ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಕಾಲರ್ ಮೇಲಿನ ಕೂರೆಯೂ ಮತ್ತು ಇಂಗ್ಲೀಷ್ ವ್ಯಾಮೋಹವೂ

(ಇಲ್ಲಿಯವರೆಗೆ…)

ಚೀಲದ ಅಡಿಯಿಂದ ಪುಸ್ತಕ ಹೊರಗೆ ಬರುತ್ತಿದ್ದರೂ ಅದನ್ನು ಗಮನಿಸದೆ ಹೆಗಲಿಗೆ ಹಾಕಿಕೊಂಡ ಚಿಟ್ಟಿಗೆ ಅಜ್ಜಿ ಅಡುಗೆ ಮನೆಯಲ್ಲಿ ಒಂದೇಸಮನೆ ವಟಾ ವಟಾ ಅಂತಿದ್ದದ್ದ್ದು ಕೇಳುತ್ತಿತ್ತು. ಅಜ್ಜಿ ಬೆಳಗಿನಿಂದ ಚಿಟ್ಟಿಯನ್ನು ಮಾತೂ ಆಡಿಸಿರಲಿಲ್ಲ. ಅವಳ ಮಾತನ್ನ ಕೇಳಿದರೆ ಯಾಕೋ ತುಂಬಾ ನೋವಲ್ಲಿದ್ದಾಲೆ ಅನ್ನಿಸುತ್ತಿತ್ತು . ಸ್ಕೂಲಿಗೆ ಹೊರಟ ಚಿಟ್ಟಿಯನ್ನ ತಡೆದು ಅಮ್ಮಾ `ದ್ಯಾಮಿಯ ಮನೆ ಕಡೆಗ್ ಹೋಗಬೇಡ ಅಲ್ಲಿ ದೊಡ್ದ ಗಲಾಟೆ ಆಗ್ತಾ ಇದೆ. ಅವಳನ್ನು ಮನೆಯಿಂದ ಹೊರಗೆ ತಂದು ಹಾಕಿದ್ದಾರಂತೆ. ಆ ಗೋವಿಂದೂಗೆ ಹೇಳೋರು ಕೇಳೋರು ಯಾರೂ ಇಲ್ಲ. ಆಸ್ಪತ್ರೆಗೆ ಸೇರಿಸ್ದೆ ಮನೇಲಿ ಇಟ್ಕೊಂಡ್ ಕೂತಿದ್ದಾನೆ’ ಎಂದಿದ್ದಳು.
ನಕ್ಕತ್ತು ಹಣಕಿ `ಇನ್ನೂ ಬರಲ್ವೇನೆ ಬೆಲ್ಲ್ ಹೊಡೆದ ಮೇಲೆ ನಮ್ಮನ್ನ ಪ್ರೇಯ್ರಿಗೆ ಯಾರೂ ನಿಲ್ಲಿಸಲ್ಲ’ ಎಂದಿದ್ದಳು. ಬೆಲ್ಲು. ಪ್ರೇಯರ್ರು ಹೀಗೆ ಕೆಲ ಪದಗಳನ್ನ ಬಿಟ್ಟರೆ ಆ ಸ್ಕೂಲಿನ ಯಾವ ಮಕ್ಕಳಿಗೂ ಬೇರೆ ಇಂಗ್ಲೀಷು ಪದ ಗೊತ್ತಿರಲಿಲ್ಲ. ಕೆಲವೊಮ್ಮೆ ಪ್ರೇಯರ್ರು ಅನ್ನೋದನ್ನ ಪೂರ್ಣ ಉಚ್ಚರಿಸುವುದು ಕಷ್ಟವಾಗಿ ಪ್ರೇರು ಅಂತ ಅದನ್ನ ತುಂಡು ಹಾಕಿಕೊಂಡು ಹೇಳುತ್ತಿದ್ದುದೂ ಉಂಟು. ಇಂಗ್ಲೀಷ್ ತೆಗೆದುಕೊಳ್ಳುತ್ತಿದ್ದ ಚಂದ್ರಮ್ಮ ಟೀಚರ್ಗೆ ಸ್ವತಃ ಇಂಗ್ಲೀಷ್ ಬರದೇ ಇದ್ದಿದ್ದು ಇದಕ್ಕೆ ಕಾರಣವಿದ್ದರಬಹುದು ಎನ್ನುವುದು ಊರವರ ಅನ್ನಿಸಿಕೆಯಾಗಿತ್ತು. ಆದರೆ ಮಿಲ್ಟ್ರಿಯಲ್ಲಿದ್ದ ಆಜಾನುಬಾಹು ಆಳು ಮೋನಪ್ಪ ಅವರನ್ನ ನೆನೆದು ಚಂದ್ರಮ್ಮ ಟೀಚರ್ ಮುಂದೆ ಯಾರೂ ಬಾಯಿ ಬಿಡುತ್ತಿರಲಿಲ್ಲ.
ಅದೆಲ್ಲಾ ಸರಿ. ಅಮ್ಮಾ ಯಾಕೆ ತನ್ನ ದ್ಯಾಮಕ್ಕನ ಮನೆಯ ಕಡೆಗೆ ಹೋಗೋದು ಬೇಡ ಅಂದಳು? ಎನ್ನುವ ಪ್ರಶ್ನೆ ಅವಳ ತಲೆಯಲ್ಲಿ ಗಿರಕಿ ಹೊಡೆಯುವಾಗಲೇ ಚಿದಂಬರ ಮನೆಗೆ ಬಂದಿದ್ದ. ಅವನನ್ನು ನೋಡಿದ್ದೆ ಅಮ್ಮನಿಗೆ ಸ್ವಲ್ಪ ಉಸಿರು ಬಂದ ಹಾಗಾಗಿತ್ತು. ಚಿಟ್ಟಿಯನ್ನೂ ಪುಟ್ಟಿಯನ್ನೂ ಚಿದಂಬರನಿಗೆ ಒಪ್ಪಿಸುತ್ತಾ ವಿಷ ಕುಡಿದ ದ್ಯಾಮಿಯನ್ನು ಹೊರಗೆ ಹಾಕಿದ್ದಾರಂತೆ. ಉಳಿತಾಳೋ ಇಲ್ವೋ ಮಕ್ಕಳು ಅದನ್ನ ನೋಡೋದು ಬೇಡ. ಇಬ್ಬರನ್ನೂ ಬೇರೆ ದಾರಿಯಲ್ಲಿ ಸ್ಕೂಲಿಗೆ ಸೇರಿಸು’ ಎಂದು ಸಾಗಹಾಕಿದ್ದಳು.
`ಇದು ಹತ್ತಿರದ ದಾರಿ’ ಎಂದು ನಕ್ಕತ್ತು ಸಾರಿ ಹೇಳುತ್ತಿದ್ದರೂ ಹತ್ತು ವರ್ಷಕ್ಕೆ ದೊಡ್ದವನಾದ, ಹುಟ್ಟಿದಾಗಿನಿಂದಲೇ ಊರನ್ನು ಅರಗಿಸಿ ಕುಡಿದಿದ್ದ ಚಿದಂಬರ ಇನ್ನೊಂದು ದಾರಿಯಿಂದಲೇ ಎಲ್ಲರನ್ನೂ ಕರೆದುಕೊಂಡು ಸ್ಕೂಲಿಗೆ ಹೊರಟ. `ಪ್ರೇಯ್ರಿಗೆ ಹೊತ್ತಾಗುತ್ತೆ’ ಎನ್ನುತ್ತಾ ಗೊಣಗುತ್ತಿದ್ದ ನಕ್ಕತ್ತು ಮಾತು ಅವನ ಕಿವಿಗೆ ಬೀಳಲಿಲ್ಲ. `ಸುಮ್ನೆ ತಲೆ ತಿನ್ನಬೇಡಿ ಎತ್ತೂಸ್ ಹೂಡೀ ನೆಲವನ್ನ ಹದ ಮಾಡಿ ಬೀಜಾಸ್ನ ನಾಟೀಸ್ ಮಾಡ್ಬೆಕು . ನಿಮ್ಮಿಂದ ಎಲ್ಲದಕ್ಕು ಲೇಟ್ಸ್ ಆಗ್ತಾ ಇದೆ ಬೇಗ ನಡೀಬಾರ್ದಾ? ಅದೇನ್ ತಲೆ ತಿಂತೀರ’ ಎಂದಾಗ ಅವನನ್ನು ಎಲ್ಲರೂ ಅಚ್ಚರಿಯಿಂದ ನೋಡಿದರು. ತಾನು ಮಾತಾಡಿದ್ದು ಇಂಗ್ಲೀಷ್ ಅಂತ ಗೊತ್ತಾಗಲಿಲ್ವಾ ಎನ್ನುವಂತೆ ನೋಡಿದ.
ಸುಮ್ಮನಿರದ ನಕ್ಕತ್ತು `ಅಣ್ಣ ನೀನ್ ಮಾತಾಡಿದ್ದು ಯಾವ ಭಾಷೆ?’ ಎಂದು ಕೇಳಿದ್ದೆ ತಡ, ಅದಕ್ಕೆ ವಿವರಣೆ ನೀಡತೊಡಗಿದ. ತನ್ನ ಕೈಗಳನ್ನ ಅಷ್ಟಗಲಕ್ಕೆ ಚಾಚಿ `ತುಂಬಾ ಇದ್ರೆ ಇಂಗ್ಲೀಷಲ್ಲಿ ಏನನ್ನ ಸೇರುಸ್ತಾರೆ ಹೇಳು?’ ಎಂದಾಗ ಚಿಟ್ಟಿ ತನಗೆ ಗೊತ್ತು ಎನ್ನುವಂತೆ `ಎಸ್ ಸೇರುಸ್ತಾರೆ’ ಎಂದಳು. `ಹಾಗಾದ್ರೆ ನಾನು ಮಾತಾಡಿದ್ದು ಇಂಗ್ಲೀಷ್ . . . . . ಇಂಗ್ಲೀಷ್ ಅನ್ನೋದು ಗೊತ್ತಾಗ್ಲಿಲ್ವ ದದ್ದಮ್ಮಗಳಾ? ಅದೇನ್ ಸ್ಕೂಲ್ಗ್ ಹೋಗ್ತಾವೋ’ ಎಂದಾಗ ಚಿಟ್ಟಿ ಕಿಸಕ್ಕ್ ಎಂದು ನಕ್ಕಿದ್ದಳು. ಯಾಕೆ ನಕ್ಕಿದ್ದು ಎಂದು ಚಿದಂಬರ ಇಷ್ಟಗಲ ಕಣ್ಣನ್ನ ಬಿಟ್ಟು ರೇಗಿದಾಗ `ಇಲ್ಲ ಅಣ್ಣ ಕನ್ನಡದ ಜೊತೆ ಇಂಗ್ಲೀಷ್ ಅಕ್ಷರಾನ ಸೇರಿಸ್ಬಾರ್ದು ‘ ಎಂದು ಪೇಟೇಲಿ ಓದ್ತಾ ಇದ್ದ ಅತ್ತೆ ಮಗ ತ್ಯಾಗಣ್ಣ ಹೇಳಿದ್ದನ್ನ ನೆನೆಸಿಕೊಂಡು ಹೇಳಿದ್ದಳು. `ಓ ಹೋ ನಂಗೇ ಹೇಳೋಕ್ ಬಂದ್ಲು ಕನ್ನಡದ ಪದಗಳ ಜೊತೆ ಇಂಗ್ಲೀಶ್ ಪದ ಸೇರಿಸಲ್ವಾ ಅಕ್ಷರ ಯಾಕೆ ಸೇರಿಸಬಾರ್ದು? ನಿನಗೆ ಇದೆಲ್ಲಾ ಗೊತ್ತಾಗಲ್ಲ ಸುಮ್ನೆ ನಡೀ’ ಎಂದು ತನ್ನ ಮರ್ಯಾದೆ ಹೋಗದಂತೆ ಬಾಯಿ ಮುಚ್ಚಿಸಿದ. ಕಿಲಾಡಿ ನಕ್ಕತ್ತು `ಅಣ್ಣ ಅಗೋ ನೋಡು ಕುನ್ನೀಸ್ ‘ಎಂದಳು. ಅರ್ಥವಾಗದೆ `ಕುನ್ನೀಸಾ ಏನದು?’ ಎಂದ ಚಿದಂಬರನಿಗೆ ಸುಳಿದಾಡುತ್ತಿದ್ದ ಪುಟ್ಟ ನಾಯೀ ಮರಿಗಳನ್ನ ತೋರಿಸಿದ್ದಳು. ಅವಮಾನ ಮುಖಕ್ಕೇರಿದಂತೆ ಕೆಂಪಾಗಿಸಿಕೊಂಡ ಚಿದಂಬರ `ನಡೀರೇ ಹಡಬೆಗಳೇ ‘ ಎನ್ನುತ್ತ ಬೈದಿದ್ದ.

ಅಂತೂ ಸ್ಕೂಲನ್ನ ಮುಟ್ಟುವಹೊತ್ತಿಗೆ ಪ್ರೇಯರ್ರು ಮುಗಿದು ಪಿಟಿ ಟೀಚರ್ರು ಮುನಿಯಪ್ಪ ಬೆತ್ತವನ್ನ ಆಡಿಸುತ್ತಾ ನಿಂತಿದ್ದರು. ಚಿದಂಬರನ ಮಾತುಗಳು ಚಿಟ್ಟಿ, ನಕ್ಕತ್ತುವಿನ ಮೊರೆ ಯಾವುದೂ ಅವರ ಕಿವಿ ತಲುಪಲಿಲ್ಲ. ಬೆಳಗಿನಿಂದ ಯಾರಿಗೂ ಹೊಡೀಲೇ ಇಲ್ವಲ್ಲ್ ಎನ್ನುವ ಕೊರಗನ್ನ ನೀಗಿಸಿಕೊಳ್ಳುವವರಂತೆ ಮುನಿಯಪ್ಪ ಮಕ್ಕಳ ಕುಂಡೆಗೆ ನಾಕು ನಾಕು ತಟ್ಟಿದ್ದರು. ಚಿಕ್ಕವಳು ಅನ್ನೋ ಕಾರಣಕ್ಕೆ ಪುಟ್ಟಿಗೆ ವಿನಾಯಿತಿ ಸಿಕ್ಕಿತ್ತು. ಮಣೆಯ ಮೇಲೆ ಕುಳಿತುಕೊಳ್ಳಲು ಆಗದೆ ಚಿಟ್ಟಿ, ನಕ್ಕತ್ತು ಅವತ್ತೆಲ್ಲಾ ಒದ್ದಾಡಿಬಿಟ್ಟಿದ್ದರು.
ಮಧ್ಯಾಹ್ನ ಊಟದ ಹೊತ್ತಿಗೆ ತಂದಿದ್ದ ಬುತ್ತಿಯನ್ನು ಬಿಚ್ಚಿಡೋ ವೇಳೆಗೆ ದ್ಯಾಮಕ್ಕನ ವಿಷಯವೂ ಬಂದಿತ್ತು ಗೋವಿಂದು ಇನ್ನೊಂದ್ ಮದ್ವೆ ಆಗ್ತೀನಿ ಅಂದಿದ್ದಕ್ಕೆ ದ್ಯಾಮಕ್ಕಾ `ವಿಷ ತಗೊಂಡು, ಸತ್ತು ಗಾಳಿಯಾಗಿಯಾದ್ರೂ ನೀನವಳ ಜೊತೆ ಸಂಸಾರ ಮಾಡೋದನ್ನ ತಡೀತೀನಿ ಅಂದ್ಲಂತೆ’ ಎನ್ನುವ ಎಲ್ಲಾ ಸುದ್ದಿಗಳೂ ಬಂದವು. `ಅಯ್ಯಾ ಇಷ್ಟಕ್ಕೆ ಯಾಕ್ ದ್ಯಾಮಕ್ಕ ಜೀವ ತಕ್ಕೊಳೋದು? ಅವಳೂ ಇನ್ನೊಂದ್ ಮದ್ವೆ ಆಗೋದು’ ಎಂದಳು ಚಿಟ್ಟಿ ಅಮಾಯಕತೆಯಲ್ಲಿ. `ಛೇ ಹಾಗೆಲ್ಲಾ ಮಾತಾಡಬಾರದು ಹೆಣ್ಣಿಗೆ ಒಂದೇ ಸಲ ಮದುವೆ ಎರಡನೇ ಸಲ ಇಲ್ಲ’ ಎಂದು ಗಂಭೀರವಾಗಿ ಸರೋಜ ಹೇಳುವಾಗ ಚಿಟ್ಟಿಗೆ ಇದ್ದಕ್ಕಿದ್ದ ಹಾಗೆ ಸರೋಜ ದೊಡ್ದವಳಾಗಿ ಕಂಡಿದ್ದಳು. ಹೋದ ತಿಂಗಳಲ್ಲಿ ವಾರ ಬರದೆ ಎಲ್ಲರ ಬಾಯಲ್ಲಿ `ದೊಡ್ಡವಳಾದಳು’ ಎಂದು ನಲಿದಾಡಿದ್ದಳು. ಮತ್ತೆ ಸ್ಕೂಲಿಗೆ ಬರತೊಡಗಿದ ಅವಳನ್ನ ನೋಡಿದ ಚಿಟ್ಟಿಗೆ ಅವಳು ಇದ್ದ ಹಾಗೆ ಇದ್ದಿದ್ದನ್ನ ನೋಡಿ ಅಚ್ಚರಿ ಕಾಡಿತ್ತು. ಕೊಬ್ಬರಿ ಬೆಲ್ಲವನ್ನ ತನ್ನ ಪಾಟೀಚೀಲದಿಂದ ತೆಗೆದ ಸರೋಜಾ ಅದನ್ನ ಎಲ್ಲರಿಗೂ ಹಂಚಿದಳು.
ಸರೋಜಾ `ನೀನ್ ಇರೋ ಹಾಗೆ ಇದೀಯ ಎಲ್ಲಾ ದೊಡ್ದವಳಾದಳು ಅಂದ್ರಲ್ಲಾ’ಎನ್ನುವ ಚಿಟ್ಟಿಯ ಮಾತಿಗೆ ಸರೋಜ ನಾಚಿಕೆ ಪಟ್ಟು `ಇನ್ನ್ ಸ್ವಲ್ಪ ದಿನ ನಿಂಗೂ ಗೊತ್ತಾಗುತ್ತೆ’ ಎಂದಿದ್ದಳು. ಊರಿಗೆ ದೊಡ್ದ ಮನುಷ್ಯ ಎನ್ನಿಸಿಕೊಂಡ ಮಿಲ್ ರಾಮೇಗೌಡರ ಐವರು ಮಕ್ಕಳಲ್ಲಿ ಮೂರನೆಯವಳಾದ ಸರೋಜಾ ಎನ್ನುವ ಈ ಕೂಸು ನಿಜವಾಗಿ ದೊಡ್ದವಳೇ ಆಗಿರಬೇಕು. ಇಲ್ಲದಿದ್ದರೆ ಈ ಗಂಭೀರತೆ ಹೇಗೆ ಸಾಧ್ಯವಾದೀತು ಎಂದು ಚಿಟ್ಟಿ ಲೆಕ್ಕಾಚಾರ ಹಾಕಿದಳು. ಅವಳ ತಲೆಯಲ್ಲಿ `ನೀನೂ ದೊಡ್ಡವಳಾಗ್ತೀಯ’ ಅನ್ನುವ ಮಾತು ಗುಯ್ಯ್ಗುಟ್ಟಿ `ನಾನ್ ಹೇಗ್ ದೊಡ್ದವಳಾಗ್ತೀನಿ?ಇಲ್ಲ ಬಿಡು’ ಎಂದು ಆ ಸಾಧ್ಯತೆಯನ್ನೆ ತಳ್ಳಿ ಹಾಕಿದ್ದಳು. ಅಷ್ಟರಲ್ಲಿ ಪಾರ್ವತಿಯ ಹರಿದ ಕಾಲರ್ನ ಮೇಲೆ ಕೂರೆಯೊಂದು ಹೋಗುತ್ತಿತ್ತು . ಅದನ್ನ ನೋಡಿದ ಅಂಬುಜ `ನಿಲ್ಲೆ ‘ಎನ್ನುತ್ತಾ ಕೂರೆಯನ್ನ ತೆಗೆಯುವಾಗ ಕಿಲಾಡಿ ಕೂರೆ ಅವಳ ಕೈಯ್ಯಿಂದ ತಪ್ಪಿಸಿಕೊಂಡು ಕೆಳಗೆ ಬಿದ್ದುಬಿಟ್ಟಿತು. ಎಲ್ಲರೂ ಅದನ್ನೇ ಬಗ್ಗಿ ನೋಡುವಾಗ `ಏನೇ ಅದು?’ ಎನ್ನುವ ಪಾರ್ವತಿಯ ಪ್ರಶ್ನೆಗೆ `ಕೂರೆ ಕಣೆ’ ಎಂದಳು ಅಂಬುಜಾ. ಆ ಮಾತನ್ನ ಕೇಳಿದವಳೇ ಅಪಚಾರ ಆಯ್ತು ಎನ್ನುವ ಹಾಗೇ `ಕೂರೇನಾ ನಾವು ಬ್ರಾಹ್ಮಣರು ದಿನಾ ಸ್ನಾನ ಮಾಡ್ತೀವಿ, ನಮ್ಮ ಮೈ ಮೇಲೆ ಕೂರೆ ಇರೋಕ್ಕೆ ಸಾಧ್ಯಾನಾ?’ ಎನ್ನುತ್ತಾ ಅಂಬುಜನ ಹತ್ರ ಜಗಳಕ್ಕೆ ನಿಂತಳು. ಜಗಳ ಎಲ್ಲಿ ಎಲ್ಲಿಗೋ ಮುಟ್ಟಿ ಬ್ರಾಹ್ಮಣ ಶೂದ್ರರ ಮಹಾ ಕದನವೇ ಅಲ್ಲಿ ನಡೆದು ಹೋಗಿತ್ತು. ಚಿಟ್ಟಿ ಮಾತ್ರ ಪಾರ್ವತಿಗೆ ಆಗುತ್ತಿದ್ದ ತೇಜೋಭಂಗವನ್ನ ನೋಡಿ `ಈ ಹಾಳು ಕೂರೆಗೆ ಬ್ರಾಹ್ಮಣ ಶೂದ್ರ ಅಂತ ಯಾಕೆ ಗೊತ್ತಾಗಲ್ಲ’ ಎನ್ನುತ್ತಾ ಯೋಚಿಸುತ್ತಾ ನಿಂತಿದ್ದಳು.
ಇಷ್ಟು ಹೊತ್ತಿಗೆ ದ್ಯಾಮಕ್ಕಾ ಸತ್ತಿರಬೇಕು ಎನ್ನುವ ಲೆಕ್ಕಾಚಾರದಲ್ಲಿ ಮನೆಗೆ ಬರುವಗ ದಾರಿಯಲ್ಲಿ ಚಿಟ್ಟಿಗೆ ದ್ಯಾಮಕ್ಕನಿಗೆ ಸಂಚಾರಿ ಆಸ್ಪತ್ರೆಯವರು ವಾಂತಿ ಮಾಡಿಸಿ ವಿಷವನ್ನು ಹೊರಗೆ ಕಕ್ಕಿಸಿದ್ದು ಎಲ್ಲಾ ಗೊತ್ತಾಗಿತ್ತು. ದ್ಯಾಮಕ್ಕ ಬದುಕಿ ಬಂದರೆ ಮಾತ್ರ ಗೋವಿಂದ ಇನ್ನೊಂದು ಮದುವೆ ಆಗಲಾರ ಎನ್ನುವ ಊರವರ ಲೆಕ್ಕಾಚಾರದ ಎದುರು ದ್ಯಾಮಕ್ಕನೇ ಗೋವಿಂದೂಗೆ ಇನ್ನೊಂದು ಮದುವೆ ಮಾಡಿದ್ದಳು. ಸವತಿಯನ್ನು ತನ್ನ ಮನೆಯಲ್ಲೆ ಇರಿಸಿಕೊಂಡು ಅದೇ ಗಂಡನ ಜೊತೆ ಸಂಸಾರವೂ ಮಾಡಿದಳು. ಅವಳು ಈಗ ಅಜ್ಜಿಯ ಹತ್ತಿರ ಬಂದು ಯಾವ ದೂರನ್ನೂ ಹೇಳುತ್ತಿರಲಿಲ್ಲ. ಬದಲಿಗೆ `ಏನ್ ಮಾಡಿದ್ರೇನು ಗಂಡಾನೇ ಎಲ್ಲಾ ಅಲ್ವಾ? ಅವನ್ನೇ ಕಳಕೊಂಡು ನಾನ್ ಹೇಗೆ ಜೀವನ ಮಾಡ್ತಾ ಇದ್ನಮ್ಮಾ? ಏನೋ ದೇವ್ರು ಇವಳಿಗಾದ್ರೂ ಒಂದ್ ಕೂಸನ್ನ ಕೊಟ್ರೆ ಕೊನೆಗಾಲಕ್ಕೆ ಅಡಿಸಿಕೊಂಡು ಕಾಲ ಕಳೀತೀನಿ’ ಎಂದು ವೈರಾಗ್ಯದ ಮಾತುಗಳನ್ನು ಹೇಳುತ್ತಿದ್ದಳು. ಕಟ್ಟೆಗೆ ಕೂತು ದ್ಯಾಮಕ್ಕನ ಎಲಡಿಕೆಯನ್ನು ಶಿವಮ್ಮನೆ ಕುಟ್ಟಿಕೊಡುತ್ತಾ ಕೂಡುತ್ತಿದ್ದಳು. ಅವಳ ಮುಖದಲ್ಲಿನ ಮುಗ್ಧತೆಗೆ ಊರಿಗೂರೆ `ಅಯ್ಯೋ’ ಅನ್ನತೊಡಗಿತ್ತು. `ಅವಳು ನನ್ನ ಸವತಿಯಲ್ಲ; ನನ್ನ ತಂಗಿ’ ಎಂದು ದ್ಯಾಮಕ್ಕ ಊರವರ ಮುಂದೆ ಹೇಳುತ್ತಿದ್ದಳು. ಹಾಗೆಲ್ಲಾ ಹೇಳುವಾಗ ಅಮ್ಮಾ ಕೂಡಾ ಏನೂ ಮಾತಾಡುತ್ತಿರಲಿಲ್ಲ ಇದು ಚಿಟ್ಟಿಗೆ ಅಚ್ಚರಿಯೇ.

ಇದೆಲ್ಲಾ ಹಾಗೆ ಹೀಗೆ ನಡೆಯುವಾಗ ಶಿವಮ್ಮ ಒಂದು ದಿನ ಹೇಳದೆ ಕೇಳದೆ ಪರಾರಿಯಾಗಿ ಗೋವಿಂದನನ್ನು ಪೇಚಿಗೆ ಸಿಲುಕಿಸಿದ್ದಳು. ನಡುರಾತ್ರಿಯಲ್ಲಿ ಶಿವಮ್ಮ ಬಯಲಿಗೆ ಹೋಗಬೇಕೆಂದು ದ್ಯಾಮಕ್ಕನನ್ನೇ ಎಬ್ಬಿಸಿದಳು. ಇಬ್ಬರೂ ಹಿತ್ತಲಲ್ಲಿದ್ದ ಹುಣಸೆ ಮರದ ಅಡಿಗೆ ನಡೆದೂ ಬಂದರು. ಎದ್ದು ಬಂದ ಅವಳಿಗೆ ಮತ್ತೆ ಹೊಟ್ಟೆಕಳೆಯ ತೊಡಗಿತ್ತು. `ಅಕ್ಕ ನೀರ್ ತತರ್ಿಯಾ?’ ಅಂತ ದ್ಯಾಮಕ್ಕನನ್ನೆ ಕಳಿಸಿದ್ದಳು. ದ್ಯಾಮಕ್ಕ ನೀರು ತಗೊಂಡು ಬರೋದ್ರೊಳಗೆ ಶಿವಮ್ಮ ಇರಲಿಲ್ಲ. ಯಾರೋ ಚಕ್ರತೀರ್ಥ ದಾಟಿ ಯಾವುದೋ ಗಂಡಸಿನ ಜೊತೆ ಶಿವಮ್ಮ ಹೋಗಿದ್ದನ್ನ ನೋಡಿದ್ರಂತೆ. ಹಾಗಂತ ಗುಲ್ಲೆದ್ದ ಸ್ವಲ್ಪ ದಿನಗಳಲ್ಲೆ ಶಿವಮ್ಮ ಮತ್ತೆ ವಾಪಾಸು ಬಂದು ಹುಣಸೆ ಮರದಲ್ಲಿ ದೆವ್ವ ಇದೆಯೆಂತಲೂ ಅದು ತನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಿತ್ತೆಂದೂ ಯಾರೋ ಪುಣ್ಯಾತ್ಮ ತನ್ನ ಕಾಪಾಡಿದನೆಂದೂ ಕಥೆ ಹೇಳಿದ್ದನ್ನ ಜನ ನಂಬಿಯೂ ನಂಬದ ಹಾಗಿದ್ದರು. ದ್ಯಾಮಕ್ಕನ ಹೊಟ್ಟೆಯಲ್ಲಿ ಚಿಗುರದ ಕೊನೆ ಶಿವಮ್ಮನ ಮಡಿಲನ್ನ ತುಂಬಿದಾಗ ಈ ಎಲ್ಲಾ ಕಥೆಗಳೂ ಪಕ್ಕಕ್ಕೆ ಸರಿದು ಶಿವಮ್ಮನನ್ನು ದ್ಯಾಮಕ್ಕ ಮತ್ತು ಗೋವಿಂದೂ ಹೊಗಳಿದ್ದೇ ಹೊಗಳಿದ್ದು. ಎಷ್ಟೋ ಬಾರಿ ಚಿಟ್ಟಿಯನ್ನೂ ಕರೆದು `ನೋಡು ನಮ್ಮ ಎಂಕಟೇಸನನ್ನ ಥೇಟು ನಿನ್ನ ತಮ್ಮನ ಹಾಗೆ ಇದ್ದಾನಲ್ಲ’ ಎಂದಾಗ ಚಿಟ್ಟಿಗೆ ಒಳಗೇ ಕೋಪ. `ಏನಿಲ್ಲ ನನ್ನ ತಮ್ಮ ಇವನಿಗಿಂತ ಚೆನ್ನಾಗಿದ್ದಾನೆ ‘ಎಂದು ದ್ಯಾಮಕ್ಕನ ಕೋಪಕ್ಕೆ ಗುರಿಯಾಗಿದ್ದಳು.
ಮೇಷ್ಟ್ರರರಿಂದ ಹೊಡೆತ ತಿಂದ ಆ ದಿನ ಚಿಟ್ಟಿಗೆ ಕೂಡಲೂ ಆಗದ ನಿಲ್ಲಲೂ ಆಗದ ಸ್ಥಿತಿ `ಆ ಮೇಷ್ಟ. . . ಏನು ಮನುಷ್ಯಾ… ಏನು ಎನ್ನುತ್ತಾ ಅಜ್ಜಿ ಬೈಯ್ಯುತ್ತಾ ಅವಳ ಕುಂಡೆಗಳಿಗೆ ಎಣ್ಣೆ ಸವರುತ್ತಿದ್ದರೆ ಆ ನೋವಿನಲ್ಲೂ ಚಿಟ್ಟಿ `ಅವರು ಮೇಷ್ಟ ಅಲ್ಲ ಅಜ್ಜಿ ಮೇಷ್ಟ್ರು’ ಎಂದಿದ್ದಳು. `ಮೋಷ್ಟ ಮುಂಡೇ ಮಗನ್ನ ಮೇಷ್ಟ್ರು ಅಂತ ನಾನ್ಯಾಕೆ ಗೌರವ ಕೊಡಲಿ? ಅವನು ನನಗೆ ಮೇಷ್ಟಾನೇ’ ಎನ್ನುತ್ತಾ ರೇಗಿದ್ದಳು.ಚಿಟ್ಟಿಗೆ ನೋವಲ್ಲೂ ನಗು ಬಂತು. ಆದರೂ ಅಜ್ಜಿಯ ಭಾವನೆಗಳಿಗೆ ನಕ್ಕರೆ ಅವಮಾನವಾದೀತು ಎಂದು ಇನ್ನಷ್ಟು ನರಳಿದಳು. `ವಯಸ್ಸಿಗೆ ಬರ್ತಾ ಇರೋ ಹುಡುಗಿ ಇವತ್ತೋ ನಾಳೇನೋ ದೊಡ್ದವಳಾಗ್ತಾಳೆ ಅನ್ನೋದೂ ನೋಡದೆ ಹೀಗೆ ಸಿಕ್ಕ ಸಿಕ್ಕ ಜಾಗಕ್ಕೆ ಹೊಡೆದಿದ್ದಾರಲ್ಲ ಹೋಗಿ ಕೇಳಬಾರದಾ?’ ಎನ್ನುತ್ತಾ ಅಪರೂಪಕ್ಕೆ ಮನೆಗೆ ಬಂದ ಅಪ್ಪನನ್ನ ಅಮ್ಮ ಕಾಡಿಸತೊಡಗಿದ್ದಳು. ಮಾರನೆಯ ದಿನ ಮುನಿಯಪ್ಪ ಮಾಸ್ಟರು ಚಿಟ್ಟಿಯ ಕಡೆ ತಿರುಗಿ ಕೂಡಾ ನೋಡಲಿಲ್ಲ `ಒಳ್ಳೇದನ್ನ ಹೇಳಬಾರದು ಮೇಡಂ, ಜನ ಜಗಳಕ್ಕೆ ಬರ್ತಾರೆ. ಹುಡುಗರಿಗೆ ಭಯ ಭಕ್ತಿ ಇಲ್ಲ ನಮ್ಮ ಮೇಲೆ ಚಾಡಿ ಹೇಳ್ತಾರೆ’ ಎನ್ನುತ್ತಾ ಚಂದ್ರಮ್ಮಾ ಟೀಚರ್ ಹತ್ತಿರ ಹೇಳುತ್ತಿದ್ದುದನ್ನ ಚಿಟ್ಟಿ ಕೇಳಿಸಿಕೊಂಡಳು. ಅವಳ ಮನಸ್ಸಿನಲ್ಲಿ ಮುಳ್ಳಾಡಿದ ಹಾಗೆ ಆಯ್ತು ತಾನು ಮನೆಯಲ್ಲಿ ಈ ವಿಷ್ಯ ಹೇಳಿದ್ದು ತಪ್ಪಾಯಿತಾ ಅವಳಿಗೆ ಅರ್ಥವಾಗಲಿಲ್ಲ.
ತಗೊಳ್ಳೆ ಎನ್ನುತ್ತಾ ಚಂದ್ರಬಿಕ್ಕೆಯನ್ನು ತಂದುಕೊಟ್ಟ . ಮೈದು ಸಾಬರ ಮುದ್ದಿನ ಕುವರಿ ನಕ್ಕತ್ತುವಿಗೆ ಈಗ ನೋವು ಹೇಗಿದೆ ಅಂತ ಕೇಳಿದ್ದಳು ಚಿಟ್ಟಿ. `ನಾನು ನಿನ್ನ ಹಾಗೆ ಪುಳಿಚಾರಾ? ಮಾಂಸ ತಿನ್ನೋರು ನಮ್ಮ ತಾಕತ್ತೇ ಬೇರೆ’ ಎನ್ನುತ್ತಾ ಚಿಟ್ಟಿಯ ಕೈಗೆ ಬಿಕ್ಕೆ ಹಣ್ಣನ್ನ ಕೊಟ್ಟು ಎಡಗೈಯ್ಯಿಂದ ತಾನೂ ಒಂದು ಹಣ್ಣನ್ನುಕಚ್ಚಿ ತಿನ್ನುತ್ತಾ ಹೊರಟಳು. ಕೈಲಿದ್ದ ಬಿಕ್ಕೆ ಹಣ್ಣನ್ನ ನೋಡುತ್ತಾ ಅವಮಾನವಾದಂತಾಗಿ ಅವಳ ಹಿಂದೇ `ನಕ್ಕತ್ತು. . .’ ಎನ್ನುತ್ತಾ ಹೊರಟಳು. ವಾರೆಗಣ್ಣಿಂದ ಚಿಟ್ಟಿಯನ್ನ ನೋಡುತ್ತಾ `ಏನು. . . ? ಎನ್ನುವಂತೆ ಹುಬ್ಬನ್ನ ಎಗರಿಸಿದ ನಕ್ಕತ್ತುವಿಗೆ `ನಂಗೂ ನೋವಿಲ್ಲ’ ಎಂದು ಹೇಳಬೇಕೆಂದುಕೊಂಡವಳು ಎದುರಿಗೆ ಬಂದ ಜೋಸಫನನ್ನ ನೋಡಿ ಗಪ್ಪೆಂದು ಸುಮ್ಮನಾಗಿಬಿಟ್ಟಳು. ಜೋಸೆಫ ಚಿಟ್ಟಿಯ ಕಡೆಗೆ ನೋಡುತ್ತಾ ತನ್ನ ಬಿಳಿದಾದ ಹಲ್ಲುಗಳ ಪ್ರದರ್ಶನ ಮಾಡುತ್ತಾ ಹೊರಟುಹೋದ. ಅವನು ಹಾಗೆ ಹಾದು ಹೋದ ನಂತರ ನಕ್ಕತ್ತು ಅಮವಾಸ್ಯೆಗೋ ಹುಣ್ಣೀಮೆಗೋ ತಿಕ್ಕಲು ತಿರುಗುತ್ತೆ ಇವನಿಗೆ ಒಳ್ಳೆ ಮುಳ್ಳಂದಿ ಇದ್ದ ಹಾಗಿದ್ದಾನೆ ಎಂದವಳೇ ಚಿಟ್ಟಿಯ ಕಿವಿಯಲ್ಲಿ `ಇವನು ಸಾಮಾನ್ಯ ಅಲ್ಲ ಎರಡು ಕೊಲೆ ಮಾಡಿದ್ದಾನೆ ‘ಎಂದಳು. `ಎರಡು ಕೊಲೇನಾ!?’ ಎಂದು ಉದ್ಗಾರ ತೆಗೆದ ಅವಳ ಬಾಯನ್ನು ಮುಚ್ಚುತ್ತಾ ನಕ್ಕತ್ತು `ಮೆಲ್ಲಗೆ ಕಣೆ. ಕೇಳಿಸಿಕೊಂಡರೆ ಅಷ್ಟೇ ಖಲಾಸ್’ ಎನ್ನುತ್ತಾ ಕುತ್ತಿಗೆಯ ಉದ್ದಕ್ಕೆ ಬೆರಳನ್ನ ಎಳೆಯುತ್ತಾ ನಾಲಿಗೆ ಹೊರಗೆ ತೆಗೆದುಕಣ್ಣನ್ನ ಮೇಲಕ್ಕೆ ಮಾಡಿದಳು. ಚಿಟ್ಟಿಯ ಎದೆಯಲ್ಲಿ ತಿದಿಯಾಗಿ ಭಯ ಭುಗಿಲೆದ್ದಿತು.
ರಾತ್ರಿಯೆಲ್ಲಾ ಅದೇ ಭಯ ಕನಸು ಕನಸಿನಲ್ಲಿ ಜೋಸೆಫ ರಾಕ್ಷಸನ ಹಾಗೆ ಬಂದು ಕಾಡತೊಡಗಿದ. ತಮಟೆಯ ಶಬ್ದ. ಅವನು ಹತ್ತಿರಕ್ಕೆ ಬರತೊಡಗಿದ. ಚಿಟ್ಟನೆ ಚೀರಿದ ಚಿಟ್ಟಿ ಬಟ್ಟೆಯಲ್ಲೆ ಒದ್ದೆ ಮಾಡಿಕೊಂಡಿದ್ದಳು. ತನ್ನ ಮೈ ತನಗೆ ಒದ್ದೆಯಾಗುತ್ತಿದ್ದ ಹಾಗೆ, ನಾಚಿಕೆಯಿಂದ ಮುದುರಿ ಕತ್ತಲಲ್ಲೆ ತಡವರಿಸುತ್ತಾ ಬಚ್ಚಲ ಮನೆಗೆ ಸಾಗಿ ಬಟ್ಟೆಯನ್ನ ಬದಲಿಸಿ ತನಗೆ ಬಂದ ಹಾಗೆ ಒಗೆದು ಹಾಕಿದಳು.
ಬೆಳಗೆದ್ದ ಅಮ್ಮನಿಗೆ ಅಚ್ಚರಿ `ಇದೇನೇ ಚಿಟ್ಟಿ?’ ಎಂದಾಗ ಚಿಟ್ಟಿ ತಲೆ ತಗ್ಗಿಸಿದ್ದಳು. ಅಮ್ಮ ಹೊಡೆಯಬಹುದು ಎನ್ನುವ ಭಯ ಬೇರೆ. ಮೊದಲ ಬಾರಿಗೆ ಅಮ್ಮ ಏನೂ ಅನ್ನದೆ `ರಾತ್ರಿ ಬಚ್ಚಲಿಗೆ ಹೋಗದೆ ಮಲಗಿದರೆ ಹೀಗೆ ನೋಡು. ನೀನು ದೊಡ್ಡವಳಾಗ್ತಾ ಇದೀಯ. . . ಮುಂದೆ ಹುಷಾರಾಗಿರಬೇಕು’ ಎಂದು ಸಮಾಧಾನ ಮಾಡಿದ್ದಳು. ಚಿಟ್ಟಿ ಅದೇ ಕೊರಗಿಂದ `ಅಮ್ಮಾ ಇದನ್ನ ಯಾರಿಗೂ ಹೇಳಲ್ಲ ತಾನೆ?ಕೇಳಿದಳು.. ಅಮ್ಮ `ತಮಟೆ ತಗೊಂಡ್ ಊರೆಲ್ಲಾ ಡಂಗೂರ ಸಾರ್ತೀನಿ ಕಣೆ’ ಎಂದಳು. ಚಿಟ್ಟಿಯ ಕಣ್ಣಲ್ಲಿ ಗಾಬರಿ ಮಡುಗಟ್ಟಿತ್ತು. ಮಾಡಿದ ತಪ್ಪಿಗೆ ಮಾತೂ ಬಾರದೆ ಚಿಟ್ಟಿ ಮೌನವಾಗುಳಿದಳು
ಕೇಶವನ ಹೋಟಲಿನಲ್ಲಿ ಕೆಲಸ ಮಾಡುತ್ತಿದ್ದ ಐದಿಡ್ಲಿ ನಾಗ ಹಿತ್ತಲಲ್ಲಿ ಬೆಳೆದ ಹೂವನ್ನ ತಂದು ಎರಡು ರೂಪಾಯಿ ಅಂತ ಚೌಕಾಶಿಗೆ ನಿಂತಿದ್ದ. ಬಡ್ಡಿಮಗ ಹೋಟ್ಲಲ್ಲಿ ಚೆನ್ನಾಗಿ ತಿಂದು ಡರ್ರ್ ಡರ್ರ್ ಎಂದು ತೇಗುತ್ತಾ `ನೀವೇನ್ ತಿಂತೀರೇ. . . ನಾನ್ ತಿಂತೀನಿ ಐದು ಇಡ್ಲೀನಾ!…’ ಎನ್ನುತ್ತಾ ಆಡಿಕೊಳ್ಳುತ್ತಿದ್ದ. ಅವನಿಗೆ ಮೊದ್ಲು ಇಡ್ಲಿನಾಗ ಅಂತಲೂ ನಂತರ ಐದಿಡ್ಲಿ ನಾಗ ಅಂತಲೂ ಕರೆಯೋಕ್ಕೆ ಸುಲಭ ಆಗ್ಲಿ ಅಂತ ಐದಿಡ್ಲೀ ಅಂತಲೂ ಜೊತೆಯಲ್ಲಿದ್ದವರು ಕಾಲಕಾಲಕ್ಕೆ ಅವನ ಹೆಸರನ್ನ ಬದಲಿಸಿದ್ದರು. ಕೈಯ್ಯಿ ಬಾಯಿ ತಿರುವುತ್ತಾ ಅವನಿಗೆ ಅಮ್ಮ ಏನೋ ಹೇಳುತ್ತಿದ್ದಳು. ಅವನೂ ಅದಕ್ಕೆ ಪ್ರತಿಯಾಗಿ ಏನೋ ಹೇಳುತ್ತಿದ್ದ. ಇಬ್ಬರ ನಡುವೆ ಏನು ಮಾತುಕತೆ ಆಗ್ತಾ ಇದೆ ಎಂದು ತಿಳಿದ ಚಿಟ್ಟೀಗೆ ಒಳಗೇ ಸಂಕಟ. ಹೂವನ್ನ ತೆಗೆದುಕೊಂಡು ಒಳಗೆ ಬಂದಾಗ ಭಯದಿಂದಲೇ `ಅಮ್ಮ ಅವ್ನಿಗೆ ಏನ್ ಹೇಳ್ದೆ?’ ಎಂದಳು. `ಹೇಳ್ದೆ ಕಣೆ ನಿನ್ನ ರಾತ್ರಿ ಪುರಾಣಾನ’ ಎಂದಾಗ ಚಿಟ್ಟಿ ಮುಖ ಸಣ್ಣಗಾಯಿತು. `ಹೋಗೆ ಗಂಡು ಹುಡುಗ್ರ ಹತ್ರ ಇದನ್ನೆಲ್ಲಾ ಯಾರ್ ಹೇಳ್ತಾರೆ. ಹೋಗಿ ಬೇಗ ಸ್ನಾನ ಮುಗ್ಸು. ಸ್ಕೂಲಿಗೆ ಹೊತ್ತಾಗುತ್ತೆ’ ಅಂದಾಗಲೇ ಚಿಟ್ಟಿಗೆ ನಿರಾಳ. ಏನನ್ನೋ ನೆನೆಸಿಕೊಂಡವಳಂತೆ `ಟಾಂಕ್ಸ್ ಅಮ್ಮಾ’ ಎಂದಳು. ಅಮ್ಮ ಅದನ್ನ ಗಮನಿಸಿ ನಕ್ಕು ಒಳಗೆ ಸಾಗಿದಳು. ಅವಳನ್ನೆ ನೋಡುತ್ತಾ `ಇನ್ನ್ ಮುಂದೆ ಜೋಸೆಫ ಎದ್ರೂಗೆ ಬಂದ್ರೆ ಹೆದ್ರುಕೊಳ್ಬಾರ್ದು . . ..ಹೆದ್ರಕೊಂಡ್ರೂ ರಾತ್ರಿ ಮಾತ್ರ . ..’ ಎನ್ನುತ್ತ ಯೋಚಿಸುವಾಗ ಅಲ್ಲಿಗೆ ಬಂದ ಅಜ್ಜಿ `ಏನಂತೆ ನಿಮ್ಮಮ್ಮನ ಪುರಾಣ?’ ಕೇಳಿದಳು.
`ಏನಿಲ್ಲ ಬಿಡಜ್ಜಿ’ ಎನ್ನುತ್ತಾ ಚಿಟ್ಟಿ ಬಚ್ಚಲಿನ ಕಡೆಗೆ ಸಾಗಿದ್ದಳು.
(ಮುಂದುವರಿಯುತ್ತದೆ…)

‍ಲೇಖಕರು avadhi

July 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. narayan raichur

    good writing ….barta-barta ( comming, comming !!)interest jaasti aaging !!- Narayan Raichur

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: