ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ಜಾತ್ರೆಯಲ್ಲಿ ಚಿಟ್ಟಿ

(ಇಲ್ಲಿಯವರೆಗೆ…)

ಜಾತ್ರೆಯ ಹಿಂದಿನ ದಿನ ಊರಿಗೂರೆ ಸಂಭ್ರಮದಿಂದ ಸರಿದಾಡುತ್ತಿತ್ತು. ಮಾವಿನ ಸೊಪ್ಪು ಬೇವಿನ ಸೊಪ್ಪಿನ ರಾಶಿಯೇ ದೇವಸ್ಥಾನದ ಹತ್ತಿರ ಬಿದ್ದಿತ್ತು. ಅದನ್ನ ಸರದ ಹಾಗೆ ನೇಯುತ್ತಾ ಒಂದಿಷ್ಟು ಜನ ಯುವಕರು ಕೂತಿದ್ದರು. ಅಡ್ಡ ಪಲ್ಲಕ್ಕಿಗೆ ಅಲಂಕಾರ ಮಾಡುವವರು ಮಾಡುತ್ತಿದ್ದರು. ನಾಳೆ ಬೆಳಗಿನ ಜಾವಕ್ಕೆ ಕೊಂಡ ಹಾಯಬೇಕು. ದೇವಸ್ಥಾನದ ಮುಂದೆ ಅಗ್ನಿ ಕೊಂಡಕ್ಕೆ ಗುಂಡಿ ತೆಗೆಯುತ್ತಿದ್ದರು. ಪೂಜಾರಿ ರಂಗಯ್ಯ ತಾಯಿಗೆ ಬಗೆ ಬಗೆಯಾಗಿ ಅಲಂಕಾರ ಮಾಡುತ್ತಾ ರೇಷ್ನೆ ಸೀರೆಯನ್ನು ಉಡಿಸುತ್ತಾ ಆನಂದ ತುಂದಿಲನಾಗುತ್ತಿದ್ದ.
ಎಲ್ಲರ ನಡುವೆ ಬಂದು ಕೂತಾಗ ಅವನ ನಿಷ್ಠೆಗೆ ಆಗಾಗ ದರ್ಶನ ಕೊಡುತ್ತಿದ್ದಳೆಂದೂ ಹೇಳುತ್ತಿದ್ದ. ತಾಯಿಗೆ ಹತ್ತು ಕೈ, ಐದು ತಲೆ, ಮುಂದೆ ಚಾಚಿದ ನಾಲಿಗೆ, ನಾಲಿಗೆಯಿಂದ ತೊಟ್ಟಿಕ್ಕುವ ರಕ್ತ, ಬಿರುದಾದ ಕಣ್ಣು. ಕಣ್ಣಿನ ಕೋಪ, ಕೆದರಿದ ತಲೆ ತಾಯಿ ಹುಲಿ ಮೇಲೆ ಕೂತು ಊರನ್ನ ತಿರುಗುತ್ತಾ ರಕ್ಷಣೆ ಮಾಡುತ್ತಿರುವುದಕ್ಕೆ ಈ ಊರು ಹೀಗಿದೆ ಎಂದು ವರ್ಣಿಸುತ್ತಿದ್ದ. ಅವನು ವರ್ಣಿಸುವ ರೀತಿಯನ್ನು ನೋಡಿದರೆ ಕೇಳುವವರ ಮೈ ನವಿರೇಳುತ್ತಿತ್ತು. ಕೇಳುವತನಕ ಕೇಳಿದ ಜನ `ಅಯ್ಯೋ ಸದಾ ಕುಡಿದ ಮತ್ತಲ್ಲೇ ಇರ್ತಾನೆ, ಏನನ್ನ ನೋಡಿ ಏನಂತ ಅಂದುಕೊಳ್ತಾನೋ ಯಾರಿಗೆ ಗೊತ್ತು’ ಎನ್ನುತ್ತಿದ್ದರು.
ರಂಗಯ್ಯ ಕಾಣದೆಯೇ ಇದನ್ನೆಲ್ಲಾ ವರ್ಣಿಸಲು ಸಾಧ್ಯವೇ? ಚಿಟ್ಟಿಯ ತಲೆಯಲ್ಲಿ ಹೊಕ್ಕ ಹುಳ ಮಿಲುಕಾಡಿ ಕೊನೆಗೆ ಇಷ್ಟೆಲ್ಲಾ ವಿವರಗಳನು ಕಣ್ಣಿಗೆ ಕಾಣುವ ಹಾಗೆ ಹೇಳುತ್ತಿದ್ದಾನೆ ಎಂದರೆ ರಂಗಯ್ಯನೇ ಸರಿಯಿರಬೇಕು. ಅಜ್ಜಿ ಹೇಳ್ತಾಳಲ್ಲ `ಪಾಪಿಯ ಕಣ್ಣಿಗೆ ಪರಮಾತ್ಮ ಕಾಣಲ್ಲ’ ಅಂತ! ಹಾಗೆ ಕಾಣಲಿಲ್ಲ ಅನ್ನೋ ಕಾರಣಕ್ಕೆ ಇವ್ರಿಗೆಲ್ಲಾ ಹೊಟ್ಟೆ ಕಿಚ್ಚಿರಬೇಕು ಎಂದುಕೊಳ್ಳುವಳು.
ಈಗಂತೂ ಊರ ತುಂಬಾ ರಂಗಯ್ಯನದ್ದೇ ಆರ್ಭಟ. ದೇವಸ್ಥಾನಕ್ಕೆ ಬರುವ ಶೂದ್ರರಿಗೆ ಕುರಿ, ಕೊಳಿಯನ್ನು, ಬ್ರಾಹ್ಮಣ- ಲಿಂಗಾಯಿತರಿಗೆ ಬೆಲ್ಲ, ಅಕ್ಕಿ, ಬೇಳೆ, ರಾಗಿಯ ಪಡಿಯನ್ನು ಒಪ್ಪಿಸುವಂತೆ ಆಜ್ಞಾಪಿಸುತ್ತಿದ್ದ. ಮೂಗಲ್ಲಿ ಮೂಗುತಿ, ಕಿವಿಯಲ್ಲಿ ಒಂಟಿ, ಹಣೆಯಲ್ಲಿ ಅರ್ಧ ಚಂದ್ರಾಕಾರದ ಕುಂಕುಮ, ತಲೆಯ ಜುಟ್ಟು ಕಿವಿಯಲ್ಲಿ ನಳನಳಿಸುವ ಕೆಂಪು ದಾಸವಾಳ, ಕೈಲಿ ಹಿತ್ತಾಳೆ ತಾಮ್ರದ ಕಡಗ, ಕೊರಳ ತುಂಬಾ ಯಾವ ಯಾವುದೋ ಮಣಿಯ ಸರಗಳು. ಕತ್ತಲೆ ತುಂಬಿಕೊಂಡಿದ್ದ ದೇವಸ್ಥಾನದಲ್ಲಿ ಮಿಣಗುಡುತ್ತಿದ್ದ ಸಣ್ಣ ಬತ್ತಿ ದೀಪದ ನಡುವೆ ಕೂತು ಏನನ್ನೋ ಧ್ಯಾನಿಸುತ್ತಿದ್ದ.
ಎಣ್ಣೆಯ ಕಮಟು ವಾಸನೆ ಹೂವು, ಕರ್ಪೂರ ಮತ್ತು ಊದುಬತ್ತಿಯ ವಾಸನೆಯ ಜೊತೆ ಸೇರಿ ಸಹಿಸಲಸಾಧ್ಯವಾದ ಕಟುವಾಸನೆಯನ್ನು ಸೂಸುತ್ತಿತ್ತು. ಹೊರಗೆ ಉದ್ದಕ್ಕೆ ಕಂಬಗಳನ್ನ ನೆಟ್ಟು ದೀಪದ ವ್ಯವಸ್ಥೆಯನ್ನು ಮಾಡುತ್ತಿದ್ದರು. ದೇವತೆಯ ಶಕ್ತಿಯನ್ನು ಬಣ್ಣಿಸುವ ಹಾಡುಗಳನ್ನ ಮೈಕಿನ ಮುಂದಿಟ್ಟಿದ್ದ ಟೇಪ್ರೆಕಾರ್ಡರ್ ಹೊರಹೊಮ್ಮಿಸುತ್ತಿತ್ತು. ಆಗಾಗ ರೆಕಾರ್ಡರ್ನ ಹೆಡ್ಕ್ಲೀನ್ ಮಾಡದೆ ಇದ್ದುದ್ದರಿಂದಲೋ ಏನೋ ಎಳೆದ ಹಾಗೆ ರಾಗವನ್ನು ಹೊಮ್ಮಿಸುತ್ತಿತ್ತು. ಚಿಟ್ಟಿಗೆ ಒಳಗೆ ಏನೋ ನಡೆಯಬಹುದೆಂಬ ಕುತೂಹಲ. ಬಗ್ಗಿನೋಡಲು ಹೋದ ಚಿಟ್ಟಿಗೆ `ಏಯ್ ಕೋತಿ ದೇವ್ರ ಹತ್ರ ಬರೋವಾಗ ಬರಿಗೈಲಿ ಬರೋದಾ? ಅಕ್ಕಿ ಬೆಲ್ಲಾ ತರೋದ್ ಬೇಡ್ವಾ? ದೇವೀಗ್ ಕೋಪ ಬಂದ್ ಬಿಡುತ್ತೆ. ಈ ವರ್ಷ ಫೈಲ್ ಆಗಿಬಿಡ್ತೀಯ’ ಅಂತ ಕೂಗಿದ ರಂಗಯ್ಯ. ಹೆದರಿದ ಚಿಟ್ಟಿ ತಟ್ಟೆಂದು ಹಿಂದಕೆ ಕಾಲಿಟ್ಟಳು.
`ಅವ್ನು ಹಾಗೇಬಿಡು ಇದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ತೀಯ?’ ಅಂತ ಸರೋಜ, ಭಾರತಿ ಆರೋಗ್ಯ ಎಲ್ಲಾ ಹೇಳುತ್ತಿದ್ದರೂ ಚಿಟ್ಟಿಗೆ ಮಾತ್ರ ಮನಸ್ಸಿಗೆ ಸಮಾಧಾನ ಇಲ್ಲ. ಅಷ್ಟರವರೆಗೆ ಮಾತನಾಡಿಸದ ನಕ್ಕತ್ತು ಕೂಡಾ ಚಿಟ್ಟಿಯ ಅಳುವನ್ನು ನೋಡಿ ಸಮಾಧಾನ ಮಾಡುತ್ತಿದ್ದಳು. ನಕ್ಕತ್ತು ಮಾತನಾಡಿಸಿದ ಖುಷಿ ಕೂಡಾ ಅವಳ ತಲೆಗೆ ಹೊಕ್ಕಲಿಲ್ಲ. `ನಾನ್ಯಾಕೆ ಅಲ್ಲಿಗೆ ಹೋದೆ? ಹೋದರೂ ಅವನ ಕಣ್ಣಿಗೆ ಯಾಕೆ ಕಾಣಿಸಿಕೊಂಡೆ? ಅವನ್ಯಾಕೆ ನನಗೆ ಹಾಗೆನ್ನಬೇಕು? ನಾನೇನಾದರೂ ಫೇಲ್ ಆಗಿಬಿಟ್ಟರೆ ಈ ಊರಲ್ಲಿ ತಲೆ ಎತ್ತಿಕೊಂಡು ಸುತ್ತೊದಾದರೂ ಹೇಗೆ?’ ಅಂತ ಅಳತೊಡಗಿದಳು. `ನೀನ್ ಅದೇಗ್ ಫೇಲ್ ಆಗ್ತೀಯ ನಾನೂ ನೋಡ್ತೀನಿ’ ಅಂತ ಮಂಗಳಿ ಸರ್ರನೆ ಅವಳ ಮನೆಯ ಕಡೆಗೆ ನುಗ್ಗಿದಳು. ಇವಳು ಏನು ಮಾಡಬಹುದು ಎಂದು ಯೋಚಿಸುವಾಗಲೇ ಅವಳ ಅಮ್ಮನಿಗೆ ಕಾಣದಂತೆ ಅಕ್ಕಿ ಬೆಲ್ಲದ ಪಡಿಯನ್ನು ಒಂದು ಬಾಳೆಯ ಎಲೆಯಲ್ಲಿ ಸುತ್ತಿ ತಂದಳು. ವೆಂಕಣ್ಣಾಚಾರರು ಪುರೋಹಿತಿಕೆಗೆ ಹೋಗುವುದರಿಂದ ಅಕ್ಕಿ, ಬೆಲ್ಲ, ಬೇಳೆಗೆ ಅವರ ಮನೆಯಲ್ಲಿ ಬರವಿರಲಿಲ್ಲ. ಅದನ್ನ ಚಿಟ್ಟಿಯ ಕೈಲಿ ರಂಗಯ್ಯನಿಗೆ ಕೊಡಿಸಿ ಫೇಲ್ ಆಗಲ್ಲ ಅಂತ ಹೇಳು ಅಂತ ಹೇಳಿಸಿಯೂ ಬಿಟ್ಟಳು. ಎಲ್ಲರಿಗೂ ಈಗ ದೊಡ್ಡ ನಿರಾಳ. ಎಲ್ಲರೂ ದೇವಸ್ಥಾನದಿಂದ ಹೊರಬಂದರು. ಅಷ್ಟರಲ್ಲಿ ಐಸ್ಕ್ಯಾಂಡಿಯವನ ಪೋಂ ಪೋಂ ಶಬ್ದ ಕೇಳಿದ್ದೆ ತಡೆ ಆ ಕಡೆ ಓಡಿದರು.

ಚುಂಗು ಗಡ್ಡ ಬಿಟ್ಟ ಐಸ್ ಕ್ಯಾಂಡಿ ಮಾರುವ ಮುಸಲ್ಮಾನನೊಬ್ಬ ತನ್ನ ಸೈಕಲ್ಗೆ ಸಿಕ್ಕಿಸಿಕೊಂಡಿದ್ದ ರಬ್ಬರ್ ಚಂಡಿನಾಕಾರದ ಹಾರನ್ನ್ನು ಒತ್ತುತ್ತಾ ಹುಡುಗರನ್ನ ಸೆಳೆಯುತ್ತಿದ್ದ. ಮೇಲೆ ಉರಿಯುವ ಸೂರ್ಯ ಕ್ಯಾಂಡಿಯನ್ನು ಕೈಲಿ ಹಿಡಿದರೆ ನನ್ಗೆ ಇಲ್ವಲ್ಲಾ ಅಂತ ಹೊಟ್ಟೆ ಕಿಚ್ಚಿಗೆ ಕರಗಿಸಿಬಿಡುತ್ತಿದ್ದ. ಒಂದು ಕೈಯ್ಯನ್ನು ಮರೆಮಾಡಿಕೊಂಡು ಆದಷ್ಟು ಬೇಗ ತಿಂದು ಮುಗುಸುವ ಆತರ ಎಲ್ಲರದ್ದು. ಒಂದು ತಿಂದರೆ ಯಾರಿಗೆ ಸಮಾಧಾನ? ಎರಡು ಮೂರು ನಾಲಿಗೆ ತಣಿಯುವಷ್ಟನ್ನು ಕೊಳ್ಳುವ ಹಾಗಿದ್ದರೆ ಎಷ್ಟು ಚೆನ್ನಾ! ಮನೆಯಲ್ಲಿ ಅದಕ್ಕಾಗಿ ದುಡ್ಡು ಕೊಡೋಯರ್ಾರು? ಅಷ್ಟಕ್ಕೂ ಆ ಸಾಬಿಗೆ ಕಾಸನ್ನ ಎಣೆಸಿದರೆ ಮಾತ್ರ ಐಸ್ ಅನ್ನುವುದೇನೂ ಇರಲಿಲ್ಲ. ಒಡೆದ ಪ್ಲಾಸ್ಟಿಕ್ ಸಾಮಾನು, ಕೆಲಸಕ್ಕೆ ಬಾರದ ಕಬ್ಬಿಣದ ವಸ್ತು ಹೀಗೆ ಏನನ್ನಾದರೂ ಸರಿ ತೆಗೆದುಕೊಳ್ಳುತ್ತಿದ್ದ. ಹಾಗಾಗಿ ಯಾರ ಮನೆಯಲ್ಲೂ ಇಂಥಾ ವಸ್ತುಗಳು ಮೂಲೆಯಲ್ಲಿ ಬಿದ್ದುಕೊಂಡು ಜಾಗವನ್ನು ತಿನ್ನುತ್ತಿರಲಿಲ್ಲ. ಅದು ಮುಗಿದ ನಂತರವೂ ಮಕ್ಕಳ ಐಸ್ ಕೊಳ್ಳುವ ಬಯಕೆಗೆ ಬೇಕಾದಷ್ಟು ದಾರಿಗಳು ತೆರೆದುಕೊಳ್ಳ್ಳುತ್ತಿದ್ದವು.
ಎಲ್ಲರೂ ಕೈಲೊಂದೊಂದು ಸ್ಕೂಲಿಂದ ಕದ್ದು ತಂದ ಸೀಮೆಸುಣ್ಣದ ತುಂಡನ್ನು ಹಿಡಿದು ಹಾವಿನ ಹಾಗೆ ಮೈ ಮುರಿಯುತ್ತಾ ಮಲಗಿದ್ದ ರಸ್ತೆಯಲ್ಲಿ ತಮ್ಮ ಕಣ್ಣಿಗೆ ಏನು ಬೀಳುತ್ತೆ ಅಂತ ಹುಡುಕುತ್ತಾ ಹೊರಟರು. ಹಾಗೆ ಹೊರಟವರಿಗೆ `ಹಾ ಸಿಕ್ತು’ ಎನ್ನುವ ಭಾರತಿಯ ಮಂದಹಾಸದ ಧ್ವನಿ ಕೇಳಿಸಿತು, ಎತ್ತು, ದನ, ಕುದುರೆ- ಹೀಗೆ ವಿವಿಧ ಪ್ರಾಣಿಗಳಿಗೆ ಹೊಡೆದ ಲಾಳಿ ಟಾರುರಸ್ತೆಯನ್ನು ದಾಟುವಾಗ ಗೊರಸಿನಿಂದ ಜಾರಿ ಕರಗಿದ ಟಾರಿಗೆ ಅಂಟಿಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾದ ಸಂಗತಿ. ಅಂಥಾ ಒಂದು ಲಾಳಿಯೇ ಭಾರತಿಗೆ ಕಂಡಿದ್ದು. ಗುಂಡಗೆ ಅದರ ಮೇಲೆ ಸೀಮೆ ಸುಣ್ಣದಿಂದ ಗುರುತು ಮಾಡಿ ಅದರ ಮೇಲೆ ಆಗ ತಾನೆ ಕಲಿತ ಇಂಗ್ಲೀಷ್ನ `ಬಿ’ ಅಕ್ಷರವನ್ನು ಬರೆದಳು. `ಇದು ನಂದು ಯಾವಾಳಾದ್ರೂ ಎತ್ತಿದ್ರೆ ಸುಮ್ನಿರಲ್ಲ’ ಎನ್ನುತ್ತಾ ಎಚ್ಚರಿಕೆಯ ಮಾತುಗಳನ್ನು ಆಡಿದ್ದಳು. ಅವಳ ಬಾಯಲ್ಲಿ ಕರಗುವ ಕ್ಯಾಂಡಿಯ ಪುಣ್ಯವನ್ನು ನೆನೆಯುತ್ತಾ ತಮ್ಮ ದುರಾದೃಷ್ಟಕ್ಕೆ ಕರುಬುತ್ತಾ `ಅಂತರಗಟ್ಟಮ್ಮಾ, ಸ್ವಲ್ಪ ಕರುಣೆ ತೋರಿಸಮ್ಮಾ’ ಎನ್ನುತ್ತಾ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದರು. ಅವರವರ ಶಕ್ತ್ಯಾನುಸಾರ, ಭಕ್ತ್ಯಾನುಸಾರ ಸಿಕ್ಕ ಬೋಲ್ಟು , ನಟ್ಟು, ಕಬ್ಬಿಣದ ಕಂಬಿಯ ತುಂಡುಗಳು, ದೊಡ್ಡ ಲಾರಿಗಳ ಹೆಸರೇ ಗೊತ್ತಿಲ್ಲದ ಭಾಗಗಳು ಹೀಗೆ ಗುರುತು ಮಾಡಿಸಿಕೊಂಡು ಟಾರಿನಿಂದ ತಮಗೆ ಸಿಗುವ ಮುಕ್ತಿಗಾಗಿ ಕಾಯುತ್ತಿದ್ದವು.
ಓಡಾಡುವ ಭಾರಿ ವಾಹನಗಳ ನಡುವೆಯೇ ತಾವು ತಾವು ಗುರುತು ಮಾಡಿದ ವಸ್ತುಗಳನ್ನ ಎಬ್ಬಿ, ಅದಕ್ಕೆ ಮೆತ್ತಿದ್ದ ಟಾರನ್ನು ಕಾದಿದ್ದ ಬಂಡೆ ಕಲ್ಲುಗಳಿಗೆ ಒರೆಸಿ ಪಳಗುಡುವಂತೆ ಮಾಡಿ ತಂದಿದ್ದರು. ಅದನ್ನ ನೋಡಿದ ಸಾಬಿಯ ಕಣ್ಣು ಅಚ್ಚರಿಯಿಂದ ಅರಳಿದ್ದವು. ಅವನ ಬಾಯಿಂದ `ಯಾ ಖುದಾ’ ಎನ್ನುವ ಪದ ಅಯಾಚಿತವಾಗಿ ಹೊರಗೆ ಬಿದ್ದಿತ್ತು. `ನಂಗೆ ಕೆಂಪು ಬಣ್ಣದ್ದು ಬೇಕು, ನನಗೆ ಹಳದಿ ಇಲ್ಲ ಇಲ್ಲ ಕೇಸರಿ ಬಣ್ಣದ್ದು. . . ‘ ಎನ್ನುತ್ತಾ ಸಾಬಿಯ ತಲೆ ಚಿಟ್ಟೆನ್ನಿಸುವಂತೆ ಕೂಗುತ್ತಾ ಸಂಭ್ರಮಿಸಿ ಕ್ಯಾಂಡಿಗಳನ್ನು ತೆಗೆದುಕೊಂಡರು. `ಕೈಲಿ ಹಿಡಿದ ಕ್ಯಾಂಡಿ ತಕ್ಷಣವೇ ಕರಗುತ್ತೆ. ಬೆಳಗಿನಿಂದ ಸಂಜೆವರೆಗೆ ಈ ಡಬ್ಬದಲ್ಲಿ ಕರಗದೆ ಹೇಗಿರುತ್ತೆ?’ ಡಬ್ಬದಲ್ಲಿ ಚಿಟ್ಟಿ ಬಗ್ಗಿ ನೋಡಲು ಹೋದಳು. ಆರೋಗ್ಯ `ಅದೆನ್ ನೋಡ್ತೀಯ ಇಲ್ಲಾಂದ್ರೆ ನಿನ್ನ ಐಸ್ ಕ್ಯಾಂಡೀನ ಒಂದ್ ಕಡೆ ಸೂರ್ಯ ಇನ್ನೊಂದ್ ಕಡೆ ಭೂಮಿ ಎಳಕೊಂಡ್ ತಿನ್ನಿತ್ವೆ’ ಎಂದಳು. ನಕ್ಕತ್ತುವಿಗೆ ಅವಳ ಮಾತನ್ನ ಕೇಳಿ ನಗು ಬಂತು ಕಿಸಿಕಿಸಿ ನಕ್ಕಳು. ಚಿಟ್ಟಿಗೆ `ಹಾಗೇನಾದರೂ ಆದ್ರೆ?’ ಎನ್ನುವ ದಿಗಿಲು ಆರಂಭವಾಗಿ ಕ್ಯಾಂಡಿಯನ್ನು ಬಾಯಿಗಿಟ್ಟಳು.
ಜಾತ್ರೆಗೆ ಮೂರುದಿನ ಮುನ್ನವೇ ರಂಕಲರಾಟೆ, ಕುಣಿಯುವ ಕುದುರೆ. ತೂಗುವ ಹಡಗು, ಬಸಪ್ಪ ಸರ್ಕಸ್ ತಂಡ ಬೀಡುಬಿಟ್ಟು ಊರಿಗೇ ಜಾತ್ರೆಯ ಕಳೆಯನ್ನು ತಂದಿದ್ದವು. ರಂಕಲರಾಟೆಯ ತೊಟ್ಟಿಲಲ್ಲಿ ಕೂತು ವೃತ್ತಾಕಾರವಾಗಿ ಮೇಲಿಂದ ಕೆಳಕ್ಕೆ, ಕೆಳಗಿನಿಂದ ಮೇಲೆಕ್ಕೆ ಹೋಗುವ ಅನುಭವವೇ ಬೇರೆ. ಆಸೆಯಿದ್ದರೂ ಯಾರೋ ವಾಂತಿ ಮಾಡಿಕೊಂಡಿದ್ದನ್ನ ನೋಡಿ ಚಿಟ್ಟಿ ತಾನು ಮಾತ್ರ ಅದಕ್ಕೆ ಬಿಲ್ಕುಲ್ `ಹತ್ತಲ್ಲ’ ಅಂದುಬಿಟ್ಟಿದ್ದಳು. ತನಗೆ ವಾಂತಿ ಬರುತ್ತೆ ಅನ್ನುವ ಕಾರಣಕ್ಕೆ ಅಲ್ಲ. ಯಾರಾದರೂ ವಾಂತಿ ಮಾಡಿ ಅದು ತನ್ನ ಮೇಲೆ ಬಿದ್ದರೆ ಎನ್ನುವ ಭಯಕ್ಕೆ.
ಆದರೆ ಅವಳನ್ನ ಅತಿಯಾಗಿ ಸೆಳೆದಿದ್ದು ಎಂದರೆ ಬಯಲಲ್ಲಿ ಬೀಡುಬಿಟ್ಟಿದ್ದ ಸರ್ಕಸ್. ಸರ್ಕಸ್ ಎಂದರೆ ನಾಕು ಜನ ಹೆಣ್ಣುಮಕ್ಕಳು, ನಾಕು ಜನ ಗಂಡಸರ ಸಂಸಾರ. ಅವರ ಮಧ್ಯೆ ಆಗೀಗ ಅಡ್ಡಾಡುವ ಒಂದಿಷ್ಟು ಅವರದ್ದೆ ಮಕ್ಕಳು. ಒಂದೆರಡು ನಾಯಿ, ಕೋತಿ, ಬೆಕ್ಕುಗಳು. ಸರ್ಕಸ್ ನೋಡಿ ಬಂದ ಸರೋಜಾಳ ಬಾಯಿಂದ ಆ ವಿವರಗಳನ್ನ ಕೇಳುತ್ತಾ ಬೇರೆಯದ್ದೇ ಲೋಕಕ್ಕೆ ತೆರಳಿದ್ದ ಚಿಟ್ಟಿ. `ಹೌದಾ! ಹೌದಾ!’ ಎನ್ನುತ್ತಾ ಕಣ್ಣು ಬಾಯನ್ನಗಲಿಸಿ ಸರೋಜಾಳ ಮುಂದೆ ಕೂತಿದ್ದಳು.
ಚಿಟ್ಟಿ, ಭಾರತಿ, ನಕ್ಕತ್ತು, ಮಂಗಳಿ ಎಲ್ಲರೂ ಮನೆಯಲ್ಲಿ ಕಾಸಿಗಾಗಿ ಪೀಡಿಸಿ ಸರ್ಕಸ್ಗೆ ಹೋಗಲು ಹಣ ತೆಗೆದುಕೊಂಡರು. `ನಾಳೆ ಜಾತ್ರೆ ಇಟ್ಕೊಂಡ್ ಇದೇನ್ ಹಠ ನಿಂದು? ಮನೆಗೆ ಜನ ಬರ್ತಾರೆ ಅಲ್ಲಿ ಹೋಗಿ ಕೂತರೆ ಹೇಗೆ?’ ಎನ್ನುವ ಮಾತುಗಳ ನಡುವೆಯೂ `ಹೋಗಲಿ ಬಿಡು ಮೂರು ವರ್ಷಕ್ಕೊಂದು ಸಾರಿ ಬರೋ ಜಾತ್ರೇಲೂ ಮಕ್ಕಳು ಖುಷಿ ಪಡದಿದ್ದರೆ ಹೇಗೆ?’ ಎನ್ನುತ್ತಾ ಹಣವನ್ನು ಹೊಂಚಿಕೊಟ್ಟಿದ್ದರು. ಕೊಡುವಾಗ `ದುಡ್ಡೇನು ಹಿತ್ತಲ ಮರದಲ್ಲಿ ಬಿಡಲ್ಲ ತಿಳ್ಕಾ’ ಎಂದಿದ್ದರು.
ಎಲ್ಲರೂ ಬಿಟ್ಟಕಣ್ಣಿಂದ ಆ ಸರ್ಕಸ್ಸನ್ನ ನೋಡಿದರು. ಮರದ ಕಂಬವೊಂದನ್ನು ಮಧ್ಯಭಾಗದಲ್ಲಿ ನಟ್ಟು, ಅದಕ್ಕೆ ಲೈಟು ಕಂಬದಿಂದ ಸಂಪರ್ಕ ತೆಗೆದುಕೊಂಡು ಅಲ್ಲೊಂದು ದೀಪವನ್ನು ಬೆಳಗಿಸಿದ್ದರು. ಸುತ್ತಾ ಸೀರೆಗಳನ್ನ ಕಟ್ಟಿ ಗುಂಡಗೆ ಟೆಂಟ್ ಥರ ಹಾಕಿಕೊಂಡಿದ್ದರು. ಒಂದು ಪಕ್ಕದಲ್ಲಿ ಊರ ಪ್ರಮುಖರಿಗೆ ಅಂತ ತುಕ್ಕು ಹಿಡಿದ ಒಂದಿಷ್ಟು ಚೇರನ್ನ ಹಾಕಿದ್ದರು. ಹಿಂದಿನ ದಿನ ಪಂಚಾಯ್ತಿ ಚೇರ್ಮನ್ ಪುಟ್ಟಸ್ವಾಮೇಗೌಡರು ಬಂದಿದ್ದರಿಂದ ಸದಸ್ಯನಾದ ಮಂಜೇಗೌಡರು ನೆಲದಲ್ಲಿ ಕೂರಬೇಕಾಯಿತು. ಅಂಥಾ ಹೀನಾಯ ಸ್ಥಿತಿ ಒದಗಿಬಂದಿದ್ದರಿಂದ ಆ ಅವಮಾನವನ್ನು ದಾಟಿಕೊಳ್ಳಲು ಮಾರನೆಯ ದಿನ ತಮ್ಮ ಮನೆಯಿಂದ ಆರಾಮ ಕುರ್ಚಿಯನ್ನು ತಂದು ಹಾಕಿಕೊಂಡು ಕೂತರು. ಅವರ ಮಗಳು ಅಂಬುಜಾ ಕೂಡಾ ಚಿಟ್ಟಿಯ ಕ್ಲಾಸಿನವಳೇ. ಬಾರೆಂದರೂ ಜೊತೆಯಲ್ಲಿ ಬಂದು ಕೂರದೆ ಅಪ್ಪನ ಪಕ್ಕ ಚೇರಿನಲ್ಲೆ ಕಾಲ ಮೇಲೆ ಕಾಲು ಹಾಕಿಕೊಂಡು ಕೂತು ಎಲ್ಲರ ಹೊಟ್ಟೆ ಉರಿಸಿದ್ದಳು.
ಇದು ಎಲ್ಲರಿಗೂ ಬೇಸರವಾದರೂ ಸರ್ಕಸ್ ಶುರುವಾದ ಕೆಲವೇ ಕ್ಷಣದಲ್ಲಿ ಎಲ್ಲವನ್ನೂ ಮರೆತುಬಿಟ್ಟರು. ಸರ್ಕಸ್ಸಿನ ಜನ ಕಬ್ಬಿಣದ ದೊಡ್ಡ ಬಳೆಯ ಒಳಗೆ ತಮ್ಮ ಮೈಯ್ಯನ್ನ ತೂರಿಸಿ, ಭಾರದ ಗುಂಡನ್ನ ಎತ್ತಿ, ಮರಕ್ಕೆ ಕಟ್ಟಿದ್ದ ಹಗ್ಗದ ಮೇಲೆ ತಲಕೆಳಗೆ ಜೋತಾಡಿ ನಡೆಸುತ್ತಿದ್ದ ವ್ಯಾಯಾಮವನ್ನು ನೋಡಿ ಅಚ್ಚರಿ ಮತ್ತು ಸಂತೋಷಗಳಿಂದ ಎಲ್ಲರೂ ಚಪ್ಪಾಳೆ ತಟ್ಟಿದರು. ಇನ್ನೇನು ಸರ್ಕಸ್ ಮುಗೀತು ಎನ್ನುವ ಬೇಜಾರಲ್ಲಿದ್ದಾಗ ದೀಪ ಆರಿ ಮತ್ತೆ ಹೊತ್ತಿಕೊಂಡು ಜೋಡಿ ಜೋಡಿಯಾಗಿ ಹೆಂಗಸರು ಮತ್ತು ಗಂಡಸರು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ವಯ್ಯಾರದಿಂದ ಸಿನೆಮಾದ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ನತರ್ಿಸಿದರು. ಚಿಟ್ಟಿಗೆ ಅಚ್ಚರಿ. ಆ ಹೆಂಗಸರಿಗೆ ತನ್ನ ಅಮ್ಮನದ್ದೆ ವಯಸ್ಸು. ಗಂಡಸರಿಗೆ ಅಪ್ಪನ ವಯಸ್ಸಿರಬಹುದು. ಆ ವಯಸ್ಸಿನವರು ಹಾಗೆ ಕುಣಿಯಬಹುದು ಎನ್ನುವ ಯೋಚನೆ ಕೂಡಾ ಅವಳಿಗೆ ಇರಲಿಲ್ಲ. ಸ್ಕೂಲಿನಲ್ಲಿ ವಾರ್ಷಿಕೋತ್ಸವಕ್ಕೆ ಹಾಗೆ ಹೀಗೆ ಹೆಜ್ಜೆ ಹಾಕುತ್ತಾ ಹೇಳಿಕೊಡುತ್ತಿದ್ದ ಚಂದ್ರಮ್ಮ ಟೀಚರ್ನ ಡ್ಯಾನ್ಸ್ನ್ನು ಮಾತ್ರ ಕಣ್ಣಾರೆ ಕಂಡಿದ್ದ ಅವಳಿಗೆ ತನ್ನ ಅಮ್ಮ ಅಪ್ಪ ಹಾಗೆ ಕುಣಿದರೆ ಹೇಗಿರಬಹುದು ಎನ್ನಿಸಿ ನಗು ಬಂತು. ಒಂದು ಕ್ಷಣ ಈ ಹೆಂಗಸರು ಎಷ್ಟು ಅದೃಷ್ಟಶಾಲಿಗಳು ತಮ್ಮ ಗಂಡಂದಿರ ಜೊತೆ ಜೊತೆಯಾಗಿ ಹೀಗೆ ಹಾಡುತ್ತಾ ಕುಣಿಯುತ್ತಾ ಸುಖವಾಗಿದ್ದಾರೆ! ಪಾಪ ಅಮ್ಮ’ ಅನ್ನಿಸಿಬಿಟ್ಟಿತ್ತು. ಹಿಂದೆಯೇ ತಾನೂ ಸರ್ಕಸ್ ಕಂಪನಿಯ ಹುಡುಗನನ್ನೆ ಮದುವೆಯಾಗಬೇಕು ಎನ್ನುವ ನಿರ್ಧಾರಕ್ಕೂ ಬಂದಿದ್ದಳು.
`ಚೆನ್ನಾಗಿತ್ತಲ್ವಾ’ ಎನ್ನುವ ಎಲ್ಲರ ಉದ್ಗಾರದ ನಡುವೆ ಚಿಟ್ಟಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು. `ಏನೇ ಏನೂ ಮಾತಾಡ್ತಾನೇ ಇಲ್ಲ’ ಎಂದ ಸ್ನೇಹಿತೆಯರ ಮಾತಿಗೆ ತನ್ನ ಮನಸ್ಸಿನಲ್ಲಿದ್ದುದ್ದನ್ನ ಹೇಳಿದರೆ ನಗಬಹುದು ಎನ್ನುವ ಅನುಮಾನ ಬಂದು, `ಏನೂ ಇಲ್ಲ ಕಣೆ’ ಎಂದು ಸುಮ್ಮನಾಗಿಬಿಟ್ಟಳು. ರಾತ್ರಿ ದೀಪಾಲಂಕರ ಜಗಮಗಿಸುತ್ತಿದ್ದ ಊರು ತನ್ನದೇನಾ? ಎಂದು ಚಿಟ್ಟಿ ಕಣ್ಣರಳಿಸಿದ್ದಳು. ಎದುರು ಸೀನನ್ನು ಎತ್ತಿಕೊಂಡು ಸಿಕ್ಕ ಅಪ್ಪ, ಚಿಟ್ಟಿಯನ್ನು ತನ್ನ ಜೊತೆ ಕರೆದೊಯ್ದು ಆ ರಾತ್ರಿಯಲ್ಲಿ ಊರನ್ನ ತೋರಿಸಿದ. ಬಾಯಲ್ಲಿ ಇಟ್ಟ ತಕ್ಷಣ ಕರಗುತ್ತಿದ್ದ ಅಜ್ಜಿ ಕೂದಲನ್ನ ಕೊಡಿಸಿದ. `ಬೆಳಗಿನ ಜಾವಕ್ಕೆ ಬೇಗ ಎದ್ದು ಬಂದರೆ ಕೊಂಡ ಹಾಯುವುದನ್ನ ನೋಡಬಹುದು’ ಎಂದು ಮನೆಗೆ ಕರೆದೊಯ್ದ.
ದಾರಿಯುದ್ದಕ್ಕೂ ಅಪ್ಪನ ಜೊತೆ ಮಾತಾಡುತ್ತಾ ಮನೆ ಸೇರುವಾಗ ರಾತ್ರಿ ಹತ್ತಾಗಿತ್ತು. ನಾಳೆ ಅತ್ತೆ ಬರುವ ವಿಷಯವನ್ನು ಹಿಡಿದು ಅಮ್ಮ ಬಾಗಿಲಲ್ಲೆ ನಿಂತಿದ್ದಳು. `ನಾಳೆಯಿಂದ ಸ್ವಲ್ಪ ಮನೆ ಕೆಲ್ಸ ಮಾಡು. ನನ್ನ ಮರ್ಯಾದೆ ತೆಗೀಬೇಡ’ ಎನ್ನುತ್ತಾ ಅವಳನ್ನ ಗದರಿಸಿದ್ದಳು. ಏನನ್ನೋ ಹೇಳಬೇಕು ಅಂದುಕೊಂಡು ಬಂದಿದ್ದ ಅವಳಿಗೆ ಛೇ ಅನ್ನಿಸಿಬಿಟ್ಟಿತ್ತು.
ರಾತ್ರಿಯೆಲ್ಲಾ ಚಿಟ್ಟಿಗೆ ಅದೇ ಕನಸು. ಸರ್ಕಸ್ಸಿನ ಹುಡುಗನೊಬ್ಬ ತನ್ನನ್ನು ಕರೆದ ಹಾಗೆ, ತಾನು ಅವನ ಜೊತೆ ಹೋದ ಹಾಗೆ, ಅವನು ತನ್ನ ಜೊತೆ ಸರ್ಕಸ್ ಮಾಡಿದ ಹಾಗೆ, ಜೊತೆಗೆ ಡಾನ್ಸ್ ಮಾಡಿದ ಹಾಗೆ ಏನೆನೆಲ್ಲಾ ಕನಸು ಬಿತ್ತು. ಅವನ ಜೊತೆ ಸಂತಸದಿಂದ ನಲಿದಾಡುತ್ತಿದ್ದ ಚಿಟ್ಟಿಗೆ ಇದ್ದಕ್ಕಿದ್ದ ಹಾಗೆ ಅವನು ಯಾರು ಎಂದು ನೋಡಬೇಕೆನ್ನಿಸಿತು. ಅವನ ಮುಖವನ್ನು ನೋಡುವಾಗ ತನ್ನನ್ನು `ಬರ್ತೀಯೇನೆ?’ ಎಂದು ಕರೆದಿದ್ದ ಮೇರಿಯಮ್ಮನ ಮಗ ಜೋಸೆಫ್ ಮುಖ! ಕನಸು ಒಡೆದು ಹೋಗಿತ್ತು . ಎದ್ದು ಕೂತ ಅವಳಿಗೆ, ತನಗೆ ಬಿದ್ದಿದ್ದು ಕನಸು ಎಂದು ಅರಿವಾಗಿ ಸಮಾಧಾನವಾಯ್ತು. `ಕೊಂಡ ಹಾಯುವ ಹೊತ್ತಾಯಿತು ಎದ್ಡೇ ಬಿಟ್ಟೆಯಾ? ಬಾ’ ಎನ್ನುತ್ತಾ ಅಪ್ಪ ಅವಳನ್ನ ಕೊಂಡ ಹಾಯುವ ಜಾಗಕ್ಕೆ ಕರೆದೊಯ್ದ. ರಾತ್ರಿಯಿಡೀ ಕಟ್ಟಿಗೆ ಒಟ್ಟಿ ಬೆಂಕಿ ಹಾಕಿ ನಿಗಿ ನಿಗಿ ಕೆಂಡ ಮಾಡಿ, ಅದರ ಮೇಲೆ ಬೇವಿನ ಸೊಪ್ಪನ್ನ ಹಾಕಿದರು. ತಾಯ ಮುಖವಾಡವನ್ನು ಕೊಡಕ್ಕೆ ಕಟ್ಟಿ, ಮಾವು ಬೇವು ಹೂವುಗಳಿಂದ ಅಲಂಕಾರ ಮಾಡಿ ತಲೆಯ ಮೇಲೆ ಹೊತ್ತುಕೊಂಡು ಮೊದಲು ಕೊಂಡ ಹಾದಿದ್ದು ರಂಗಯ್ಯನೇ. ಅವನ ಕಾಲು ಸುಡಲಾರದೇ ಎನ್ನುವ ಅಚ್ಚರಿಯಲ್ಲಿ ನಿಂತಳು. ಸಾಲುಗಟ್ಟಿ ನಿಂತ ಜನರ ಮಧ್ಯೆ ಅಪ್ಪನೂ ಕೊಂಡ ಹಾದಾಗಲಂತೂ ಅಪ್ಪನಿಗೂ ದೇವಿ ಒಲಿದುಬಿಟ್ಟಿರಬೇಕು. . . . . ನಾನು ಅಪ್ಪಿ ತಪ್ಪಿ ಅಪ್ಪನ ಬಗ್ಗೆ ಕೆಟ್ಟದಾಗಿ ಅಂದುಕೊಂಡರೆ ಕೇಡಾದೀತು ಅನ್ನಿಸಿ ಗಾಬರಿಯೂ ಆಯಿತು.
`ಸ್ನಾನ ಮಾಡಿಕೊಂಡು ಬೇಗ ಸಿದ್ಧರಾಗಿ. ದೇವರ ಅಡ್ಡೆ ಹೊರುವ ಹೊತ್ತಿಗೆ ಅಲ್ಲಿರಬೇಕಲ್ವ?’ ಎನ್ನುವಾಗಲೇ ಅತ್ತೆ ಊರಿಂದ ಬಂದಿಳಿದಿದ್ದಳು. ಅವಳ ಬಾಯಿಗೆ ಯಾರಾದರೂ ಹೆದರಲೇ ಬೇಕು, ಅಂಥಾ ಜೋರು ಗಂಟಲು. ಮನೆಯಲ್ಲಿ ಗಲಾಟೆ ಅಜ್ಜಿಯ ಸಂಭ್ರಮ `ಅದ್ಯೇನೆ ಒಬ್ಬಳೇ ಬಂದೆ ಎಲ್ಲೇ ನಿನ್ನ ಗಂಡ?’ ಎನ್ನುತ್ತಾ ಮಾತಿಗೆ ನಿಂತಾಗ `ಅತ್ಗೆ ಕೈಕಾಲು ತೊಳೀರಿ ಕಾಫಿ ಮಾಡ್ತೀನಿ’ ಅಂತ ಅಮ್ಮ ಅಡುಗೆ ಮನೆ ಸೇರಿದಳು. ಚಿಟ್ಟಿಗೆ ನಿರಾಳ. ಅಮ್ಮ ಇನ್ನು ನನ್ನ ಕಡೆ ಗಮನ ಕೊಡಲಿಕ್ಕೆ ಒಂದು ಗಂಟೆಯಾದರೂ ಬೇಕು. ಮೆಲ್ಲಗೆ ಭಾರತಿಯ ಮನೆ ಹಿತ್ತಲ ಕಡೆಗೆ ಸಾಗಿ `ಭಾರತೀ’ ಎಂದು ಕೂಗಿದಳು. ಹೊರಗೆ ಬಂದಿದ್ದು ಭಾರತಿಯಲ,್ಲ ಭಾರತಿಯ ಅಮ್ಮ- ರತ್ನಮ್ಮ. ಜಾತ್ರೆ ದಿನಾನೂ ಏನೇ ನಿಂದು? ಸ್ನಾನ ಪೂಜೆ ಮುಗ್ಸಿ ಅಡ್ಡೆ ಹೊರುವ ಹೊತ್ತಿಗೆ ಸಿದ್ಧವಾಗಬಾರದೇ’ ಎಂದರು.
ಚಿಟ್ಟಿಗೆ ಎಲ್ಲದಕ್ಕಿಂತ ಹೆಚ್ಚಾಗಿ ಬೆಳಗ್ಗೆ ಆ ಹೆಂಗಸರು ಹೇಗಿರಬಹುದು? ಎನ್ನುವ ಕುತೂಹಲ. ಅಲ್ಲಿಂದ ಸೀದಾ ಸರ್ಕಸ್ ಟೆಂಟ್ ಕಡೆಗೆ ಸಾಗಿದ್ದಳು. ರಾತ್ರಿ ಮಾಯಾನಗರಿಯನ್ನು ಹುಟ್ಟುಹಾಕಿದ್ದ ಆ ಜಾಗ ಬಣಗುಡುತ್ತಿತ್ತು. ಟೆಂಟ್ನ ಹಿಂದೆ ಒಲೆ ಉರಿಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಹೊಗೆ ಏಳುತ್ತಿತ್ತು. ಮೆಲ್ಲಗೆ ಚಿಟ್ಟಿ ಆ ಕಡೆಗೆ ಸಾಗಿದ ಚಿಟ್ಟಿಗೆ ಅಲ್ಲಿನ ಆ ದೃಶ್ಯವನ್ನು ನೋಡುತ್ತಾ ದಂಗಾದಳು. ಹಳ್ಳಿಯ ಹೆಂಗಸರಿಗಿಂತ ಕಡೆಯಾಗಿ ಹರಿದ ಬಟ್ಟೆಗಳ ಸಾಮಾನ್ಯ ನೋಟದ ಈ ಹೆಂಗಸರು ರಾತ್ರಿ ಗಂಧರ್ವ ಲೋಕವನ್ನ ಸೃಷ್ಟಿಸಿದ್ದಾದರೂ ಹೇಗೆ? ನೋಡುತ್ತಿದ್ದಂತೆ ಅವರಲ್ಲಿ ಒಬ್ಬ ಗಂಡಸು ಮಾಡಿದ್ದ ಅಡುಗೆ ಚೆನ್ನಾಗಿಲ್ಲವೆಂದು ತಟ್ಟೆಯನ್ನು ಹೆಂಡತಿಯ ಕಡೆಗೆ ರೊಯ್ಯೆಂದು ಬೀಸಿದ್ದ. ಅಲ್ಲೊಂದು ದೊಡ್ಡ ಯುದ್ಧವೇ ನಡೆದು ಹೋಗಿತ್ತ್ತು.
ಚಿಟ್ಟಿ ಸಪ್ಪಗಾಗಿದ್ದಳು. ಅವಳಿಗೆ ಈಗ ಸರ್ಕಸ್ ಹುಡುಗನನ್ನು ಮದುವೆಯಾಗುವ ಕನಸು ಒಡೆದು ಹೋಗಿತ್ತು. ಇದಕ್ಕಿಂತ ತನ್ನ ಅಪ್ಪ ಅಮ್ಮನೇ ವಾಸಿ. ಜಗಳಾಡಿದರೂ ಅಪ್ಪ ಹೊಡೆಯುವ ಮಟ್ಟಕ್ಕೆ ಹೋಗಲಾರ ಅಮ್ಮಾ ಅವನನ್ನ ಕೆಟ್ಟ ಮಾತುಗಳಿಂದ ನಿಂದಿಸಲಾರಳು.
ಸಿಂಗಾರಗೊಂಡ ಅಂತರಗಟ್ಟಮ್ಮನ ಉತ್ಸವ ಮೂತರ್ಿಯನ್ನು ಅಡ್ಡೆ (ಅಡ್ಡಪಲ್ಲಕ್ಕಿ)ಯಲ್ಲಿ ಹೊತ್ತ ಜನ `ತಾಯೀ’ ಎನ್ನುತ್ತಾ ಕೂಗುತ್ತಾ ಚಲಿಸುವಾಗ ಮೇಲೆ ಹಾರಿ ಹೋದ ಗರುಡ. ಬಿದ್ದ ನಾಕು ಹನಿ ಮಳೆ ಜನರ ಮನಸ್ಸಿನಲಿ ಭಕ್ತಿಯ ಉದ್ವಿಗ್ನತೆಯನ್ನು ಕೆರಳಿಸಿತ್ತು. ಹಲಗೆ ತಮ್ಮಟೆಯ ಸದ್ದು ಕಿವಿಯ ತಮ್ಮಟೆಯನ್ನು ಹರಿಯುವಂತೆ ಕೇಳುತ್ತಿತ್ತು. ಮುಸಲ್ಮಾನ ಕಿರಸ್ತಾನರಾದಿಯಾಗಿ ಊರಿನ ಎಲ್ಲಾರೂ ಅಲ್ಲಿ ನೆರೆದು ಕೈ ಮುಗಿದು ನಿಂತಿದ್ದರು. ಚಿಟ್ಟಿ ಕೂಡಾ ಭಾವ ಪರವಶತೆಯಿಂದ ಕಣ್ಣನ್ನ ಮುಚ್ಚಿ `ನನ್ನ ಕಾಪಾಡು, ನನ್ನ ಯಾವುದೇ ಕಾರಣಕ್ಕೂ ಫೇಲ್ ಮಾಡಬೇಡ ತಾಯೀ’ ಎಂದು ಪ್ರಾಥರ್ಿಸಿದ್ದಳು.
ಹಾಗೆ ಚಿಟ್ಟಿ ಭಕ್ತಿ ಪರವಶತೆಯಲ್ಲಿ ನಿಂತಿರುವಾಗಲೇ ಅವಳಿಗೆ ಗೊತ್ತಿಲ್ಲದಂತೆ ಅಲ್ಲೊಂದು ಘಟನೆ ನಡೆದುಹೋಗಿತ್ತು. ಪಕ್ಕದಲ್ಲಿ ನಿಂತಿದ್ದ ಮೇರಿಯಮ್ಮನನ್ನ ನೋಡಿ ಅಮ್ಮನಿಗೆ ಏನನ್ನಿಸಿತೋ ಏನೋ `ನಿಮ್ಮ ಜೋಸೆಫ ನಮ್ಮ ಚಿಟ್ಟಿಯನ್ನು ಬತರ್ಿಯೇನೇ? ಅಂತ ಕರೀಬಹ್ದೆ ಮೇರಿಯಮ್ಮ? ಇದೇನಾ ನಿಮ್ಮ ಹುಡುಗನಿಗೆ ನೀವು ಕಲಿಸಿದ್ದು?’ ಎಂದುಬಿಟ್ಟಿದ್ದಳು. ಹಣೆಗೆ ಬೊಟ್ಟು ಏರಿಸಿ ಹೂಮುಡಿದು ಬಂದಿದ್ದ ಮೇರಿಯಮ್ಮನ ಭಕ್ತಿಯ ಆವೇಶ ಚಕ್ಕೆಂದು ಕರಗಿ ಅಂತರಗಟ್ಟಮ್ಮನೇ ಮೈ ಮೇಲೆ ಬಂದವಳಂತೆ ಹೂಂಕರಿಸಿದಳು. ಅಮ್ಮನ ಮಯರ್ಾದೆ ಹೋಗುವ ಹಾಗೆ `ನಿಮ್ಮ ಹುಡುಗಿ ಮೈಲಿ ನನ್ನ ಮಗಾ ಕರೆಯೋ ಅಂಥಾದ್ದು ಏನ್ ಬಲ್ತಿದೆ ತೋಸರ್ು? ಅದೊಂದು ಸಪೂರ ಕೋಲು. ಅದನ್ನ ತಗೊಂಡು ನನ್ನ ಮಗ ಏನ್ ಮಾಡ್ತಾನೆ?’ ಅಂತ ಆವೇಶದಿಂದ ಎಲ್ಲರಿಗೂ ಕೇಳುವ ಹಾಗೆ ಹೇಳಿದ್ದಳು. ಜಾತ್ರೆಯ ಗದ್ದಲದ ನಡುವೆಯೂ ಹಾಗೆಂದ ಮೇರಿಯಮ್ಮನ ಕಡೆಗೆ ಜನ ತಿರುಗಿ ನೋಡಿದ್ದರು. ಅವಮಾನದಿಂದ ಕುದಿಯುತ್ತಾ ಅಲ್ಲೇ ಇದ್ದ ಚಿಟ್ಟಿಯನ್ನು ಅಮ್ಮ ದರದರನೆ ಎಳೆದುಕೊಂಡು ಮನೆಯ ಕಡೆಗೆ ಸಾಗಿದ್ದಳು. ತಮ್ಮಟೆ ಹಲಗೆಯ ಶಬ್ದ ಚಿಟ್ಟಿಯ ಅಳುವನ್ನು ನುಂಗಿಹಾಕುತ್ತಿದ್ದವು.
(ಮುಂದುವರೆಯುವುದು…)

‍ಲೇಖಕರು avadhi

August 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: