ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ರಂಗು ಮಹಾಪಟ್ಟಣದ ರಾಜಕುಮಾರಿ

(ಇಲ್ಲಿಯವರೆಗೆ…)

ಅಮ್ಮ ಚಿಟ್ಟಿಯನ್ನು ಮನೆಯ ಒಳಗೆ ಎಳೆದು ತಂದವಳೇ ಅಳು, ಕೋಪ ಎರಡನ್ನೂ ತಡೆದುಕೊಳ್ಳುತ್ತಾ `ಯಾವ ಗಳಿಗೇಲಿ ಹುಟ್ಟಿದ್ಯೆ ನನ್ನ ಜೀವ ತೆಗ್ಯೋಕೆ’ ಎನ್ನುತ್ತಾ ಹೊಡೆಯತೊಡಗಿದಳು. ಅಮ್ಮನಿಗೆ ಎಷ್ಟೇ ಕೋಪ ಬಂದರೂ ಚಿಟ್ಟಿಯ ಮೇಲೆ ಕೈ ಮಾಡ್ತಿರಲಿಲ್ಲ. ಚಿಟ್ಟಿಯ ಸಣಕಲು ಮೈಯ್ಯ ಮೂಳೆ ಎಲ್ಲಿ, ಯಾವಾಗ ಮುರಿದು ಬೀಳುತ್ತೋ ಎನ್ನುವ ಭಯ. ಹಾಗೆ ಭಯ ಶುರುವಾದಾಗ ಅವಳನ್ನ ಬಾಗಿಲ ಸಂದಿಗೆ ಹಾಕಿ ಒತ್ತಿಬಿಡುತ್ತಿದ್ದಳು. ಮೇರಿಯಮ್ಮ ತನ್ನನ್ನು, ತನ್ನ ಮಗಳನ್ನು ಹೀಗೆ ಹೀನಾಯ ಅಂದಿದ್ದು ಸರಿಯಾ? ಎನ್ನುವುದು ಅವಳ ನೋವು. ಚಿಟ್ಟಿ ಒಂದೇಸಮನೆ ಗಾಬರಿಯಿಂದ ಕೂಗತೊಡಗಿದಳು.
ಅಷ್ಟರಲ್ಲಿ ಎಲ್ಲಿದ್ದಳೋ ಅತ್ತೆ ಓಡಿ ಬಂದು `ಬಿಡು ಮಗೂನ’ ಎನ್ನುತ್ತಾ ಚಿಟ್ಟಿಯನ್ನು ಬಿಡಿಸಿಕೊಂಡು `ತುಂಬಾ ನೋವಾಯ್ತಾ’ ಕೇಳಿದ್ದಳು. ಚಿಟ್ಟಿಗೆ ಅಚ್ಚರಿ. ಅತ್ತೆ ಯಾವತ್ತೂ ತನ್ನನ್ನು ಹಾಗೆ ಪ್ರೀತಿಯಿಂದ ಮಾತಾಡಿಸಿದವಳೇ ಅಲ್ಲ. ಯಾವಾಗ ಮಾತಾಡಿದರೂ ರೇಗುವ ಧ್ವನಿ ಅವಳ ಮಾತಿನಲ್ಲಿರುತ್ತಿತ್ತು. ಅದೇ ಪುಟ್ಟಿಯನ್ನೋ, ಸೀನೂವನ್ನೊ ಮಾತಾಡಿಸುವಾಗ . . .`ಇದನ್ನು ಪುಟ್ಟಿಗೆ ತಂದೆ ಇದನ್ನ ಸೀನಾಗೆ ತಂದೆ . . .’ ಎನ್ನುತ್ತಾ ಲಂಗ, ಕಡಲೆಕಾಯಿ, ಮಾವಿನ ಹಣ್ಣುಗಳನ್ನ ಅತ್ತೆ ತನ್ನ ಚೀಲದಿಂದ ತೆಗೆಯುವಾಗ `ಅತ್ತೆ ನನಗೆ?’ ಎನ್ನುತ್ತಾ ಚಿಟ್ಟಿ ಕೈ ಮುಂದೊಡ್ಡುತ್ತಿದ್ದಳು. `ಅದೇನ್ ರಾಕ್ಷಸ ಹೊಟ್ಟೇನೆ ನಿಂದು? ಎಲ್ಲದಕ್ಕೂ ನಂಗೆ ನಂಗೆ ಎನ್ನುತ್ತಾ ಬಂದ್ಬಿಡ್ತೀಯಲ್ಲಾ’ ಎನ್ನುತ್ತಾ ರೇಗಿ ಸೀಕಲು ಬಿದ್ದ ನಾಕು ಕಡಲೇಕಾಯನ್ನು ತೆಗೆದುಕೊಡುತ್ತಿದ್ದಳು.
ಬುಡ್ಡನಹಟ್ಟಿಯ ತನ್ನ ಹೊಲದಲ್ಲಿ ಅತ್ತೆ ಕಡಲೇಕಾಯಿಯ ಬಂಗಾರದ ಬೆಳೆ ತೆಗೆಯುತ್ತಿದ್ದಳು. ಅಮ್ಮ ಅಪ್ಪನ ಹತ್ತಿರ್ರ ಜಗಳವಾಡಿಕೊಂಡೋ ಇಲ್ಲ ಸ್ಕೂಲಿಗೆ ರಜಾ ಕೊಟ್ಟಾಗಲೋ ತಲೆ ನೋವು ತೊಲಗಿದರೆ ಸಾಕು ಎನ್ನುವಂತೆ ಅತ್ತೆಯ ಮನೆಗೆ ಕಳಿಸಿಬಿಡುತ್ತಿದ್ದ. `ನಾನೇ ಬಂದು ಕರ್ಕೊಂಡು ಬರ್ತೀನಿ ಅಲ್ಲೀವರೆಗೆ ಅಲ್ಲೇ ಇರಿ ಸುಬ್ಬಂಗೆ ಹೇಳಿತರ್ತೀನಿ’ ಎನ್ನುವ ವಗ್ಗರಣೆಯೊಂದಿಗೆ. ತಾನು ಬಂದರೆ ತವರಿನಲ್ಲಿ ಎರಡು ದಿನದ ಆತಿಥ್ಯ, ತವರೇ ನನ್ನಲ್ಲಿಗೆ ಬಂದರೆ ತಿಂಗಳುಗಟ್ಟಲೆ ಸತ್ಕಾರ ಮಾಡಬೇಕು ಎನ್ನುವುದು ಅತ್ತೆಯ ಬೇಸರ.
ಈಗ ತಮ್ಮನ ಮೇಲಿನ ಕೋಪವನ್ನು ಏನೂ ಅರ್ಥವಾಗದ ಚಿಟ್ಟಿಯ ಮೇಲೆ ತೋರಿಸುತ್ತಿದ್ದಳು. `ಅಲ್ವೆ ಪುಷ್ಪಾ ಮಗೂನ ಹೀಗ್ ಹೊಡೀತಿದ್ದೀಯಲ್ಲಾ ಉಸ್ರಿಗಟ್ಟಿ ಸತ್ತೇ ಹೋದ್ರೆ ಏನ್ ಮಾಡ್ತೀಯ? ಹೆಣ್ಣು ಮಗು ಅಂದ್ರೆ ಒಂದಲ್ಲ ಒಂದು ಮಾತು ಬಂದೇ ಬರುತ್ತೆ. ಇದನ್ನೆಲ್ಲಾ ಅವಮಾನ ಅಂದ್ಕೊಳ್ಳೋಕ್ಕಾಗುತ್ತಾ? ನಿನ್ನ ಕೋಪ ಏನಿದ್ರೂ ನಿನ್ನ ಗಂಡನ ಹತ್ರ ಮಾತ್ರ ಇಟ್ಕೋ ಬಡಪಾಯಿ ಮಕ್ಕಳ ಮೇಲಲ್ಲ’ ಎನ್ನುತ್ತಾ ಅಮ್ಮನಿಗೆ ಸಮಾಧಾನ, ಎಚ್ಚರಿಕೆ ಎರಡನ್ನೂ ಕೊಡುವ ಮಾತಾಡಿದ್ದಳು. `ಅಲ್ಲ ಅತ್ಗೆ ಇದೂ ನನ್ನ ಥರಾನೇ ಆಗ್ಬಿಡುತ್ತೆ ಅನ್ನೋ ಹೆದ್ರಿಕೆ. ಹೀಗೇ ಸಣ್ಣಕ್ಕೆ ಉಳುದ್ರೆ ನಾಳೆ ಇವಳ ಗಂಡಾನೂ ಯಾರ ಜೊತೆಗಾದ್ರೂ ಹೋಗ್ಬಿಟ್ರೆ ಇವ್ಳ್ ಗತಿಯೇನು? ನಾನು ದಪ್ಪ ಇದ್ದಿದ್ದರೆ ನಿಮ್ಮ ತಮ್ಮ ಆ ಹೆಂಗಸಿನ ಹಿಂದೆ ಹೋಗುತ್ತಿದ್ದರಾ?’ ಎನ್ನುತ್ತಾ ಅಳತೊಡಗಿದಳು.
ಮೇರಿಯಮ್ಮ ತನ್ನನ್ನು ಕೋಲು ಅಂದಿದ್ದಕ್ಕೂ, ಅಮ್ಮ ತನ್ನ ಗಂಡ ಬೇರೆ ಯಾರನ್ನಾದ್ರೂ ಮದ್ವೆ ಆಗ್ತಾನೆ ಅನ್ನೋದಕ್ಕೂ ಏನು ಸಂಬಂಧ ಎಂದು ಅರ್ಥವಾಗದೇ ನಿಂತುಬಿಟ್ಟಿದ್ದಳು ಚಿಟ್ಟಿ. ಅತ್ತೆಗೆ ಏನನ್ನಿಸಿತೋ ಏನೋ `ಏಯ್ ಹೋಗೆ ಹೊರಗೆ ಜಾತ್ರೆ ನಡೀತಿದೆ ನೀವಿಬ್ರೂ ಪಿಟೀಲು ಕೊಯ್ತಕೂತಿದ್ದೀರಾ?’ ಚಿಟ್ಟಿ ಅತ್ತೆಯ ಕಡೆಗೆ ಅಚ್ಚರಿಯಿಂದ ನೋಡಿದಳು. ಅತ್ತೆ ಅವಳ ಕಣ್ಣಿಗೆ ಕಿರೀಟ ಇಟ್ಟುಕೊಳ್ಳದ ದೇವಿಯಂತೆ ಕಂಡಳು. ಅತ್ತೆ ಅವಳ ಅಸಹಾಯಕ ಮುಖವನ್ನು ನೋಡ್ತಾ `ರಾತ್ರಿ ನಿಂಗೆ ರಂಗುಮಹಾಪಟ್ಟಣದ ಕತೆ ಹೇಳ್ತೀನಿ ಆಯ್ತಾ’ ಎಂದಿದ್ದಳು. ಚಿಟ್ಟಿಗೆ ರಂಗು ಮಹಾಪಟ್ಟಣದ ಕಥೆ ತುಂಬಾ ಇಷ್ಟ. ಆ ಕಥೆಯಲ್ಲಿ ಬರುವ ರಾಜಕುಮಾರಿ ತಾನೇ ಎಂದು ಎಷ್ಟು ಸಲ ಕಲ್ಪಿಸಿಕೊಂಡು ಸಂತಸಪಟ್ಟಿದ್ದಳೋ!
ಅತ್ತೆ ಹಾಗೆ ಅಂದಿದ್ದೇ ತಡ ಚಿಗುರೆ ಮರಿಯಂತೆ ಮನೆಯಿಂದ ಹೊರಗೆ ಓಡಿದಳು. ಹೊರಗೆ ಜಾತ್ರೆಯ ಸಂಭ್ರಮ. ನಕ್ಕತ್ತು, ಸರೋಜ, ಮಂಗಳಿ, ಆರೋಗ್ಯ ಎಲ್ಲರೂ ಇವಳಿಗಾಗೇ ಕಾದಿದ್ದರು. ಅವರನ್ನ ಸೇರಿದ ಚಿಟ್ಟಿಯನ್ನ ಭಾರತಿ `ಏನಾಯ್ತೇ ಯಾಕೆ ಮೇರಿಯಮ್ಮ ಜೋಸೆಫನನ್ನು ಜಾತ್ರೆಯ ಮಧ್ಯದಿಂದಲೇ ಹೊಡೆಯುತ್ತಾ ಬೈಯ್ಯುತ್ತಾ ಕರಕೊಂಡು ಹೋದಳು?’ ಎಂದಳು. ಜೋಸೆಫನಾಗಲಿ ಮೇರಿಯಮ್ಮನಾಗಲಿ ಜಾತ್ರೆಯಲ್ಲಿ ಇಲ್ಲ ಎನ್ನುವ ಸುದ್ದಿಗೆ ಚಿಟ್ಟಿಯ ಮನಸ್ಸಿನಲ್ಲಿ ನಿರಾಳತೆ ಸುಳಿದಾಡಿತು. `ಉಯ್ಯಾಲೆ ಆಡೋಣ್ವಾ?’ ಎನ್ನುತ್ತಾ ಆಲದಬಿಲಳುಗಳನ್ನ ಹಿಡಿದುಕೊಂಡು ಚಿಟ್ಟಿ ಜೀಕತೊಡಗಿದಳು. ಜಾತ್ರೆಯ ಸಂಭ್ರಮದಲ್ಲಿದ್ದ ಯಾರಿಗೂ ಅದು ಇಷ್ಟವಾಗಲಿಲ್ಲ ಅನ್ನಿಸುತ್ತೆ. ನಾನು ಹೇರ್ಪಿನ್ ಕೊಳ್ಳಬೇಕು, ಟೇಪುಕೊಳ್ಳಬೇಕು ಎಂದು ಜಾಗ ಖಾಲಿ ಮಾಡಿದ್ದರು. ಭಾರತಿ ಮಾತ್ರ ಖೇದದಿಂದ `ಇನ್ನ ನಿನ್ನ ಕಥೆ ಮುಗೀತು ಅನ್ಸುತ್ತೆ ಕಣೆ’ ಎಂದಿದ್ದಳು. `ಕಥೆ ಮುಗೀತಾ ಇಲ್ಲ ಕಣೆ ಇವತ್ತ್ ರಾತ್ರಿ ನಮ್ಮತ್ತೆ ರಂಗು ಮಹಾಪಟ್ಟಣಾ ಕಥೆ ಹೇಳ್ತಾರೆ. ಆ ರಜಕುಮಾರಿಗೆ ಹತ್ತು ಮಕ್ಕಳಂತೆ, ಕೇಳೋಕ್ಕೆ ಎಷ್ಟ್ ಚೆನ್ನಾಗಿದೆ ಅಲ್ವ? ನೀನು ಬಾ ಬೇಕಾದರೆ’ ಎಂದು ಆಹ್ವಾನಿಸಿದ್ದಳು. ಭಾರತಿ ಸಪ್ಪಗಿನ ಮುಖದಲ್ಲಿ ನಿನ್ನ ಕರ್ಮ ಎನ್ನುವಂತೆ ಸಾಗಿದ್ದಳು.
ಜಾತ್ರೆಯಲ್ಲಿ ಏನಿಲ್ಲ. . . ಕಾಲುಗೆಜ್ಜೆಯಿಂದ ಹಿಡಿದು ಎಲ್ಲವೂ ಗಿಲಿಟಿನದ್ದೆ. ಕೈತುಂಬಾ ಜಣ ಜಣ ರೂಪಾಯಿ ಇದ್ದರೆ ಕಣ್ಣಿಗೆ ಬೇಕಾದ್ದು ಕೊಂಡುಕೊಳ್ಳಬಹುದು. ಅಮ್ಮನ ಏಟು ಬೆನ್ನ ಮೇಲೆ ಕೆನ್ನೆಯ ಮೇಲೆ ಚುರುಗುಡುತ್ತಿದ್ದುದನ್ನ ಬಿಟ್ಟರೆ ಮೇರಿಯಮ್ಮ, ಜೋಸೆಫ್, ಅಮ್ಮ, ಅತ್ತೆ ಎಲ್ಲರನ್ನೂ ಮರೆತೇ ಓಡಾಡಿದಳು. ಕಾಫಿತೋಟದ ರೈಟರ್ ಕೇಶವನ ಮಗಳು ತಾರಾ ಹುಂಜಾನನ ಕುಡಿನೋಟಕ್ಕೆ ಹಂಬಲಿಸುತ್ತಿದ್ದುದು, ಮಂಜ ಮುನಾಫ್ ಅಂತ ಹೆಸರನ್ನ ಬದಲಿಸಿಕೊಂಡು ತನ್ನ ಹೊಸ ಹೆಂಡತಿಯನ್ನು ಜಾತ್ರೆ ತುಂಬಾ ಅಡ್ಡಾಡಿಸುತ್ತಿದ್ದುದು, ಜಟೆ ಬಂದ ಹೆಂಗಸರು ಗಂಡಸರು ಸಾಲಾಗಿ ಕೂತು ಭಂಗಿ ಸೇದುತ್ತಿದ್ದುದು ಕಳ್ಳಂಗಡಿ ಕೃಷ್ಣಪ್ಪ ಸೆರೆಯನ್ನು ಬಾಟಲಲ್ಲಿ ತುಂಬಿ ಎಲ್ಲರಿಗೂ ಕಾಣುವ ಹಾಗೆ ಇಟ್ಟು ತನ್ನ ಗಿರಾಕಿಗಳನ್ನು ಆಕಷರ್ಿಸುತ್ತ್ತಿದ್ದುದೂ, ರಾಮಣ್ಣ ಮೇಷ್ಟ್ರ ಸೋದರ ಸೊಸೆ ನಾಗೂ ಉರುಫ್ ನಾಗರತ್ನ ಅಪರೂಪಕ್ಕೆ ಉಟ್ಟ ಸೀರೆನೆರಿಗೆಗಳನ್ನು ನೆಲಕ್ಕೆ ಚೆಲ್ಲಿದ್ದೂ. . . ಹೀಗೆ ಜಾತ್ರೆಯಲ್ಲಿ ಒಂದೇ ಎರಡೇ ಅದೊಂದು ದೊಡ್ಡ ಜಗತ್ತಾಗಿ ಚಿಟ್ಟಿಗೆ ಕಾಣತೊಡಗಿತ್ತು. ಕೆಲವು ಅರ್ಥವಾಗುತ್ತಿತ್ತು ಕೆಲವು ಅರ್ಥವಾಗುತ್ತಿರಲಿಲ್ಲ.
ಭಾರತಿ ಅವತ್ತೆಲ್ಲಾ ಚಿಟ್ಟಿಯ ಜೊತೆ ಸೇರಲಿಲ್ಲ. ಅವಳಿಗೆ ಮೇರಿಯಮ್ಮನಿಗೂ ಚಿಟ್ಟಿಯ ಅಮ್ಮನಿಗೂ ಆದ ಜಗಳದಿಂದ ಏನೋ ಅನಾಹುತ ಆಗಬಹುದು ಎನ್ನುವ ಮುನ್ಸೂಚನೆ ಇತ್ತೋ ಅವರ ಮನೆಯಲ್ಲಿ ಚಿಟ್ಟಿಯ ಜೊತೆ ಸೇರ ಬೇಡ ಅಂತ ಅಂದಿದ್ದರೋ ಗೊತ್ತಿಲ್ಲ, ಭಾರತಿ ದೂರವೇ ಓಡಾಡಿದಳು. ಹಾಗಂತ ಜಾತ್ರೆಯ ಮಜವನ್ನು ಕೆಡಿಸಿಕೊಳ್ಳಲಿಕ್ಕಾಗುವುದೇ? ಚಿಟ್ಟಿ ಮಾತ್ರ ಭಾರದ ಮನಸ್ಸಿನಿಂದ ಸರೋಜಾ ಜೊತೆ ಓಡಾಡಿದಳು. ಬೊಂಬೆಯ ಬುಡದಿಂದ ಬಣ್ಣದ ದಾರದಂಥ ಮಿಠಾಯಲ್ಲಿ ವಾಚು ಉಂಗುರ ಹೀಗೆ ತನ್ನ ಕೈ ಕುಸುರಿನಲ್ಲಿ ಏನೇನೋ ಮಾಡುತ್ತಿದ್ದ ಬೊಂಬೆ ಮಿಠಾಯಿವಾಲಾಗೆ ಹತ್ತು ಪೈಸೆ ಕೊಟ್ಟು ವಾಚು ಉಂಗುರ ಮಾಡಿಸಿಕೊಂಡರು. ಅವನ ಕೈ ಅಳತೆಯಲ್ಲಿ ಚಕಚಕನೆ ಸಿದ್ದವಾಗುತ್ತಿದ್ದ ಅಕಾರವನ್ನು ಬೆಕ್ಕಸ ಬೆರಗಾಗಿ ನೋಡಿದ್ದರು. ಬೈತಲೆ ಬೊಟ್ಟನ್ನ ಹಾಕಿಕೊಂಖ್ಡು ಥೇಟು ಮದುವೆ ಹೆಣ್ಣಿನ ಹಾಗೆ ನಗುತ್ತಾ ಲಂಗದ ಬುಡದಿಂದ ರಾಶಿ ರಾಶಿ ಮಿಠಾಯಿತನ್ನು ಕೊಡುವ ಚೋದ್ಯಕ್ಕೆ ಬೆಕ್ಕಸ ಬೆರಗಾಗಿದ್ಫ್ದರು. ಅಷ್ಟರಲ್ಲಿ ಮಾಯಾಪೆಟ್ಟಿಗೆಯನ್ನು ಹಿಡಿದು ೆಬಾಂಬೇ ನೋಡ್ ಮದ್ರಾಸ್ ನೋಡ್’ ಎನ್ನುತ್ತಾ ಕೂಗುತ್ತಿದ್ದ ಡಬ್ಬೀವಾಲಾ. ನಾಕಾಣೆ ಅವನ ಕೈಗೆ ಕೊಡೋದು ಪೆಟ್ಟ್ರಿಗೇಲಿ ಬಗ್ಗಿ ನೋಡೋದು- ಎಲ್ಲರೂ ಪೆಟ್ಟಿಗೆಯಲ್ಲಿ ಬಗ್ಗಿ ಬಗ್ಗಿ ನೋಡುತ್ತಾ ಮುಂದೆ ಸಾಗುತ್ತಿದ್ದರು.
ಹಾಗೆ ಬಗ್ಗಿ ನೋಡುವಾಗ ಅವರ ಮುಖದಲ್ಲಿ ಆಗುವ ಬದಲಾವಣೆ ನೋಡಿಯೇ ಚಿಟ್ಟಿ ಮತ್ತು ಸರೋಜಾಗೆ ಏನಿರಬಹುದು ಇದರಲ್ಲಿ ಎನ್ನುವ ಕುತೂಹಲ ಹುಟ್ಟಿದ್ದು. ನೋಡೇಬಿಡೋಣ ಎನ್ನುತ್ತಾ ಡಬ್ಬೀವಾಲನ ಕೈಗೆ ನಾಕಾಣೆ ಹಾಕಿದ್ದೇ ತಡ ಅವನು ಪೆಟ್ಟಿಗೆಯಂಥ ಡಬ್ಬಿಗೆ ಹಾಕಿದ್ದ ಮುಚ್ಚಳವನ್ನು ತೆಗೆದ. ಚಿಟ್ಟಿ , ಸರೋಜಾ ಗೋಲವಾದ ತೂತಿನಲ್ಲಿ ಕಣ್ಣಿಟ್ಟಿದ್ದೇ ತಡ ಆ ಪೆಟ್ಟಿಗೆಯಲ್ಲಿ ಜಗತ್ತೇ ತುಂಬಿದೆ ಅನ್ನುವಂಥ ಚಿತ್ರಗಳು ಚಲಿಸತೊಡಗಿದ್ದವು. ಬಾಂಬೆ, ಮದ್ರಾಸ್ನ ಚಿತ್ರಗಳು ಚಲಿಸುತ್ತಾ ಬದಲಾಗುತ್ತಿದ್ದರೆ ಚಿಟ್ಟಿ ಮತ್ತು ಸರೋಜಾ ಇನ್ನೊಂದು ಲೋಕದಲ್ಲಿ ವಿಹರಿಸತೊಡಗಿದರು. ಡಬ್ಬಿವಾಲ ಪೆಟ್ಟಿಗೆಯನ್ನ ಕುಟ್ಟಿ `ಆಯ್ತು ನಡೀರೀ’ ಎಂದ. ಗುಂಗು ಹಿಡಿದ ಇಬ್ಬರೂ ಒಟ್ಟಿಗೆ ಉಸುರಿದ್ದರೂ `ಮುಗುದೇಬಿಟ್ಟಿತೇ?’ `ಕೊಟ್ಟ ನಾಕಾಣೆಗೆ ನಾಕುಗಂಟೆ ಚಿತ್ರ ತೋರಿಸಲಿಕ್ಕಾಗುತ್ತದಾ? ನಡೀರೀ ನಡೀರೀ’ ಅಂತ ಗದರಿಸಿದ. ಸಪ್ಪೆ ಮೋರೆ ಹಾಕಿಕೊಂಡು ಚಿಟ್ಟಿ ಸರೋಜಾ ಈಚೆ ಕಡೆಗೆ ಬರುವಾಗ ಜೋಸೆಫ್ ಚಿಟ್ಟಿಗೆ ಅಡ್ದಲಾಗಿ ನಿಂತಿದ್ದ. ಸರೋಜಾ ಅವನನ್ನು ನೋಡೇ ದೂರಕ್ಕೆ ಓಡಿಬಿಟ್ಟಿದ್ದಳು. ಚಿಟ್ಟಿಯನ್ನು ಮಾತ್ರ ಮಿಸುಗಿಸಲಿಕ್ಕೆ ಆಗದಂತೆ ನಿಲ್ಲಿಸಿಬಿಟ್ಟಿದ್ದ ಜೋಸೆಫ್. ಉಗುಳನ್ನ ನುಂಗುತ್ತಾ `ಜಾಗ ಬಿಡು ನಾನು ಹೋಗಬೇಕು’ ಎಂದು ಚಿಟ್ಟಿ ಗೋಗರೆದಳು.
ಅವಳ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ `ನಿಮ್ಮ ತಾಯೀಗೆ ಏನಂತ ಹೇಳ್ದ್ಯೇ? ನಾನು ನಿನ್ನ ಕರೆದೆ ಅಂತಲಾ? ನಾನು ಗಂಡಸು ಕಣೆ. ಏನ್ ಬೇಕಾದ್ರೂ ಅಂತೀನಿ. ಅದನ್ನೆಲ್ಲಾ ಮನೇಲಿ ಹೇಳೋದಾ ಇವತ್ತು ನಮ್ಮಮ್ಮ ನನ್ನ ಹೆಂಗ್ ಹೊಡದ್ಲು ಗೊತ್ತಾ? ಅವ್ಳು ಮಾತ್ರ ಅಲ್ಲ, ಅವ್ಳು ಇಟ್ಕೊಂಡಿದ್ದಾಳಲ್ಲಾ ಆ ಮುತ್ತು ಅವನೂ ನನ್ನನ್ನು ಹೊಡೆದ. ಎಲ್ಲಾ ಆಗಿದ್ದೂ ನಿನ್ನಿಂದಾನೇ. ನಾನು ಮುಟ್ಟೋದೇ ಬೇಡ ನಿನ್ನ ದಿಟ್ಟಿಸಿ ನೋಡಿದ್ರೆ ಸಾಕು ಬಸುರಾಗ್ಬಿಡ್ತೀಯ ತಿಳ್ಕಾಹೇಳೇ ನನ್ಮೇಲೆ ಇನ್ಯಾವತ್ತಾದ್ರೂ ಯಾರ ಹತ್ರಾನಾದ್ರೂ ಹೇಳ್ತೀಯಾ’ ಎನ್ನುತ್ತಾ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವಳ ಕೈ ಹಿಡಿದ. ಚಿಟ್ಟಿಗೆ ಗಾಬರಿಯಲ್ಲೂ ಮುತ್ತುವಿನ ಹೆಸರನ್ನ ಕೇಳಿ ನಗು ಬಂತು. ನೋಡೋಕ್ಕೆ ನರಪೇತಲ ತಿನ್ನೋದ್ ಮಾತ್ರ ಸೇರಕ್ಕಿ ಅನ್ನ. ಯಾರ ಮನೇಲಾದ್ರೂ ಊಟಕ್ಕೆ ಕರುದ್ರೆ ತಪ್ಪದೆ ಹಾಜರಾಗುತ್ತಿದ್ದ. ಬಡಿಸುತ್ತಾ ಇದ್ದರೆ ಬೇಡ ಅನ್ನೋ ಮಾತೇ ಬರುತ್ತಿರಲಿಲ್ಲ ಅವನ ಬಾಯಲ್ಲಿ. ಹೊಟ್ಟೆ ತುಂಬಾ ಉಂಡು ಗಡ್ರಕ್ಕನೆ ತೇಗಿದ ನಂತರವೂ `ಸ್ವಲ್ಪ ಉಳಿದಿದೆ ತಿಂತೀಯಾ?’ ಅಂತ ಯಾರಾದ್ರೂ ಕೇಳಿದ್ರೆ ಇಲ್ಲ ಅನ್ನದೆ ತಿನ್ನುತ್ತಿದ್ದ. ಬಯಲಿಗೆ ಹೋಗುವವರು ವಿಸಜರ್ಿಸಿದ ಮಲದ ರಾಶಿಯಿಂದಲೇ ಇದು ಮುತ್ತುವಿನದ್ದೆ ಅಂತ ಕಂಡು ಹಿಡಿಯುತ್ತಿದ್ದರು. ಅಂಥಾ ನರಪೇತಲ ಆಜಾನು ಬಾಹು ಮೇರಿಯಮ್ಮನಿಗೆ ಸುಮ್ಮನೆ ಸಿಗಲಿಲ್ಲ.
ಮೇರಿಯಮ್ಮ ಪ್ರಾರ್ಥನೆಗೆ ಚರ್ಚ್ಚಗೆ ಹೋದಾಗ ಗಂಟೆಯ ನಾದದಲ್ಲಿ ಪ್ರಭು `ಇವತ್ತು ನಿನಗೆ ಒಬ್ಬ ವ್ಯಕ್ತಿ ಸಿಗ್ತಾನೆ ಒಂಟಿಯಾದ ನಿನ್ನ ಜೀವನಕ್ಕೆ ಅವನು ಆಧಾರವಾಗ್ತಾನ’ೆ ಅಂತ ಹೇಳಿದನಂತೆ. ಅದನ್ನ ಒಪ್ಪಿ ಹೊರಬಂದ ಮೇರಿಯಮ್ಮನಿಗೆ ನಾಕು ದಿನಗಳಿಂದ ಊಟದ ಮೊಖ ಕಾಣದೆ ತಲೆ ಸುತ್ತಿ ಬಿದ್ದ ಮುತ್ತು ಕಾಣಿಸಿದನಂತೆ ದೇವರು ಕರುಣಾಮಯ ಅಂದಿದ್ದನ್ನ ಮಾಡಿಸಿ ತೋರಿಸಿದ ಎನ್ನುತ್ತಾ ಮುತ್ತುವನ್ನು ಮನೆಗೆ ಕರೆದು ತಂದಳು ಆಗ ಜೋಸೆಫನಿಗೆ ಬರೀ ಆರು ವರ್ಷಗಳು. ಇಬ್ಬರನ್ನೂ ಒಟ್ಟಿಗೆ ಕುಡಿಸಿ ಊಟ ಹಾಕಿದಳಂತೆ ತನ್ನ ಮನೆಯ ಅನ್ನ ಕರ್ಚಾಗಿ ಪಕ್ಕದ ಮನೆಯವರಲ್ಲಿ ಬೇಡಿ ಬಂದಿದ್ದು ಖಾಲಿಯಾಗಿ ಇನ್ನೂ ಬೇಖು ಎನ್ನುವ ಹಸಿವೆಗೆ ಆಹಾರ ಒದಗಿಸಲಾಗದೆ `ಅಯ್ಯ ನೀನು ಈ ಮನೇಲಿ ಇದ್ಕಾ ಆಡ್ರೆ ಊಟ ಮಾತ್ರ ಎಲ್ಲಿಯಾದ್ರೂ ಮಾಡ್ಕ ನಿನ್ನ ಹೊಟ್ಟೆಗೆ ನಾನು ಬೇಯಿಸಲಾರೆ’ ಎಂದ್ಸು ಬಿಟ್ಟಿದ್ದಳಂತೆ. ಎಲ್ಲಿ ಮದುವೆಯಾಗಲಿ, ತಿಥಿಯಾಗಲಿ ಮೊದಲು ಊಟಕ್ಕೆ ಹಾಜರಾಗುತ್ತಿದ್ದುದೆ ಮುತ್ತು. ಆಮೇಲೆ ಅಧೇಗೆ ಪ್ರೀತಿ ಹುಟ್ಟಿತೋ ಅಂತೂ ಅವತ್ತಿಂದ ಇವತ್ತಿನ ವರೆಗೂ ಒಂದೇ ಸೂರಿನಡಿ ಜಗಳ ಕದನ ಮುನಿಸುಗಳ ಮಧ್ಯೆ ಜೀವಿಸುತ್ತ ಇದ್ದರೆ. ಅಂಥಾ ನರಪೇತಲ ಮುತ್ತು ಕಡೆದರೆ ಎರಡಾಳಾಗುವ ಜೋಸೆಫನಿಗೆ ಹೊಡೆದದ್ದು ನೆನೆದೇ ಚಿಟ್ಟಿಯ ನಗು ಜಾಸ್ತಿಯಾಯಿತು. ಏನೇ ನೀನ್ ನನ್ನ ನೋಡಿ ನಗೋದು ಎನ್ನುತ್ತಾ ಕೈಯ್ಯನ್ನು ನುಲಿಚ ತೊಡಗಿದ ಜೋಸೆಫ್ ದೂರದಿಂದ ನೋಡ್ತಾ ಇದ್ದ ಕಳ್ಳಂಗಡಿ ಕೃಷ್ಣಪ್ಪನಿಗೆ ಏನನ್ನಿಸಿತೋ ಹತ್ತಿರ ಬಂದು ಬೆದರಿ ಹುಲ್ಲೆಯ ಮರಿಯಂತೆ ನಡುಗುತ್ತಿದ್ದ ಚಿಟ್ಟಿಯನ್ನ ಗಮನಿಸಿ `ಏನಾಯ್ತು?’ ಎಂದ. ಚಿಟ್ಟಿ ಜೋರಾಗಿ ಅಳಲು ಆರಂಭಿಸಿದಳು. `ಏಯ್ ಶೂರಾ ನಡ್ಯಾ ಆ ಮಗೂ ಹತ್ರ ನಿಂದೇನು’ ಎಂದ. ಸಿಟ್ಟಿಳಿಯದ ಜೋಸೆಫ `ಇವಳು ನನ್ನಿಂದಾನೇ ಬಸಿರಾಗೋದು ಖಂಡಿತಾ’ ಎಂದ ಹುಂಕರಿಸುತ್ತಾ. ನಾನ್ಯಾಕೆ ಇವನಿಂದ ಬಸಿರಾಗಬೇಕು? ನಂಗೇನು ಗಂಡ ಬರಲ್ವಾ ಎನ್ನುವ ಗೊಂದಲಕ್ಕೆ ಬಿದ್ದಳು ಚಿಟ್ಟಿ.
`ಕೈಕೂಡಾ ಹಿಡ್ದು ಬಿಟ್ನಾ? ಆಗ್ಹೋಯ್ತು ಬಿಡು’ ಎಂದು ನಕ್ಕತ್ತು ನಿಟ್ಟುಸಿರುಬಿಟ್ಟಳು. `ಅಂದ್ರೆ ಕೈ ಹಿಡುದ್ರೆ ಮಕ್ಕಳಾಗುತ್ವಾ?’ ಎಂದಳು ಮಂಗಳಿ. `ಇಲ್ವಾ ಮತ್ತೆ ಮದ್ವೇ ಆಗೋದು ಅಂದ್ರೇನೇ ಕೈ ಹಿಡ್ಯಾದು ಅಂತ ಅಲ್ವಾ ಕೈ ಹಿಡ್ದಾದ್ ಮೇಲೆ ಮಕ್ಕಳಾಗೋದು ಸಹಜ ಅಲ್ವಾ’ ಎಂದಳು ಎಲ್ಲಾ ತಿಳಿದವಳಂತೆ. ಚಿಟ್ಟಿಗೆ `ನಿನ್ನಪ್ಪ ನನ್ನ ಕೈ ಹಿಡ್ದು ಮೂರು ವರ್ಷ ನೀನು ಬಂದಿರಲಿಲ್ಲ. ಆಮೇಲೆ ಎಲ್ಲಾ ದೇವ್ರನ್ನೂ ಬೇಡಿದ್ದಕ್ಕೆ ನೀನು ಹುಟ್ಟಿದ್ದು’ ಅಂತ ಅಮ್ಮ ಹೇಳಿದ್ದೂ ನೆನಪಾಯ್ತು. ಸಣ್ಣದಾಗಿ ಅಳುತ್ತಾ ತನ್ನ ಹೊಟ್ಟೆಯ ಮೇಲೆ ಕೈ ಆಡಿಸುತ್ತಾ `ಅವ್ನು ನನ್ನ ಮುಟ್ಟಿದ. ಹಾಗಾದ್ರೆ ನನ್ನ ಹೊಟ್ಟೇಲಿ ಚಿಕ್ಕ ಪಾಪು ಬಂದ್ಬಿಟ್ಟಿರುತ್ತಾ?’ ಎಂದು ಗೊಣಗಿಕೊಂಡಳು. ನಡುವೆ ಸೇರಿಕೊಂಡ ಭಾರತಿ `ಎಲ್ಲಾರೂ ಅವ್ನ ಹೋರಿ ಅಂತಿದ್ರಪ್ಪಾ ಅವ್ನು ಹೇಳಿದ್ದೇ ನಿಜ ಇರ್ಬಹ್ದು ಚಿಟ್ಟಿ’ ಅಂದಿದ್ದಳು. ಚಿಟ್ಟಿಗೆ ಈಗ ಜಗತ್ತೇ ಶೂನ್ಯ ಅನ್ನಿಸತೊಡಗಿತ್ತು. ಹಾಗೇನಾದ್ರೂ ಆದ್ರೆ ನನ್ನ ಮನೇಲಿ ಸುಮ್ನೆ ಬಿಡುತ್ತಾರಾ? ಈ ಹಿಂದೆ ಪೋಸ್ಟ್ ಮಾಸ್ಟರ್ ಮಗಳು ಶಾಂತಾಗೆ ಕೂಡಾ ಹೀಗೇ ಆದಾಗ ಅವ್ರಪ್ಪ ದೊಡ್ದ ದೊಣ್ಣೆ ತಗೊಂಡು ಸಿಕ್ಕ ಸಿಕ್ಕ ಕಡೆಗೆ ಹೊಡೆದಿದ್ರಲ್ಲಾ? ಆ ನೋವನ್ನ ತಡೆದುಕೊಳ್ಲಲಾಗದೆ ರಾತ್ರಿಯಿಡೀ ನರಿಯ ಹಾಗೆ ಶಾಂತ ಊಳಿಟ್ಟಿದ್ದಳು.
ಊರೆಲ್ಲಾ ಕೇಳುವಂತೆ ಆ ಕಾಗೆ ಮುಟ್ಟಿದವಳನ್ನ ಮನೆ ಒಳಗೂ ಸೇರಿಸಬೇಡ ಅಂತ ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರಲ್ಲಾ? ಅವಳ ಹೊಟ್ಟೇನಲ್ಲಿರುವ ಮಗುವನ್ನು ತೆಗಿಸಿ ಅರೆ ಹುಚ್ಚನೊಬ್ಬನಿಗೆ ಅವಳನ್ನ ಅಂಟಿಸಿ `ಸದ್ಯ ಕಳೀತು ಪೀಡೆ’ ಎನ್ನುತ್ತಾ ಭಾರ ಇಳಿಸಿಕೊಂಡಿದ್ದರು. ಶಾಂತಾಳ ಅಪ್ಪ ತನ್ನ ಪಾಲಿಗೆ ಮಗಳಿಲ್ಲ ಎನ್ನುವಂತೆ ಅವಳ ಮನೆಯ ಕಡೆಗೂ ತಲೆ ಹಾಕಲಿಲ್ಲವಂತೆ. ತನಗೂ ಇನ್ನೇನು ಗತಿ ಬರುತ್ತೋ? ನಾನ್ ಯಾಕಾದ್ರೂ ಜಾತ್ರೆಗೆ ಬಂದ್ನೋ ಬಂದ್ರ್ರೂ ಈ ಜೋಸೆಫನಿಂದ ಯಾಕೆ ಮುಟ್ಟಿಸಿಕೊಂಡೇನೋ ಎನ್ನುತ್ತಾ ಗೋಳಾಡತೊಡಗಿದಳು ಯಾರ ಸಮಾಧಾನವೂ ಅವಳನ್ನ ತಟ್ಟಲಿಲ್ಲ. ಅಲ್ಲಿಂದ ಎದ್ದವಳೇ ಸೀದಾ ಕೆರೆಯ ಕಡೆಗೆ ಓಡಿದಳು ಮಿಕ್ಕವರೂ `ನಿಲ್ಲೇ’ ಎನ್ನುತ್ತಾ ಅವಳನ್ನ ಹಿಂಬಾಲಿಸಿದರು.
ಚಿಟ್ಟಿ ಕೆರೆಯ ಏರಿಯ ಮೇಲೆ ನಿಂತು ಕಣ್ನನ್ನ ಮುಚ್ಚಿ ನೀರಲ್ಲಿ ಜಿಗಿಯುವ ನಿಧರ್ಾರ ಮಾಡಿದ್ದಳು. ಸರೋಜಾ ಓಡಿ ಬಂದಳು `ಬೇಡ ಕಣೆ ಚಿಟ್ಟಿ. ಬೈಲಿ, ಹೊಡೀಲಿ ನೀನ್ ಮಾತ್ರ ಇದ್ರಲ್ಲಿ ಬೀಳಬೇಡ’ ಎಂದು ಅವಳನ್ನ ತಡೆವ ಪ್ರಯತ್ನ ಮಾಡಿದಳು. ಚಿಟ್ಟಿ ಅವಳನ್ನ ವಿಚಿತ್ರವಾಗಿ ದಿಟ್ಟಿಸಿ `ನಾನು ಸತ್ತು ನಿನ್ನ ಮೆಟ್ಟಿಕೊಳ್ತೀನಿ ಅಂತ ಭಯಾನಾ? ಬಾ ನಾನೂ ನೀನೂ ಲಂಗಕ್ಕೆ ಲಂಗ ಕಟ್ಟಿಕೊಂಡು ಧುಮಕೋಣ. ಇಬ್ಬರೂ ಸತ್ತು ಒಳ್ಳೇ ಸ್ನೇಹಿತರು ಅನ್ನಿಸ್ಕೊಳ್ಳೋಣ’ ಅಂದಳು ಆವೇಶದಿಂದ. `ನಾನ್ಯಾಕೆ ಸಾಯ್ಬೇಕು ಆ ಜೋಸೆಫ ಮುಟ್ಟಿದ್ದು ನಿನ್ನ. ನಾನು ಸತ್ರೆ ನನ್ನೂ ಮುಟ್ಟಿದ್ದಾನೆ ಅಂತ ಊರೆಲ್ಲಾ ಮಾತಾಡಿಕೊಳ್ಳಲ್ವಾ? ನಮ್ಮಪ್ಪ ಅಮ್ಮನಿಗೆ ಅವಮಾನ ಮಾಡಿದ್ ಹಾಗಲ್ವಾ?’ ಎಂದಳು ದೀನವಾಗಿ. `ನೀನು ಒಳ್ಳೆ ಸ್ನೇಹಿತೆಯಾ ಅಲ್ಲವಾ ಅದನ್ನ ಹೇಳಿಬಿಡು’ ಎನ್ನುತ್ತಾ ಚಿಟ್ಟಿ ಹಟ ಹಿಡಿದಳು. ಸೂರ್ಯ ಮೆಲ್ಲ ಮೆಲ್ಲನೆ ತನ್ನ ಮನೆಯ ಕಡೆಗೆ ಜಾರುತ್ತಿದ್ದ. ಮಾಮೂಲಿ ದಿನಗಳಲ್ಲಾದರೆ ಎಲ್ಲ ಏರಿಯ ಮೇಲೆ ಕೂತು ಸೂರ್ಯ ತನ್ನ ಮನೆಗೆ ಹೋಗ್ತಾನೆ. ಅವನ ಅಮ್ಮ ಏನು ಅಡುಗೆ ಮಾಡಿತರ್ಾಳೆ? ಜಾಂಗೀರು, ಜಿಲೇಜಿ, ಮೈಸೂರ್ ಪಾಕು, ಮುದ್ದೆ ಚಟ್ನಿ. . . ಹೀಗೆ ತಮಗೆ ಇಷ್ಟ್ತವಾದ ಎಲ್ಲಾ ತಿಂಡಿ ತಿನಿಸುಗಳ ಹೆಸರನ್ನ ಹೇಳ್ತಾ ಕಥೆಯನ್ನು ಮುಂದುವರಿಸುತ್ತಿದ್ದರು.
ಅವರಮ್ಮ ದಿನವಿಡೀ ನಡೆದು ನಡೆದು ದಣಿದು ಬಂದಿದ್ದೀಯ ಉಂಡು ಮಲಗು ಮಗನೇ ಅಂತ ಬಂಗಾರದ ತಟ್ಟೇಲೆ ಇಷ್ಟಿಷ್ಟೇ ಬಡಿಸುವಾಗ ಸೂರ್ಯ ಊರಗಲದ ತನ್ನ ಬಾಯನ್ನ ತೆಗೆದು ಎಲ್ಲವನ್ನೂ ಸುರಿದುಕೊಂಡು ತನ್ನ ಕಣ್ಣನ್ನ ಮುಚ್ಚಿ ನಿದ್ದೆಮಾಡುತ್ತಾನೆ ಅವನ ಗೊರಕೆಯೆ ಜೀರುಂಡೆ ಶಬ್ದ ಅವನು ಕಣ್ಣು ಮುಚ್ಚಿದ್ದರಿಂದಲೇ ಜಗತ್ತಿಗೆ ಕತ್ತಲು ಅಂತ ತಿಳಿದ ಕಥೆಯನ್ನೇ ಹೇಳಿಕೊಳ್ಳುತ್ತಿದ್ದರು. ಒಂದು ಲೆಕ್ಕಕ್ಕೆ ಅವರಿಗೆ ಅದು ಆಟ ಕೂಡಾ ಆಗಿರುತ್ತಿತ್ತು. ಆದ್ರೆ ಇವತ್ತು ಹಾಗಲ್ಲ. ಸೂರ್ಯ ಮನೆಗೆ ಹೋಗಬೇಡಪ್ಪಾ ಅಂತಾ ಚಿಟ್ಟಿಯ ಕಾರಣಕ್ಕೆ ಎಲ್ಲಾ ಪ್ರಾಥರ್ಿಸುತ್ತಾ ನಿಂತಿದ್ದರು. ಅಷ್ಟರಲ್ಲಿ ಕಳ್ಳು ಕುಡಿದ ಕಲ್ಲವ್ವ ದೇವಿಯ ಹೆಸರನ್ನ ಹಿಡಿದು `ತಾಯೀ. . .’ ಎಂದು ಕೂಗುತ್ತಾ ಏರಿಯ ಮೇಲೆ ನಡೆದು ಬರುತ್ತಿದ್ದಳು. `ಅವ್ವ ಬಂದು’್ಲ ಎನ್ನುತ್ತಾ ಆರೋಗ್ಯ ಅಲ್ಲಿಂದ ಓಡಿದಳು. ಚಿಟ್ಟಿ ಮಾತ್ರ ತನ್ನದು ಅಚಲವಾಗಿ ನಿಧರ್ಾರ, ಅದನ್ನ ಬದಲಿಸುವವರು ಯಾರೂ ಇಲ್ಲ ಎನ್ನುವಂತೆ ನಿಂತೇ ಇದ್ದಳು.
`ಯಾರದೂ?’ ಎಂದು ಕೂಗುತ್ತಾ ಹತ್ತಿರ ಬಂದ ಕಲ್ಲವ್ವನಿಗೆ ಕಂಡಿದ್ದು ಚಿಟ್ಟಿ, ಸರೋಜಾ, ನಕ್ಕತ್ತು, ಮಂಗಳಿ ಭಾರತಿ. ಅವರಲ್ಲಿ ತನ್ನ ಮಗಳನ್ನು ಹುಡುಕುತ್ತಾ `ಎಲ್ಲೇ ಆ ಲೌಡಿ’ ಎಂದಳು. ಆರೋಗ್ಯಾಳ ಮೇಲೆ ಪ್ರೀತಿ ಬರಲಿ ಕೋಪಬರಲಿ ಕಲ್ಲವ್ವ ಲೌಡಿ ಅಂತಲೇ ಕರೀತಿದ್ಲು. ನಕ್ಕತ್ತು ತಡವರಿಸ್ತಾ `ಇಲ್ಲ ಅವ್ಳು ನಮ್ಮ ಜೊತೆ ಬಲರ್ಿಲ್ಲ’ ಎಂದಳು. `ದೇವ್ರ ದರ್ಶನಕ್ಕೂ ಬಲರ್ಿಲ್ವಾ’ ಎಂದಳು ಕಲ್ಲವ್ವ ಇಳಿಯುತ್ತಿದ್ದ ಸೂರ್ಯನ ಪ್ರಖರತೆಗೆ ಕಣ್ಣನ್ನು ಕಿರಿದು ಮಾಡುತ್ತಾ. ಅವಳ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಕಲ್ಲವ್ವನೇ `ಏನಾಯ್ತು?’ ಎನ್ನುತ್ತಾ ಇನ್ನಷ್ಟು ಹತ್ತಿರ ಬಂದಳು. `ಚಿಟ್ಟೀನ ಜೋಸೆಫ ಮುಟ್ಟಿದ’ ಎಂದಳು ನಕ್ಕತ್ತು ಮೆಲ್ಲಗೆ. ಕಲ್ಲವ್ವನ ಮುಖದಲ್ಲಿ ಗಾಬರಿ ಕಾಣಿಸಿತು. ಕುಡಿದ ಅಮಲು ಸರ್ರೆಂದು ಜಾರಿತು, `ಮುಟ್ಟಿದ ಅಂದ್ರೆ’ ಎಂದಳು ಇನ್ನಷ್ಟು ಗಂಭೀರವಾಗಿ. ಮುಟ್ಟಿದ ಅಂದ್ರೆ ಮುಟ್ಟಿದ ಇದ್ರಲ್ಲಿ ವಿವರಿಸೋಕ್ಕೆ ಏನಿದೆ ತಿಳಿಯದೆ ನಿಂತಳು ನಕ್ಕತ್ತು. ಚಿಟ್ಟಿ ಆವೇಶಕ್ಕೆ ಬಿದ್ದವಳಂತೆ `ಮುಟ್ಟಿದ ಅಂದ್ರೆ ಈ ಕೈಯನ್ನು ಹೀಗೆ ಹಿಡಿದ ಅಂತ’ ಎಂದಳು. `ಅದ್ರಿಂದ ಏನಾಯ್ತು’ ಎಂದಳು ಕಲ್ಲವ್ವ. ಚಿಟ್ಟಿಯ ಹೊಟ್ಟೇಲಿ ಮಗು. . . . ‘ ಎಂದಳು ನಕ್ಕತ್ತು ಕ್ಷೀಣ ಧ್ವನಿಯಲ್ಲಿ. ಕಲ್ಲವ್ವ ಗಹಗಹಿಸಿ ನಕ್ಕಳು. ಸೂರ್ಯ ಸರಕ್ಕೆನೆ ತನ್ನ ಮನೆಯೊಳಕ್ಕೆ ತೂರಿಕೊಂಡ. ಎಷ್ಟಾದರೂ ದೇವೀ ಭಕ್ತಳಲ್ಲವೇ? ಎಲ್ಲರೂ ಅವಳಿಗೆ ಅಂಜುತ್ತಾರೆ ಅವಳ ತಲೆಯ ಮೇಲಿನ ಜಟೆಗೆ ಅಳುಕುತ್ತಾರೆ. ತಥೆರಿಕೆ ಕುಡ್ದಿದ್ದೂ ಅಮಲಿಲ್ಲದ ಹಾಗೆ ಮಾಡಿದ್ರಲ್ಲೆ ಹಾಳಾದೋರೆ. ಮುಟ್ಟಿದ್ರೆ ಕೈ ಹಿಡುದ್ರೆ ಮಕ್ಕಳಾಗಲ್ಲ ಹೋಗ್ರೇ . . ‘ ಎನ್ನುತ್ತಾ ಕೋಲನ್ನು ಹುಡುಕಿ ಅವರ ಕಡೆಗೆ ಎಸೆದು ಅಲ್ಲಿಂದ ಹೊರಟೇಬಿಟ್ಟಳು. ಹಾಗಾದ್ರೆ ಮುಟ್ಟಿದ್ರೆ ಮಕ್ಕಳಾಗಲ್ಲ ಎಂಬ ತಪ್ಪು ಮಾಹಿತಿಗಾಗಿ ಅಲ್ಲೇ ಇದ್ದ ನಕ್ಕತ್ತುವಿಗೂ ಗಾಯಬ್ ಆದ ಆರೋಗ್ಯಾಗೂ ಸಹಸ್ರನಾಮಾರ್ಚನೆಯಾಯ್ತು. ಕಲ್ಲವ್ವ ಹೇಳ್ತಾಳೆ ಅಂದ್ರೆ ಅದು ನಿಜಾನೆ. ಅವ್ಳು ತಾಯಿಯ ಭಕ್ತಳು. ಅವರ ಕೇರಿಯ ಜನರೆಲ್ಲಾ ಸಮಸ್ಯೆ ಬಂದ್ರೆ ಅವಳ್ ಹತ್ರಾನೇ ಪರಿಹಾರಕ್ಕೆ ಹೋಗೋದು. ಈಗ ಅವಳೇ ಬಂದು ಚಿಟ್ಟಿಯ ಸಮಸ್ಯೆಗೆ ಪರಿಹಾರ ಹೇಳಿಯಾಗಿದೆ ಇನ್ನೇನು ತಲೇ ನೋವಿಲ್ಲ ಎನ್ನುವ ತೀಮರ್ಾನಕ್ಕೆ ಬಂದರು. ಚಿಟ್ಟಿಗೆ ಮಾತ್ರ ತಲೆ ಎಲ್ಲೆಲ್ಲೋ ಓಡುತ್ತಿತ್ತು. ಮುಟ್ಟಿದ್ರೆ ಮಕ್ಕಳಾಗಲ್ಲ ಹಾಗಾದ್ರೆ . . .
ಸೂರ್ಯ ಆಕಾಶದ ತುಂಬಾ ಹರಡಿದ್ದ ಬಣ್ಣಬಣ್ಣದ ಬೆಳಕು ಎಲ್ಲರ ಕಣ್ಣು ತುಂಬುತ್ತಿತ್ತು. ನಿಂತೇ ಇದ್ದ ಚಿಟ್ಟಿಯನ್ನು `ನಡ್ಯೆ. ಕತ್ತಲಾದ್ರೆ ಹಲಸಿನ ಮರದ ಕೆಳಗೆ ಮಲಗಿರೋ ಶಂಕ್ರ ಏಳ್ತಾನೆ ಅಷ್ಟೇ’ ಎಂದಳು ನಕ್ಕತ್ತು. ಹುತ್ತದಲ್ಲಿ ಹಲಸಿನ ಬಿತ್ತಾ ಹಾಕಿದ್ರೆ ಒಳ್ಳೆ ಫಸಲು ಸಿಗುತ್ತೆ ಅಂತ ಯಾರೋ ಹೇಳಿದ್ರಿಂದ ನಾಲ್ಕು ವರ್ಷಗಳ ಕೆಳಗೆ ಶಂಕರ ಒಳ್ಳೆ ತಳಿಯ ಬೀಜವನ್ನು ತಂದು ಹಾಳು ಬಿದ್ದಿದ್ದ ಹುತ್ತದ ಒಳಗೆ ಹಾವಿರೋಕ್ಕೆ ಸಾಧ್ಯಾನೇ ಇಲ್ಲ ಅಂತ ಹಾಕಿದ್ದ. ಅವನ ಗ್ರಹಚಾರ ಅವನ ಊಹೆಗೂ ಮೀರಿ ಹಾವು ಅವನ ಕೈಗೆ ಕಾಟು ಹಾಕಿತ್ತು. ಇಪ್ಪತ್ತೊಂದು ಕೋಳಿಗಳ ಗುದ ಕೊಯ್ದು ಕಚ್ಚಿದ ಜಾಗಕ್ಕೆ ಕೊಟ್ಟರೂ ಗುದ ಕೊಯ್ಸಿಕೊಂಡ ಕೋಳಿಗಳು ವಿಷವೇರಿ ಸತ್ತವೇ ಹೊರತು ಶಂಕರನ ವಿಷ ಮಾತ್ರ ಇಳಿದಿರಲಿಲ್ಲ. ಕೊನೆಗೆ ಶಂಕರ ಸತ್ತ. ಅವನನ್ನ ಆ ಹುತ್ತದ ಬಳಿಯೇ ಹೂಳಲಾಗಿತ್ತು. ಅವನು ಹಾಕಿದ ಬೀಜ ಮೊಳಕೆಯೊಡೆದು ಶಂಕ್ರನ ಮೈ ಕಸುವನ್ನೂ ಹೀರಿ ಅಚ್ಚರಿ ಎನ್ನಿಸುವಷ್ಟು ದೊಡ್ದದಾಗುತ್ತಿತ್ತು. ಜನ ಎಲ್ಲಾ ಶಂಕ್ರ ರಾತ್ರಿಯಾಯ್ತು ಅಂದ್ರೆ ಆ ಮರವಾಗುತ್ತಿದ್ದ ಗಿಡದಲ್ಲಿ ಜೋತು ಬಿಳುತ್ತಾನೆ ಎಂದು ಹೇಳುತ್ತಿದ್ದುದು ಕೇಳುತ್ತಿದ್ದರು. ಸಣ್ಣ ಭಯ ಅವರನ್ನ ತಾಕಿ ದೊಡ್ಡದಾಗುತ್ತಾ ಒಂದು ಕ್ಷಣ ಅವರನ್ನು ಅಲ್ಲಿ ನಿಲ್ಲಲಾಗದೇ ಓಡಿಸಿಕೊಂಡು ಬಂದಿತ್ತು. ಆ ಹಲಸಿನ ಮರವನ್ನು ದಾಟುವಾಗ ಯಾರೋ ಜೋರಾಗಿ ನಕ್ಕ ಹಾಗೆ, ಕೂಗಿದ ಹಾಗಾಗಿ ಪುಟ್ಟ ಹೃದಯಗಳಲ್ಲಿ ತಲ್ಲಣ ಹುಟ್ಟಿ, ಹೆಜ್ಜೆ ಮುಗ್ಗರಿಸಿಕೊಂಡು ಮನೆಗಳ ಕಡೆಗೆ ಓಡಿದ್ದರು.
(ಮುಂದುವರೆಯುವುದು…)
 

‍ಲೇಖಕರು avadhi

August 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. g.n.nagaraj

    A very interesting narration. chitti seems to be more than a sister of kitty of Alanahalli

    ಪ್ರತಿಕ್ರಿಯೆ

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಸಾವನ್ನ ಕೊಡು ಎಂದು ಕೇಳಿದ ಯುವಕನ ಕಣ್ಣಿನಂತೆ…’ « ಅವಧಿ / avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಸಾವನ್ನ ಕೊಡು ಎಂದು ಕೇಳಿದ ಯುವಕನ ಕಣ್ಣಿನಂತೆ…’ August 20, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: