ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿ ಮಸೀದಿಗೆ ಹೋಗಿದ್ದು

ಭಾಗ -3

(ಭಾಗ – ೨ ಓದಲು ಇಲ್ಲಿ ಕ್ಲಿಕ್ಕಿಸಿ)

ದಿನೇ ದಿನೆ ಚಿಟ್ಟಿಯ ಜಗತ್ತು ವಿಸ್ತಾರವಾಗುತ್ತಾ ಹೋಗುತ್ತಿತ್ತು. `ಅಮ್ಮ ಹಾಗಂದ್ರೇನೇ?’ ಎನ್ನುವ ಅವಳ ಪ್ರಶ್ನೆಗೆ ಉತ್ತರ ಹೇಳಲಾಗದಾದಾಗ ಅಮ್ಮಾ `ಅಬ್ಬಾ ಅಬ್ಬಾ ಅದೇನ್ ಬಾಯೇ ನಿಂದು? ಯಾವ್ ಗಳಿಗೇಳಿ ನಿನ್ನ ಹೆತ್ತ್ಬಿಟ್ನೋ’ ಎಂದು ರೇಗುತ್ತಿದ್ದರೆ, ಅಪ್ಪ ಕೋಪ ಮಾಡಿಕೊಳ್ಳುತ್ತಿದ್ದ. ಅಜ್ಜಿ ಅಸಹನೆಯ ಮಧ್ಯೆಯೂ `ಪಾಪ ಕುನ್ನಿ ಅದಕ್ಕೇನು ತಿಳಿದೀತೇ? ಗೊತ್ತಿದ್ದರೆ ಹೇಳು, ಇಲ್ಲಾಂದ್ರೆ ಸುಮ್ಮನಿರು ಬೆಳ್ಯೋ ಹುಡ್ಗೀನ ಹೀಗೆಲ್ಲಾ ಅಂತಾರಾ?’ ಎನ್ನುತ್ತಾ ಪ್ರೀತಿಯನ್ನು ಮೆರೆಯುತ್ತಿದ್ದಳು. ಅಪ್ಪ ತೀರಾ ಬೇಸರದಿಂದ `ಮಗಳನ್ನ ಹೀಗಾ ಬೆಳೆಸುವುದು ?’ ಎಂದು ಬೈದ ದಿನ ಅಮ್ಮನಿಗೆ ಚಿಟ್ಟಿ ದೊಡ್ಡವಳಂತೆ ಕಂಡು `ಏಯ್ ಚಿಟ್ಟಿ ಇದನ್ನ ಮಾಡೇ ಅದನ್ನ ಮಾಡೆ’ ಎನ್ನುತ್ತ ಹತ್ತು ಕೆಲಸವನ್ನು ಹೇಳುತ್ತಿದ್ದಳು.
ಹಗಲೆಲ್ಲಾ ಕುಣಿದರೂ ದಣಿಯದ ಅವಳಿಗೆ ಅಮ್ಮ ಕೆಲಸ ಹೇಳಿದಾಗ ಮಾತ್ರ ಸುಸ್ತೋ ಸುಸ್ತು. ಸಾಲದ್ದಕ್ಕೆ ಪುಟ್ಟಿ ಮತ್ತು ಸೀನುವನ್ನು ನೋಡಿಕೊಳ್ಳುವ ಕೆಲಸ ಕೂಡಾ ಅವಳ ಹೆಗಲಿಗೆ ವರ್ಗಾವಣೆಯಾಗುತ್ತಿತ್ತು. ಆಟಕ್ಕೆ ಕರೆಯಲು ಬಂದ ಸ್ನೇಹಿತೆಯರಿಗೆ ಅಮ್ಮ `ಅವ್ಳು ಇವತ್ತು ಬರಲ್ಲ ಹೋಗ್ರೆ’ ಅಂತ ಖಡಕ್ಕಾಗಿ ಉತ್ತರ ಕೊಡುತ್ತಿದ್ದಳು. `ಇವಳಿಲ್ಲ ಅಂದ್ರೆ ನಮ್ಗೆ ಆಟಾನೇ ಇಲ್ವಾ?’ ಅಂತ ಗೊಣಗಿಕೊಂಡರೂ ಚಿಟ್ಟಿಯಿಲ್ಲದೆ ಹೋಗಲಾಗದೆ ಗಿಡದ ಮರೆಗೆ ನಿಂತು `ಬಂದುಬಿಡು ಬಂದುಬಿಡು’ ಅಂತ ಅವಳಿಗೆ ಸನ್ನೆ ಮಾಡಿ ಕರೆಯುತ್ತಿದ್ದರು.
ಆಗೆಲ್ಲಾ ಚಿಟ್ಟಿಗೆ ವಿನಾಕಾರಣ ಅಳು ಬರುತ್ತಿತ್ತು. `ಮಟ ಮಟ ಮಧ್ಯಾಹ್ನ ನಾಕು ತುತ್ತು ತಿಂದು ಮಲಗೋದ್ ಬಿಟ್ಟು ಪುಟ್ಟ ಹುಡುಗಿ ಅನ್ನೋ ಹಾಗೆ ಕುಣೀತಾಳೆ. ನಂಗೂ ನಿದ್ದೆ ಇಲ್ಲ ಏನ್ ಜಾತಕಾನೇ ನಿಂದು?’ ಎಂದು ಬೈದರೂ ಅಳು ನಿಲ್ಲಲಿಲ್ಲ. `ಹಾಳಾಗಿ ಹೋಗು’ ಎಂದು ಅಮ್ಮ ಅವಳನ್ನ ಕಳಿಸುವವರೆಗೂ ಅಳುತ್ತಲೇ ಇದ್ದಳು. ಅಮ್ಮ ಒಂದು ಸಲ ಹಾಗಂದಿದ್ದೆ ತಡ ಚಿಟ್ಟಿಯ ಕಾಲು ನೆಲದ ಮೇಲೆ ನಿಲ್ಲದೆ ಒಂದೇ ನೆಗೆತಕ್ಕೆ ಸೊಸೈಟಿ ಬಿಲ್ಡಿಂಗನ್ನು ದಾಟಿ ಗೋವಿಂದು ಮನೆಯ ಕಡೆಗೆ ಹಾರಿ ಬಿಟ್ಟಿತ್ತು.
ದ್ಯಾಮಕ್ಕ ಕಟ್ಟೆಗೆ ಕೂತು ನಲವತ್ತರ ವಯಸ್ಸಿಗೆ `ಹಲ್ಲು ಬೇಕಾ ಜೀವ ಬೇಕಾ’ ಎಂದ ಡಾಕ್ಟರಿಗೆ ಮುಡಿಪು ಎನ್ನುವಂತೆ ಕೊಟ್ಟ ತನ್ನ ಎಲ್ಲಾ ಹಲ್ಲುಗಳನ್ನು ನೆನೆಸಿಕೊಳ್ಳುತ್ತಾ ಕುಟ್ಟಾಣಿಯಲ್ಲಿ ಎಲೆ ಅಡಿಕೆಯನ್ನು ಕುಟ್ಟುತ್ತಿದ್ದಳು. ಅವಳಿಗೆ ತನ್ನ ಗಂಡ ಗೋವಿಂದು ಅಂದ್ರೆ ಜೀವ. ತನ್ನ ಬಿಟ್ಟು ಬೇರೆ ಹೆಣ್ಣಿನ ಕಡೆಗೆ ನೋಡಲ್ಲ ಎನ್ನುವ ಅಭಿಮಾನ. ಅವಳ ಮೈ ಚಕ್ಕು ಚದುರದ ಹಾಗಿದ್ದುದಕ್ಕೆ ಅಜ್ಜಿ `ಅವಳಿಗೇನು ಮಕ್ಕಳಾ ಮರೀನಾ?’ ಎಂದಿದ್ದನ್ನ ಚಿಟ್ಟಿ ಕೇಳಿಸಿಕೊಂಡಿದ್ದಳು. ಅಜ್ಜಿಗೆ ಗೋವಿಂದು ಮೇಲೆ ಪ್ರೀತಿ. ಪಾಪ ಅವನ ಸಂತತಿ ಬೆಳೆಯಲಿಲ್ಲ ದ್ಯಾಮಕ್ಕನಿಂದ ಮನೆ ಬೆಳಕಾಗಲಿಲ್ಲ ಎನ್ನುವ ಕೊರಗು ಗೋವಿಂದುವಿಗಿಂತ ಅಜ್ಜಿಗೆ ಜಾಸ್ತಿಯಿತ್ತು. `ಅವ್ರವ್ರ ಮನೆಯ ವಿಷ್ಯ ಅವ್ರವ್ರಿಗೆ ನೀವ್ಯಾಕೆ ತಲೆ ಹಾಕ್ತೀರಾ? ನಿಮ್ಮನೆ ಕಾವಲಿಯೇ ತೂತು’ ಎಂದು ಅಮ್ಮನ ಕೈಲೂ ಬೈಸಿಕೊಂಡಿದ್ದಳು.
ಚಿಗುರೆಯ ಹಾಗೆ ಹಾದು ಬಂದ ಚಿಟ್ಟಿಯನ್ನು ನೋಡ್ತಾ `ಈ ಹಾಳು ಹುಡ್ರುಗೆ ಬೆಳಗೂ ಇಲ್ಲ ಸಂಜ್ಯೂ ಇಲ್ಲ ಕುಣೀತಾವೆ’ ಎಂದು ಗೊಣಗಿದ್ದನ್ನ ಕೇಳಿ ಅವಳನ್ನ ಅಣಕಿಸಿ ಚಿಟ್ಟಿ ತೋಪಿನ ಒಳಗೆ ನುಸುಳಿಯೇ ಬಿಟ್ಟಿದ್ದಳು. ಅವಳ ಬೆನ್ನ ಹಿಂದೆ `ನನ್ನೇಅಣುಕುಸ್ತೀಯೇನೇ?’ ಎನ್ನುವ ದ್ಯಾಮಕ್ಕನ ಮಾತು ಅಟ್ಟಿಸಿಕೊಂಡು ಬಂದಿತ್ತು. ಚಿಟ್ಟಿಯ ಆಗಮನದಿಂದ ಹೊಸ ಚೈತನ್ಯವನ್ನು ತೆಗೆದುಕೊಂಡ ಅವಳ ಸೈನ್ಯ `ಹೋ’ ಅಂತ ಒಮ್ಮೆ ತೋಪು ಅಲ್ಲಾಡುವ ಹಾಗೆ ಕೂಗಿತು. ಗೋವಿಂದು ಒಮ್ಮೆ ಜಗುಲಿಗೆ ಬಂದು ಹೆಗಲ ಮೇಲಿನ ಟವಲ್ಲನ್ನು ಕೊಡವಿ, ಬಾಯಲ್ಲಿದ್ದ ಎಲಡಿಕೆಯನ್ನು ಉಗಿದು` ಬಾಲ ಒಂದಿಲ್ಲ. . . ‘ ಎಂದು ಗೊಣಗಿದ್ದು ಯಾರಿಗೂ ಕೇಳಿಸಲೇ ಇಲ್ಲ. ಚಕ್ರತೀರ್ಥದ ನೀರಿನಲ್ಲಿ ಕಾಲನ್ನ ಇಳಿಬಿಟ್ಟು ಮೀನಿನ ಕಚಗುಳಿಗೆ ಪುಳಕಗೊಳ್ಳುತ್ತಾ ಒಡಲಲ್ಲಿ ತುಂಬಿಕೊಂಡ ಕಡಲೆಪುರಿಯನ್ನು ಮುಗಿಸುವಾಗ ತಲೆಯಲ್ಲಿ ಯಾವುದೋ ಹೊಸ ಆಲೋಚನೆ ಹುಟ್ಟಿಬಿಡುತ್ತಿತ್ತು. ಅವತ್ತೂ ಹಾಗೇ. . .
ಸ್ವಲ್ಪ ಮುಂದೆ ಹೋದರೆ ಅಲ್ಲೊಂದು ಪನ್ನೇರಳೆ ಮರ. ನೀರಿಗೆ ಆತುಕೊಂಡಂತೆ ತನ್ನ ಕೊಂಬೆಯನ್ನು ಇಳಿಸಿ ನೋಡುವವರನ್ನ `ಹತ್ತು ಬಾ’ ಎನ್ನುವಂತೆ ಕರೆಯುತ್ತಿತ್ತು. ಬಿಳಿಯದಾದ ಹಣ್ಣಿನ ರುಚಿ ನಾಲಿಗೆಯ ಮೇಲೆ ನಲಿದಾಡಿ ನಾ ಮುಂದು ತಾ ಮುಂದು ಎಂದು ಎಲ್ಲರೂ ಮರದ ಮೇಲೆ ಕೂತಿದ್ದರು. ಹಣ್ಣನ್ನು ತಿನ್ನುತ್ತಾ ಕೂತಿದ್ದ ಸರೋಜಾಗೆ ಯಾರೋ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಹೋದ ಹಾಗನ್ನಿಸಿತು ತಮ್ಮ ಚಲನವಲನಗಳನ್ನು ಯಾರೋ ಗಮನಿಸುತ್ತಿರಬೇಕು ಅನ್ನಿಸಿ ಆ ಕಡೆಗೆ ನೋಡುವಾಗ ಯಾರೂ ಇಲ್ಲ. ಅವಳಿಗೆ ಇದ್ದಕ್ಕಿದ್ದ ಹಾಗೆ ಅದು ಬ್ರಾಹ್ಮಣರನ್ನು ಸುಡುವ ಜಾಗ ಅಂತ ನೆನಪಾಗಿಬಿಟ್ಟಿತ್ತು. ಗಾಳಿ ಇರುವ ಕಡೆಗೆ ನೆರೆಯರ ಹೆಣ್ಣುಮಕ್ಕಳು ಹೋಗಬಾರದು ಎಂದು ಅಮ್ಮ ಹೇಳುತ್ತಿದ್ದುದು ಅವಳಿಗೆ ನೆನಪಿಗೆ ಬಂದು ಖಂಡಿತಾ ತನಗೆ ಕಂಡಿದ್ದು ದೆವ್ವವೇ ಎನಿಸಿ `ಅಯ್ಯೋ’ ಎನ್ನುತ್ತಾ ನೀರಿಗೆ ಹಾರಿ ದಡಕ್ಕೆ ಸೇರಿ ಓಡಿ ಬಿಟ್ಟಳು. ಏನಾಯಿತು ಎಂದು ಅರ್ಥ ವಾಗುವ ಮುನ್ನವೇ ಎಲ್ಲರೂ ಅವಳನ್ನ ಅನುಸರಿಸಿ ಓಡಿದ್ದರು.
ಸರೋಜಾ ಹೀಗೆ ಓಡುತ್ತಾ ಬಂದು ಕಾಡುಮಲ್ಲಿಗೆ ಗಿಡದ ಅಡಿಗೆ ಕೂತು ಸುಧಾರಿಸಿಕೊಳ್ಳುವಾಗ ಅವಳನ್ನ ಸೇರಿದ ಮಂಗಳಿ, ಭಾರತಿ, ನಕ್ಕತ್ತು, ಚಿಟ್ಟಿ ಎಲ್ಲರಿಗೂ ಏನು ಎನ್ನುವ ಕುತೂಹಲ. ಜಗತ್ತಿನ ಎಲ್ಲಾ ಗಾಬರಿಯನ್ನೂ ಮುಖಕ್ಕೆ ತಂದುಕೊಂಡ ಸರೋಜಾ `ಅಲ್ಲಿ ಗಾಳಿ ಇದೆ ಕಣ್ರೆ’ ಎಂದಿದ್ದಳು. ದೆವ್ವ ಎಂದರೆ ಮೊದಲೇ ಹೆದರುವ ಚಿಟ್ಟಿ `ದೆವ್ವಾನಾ. . . ? ಎಂದು ಕೇಳುವಷ್ಟರಲ್ಲಿ ಪೊದೆಯ ಸಂದಿಯಲ್ಲಿನ ಸದ್ದಿಗೆ `ಅಯ್ಯವ್ವಾ’ ಎಂದು ಕಿರುಲಿದ್ದಳು. ಮೊದಲೇ ಹೆದರಿದ್ದ ಎಲ್ಲರೂ ಚಿಟ್ಟಿಯ ಕೂಗಿಗೆ ಮತ್ತಷ್ಟು ಕಂಗಾಲಾದರು. ನಕ್ಕತ್ತು ಮಾತ್ರ ಮಸೀದಿಯಲ್ಲಿ ಕಟ್ಟಿಸಿಕೊಂಡು ಬಂದ ತಾಯಿತವೇ ಇವತ್ತು ತಮ್ಮೆಲ್ಲರನ್ನೂ ಕಾಪಾಡಿದ್ದು, ಆಚೆ ಮನೆ ಚಂದ್ರಮ್ಮನಿಗೆ ದೆವ್ವ ಮೆಟ್ಟಿಕೊಂಡಾಗ ಮುಲ್ಲಾ ಹಾಕಿದ ತಾಯತವೇ ಕೆಲಸಕ್ಕೆ ಬಂದಿದ್ದು ಎಂದು ತನಗೆ ಗೊತ್ತಾದ ಎಲ್ಲಾ ಕಥೆಗಳನ್ನೂ ಹೇಳತೊಡಗಿದಳು. ಆಗಲೇ ತನಗೂ ಅಂಥಾ ತಾಯಿತ ಬೇಕು ಎಂದು ಚಿಟ್ಟಿಗೆ ಅನ್ನಿಸಿತ್ತು. ಎರಡು ರೂಪಾಯಿ ಕೊಟ್ಟರೆ ಮುಲ್ಲಾ ಹತ್ತಿರ ತಾನೇ ಕಟ್ಟಿಸುವುದಾಗಿಯೂ ಅದರಿಂದಾಗಿ ಅಲ್ಲಾ ಎಲ್ಲರನ್ನೂ ದುಷ್ಟ ಶಕ್ತಿಗಳಿಂದ ಕಾಪಾಡುತ್ತಾನೆ ಎಂದೂ ಹೇಳಿದ್ದು ಚಿಟ್ಟಿ ತಲೆಯಲ್ಲಿ ಉಳಿದುಬಿಟ್ಟಿತ್ತು.
ಊರಲ್ಲಿದ್ದ ಐವತ್ತು ಮನೆಗಳಲ್ಲಿ ಹತ್ತು ಮುಸಲ್ಮಾನರದ್ದು. ಎಲ್ಲಿಂದಲೋ ಗುಳೆ ಬಂದ ಅವರಲ್ಲಿ ಕೆಲವರು ದನ- ಎತ್ತುಗಳಿಗೆ ಲಾಳ ಕಟ್ಟುತ್ತಿದ್ದರೆ; ಮತ್ತೆ ಕೆಲವರು ಟೈಲರ್ಗಳು. ನಕ್ಕತ್ತು ಮನೆಯಲ್ಲಿ ಚಪ್ಪಲಿಗಳನ್ನು ಮಾರುತ್ತಿದ್ದು, ಚಪ್ಪಲಿಗಾಗಿ ಐವತ್ತು ಕಿಲೋ ಮೀಟರ್ನ ಪಟ್ಟಣಕ್ಕೆ ಹೋಗುವ ಕಷ್ಟವನ್ನು ತಪ್ಪಿಸಿದ್ದರು. ನಕ್ಕತ್ ಬಳಿ ಸುಂದರವಾದ ಸಿಂಡ್ರೆಲಾ ಚಪ್ಪಲಿ ಕೂಡಾ ಇತ್ತು. ಬಿಳಿದಾದ ಅವಳ ಕಾಲಲ್ಲಿ ಪಳ್ಳನೆ ಹೊಳೆಯುವಾಗ ಸಿಂಡ್ರ್ರಲಾನೆ ಇರಬೇಕು ಅಂತ ಭ್ರಮೆಗೆ ಕೂಡಾ ಬಿದ್ದಿದ್ದ ಚಿಟ್ಟಿಗೆ ಅಂಥಾ ಚಪ್ಪಲಿಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಹಾಕಿಕೊಳ್ಳಬೇಕು ಎನ್ನುವ ಆಸೆ ಕಾಡುತ್ತಿತ್ತು.
ತಾಯಿತ ಕಟ್ಟಿಸಿಕೊಳ್ಳಬೇಕು ಅದಕ್ಕೆ ಎರಡು ರೂಪಾಯಿ ಬೇಕು ಎನ್ನುವ ಧ್ಯಾನದಲ್ಲಿ ಮನೆಗೆ ಬಂದ ಚಿಟ್ಟಿ ತನಗೇ ದೆವ್ವ ಕಾಣಿಸಿತು ಎನ್ನುವ ಸುದ್ದಿಯನ್ನು ಬಿತ್ತರಿಸಿದಾಗ ಎಲ್ಲರಿಗೂ ಗಾಬರಿ. `ಏನ್ ಹೇಳ್ತಾ ಇದೀಯಾ?’ ಎನ್ನುತ್ತಾ ಅಜ್ಜಿ ಕೇಳಿದಾಗ `ಹೂಂ. ಅಜ್ಜಿ ಅದು ಬಿಳೀ ಸೀರೆ ಉಟ್ಟಿತ್ತು. ಕೋರೆ ಹಲ್ಲಿತ್ತು. ಅದರ ಕಣ್ಣು ಕೆಂಪಾಗಿತ್ತು. ನನ್ನ ನೋಡಿ ಬಾ ಅಂತ ಕರೀತು. ನಾನು ಓಡಿ ಬಂದುಬಿಟ್ಟೆ ಎಂದೆಲ್ಲಾ ಹುಟ್ಟಿಸಿಕೊಂಡು ತಾನು ಹುಟ್ಟಿಸಿಕೊಂಡಿದ್ದೇ ನಿಜ ಎಂದು ಭಾವಿಸಿಕೊಳ್ಳುತ್ತಾ ಹೇಳಿದಾಗ ಅಜ್ಜಿ ನಡುಗುವ ತನ್ನ ಕೈಗಳನ್ನು ಎದೆ ಮೇಲೆ ಇರಿಸಿಕೊಂಡು `ನನ್ನ ಮೊಮ್ಮಗಳನ್ನ ಎಂಥಾ ಗಂಡಾಂತರದಿಂದ ತಪ್ಪಿಸಿಬಿಟ್ಟೆ. ನಿನಗೆ ಈಡುಗಾಯಿ ಒಡಿಸ್ತೀನಿ ತಂದೆ ವೀರಭದ್ರಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟಿದ್ದಳು. ಅಮ್ಮ ಮಾತ್ರ `ಹಾಳ್ ರಂಡೆ ಮಟ ಮಟ ಮಧ್ಯಾಹ್ನ ಹೊರಗ್ ಹೋಗ್ಬೇಡ ಅಂದ್ರೆ ಕೇಳ್ತೀಯಾ? ಮೊದ್ಲೇ ಈ ಊರಲ್ಲಿ ಮೋಹಿನಿ ಕಾಟ ಜಾಸ್ತಿ. ಜನ ಅಲ್ಲಿ ಇದು ಕಾಣ್ತು ಅಲ್ಲಿ ಅದು ಕಾಣ್ತು ಅನ್ನೋವಾಗ ಹುಷಾರಾಗಿ ಬರೋಕಾಗಲ್ವಾ’ಎನ್ನುತ್ತಾ ಬೈಯ್ಯ ತೊಡಗಿದ್ದಳು.

ಚಿಟ್ಟಿ ಯಾವುದನ್ನೂ ಲೆಕ್ಕಿಸದೆ ಅಜ್ಜಿಯ ಕಿವಿಯ ಬಳಿ ಬಂದು `ಅಜ್ಜಿ ಎರಡು ರೂಪಾಯಿದ್ಯಾ?’ ಕೇಳಿದಳು. `ಎರಡು ರೂಪಾಯಾ . . .ಯಾಕೆ?’ ಎಂದಳು ಅಜ್ಜಿ ಅಚ್ಚರಿಯಿಂದ. ಹೇಳುವುದೋ ಬೇಡವೋ ಎನ್ನುವಂತೆ `ಮತ್ತೆ . . . .ಮತ್ತೆ . . . ಮುಲ್ಲಾ ಹತ್ರ ತಾಯಿತ ಕಟ್ಟಿಸಿಕೊಂಡ್ರೆ ಇಂಥಾದ್ದೆಲ್ಲಾ ಏನು ಮಾಡಲ್ಲ ಕಾಣೋದೂ ಇಲ್ವಂತೆ ಅದಕ್ಕೆ . . .’ಎಂದಳು ಚಿಟ್ಟಿ. ಅದನ್ನು ಕೇಳಿಸಿಕೊಂಡ ಅಮ್ಮ `ನಿನ್ನ ಮೂತಿಗೆ ಇದು ಬೇರೆ. ಅಲ್ಲ ಕಣೇ ನಮ್ಮ ದೇವ್ರೇನು ತಾಯಿತ ಕೊಡಲ್ಲ ಅಂದಿದ್ಯಾ ವೀರಭದ್ರನ್ನೋ ಅಂತರಗಟ್ಟಮ್ಮನ್ನೋ ಕೇಳಿದ್ರೆ ಅವ್ರೂ ಕೊಡ್ತಾರೆ. ನೋಡು ಆ ನಕ್ಕತ್ತ್ಗೆ ಹೇಳು ಇಂಥಾದ್ದೆಲ್ಲಾ ಇನ್ನೊಂದ್ ಸಲ ಹೇಳಿದ್ರೆ ಅವ್ರಮ್ಮನ ಹತ್ರ ಮಾತಾಡಬೇಕಾಗುತ್ತೆ ಅಂತ. ಸುಮ್ನೆ ನಮ್ಮ್ ಮಯರ್ಾದೇನ ಬೀದೀಗ್ ಎಳೀಬೇಡ’ ಎಂದು ಗುಡುಗಿದ್ದಳು. ಅದನ್ನ ಕೇಳಿಸಿಕೊಂಡ ಅಜ್ಜಿ `ಅಲ್ಲ ಕಣೆ ನಾಗೂ, ಮಗು ಏನೋ ಕೇಳಿದ್ರೆ ನೀನ್ಯಾಕ್ ಹೀಗ್ ಕೂಗಾಡ್ತೀಯ? ನಮ್ಮ ಇವ್ರ ಕಾಲ್ದಲ್ಲಿ ಹೇಗಿತ್ತು ಗೊತ್ತಾ? ದರ್ಗಾಕ್ಕೆ ಮೊದಲು ನಮ್ಮನೆಯಿಂದಾನೇ ಸಕ್ಕರೆ ಓದಿಸುತ್ತಿದ್ದಿದ್ದು. ಆಗೆಲ್ಲಾ ಮಕ್ಕಳು ಬೆಚ್ಚಿ ಬಿದ್ರೆ ತಾಯಿತ ಮಂತ್ರಿಸಿಕೊಂಡು ಬರುತ್ತಿದ್ರು. ನಿನ್ನ ಗಂಡನಿಗೂ ಎಷ್ಟೋ ಸಲ ನಾನೇ ಕಟ್ಟಿಸಿದ್ದೀನಿ’ ಎನ್ನುತ್ತಾ ಗತಕ್ಕೆ ಜಾರಿದ್ದಳು.
ಅವಳ ಮಾತಿಗೆ ಅಮ್ಮ `ನಿಮ್ಮ ಕಾಲದ ಮಾತು ಬೇರೆ. ಈಗ ಕಾಲ ಹಾಗೇ ಇಲ್ಲ. ಈಗ ಊರಲ್ಲಿ ಒಬ್ಬರನ್ನು ನೋಡಿದ್ರೆ ಇನ್ನೊಬ್ಬರಿಗೆ ಆಗಲ್ಲ. ಸುಮ್ನೆ ಇರಿ. ಇನ್ನೊಬ್ರನ್ನ ಹಾಳ್ ಮಾಡೋ ಮಾತ್ ಆಡ್ಬೇಡಿ. . . ಏಯ್ ಚಿಟ್ಟಿ ವಿಷ್ಯ ಗೊತ್ತಾದ್ರೆ ನಿಮ್ಮಪ್ಪ ಕೈ ಕಾಲ್ ಮುರೀತಾರೆ. ಸುಮ್ನೆ ಒಳಗ್ ಹೋಗು ನಂಗೇ ಬೇಕಾದಷ್ಟು ಕೆಲ್ಸ ಇದೆ’ ಎಂದು ಕೋಪವನ್ನೆಲ್ಲಾ ಕಂಕುಳಲ್ಲಿದ್ದ ಮಗುವಿನ ಮೇಲೆ ತೋರಿಸಿ ಅಜ್ಜಿಯ ಎದುರು ಕುಕ್ಕಿ ಒಳನಡೆದಿದ್ದಳು. ಅಳುತ್ತಿದ್ದ ಸೀನುವನ್ನು ನೋಡಿ ತಡೆಯಲಾರದೆ ಅಜ್ಜಿ `ಸ್ವಾಮಿ’ ಎನ್ನುತ್ತಾ ಎತ್ತಿಕೊಂಡು ಆಡಿಸತೊಡಗಿದ್ದಳು. ಕೈ ನಡುಕ ಬಂದಿದ್ದರಿಂದ `ಚಿಟ್ಟಿ ಆಡಿಸೇ ಅಳೋದಕ್ಕೆ ಬಿಡಬೇಡ ಪಾಪ ಸ್ವಾಮಿ ಉಸಿರುಗಟ್ಟಿ ಅಳ್ತಾ ಇದಾನೆ’ ಎನ್ನುತ್ತಾ ಅವಳ ಕೈಗೆ ಕೊಟ್ಟಳು. ಅಜ್ಜಿ ಅವನನ್ನು ಎಂದೂ `ಸೀನ’ ಅಂತ ಕರಿಯಲೇ ಇಲ್ಲ. ತನ್ನ ಗಂಡ ಶ್ರೀನಿವಾಸರಾಯರೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಮೊಮ್ಮಗನಿಗೆ ಶ್ರೀನಿವಾಸ ಎಂತಲೇ ನಾಮಕರಣ ಮಾಡಿದ್ದಳು. ಗಂಡನ ಹೆಸರನ್ನು ಹಿಡಿದು ಕರೆಯುವುದು ಗರತಿಯ ಲಕ್ಷಣವಲ್ಲ ಅದಕ್ಕೆ ಮೊಮ್ಮಗನನ್ನ `ಸ್ವಾಮಿ’ ಅಂತ ಕೂಗುತ್ತಿದ್ದಳು. ಚಿಟ್ಟಿಗೆ ಹೇಗಾದರೂ ಸರಿ ಆ ತಾಯತವನ್ನು ಹಾಕಿಕೊಳ್ಳಬೇಕು ಎನ್ನುವ ಆಸೆ. ಸೀನುವನ್ನು ಆಡಿಸುತ್ತಾ ಅಜ್ಜಿಯ ಕಿವಿಯ ಬಳಿ ಬಂದು `ಅಜ್ಜಿ ಎರಡ್ ರೂಪಾಯಿ ಕೊಡು’ ಎನ್ನುತ್ತಾ ಗೋಗರೆಯತೊಡಗಿದ್ದಳು. `ನನ್ನ ಹತ್ರ ಎಲ್ಲೇ ಬರುತ್ತೆ ದುಡ್ಡು?’ ಎಂದು ಅಜ್ಜಿ ತಾರಮ್ಮಯ್ಯ ಆಡಿಸಿಬಿಟ್ಟಿದ್ದೇ ತಡ ಸೀನನನ್ನು ಅಜ್ಜಿಯ ಕೈಗೆ ಕೊಟ್ಟು `ತಗೋ ನಿನ್ನ ಸ್ವಾಮಿಯನ್ನು’ ಎನ್ನುತ್ತಾ ಕೂಗುತ್ತಿದ್ದ ಅಜ್ಜಿಯನ್ನೂ ಲೆಕ್ಕಿಸದೆ ಓಡಿಬಿಟ್ಟಿದ್ದಳು.

ಕದ್ದರೆ ದೇವ್ರು ಕಣ್ಣು ಕೀಳುತ್ತೆ ಅನ್ನುವ ಮಾತು ನೆನಪಾದಾರೂ ಬಿಡದೆ ಅಪ್ಪನ ಜೇಬಿಂದ ಕದ್ದ ಹಣವನ್ನು ತಂದು ನಕ್ಕತ್ತು ಕೈಗೆ ಕೊಟ್ಟಿದ್ದಳು. ನವಿಲುಗರಿಯ ಸ್ಪರ್ಷ ಸಾಂಬ್ರಾಣಿಯ ಹೊಗೆಯ ನಡುವೆ ಹಸಿರು ಬಟ್ಟೆಯಲ್ಲಿ ಸುತ್ತಿದ್ದ ತಾಯಿತ ಚಿಟ್ಟಿಯ ಕುತ್ತಿಗೆಯನ್ನು ಅಲಂಕರಿಸಿತ್ತು . `ಸ್ವಲ್ಪ ಉದ್ದಕ್ಕೆ ಕಟ್ರಿ’ ಎಂದು ಒಳಗೆ ಕಟ್ಟಿಸ್ಕೊಂಡ್ರೆ ಬೇರೆಯವರಿಗೆ ಕಾಣಲ್ಲ ಅನ್ನುವುದು ಅವಳ ಲೆಕ್ಕಾಚಾರ. `ಬೇಟಿ ಇನ್ನು ನಿನ್ನ ಯಾವ ದುಷ್ಟ ಶಕ್ತಿಗಳು ಮುಟ್ಟಲ್ಲ’ ಎನ್ನುತ್ತಾ ಮತ್ತೆ ನವಿಲುಗರಿಯಿಂದ ಅವಳ ತಲೆಯನ್ನು ಸವರಿದಾಗ ಚಿಟ್ಟಿಗೆ ಎಲ್ಲಿದ ಧೈರ್ಯ. ಎರಡು ರೂಪಾಯನ್ನು ಅವನ ಕೈಗೆ ಹಾಕಿ ನಕ್ಕಿದ್ದಳು. ತನ್ನ ಜೋಳಿಗೆಯಿಂದ ಕಲ್ಲು ಸಕ್ಕರೆಯನ್ನು ತೆಗೆದು ಅವಳ ಕೈಗೆ ಇಡುತ್ತಾ `ಅಲ್ಲ ಭಲಾ ಕರೇಗ’ ಎಂದಿದ್ದ ಆತ. ಹಸಿರು ಬಟ್ಟೆಯಲ್ಲಿ ಸುತ್ತಿದ ಆ ತಾಯಿತವನ್ನು ಕಣ್ಣು ತುಂಬಿ ನೋಡಿದ್ದಳು. `ಇನ್ನು ನನಗೆ ಯಾವ ಭಯವೂ ಇಲ್ಲ’ ಎಂದು ಖುಷಿಪಟ್ಟು ಮಸೀದಿಯಿಂದ ಹೊರಗೆ ಬಂದ ಚಿಟ್ಟಿ ಆಚೀಚೆ ನೋಡಿದಳು. ಯಾರೂ ತನ್ನನ್ನ ಕಾಣಲಿಲ್ಲ ಎನ್ನುವ ನಿಟ್ಟುಸಿರು ತೆಗೆದುಕೊಳ್ಳುವಾಗ ಮನೆಯ ಮುಂದಿನ ಟೀ ಅಂಗಡಿಯ ಕುಟ್ಟಿಯ ಒಬ್ಬನೇ ಮಗ ಇಪ್ಪತ್ತರ ಹರೆಯದ ಹುಂಜಾನ್ ಅವಳನ್ನು ನೋಡಿಬಿಟ್ಟಿದ್ದ.
ಹಾಗೆ ನೋಡಿದ್ದು ಚಿಟ್ಟಿಗಾಗಲಿ ನಕ್ಕತ್ತುವಿಗಾಗಲೀ ಗೊತ್ತಾಗಲಿಲ್ಲ. `ಹೇ ಮೇರಿ ಜಾನ್ ಮಸೀದಿ ಒಳಗೆ ಬಂದಿದಿಯ ಇನ್ನು ನಿನ್ನ ಯಾರೂ ಮದ್ವೆ ಆಗಲ್ಲ. ಮದ್ವೆ ಆದ್ರೆ ನಾನೇ’ ಎನ್ನುತ್ತಾ ಅಡ್ಡ ಬಂದು ನಿಂತ. ಅವನ ಕಣ್ಣುಗಳಲ್ಲಿನ ತುಂಟತನವನ್ನೂ ಗುರುತಿಸದ ಚಿಟ್ಟಿಗೆ ಅಳು ಬಂದಿತ್ತು. ಹುಂಜಾನ್ ಹತ್ತಿರ ಬಂದು `ಯಾಕೆ ಕಣ್ಣಿರು ಮೇರಿಜಾನ್’ ಎನ್ನುತ್ತಾ ಅವಳನ್ನ ರೇಗಿಸಿದ. ಅವನ ಪಡ್ಡೆತನಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಂತ ತಿಳೀದೇ `ಏ ಹುಂಜ ಇನ್ನೊಂದ್ ಸಲ ನನ್ನ ತಂಟೆಗೆ ಬಂದ್ರೆ ನಮ್ಮಪ್ಪಂಗೆ ಹೇಳಿ ಕೈ ಕಾಲು ಮುರುಸ್ತೀನಿ’ ಎಂದಳು. `ನಿಮ್ಮಪ್ಪ ಮೈಸೂರು ಮಹಾರಾಜ ಅಲ್ಲ ಹೋಗೇ. ನಿಮ್ಮನೇಗೆ ನಾನೇ ಬರ್ತೀನಿ ನಿಮ್ಮ ಹುಡುಗಿ ಮಸೀದಿಗ್ ಬಂದಿದ್ಲು ಅಂತೀನಿ. ಏನ್ ಮಾಡ್ತೀಯ? ಆಗ ತಪ್ಪೆಲ್ಲ ನಿಂದೇ ಅಂತ ಆಗುತ್ತೆ’ ಎಂದು ಅಲ್ಲಿಂದ ಹೊರಟುಹೋದ. ನಕ್ಕತ್ತುವಿಗೆ ಹುಂಜಾನ್ ಬಗ್ಗೆ ಗಾಬರಿ. `ಈ ವಿಷ್ಯಾನ ಯಾರಿಗೂ ಹೇಳ್ಬೇಡ; ನಿನ್ನ ಗಂಡನಿಗೂ . ತಪ್ಪೆಲ್ಲಾ ನಂದೆ. ನಿನ್ನ ಇಲ್ಲಿಗೆ ಕರ್ಕೊಂಡು ಬರ್ಬಾರ್ದಿತ್ತು’ ಎಂದು ಅಳತೊಡಗಿದಳು. ಇಲ್ದೆ ಇರೋ ಗಂಡನ ವಿಶ್ಯ ಈಗ್ಯಾಕೆ ಎಂದು ಅರ್ಥವಾಗದೆ ಚಿಟ್ಟಿ ಕಕ್ಕಾಬಿಕ್ಕಿಯಾದಳು.
ಚಿಟ್ಟಿ ಮನೆಗೆ ಬರುವಾಗ ಮನೆಯಲ್ಲಿ ದ್ಯಾಮಕ್ಕ ಕೂತಿದ್ದಳು. ಅವಳ ಕಣ್ಣಲ್ಲಿ ಧಾರಾಕಾರ ನೀರು ಅಜ್ಜಿ ಅವಳಿಗೆ ಸಮಾಧಾನಪಡಿಸುತ್ತಾ `ಅವನ ವಂಶ ಬೆಳೀಬಾರ್ದಾ? ಹೀಗೆ ಅತ್ರೆ ಹೇಗೆ? ಅವನು ಗಂಡ್ಸು ಅವ್ನು ಎರಡನೆ ಮದ್ವೆ ಮಾಡ್ಕೊಳ್ಳಿ. ನೀನು ಹೊಂದಿಕೊಂಡು ಹೋಗು’ ಎಂದು ಹೇಳುತ್ತಿದ್ದಳು. ಎಲ್ಲಿದ್ದಳೊ ಅಮ್ಮ ನುಗ್ಗಿಬಂದವಳೇ `ನೀವು ಯಾವತ್ತೂ ಗಂಡಸಿನ ಪರಾನೇ. ನನ್ನ ಜೀವ್ನಾನಾ ಹಾಳ್ ಮಾಡಿದ್ದಾಯ್ತು, ಈಗ ದ್ಯಾಮಕ್ಕ. ನಿಮ್ಮಂಥಾ ಹೆಂಗಸ್ರು ಇರೋ ವರ್ಗೂ ಗಂಡಸ್ರು ಮೆರೆಯೋದನ್ನ ಬಿಡೊಲ್ಲ ಅಲ್ವಾ? ಏಯ್ ದ್ಯಾಮಿ ಹೋಗೇ ಇಲ್ಲಿಂದ. ಸುಮ್ನೆ ಕುತ್ಕೊಂಡ್ ಅಳೋ ಬದ್ಲು ನಿನ್ನ ಗಂಡನ ಕೈ ಕಾಲನ್ನ ಮುರ್ದು ಹಾಕು. ಮೀಸೆ ಬೋಳ್ಸು. ಗಂಡ್ಸು ಅನ್ನೋ ಅಹಂಕಾರ ಇದ್ರೆ ಅಲ್ವಾ ಇಷ್ಟೆಲ್ಲಾ ಆಗೋದು. ಇವ್ರ ಮಾತ್ನ ಕೇಳ್ಬೇಡ ಹೋಗು, ಮದ್ವೆ ಆಗ್ದೆ ಇರೋಹಾಗೆ ಅವನನ್ನ ತಡಿ. ಪೊಲೀಸ್ ಕಂಪ್ಲೇಂಟ್ ಕೊಡು. ನನ್ನ ಮನೆ ಮುಂದೆ ಕೂತು ಯಾಕೆ ಶಂಖ ಊದ್ತೀಯಾ?’ ಎಂದು ಆವೇಶದಿಂದ ಕೂಗ ಹತ್ತಿದಳು.
ಚಿಟ್ಟಿಗೆ ಹುಂಜಾನ್ ತನ್ನ ಮದ್ವೆ ಆದ್ರೆ ತನ್ನ ಗತಿ ಇದೇ ಅಲ್ವಾ? ಮೊದಲೇ ಮುಸಲ್ಮಾನರಿಗೆ ತುಂಬಾ ಹೆಂಡತಿಯರು ಅನ್ನಿಸತೊಡಗಿ ಭಯ ಆವರಿಸಿತ್ತು. ಇದಕ್ಕಿಂತ ಮೋಹಿನಿ ಕಾಟವೇ ವಾಸಿ ಎಂದು ದ್ವಂದ್ವಕ್ಕೆ ಬಿದ್ದರೂ ರಕ್ತ ಕಾರಿ ಸಾಯುವ ಬದಲು, ಇರಲಿ ಬಿಡು ಎಂದು ಕತ್ತಲ್ಲೇ ತಾಯತ ಉಳಿಸಿಕೊಂಡಳು. ಪುಸ್ತಕವನ್ನು ನಾಮಕಾವಸ್ತೆಗೆ ಹಿಡಿದು ಕುಳಿತ ಅವಳ ಕಿವಿಯ ಮೇಲೆ ಅಜ್ಜಿ ಅಮ್ಮರ ಮಾತು ಅಪ್ಪಳಿಸುತ್ತಿದ್ದವು. ಜೊತೆಗೆ ಅಮ್ಮನ ಅಳು ಕೂಡಾ. ಗೋವಿಂದ ಇನ್ನೊಂದು ಮದ್ವೆ ಆದ್ರೆ ಅಮ್ಮ ಯಾಕೆ ಜಗಳ ಆಡಬೇಕು? ಯಾಕೆ ಅಳಬೇಕು? ಅಜ್ಜಿ ಅಮ್ಮ ಯಾಕೆ ಜಗಳ ಆಡಬೇಕು? ಎಂದು ಯೋಚಿಸುವಾಗ ಪುಟ್ಟ ಸೀನು ಆಡುತ್ತಾ ಆಡುತ್ತಾ ಚಿಟ್ಟಿಯ ಪುಸ್ತಕವನ್ನು ಹರಿದುಬಿಟ್ಟ. ಚಿಟ್ಟಿಗೆ ಕೋಪ ಬಂದು ಅವನಿಗೆ ಎರಡು ಏಟು ಕೊಟ್ಟಳು. ಸೀನು ತನ್ನ ಕೀರಲು ಧ್ವನಿಯಲ್ಲಿ ಅಳಲು ಆರಂಭಿಸಿದಾಗ ಚಿಟ್ಟಿ ಗಾಬರಿಯಾಗಿ ಅವನ ಬಾಯನ್ನು ಮುಚ್ಚಿ ಸಮಾಧಾನ ಮಾಡಲು ಪ್ರಯತ್ನಿಸಿದಳು. ಅವಳ ಪುಣ್ಯ ಜಗಳ ಆಡುತ್ತಿದ್ದ ಅಮ್ಮನಿಗೆ ಕೇಳಿಸಲಿಲ್ಲ. ಸೀನು ಅತ್ತೂ ಅತ್ತು ಹಾಗೆ ನಿದ್ದೆ ಮಾಡಿಬಿಟ್ಟ. ಅವತ್ತು ಯಾರೂ ಊಟ ಕೂಡಾ ಮಾಡಲಿಲ್ಲ.
ಬೆಳಗ್ಗೆ ಏಳುವಾಗ ಚಿಟ್ಟಿಯ ಕುತ್ತಿಗೆಯಲ್ಲಿ ತಾಯಿತ ಇರಲಿಲ್ಲ. ಗಾಬರಿಯಿಂದ ಹುಡುಕಿಕೊಳ್ಳತೊಡಗಿದಳು. ಅದನ್ನ ಗಳಿಸಲು ಅವಳ ಪಟ್ಟ ಕಷ್ಟ ನೆನಪಾಗಿ ತುಂಬಾ ಬೇಜಾರಾಯಿತು. ಅಮ್ಮಾ ಅವಳ ಕಿವಿ ಹಿಂಡುತ್ತಾ ವಾರದಿಂದ ಬರದ ಅಪ್ಪನ ಹೆಸರನ್ನ ಹಿಡಿದು `ನಿಮ್ಮಪ್ಪ ನೋಡಿದ್ದಿದ್ರೆ ನಂಗೂ ನಿಂಗೂ ಸರ್ಯಾಗೆ ಪೂಜೆ ಆಗ್ತಾ ಇತ್ತು. ದುಡ್ಡೆಲ್ಲಿತ್ತೇ ಇದನ್ನ ತಗೊಳ್ಳಕ್ಕೇ ಗೂಬೇ. ನಮ್ಮರ್ಯಾದೆ  ತೆಗೆಯೋಕೆ ಹುಟ್ಟಿದ್ಯಾ  ದರಿದ್ರ’ ಎನ್ನುತ್ತಾ ಬೈದಳು. `ದರಿದ್ರಾ’ ಎಂದು ಬೈಯ್ಯುವಾಗ ಅಮ್ಮನ ದ್ವನಿಯಲ್ಲಿ ಏನೋ ಕಂಪನ. ಅಷ್ಟರಲ್ಲಿ ಅಮ್ಮ ತಾನು ಮಲಗಿದ್ದಾಗ ತಾಯತವನ್ನು ಕತ್ತರಿಸಿ ತೆಗೆದಿದ್ದಾಳೆ ಎಂದು ಚಿಟ್ಟಿಗೆ ಅರ್ಥವಾಯಿತು. ಅವಳು ಚಿಟ್ಟಿಗೆ ಮುಖವನ್ನೂ ಕೊಡದೆ ಆ ಕಡೆಗೆ ಹೋಗಿದ್ದೇ ತಡ ತನ್ನ ಸುತ್ತಾ ಯಾವುದೋ ಶಕ್ತಿ ಸುಳಿದಾಡಿ ತನ್ನನ್ನು ಹೆದರಿಸಿದ ಹಾಗನ್ನಿಸಿತು. ಹೊದ್ದಿದ್ದ ಕಂಬಳಿಯನ್ನೂ ಕಿತ್ತೆಸೆದು `ಅಮ್ಮಾ’ ಎನ್ನುತ್ತಾ ಹೊರಟಳು.
(ಮುಂದುವರೆಯುವುದು…)
 

‍ಲೇಖಕರು avadhi

July 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vijaya

    Nijakkoo bahala aaptavagide. Chitragalannu padagalalli kattikoduva kathanakale nimage siddiside. Gramina sogadu sundaravagide. Munde oduva icheche mudide.

    ಪ್ರತಿಕ್ರಿಯೆ
  2. lalitha siddabasavaiah

    ಚೆನ್ನಾಗಿದೆ ಚಂದ್ರಿಕಾ, ಕುತೂಹಲ ಹುಟ್ಟಿಸುತ್ತೆ , ಚಿತ್ರಕ ಶಕ್ತಿಯಿದೆ ನಿಮ್ಮ ಗದ್ಯಕ್ಕೆ.

    ಪ್ರತಿಕ್ರಿಯೆ

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಕಾಲರ್ ಮೇಲಿನ ಕೂರೆಯೂ ಮತ್ತು ಇಂಗ್ಲೀಷ್ ವ್ಯಾಮೋಹವೂ « ಅವಧಿ / avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಕಾಲರ್ ಮೇಲಿನ ಕೂರೆಯೂ ಮತ್ತು ಇಂಗ್ಲೀಷ್ ವ್ಯಾಮೋಹವೂ July 23, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: