ಪಿ ಚಂದ್ರಿಕಾ ಕಾದಂಬರಿ ’ಚಿಟ್ಟ್ಟಿ’ : ಮನುಷ್ಯನಿಗೆ ಖುಷಿಯಾದ್ರೆ ಕಥೆ ಬರುತ್ತಾ?

(ಇಲ್ಲಿಯವರೆಗೆ…)

ಹೀಗೆ ಪುಳಕಗಳ ಮೈತುಂಬಿಕೊಂಡ ಚಿಟ್ಟಿಯ ಹೆಗಲ ಮೇಲೆ ಕೈಯ್ಯೊಂದು ಬಿತ್ತು. ಕಲ್ಪನಾ ಲೋಕದಲ್ಲಿ ಹಾರಾಡುತ್ತಿದ್ದ ಅವಳಿಗೆ ಗಾಬರಿಯಾಗಿ ತಿರುಗಿ ನೋಡಿದಳು. ಅಪ್ಪ ನಗುತ್ತಾ ನಿಂತಿದ್ದ. ತೀರಾ ಹತ್ತಿರದಿಂದ ನೋಡಿದ್ದಕ್ಕೋ ಏನೋ ಹೆಚ್ಚು ಆಪ್ತ ಆನ್ನಿಸಿತು. ಅಪ್ಪ ಅವಳ ಕೈಹಿಡಿದು ಬಯಲಲ್ಲಿ ಕೂರಿಸಿಕೊಂಡ. ಕೂತ ಚಿಟ್ಟಿ ನೆಲದ ಮೇಲಿನ ಹುಲ್ಲ ಎಸಳನ್ನು ಕೀಳುತ್ತಾ ಅದರ ಎಲೆಗಳನ್ನು ಸೀಳುತ್ತಾ, ಅಪ್ಪ ಏನನ್ನು ಹೇಳಬಹುದು ಎನ್ನುವ ನಿರೀಕ್ಷೆಯಲ್ಲಿ ಉಳಿದಳು.
ಮಾತಿಗೆ ಬರ ಎನ್ನುವಂತೆ ಕೂತೇ ಇದ್ದ ಅಪ್ಪ ಕಷ್ಟಪಟ್ಟು ಮಾತನ್ನು ನಾಲಿಗೆಗೆ ತಂದುಕೊಂಡು ಅತ್ತೆಯ ಬಗ್ಗೆ ಮಾತಾಡಿದ, ಅವನ ಕಣ್ಣುಗಳು ಆಕಾಶದಲ್ಲಿ ನಟ್ಟಿದ್ದವು. ‘ನನ್ನ ಸುಬ್ಬ ಸಾಕಿದಳು, ಬೆಳೆಸಿದಳು. ಅಪ್ಪ ಇಲ್ಲದ ನನಗೆ ಯಾವ ಕೊರತೆಯೂ ಇಲ್ಲದ ಹಾಗೆ ನೋಡಿಕೊಂಡಳು. ಅಪ್ಪ ಸಾಯುವಾಗ ನಾನು ಬರೀ ಐದು ವರ್ಷದವನು ಚಿಟ್ಟಿ. ಅಪ್ಪ ಸಾಯುತ್ತಾನೆ ಎನ್ನುವುದೂ ಗೊತ್ತಿಲ್ಲ. ಅಮ್ಮ ಒಂದು ಕಡೆ ಅಳುತ್ತಾ ಕೂತಿದ್ದಳು. ಅಕ್ಕ ಒಳಗೆ ಅಪ್ಪನಿಗಾಗಿ ಬಿಸಿ ಗಂಜಿ ಮಾಡುತ್ತಿದ್ದಳು. ಗಂಟಲಲ್ಲಿ ತೀರಾ ಹುಣ್ಣುಗಳೆದ್ದು … ಈಗ ನೋಡಿದೆಯಲ್ಲಾ ನಿನ್ನತ್ತೆಯನ್ನು ಹಾಗೇ ಆಗಿಬಿಟ್ಟಿದ್ದ. ನನಗೆ ಬೇಕಿದ್ದಿದ್ದು ಬುಗುರಿ ಆಡಿಸುವ ಚಾಟಿ. ಹುಡುಗರ ಜೊತೆ ಆಡುವ ಉತ್ಸಾಹ. ಆದರೆ ನನ್ನ ಚಾಟಿ ಹರಿದುಹೋಗಿತ್ತು. ಹಗ್ಗತಂದು ಅಪ್ಪನ ಎದುರು ಹಟ ಮಾಡುತ್ತಾ ಕೂತೆ. ದುಃಖದಿಂದ ಕೂತಿದ್ದ ಅಮ್ಮ ನನನ್ನು ‘ಹೋಗು’ ಎಂದು ಬಲವಂತದಿಂದ ನೂಕಿದಳು. ನಾನು ನೆಲಕ್ಕೆ ಬಿದ್ದೆ.
ಅಪ್ಪನಿಗೆ ಏನನ್ನಿಸಿತೋ ಏನೋ ‘ಬಾ’ ಎಂದು ನನ್ನನ್ನು ಹತ್ತಿರಕ್ಕೆ ಕರೆದ. ನನ್ನ ಕೈಲಿದ್ದ ಹಗ್ಗವನ್ನು ತೆಗೆದುಕೊಂಡು ತನ್ನ ಪಂಚೆಯ ಸರಿಸಿ ಮಾಂಸವೇ ಇಲ್ಲದ ತನ್ನ ಕೃಶವಾದ ತೊಡೆಗಳಲ್ಲಿ ನಡುಗುವ ಕೈಗಳಿಂದ ಚಾಟಿಯನ್ನು ಹೊಸೆದುಕೊಟ್ಟಿದ್ದ. ನನಗೆ ಅಪ್ಪ ಅಂದರೆ ನೆನಪಾಗುವುದು ಇಷ್ಟು ಮಾತ್ರ. ಅಪ್ಪ ಸಾಯುವಾಗ ಸಹಾ ನಾನು ಅವನ ಹತ್ತಿರ ಇರಲಿಲ್ಲ. ಬೀದಿಯಲ್ಲಿ ಹುಡುಗರ ಜೊತೆ ಆಡುತ್ತಿದ್ದೆ. ಯಾರೋ ಬಂದು ‘ನಿಮ್ಮಪ್ಪ ಸತ್ತು ಹೋದ್ರು ಹೋಗು ಅಂದ್ರೆ ಸ್ವಲ್ಪ ಹೊತ್ತು ಆಡಿ ಬರುತ್ತೇನೆ’ ಎಂದಿದ್ದೆ. ಅಪ್ಪ ಇರುವವರೆಗೂ ಅವನ ಬೆಲೆ ಗೊತ್ತಾಗಲಿಲ್ಲ. ಗೊತ್ತಾಗುವ ವಯಸ್ಸೂ ನನ್ನದಾಗಿರಲಿಲ್ಲ.
ಯಾರಾದರೂ ಏನಾದರೂ ಅಂದರೆ ನನ್ನಪ್ಪ ಇದ್ದಿದ್ದರೆ ನನ್ನನ್ನು ಹೀಗಾಗಲು ಬಿಡುತ್ತಿದ್ದನೇ ಎಂದುಕೊಳ್ಳುತ್ತಿದ್ದೆ. ನಿನ್ನ ವಿಷಯಕ್ಕೆ ಹಾಗಾಗಬಾರದಲ್ಲಾ ಅದಕ್ಕೆ…’ ಎಂದೂ ಇಲ್ಲದ ಅಪ್ಪ ಇದನ್ನೆಲ್ಲಾ ಯಾಕೆ ಇವತ್ತು ನನ್ನ ಹತ್ತಿರ ಹೇಳುತ್ತಿದ್ದಾನೆ? ಅವನನ್ನೇ ನೋಡಿದಳು. ಅಪ್ಪ ಅವಳ ಭುಜದ ಮೇಲೆ ಕೈಯಿಟ್ಟು, ‘ಚಿಟ್ಟಿ ಇವತ್ತು ನನ್ನಕ್ಕ ಸಾಯ್ತಾ ಇದ್ದಾಳೆ. ಒಂದು ಸಾವನ್ನು ಕಾಯುತ್ತಾ ಕೂರುವುದು ಎಂಥಾ ಕಷ್ಟದ ಕೆಲಸ ನಿನಗಿನ್ನೂ ಗೊತ್ತಿಲ್ಲ. ಮನಸ್ಸಿನ ತುಂಬಾ ನೋವೇ ತುಂಬಿದೆ. ನಿನಗೋಸ್ಕರ ಅವಳ ಜೊತೆ ಜಗಳ ಆಡಿ ಬಂದೆ. ಅವಳ ಮನಸ್ಸು ಎಷ್ಟು ನೊಂದಿದೆಯೋ ಗೊತ್ತಿಲ್ಲ. ಆದರೆ ನನಗೆ ಸಾಯುವ ಅವಳಿಗಿಂತ ನೀನು ಮುಖ್ಯ. ಚೆನ್ನಾಗಿ ಓದು, ಈ ಅಪ್ಪ ನಿನಗಾಗಿ ಏನನ್ನೂ ಕೊಡಲಾರ ಒಂದು ವಿದ್ಯೆಯನ್ನು ಹೊರತುಪಡಿಸಿ. ನೀನೆಷ್ಟು ಓದುತ್ತೀಯೋ ಅಷ್ಟು ಓದಿಸುತ್ತೀನಿ’ ಎನ್ನುತ್ತಾ ಚಿಟ್ಟಿಯ ಕೈ ಹಿಡಿದುಕೊಂಡ. ಆ ಬೆಚ್ಚನೆಯ ಹಿಡಿತದಲ್ಲಿ ಏನೋ ಭರವಸೆಯಿತ್ತು.
‘ಪಾಪ ಅಪ್ಪನ ಹಿಂದೆ ಎಂಥಾ ಕಥೆ ಇದೆ ಅಲ್ಲವಾ? ಎಷ್ಟು ನೊಂದಿದ್ದಾನೆ’, ಎಂದುಕೊಂಡ ಚಿಟ್ಟಿಗೆ ಇಷ್ಟು ಒಳ್ಳೆಯ ಅಪ್ಪ ಅಮ್ಮನಿಗೆ ಮೋಸ ಮಾಡಿ ಯಾರೋ ಕ್ರಿಶ್ಚಿಯನ್ ಹೆಂಗಸಿನ ಹಿಂದೆ ಬಿದ್ದಿರುವುದೇಕೆ? ನನ್ನ ಬಗ್ಗೆ ಯೋಚನೆ ಮಾಡುವ ಹಾಗೆ ಅಮ್ಮನ ಬಗ್ಗೆ ಯೋಚನೆ ಮಾಡದೆ ಇರುವುದೇಕೆ? ಕೇಳಿಬಿಡಬೇಕೆನ್ನಿಸಿ ‘ಅಪ್ಪಾ’ ಎಂದಳು. ಕಣ್ಣಲ್ಲಿ ನೀರು ತುಂಬಿಕೊಂಡ ಅಪ್ಪನ ಮುಖವನ್ನು ನೋಡಿದ ಚಿಟ್ಟಿಗೆ ಮಾತುಗಳು ಹೊಳೆಯದೆ ಸುಮ್ಮನುಳಿದಳು.
ನಾಳೆ ಅಮ್ಮನಿಗೆ ಬಂದ ಸ್ಥಿತಿ ನನಗೆ ಬಂದರೆ ಅದನ್ನು ನಾನು ಎದುರಿಸಲೇ ಬೇಕು, ಮನಸ್ಸಿನೊಳಗೆ ದೃಢವಾಗಿ ನಿರ್ಧರಿಸಿದಳು. ಹಿಂದೆ ಬಂದ ಪ್ರಶ್ನೆ ಆದರೆ ಹೇಗೆ? ಈ ಎಲ್ಲಾ ಸಂಗತಿಗಳ ಒಳಗೆ ಚಿಟ್ಟಿಯ ಒಳಗೆ ಏನೋ ಮೂಡುತ್ತಿತ್ತು. ತಾನು ಕೇಳಿದ ಕಥೆ, ಪದ್ಯ, ಮಾತು, ಅದರೊಂದಿಗೆ ತನ್ನ ಕಲ್ಪನೆ ಎಲ್ಲವೂ ಸೇರಿಕೊಂಡು ಅವಳನ್ನು ಸುಮ್ಮನೆ ಇರಲಿಕ್ಕೆ ಬಿಡುತ್ತಿರಲಿಲ್ಲ. ತನಗೆ ಏನಾಗುತ್ತಿದೆ? ತನ್ನೊಳಗೆ ಏನು ಮೂಡುತ್ತಿದೆ? ಆಕಾಶದಗಲಕ್ಕೆ ಹಾರಡಬೇಕು ಎನ್ನುವ ಹಂಬಲದ ರೆಕ್ಕೆಯೇ? ಕಣ್ಣೇ ಊರುಗೋಲಾದ ಬಣ್ಣದ ಕೋಲೇ? ಅರ್ಥವಾಗದೆ ಗೊಂದಲಗಳಲ್ಲಿ ಉಳಿದಳು. ತನ್ನನ್ನು ಏನೋ ಕರೆದ ಹಾಗೆ, ನೋಡಿದ ಯಾವುದರಲ್ಲೋ ಖುಷಿ ತುಂಬಿದ ಹಾಗೆ ಅನ್ನಿಸಿ ನಿಂತಲ್ಲಿ ನಿಲ್ಲಲಾರದವಳಾದಳು. ಪೆನ್ನು ಪೇಪರ್ ತೆಗೆದುಕೊಂಡು ಸುಮ್ಮನೆ ಗೀಚಿದಳು. ತಾನು ಬರೆಯಲು ಹೊರಟಿದ್ದು ಅಕ್ಷರವೇ ಚಿತ್ರವೇ ತಿಳಿಯದೇ ಹೋಯಿತು.

ಏನಾಯಿತೋ ಏನೋ ಭಾರತಿಯ ತಂದೆ ಮಂಜಣ್ಣನವರು ಇದ್ದ ದನಗಳನ್ನು ಮಾರಿ ಕೊಟ್ಟಿಗೆಯನ್ನು ಒಂದು ಇಸ್ಪೀಟಿನ ಕ್ಲಬ್ಬನ್ನಾಗಿ ಮಾಡಿದ್ದರು. ಆ ದನದ ಕೊಟ್ಟಿಗೆ ಮುಂದೆ ಇದ್ದ ಕಲರ್ ಪುಷ್ಪದ ಗಿಡ ಹೋಗಿ ಬರುವವರಿಗೆ ಅಡ್ದವಾಗುತ್ತದೆ ಎನ್ನುವ ಕಾರಣಕ್ಕೆ ಕಡಿಸುವ ನಿರ್ಧಾರಕ್ಕೆ ಬಂದಿದ್ದರು. ಭಾರತಿಗೆ ಇದರಿಂದ ತುಂಬಾ ಬೇಸರವಾಗಿತ್ತು. ಅವಳೇ ಎಲ್ಲಿಂದಲೋ ಆಸೆಪಟ್ಟು ತಂದು ಹಾಕಿದ್ದ ಗಿಡ, ಎರಡು ವರ್ಷಗಳಲ್ಲಿ ಅಷ್ಟುದ್ದಕ್ಕೆ ಬೆಳೆದುಕೊಂಡಿತ್ತು. ಅವಳ ತಾಯಿ ರತ್ನಮ್ಮ ಚಿಟ್ಟಿಯನ್ನು ಹುಡುಕಿ ಬಂದಿದ್ದರು.
‘ನಿನ್ನೆಯಿಂದ ಭಾರತಿ ಒಂದು ಹನಿ ನೀರನ್ನೂ ಕುಡಿದಿಲ್ಲ ಚಿಟ್ಟಿ, ಬಂದು ಸ್ವಲ್ಪ ಸಮಾಧಾನ ಮಾಡೇ’ ಎಂದರು. ಭಾರತಿಯ ಕಣ್ಣುಗಳು ಊದಿದಂತಿತ್ತು. ಚಿಟ್ಟಿ ಅವಳ ಪಕ್ಕದಲ್ಲಿ ಕುಳಿತಳು. ಅವಳ ಮೈಯ್ಯ ಶಾಖ ಚಿಟ್ಟಿಯ ಮೈಗೆ ತಾಕಿ ಬೆಂಕಿಯಾದಂತಾಯಿತು. ಭಾರತಿ ಅವಳನ್ನು ನೋಡಿದ ತಕ್ಷಣವೇ ಎರಡೂ ಕೈಗಳನ್ನು ಹಿಡಿದು ‘ಚಿಟ್ಟಿ ನನ್ನ ಕಲರ್ ಪುಷ್ಪದ ಗಿಡವನ್ನು ಕಡಿದು ಹಾಕ್ತಾರಂತೆ ನೀನಾದ್ರೂ ಹೇಳೇ?’ ಎಂದಳು. ಒಳಗಿದ್ದ ಮಂಜಣ್ಣನವರಿಗೆ ಎಲ್ಲಿತ್ತೋ ಕೋಪ ಹೊರಗೆ ಬಂದವರೆ ‘ಅದೇನು ಮುಡಿಲಿಕ್ಕಾ? ಪೂಜೆ ಮಾಡಲಿಕ್ಕಾ? ಯಾವುದಕ್ಕೆ ಬರುತ್ತೆ ಹೇಳು? ಕ್ಲಬ್ ಬಾಗಿಲಲ್ಲಿದ್ದರೆ ಹೋಗಿ ಬರೋ ಜನಕ್ಕೆ ತೊಂದರೆ ಅಲ್ವಾ?’ ಎಂದು ರೇಗಿದರು. ‘ಅದು ಕ್ಲಬ್ ಅಲ್ಲ ದನದ ಕೊಟ್ಟಿಗೆ. ಇಷ್ಟು ದಿನ ಇತ್ತಲ್ಲ ಅದೇನು ಕಷ್ಟ ಕೊಟ್ಟಿದೆ ನಿಂಗೆ? ಅದನ್ನ ನೀನೇನಾದರೂ ಕಡಿದರೆ ಅದರ ಶಾಪ ನಿನ್ನ ಬಿಡಲ್ಲ ಅಷ್ಟೇ’ ಎಂದಳು ಭಾರತಿ ಕೋಪದಿಂದ. ಅವಳ ಮಾತನ್ನ ಕೇಳಿದ ತಕ್ಷಣ ಮಂಜಣ್ಣನವರಿಗೆ ಇನ್ನು ತಡೆಯಲು ಸಾಧ್ಯವೇ ಇಲ್ಲ ಅನ್ನಿಸಿ ‘ಇವಳ ನಾಲಿಗೆ ಉದ್ದ ಆಯ್ತು ರತ್ನ’ ಎನ್ನುತ್ತಾ ಕೋಲನ್ನು ತೆಗೆದುಕೊಂಡರು. ಚಿಟ್ಟಿಗೆ ಕೈಮೀರುವ ಪರಿಸ್ಥಿತಿಯ ಅರಿವಾದ್ದರಿಂದ ಭಾರತಿಯನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಲು ಎಬ್ಬಿಸಿದಳು. ಭಾರತಿ ಜ್ವರ ತಾಪದಲ್ಲಿ ತಟ್ಟಾಡುತ್ತಾ ಅಲ್ಲಿಂದ ಹೊರಟಳು.
ಭಾರತಿ ತುಂಬಾ ಹೊತ್ತಿನತನಕ ಅಳುತ್ತಾ ಮಾತಾಡುತ್ತಾ ಗಿಡದ ಬಗ್ಗೆ ಹೇಳುತ್ತಿದ್ದಳು. ಚಿಟ್ಟಿಗೆ ಸಂಕಟವಾಯಿತು. ಭಾರತಿಯ ಭುಜವನ್ನು ಒತ್ತಿ ಸಮಾಧಾನ ಹೇಳಿದಳು. ಅತ್ತೆಯ ಸಾವನ್ನು ಕಾಯುವ ಹಾಗೆ ಭಾರತಿ ಕಲರ್ ಪುಷ್ಪದ ಗಿಡದ ಸಾವನ್ನು ಕಾಯುತ್ತಿದ್ದಾಳೆ ಅನ್ನಿಸಿತು ಚಿಟ್ಟಿಗೆ. ಹಾಗೇ ಯೋಚನೆ ಮೂಡಿದ ಬೆನ್ನಲ್ಲೇ ಎಲ್ಲರೂ ಯಾಕೋ ಯಾವುದಕ್ಕೋ ಕಾಯುತ್ತಿದ್ದಾರೆ, ಯಾರೂ ಸುಮ್ಮನೆ ಕೂತಿಲ್ಲ, ತನ್ನ ಒಳಗೂ ಯಾವುದೋ ಬದಲಾವಣೆಗೆ ಕಾಯುತ್ತಿದೆ ಅನ್ನಿಸಿಬಿಟ್ಟಿತ್ತು. ಭಾರತಿಯ ಅಳು ಮಾತ್ರ ಕಣ್ಣೀರು ಬತ್ತಿದರೂ ಉಳಿದೇ ಇತ್ತು. ಏನಾಗುತ್ತಿದೆ ಇಲ್ಲಿ? ಕ್ಲಬ್ ಯಾಕೆ ಶುರು ಮಾಡಬೇಕು? ಸಿನಿಮಾಗಳಲ್ಲಿ ಇಸ್ಪೇಟು ಕ್ಲಬ್ಬುಗಳಲ್ಲಿ ಕ್ಯಾಬರೆಯನ್ನು ನೋಡಿದ ಚಿಟ್ಟೀಗೆ ಅದೇ ಚಿತ್ರ ಕಣ್ಣ ಮುಂದೆ ಬಂದು ಇಲ್ಲಿ ಕ್ಯಾಬರೆ ಆಡುವವರು ಯಾರು? ಅದನ್ನು ನೋಡುತ್ತಾ ನಗುವ ಕೆಟ್ಟವರು ಯಾರು? ಅನ್ನಿಸಿತು.
‘ದುಡಿಯಲು ಕೈಲಾಗದವರು ಹೀಗೆ ಕ್ಲಬ್ಬು ಇಸ್ಪಿಟು ಅಂತ ಮಾಡ್ತಾರೆ’ ಅಮ್ಮ ಗೊಣಗಿದಳು. ‘ಇನ್ನು ಅವರ ಮನೆಯ ಹತ್ತಿರ ಚಿಟ್ಟಿಯನ್ನ ಕಳಿಸಬೇಡ ಬರೀ ಗಂಡಸರೇ’ ಎಂದ ಅಪ್ಪ. ಚಿಟ್ಟಿಗೆ ತನ್ನ ಸಮಸ್ಯೆಯನ್ನು ಅಮ್ಮನ ಹತ್ತಿರ ಹೇಳಿಕೊಳ್ಳುವ ಬಯಕೆ. ‘ಅಮ್ಮ ಇಸ್ಪೀಟು ಕ್ಲಬ್ಬಿನಲ್ಲು ಹುಡುಗಿಯರು ಡ್ಯಾನ್ಸು ಮಾಡ್ತಾರಲ್ಲ . .. ಅವಳ ಮಾತು ಮುಗಿದೇ ಇಲ್ಲ ಆಗಲೇ ‘ತಲಹರಟೆ ಹೋಗೇ, ಅದೆಲ್ಲಾ ಇಲ್ಲಿರಲ್ಲ. ಬರೀ ಸಿನೆಮಾದಲ್ಲಿ. ಇಲ್ಲಿ ಬರೀ ಇಸ್ಪೇಟು ಮಾತ್ರ … ಇಲ್ದಿದ್ದೆಲ್ಲಾ ಕಲ್ಪನೆ ಮಾಡಿಕೊಳ್ಳಬೇಡ’ ಎಂದು ಗದರಿದಳು. ಸೀದಾ ಅಪ್ಪನ ಹತ್ತಿರಕ್ಕೆ ಬಂದು ‘ನೋಡೀ ಈಗ್ಲೇ ಹೇಳ್ತಾ ಇದೀನಿ ನೀವು ಆ ಕೊಂಪೇಲಿ ಹೋಗಿ ಇಸ್ಪೇಟು ಅಂತ ಕೂತ್ರೆ ನಾ ಮಾತ್ರ ಸುಮ್ಮನಿರಲ್ಲ ತಿಳೀತಾ?’ ಎಂದಳು. ‘ಮಾರಾಯ್ತಿ ಹೋಗೋ ಮುಂಚೇನೆ ಹೊಡೀಲಿಕ್ಕೆ ಬರ್ತೀಯಲ್ಲ’ ಎಂದ ಅಪ್ಪ ಸಮಾಧಾನದಿಂದ. ‘ನಿಮ್ಮ ಬಗ್ಗೆ ನಂಗೆ ನಂಬಿಕೆಯಿಲ್ಲ ಅದಕ್ಕೆ’ ಎಂದಳು ಅಮ್ಮ ಜೋರಲ್ಲಿ. ಅಲ್ಲಿ ಡ್ಯಾನ್ ಮಾಡೋರಿಲ್ಲ ಅಂದ್ಮೇಲೆ ಅಪ್ಪ ಆಟ ಆಡಿದ್ರೇನಾಗುತ್ತೆ ಎಂದುಕೊಂಡಳು ಚಿಟ್ಟಿ.
ಎರಡು ದಿನ ಅಷ್ಟೇ ಕಲರ್ ಪುಷ್ಪದ ಗಿಡಕ್ಕಾಗಿ ಭಾರತಿ ಅತ್ತಿದ್ದು ಗೋಳಾಡಿದ್ದು. ಕ್ಲಬ್ಬು ಶುರುವಾಗಿ ‘ನನ್ನ ಮುದ್ದಿನ ಮಗಳು ಪೂಜೆ ಮಾಡಿದ್ರೆ ಎಲ್ಲ ಶುಭವೇ’ ಎಂದು ಮಂಜಣ್ಣನವರು ಭಾರತಿಯನ್ನು ಪುಸಲಾಯಿಸಿ ಪೂಜೆ ಮಾಡಿಸಿದ್ದೇ ತಡ, ಭಾರತಿ ಎಲ್ಲವನ್ನೂ ಮರೆತು ಆಡುವವರಿಗೆ ಸುರೇಶಣ್ಣ ಬೋಂಡ ಮಾಡುತ್ತಿದ್ದರೆ ತಾನೇ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು. ಅದಕ್ಕಾಗಿ ಅವಳಿಗೆ ಬಳೆ, ರಿಬ್ಬನ್ನು, ಕ್ಲಿಪ್ಪು ಉಗುರು ಬಣ್ಣ ಎಲ್ಲವೂ ಸಿಗುತ್ತಿತ್ತು. ಈಗ ಭಾರತಿಗೆ ಕಲರ್ ಪುಷ್ಪದ ಗಿಡವಾಗಲೀ, ಅದರ ನೆನಪಾಗಲಿ ಇಲ್ಲವೇ ಇಲ್ಲ. ‘ನೋಡೇ’ ಎಂದು ಖುಷಿಯಿಂದ ಬಣ್ಣ ಬಣ್ಣದ ಉಗುರು ಬಣ್ಣವನ್ನು ಹಚ್ಚಿಕೊಂಡ ಬೆರಳನ್ನು ಮುಂದು ಮಾಡಿ ತೋರಿಸಿದಾಗ ಚಿಟ್ಟಿಗೆ ಅಚ್ಚರಿಯಾಯಿತು, ಮನುಷ್ಯನೇ ಇಷ್ಟಲ್ಲವಾ?
ಕ್ಲಬ್ ಅಂತ ಶುರುವಾಗಿದ್ದೇ ಆಗಿದ್ದು ಭಾರತಿಯ ಮನೆಯ ಮುಂದೆ ಕೂಡಾ ಹೋಗುವ ಅವಕಾಶ ಕಳೆದುಹೋಯಿತು. ನಕ್ಕತ್ತು, ಸರೋಜಾ, ಆರೋಗ್ಯ ಎಲ್ಲರಿಗೂ ಇದು ಬೇಸರದ ಸಂಗತಿಯೇ. ‘ಇದೆಲ್ಲಾ ಎಷ್ಟ್ ದಿನ ನಡ್ಯುತ್ತೆ? ನಮ್ಮಮ್ಮ ಹೇಳಿದ್ಲು ಕುರಿ ಬಲಿ ಕೊಡದೆ ಕ್ಲಬ್ಬು ಶುರು ಮಾಡ್ಬೇಡ ಅಂತ. ನಾವು ಬ್ರಾಮ್ರು ಕುರಿಕೊಳಿ ಕೊಡೋದಿಲ್ಲ ಅಂತ ಹೊರಟು ಹೋದರಂತೆ ಮಂಜಣ್ಣ’ ಎಂದಳು ಆರೋಗ್ಯ. ಅಂದ್ರೆ ಈ ಕ್ಲಬ್ಬು ತುಂಬಾ ದಿನ ನಡ್ಯಲ್ಲ ಆನ್ನೋದು ದೈವವಾಣಿಯಾ? ಚಿಟ್ಟಿಗೆ ಒಳಗೇ ಖುಷಿಯಾಯಿತು. ಭಾರತಿ ನಮ್ಮ ಜೊತೆ ಬರಬೇಕು. ಅತ್ತೆ ಸತ್ತ ಸುದ್ದಿ ಬಂತು. ಚಿಟ್ಟಿಗೂ ಅಳುಬಂತಾದರೂ ಅಪ್ಪ ಬೇಡ ಎಂದು ಅವಳನ್ನು, ಅಮ್ಮನನ್ನೂ ಬಿಟ್ಟು ಹೊರಟ. ಸಾವಿಗೆ ತಾನು ಹೋಗಲಿಲ್ಲ ಎಂದು ಎಲ್ಲರೂ ಆಡಿಕೊಳ್ಳುತ್ತಾರೆ ಎಂದು ಗೊತ್ತಿದ್ದರೂ ಅಮ್ಮ ಹೋಗದೆ ಚಿಟ್ಟಿಯ ಜೊತೆ ಉಳಿದಳು.

ಚಿಟ್ಟಿಯನ್ನು ರಾಜನಿಗೆ ಮದುವೆ ಮಾಡಿಕೊಡದೆ ತಾವೇ ಅತ್ತೆಯನ್ನು ಸಾಯಿಸಿದೆವು ಎನ್ನುವ ಮಾತನ್ನು ಕೇಳುವುದಕ್ಕಿಂತ ಇದು ವಾಸಿ ಎನ್ನಿಸಿತ್ತು ಅವಳಿಗೆ. ಚಿಟ್ಟಿಗೆ ಒಂದಿಷ್ಟು ದುಃಖ ಒಂದಿಷ್ಟು ವೇದನೆ ಎಲ್ಲವೂ ಆಯಿತು. ಅಪ್ಪ ಕಣ್ಣ ಮರೆಯಾಗುವವರೆಗೂ ಅವನನ್ನೇ ನೋಡುತ್ತಾ ಉಳಿದಳು. ಇಷ್ಟು ಹೊತ್ತಿಗೆ ಅತ್ತೆಯನ್ನು ಸುಟ್ಟು ಬಂದಿರುತ್ತಾರೆ. ಪಾಪ ಅವಳ ದೇಹ ಸುಡುವಾಗ ಎಷ್ಟು ನೋವಾಯಿತೋ ಏನೋ? ರಾತ್ರಿ ಅಂಗಳದಲ್ಲಿ ನಿಂತ ಚಿಟ್ಟಿ ಆಕಾಶವನ್ನು ನೋಡುತ್ತಾ ಯೋಚಿಸುತ್ತಿದ್ದಳು. ಹಿಂದೇ ಬಂದ ಅಮ್ಮ ಅವಳ ಭುಜವನ್ನು ತಡವಿ ‘ಏನ್ ನೋಡ್ತಾ ಇದೀಯ ಚಿಟ್ಟಿ?’ ಅಂದಳು. ‘ಅಮ್ಮಾ ಆ ನಕ್ಷತ್ರಗಳಲ್ಲಿ ಅತ್ತೆ ಯಾವುದು ಹೇಳಮ್ಮ?’ ಎಂದಳು, ಸತ್ತವರೆಲ್ಲಾ ನಕ್ಷತ್ರಗಳಾಗುತ್ತಾರೆ ಎಂದು ಹಿಂದೆ ಅಮ್ಮನೇ ಹೇಳಿದ್ದನ್ನ ನೆನೆದು.
ಚಿಟ್ಟಿಯ ಪ್ರಶ್ನೆಗೆ ಅಮ್ಮನಿಗೂ ಅಳು ಬಂತು. ಯಾರು ಯಾರನ್ನು ಸಂತೈಸುವುದೋ ತಿಳಿಯದಾಯಿತು. ‘ಹೋದವರು ಏನಾಗ್ತಾರೆ ಅಂತ ಯಾರಿಗೆ ಗೊತ್ತು ಚಿಟ್ಟಿ. ಎಲ್ಲಾ ಮನುಷ್ಯನ ಭ್ರಮೆ. ನಾಳೆ ನಾನಾದರೂ ಅಷ್ಟೇ’ ಎಂದಳು. ಚಿಟ್ಟಿಗೆ ಕ್ಷಣ ಕಾಲ ದಿಗಿಲಾಯಿತು ‘ಅಮ್ಮಾ ಬೇಡ ನೀನು ಸಾಯೋದು ಬೇಡ’ ಗಟ್ಟಿಯಾಗಿ ಹೇಳಬೇಕೆನ್ನಿಸಿತಾದರೂ ಅಮ್ಮನ ಗಂಭೀರವಾದ ಮುಖವನ್ನು ನೋಡುತ್ತಾ ನಿಂತಳು. ‘ಹುಟ್ಟು ಸಾವು ಯಾವುದು ಯಾರ ಕೈಲಿದೆ ಹೇಳು? ಎಲ್ಲ ಆ ಪರಮಾತ್ಮನ ಆಟ. ಯಾಕೆ ಹುಟ್ಟಿಸುತ್ತಾನೋ ಯಾಕೆ ಸಾಯಿಸುತ್ತಾನೋ? ಅವನ ಲೀಲೆಯನ್ನು ಯಾರು ಬಲ್ಲವರು’ ಅಮ್ಮ ಮಾತಾಡುತ್ತಿದ್ದರೆ ಮೊದಲ ಬಾರಿಗೆ ಎಲ್ಲಬಲ್ಲವಳಂತೆ ಕಂಡಿದ್ದಳು.
ಕ್ಲಬ್ ಶುರುವಾಗಿದ್ದೆ ಶುರುವಾಗಿದ್ದು ಗಂಡಸರೆಲ್ಲಾ ಬೆಳಗು ಸಂಜೆ ಅನ್ನದೆ ಅಲ್ಲೇ ಇರುತ್ತಿದ್ದರು. ಅವರವರ ಹೆಂಡತಿಯರು ಊಟಕ್ಕೆ, ತಿಂಡಿಗೆ, ಕೊನೆಗೆ ಮಾತಾಡಬೇಕಂತೆ ಎಂತಲೂ ತಮ್ಮ ತಮ್ಮ ಮಕ್ಕಳ ಕೈಲಿ ಹೇಳಿಕಳಿಸುತ್ತಿದ್ದರು. ಶಿವಣ್ಣ ಎನ್ನುವ ಎಣ್ಣೆ ಪಾರ್ಟಿಯ ಹೆಂಡತಿ ಬರೀ ಕುಡಿತದಿಂದ ನನ್ನ ಗಂಡ ಹಾಳಾಗ್ತಾ ಇದ್ದಾನೆ ಅಂದುಕೊಂಡವಳು ಈಗ ತನ್ನ ಕೋಪವನ್ನು ಎತ್ತಿ ಹಾಳು ಇಸ್ಪೇಟಿನ ಮೇಲೆ ಹಾಕುತ್ತಿದ್ದಳು. ಕಳ್ಳಂಗಡಿಯ ಕೃಷ್ಣಪ್ಪ ಅವಳ ಬಾಯಿಂದ ಅಷ್ಟರಮಟ್ಟಿಗೆ ಬಚಾವಾಗಿದ್ದ. ಆದರೆ ಇದೆಲ್ಲದರ ಹಿಂದೆ ಕೃಷ್ಣಪ್ಪನ ನೆರಳಿದೆ ಎನ್ನುವುದು ಮುಚ್ಚು ಮರೆಯ ವಿಷಯವೇನಾಗಿರಲಿಲ್ಲ.
ಇಸ್ಪೀಟಿನ ಹುಚ್ಚಿಗೆ ಬಿದ್ದ ಜನ ಸರಾಪು ಅಂಗಡಿಯನ್ನೂ ದೂರ ಇಟ್ಟಿದ್ದು ಊರಿನ ಇತಿಹಾಸವೇ. ಕೃಷ್ಣಪ್ಪನ ವ್ಯಾಪಾರ ಕಡಿಮೆಯಾಗಿ ಊರ ಹೆಣ್ಣುಮಕ್ಕಳಿಗೆಲ್ಲಾ ತಾನೇ ಅಣ್ಣನೇನೋ ಅನ್ನುವ ಹಾಗೇ ‘ನೋಡಮ್ಮಾ ನಮ್ಮಂಗಡಿ ಕಳ್ಳು ಕುಡಿದು ಸೀದಾ ಮನೆಗೆ ಬರುತ್ತಿದ್ದ. ಹೊಡೀತಿದ್ದನೋ ಬಡೀತಿದ್ದನೋ ಗಂಡ ಅಂತ ರಾತ್ರಿಯೆಲ್ಲಾ ಮನೆಯಲ್ಲೇ ಇರುತ್ತಿದ್ದ. ಈಗ ನೋಡು, ನಿನ್ನ ಗಂಡ ಆ ಕ್ಲಬ್ಬಿನಲ್ಲಿ ಕೂತು ರಾತ್ರಿ ಕಳೆಯುತ್ತಿದ್ದಾನೆ. ಏನೋ ನಿನ್ನ ಒಳ್ಳೆಯದಕ್ಕೆ ಹೇಳ್ತಾ ಇದೀನಿ. ನಿನ್ನ ಗಂಡನನ್ನು ನಿನ್ನ ಹಿಡಿತದಲ್ಲಿಟ್ಟುಕೋ’ ಎಂದು ಹಚ್ಚಿಕೊಡುತ್ತಿದ್ದ. ಪರಿಣಾಮವಾಗಿ ಬಾಯಿಜೋರಿನ ಹೆಣ್ಣುಮಕ್ಕಳು ಕ್ಲಬ್ಬಿನ ಮುಂದೆ ಬಂದು ಹಿಡಿಶಾಪ ಹಾಕುತ್ತಾ ಗಂಡಂದಿರನ್ನು ಹೊರಗೆ ಕರೆಯುತ್ತಿದ್ದರು. ಸರೀಕರ ಮುಂದೆ ತಮ್ಮ ಹೆಂಡತಿಯರಿಂದ ಹೀಗೆ ಅವಮಾನಕ್ಕೆ ಗುರಿಯಾಗಿ ಹೊರಗೆ ಬಂದು ‘ನಡೀ ಬರ್ತೀನಿ’ ಅಂತ ಗದರುತ್ತಿದ್ದರು. ‘ನೀನ್ ಬರೋ ತನ್ಕ ನಾನ್ ಹೋಗಾಕಿಲ್ಲ. ಬೆಳಗಿಂದ ದುಡ್ದಿರೋ ದುಡ್ಡನ್ನ ಕೈಗೆ ಕೊಡು ಆಮೇಲೆ ಇಸ್ಪೇಟಾದ್ರೂ ಆಡು ಇಲ್ಲ್ಲಾಂದ್ರೆ ಹಾಳಾಗಾದ್ರೂ ಹೋಗು’ ಎಂದು ಹೆಂದತಿಯರೂ ಬೈಯ್ಯುತ್ತಿದ್ದರು.
ಕಳ್ಳಂಗಡಿ ಕೃಷ್ಣಪ್ಪ ಆಗ ಅಕಸ್ಮಾತ್ ಸಿಕ್ಕರೆ ಅಟ್ಟಾಡಿಸಿಕೊಂಡು ಬಡಿದು ಬಿಡುತ್ತಿದ್ದರೇನೋ ಎನ್ನುವಷ್ಟು ಕೋಪ ಬಂದರೂ ಏನೂ ಮಾಡಲಿಕ್ಕಾಗದ ಸ್ಥಿತಿ. ಅವನ ಹೆಂಡತಿಯೋ ಮಹಾನ್ ಪತಿವ್ರತೆ. ಯಾರು ಏನು ಹೇಳಿದರೂ ತನ್ನ ಗಂಡ ಶ್ರೀರಾಮಚಂದ್ರ ಎನ್ನುತ್ತಿದ್ದಳು. ತನ್ನ ಕುಲಾಚಾರಕ್ಕೆ ಹೊಂದುವಂತೆ ಬೆಳಗಿನಿಂದ ರಾತ್ರಿಯವರೆಗೂ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದು ನಿಮಷಕ್ಕೊಂದು ಬಾರಿ ಕತ್ತಲ್ಲಿನ ತಾಳಿಯನ್ನು ಶಿವಾ ಶಿವಾ ಎಂದು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದಳು. ಅಂಥ ಕೃಷ್ಣಪ್ಪನ ಮನೆಯಲ್ಲಿ ಜಗಳವನ್ನು ತಂದಿಡಲಾಗದ ಅಸಹಾಯಕತೆಯಲ್ಲಿ ‘ಆಯ್ತು ಕಣೇ ನಾಳೆಯಿಂದ ಈ ಕಡೆಗೆ ತಲೆ ಹಾಕಲ್ಲ ಇವತ್ತು ಆಟ ಅರ್ಧದಲ್ಲಿದೆ ಮರ್ಯಾದೆ ಕಳಿಬೇಡ’ ಎಂದು ಬೇಡಿಕೊಂಡ ಗಂಡಂದಿರಿಗೆ ‘ನಿನ್ನ ಮೊಕಕ್ಕೆ ಮರ್ಯಾದೆ ಬೇರೆ’ ಎಂದು ತುಪ್ಪರಿಸಿ ಸಾಗುತ್ತಿದ್ದರು. ಇದರಲ್ಲೆಲ್ಲಾ ಘಟವಾಣಿ ಎಂದರೆ ಎಣ್ಣೆ ಪಾರ್ಟಿ ಶಿವಣ್ಣನ ಹೆಂಡತಿ ಶಿವಮ್ಮಾನೇ.
ಶಿವಮ್ಮನ ಮೂಲ ಹೆಸರು ಬಾಳಕ್ಕ ಎಂದು. ಮದುವೆಯ ಹೊತ್ತಿನಲ್ಲಿ ಬಾಳಕ್ಕ ಎನ್ನುವ ಹೆಸರು ಶಿವಣ್ಣನ ಜೊತೆ ಸೇರಿಬರಲ್ಲ ಅಂತ ಶಾಸ್ತ್ರ ಹೇಳಿದ ಕಾರಣಕ್ಕೆ ಶಿವಮ್ಮ ಅಂತ ಬದಲಿಸಿಕೊಂಡು ಶಿವ ಪಾರ್ವತಿಯರ ಹಾಗೇ ಇರಿ ಎಂದು ಹರಿಸಿಕೊಂಡಿದ್ದರು. ಹೀಗೆ ಹರಸಿದ್ದ ಹಿರಿಯರು ಯಾರೂ ಜೀವಂತವಾಗಿ ಉಳಿದಿಲ್ಲವಾದ್ದರಿಂದ ಬಚಾವಾಗಿದ್ದರು. ಬಾಳಕ್ಕ ಅಂತ ಹೆಸರಿದ್ದಿದ್ದರೆ ಹೇಗೋ ಬಾಳಿಕೊಳ್ಳುತ್ತಿದ್ದೆ ಈ ಹಾಳು ಗಂಡನನ್ನು ಕಟ್ಟಿಕೊಂಡು ಶಿವಮ್ಮನಾಗಿ ಬ್ರಹ್ಮನ ಕಪಾಲವನ್ನು ಚಿವುಟಿ ಬ್ರಹ್ಮಹತ್ಯಾ ದೋಷಕ್ಕೆ ಒಳಗಾಗಿ ಊರೂರು ಅಲೆಯುತ್ತಿದ್ದನಲ್ಲಾ ಆಗ ಅಂಥಾ ಪಾರ್ವತಿಯೇ ಕೈಲಾಸದಲ್ಲಿ ಹಸಿವಿನಿಂದ ನರಳುವ ಮಕ್ಕಳನ್ನು ಕಟ್ಟಿಕೊಂಡು ಉಳಿದಳಲ್ಲಾ ಹಾಗೇ ತಾನು ಕೂಡಾ ಪಡುತ್ತಿದ್ದ ಕಷ್ಟದ ಬಗ್ಗೆ ರಾಗವಾಗಿ ಹಾಡಿಕೊಳ್ಳುತ್ತಾ ಕೂತಿರುತ್ತಿದ್ದಳು. ಮನೆಯಲ್ಲಿ ಉಪ್ಪಿಲ್ಲ, ಹುಣಸೆ ಹಣ್ಣಿಲ್ಲ, ಗೊಡ್ಡು ಸಾರಿಗಾದರೂ ಕಾರ ಬೇಡವೇ? ಎಲ್ಲದಕ್ಕೂ ಭಿಕ್ಷೆ ಬೇಡಿದರೆ ಹೇಗೆ? ಎಲ್ಲಿಲ್ಲದ ಕೋಪ ಬಂತು. ಅಳುತ್ತಿದ್ದ ಮಕ್ಕಳನ್ನು ಪಕ್ಕಕ್ಕೆ ತಳ್ಳಿ ಸೀದಾ ಎದ್ದವಳೆ ಕ್ಲಬ್ಬಿಗೆ ನುಗ್ಗಿ, ಆಡುತ್ತಾ ಮೀಸೆಗೆ ಕೈಹಾಕಿ ನಗುತ್ತಿದ್ದ ಗಂಡನ ಕಾಲರ್‌ನ್ನು ಹಿಡಿದುಹೊರಗೆ ಎಳೆತಂದು ‘ಮುಂಡೆ ಮಗನೇ ನೀನು ಕಂಠಪೂರ್ತಿ ಕುಡಿದು ಮನೆಯಲ್ಲೇ ಬಿದ್ದಿರು. ಆದ್ರೆ ಹೀಗೆ ಇಸ್ಪೇಟಲ್ಲಿ ಎಲ್ಲವನ್ನೂ ಕಳೀಬೇಡ. ಅಲ್ಲಿ ನೀನು ಹುಟ್ಟಿಸಿದ ಮಕ್ಕಳು ಹಸಿವೋ ಎಂದು ನನ್ನ ಜೀವ ತೆಗೀತಾ ಇದಾವೆ’ ಎಂದು ಕುಯ್ಯೋ ಮರ್ರೋ ಎಂದರೂ ಬಿಡದೆ ಜಾಡಿಸಿದ್ದಳು. ಅವಳ ಒದೆಯ ರುಚಿಯನ್ನು ಶಿವಣ್ಣ ನೋಡುತ್ತಿದ್ದ ಹಾಗೆ ಅಲ್ಲಿದ್ದವರೆಲ್ಲಾ ಜಾಗ ಖಾಲಿ ಮಾಡಿದ್ದರು. ಕ್ಲಬ್ಬಿನಲ್ಲಿ ಬೋಂಡ ತುಂಬಿದ ತಟ್ಟೆಗಳು ಹಾಗೇ ಬಿದ್ದುಕೊಂಡಿದ್ದವು. ಹಾಳು ಶಿವಮ್ಮನಿಂದಾಗಿ ತನ್ನ ವ್ಯಾಪಾರ ಹಾಳಾಗಿದ್ದಕ್ಕಾಗಿ ಮಂಜಣ್ಣನವರಿಗೆ ಕೋಪ ಬಂದಿತ್ತು.
‘ಬ್ರಾಹ್ಮಣ ಮಾಡಬಾರದ ಅನಾಚಾರ ಮಾಡಿದ್ರೆ ಇನ್ನೇನಾಗುತ್ತೆ?’ ಎಂದಳು ಪದ್ದಕ್ಕ. ‘ಸುಮ್ಮನಿರ್ರಿ ಭಾವ ಏನೋ ಒಂದು ಪ್ರಯತ್ನ ಮಾಡ್ತಾ ಇದಾರೆ ಮಕ್ಕಳಂದಿಗ ಹೇಗೋ ದುಡಿಯೋದು ದುಡ್ಕೊಳ್ಳಿ’ ಎಂದರು ಶಾಂತ, ‘ಏನೋಪ್ಪ ಒಟ್ನಲ್ಲಿ ಎಲ್ಲಾ ಅಯೋಮಯ’ ಎಂದಳು ಅಮ್ಮ ಊರಲ್ಲಿಲ್ಲದ ಅಪ್ಪನನ್ನು ನೆನೆದು. ಚಿಟ್ಟಿಗೆ ಇವೆಲ್ಲವೂ ಚಿತ್ರ ವಿಚಿತ್ರವಾಗಿ ಕಾಣುತ್ತಿತ್ತು. ಒಂದು ಕ್ಷಣ ಅಮ್ಮಾ ಅಪ್ಪನನ್ನೂ, ಶಾಂತಾ ಸತ್ಯಣ್ಣ ಮೇಷ್ಟ್ರನ್ನೂ, ಪದ್ದಕ್ಕ ತನ್ನ ಗಂಡನನ್ನು ಹೊಡೆದರೆ ಹೇಗಿರುತ್ತೆ ಎಂದು ಊಹೆ ಮಾಡಿಕೊಳ್ಳತೊಡಗಿದಳು. ಅವಳ ಮುಖದಲ್ಲಿ ನಗು ಪಕ್ಕೆಂದು ತೇಲಿತು. ‘ಯಾಕೆ ನಗ್ತೀಯ?’ ಎನ್ನುವ ಅಮ್ಮನ ಮಾತಿಗೆ ‘ಏನಿಲ್ಲ ಬಿಡು’ ಎಂದಳು ಚಿಟ್ಟಿ. ‘ಈಚೆಗೆ ನಿನ್ನ ವರ್ತನೆ ನನಗೆ ಆಶ್ಚರ್ಯ ತರಿಸ್ತಾ ಇದೆ ಚಿಟ್ಟಿ ನೀನು ಮಾಮೂಲಿನ ಹಾಗಿಲ್ಲ’ ಎಂದಳು ಅಮ್ಮ. ಅಮ್ಮನ ಮಾತಿಗೆ ಉತ್ತರಿಸದೆ ಚಿಟ್ಟಿ ಅಲ್ಲಿಂದ ಜಾಗ ಖಾಲಿ ಮಾಡಿದಳು.
ಅಪ್ಪ ಅತ್ತೆಯ ವೈಕುಂಠದ ಪ್ರಸಾದ ಸಿಹಿಬೂಂದಿ, ಕಾರಾ ಬೂಂದಿಯ ಜೊತೆ ಅಜ್ಜಿಯನ್ನೂ ಕರೆದುಕೊಂಡು ಬಂದಿದ್ದ. ಅಜ್ಜಿ ಯಾರ ಜೊತೆಯೂ ಮಾತಾಡಲಿಲ್ಲ. ಮಗಳನ್ನು ಕಳೆದುಕೊಂಡ ದುಃಖ ಅವಳ ಮುಖದಲ್ಲಿ ತೇಲುತ್ತಿತ್ತು. ಚಿಟ್ಟಿಗೆ ಸಿಹಿ ಇಷ್ಟವಾದರೂ ಅತ್ತೆಯ ಪ್ರಸಾದ ಎಂದು ಅಪ್ಪ ತಂದಿದ್ದನ್ನು ತಿನ್ನಲಿಕ್ಕಾಗಲಿಲ್ಲ. ಪ್ರಸಾದ ‘ಚಿಟ್ಟಿ ತಿನ್ನು’ ಅಂತ ಅಮ್ಮ ಸ್ವಲ್ಪ ತಿನ್ನಿಸಿದಳಾದರೂ ಅದು ಗಂಟಲಿನೊಳಗೆ ಇಳಿಯುವ ಮುನ್ನವೇ ಹೊರಕ್ಕೆ ಬಂದಿತು. ಅಜ್ಜಿ ತನ್ನ ಮಗಳನ್ನು ಸಾಯಿಸಿದ ಚಿಟ್ಟಿಯನ್ನು ಬೈಯ್ಯತೊಡಗಿದ್ದಳು.
‘ಅಪ್ಪತಾನೇ ಬೇಡ ಅಂದಿದ್ದು ನಾನ್ ಹೇಗೆ ಅತ್ತೆಯನ್ನು ಸಾಯಿಸಿದೆ?’ ಎಂದು ಅಚ್ಚರಿಗೊಂಡಳು ಚಿಟ್ಟಿ. ಅವತ್ತೆ ರಾತ್ರಿ ಚಿಟ್ಟಿಗೆ ಒಂದು ಕನಸು ಬಿತ್ತು. ಕನಸು ಎಂದರೆ ಅಂತಿಂಥಾ ಕನಸಲ್ಲ. ಅತ್ತೆ ಸತ್ತು ಹೋಗಿದ್ದಳು ಅವಳ ಹೆಣವನ್ನು ಅವರ ಮನೆಯ ಪಡಸಾಲೆಯಲ್ಲಿ ಮಲಗಿಸಿಸುತ್ತಾ ಜನ ಅಳುತ್ತಿದ್ದರು. ಯಾರೋ ಅವಸರಪಡಿಸುತ್ತಾ ಹೆಣ ಇನ್ನು ಎಷ್ಟು ಹೊತ್ತು ಇಡುತ್ತೀರ ಮೊದಲು ಎತ್ತಿ ಎನ್ನುತ್ತಿದ್ದರು. ಹೀಗೆ ಬಯಲಲ್ಲಿ ಹೆಣಕ್ಕೆ ನೀರನ್ನು ಹಾಕಿ ಅವಳ ಹೊಟ್ಟೆಗೆ ಬಾಗಿನವನ್ನು ಕಟ್ಟಿ ಎತ್ತಿಕೊಂಡು ಹೋದರು. ಸ್ಮಶಾನದಲ್ಲಿ ಒಟ್ಟಿದ್ದ ಕಟ್ಟಿಗೆಯ ಮೇಲೆ ಅವಳನ್ನ ಮಲಗಿಸಿ ಇನ್ನೇನು ಬೆಂಕಿ ಇಡಬೇಕು ಆಗ ದೂರದಲ್ಲಿ ಅವಳೇ ಆತ್ಮ ರೂಪಿಯಾಗಿ ನೆಲಕ್ಕೆ ಬಿದ್ದು, ಮಣ್ಣನ್ನು ಮುಕ್ಕುತ್ತಾ ‘ನನ್ನ ಸುಡಬೇಡಿ ನನಗೆ ಮೈಯೆಲ್ಲಾ ಉರಿಯುತ್ತೆ. ನನ್ನ ಹೂತುಬಿಡಿ’ ಎಂದು ಎದೆ ಎದೆ ಹೊಡೆದುಕೊಂಡು ಕೂಗುತ್ತಿದ್ದಳು. ಅವಳು ಹಾಗೇ ಕೂಗುತ್ತಿದ್ದುದು ಅಲ್ಲಿದ್ದವರಿಗ್ಯಾರಿಗೂ ಕೇಳುತ್ತಲೇ ಇಲ್ಲ. ಯಾರೋ ಅವಳ ಹೆಣಕ್ಕೆ ಕೊಳ್ಳಿ ಇಟ್ಟರು. ಬೆಂಕಿ ಧಗಧಗನೆ ಹೊತ್ತಿ ಉರಿಯತೊಡಗಿತು. ಆತ್ಮರೂಪಿಯಾದ ಅತ್ತೆ ಚಿಟ್ಟಿಯ ಎದುರು ಕೂತು ‘ನೋಡು ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಲೇ ಇಲ್ಲ. ನನಗೆ ಮೈಯ್ಯುರಿ ತಡೀಲಿಕ್ಕಾಗ್ತಾ ಇಲ್ಲ’ ಎಂದು ಗೋಳಾಡತೊಡಗಿದಳು. ಅತ್ತೆಯ ನೋವನ್ನು ನೋಡಲಾರದೆ ಚಿಟ್ಟಿ ‘ಅತ್ತೆ ಏನು ಮಾಡಿದರೆ ನಿನ್ನ ಉರಿ ಮಾಯುತ್ತೆ’ ಎಂದಳು. ಅತ್ತೆ ಇದ್ದಕ್ಕಿದ್ದ ಹಾಗೆ ಎದ್ದು ನಿಂತು ‘ನೀನು ನನ್ನ ಮಾತನ್ನ ಕೇಳ್ತೀಯಾ?’ ಎಂದಳು. ಚಿಟ್ಟಿಗೆ ಅತ್ತೆ ಅಕಸ್ಮಾತ್ ರಾಜನನ್ನು ಮದುವೆಯಾಗು ಎಂದುಬಿಟ್ಟರೆ ಎನ್ನುವ ಭೀತಿ ಆವರಿಸಿತು. ಅತ್ತೆಯ ಕಣ್ಣು ಆಕಾಶದಲ್ಲಿ ತೇಲುವ ಹಾಗೇ ಇತ್ತು. ಚಿಟ್ಟಿಯನ್ನೇ ನೋಡುತ್ತಾ ‘ನನ್ನೊಳಗಿನ ಕಥೆಗಾತಿಯನ್ನು ನಿನ್ನೊಳಗೆ ಕಳಿಸುತ್ತಿದ್ದೇನೆ. ನೀನು ಕಥೆ ಬರೀ ಚಿಟ್ಟಿ ಕಥೆಯ ತಂಪಲ್ಲಿ ನನ್ನ ಮೈಯುರಿ ಮಾಯುತ್ತೆ’ ಎಂದಳು.
ಚಿಟ್ಟಿ ದಂಗಾದಳು ‘ನಾನೇನು? ಕಥೆ ಬರೆಯುವುದು ಎಂದರೇನು?’ ಚಿಟ್ಟಿ ನೋಡುತ್ತಿದ್ದ ಹಾಗೇ ಅತ್ತೆ ಗಾಳಿಯಲ್ಲಿ ತೇಲಿ ಹೋದಳು. ಚಿಟ್ಟಿ ಬೆಚ್ಚಿ ಎದ್ದಳು. ಅವಳ ಮೈ ಬೆವರಿನಿಂದ ತೊಯ್ದು ಹೋಗಿತ್ತು. ಚಿಟ್ಟಿಗೆ ತಾನು ಅತ್ತೆಯ ಹಾಗೆ ಕಥೆಗಾರ್ತಿಯಾಗುವುದು ಹೇಗೆ? ಹಗಲೂ ಮೂರು ಹೊತ್ತೂ ಅದೇ ಯೋಚನೆ. ‘ನಾನು ಹೇಳಲಿಲ್ಲವಾ ಚಿಟ್ಟಿ ಮಾಮೂಲಿನ ಹಾಗಿಲ್ಲ’ ಅಮ್ಮ ಮತ್ತೆ ಮತ್ತೆ ಗೊಣಗಿದಳು. ಚಿಟ್ಟಿಗೆ ಅದೊಂದು ಧ್ಯಾನಸ್ಥಿತಿ ಕಣಜದ ಹುಳವೊಂದು ಎಲ್ಲಿಂದಲೋ ಹಸಿ ಮಣ್ಣೀನ ಉಂಡೆಗಳನ್ನು ತಂದು ಒಂದರ ಮೇಲೆ ಒಂದು ಜೋಡಿಸಿ ಮಡಿಕೆಯಾಕಾರದ ಗೂಡನ್ನು ಕಟ್ಟುತ್ತಿತ್ತು. ಅದನ್ನೇ ನೋಡುತ್ತಾ ಕೂತಿದ್ದ ಚಿಟ್ಟಿ ಇದ್ದಕ್ಕಿದ್ದ ಹಾಗೇ ಪೆನ್ನು ಪೇಪರ್ರು ತಂದಳು. ಕಣಜದ ಜುಯ್ಯ್ ಎನ್ನುವ ಶಬ್ದದ ಗುಂಗಿನಲ್ಲೇ ಬರೆಯತೊಡಗಿದ್ದಳು . ಅತ್ತೆ ಹೇಳಿದ್ದ ರಂಗುಮಹಾಪಟ್ಟಣದ ಕಥೆ ಹಾಳೆಗೆ ಇಳಿದಿತ್ತು. ಅತ್ತೆಯ ಮಾತುಗಳು ಚಿಟ್ಟಿಯ ಒಳಗೆ ಇಳಿದು ಹೊಸದಾಗಿ ನೆಯ್ಗೆಗೊಂಡಿತ್ತು. ಇದನ್ನು ನಾನು ಬರೆದನೇ? ಅಚ್ಚರಿಯಲ್ಲಿ ನಿಂತಳು ಚಿಟ್ಟಿ. ಅಪ್ಪ ಅದನ್ನ ಓದಿ ಚಿಟ್ಟಿಯ ಕೈಗೆ ಮುತ್ತನ್ನ ಕೊಟ್ಟು ‘ನನ್ನ ಅಕ್ಕ ಬದುಕಿದ್ದಾಳೆ. ಈಗ ನನಗೆ ಸಮಾಧಾನ ಆಯ್ತು’ ಎಂದ. ಚಿಟ್ಟಿ ಸಂತೋಷದಿಂದ ನಕ್ಕಳು. ಅಮ್ಮ ಕೇಳಿದಳು,
‘ಚಿಟ್ಟಿ ಮನುಷ್ಯನಿಗೆ ಖುಷಿಯಾದ್ರೆ ಕಥೆ ಬರುತ್ತಾ?’ ಚಿಟ್ಟಿ ಮೊದಲಬಾರಿಗೆ ಉತ್ತರಿಸಿದ್ದಳು ‘ಇರಬಹುದಮ್ಮಾ’.
 

‍ಲೇಖಕರು G

October 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: