ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : `ಅಮ್ಮ ಮೈಲಿಗೆ ಎಂದರೆ ಏನು?'

ಮಡಿ, ಮೈಲಿಗೆ ಮತ್ತು ಅಜ್ಜಿ

(ಇಲ್ಲಿಯವರೆಗೆ…)

ಅಪರೂಪಕ್ಕೆ ಅಪ್ಪ ಕೊಟ್ಟಿದ್ದ ಹತ್ತು ಪೈಸೆ ಹಿಡಿದು ಏನ್ ಬರುತ್ತೆ? ಹತ್ತು ಬೋಟಿ, ಐದು ಬೆಲ್ಲದ ಉಂಡೆ, ಎರಡ್ ಬಣ್ಣದ ಸಕ್ಕರೆ ಕಡ್ಡಿ- ಹೀಗೆ ಮೂಲೆ ಅಂಗಡಿ ಧರ್ಮಣ್ಣನ ಗಾಜಿನ ಡಬ್ಬಿಯ ಹಿಂದೆ ಕೂತು ಕಣ್ಣನ್ನ ಸೆಳೆಯುತ್ತಿದ್ದ ಒಂದೊಂದೇ ತಿಂಡಿಗಳಲ್ಲಿ ಯಾವುದನ್ನು ಕೊಳ್ಳಲಿ ಎಂದು ಲೆಕ್ಕಚಾರ ಹಾಕುತ್ತಾ ನಿಂತಳು ಚಿಟ್ಟಿ. `ಏನು ಬೇಕು?’ ಎನ್ನುವ ಮೂಲೆ ಅಂಗಡಿ ಧರ್ಮಣ್ಣನ ಗಡಸು ಧ್ವನಿ ಕೇಳಿ ತುಸು ಗಾಬರಿಯೆನ್ನಿಸಿ ನೋಡಿದಳು. ಅವನ ಹಣೆಯ ಮೇಲಿನ ಕಾಸಗಲದ ಕುಂಕುಮ ಅವಳಲ್ಲಿ ಭೀತಿ ಮೂಡಿಸಿತು. ಧರ್ಮಣ್ಣನ ಬಗ್ಗೆ ಎಲ್ಲರೂ ಒಂಥರಾ ಮಾತಾಡ್ತಿದ್ರು. `ರಾತ್ರಿ ಅವನ ಮನೆಯ ತುಂಬಾ ಪ್ರೇತಾತ್ಮಗಳು ರೊಯ್ಯನೆ ತೇಲಿಕೊಂಡು ಬರುತ್ತವಂತೆ, ರಾತ್ರಿಯೆಲ್ಲಾ ಅವಕ್ಕೆ ಪ್ರೀತಿಯಾಗುವ ಹಾಗೆ ಪೂಜೆ ಮಾಡ್ತಾನಂತೆ’ ಹೀಗೆ ಏನೇನೋ. … ಇದನ್ನ ಕೇಳಿದಾಗ ಚಿಟ್ಟಿಗೆ ಆ ಪ್ರೇತಾತ್ಮಗಳು ಬಾವುಲಿಗಳಂತೆ ತೇಲಿ ಬರುವ ಚಿತ್ರ ಕಣ್ಣ ಮುಂದೆ ಬರುತ್ತಿತ್ತು.
ಆದರೆ ಏನು ಮಾಡುವುದು? ಊರಿಗೆಲ್ಲ ಅದೊಂದೇ ಅಂಗಡಿ. ಇನ್ನೊಂದು ಇದ್ದಿದ್ದರೆ ಧರ್ಮಣ್ಣನ ಅಂಗಡಿಯ ಕಡೆಗೆ ತಲೆ ಕೂಡಾ ಹಾಕಿ ಅವಳು ಮಲಗುತ್ತಿರಲಿಲ್ಲ. ಧರ್ಮಣ್ಣ ಮತ್ತೆ ಹೂಂಕರಿಸಿದ. ಸಮಸ್ತಕ್ಕೂ ದೇವರಿದ್ದಾನೆ ಚಿಟ್ಟಿ ಉಗುಳನ್ನ ನುಂಗುತ್ತಾ `ಬೋಟಿ’ ಎಂದು ಲಗುಬಗೆಯಿಂದ ಹತ್ತು ಪೈಸೆಯನ್ನು ತೆಗೆದು ಡಬ್ಬಿಯ ಮೇಲಿಟ್ಟಳು. ಧರ್ಮಣ್ಣ ಹತ್ತು ಬೋಟಿಯನ್ನು ಪ್ಲಾಸ್ಟಿಕ್ ಕವರ್ನಿಂದ ಎಣಿಸಿ ನಿರ್ಲಿಪ್ತತೆಯಿಂದ ಅವಳ ಕೈಗೆ ಹಾಕಿ ಚೀಲಗಳ ಮಧ್ಯೆ ಹಾಕಿದ್ದ ಕುರ್ಚಿಯ ಮೇಲೆ ಧ್ಯಾನಿಸುತ್ತ ಕೂತ. ತನ್ನ ಮೇಲೇನಾದರೂ ಪ್ರೇತವನ್ನು ಕರೆದುಬಿಟ್ಟರೆ ಹೆದರಿಕೆಯಿಂದ ಚಿಟ್ಟಿ ಹಾರುತ್ತಾ ಅಂಗಡಿಯ ಮೆಟ್ಟಿಲಿಳಿದಳು. ಮೆಟ್ಟಲಿಳಿದಿದ್ದೇ ತಡ ಅಷ್ಟರವರೆಗಿನ ಎಲ್ಲವನ್ನೂ ಮರೆತು ಸಂಭ್ರಮದಿಂದ ಹತ್ತೂ ಬೆರಳಿಗೆ ಬೋಟಿಯನ್ನು ತೂರಿಸಿ ಗಾಳಿಯಲ್ಲಿ ಕೈಗಳನ್ನು ಆಡಿಸಿ `ಡುಮ್ಮಟಕ್ಕ’ ಎನ್ನುತ್ತಾ ನಕ್ಕಳು. ಹಾಗೆ ತುಂಬು ಸಡಗರದಲ್ಲಿರುವಾಗಲೇ ಅವಳು ನಿರೀಕ್ಷಿಸದೆಯೇ ಭಾರತಿ ಅವಳೆದುರಿಗೆ ಬಂದು ಬಿಟ್ಟಳು. ಚಿಟ್ಟಿ ತನ್ನ ಬೆರಳಲ್ಲಿ ಅವಿತು ನಾಲಿಗೆಗೆ ಆಸೆಯನ್ನು ಹುಟ್ಟಿಸುತ್ತಿದ್ದ ಬೋಟಿಯಲ್ಲಿ ಒಂದೂ ಅವಳ ಪಾಲಾಗಬಾರದೆಂದು ಕೈಗಳನ್ನು ಹಿಂದೆ ಇಟ್ಟುಕೊಂಡಳು. `ಅಮ್ಮನಿಗೆ ಸಕ್ಕರೆ ಬೇಕಂತೆ ಕೊಟ್ಟು ಹಾಗೆ ಆಟಕ್ಕೆ ಹೋಗೋಣ ಇರು’ ಎಂದು ಅಂಗಡಿಯ ಮೆಟ್ಟಿಲಿಗೆ ಭಾರತಿ ಜಿಗಿದಳು. ನಿಧಾನಕ್ಕೆ ಕರುಂ ಕರುಂ ಎಂದು ಶಬ್ದ ಮಾಡುತ್ತಾ ಸವಿದು ತಿನ್ನಬೇಕೆಂದುಕೊಂಡಿದ್ದ ಬೋಟಿಯನ್ನು ಚಿಟ್ಟಿ ಮನಸ್ಸಿಲ್ಲದ ಮನಸ್ಸಿನಿಂದ ಗಬಗಬನೆ ತಿಂದಿದ್ದಳು.
ಸಕ್ಕರೆ ಕೊಂಡು ಚಿಟ್ಟಿಯ ಹತ್ತಿರ ಬಂದ ಭಾರತಿಗೆ ಬೋಟಿಯ ಘಮಲು ಮೂಗಿಗೆ ಹತ್ತಿ `ಏನೇ ವಾಸನೆ’ ಎಂದಳು. ರಾಕ್ಷಸರು ನರವಾಸನೆಯನ್ನು ಕಂಡುಹಿಡಿಯುವಂತೆ ಇವಳಿಗೆ ಬೋಟಿಯ ವಾಸನೆ ಬಂದುಬಿಟ್ಟಿತೇ! ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂದು ಯೋಚಿಸುವಾಗ ಚಿಟ್ಟಿಯ ಪುಟ್ಟ ತಲೆಯಲ್ಲಿ ಉಪಾಯ ಹೊಳೆದಿತ್ತು. `ಏನಿಲ್ಲ ಕಣೇ ನಾನು ಈ ಕಡೆಗೆ ಬಂದ್ನಾ ಧರ್ಮಣ್ಣಗೆ ನನ್ನ ನೋಡಿ ಏನನ್ನಿಸಿತೋ ಏನೋ ಬಾ ಅಂತ ಕರೆದು ಬೋಟಿ ಕೊಟ್ಟ ಅದನ್ನೆ ತಿಂದೆ. . ಹಾ ಅದು ನೀ ಬರೋ ಮುಂಚೇನೆ ತಿಂದ್ಬಿಟ್ಟಿದ್ದೆ ದೇವ್ರಾಣೆಗೂ. . . . ‘ ಎಂದಳು ನಂಬಿಕೆ ಹುಟ್ಟಿಸುವಂತೆ ಕಣ್ಣಲ್ಲಿ ಅಮಾಯಕತೆಯನ್ನು ತುಂಬಿಕೊಂಡು. ಭಾರತಿಗೆ ಅನುಮಾನ `ಧರ್ಮಣ್ಣ ಹಾಗೆಲ್ಲಾ ಕೊಡಲ್ವಲ್ಲ? ಕೊಡೋನ್ ಕೊಟ್ಟ ಇವಳಿಗ್ಯಾಕೆ ಕೊಡ್ಬೇಕಿತ್ತು? ನಾನೂ ಇವನ ಅಂಗಡಿಯಲ್ಲೇ ಸಾಮಾನು ತಗೊಂಡೆ ತಾನೆ? ನನಗೆ ಕೊಡಬಹುದಿತ್ತು’ ಎಂದು ಕರುಬತೊಡಗಿದಳು. ಕೊನೆಗೂ ಅವಳ ಮನಸ್ಸು ತಡೀದೇ `ಹಾಗೆಲ್ಲಾ ಯಾರಾದ್ರೂ ಕೊಟ್ರೆ ತಗೋಬಾರ್ದು ಅಂತ ನಮ್ಮನೇಲಿ ಹೇಳಿದ್ದಾರೆ. ನಾನಂತೂ ಯಾರ್ ಹತ್ರಾನೂ ಬಿಟ್ಟಿ ತಗೊಳ್ಳಲ್ಲಪ್ಪಾ. ಅದೂ ಅಲ್ಲದೆ ಧರ್ಮಣ್ಣನ ಬಗ್ಗೆ ಗೊತ್ತಲ್ಲಾ ಹಾಗೆ ನಿನಗೆ ಕೊಟ್ಟ ಅಂದ್ರೆ ಸುಮ್ನೆ ಕೊಟ್ಟಿರಲ್ಲ ನಿನ್ನ ವಶೀಕರಣ ಮಾಡಿಕೊಂಡು ಬಿಡ್ತಾನೆ’ ಎಂದಳು. ಚಿಟ್ಟಿಗೆ ಒಳಗೇ ನಗು. ನೀನು ಏನು ಬೇಕಾದ್ರೂ ಹೇಳು ನಾನು ಮಾತ್ರ ಹೆದರಲ್ಲ ಎಂದುಕೊಂಡಳು ಮನಸ್ಸಿನಲ್ಲಿ.
ಇದ್ದಕ್ಕಿದ್ದ ಹಾಗೆ ತಮ್ಮಟೆಯ ಶಬ್ದ ಕೇಳಿಸತೊಡಗಿತ್ತು. ಕಣ್ಣರಳಿಸಿ ಚಿಟ್ಟಿ ಕೇಳಿದಳು `ಏನೇ ಅದು?’. `ಅಂತರಗಟ್ಟಮ್ಮನ ಜಾತ್ರೆ ಬರೋ ಶುಕ್ರವಾರ ಅದನ್ನ ಸಾರ್ತಾ ಇದಾರೆ’ ಎಂದ ಭಾರತಿಯ ಮಾತು ಅವಳ ಕಿವಿದೆರೆಗೆ ಬೀಳುವ ಮುನ್ನವೇ ಬೊಂಬೆ ಮಿಠಾಯಿ, ಸರ್ಕಸ್, ಗಿರಗಿಟ್ಲೆ, `ಬಾಂಬೇ ನೋಡು . . . . ಮದ್ರಾಸ್ ನೋಡ್’ ಬೊಂಬೆ ಪೆಟ್ಟಿಗೆ ಎಲ್ಲಾ ಚಿಟ್ಟಿಯ ಕಣ್ಣಲ್ಲಿ ಕುಣಿಯತೊಡಗಿತು. `ಭಾರ್ತಿ ನಾನೂ ನೀನೂ ಜಾತ್ರೆ ಮಜಾ ಮಾಡೋಣ್ವ’ ಎಂದಾಗ ಭಾರತಿ ಅಷ್ಟೇ ಉತ್ಸಾಹದಿಂದ `ಹೂಂ ಕಣೆ ಎಲ್ಲಾ ಸೇರಿ ಬಣ್ಣದ ಐಸ್ ತಿನ್ನೋಣ’ ಅಂದಳು. ಚಿಟ್ಟಿಗೆ ಒಂದು ಗಳಿಗೆಯ ಕೆಳಗೆ ತಾನು ಅವಳಿಗೆ ಬೋಟಿಯನ್ನು ಕೊಡದೆ ತಿಂದಿದ್ದು ನೆನಪಾಗಿ ಮನಸ್ಸಿನಲ್ಲಿ ಮುಳ್ಳಾಡಿತು. ಅವಳಿಗೆ ಈ ವಿಷಯ ಹೇಳಬೇಕು ಅನ್ನಿಸಿದರೂ ಹೇಳಲಾಗದೆ ತೊಳಲಾಡಿದಳು.

ಜಾತ್ರೆ ಇನ್ನು ಎರಡು ದಿನ ಇದೆ ಎನ್ನುವಾಗ ನಕ್ಕತ್ತುವಿಗೂ ಅಜ್ಜಿಗೂ ವಿಪರೀತ ಜಗಳ ಆಯ್ತು. ಬೇಸಿಗೆ ಶುರುವಾಯಿತು ಎಂದರೆ ನೀರಿಗೆ ತತ್ವಾರ. ರಾತ್ರಿಯೆಲ್ಲಾ ಬಾವಿಯ ಜಲ ಉಕ್ಕಿ ಒಂದಿಷ್ಟು ನೀರು ಸಂಗ್ರಹ ಆಗಿರುತ್ತಾದ್ದರಿಂದ, ಕದಡುವ ಮುನ್ನ ಆದಷ್ಟು ಬೇಗ ನೀರು ಸೇದಿಕೊಳ್ಳಬೇಕು ಎನ್ನುವುದು ಎಲ್ಲರ ಆತುರ. ಅಜ್ಜಿ ಮಡಿಯುಟ್ಟು ಬಾವಿಯ ನೀರಿಗೆ ಹೊರಟಾಗ ಮನೆಯಲ್ಲಿ ಅಮ್ಮನ ಹೊರತಾಗಿ ಬೇರೆ ಯಾರೂ ಇನ್ನೂ ಹಾಸಿಗೆ ಬಿಟ್ಟಿರಲಿಲ್ಲ. ಗೂಡಂಗಡಿ ಕೃಷ್ಣಪ್ಪನ ಮಗ `ಅಕ್ಕಾ..’ ಎಂದು ಕೂಗುತ್ತಾ ಬಂದಾಗಲೇ ಚಿಟ್ಟಿಗೆ ಎಚ್ಚರ.` ಅಲ್ಲಿ ನಿಮ್ಮತ್ತೆ ನಕ್ಕತ್ತು ಹತ್ರ ಜಗಳ ಆಡ್ತಾ ಇದಾರೆ. ಬೇಗ ಬಾ ಅಕ್ಕಾ ‘ ಎಂದು ಕೂಗಿದ. `ಆ ಪುಟ್ಟ ಹುಡುಗಿಯ ಹತ್ರ ಏನು ಜಗಳ ಇವ್ರದ್ದು? ವಯಸ್ಸಾಯ್ತು ಅರುಳಾ ಮರಳಾ. . . . ‘ ಎನ್ನುತ್ತಾ ಅಮ್ಮಾ ಗಾಬರಿಯಿಂದಲೇ ಸಾಗಿದ್ದಳು. ಹಾಸಿಗೆಯನ್ನು ಬಿಟ್ಟ ಚಿಟ್ಟಿ ಕಣ್ಣನ್ನು ಉಜ್ಜಿಕೊಳ್ಳುತ್ತಲೇ ಅಮ್ಮನ ಹಿಂದೆ ಓಡಿದಳು.
ನಿತ್ಯದ ಪರಿಪಾಠದಂತೆ ಅಜ್ಜಿ ದಾರಿಯುದ್ದಕ್ಕೂ ಮಡಿಮಾಡಲು ನೀರನ್ನು ಚೆಲ್ಲಿಕೊಳ್ಳುತ್ತಾ ಭಾವಿಯ ಹತ್ತಿರಕ್ಕೆ ಬರುವ ಹೊತ್ತಿಗೆ ನಕ್ಕತ್ತು ಪ್ಲಾಸ್ಟಿಕ್ ಬಿಂದಿಗೆ ಹಿಡಿದು ಬಂದಿದ್ದಳು. ಎರಡು ರಾಟೆಯ ಭಾವಿಯಾದ್ದರಿಂದ ಒಂದು ಕಡೆ ಗೂಡಂಗಡಿ ಕೃಷ್ಣಪ್ಪನ ಹೆಂಡತಿ ಹಂಚಿಕಡ್ಡಿ ವೆಂಕಟಮ್ಮ ಆಗಲೇ ಹಗ್ಗವನ್ನು ಸರಬರನೆ ಜಗ್ಗ ತೊಡಗಿದ್ದಳು. `ಇದೊಂದು ಬಿಂದಿಗೆ ಆದಮೇಲೆ ಬಿಡಬೇಡ ಕಣೆ ಇವಳೇ’ ಎಂದು ಅವಳಿಗೆ ತಾಕೀತು ಮಾಡಿ ಖಾಲಿಯಿದ್ದ ಕಡೆಗೆ ಹಗ್ಗಕ್ಕೆ ಬಿಂದಿಗೆ ಕಟ್ಟುತ್ತಿದ್ದ ನಕ್ಕತ್ತುವಿಗೆ ` ಇತ್ಲಗ್ ಬಾರೆ ನೀನು ಮೊದಲು ನೀರು ಸೇದಿಕೊಂಡರೆ ಕೆಳಗೆಲ್ಲಾ ನೀರು ಸುರೀತೀಯ ಮೈಲಿಗೆ ಆಗುತ್ತೆ. ನಂದಾದ ಮೇಲೆ ನೀನು ಸೇದಿಕೋ. . . .’ ಎಂದು ಅಜ್ಜಿ ಅವಳನ್ನ ತಡೆಯುವ ಪ್ರಯತ್ನ ಮಾಡಿದ್ದಾಳೆ. `ನೀವು ಸೇದುವುದು ಅದೇ ನೀರು ನಾನು ಸೇದುವುದು ಅದೇ ನೀರು. ಭಾವಿಯ ಒಳಗೆ ಇರದ ಮೈಲಿಗೆ ಮೇಲೆ ಹೇಗೆ ಬರುತ್ತೆ? ಮೊದಲು ಬಂದಿದ್ದು ನಾನು. ನಾನು ಸೇದಿಕೊಂಡ ಮೇಲೆ ಸೇದಿಕೊಳ್ಳಿ’ ಅಂತ ನಕ್ಕತ್ತ್ ಅಜ್ಜಿ ಹತ್ರ ವಾದ ಮಾಡಿದ್ದಾಳೆ. ಅಜ್ಜಿಗೆ ಕೋಪ ಬಂದು ನಕ್ಕತ್ತುವಿಗೆ ಹಿಡಿಶಾಪ ಹಾಕಿದ್ದಾಳೆ.
`ಸ್ನಾನ ಇಲ್ಲ ಪೂಜೆ ಇಲ್ಲ ಬೆಳಗ್ಗೆ ನಿನ್ನ ಮುಖ ನೋಡಿದ್ದೂ ಅಲ್ದೆ ಜಗಳ ಬೇರೆ ಮಾಡ್ತೀಯಾ? ಚೋಟುದ್ದ ಇದ್ದೀಯ ಎಷ್ಟೇ ಧೈರ್ಯ ನಿಂಗೆ ‘ ಎಂದು ಬೈದಿದ್ದಾಳೆ. ಇದೆಲ್ಲ ನಡೆವಾಗ ವೆಂಕಟಮ್ಮ ನಕ್ಕತ್ತುವನ್ನು ಕರೆದು `ನೋಡು ದೊಡ್ಡವರ ಹತ್ರ ಹಾಗೆಲ್ಲಾ ಮಾತಾಡಬೇಡ. ತಗೋ’ ಎಂದು ಹಗ್ಗ ಬಿಟ್ಟುಕೊಟ್ಟಿದ್ದಾಳೆ. ನಕ್ಕತ್ತುಗೆ ಇಲ್ಲದ ಮಾತುಗಳನ್ನು ಆಡಿದ ಅಜ್ಜಿಯ ಮೇಲೆ ಕೋಪ. ನಕ್ಕತ್ತು ಎನ್ನುವ ಗುಬ್ಬಿಯ ಮೇಲೆ ಮಡಿಯ ಬ್ರಹ್ಮಾಸ್ತ್ರ ಬಳಸಿ ಗೆದ್ದ ಹಮ್ಮಿನಲ್ಲಿ ಅಜ್ಜಿ ನೀರು ಸೇದಿಕೊಳ್ಳಲು ಬಿಂದಿಗೆಯನ್ನು ಬಾವಿಗೆ ಬಿಟ್ಟಿದ್ದಾಳೆ. ಹಾಗೆ ಬಿಡುವ ಮುನ್ನ ನಕ್ಕತ್ತುಗೆ ಅಜ್ಜಿ `ಬಿಡಬೇಡ’ ಅಂತಲೂ ಹೇಳಿದ್ದಾಳೆ. ಆದರೆ ನಕ್ಕತ್ತು ಮಾತ್ರ ಅವಳ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ನೀವು ನೀರನ್ನು ಎತ್ತಿದ ಮೇಲೆ ಬಿಂದಿಗೆ ಬಿಡುತ್ತೇನೆ ಎಂದು ಇನ್ನೇನು ಕೊಡ ನೀರಿಗೆ ತಾಕಬೇಕು ಹಾಗೆ ಹಿಡಿದಿದ್ದಾಳೆ. ಆದರೆ ನಕ್ಕತ್ತು ಮನಸ್ಸಿನಲ್ಲಿ ಅಜ್ಜಿಗೆ ಬುದ್ಧಿ ಕಲಿಸುವ ಉದ್ದೇಶ ಇತ್ತು. ಹಾಗಾಗಿ ಇಬ್ಬರ ಕೊಡಗಳೂ ಒಟ್ಟಿಗೆ ನೀರಲ್ಲಿ ಮುಳುಗಿದವು. ಸಮವಾಗಿ ನೀರನ್ನೂ ತುಂಬಿಕೊಂಡವು. ಅಜ್ಜಿಯ ಕಣ್ಣು ಕೆಂಪಗೆ ಮಾಡಿಕೊಂಡು `ನಿನ್ನಿಂದಾಗಿ ನನಗೆ ನರಕ ಪ್ರಾಪ್ತಿಯಾಯ್ತು’ ಎನ್ನುತ್ತಾ ಬಾಯಿ ಮಾಡಲಿಕ್ಕೆ ಶುರು ಮಾಡಿದ್ದಾಳೆ.
ಅಜ್ಜಿ ಮಾತ್ರವಲ್ಲ; ಸುತ್ತಮುತ್ತ ಇರುವ ಬ್ರಾಹ್ಮಣರ ಹೆಂಗಸರು ನೀರು ಸೇದುವಾಗ ಬೇರೆಯವರು ನೀರು ಸೇದುವಂತಿರಲಿಲ್ಲ. ಅಂಥಾದ್ದೊಂದು ಅಲಿಖಿತ ಒಪ್ಪಂದ ಅನಾದಿ ಕಾಲದಿಂದಲೂ ಊರಲ್ಲಿತ್ತು. ಹೀಗೆ ಗಲಾಟೆ ನಡೆಯುವಾಗ ಊರ ಜನ ಸೇರಿದರು- `ತಿಳೀದ ಹುಡ್ಗಿ ಏನೋ ಮಾಡಿದಳು ಅಂದ್ರೆ ನೀವ್ ಹೀಗ್ ಬಾಯ್ ಮಾಡೋದಾ ಬಿಡಿ ಅಮ್ಮನೋರಾ’ ಅಂತ ಅಜ್ಜಿಗೆ ಬೈದರು. ಅಜ್ಜಿ ಆವೇಶದಿಂದ ನಕ್ಕತ್ತುವಿನ ಮೇಲೆ ತನಗೆ ತಿಳಿದ ಎಲ್ಲಾ ಬೈಗುಳವನ್ನು ಪ್ರಯೋಗಿಸತೊಡಗಿದ್ದಳು. ನಕ್ಕತ್ತು ಕೂಡಾ ಅಷ್ಟೇ ರಭಸದಲ್ಲಿ ಅಜ್ಜಿಗೆ ಉತ್ತರ ಕೊಡತೊಡಗಿದಳು. `ಬನ್ನಿ ಹೋಗೋಣ ಅವಳೂ ಮಗು ತಾನೇ ಏನೋ ಆಯ್ತು’ ಎಂದು ಅಮ್ಮ ಹೇಳಿದ ತಕ್ಷಣ ಅವಳ ಮೇಲೂ ಹರಿ ಹಾಯ್ದಳು.`ಒಂದ್ ಸಲ ಬಿಟ್ರೆ ಮತ್ತೆ ಮತ್ತೆ ಇದೇ ಕೆಲ್ಸ ಮಾಡ್ತಾಳೆ. ನೀನ್ ಸುಮ್ನಿರು ನಾನ್ ಇವ್ಳಿಗೆ ಬುದ್ಧಿ ಕಲಿಸ್ತೀನಿ. ಏನೆಲ್ಲಾ ತಿಂತಾರೆ ಅದ್ರ ಬುದ್ದೀನೇ ಇವ್ಳಿಗೂ ಬಂದಿದೆ’ ಎನ್ನುತ್ತಾ ಅವಳು ತಿನ್ನುವ ಪಶು ಪಕ್ಷಿಗಳ ಹೆಸರುಗಳನ್ನು ಪಟ್ಟಿ ಮಾಡುತ್ತಾ ಮತ್ತೆ ಬೈಗುಳಕ್ಕೆ ಇಟ್ಟುಕೊಂಡಳು. ಅಜ್ಜಿಯ ರೌದ್ರ ರೂಪವನ್ನ ನೋಡಿ ಚಿಟ್ಟಿಗೆ ಗಾಬರಿಯಾಗಿತ್ತು. ತಾನು ಪ್ರೀತಿಸುವ ಅಜ್ಜಿ ಹೀಗೆಲ್ಲ ಮಾತಾಡುವುದಾ? ಅದೂ ನನ್ನ ಸ್ನೇಹಿತೆ ನಕ್ಕತ್ತುವನ್ನು! ಅಜ್ಜಿಯ ಮಾತಿಗೆ ನಕ್ಕತ್ತುವಿನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತು. `ನೀನ್ ಸುಮ್ನೆ ಹೋಗೆ’ ಎಂದ ಅಮ್ಮನ ಮಾತು ನಕ್ಕತ್ತುವಿನ ಕಿವಿದೆರೆಗೆ ಮುಟ್ಟಲೇ ಇಲ್ಲ.
ಅಷ್ಟರಲ್ಲಿ ಸದಾ ಗಾಂಭೀರ್ಯದಿಂದಿರುತ್ತಿದ್ದ, ದಿನಕ್ಕೆ ಐದು ಸಲ ನಮಾಜು ಮಾಡುತ್ತಿದ್ದ, ಮೃದುಮಾತಿನ ಮೈದು ಸಾಬರು ಓಡಿ ಬಂದರು. ಎತ್ತರಕ್ಕೆ, ತೆಳ್ಳಗೆ, ಕೆಂಪಗಿದ್ದ ಮೈದು ಸಾಬರನ್ನು ನೋಡಿದರೆ ಚಿಟ್ಟಿಗೆ ಎಂಥದ್ದೋ ಗೌರವ. ತಾನು ಅವರ ಮನೆಗೆ ಹೋದಾಗಲೆಲ್ಲಾ ನಗುತ್ತಾ ಮಾತಾಡಿಸುತ್ತಿದ್ದ, `ಅವೋ ಬೇಟಿ’ ಎಂದು ತನ್ನನ್ನು ಕರೆದುಕೂಡಿಸಿ ನಕ್ಕತ್ತುವನ್ನು ಕೂಗಿತ್ತಿದ್ದರು. ಒಮ್ಮೆ ಕೂಡ ನಕ್ಕತ್ತುವನ್ನು ಅವರು ಬೈದದ್ದನ್ನು, ತಮ್ಮ ಹೆಂಡತಿ ಜೈನಾಬಿಯ ಜೊತೆ ಜಗಳ ಆಡಿದ್ದನ್ನ ಅವಳು ಕಂಡೇ ಇರಲಿಲ್ಲ. ಜಗುಲಿ ಮನೆಯ ಪರ್ವೀನಾ ಸೈಕಲ್ ಮಂಜನ ಜೊತೆ ಓಡಿ ಹೋಗಿ ಸಿಕ್ಕಿಕೊಂಡಾಗ ಮೈದು ಸಾಬರು ತೀರ್ಪನ್ನ ಕೊಟ್ಟ ರೀತಿಗೆ ಊರಿಗೆ ಊರೇ ನಿಬ್ಬೆರಗಾಗಿತ್ತು. `ಹುಡುಗ ಹುಡುಗಿ ಒಪ್ಪಿಯಾಗಿದೆ ಸಂಸಾರ ಮಾಡೋಕ್ಕೆ ಬಿಡಿ’ ಎಂದಿದ್ದರು. `ನಾನಿದನ್ನ ಒಪ್ಪಲ್ಲ. ಸರೀಕರ ಜೊತ್ ಹೇಗೆ ತಲೆ ಎತ್ತಿ ನಡೀಲಿ?’ ಎಂದ ಪರ್ವೀನಾಳಾ ಅಮ್ಮ ನೂರಮ್ಮನಿಗೆ `ಒಪ್ಪಿಲ್ಲ ಅಂದ್ರೆ ಬಿಡು ಇನ್ನೊಂದ್ ವರ್ಷ ಆದ್ಮೆಲೆ ಇವಳಿಗೆ ಒಂದು ಮಗು ಹುಟ್ಟುತ್ತೆ. ಅದು ನಿನ್ನ ಅಜ್ಜಿ ಅನ್ನಲ್ಲ’ ಎಂದಿದ್ದರು. ವಾತಾವರಣ ತಿಳಿಯಾಗಿ ಸೈಕಲ್ ಮಂಜ ನೂರಮ್ಮನ ಮನೆಯ ಅಳಿಯ ನಾಗಿ ಮನೆಯ ಅಭಿವೃದ್ದಿಗೆ ಕಾರಣನಾಗಿದ್ದ. ಆಗೆಲ್ಲಾ`ಮೈದು ಸಾಬರು ತನ್ನ ಅಪ್ಪ ಆಗಿರಬೇಕಿತ್ತು’ ಅಂತ ಚಿಟ್ಟಿ ಹಂಬಲಿಸಿದ್ದಳು.
ತನ್ನ ಮಗಳಿಗೂ ಅಜ್ಜಿಗೂ ಆಗುತ್ತಿದ್ದ ಗಲಾಟೆ ಕೇಳಿ ಬಂದ ಮೈದು ಸಾಬರು ಬಾಯಿ ಮಾಡುತ್ತ ನಿಂತಿದ್ದ ನಕ್ಕತ್ತುವಿಗೆ `ಗರ್ಕೊ ಜಾವ್ ಬೇಟಿ’ ಎಂದು ಗದರಿಸಿದರು. ತನ್ನ ಪ್ರೀತಿಯ ಅಪ್ಪ ಯಾವತ್ತೂ ತನ್ನನ್ನು ಗದರದೇ ಇದ್ದವನು ಇವತ್ತು ಎಲ್ಲರ ಮುಂದೆ ಗದರಿದ್ದಕ್ಕೆ ನಕ್ಕತ್ತುಗೆ ತುಂಬಾ ನೋವಾಗಿತ್ತು. ತನ್ನ ಅಕ್ಕ ನಸ್ರತ್ ಜೊತೆ ಮನೆಯ ಕಡೆಗೆ ಸಾಗಿದ್ದಳು. ಅವಳು ಆ ಕಡೆಗೆ ಹೋಗಿದ್ದೆ ತಡ ಅಜ್ಜಿ `ನೋಡಿ ಸಾಬೂ ನಿಮ್ಮ ಹುಡ್ಗಿ ತುಂಬಾ ಹೆಚ್ಕೊಂಡಿದ್ದಾಳೆ. ಪ್ರತಿ ಸಲ ನಾನು ನೀರಿಗೆ ಬಂದಾಗೆಲ್ಲಾ ಹೀಗೆ…. ಕೊಡಬಿಡ್ತೀನಿ ಅಂತ ಆಟ ಆಡಿಸ್ತಾಳೆ. ಇವತ್ತು ಬಿಟ್ಟೆಬಿಟ್ಟಳು. ಏನೇ ಹೇಳಿ ನಿಮ್ಮ ಸಂಸ್ಕಾರ ಇವಳಿಗೆ ಬರಲಿಲ್ಲ’ ಎಂದು ದೂರನ್ನ ಹೇಳಿದಾಗ `ಕ್ಷಮಾ ಕರೋ ಮಾ. ನಾನ್ ಅವ್ಳಿಗೆ ಹೇಳ್ತೀನಿ ಇನ್ನೊಂದ್ ಸಲ ಹೀಗಾಗಲ್ಲ’ ಎಂದು ಮಾತು ಮುಗಿಸಿದ್ದರು. ಅಮ್ಮ ಅಷ್ಟೆಲ್ಲಾ ಹೇಳಿದರೂ ಬಾರದ ಅಜ್ಜಿ ಮರು ಮಾತಾಡದೆ ಬಿಂದಿಗೆ ತಗೊಂಡು ಮನೆಗೆ ಸಾಗಿದ್ದಳು.
ಚಿಟ್ಟಿಗೆ ಅವತ್ತು ತುಂಬಾ ಬೇಜಾರಾಗಿತ್ತು. ಆದರೆ ಅದು ಅಜ್ಜಿಯ ಮೇಲಾ? ನಕ್ಕತ್ತುವಿನ ಮೇಲಾ? ಎನ್ನುವುದು ಗೊತ್ತಾಗಲಿಲ್ಲ. ಇಬ್ಬರೂ ಯಾಕೆ ಹಾಗೆ ಮಾರಾಮಾರಿ ಜಗಳ ಮಾಡಬೇಕಿತ್ತು? ನಮ್ಮನೆಯಿಂದಲೇ ದರ್ಗಾಗೆ ಮೊದಲು ಸಕ್ಕರೆ ಹೋಗುತ್ತಿದ್ದುದು. ನಮ್ಮ ಮನೆಯಿಂದ ಸಕ್ಕರೆ ಓದಿಸಿದ ಮೇಲೇ ಮೆರವಣಿಗೆ ಶುರುವಾಗುತ್ತಿದ್ದುದು ಅಂತೆಲ್ಲಾ ಹೇಳಿದ ಅಜ್ಜಿ ಇವಳೇನಾ? ಎಂದೆಲ್ಲಾ ಯೋಚಿಸುತ್ತಿರುವಾಗಲೇ ಅಜ್ಜಿ ಸ್ನಾನ ಮಾಡಿ ಸಗಣಿ, ಗಂಜಲ ತಂದು ಹಾಲು ಮೊಸರು ತುಪ್ಪಕ್ಕೆ ಸೇರಿಸಿ ಪಂಚಗವ್ಯ ಮಾಡಿಕೊಂಡಳು. ಹಾಲಿಗೆ ಸಗಣಿ, ಗಂಜಲ ಬೆರೆಸಿದ್ದನ್ನ ನೋಡಿ ಚಿಟ್ಟಿ `ಅಮ್ಮ ಇದ್ಯಾಕೆ ಅಜ್ಜಿ ಹೀಗ್ ಮಾಡ್ತಾ ಇದಾಳೆ?’ ಎಂದಳು. ಅಮ್ಮ `ಇದನ್ನ ಕುಡಿದರೆ ನಕ್ಕತ್ತುನಿಂದ ಆಯ್ತಲ್ಲಾ ಆ ಮೈಲಿಗೆ ಹೋಗುತ್ತಂತೆ’ ಎಂದಳು ನಿರ್ಲಿಪ್ತವಾಗಿ. ಅಜ್ಜಿ ಇದನ್ನು ಕುಡೀತಾಳಾ? ಚಿಟ್ಟಿಗೆ ವಾಕರಿಕೆ ಬಂದು ಹಾಗೆ ತಡೆದುಕೊಂಡಳು. ಇದನ್ನ ಕೇಳಿಸಿಕೊಂಡ ಪುಟ್ಟಿ ಅಜ್ಜಿಗೆ `ಹಸು ಕಕ್ಕ ಕುಡೀಬೇಡ’ ಎಂದಳು. `ಅಮ್ಮಾ ನಾನು ದಿನಾ ಅವಳನ್ನ ಮುಟ್ತೀನಿ ನನಗ್ಯಾಕೆ ಮೈಲಿಗೆ ಆಗಲಿಲ್ಲ’ ಚಿಟ್ಟಿಯ ಪ್ರಶ್ನೆಗೆ ಅಮ್ಮನ ಮುಖದಲ್ಲಿ ಅಸಹನೆ. `ಮಕ್ಕಳು ದೇವರಿದ್ದ ಹಾಗೆ ನಿಮಗೆ ಮಡಿಯೂ ಇಲ್ಲ ಮೈಲಿಗೆಯೂ ಇಲ್ಲ ಹೋಗು ಸುಮ್ಮನೆ ‘ ಎಂದು ಗದರಿದಳು.
ದೇವರ ಮುಂದೆ ಪಂಚಗವ್ಯವನ್ನು ಇಟ್ಟು ಕೈಮುಗಿದು ಅಜ್ಜಿ `ನಾರಾಯಣ ಪಾದೋದಕಂ ಪಾವನಂ’ ಎನ್ನುತ್ತಾ ಕುಡಿದಳು. ಹಾಗೆ ಕುಡೀವಾಗ ಅಜ್ಜಿಯ ಮುಖದಲ್ಲಿ ಯಾವ ಹೇವರಿಕೆಯೂ ಕಾಣಲಿಲ್ಲ. ಅದನ್ನ ನೋಡಿದ ಚಿಟ್ಟಿ ಮಾತ್ರ ಅಮ್ಮ ಕೊಟ್ಟ ಹಾಲನ್ನ ಕುಡೀದೆ `ಅಮ್ಮ ಮೈಲಿಗೆ ಎಂದರೆ ಏನು?’ ಎಂದಳು ಅಮ್ಮ ಉತ್ತರಿಸಲಿಲ್ಲ. ಅವಳ ಕಣ್ಣುಗಳಲ್ಲೂ ಗೊಂದಲವಿತ್ತು. `ಸ್ಕೂಲಿಗೆ ಹೊತ್ತಾಗುತ್ತೆ ನಡ್ಯೆ’ ಎಂದಳು, ಇನ್ನು ಮಾತು ಸಾಕು ಎನ್ನುವಂತೆ. `ನಕ್ಕತ್ತುವನ್ನ ಮುಟ್ಟಿದರೆ ಮೈಲಿಗೆ ಯಾಕೆ ಆಗುತ್ತೆ? ತಾನು ಮಸೀದಿಗೆ ಹೋದಾಗ ಅಜ್ಜಿ ನನ್ನ ಯಾಕೆ ತಡೀಲಿಲ್ಲ? ಅವರ ದೇವರು ನಮ್ಮನ್ನ ಯಾಕೆ ಕಾಪಾಡುತ್ತಾನೆ? ಬದಲಿಗೆ ಅಮ್ಮನಿಗೆ ಬುದ್ದಿ ಹೇಳಿದಳು. ಅಂಥವಳು ಮೈಲಿಗೆ ಅಂತ ಹಾರಾಡಿದ್ದು ಯಾಕೆ?
`ತಿನ್ನೋದ್ ಮೇಲೆ ಹೋಗೋದ್ ಕೆಳ್ಗೆ ಎಲ್ಲರ್ ದೇಹಾನೂ ಒಂದೇ ಮೈಲಿಗೆ ಅಂತೆ ಮೈಲ್ಗೆ ನೀವ್ ಬ್ರಾಮ್ರೆ ಹೀಗೆ’ ಎನ್ನುತ್ತಾ ಆರೋಗ್ಯ ಗೊಣಗಿದಳು. ಚಿಟ್ಟಿ ಅಚ್ಚರಿಯಿಂದ ಅವಳ ಕಡೆಗೆ ನೋಡಿದಳು. ಬಣ್ಣ ಕಪ್ಪಿದ್ದರೂ ಒಂಥರಾ ಕಳೆ. ಒರಟುತನ ಮುಖದಲ್ಲಿ ಎದ್ದು ಕಾಣುತ್ತಿತ್ತು ಕಣ್ಣಿನಲ್ಲಿನ ದಿವ್ಯ ನಿರ್ಲಕ್ಷ್ಯ ಚಿಟ್ಟಿಯನ್ನು ಎಷ್ಟೋ ಬಾರಿ ನೀನೇನೂ ಅಲ್ಲ ಬಿಡು ಎಂದು ಸಾರಿ ಹೇಳುತ್ತಿತ್ತು. ಗಂಡಸಿನ ಹಾಗೆ ದೊಡ್ಡ ಕಲ್ಲನ್ನು ಸಲೀಸಾಗಿ ಎತ್ತಿ ಹಾಕುತ್ತಿದ್ದ ತನಗಿಂತ ಮೂರು ನಾಕು ವರ್ಷ ದೊಡ್ಡವಳಾದ ಆದರೆ ತನ್ನದೇ ಕ್ಲಾಸಿನ ಆರೋಗ್ಯಾಳನ್ನ ಕಂಡರೆ ಅವಳಿಗೆ ಅಚ್ಚರಿಯೇ. `ಇಷ್ಟು ಶಕ್ತಿ ಎಲ್ಲಿಂದ ಬಂತೆ?’ ಎಂದು ಒಂದು ದಿನ ಕೇಳಿದ್ದಕ್ಕೆ `ನಮ್ಮಪ್ಪನ . . . . .ದಿಂದ’ ಎಂದು ಸಲೀಸಾಗಿ ಹೇಳಿದ್ದಳು. `ಅಪ್ಪ ಅಮ್ಮ ದೇವ್ರು ಹಂಗೆಲ್ಲ ಮಾತಾಡ್ಬಾರ್ದು’ ಎಂದು ಚಿಟ್ಟಿ ಅವಳಿಗೆ ಬುದ್ದಿ ಹೇಳಲು ಯತ್ನಿಸಿದ್ದಳು. `ಅಲ್ಲ ಅಂದೋರ್ಯಾರು ದೇವ್ರಿಗೂ ಎಲ್ಲ ಇರುತ್ತೆ ಅಲ್ವಾ’ ಎಂದು ನಕ್ಕಿದ್ದಳು ಆರೋಗ್ಯ. ಅರೋಗ್ಯ ಚಿಕ್ಕ ಹುಡುಗಿ ಇದ್ದಾಗ ಜಡ್ಡು ಹತ್ತಿ ಇನ್ನೇನು ಸತ್ತೇ ಹೋಗುತ್ತಾಳೆ ಅಂದಾಗ ಊರ ದೇವರಿಗೆಲ್ಲಾ ಭೈರ ಹರಕೆ ಹೊತ್ತಿದ್ದ ಯಾವ ದೇವರೂ ಅವಳನ್ನ ಕಾಪಾಡದಾದಾಗ ಪಾದ್ರಿಯೊಬ್ಬರು ಏಸುವನ್ನು ನಂಬು ಅವನು ಜಗತ್ತನ್ನ ಕಾಪಾಡುವ ಶಕ್ತಿ ಎಂತಲೂ ಹೇಳಿದ್ದರಿಂದ ಒಂದು ವಾರ ಚರ್ಚ್ ಗೆ ಎಡತಾಕಿ, ಮೊಂಬತ್ತಿಯನ್ನು ಹಚ್ಚಿಟ್ಟು ತನ್ನ ಪ್ರೀತಿಯ ಮಗಳು ಮಲ್ಲಮ್ಮನನ್ನು ಉಳಿಸಿಕೊಂಡಿದ್ದ. ಇದಾದ ನಂತರವೇ ಎಲ್ಲಾ ದೇವರಲ್ಲೂ ನಂಬಿಕೆ ಕಳೆದುಕೊಂಡು ಕ್ರಿಶ್ಚಿಯನ್ ಆಗಿ ಮತಾಂತರ ಹೊಂದಿದ. ಆಮೇಲೆ ಪಾದ್ರಿಯ ಸಲಹೆಯ ಮೇಲೆ ತನ್ನ ಹೆಸರಿನ ಜೊತೆ ಡಿಸೋಜಾ ಎಂತಲೂ ಮಲ್ಲಮ್ಮ ಎನ್ನುವ ತನ್ನ ಮಗಳ ಹೆಸರನ್ನು ಆರೋಗ್ಯ ಮಾತೆ ಎಂದು ಬದಲಿಸಿದ್ದ.
ಇವ್ಯಾವುದೂ ಅವನ ಹೆಂಡತಿ ಕಲ್ಲವ್ವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅಂತರಗಟ್ಟಮ್ಮಗೆ ಹರಕೆ ಹೊತ್ತಿ ಜಟೆಯನ್ನ ಧರಿಸಿದ್ದರಿಂದ ಮತಾಂತರ ಹೊಂದಿದರೆ ಹಣೆಗೆ ಕುಂಕುಮ ಇಡುವ ಹಾಗಿಲ್ಲ ಎನ್ನುವ ಕಾರಣಕ್ಕೆ ಆಕೆ ಕ್ರಿಶ್ಚಿಯನ್ ಆಗಿರಲಿಲ್ಲ. `ಹಣೇಲಿ ಕುಂಕುಮ ಇಲ್ದೆ ಹೆಂಗಮ್ಮಾ ಇರಾದು? ನಾ ಏನು ಮುಂಡೆಯಾ? ರಂಡೆಯಾ? ಇದೆಲ್ಲಾ ಸರಿಲ್ಲ ಬಿಡು. ನಮ್ದು ತಾಯ ಒಕ್ಲು. ಭಂಡಾರ ಇಡದೆ ಜೀವ್ನ ಮಾಡೋದ್ ಹ್ಯಾಗೆ. ಈ ಮೂಳಾನೂ ಒಂದಲ್ಲಾ ಒಂದಿನ ವಾಪಾಸು ಬತ್ತಾನೆ ನೋಡ್ತಾ ಇರು. ತಾಯಿ ಇವನ್ನ ಸುಮ್ನೆ ಬಿಟ್ಟಾಳಾ?’ ಎಂದು ಊರವರ ಮುಂದೆ ಅಂದಿದ್ದಳು. `ಏನೋ ನನ್ನ ಮಗಳ್ನ ಉಳುಸ್ದ ಅಂತ ಮನೇಲಿ ಇರ್ಲಿ ಬಿಡು’ ಎನ್ನುವ ಅವಳು ದೊಡ್ಡ ಮನಸ್ಸು ಮಾಡಿದ್ದರ ಫಲವಾಗಿ ಅವರ ಮನೆಯಲ್ಲಿ ಒಂದು ಕಡೆ ಏಸುವೂ ಇನ್ನೊಂದು ಕಡೆ ತಾಯಿಯ ತಾಮ್ರದ ಮುಖವಾಡವೂ ಪೂಜೆಗೊಳ್ಳುತ್ತಿತ್ತು. ಆಗೀಗ ಅವಳ ಮೇಲೆ ತಾಯಿಯ ಆವಾಹನೆಯೂ ಆಗಿ ಊರವರೆಲ್ಲರೂ ಅವಳನ್ನ ಭಯ ಭಕ್ತಿಯಿಂದ ನೋಡುತ್ತಿದ್ದರು. ಹಾಗೆ ಆವಾಹನೆಯಾಗಿ ತನಗೆ ಕೋಳಿ ಬೇಕು, ಕುರಿ ಬೇಕು ಎಂದು ಆಕೆ ಕೂಗಾಡುವಾಗ ಹೊಟ್ಟೆ ತುಂಬಾ ಕಳ್ಳನ್ನ ತುಂಬಿಸಿಕೊಂಡ ಭೈರ `ಸಾಕು ನಿಲ್ಸೆ ನಿನ್ನ ನಾಟಕ ನಿನ್ನಮ್ಮನ್. . . . ಎಲ್ಲಿ ನಿನ್ನ ದೇವಿ ನನ್ನ ಸುಡಲಿ ನೋಡ್ತೀನಿ. ನಿನ್ನ ಮಗಳು ಸಾಯ್ತಾ ಇದ್ದಾಗ ಯಾರೇ ಕಾಪಾಡಿದ್ದು? ನಮ್ಮ ಏಸು ತಾನೆ. ಗಂಡ ಯಾವ್ ದೇವ್ರನ್ನ ಪೂಜೆ ಮಾಡ್ತಾನೋ ನೀನೂ ಅದೇ ದೇವ್ರನ್ನ ಪೂಜೆ ಮಾಡ್ಬೇಕು. ಎಲ್ಲಿ ಏಸು ದೇವಾ ಅನ್ನು’ ಎಂದು ಅವಳ ಮೇಲೆ ಹರಿ ಹಾಯುತ್ತಿದ್ದ. ಆ ಹೊತ್ತಲ್ಲಿ ಗಂಡನೆಂದೂ ನೋಡದೆ ಕಲ್ಲವ್ವ ಅವನ ಜನ್ಮವನ್ನು ಜಾಲಾಡಿಸುತ್ತಿದ್ದಳು. ಸ್ವಲ್ಪ ಹೊತ್ತಿನ ಮೇಲೆ ಮನೆಯೊಳಗಿಂದ ಅಯ್ಯೋ ಅಮ್ಮ ಎನ್ನುವ ಬೈರನ ಆರ್ತನಾದ ಕೂಡಾ ಕೇಳುತ್ತಿತ್ತು.
ಅಂಥವಳ ಮಗಳಾದ ಆರೋಗ್ಯಾಳನ್ನ ಕೂಡಾ ಯಾರೂ ಮಾತಲ್ಲಿ ಸೋಲಿಸಲು ಸಾಧ್ಯವಿರಲಿಲ್ಲ. ಆದ್ದರಿಂದಲೇ ಅವಳ ಮಾತಿಗೆ ಎಲ್ಲರ ಸಮ್ಮತಿಯಿತ್ತು. ಎಲ್ಲರೂ `ಏನೇ ಆಗ್ಲಿ ಕಣೆ ನಕ್ಕತ್ತುಗೆ ನಿಮ್ಮಜ್ಜಿ ಹೀಗೆ ಅವಮಾನ ಮಾಡಬಾರದಿತ್ತು’ ಎಂದು ಚಿಟ್ಟಿಗೆ ಹೇಳಿದರು. ಚಿಟ್ಟಿಗೆ ಅಚ್ಚರಿ `ನಂಗ್ಯಾಕೆ ಹೇಳ್ತೀರಾ? ಅವಮಾನ ಮಾಡಿದ್ದು ಅಜ್ಜಿತಾನೇ? ನಾನಲ್ಲವಲ್ಲ. ಇದ್ರಲ್ಲಿ ನನ್ನ ತಪ್ಪೇನಿದೆ?’ ಎಂದಳು. `ಅವಮಾನ ಅಂದ್ರೆ ಏನಂತ ನಿಂಗೆ ಗೊತ್ತಿಲ್ಲ ಚಿಟ್ಟಿ, ನೀನ್ ಏನ್ ಬೇಕಾದ್ರೂ ಹೇಳ್ತೀಯಾ. ನಮ್ಮನ್ನ ಊರಿಂದ ಹೊರಗೆ ಇಟ್ರಲ್ಲಾ? ನಿಮ್ಮಂಥೋರು ನಮ್ಮ ಮುಟ್ಟಿದ್ರೆ ಮೈಲ್ಗೆ ಆಗುತ್ತೆ ಅಂತಾರಲ್ಲ ಆಗ ನೋವಾಗುತ್ತಲ್ಲಾ ಅದ್ರ ಬಗ್ಗೆ ನಿಮ್ಗೆ ಗೊತ್ತಾಗಲ್ಲ ಕಣೆ. ಇನ್ನೊಂದು ಜನ್ಮದಲ್ಲಿ ನೀವೂ ನಮ್ಮ ಥರ ಹುಟ್ಟಿ ಈ ಅವಮಾನ ತಡ್ಕೋಬೇಕು ಆಗ ಅರಿವಾಗುತ್ತೆ’ ಎಂದಳು ಆರೋಗ್ಯ ಗಂಭೀರವಾಗಿ ತನ್ನ ಕೇರಿಯ ಯುವಕ ಸಂಘದ ಅಧ್ಯಕ್ಷ ಯರ್ರಿಸ್ವಾಮಿಯ ಮಾತುಗಳನ್ನು ಉರುಹೊಡೆದವಳಂತೆ. ಹಾಗಂದ್ರೇನು ಎಂದರೆ ಆರೋಗ್ಯಾಗೂ ವಿವರಣೆ ಗೊತ್ತಿರಲಿಲ್ಲ. ಚಿಟ್ಟಿಗೆ ತಲೆ ಬುಡ ಯಾವುದೂ ಅರ್ಥವಾಗಲಿಲ್ಲ, ಅಜ್ಜಿ ಅವಮಾನ ಮಾಡಿದ್ದು ನಕ್ಕತ್ತುವಿಗೆ ಇದರಲ್ಲಿ ಆರೋಗ್ಯ ಯಾಕೆ ಮಾತಾಡಬೇಕು ನನ್ನ ಬೈಯ್ಯಬೇಕು ಎಂದುಕೊಂಡಳು.
ನಕ್ಕತ್ತು ಮಾತ್ರ ಕೋಪದಿಂದ `ನಿಮ್ಮಜ್ಜಿ ಹತ್ರ ಬಂದ್ರೆ ಕಮಟು ವಾಸ್ನೆ ಬಡ್ಯುತ್ತೆ ಬಟ್ಟೆಗೆ ಸೋಪು ಕಾಣ್ಸಿ ಎಷ್ಟ್ ದಿನ ಆಗಿರುತ್ತೋ ಗೊತ್ತಿಲ್ಲ. . .ಮಡೀಂತ ಒದ್ದೆ ಉಟ್ಕೊಂಡ್ ಗುಡಿ ಬಿಟ್ಕೊಂಡ್ ಬಂದ್ರೆ ಆಗ್ ಹೋಯ್ತು’ ಎಂದಳು. ಗುಡಿ ಅಂದ್ರೆ ಏನು ಎಂದು ಅರ್ಥವಾಗದೆ ನಕ್ಕತ್ತುವಿನ ಕಡೆಗೆ ನೋಡಿದಳು. ಅವಳಿಗೆ ಉತ್ತರ ಕೊಡೋಕ್ಕೆ ಯಾರೂ ಮುಂದಾಗಲಿಲ್ಲ. ಆರೋಗ್ಯ ಮಾತ್ರ ಗೊಣಗುತ್ತಲೇ ಇದ್ದಳು. `ಮನುಷ್ಯ ಮನುಷ್ಯರ ಮಧ್ಯೆ ಭೇದ ಮಾಡಿದ್ರೆ ಪರಮಾತ್ಮ ನರಕ ಕೊಡ್ತಾನೆ.ನಾವು ಸತ್ತ ಮೇಲೆ ನಮ್ಮನ್ನೆಲ್ಲಾ ಈಟಿಯಿಂದ ಚುಚ್ಚಿ ಕತ್ತಿಯಿಂದ ಕೈಕಾಲುಗಳನ್ನ ಕಡಿದು, ನಮ್ಮ ರಕ್ತಾನಾ ಕುಡೀಲಿಕ್ಕೆ ದೆವ್ವಗಳಿಗೆ ಹೇಳ್ತಾನಂತೆ. ನೀನು ಅಜ್ಜಿಗೆ ಇದೆಲ್ಲಾ ಹೇಳಬೇಕಿತ್ತು ಹೇಳದ್ಡೇ ಇದ್ದಿದ್ದಕ್ಕೆ ನಿನಗೂ, ಇಷ್ಟೆಲ್ಲಾ ಮಾಡಿದ್ದಕ್ಕೆ ನಿನ್ನ ಅಜ್ಜಿಗೂ ಈ ಶಿಕ್ಷೆ ಆಗತ್ತದೆ’ ಎಂದಳು. `ನಾವ್ ಏನ್ ತಿಂತೀವಿ ಅದೆಲ್ಲಾ ಅವತಾರಗಳನ್ನೂ ನಿಮ್ಮ ದೇವ್ರುಎತ್ತಿದ್ದಾನೆ. ಅಂದ್ರೆನಾವೇ ಹೆಚ್ಚು ತಿಳ್ಕಾ’ ಎಂದಿದ್ದಳು ನಕ್ಕತ್ತು ಕೋಪದಿಂದ. ಚಿಟ್ಟಿಗೆ ಮೊದಲ ಬಾರಿಗೆ ಇವ್ರೆಲ್ಲಾ ಒಂದು, ನಾನ್ ಮಾತ್ರ ಬೇರೆ ಅನ್ನಿಸತೊಡಗಿತು.
`ನಕ್ಕತ್ತು ಜಗಳ ಯಾಕೆ ಆಯ್ತು ಅನ್ನೋದು ಬಿಡು. ಅಜ್ಜಿಗೆ ನಿಮ್ಮ ದೇವ್ರ ಮೇಲೆ ಭಕ್ತಿ ಇದೆ. ನಾನವತ್ತು ಮಸೀದಿಗೆ ತಾಯತ ಕಟ್ಟಿಕೊಳ್ಳುತ್ತೇನೆ ಅಂತ ಬಂದಾಗ ಅಮ್ಮ `ಬೇಡ’ ಅಂದ್ಲು. ಆದ್ರೆ ಅಜ್ಜಿ `ಕಟ್ಟಿಸಿಕೊಳ್ಲಿ’ ಅಂದ್ಲು. ಅಜ್ಜಿಗೆ ನಿಮ್ಮ ದೇವ್ರ ಮೇಲೆ ನಂಬಿಕೆ ಇದೆ. ಅಜ್ಜಿಗೆ ನಿಮ್ಮ ದೇವರು ಏನೂ ಮಾಡಲಾರ. ನಾನು ತಪ್ಪು ಮಾಡಿದ್ರೆ ನಕ್ಕತ್ತುವನ್ನು ಬೇರೆ ಎಂದು ಭಾವಿಸಿದ್ದರೆ ಆ ದೇವ್ರು ನಂಗೆ ಇಂಥ್ ಶಿಕ್ಷೆ ಕೊಡಲಿ’ ಎಂದು ಆವೇಶದಿಂದ ಹೇಳಿದ್ದಳು. ನಕ್ಕತ್ತಿಗೆ ಕೋಪ ಬಂತು `ಹೂಂ ಹುಷಾರಿಲ್ಲ ಅಂದಾಗ ನಿಮ್ಗೆ ಎಲ್ಲಾ ದೇವ್ರೂ ಒಂದೇ. ತಾಬೀಜೂ ಬೇಕು, ಮುಲ್ಲಾನ ನವಿಲುಗರೀನೂ ಬೇಕು. ಹುಷಾರಿದ್ದಾಗ ನಾವು ಬೇಡ. ನಂಗೆಲ್ಲಾ ಗೊತ್ತು ಕಣೇ ನಿಮ್ಮ್ ಆಡಂಬ್ರಾ’ ಎಂದಳು ಕೋಪದಿಂದ. ಆರೋಗ್ಯ ಅವಳನ್ನ ಸಮಾಧಾನ ಮಾಡುತ್ತಿದ್ದಳು. ಚಿಟ್ಟಿ ತನಗೆ ಯಾರೂ ಆಸರೆ ಇಲ್ಲ ಎಂದು ಭಾವಿಸಿ ಅಳುತ್ತಾ ಏನನ್ನೋ ಹೇಳುತ್ತಾ, ಹೇಳಿದ್ದು ಯಾರಿಗೂ ಅರ್ಥವಾಗದ ಹಾಗೆ ಮಾತಾಡುತ್ತಾ ಸಾಗಿದಳು.
ಚಿಟ್ಟಿಗೆ ಇಡೀ ಜಗತ್ತು ಶೂನ್ಯ ಅನ್ನಿಸತೊಡಗಿತ್ತು. ಚಿಟ್ಟಿಯನ್ನು ಯಾರೂ ಮಾತಾಡಿಸಲಿಲ್ಲ. ಅವತ್ತು ಅಜ್ಜಿಗೆ ಜ್ವರ ಬಂದಿತ್ತು. ನಕ್ಕತ್ತುವನ್ನು ಬೈದಿದ್ದಕ್ಕೆ ಅಜ್ಜಿಗೆ ಜ್ವರ ಬಂದಿದೆಯಾ? ಅವರ ದೇವರು ಮುನಿಸಿಕೊಂಡಿದೆಯಾ? ಎನ್ನುವ ಅನುಮಾನ ಚಿಟ್ಟಿಯನ್ನು ಕಾಡಿಸಿತು. ಅಮ್ಮ `ಸುಮ್ನೆ ಇಲ್ದಿದ್ದೆಲ್ಲಾ ಯೋಚ್ನೆ ಮಾಡ್ಬೇಡ. ಎರಡೆರಡು ಸಲ ತಣ್ಣೀರಲ್ಲಿ ಸ್ನಾನ ಮಾಡಿದ್ದಕ್ಕೆ ಅವಳಿಗೆ ಜ್ವರ ಬಂದಿದೆ’ ಎಂದಳು. ಸಮಾಧಾನ ಆಗದ ಚಿಟ್ಟಿ ಅಲ್ಲಿಂದ ಎದ್ದು ಹೊರಗೆ ನಡೆದಳು.

*

ಜಾತ್ರೆಯ ಹೊತ್ತಿಗೆ ಅಜ್ಜಿ ಸರಿ ಹೋದಳು. `ದೇವಿಗೆ ಹೋಳಿಗೆ ನೈವೇದ್ಯ ಮಾಡಬೇಕು’ ಎಂದೆಲ್ಲಾ ಕುಣಿದಳು. `ದಿನ ತಿನ್ನೋಕ್ಕೆ ಅನ್ನಾನೇ ಇಲ್ಲ. ಇನ್ನ ಹೋಳಿಗೆ ಬೇರೆ’ ಎಂದು ಅಮ್ಮ ಸೆರಗಲ್ಲಿ ಕಣ್ಣೊರೆಸಿಕೊಂಡಳು. ಪ್ರತಿ ವರ್ಷದಂತೆ ಮೈದು ಸಾಬರು ದೇವರಿಗೆ ಅರ್ಪಿಸಿದ ಹೂವಿನ ಪಲ್ಲಕ್ಕಿಗೆ ಅಜ್ಜಿ ಯಾವ ಬಿಢೆಯೂ ಇಲ್ಲದೆ ನಮಸ್ಕರಿಸಿದಳು. `ಇದಕ್ಕೆ ಮೈಲಿಗೆ ಇಲ್ಲವಾ? ಅದ್ಸರಿ ಮೈದು ಸಾಬರು ಯಾಕೆ ನಮ್ಮ ದೇವರಿಗೆ ಪೂಜೆ ಮಾಡ್ತಾ ಇದ್ದಾರೆ?’ ಎಂದು ಅಜ್ಜಿಯನ್ನ ಕೇಳಬೇಕು ಅಂದುಕೊಂಡ ಅವಳಿಗೆ ಮತ್ತೆ ಜಗಳ ಆದೀತು ಎನ್ನಿಸಿ ಸುಮ್ಮನಾದಳು. ರಾತ್ರಿ ಪಕ್ಕದಲ್ಲಿ ಮಲಗಿಸಿಕೊಂಡ ಅವಳ ಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ಅಮ್ಮ ಒಡಪಿನ ಹಾಗೆ `ಯಾವ ಜಾತಿಯಲ್ಲದರೂ ಸರಿ ದೇವ್ರಿಗೆ ಮೈಲಿಗೆ ಇಲ್ಲ. ಎಲ್ಲಾ ಇರೋದೂ ಮನುಷ್ಯರಿಗೆ ಮಾತ್ರ. ಯಾಕಂದ್ರೆ ದೇವ್ರ ಅಗತ್ಯ ಇರೋದು ಮನುಷ್ಯನಿಗೆ. ಮನುಷ್ಯನ ಅಗತ್ಯ ದೇವ್ರಿಗೆ ಇಲ್ಲ ಅವನು ಸರ್ವಶಕ್ತ. ಎಲ್ಲವನ್ನೂ ಮೀರಿದವನು. . .’ ಹೀಗೆ ಏನೇನೋ ಅನ್ನುತ್ತಿದ್ದಳು. ನಿದ್ದೆ ಹತ್ತುತ್ತಿದ್ದ ಅವಳಿಗೆ ಅರ್ಧಂಬರ್ಧ ಮಾತ್ರ ಅರ್ಥವಾಗಿತ್ತು. ಇನ್ನು ಸ್ವಲ್ಪ ದಿನಗಳಲ್ಲಿ ತಾನೂ ಮುಟ್ಟಿಸಿಕೊಳ್ಳದವಳಾಗುತ್ತೇನೆ ಎನ್ನುವ ಸೂಚನೆ ಅವಳಿಗೆ ಇರಲೇಇಲ್ಲ.
(ಮುಂದುವರೆಯುವುದು…)

‍ಲೇಖಕರು avadhi

July 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ganesh Shenoy

    Interesting beginning to the novel. The novel makes itself easily readable and is making all the right promises. Enjoying reading here in Tirunelveli (Tamil Nadu)
    Ganesh

    ಪ್ರತಿಕ್ರಿಯೆ
  2. lalitha siddabasavaiah

    ಈ ಕಂತು ಕೂಡಾ ಚೆನ್ನಾಗಿ ಓದಿಸಿಕೊಳ್ಳುತ್ತದೆ ಚಂದ್ರಿಕಾ ಫೈನ್

    ಪ್ರತಿಕ್ರಿಯೆ
  3. veda

    Neevu bareyuva shaili tumba ishtavaythu chandrika. Eshtu bega mnundina kanthu barutto antha kaytiddini.

    ಪ್ರತಿಕ್ರಿಯೆ

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ಜಾತ್ರೆಯಲ್ಲಿ ಚಿಟ್ಟಿ « ಅವಧಿ / avadhi - [...] ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ಜಾತ್ರೆಯಲ್ಲಿ ಚಿಟ್ಟಿ August 6, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: