ನದಿ, ದಿಕ್ಕು ತೋಚದ ಚಿಟ್ಟಿ ತನ್ನ ಕೈಲಿರುವ ಎಲ್ಲಾ ಉಂಗುರಗಳನ್ನು ಒಂದೊಂದೇ ತೆಗೆದು ನೀರಿಗೆ ಎಸೆಯುತ್ತಾ ಜನರ ಹತ್ತಿರ ಬರುವ ಶಬ್ದಕ್ಕೆ ಬೆಚ್ಚುತ್ತಾ ನಿಂತಳು. ನೋಡ ನೋಡತ್ತಿದ್ದಂತೆ ಜನ ಹತ್ತಿರ ಹತ್ತಿರಕ್ಕೆ ಬರತೊಡಗಿದರು- ಕೆದಕಿಟ್ಟ ಜೇನಿನ ಹುಟ್ಟಿಯಿಂದ ಜೇನುಹುಳಗಳು ಎದ್ದಂತೆ. ಇಲ್ಲ ಇವರ್ಯಾರು ತನ್ನ ಬಿಡಲ್ಲ ತಾನು ಈಗ ಇವರಿಗೆ ಬಲಿಯಾಗಲೇಬೇಕು ಅನ್ನಿಸಿದ ತಕ್ಷಣ ಈಜುಬಾರದ ತಾನು ದೃಢವಾದ ಮನಸ್ಸಿನಿಂದ ದುಡುಮ್ಮನೆ ನದಿಗೆ ನೆಗೆದೇ ಬಿಟ್ಟಳು. ಬಿದ್ದ ರಭಸಕ್ಕೆ ಮುಳುಗುತ್ತಾ, ಸ್ವಲ್ಪ ದೂರಕ್ಕೆ ಮತ್ತೆ ತೇಲುತ್ತಾ. . . ಹಾಗೆ ಹಾಗೇ ಮುಂದೆ ಸಾಗುತ್ತಾ ಚಿಟ್ಟಿ ನೀರಲ್ಲಿ ಮುಳುಗಿದಳು. ದಡದ ಜನರ ಮಾತು ಶಬ್ದ ಎಲ್ಲವೂ ನಿಧಾನವಾಗಿ ಕೇಳಿಸದೇ ಹೋಯಿತು. ಅರೆ ತಾನು ಸತ್ತಿಲ್ಲ ಅಂದರೆ . . . ತನಗೆ ಇಂಥಾ ಕನಸು ಯಾಕೆ ಬಿತ್ತು? ತಾನು ಎಂದಾದರೂ ಅಂಥಾ ಉಂಗುರಗಳಿಗೆ ಆಸೆ ಪಟ್ಟಿದ್ದೆನೇ? ಅದರ ಬಗ್ಗೆ ಯೋಚನೆ ಕೂಡಾ ಮಾಡಿರಲಿಲ್ಲವಲ್ಲ? ಯೋಚನೆಗೆ ಬಾರದ್ದು ಯಾಕೆ ಕನಸಲ್ಲಿ ಬಂದಿತು? ತನ್ನನ್ನು ಎಲ್ಲರೂ ಸೇರಿ ಮುಳುಗಿಸಲಿಕ್ಕೆ ನೋಡ್ತಾ ಇದಾರಾ? ಯಾವುದೂ ಗೊತ್ತಾಗದೆ ಕಣ್ಣುಗಳನ್ನು ಅಗಲಿಸಿದಳು.

‘ನಾಳೆ ನಿನ್ನ ನೋಡೋಕ್ಕೆ ಬರ್ತಾ ಇದಾರೆ ಚಿಟ್ಟಿ’ ಅಮ್ಮ ನಿರ್ದಾಕ್ಷಿಣ್ಯವಾಗಿ ಹೇಳಿದಾಗ ಇಂಥಾ ದಿನ ತನ್ನ ಬದುಕಲ್ಲಿ ಹೀಗೆ ಬರುತ್ತೆ ಅಂತ ಅಂದುಕೊಳ್ಳದ ಚಿಟ್ಟಿ ಕಂಗಾಲಾದಳು. ‘ಬಿಡೇ ನೋಡ್ಕೊಂಡ್ ಹೋಗ್ಲಿ ಆಮೇಲಿಂದು ತಾನೆ ಮಾತು’ ಎಂದಳು ನಕ್ಕತ್ತು. ‘ಒಪ್ಕೊಂಡ್ಮೇ ಲೆ ಏನೂಂತ ಮಾತಾಡೋಕ್ಕಾಗುತ್ತೆ ಅದಕ್ಕೆ ನೋಡೋದೆ ಬೇಡ ಅನ್ನೋದೆ ಸರಿ ಅನ್ಸುತ್ತೆ’ ಎಂದಳು ಸರೋಜಾ. ಭಾರತಿ ಮಾತಾಡದೆ ಕೂತಳು. ಅವಳ ಮೌನಕ್ಕೆ ಅರ್ಥ ಏನಿರಬಹುದು ಎನ್ನುವ ಕುತೂಹಲದಲ್ಲಿ ಕೂತಳು ಚಿಟ್ಟಿ. ನಿಟ್ಟುಸಿರಿಡುತ್ತಾ ಭಾರತಿ ಹೇಳಿದಳು, ‘ಚಿಟ್ಟಿ ನೀನು ಈಗ ಓಡಿ ಹೋದ್ರೆ ಕನಸಲ್ಲಿ ಆದಂತೆ ನದಿಗೆ ಬೀಳ್ತೀಯ, ಇಲ್ಲೇ ಇದ್ದರೆ ಈ ಜನ ನಿನಗೆ ಮದುವೆ ಮಾಡದೆ ಬಿಡಲ್ಲ. ಅದಕ್ಕೆ ಸುಮ್ನೆ ನದಿಗೆ ಬಿದ್ದು ಮೀನು ಮೊಸಳೆಗಳು ತಿಂದು ಬರೀ ಮೂಳೆ ಆಗೋದಕ್ಕಿಂತ ಹೀಗೆ ಮದುವೆ ಆಗೋದೇ ವಾಸಿ’ ಎಂದು ಬಿಟ್ಟಳು. ಮೂಳೆಚಕ್ಕಳವಾದ ತನ್ನ ದೇಹವನ್ನು ಮತ್ತೆ ಮತ್ತೆ ನೆನಪಿಸ್ಕೊಂಡ ಚಿಟ್ಟಿ ಅಸಹಾಯಕಳಾದಳು. ಅಮ್ಮ ಚಿಟ್ಟಿಗೆ ಸೀರೆಯನ್ನು ತೆಗೆದಿಟ್ಟಿದ್ದಳು. ಸೀರೆ ಉಡುವುದು ತನಗೆ ಯಾವಾಗಲೂ ಸಂತೋಷವೇ ಆದರೂ ತಾನು ಹೀಗೆ ಸೀರೆ ಉಟ್ಟು ಬಂದವರ ಎದುರು ಕೂರುವುದು ಅವಳ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ತಾನು ಅವನ ಕಾಲುಗಳನ್ನು ಎಂದೂ ಒತ್ತುವುದಿಲ್ಲ. ಅವನು ಕೇಳಿದ ಹಾಗೆ ಕಾಫಿ ತಂದುಕೊಡುವುದಿಲ್ಲ, ಬದಲಿಗೆ ಅವನು ತನ್ನ ಮುಂದೆ ಕೈ ಕಟ್ಟಿ ನಿಲ್ಲಬೇಕು. ಇದೆಲ್ಲಾ ಆಗುವ ಮಾತೇ! ಎಂದುಕೊಂಡಳು.

‘ಅವ್ರೇ ಓದಿಸಿಕೊಳ್ತಾರೆ ರೀ ಇದಕ್ಕೆಲ್ಲಾ ನಾವೂ ತಲೆ ಕೆಡಿಸಿಕೊಳ್ತ ಇಲ. ಮುಖ್ಯ ಅವರು ಒಪ್ಪಿಬಿಟ್ಟರೆ ಅದು ನಮ್ಮ ಚಿಟ್ಟಿ ಅದೃಷ್ಟ’ ಅಮ್ಮ ಅಕ್ಕ ಪಕ್ಕದ ಮನೆಯವರ ಜೊತೆ ಮಾತಾಡುವುದನ್ನು ಕೇಳಿದ್ದಳು. ಅದೃಷ್ಟ ತಾನು ಒಪ್ಪಿದರೆ ಅವನಿಗೆ ಎಂದುಕೊಂಡಳಾದರೂ ಅದನ್ನು ಅಮ್ಮನ ಎದುರೂಗೆ ಹೇಳುವುದಾದರೂ ಹೇಗೆ? ಹಾಗೆ ಹೇಳಿಬಿಟ್ಟರೆ ತನ್ನನ್ನು ಅವಳು ಉಳಿಸಲಾರಳು. ‘ಅಮ್ಮ ಈ ಸೀರೆಯನ್ನು ನಾನು ಉಡಲ್ಲ’ ಚಿಟ್ಟಿಯ ಮಾತನ್ನು ಕೇಳಿ ಅಮ್ಮನ ಮುಖದಲ್ಲಿ ಕೋಪ ಉಕ್ಕಿ ಬಂತು. ಅಪ್ಪ ‘ಅಮ್ಮನಿಗೆ ಕೋಪ ಬರಿಸಬೇಡ’ ಎಂದು ಸಮಾಧಾನಿಸಿದ. ಎಲ್ಲವೂ ಸರಿಯಾಯಿತು. ಪುಟ್ಟ ಗೌರಿಯ ಹಾಗೆ ಅಲಂಕಾರ ಮಾಡಿಕೊಂಡ ಚಿಟ್ಟಿ ಒಲ್ಲದ ಮನಸ್ಸಿನಿಂದಲೇ ಕನ್ನಡಿಯಲ್ಲಿ ನೋಡಿಕೊಂಡಳು. ದಂಗಾದಳು, ಅವಳಿಗೆ ನಿಜಕ್ಕೂ ತಾನು ಸುಂದರಿ ಅನ್ನಿಸಿತು. ಹುಡುಗನ ಕಡೆಯವರು ಬಂದರು, ಹುಡುಗ ಚೆನ್ನಾಗಿದ್ದಾನೆ, ಒಂದು ರಾಶಿ ಹೂವು ಹಣ್ಣು ತಂದಿದ್ದಾರೆ, ಕಾರಲ್ಲಿ ಬಂದಿದ್ದಾರೆ, ಹುಡುಗನ ತಾಯಿಯ ಮೈಮೇಲೆ ಒಂದು ಹೇರು ಬಂಗಾರ ಇದೆ, ಒಳಗೂ ಹೊರಗೂ ಓಡಾಡುತ್ತಾ ಅಮ್ಮ, ಪುಟ್ಟಿ ಅಜ್ಜಿ ಎಲ್ಲಾ ವರದಿ ಒಪ್ಪಿಸಿದರು.

ಚಿಟ್ಟಿ ಮಾತ್ರ ಯಾವುದಕ್ಕೂ ಕಮಕ್ ಕಿಮಕ್ ಎನ್ನಲಿಲ್ಲ. ಅವಳಿಗೆ ಇದ್ದಕ್ಕಿದ್ದ ಹಾಗೇ ಆರೋಗ್ಯ ನೆನಪಾದಳು. ಅರೆ ತಾನು ನನ್ ಆದರೂ ಸರಿಯೇ ಅವಳ ಜೊತೆ ಇದ್ದುಬಿಡಬೇಕಿತ್ತು ಎಂದುಕೊಂದಳು. ಅಸಹಾಯಕತೆ ಅವಳ ಕಣ್ಣಲ್ಲಿ ನೀರಾಡಿಸಿತು. ಗಂಡಿನ ಕಡೆಯವರು ಬಂದು ಕುಳಿತ ಚಿಟ್ಟಿಯನ್ನು ಮಾತಾಡಿಸುತ್ತಲೇ ಇದ್ದರು. ಹುಡುಗ ಕೂಡಾ ಚಿಟ್ಟಿಯನ್ನು ಪದೇ ಪದೇ ನೋಡುತ್ತಿದ್ದ. ‘ಏನಪ್ಪಾ ಹುಡುಗಿ ಇಷ್ಟ ಆದಳಾ? ಹಾಗ್ ನೋಡ್ತಾ ಇದೀಯಾ?’ ಯಾರೋ ಅವನನ್ನು ರೇಗಿಸಿದರು. ಮನೆಯ ತುಂಬಾ ಕಲರವ ತುಂಬಿತು. ನಡುವೆಯೇ ಚಿಟ್ಟಿ ತೊದಲಿದಳು ‘ನಂಗೆ ಈಗ ಮದುವೆ ಬೇಡ’ ಅವಳ ಮಾತು ಯಾರಿಗೂ ಕೇಳಲಿಲ್ಲ. ನಗುವಿನ ತುದಿಗೆ ತನ್ನ ಪುಟ್ಟ ಧ್ವನಿ ಅಡಗಿ ಹೋಗುತ್ತೆ ಅನ್ನಿಸಿ ಕಂಗಾಲಾಗಿ ಮತ್ತೊಮ್ಮೆ ‘ನನಗೆ ಈ ಮದುವೆ ಬೇಡ’ ಎಂದಿದ್ದಳು ಜೋರಾಗಿ. ಅದು ಎಲ್ಲರ ಕಿವಿಗೂ ಬಿದ್ದು ಎಲ್ಲರೂ ಕ್ಷಣ ಕಾಲ ಸ್ಥಬ್ದರಾದರು. ‘ನಾನು ಓದಬೇಕ್ರೀ ಓದಿ ದೊಡ್ದ ಕೆಲಸಕ್ಕೆ ಸೇರಬೇಕು, ಅದೇ ನನ್ನ ಆಸೆ’ ಎಂದುಬಿಟ್ಟಳು. ಹಾಗೇ ಹೇಳುವಾಗ ಅವಳ ಧ್ವನಿಯಲ್ಲಿ ದೃಢತೆ ಹೇಗೂ ಎದ್ದು ಕಂಡಿತ್ತು. ಪುಟ್ಟ ಚಿಟ್ಟೆ ತನ್ನ ರೆಕ್ಕೆಗಳನ್ನು ಅಗಲಿಸಿ ಮೊದಲ ಬಾರಿಗೆ ಹಾರುವುದನ್ನು ಕಲಿತಿತ್ತು.

(ಮುಂದುವರಿಯುವುದು…)

‍ಲೇಖಕರು avadhi

March 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: