ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಂದ್ರನ ಒಡಲಿಂದ ನೆಲಕ್ಕೆ ಜಾರಿದ ಮೊಲ

(ಇಲ್ಲಿಯವರೆಗೆ…)
ಅಳು ಅಲೆಯಲೆಯಾಗಿ ಚಿಟ್ಟಿಯನ್ನು ದಾಟಿ ಇಡೀ ಪ್ರಕೃತಿಯನ್ನು ಆವರಿಸಿಕೊಂಡಾಗ ಮಳೆ ಹನಿಹನಿಯಾಗಿ ನೆಲಕ್ಕಿಳಿಯಿತು. ‘ಯಾಕೆ ಹೀಗಾಯಿತು? ನನ್ನ ಪುಟ್ಟ ಹೃದಯಕ್ಕೆ ಇಂಥಾ ದೊಡ್ಡ ಏಟನ್ನು ಆ ದೇವರು ಯಾಕೆ ಕೊಟ್ಟ? ನಮ್ಮದೇ ಜಗತ್ತನ್ನು ಸೃಷ್ಟಿಸ ಹೊರಟ ನಮ್ಮಿಬ್ಬರನ್ನು ಯಾಕೆ ಬೇರೆ ಮಾಡಿದ? ಇಷ್ಟೆಲ್ಲಾ ಹತ್ತಿರ ಇದ್ದ ಅವನು ಇವತ್ತು ನನಗೂ ನಿನಗೂ ಸಂಬಂಧವೇ ಇಲ್ಲ ಎನ್ನುವ ಹಾಗೇ ಹೊರಟೇ ಹೋದನಲ್ಲಾ?’ ‘ಚಿಟ್ಟೀ ಹುಟ್ಟು ಸಾವು ಎಲ್ಲಾ ಸಹಜ. ಅರಳಿದ ಎಲ್ಲಾ ಹೂಗಳೂ ಕಾಯಾಗಿ, ಹಣ್ಣಾಗಿ, ಮತ್ತೆ ತನ್ನೊಡಲಲ್ಲಿ ನೂರರು ಮರಗಳನ್ನು ಹುದುಗಿಸಿಕೊಂಡ ಬೀಜವಾಗಲ್ಲ. ಕೆಲವು ಹೂವಲ್ಲೆ ಬಾಡಿ ಹೋದರೆ, ಕೆಲವು ಹೀಚಾಗಿ, ಕೆಲವು ಕಾಯಾಗಿ, ಮತ್ತೆ ಕೆಲವು ಬಲಿವ ಮೊದಲೇ ನೆಲಕ್ಕೆ ಉರುಳುತ್ತವೆ. ಹಾಗೇ ಮನುಷ್ಯನ ಜೀವನ’ ‘ಹಾಗಾದರೆ ನಿಂಗರಾಜುವೇ ಯಾಕೆ ಬೇಕಾಗಿತ್ತು? ಬೇರೆ ಯಾರೂ ಸಿಗಲಿಲ್ಲವೇ?’ ಈ ಪ್ರಶೆಗಳಿಗೆ ಯಾರೂ ಉತ್ತರ ಹೇಳುವವರಿಲ್ಲ.
‘ಜವರಾಯ ಬಂದರೆ ಬರಿಕೈಲಿ ಬರಲಿಲ್ಲ ಒಳ್ಳೊಳ್ಳೆ ಮರಾನ ಕಡಿಬಂದ ತಂದಾನ’ ಕೋಲಾಟಾ ಆಡ್ತಾ ಹಾಡ್ತ ಇದ್ದ ಹಾಡನ್ನ ಚಿಟ್ಟಿ ಸಾವಿರ ಸಲ ನೆನೆಸಿಕೊಂಡಳು. ಒಳಗೆ ಒಳಗೆ ಮೌನ ಹೆಪ್ಪಾಗತೊಡಗಿತ್ತು. ನಿಂಗರಾಜುವಿನ ತೆರವಾದ ಸ್ಥಾನದಲ್ಲಿ ಅವಳು ಯಾರನ್ನೂ ನಿಲ್ಲಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೆ ಅವಳ ಕಣ್ಣುಗಳು ಮಾತ್ರ ಮರದ ಕೆಳಗೆ ಮಲಗಿಸಿದ್ದ ನಿಂಗರಾಜುವಿನ ಮುಖದ ಮೇಲೆ ಹಾರಾಡುವ ನೊಣವನ್ನು ಮರೆಯಲಿಲ್ಲ. ಯಾವುದಾದರೂ ನೊಣ ಹಾರಿ ಬಂದರೂ ಇದು ನಿಂಗರಾಜುವಿನ ಮುಖದ ಮೇಲೆ ಹಾರಾಡುತ್ತಿದ್ದ ನೊಣವೇ ಎಂದು ಎಣಿಸುತ್ತಿದ್ದಳು.
ಅಷ್ಟು ಮಾತ್ರವಲ್ಲ ರಾತ್ರಿ ನಕ್ಷತ್ರಗಳ ಎಡೆಯಲ್ಲಿ ಅವನ ಮುಖವನ್ನು ಹುಡುಕಿ ಸುಸ್ತಾಗುತ್ತಿದ್ದಳು. ಆದರೆ ಅಲ್ಲೂ ಅವನು ಕಾಣಲಿಲ್ಲ. ‘ನೀನೆಲ್ಲಿ ಹೋದೆ ಯಾಕೆ ಹೋದೆ? ನನ್ನ ಮುಂದೆ ಬರಬಾರದೆ?’ ಎಂದು ಬಿಕ್ಕುತ್ತಿದ್ದಳು. ನಿಂಗರಾಜು ಎನ್ನುವ ಹುಡುಗ ತನ್ನ ಜೀವನದಿಂದ ಶಾಶ್ವತವಾಗಿ ಹೊರಟು ಹೋಗಿದ್ದಾನೆ ಎಂದು ಒಪ್ಪಿಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ. ಒಬ್ಬಳೇ ಪುಸ್ತಕದ ಮಧ್ಯೆ ಇಟ್ಟ ನವಿಲುಗರಿ, ಹುಲ್ಲ ಎಸಳು, ಹಾಳೆಗೆ ಬಣ್ಣವನ್ನು ಹಚ್ಚಿಕೊಂಡು ಒಣಗಿದ ನೀಲಿ ಪುಟ್ಟ ಹೂವು, ಎಲ್ಲದರ ಜೊತೆ ಮಾತಾಡುತ್ತಿದ್ದಳು. ನೋಟ ಎಲ್ಲಿಯೋ ಇರುತ್ತಿತ್ತು. ಚಿಟ್ಟಿಯ ಈ ವರ್ತನೆ ಮನೆಯವರಿಗೆ ತಲೆ ನೋವಾಗಿತ್ತು.
ಅಮ್ಮ ಅವಳನ್ನು ಕೂಡಿಸಿಕೊಂಡು ಹೇಳಬಹುದಾದದ್ದನ್ನೆಲ್ಲಾ ಹೇಳಿದ್ದಳು. ಅಮ್ಮನಿಗೆ ಯಾಕೋ ಚಿಟ್ಟಿ ಯಾರನ್ನಾದರೂ ಪ್ರೀತಿಸಿರಬಹುದೇ ಎನ್ನುವ ಸಣ್ಣ ಅನುಮಾನ ಇತ್ತಾದರೂ, ಚಿಟ್ಟಿಯ ಬಗ್ಗೆ ಹಾಗೇ ಯೋಚನೆ ಮಾಡಲಿಕ್ಕೆ ಅವಳ ಮನಸ್ಸು ಒಪ್ಪಲಿಲ್ಲ. ಭಾರತಿಯನ್ನು ಪ್ರಶ್ನಿಸಿದಾಗ ನಿಂಗರಾಜುವಿನ ಸಾವಿನ ನಂತರವೇ ಚಿಟ್ಟಿ ಹೀಗಾಗಿರುವ ಸಾಧ್ಯತೆಯನ್ನು ಹೇಳಿದ್ದಳು. ‘ಚಿಟ್ಟಿ ಅಂಥಾದ್ದೇನಾದ್ರೂ ಇದ್ರೆ ಅದನ್ನು ಮರೆತು ಬಿಡು’ ಎಂದು ಅಮ್ಮ ಸೂಕ್ಷ್ಮ ಮಾತುಗಳಿಂದ ಎಚ್ಚರಿಸಿದ್ದಳು. ತಾನು ಎಷ್ಟು ಇಲ್ಲ ಎನ್ನಲು ಪ್ರಯತ್ನಿಸಿದಳಾದರೂ, ತಾನು ಪ್ರೀತಿಸುತ್ತಿದ್ದೇನೆ ಎಂದು ಬಾಯಿಬಿಟ್ಟು ಅವನೊಂದಿಗೆ ಹೇಳಿದ್ದರೂ ತಮ್ಮಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ಸ್ಪಷ್ಟ ಚಿತ್ರ ಅವಳಿಗೆ ಇರಲಿಲ್ಲ.
ಈ ಮಧ್ಯೆ ಚಿಟ್ಟಿಗೆ ಕನಸೊಂದು ಬಿತ್ತು. ಅದೊಂದು ಬೆಳದಿಂಗಳ ರಾತ್ರಿ, ಚಿಟ್ಟಿ ಅಳುತ್ತಾ ಕೂತಿದ್ದಳು. ಅದ್ಯಾವ ಜಾಗ ಗೊತ್ತಿಲ್ಲ. ಹಿತ್ತಲೋ, ಕಾಡೋ ಅಥವಾ ತೋಟವೋ ಎಲ್ಲಾ ಅಸ್ಪಷ್ಟ. ಅಲ್ಲಲ್ಲಿ ಚದುರಿದಂತಿದ್ದ ಬೆಳದಿಂದಳು ಯಾವುದೋ ಭ್ರಮೆಯನ್ನು ಹುಟ್ಟುಹಾಕುತ್ತಿತ್ತು. ಅವಳ ಕಣ್ಣಲ್ಲಿ ದುಃಖ ಮಡುಗಟ್ಟಿ ಹನಿಹನಿಯಾಗಿ ಕೆಳಗುರುಳುತ್ತಿತ್ತು.
ಅಲ್ಲಿಗೆ ನಿಂಗರಾಜು ಬಂದ. ಎಂದಿಗಿಂತ ಹೆಚ್ಚಿನ ಆಪ್ತ ನಗೆಯೊಂದಿಗೆ. ಅವನನ್ನು ನೋಡಿದೊಡನೆ ಚಿಟ್ಟಿಗೆ ಇನ್ನಷ್ಟು ಮತ್ತಷ್ಟು ದುಃಖವಾಯಿತು. ಅವನ ತೋಳಿಗೆ ಒರಗಿ ಜೋರಾಗಿ ಅತ್ತಳು. ಅವನು ಸಮಾಧಾನ ಮಾಡಲಿಕ್ಕೆ ನೋಡಿದ. ಅವನ ಮಾತುಗಳು ಶೂನ್ಯದಲ್ಲಿ ಲೀನವಾಗುತ್ತಿತ್ತು. ಅವನ ತೋಳುಗಳಿಗೆ ಮುಖ ಹಚ್ಚಿ ಅವಳು ಜೋರಾಗಿ ಅತ್ತಳು.
ಹೀಗೆ ಅಳುವಾಗೆ ದಿಕ್ಕು ತೋಚದ ಅವನು ಏನನ್ನೋ ನಿರ್ಧರಿಸಿಕೊಂಡವನಂತೆ ಚಂದ್ರನ ಕಡೆಗೆ ಕೈ ಚಾಚಿದ. ಅಚ್ಚರಿಯಿಂದ ಚಿಟ್ಟಿ ನೋಡಿದಳು. ಅವನ ಕೈ ಚಂದ್ರನನ್ನು ತಾಕುತ್ತಿತ್ತು. ಬರೀ ತಾಕುವುದು ಮಾತ್ರವಲ್ಲ. ಅವನು ಚಂದ್ರನನ್ನು ತನ್ನ ಕೈಗೆ ತೆಗೆದುಕೊಂಡ. ತಕರಾರಿಲ್ಲದೆ ಚಂದ್ರ ಅವನ ಕೈಗಳನ್ನು ಸೇರಿದ. ಚಿಟ್ಟಿ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದಳು. ಕೈ ಸೇರಿದ ಚಂದ್ರನನ್ನು ಅವನು ಚಿಟ್ಟಿಯ ಮುಖದ ಮುಂದೆ ಹಿಡಿದ, ಆಶ್ಚರ್ಯ ಚಂದ್ರ ಕನ್ನಡಿಯಾಗಿದ್ದ, ಅಂಥಿಂಥಾ ಕನ್ನಡಿಯಲ್ಲ ಅದು ಮಾಯಾ ಕನ್ನಡಿ.
‘ನೋಡು’ ಎಂದು ತೋರಿದ ತುಂಬುನಗೆಯ ನಿಂಗರಾಜುವಿನ ಮುಖವನ್ನು ನೋಡುತ್ತಾ ಚಿಟ್ಟಿ ಕನ್ನಡಿಯ ಒಳಗೆ ಹಣುಕಿದಳು. ಆ ಮಾಯಾ ಕನ್ನಡಿ ಚಿಟ್ಟಿಯನ್ನು ಐದು ವರ್ಷದ ಹುಡುಗಿಯನ್ನಾಗಿಸಿತು. ನೋಡುತ್ತಿದ್ದಂತೆ ನಿಂಗರಾಜುವನ್ನೂ ಅಷ್ಟೇ ಚಿಕ್ಕವನನ್ನಾಗಿಸಿತು. ಬರೀ ಕನ್ನಡಿಯಲ್ಲಿ ಮಾತ್ರವಲ್ಲ ನಿಜಕ್ಕೂ ಇಬ್ಬರೂ ಪುಟ್ಟ ಮಕ್ಕಳೇ ಆಗಿದ್ದರು. ಇಬ್ಬರ ಮುಖದಲ್ಲೂ ತೀರದ ಸಂಭ್ರಮ. ಚಿಟ್ಟಿಯ ಕಣ್ಣುಗಳಲ್ಲಿ ಬೆಳದಿಂಗಳು ಅಲುಗಿದಂತೆ ಖುಷಿ ತೇಲುತ್ತಿತ್ತು. ನಿಂಗರಾಜು ಹೇಳಿದ ‘ಚಿಟ್ಟಿ ಚಿಟ್ಟಿ ನಿಂಗೊಂದು ಮಾತ್ ಹೇಳ್ತೀನಿ ಕೇಳ್ತೀಯಾ?’. ಪುಟ್ಟ ಚಿಟ್ಟಿ ತನ್ನ ದೊಡ್ದ ಕಣ್ಣುಗಳನ್ನ ಅಗಲಿಸಿ ‘ಏನದು ಹೇಳು?’ ಎಂದಳು. ‘ಯಾರಿಗೂ ಹೇಳ್ಬರ್ದು ಇದು ನಮ್ಮಿಬ್ಬರ ಮಧ್ಯೆ ಮಾತ್ರ ಇರ್ಬೇಕು’ ಅವನು ಅಂದ. ಮುಗ್ಧವಾಗಿ ತಲೆ ಆಡಿಸುತ್ತಾ ‘ಹುಂ’ ಎಂದಳು ಅವಳು. ‘ನೀನವತ್ತು ಕೇಳ್ದೆ ಅಲ್ವಾ ನನ್ನ ಪ್ರೀತಿ ಮಾಡ್ತೀಯಾ ಅಂತ? ಅವತ್ತು ನಂಗೂ ಹೇಳ್ಬೆಕು ಅಂತ ಇತ್ತು. ಆದ್ರೆ ಹೇಳೋಕ್ಕೆ ಧೈರ್ಯ ಬರ್ಲಿಲ್ಲ. ಈಗ ಹೇಳ್ತಾ ಇದೀನಿ ನಾನು ನಿನ್ನ ಪ್ರೀತಿಸ್ತೀನಿ’.
ಹೀಗೆ ಅವನು ಹೇಳುವಾಗ ಅವನ ಕೈಲಿದ್ದ ಕನ್ನಡಿಯಾದ ಚಂದ್ರಮ ಮತ್ತೆ ಆಕಾಶ ಸೇರಿ ಮೋಡಗಳ ಜೊತೆ ನಡೆಯತೊಡಗಿದ. ಇದ್ದಕ್ಕಿದ್ದ ಹಾಗೇ ಚಂದ್ರನ ಒಡಲಿನಲ್ಲಿದ್ದ ಮೊಲ ಜಾರಿ ಕೆಳಗೆ ಬಂದು ಓಡತೊಡಗಿತು. ಅದನ್ನು ನೋಡಿದ ಚಿಟ್ಟಿ ‘ಅದು ಬೇಕು’ ಎಂದಳು. ಬೆಳದಿಂಗಳ ಮೊಲ ಅವರಿಬ್ಬರನ್ನೂ ಆಟ ಆಡಿಸುವ ಹಾಗೇ ಅವರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡತೊಡಗಿತು. ಅದನ್ನು ಹಿಡಿಯಲು ಆ ಇಬ್ಬರು ಪುಟ್ಟ ಮಕ್ಕಳು ತಾವು ಚಿಟ್ಟಿ, ನಿಂಗರಾಜು ಅನ್ನುವುದನ್ನೂ ಮರೆತು ಕೈ ಕೈ ಹಿಡಿದು ಕೆರೆಯ ಏರಿಯ ಮೇಲೆ ಓಡತೊಡಗಿದರು. ಮೊಲ ಅವರಿಬ್ಬರನ್ನು ಆಡಿಸುತ್ತಾ ಓಡತೊಡಗಿತು. ಇವರೂ ಬೆನ್ನುಹತ್ತಿದ್ದರು.

ಹಾಗೆ ಓಡುತ್ತಾ ಹೋಗುವಾಗ ಚಿಟ್ಟಿ ಸ್ವಲ್ಪ ಮುಂದೆ ಸಾಗಿದಳು. ಇದ್ದಕ್ಕಿದ್ದ ಹಾಗೆ ನಿಂಜರಾಜು ತನ್ನ ಜೊತೆ ಬರುತ್ತಿಲ್ಲ ಅನ್ನಿಸಿ ತಿರುಗಿ ನೋಡಿದಳು, ಯಾರೋ ಅವನನ್ನು ಗಟ್ಟಿಯಾಗಿ ಹಿಡಿದು ಆಕಾಶಕ್ಕೆ ಎಳೆದುಕೊಂಡು ಹೋದ ಹಾಗಾಯಿತು. ಕಂಗಾಲಾದ ಅವಳು ಜೋರಾಗಿ ಕೂಗುತ್ತಾ ಅವನ ಹಿಂದೆ ಓಡುವ ಯತ್ನ ಮಾಡಿದಳು. ನಿಂಗರಾಜು ಅವಳ ಕಡೆಗೆ ಕೈಚಾಚುತ್ತಾ ಬೆಳಕಾಗಿಯೇ ಬಿಟ್ಟ. ಆ ಬೆಳಕು ನಿಧಾನವಾಗಿ ಆಕಾಶದಲ್ಲಿ ಮರೆಯಾಯಿತು. ಈಗ ಮತ್ತೆ ಅದೇ ಚಂದ್ರಮ ಬೆಳದಿಂಗಳು ಮಾತ್ರ ಉಳಿಯಿತು, ಅದೂ ಮಂಕಾಗಿ ಯಾವ ಭ್ರಮೆಗಳನ್ನೂ ಹುಟ್ಟುಹಾಕದೆ. ಈಗ ಅವಳ ಕಣ್ಣುಗಳಲ್ಲಿ ಆಡುವ ಚಂದ್ರಮ ಒಡಲಿನಲ್ಲಿ ಮೊಲ ಮಾತ್ರ ಇರಲೇ ಇಲ್ಲ. ಚಿಟ್ಟಿಗೆ ತಟ್ಟನೆ ಎಚ್ಚರವಾಯಿತು. ಸುತ್ತ ನೋಡಿದಳು ಎಲ್ಲ ಗಾಢವಾದ ನಿದ್ದೆಯಲ್ಲಿ ಮುಳುಗಿದ್ದರು. ಹಾಸಿಗೆಯ ಮೇಲೆ ಕೂತು ಮಂಡಿಯ ಮಧ್ಯೆ ಮುಖ ಹುದುಗಿಸಿದಳು ತೀರದ ದುಃಖ ಅವಳ ಜೊತೆಯಲ್ಲಿತ್ತು.
ಚಿಟ್ಟಿ ಈಗ ಗೊಂದಲಕ್ಕೆ ಬಿದ್ದಳು. ಪ್ರೀತಿಸ್ತೀನಿ ಅಂದವ ಪಕ್ಕದಲ್ಲಿಲ್ಲ. ಜಗತ್ತು ಕಾಣದ ತಮ್ಮ ಪ್ರೀತಿಗೆ ಅಸ್ತಿತ್ವ ಎಲ್ಲಿ? ತಾನೀಗ ನಿಂಗರಾಜುವನ್ನು ಪ್ರೀತಿಸ್ತಾ ಇದ್ದೆ ಅಂತ ಯಾರ ಹತ್ತಿರವಾದರೂ ಹೇಳಿದ್ರೆ ತನ್ನ ಬಗ್ಗೆ ತಪ್ಪು ತಿಳಿಯಬಹುದಲ್ಲವೇ?
ಹೀಗೆಲ್ಲಾ ಯೋಚಿಸಿದ ಅವಳು ತನ್ನೊಳಗಿನ ಯಾವ ಗುಟ್ಟನ್ನೂ ಜಗತ್ತಿಗೆ ಬಿಟ್ಟುಕೊಡಲಿಲ್ಲ. ಇಲ್ಲ ತಾನು ನಿಂಗರಾಜುವಿನ ಜೊತೆ ಕಳೆದು ಹೋದರೆ ಜಗತ್ತು ತನ್ನನ್ನು ಕನಿಕರದಿಂದ ನೋಡುತ್ತೆ. ಹಾಗೆ ನೋಡಬಾರದು ಅವನು ತನ್ನ ಮನಸಲ್ಲಿ ಇದ್ದೇ ಇರುತ್ತಾನೆ, ಯಾವತ್ತಿಗೂ. ಇದನ್ನು ತಾನು ಸತ್ತರೂ ಯಾರಿಗೂ ಹೇಳೋಲ್ಲ ಎನ್ನುವ ನಿರ್ಧಾರಕ್ಕೆ ಬಂದಳು.
ಹಾಗೆ ನಿರ್ಧಾರ ಮಾಡುವಾಗ ಅವಳ ಒಳಗಿನ ಸಂಕಟ ದೊಡ್ಡದಿತ್ತು. ಆದರೆ ಅದನ್ನು ದಾಟುವ ಅನಿವಾರ್ಯತೆ ಮಾತ್ರ ಅವಳನ್ನಾವರಿಸಿತ್ತು.
ಬೆಳಗ್ಗೆ ಬೇಡದಿದ್ದರೂ ಉತ್ಸಾಹವನ್ನು ತುಂಬಿಕೊಂಡು ಎದ್ದಳು ಚಿಟ್ಟಿ. ಮನಸ್ಸಿನಲ್ಲಿ ನಿಂಗರಾಜುವಿಗೊಂದು ಕ್ಷಮೆಯನ್ನು ಹೇಳಿದಳು. ಅಲ್ಲಿಗೆ ಮೇಲುನೋಟಕ್ಕೆ ಎಲ್ಲವೂ ಸರಿಯಾಗಿತ್ತು. ಅಮ್ಮನಿಗೆ ಆಶ್ಚರ್ಯ. ಅಜ್ಜಿಗೆ ಸಮಾಧಾನ, ಅಪ್ಪನಿಗೆ ನಿರಾಳ. ಸ್ನೇಹಿತೆಯರಿಗೂ ನೆಮ್ಮದಿ. ‘ಚಿಟ್ಟಿ ಇವತ್ತು ಕಾಡುಮಲ್ಲಿಗೆ ಹೂವ ಕುಯ್ಯಲಿಕ್ಕೆ ಹೋಗೋಣ್ವ?’ ಭಾರತಿ ಎಂದಾಗ ಮತ್ತೊಂದನ್ನು ಯೋಚಿಸದೆ ಹುಂ ಎಂದಿದ್ದಳು. ಹೂವ ಕುಯ್ಯಲು ಹೋದಾಗ ಭಾರತಿ ಸಮಾಧಿಯೊಂದರಮೇಲೆ ಕಾಲಿಟ್ಟಳು. ಚಿಟ್ಟಿಗೆ ಕೆಳಗೆ ಮಲಗಿದವ ನಿಂಗರಾಜುವೇ ಆಗಿದ್ದರೆ ಅನ್ನಿಸಿ ನಿಧಾನವಾಗಿ ಅವಳ ಕಾಲುಗಳನ್ನು ಸಮಾಧಿಯ ಮೇಲಿಂದ ಸರಿಸಿದ್ದಳು. ‘ಎಟುಕಿಸಲ್ಲ ಕಣೆ’ ಎಂದ ಭಾರತಿಯ ಮಾತಿಗೆ ಕೋಲೊಂದನ್ನು ತಂದು ಕೊಂಬೆಯನ್ನು ಬಗ್ಗಿಸಿದ್ದಳು.
ಹೂವನ್ನು ಕತ್ತಾಳೆಯ ನಾರಿಂದ ಕಟ್ಟುತ್ತಾ ಭಾರತಿ ತನಗೇನೋ ಗುಟ್ಟು ಗೊತ್ತಿದೆ ಎನ್ನುವಂತೆ ‘ನೀನು ಹೀಗಾಗ್ತೀಯ ಅಂತ ಅಂದ್ಕೊಂಡೆ ಇರ್ಲಿಲ್ಲ. . .’ ಅವಳ ಮಾತನ್ನು ತುಂಡರಿಸುತ್ತಾ ‘ಹುಷಾರು ಭಾರತಿ ಜೋರಾಗಿ ಎಳುದ್ರೆ ಹೂವು ಕತ್ತರಿಸಿ ಹೋಗುತ್ತೆ’ ಎಂದಿದ್ದಳು. ಅವಳ ಜೊತೆ ಏನೋ ಮಾತಾಡಬೇಕು ಅಂದುಕೊಂಡ ಭಾರತಿ ಮಾತಿಗಾಗಿ ಹುಡುಕುತ್ತಾ ಅವಳ ಮುಖವನ್ನೇ ದಿಟ್ಟಿಸಿದಳು.
ಕಟ್ಟಿದ ಹೂವನ್ನು ಅರ್ಧ ಮಾಡಿ ಕೊಟ್ಟಿದ್ದಳು ಭಾರತಿ. ಚಿಟ್ಟಿ ಅದನ್ನು ಮುಡಿದು ಸ್ಕೂಲಿಗೆ ಹೊರಟಳು. ಅಮ್ಮನಿಗೆ ಏನನ್ನಿಸಿತೋ ಚಿಟ್ಟಿ ಈ ಸಲ ನೀನು ಎಸ್ ಎಸ್ ಎಲ್ ಸಿ ಚೆನ್ನಾಗ್ ಓದ್ಬೇಕು ಬೇರೆ ಏನೂ ಯೋಚ್ನೆ ಮಾಡ್ಬೇಡ ಎಂದಳು ಅವಳ ಮಾತಿಗೆ ಚಿಟ್ಟಿ ತಲೆ ಆಡಿಸಿದಳಷ್ಟೇ.
ಮರಳ ಮೇಲೆ ಕೂತ ಸರೋಜ ನಕ್ಕತ್ತು, ಆರೋಗ್ಯ ಎಲ್ಲರಿಗೂ ಚಿಟ್ಟಿಯನ್ನು ತಮ್ಮ ಜೊತೆ ಮತ್ತೆ ಹಾಗೇ ಸೇರಿದ್ದಕ್ಕೆ ಸಂತೋಷ ಇತ್ತು. ಬಗ್ಗಿ ಮರಳ ಮೇಲೆ ಏನನ್ನೋ ಬರೀತಾ ಕೂತಿದ್ದ ಸರೋಜಾ ಬೆಳವಣಿಗೆಯ ಕಾರಣಕ್ಕೋ ಏನೋ ಎದೆ ಕಣಿವೆ ಆಳವಾಗಿ ಬ್ಲೌಸಿನ ಸಂದಿಯಿಂದ ಕಾಣುತ್ತಿತ್ತು. ಆರೋಗ್ಯ ಸಣ್ಣ ಕಲ್ಲನ್ನು ತೆಗೆದುಕೊಂಡು ಅಲ್ಲಿಗೆ ಗುರಿಯಿಟ್ಟು ಹೊಡೆದಳು. ಸರೋಜಾಗೆ ಕೋಪ ಬಂತು ‘ಯಾಕೆ?’ ಎಂದಳು. ‘ನಾನ್ ನೋಡ್ದೆ ಸರಿಯಾಯ್ತು. ಯಾವ್ದಾದ್ರೂ ಹುಡ್ಗ ನೋಡಿದ್ರೆ ನಿನ್ನ ಗತಿ ಅಷ್ಟೇ. . . ಸ್ವಲ್ಪ ಬ್ಲೌಸ್ ಜಗ್ಗಿಕೋ’ ಎಂದಳು. ಸರೋಜಾಗೆ ನಾಚಿಕೆಯಾಯಿತು.
ಭಾರತಿಗೆ ಏನನ್ನೊಸಿತೋ ಏನೋ ಮಾರನೆ ದಿನ ಅವಳ ಅಮ್ಮನಿಂದ ಬಾಡಿಯನ್ನು ಹೊಲೆಸಿಕೊಂಡು ಗಟ್ಟಿಯಾಗಿ ಒಳಗೆ ಕಟ್ಟಿಕೊಂಡು ಬಂದಿದ್ದಳು. ಅದನ್ನು ನೋಡಿದ ಪಾಪೇಗೌಡರು ಮೇಷ್ಟ್ರು ತುಂಬಾ ಕಾಳಜಿ ಇರುವ ಹಾಗೆ ಅವಳನ್ನು ಹತ್ತಿರಕ್ಕೆ ಕರೆದು ‘ಅಯ್ಯೋ ಪುಟ್ಟಿ ಇಷ್ಟು ಬಿಗಿಯಾಗಿ ಕಟ್ಟಿಕೋಬಾರದಮ್ಮಾ ಬೆಳವಣಿಗೆ ಸರಿಯಾಗಿ ಆಗಲ್ಲ’ ಎಂದಿದ್ದರು. ‘ಥೂ ಅಪಾ ಪೋಲಿ ಸಣ್ಣ ಮಕ್ಕಳು ಅಂತಾನೂ ನೋಡಲ್ವಲ್ಲಾ, ಎದ್ರೂಗೆ ಅನ್ನೋದಲ್ವಾ ನಿಮಗ್ಯಾಕಯ್ಯಾ ಬೇಕು ಅಂತ? ಸುಮ್ನೆ ಕೇಳಿಸ್ಕೊಂಡ್ ಬಂದ್ಯ’ ಎಂದಿದ್ದಳು ಸರೋಜಾ. ‘ಏನ್ ಮಾಡೋದು ಈಚೆಗೆ ಮೇಷ್ಟ್ರು ಎಲ್ಲರಿಗೂ ಹೇಳೋಕ್ಕೆ ಶುರು ಮಾಡಿದ್ದಾರೆ’ ಎಂದಳು ನಕ್ಕತ್ತು, ತನಗೇನೋ ಅಂದಿದ್ದನ್ನು ನೆನೆಸಿಕೊಂಡು. ಮೇಷ್ಟ್ರು ಅಂದ್ರೆ ಅಪ್ಪ ಅಮ್ಮ ಇದ್ದ ಹಾಗೆ ಅಂತ ಅವರೇ ಅಂತಾರೆ. ಅವರೇ ಹೀಗ್ ಮಾತಾಡ್ತಾರಲ್ಲಾ? ಈಗ ಚಿಟ್ಟಿಗೆ ಅನುಮಾನ ಶುರುವಾಯ್ತು.
‘ಮೇಷ್ಟ್ರು ನಮ್ಮ ಒಳ್ಳೇದಕ್ಕೆ ಅಂದಿರಬಹುದಲ್ಲ’ ಎಂದಳು ತಟ್ಟನೆ. ‘ಅಯ್ಯೋ ನಿನಗೊಂದು ಭ್ರಮೆ. ಈ ಗಂಡಸರಿದ್ದಾರಲ್ಲ ಹತ್ತು ಹನ್ನೆರಡು ವರ್ಷ ದಾಟಿದ ಮೇಲೆ ಎಲ್ಲರೂ ಒಂದೇ. ಅವಕಾಶ ಹೇಗ್ ಸಿಕ್ರೂ ಸರಿನೇ ಅಂತಾರೆ’ ಎಂದಳು ಆರೋಗ್ಯ. ಆರೋಗ್ಯಳ ಮಾತು ಕೇಳಲಿಕ್ಕೆ ಒರಟಾಗಿದ್ದರೂ ಸರ್ವ ಸಮ್ಮತವಾಗಿತ್ತು. ಗಾಯಿತ್ರಿ ಮೇಡಂನ ನೋಡಲಿಕ್ಕೆ ಬಂದ ಅವರ ಕಜಿನ್ ( ಆ ಪದವನ್ನು ಕೇಳಿದ್ದೇ ಮೊದಲ ಬಾರಿ ಗಾಯಿತ್ರಿ ಮೇಡಂ ಬಾಯಲ್ಲಿ. ಹಾಗೆಂದರೆ ಅರ್ಥ ಏನಂತ ತಿಳಿಯದೆ ಎಲ್ಲಾ ಕಂಗಾಲಾಗಿದ್ದರು) ಭಾರತಿಯ ಬಟ್ಟಲ ಕಣ್ಣ್ಣುಗಳಗೆ ಮರುಳಾಗಿ ‘ಐ ಲವ್ ಯೂ’ ಅಂದು, ಅವಳು ಅದಕ್ಕೆ ಅತ್ತು, ಆಕಾಶ ತಲೆಯ ಮೇಲೆ ಕಳಚಿದ ಹಾಗೇ ಆಡಿದ್ದು ಎಲ್ಲರಿಗೂ ಅಯಾಚಿತವಾಗಿ ನೆನಪಾಗಿತ್ತು. ತಮಗೆ ಯಾರೂ ಹಾಗೆ ಹೇಳಲಿಲ್ಲ ಅಂತ ಯಾರು ಯಾರಿಗೋ ಹೊಟ್ಟೆಯಲ್ಲಿ ಬೆಂಕಿ ಆಡಿದ್ದೂ ತಿಳಿದಿತ್ತು.
ಎಲ್ಲಾ ವಿದ್ಯಮಾನಗಳ ಒಳಗೆ ಲೆಕ್ಕದ ಪುಸ್ತಕ ತೆರೆದರೆ ಸಾಕು ಚಿಟ್ಟಿಗೆ ನಿಂಗರಾಜು ತಟ್ಟನೆ ಕಣ್ಣ ಮುಂದೆ ತೇಲಿಬರುತ್ತಿದ್ದ. ಅವಳ ಮನಸ್ಸು ಅಲ್ಲೋಲ ಕಲ್ಲೋಲ ಆಯಿತು. ಅವಳು ತನ್ನ ಎದೆಯ ಮೇಲೆ ಕೈ ಇಟ್ಟ್ಟುಕೊಂಡು ‘ಮನಸೇ ಆವೇಗಕ್ಕೆ ಒಳಗಾಗಬೇಡ’ ಎಂದು ಹತ್ತು ಸಾರಿ ಹೇಳಿಕೊಂಡಳು. ಸ್ವಲ್ಪ ಸಮಾಧಾನ ಆಯಿತು. ಲೆಕ್ಕದಲ್ಲಿ ಮನಸ್ಸಿಟ್ಟಳು. ಕೆನ್ನೆಗೆ ಹೊಡೆದ ಹುಡುಗ ಸ್ವಲ್ಪ ಮರೆಯಾಗಿ ನಿಂತ.
ಚಿಟ್ಟಿ ಓದಿನಲ್ಲಿ ತನ್ನನ್ನು ತೊಡಗಿಸಿಕೊಂಡಳು. ಕಾಡುಸುತ್ತುವುದು, ಮರ ಹತ್ತುವುದು ಎಲ್ಲವೂ ಕಡಿಮೆ ಮಾಡಿದಳು. ಸ್ಕೂಲಲ್ಲಿ ಕೂಡಾ ‘ಚಿಟ್ಟಿ ಈಗ ಪರವಾಗಿಲ್ಲ’ ಎನ್ನುವ ಮಾತುಗಳನ್ನು ಕೇಳಿದಳು. ಸದ್ಯ ಪಾಸ್ ಆದರೆ ಸಾಕು ಎಂದು ಅಮ್ಮ ನಿಟ್ಟುಸಿರಿಟ್ಟಳು. ಅವಳ ನಿಟ್ಟುಸಿರಿನ ನಡುವೆ ಪುಟ್ಟಿ, ಸೀನುವಿನ ಬಗ್ಗೆ ತನಗೆ ಯಾವ ಆತಂಕವೂ ಇಲ್ಲ ಎನ್ನುವ ಭಾವ ಇತ್ತು. ಅಪ್ಪ ಏನೂ ತಲೆ ಕೆಡಿಸಿಕೊಂಡವನ ಹಾಗಿರಲಿಲ್ಲ.
ಈ ನಡುವೆಯೇ ಅಜ್ಜಿಗೆ ಕಿವಿ ಕೇಳುವುದು ನಿಂತು ಹೋಯಿತು. ಎಷ್ಟು ಕೂಗಿಕೊಂಡರೂ ಅವಳಿಗೆ ಕೇಳುತ್ತಲೇ ಇರಲಿಲ್ಲ. ಕರೆದುಕೊಂಡು ಹೋಗಿ ‘ಕಿವಿಗೊಂದು ಮಿಷನ್ ಹಾಕಿಸಿಕೊಂಡು ಬನ್ನಿ’ ಅಂತ ಅಮ್ಮ ಹೇಳಿದರೂ ಅಪ್ಪ ಕೇಳಲಿಲ್ಲ. ಸದ್ಯ ಅವಳಿಗೆ ಏನೂ ಕೇಳಲ್ಲ ಅಂದ್ರೆ ನಾವು ನೆಮ್ಮದಿ ಏನ್ ಬೇಕಾದ್ರೂ ಮಾತಾಡಿಕೊಳ್ಳಬಹುದು ಎಂದು ಸಮಾಧಾನ ಪಟ್ಟುಕೊಂಡ.
ಆದರೆ ಅಜ್ಜಿ ದಿನೇ ದಿನೆ ಊರವರಿಗೆ ಹಾಸ್ಯದ ವಸ್ತುವಾಗತೊಡಗಿದಳು. ‘ಅಜ್ಜಿ ಊಟ ಮಾಡಿದ್ಯ?’ ಅಂದ್ರೆ
‘ಬಿಸಿಲೇ ಇಲ್ಲ ಕಣೆ ಏನು ಹಪ್ಪಳ ಮಾಡೋದು’ ಎನ್ನುತ್ತಿದ್ದಳು. ನಕ್ಕವರ ನಗುವಿಗೆ ಕಾರಣ ತಿಳಿಯದೆ ಅಜ್ಜಿ ‘ಅಯ್ಯಾ ಅದ್ಯಾಕ್ ನಗ್ತೀರ’ ಎನ್ನುತ್ತಾ ರೇಗುತ್ತಿದ್ದಳು. ಇದೂ ಅಪ್ಪನಿಗೆ ಕಿರಿಕಿರಿ ಅನ್ನಿಸಲಿಲ್ಲ. ಅಪ್ಪನ ಹತ್ತಿರ ಆ ಮಿಷನ್ ತಂದುಕೊಡಲಿಕ್ಕೆ ದುಡ್ಡಿರಲಿಲ್ಲವೋ ಅಥವಾ ತಂದುಕೊಡುವ ಉದ್ದೇಶವಿರಲಿಲ್ಲವೋ ತಿಳಿಯದೆ ಚಿಟ್ಟಿ ಕಂಗಾಲಾದಳು.
ಇಂಥಾ ಹೊತ್ತಿನಲ್ಲೆ ಯಮನಸೋಲು ನಾಟಕವನ್ನು ಆಡಬೇಕೆಂದು ಸ್ಕೂಲಲ್ಲಿ ನಿರ್ಧಾರ ಅಗಿದ್ದು. ಅದರಲ್ಲಿ ಚಿಟ್ಟಿ ಸತ್ಯವಾನನ ಪಾತ್ರ ಮಾಡಬೇಕೆಂದು ತೀರ್ಮಾನ ಆಗಿದ್ದು. ಅದು ಅವಳ ಒಳಗೆ ಹೊಸ ಹುರುಪನ್ನು ತುಂಬಬಹುದೆಂದು ಅವಳಿಗೆ ತಕ್ಷಣಕ್ಕೆ ಅನ್ನಿಸಿರಲಿಲ್ಲವಾದರೂ ಅದು ಅವಳ ಪಾಲಿಗೆ ಎಲ್ಲವನ್ನೂ ಮರೆಸುವ ಸಂಜೀವಿನಿ ಆಗುತ್ತದೆಂದು.
(ಮುಂದುವರಿಯುವುದು…)

‍ಲೇಖಕರು G

January 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ನಾಟಕದ ಗುಂಗಿನ ನಡುವೆಯೂ..’ « ಅವಧಿ / Avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ನಾಟಕದ ಗುಂಗಿನ ನಡುವೆಯೂ..’ January 14, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: