ಪಿ ಚಂದ್ರಿಕಾ ಕಾದಂಬರಿ ಆರಂಭ: ಚಿಟ್ಟಿಯಾದ ಪರಿ

ಚಿಟ್ಟಿಯಾದ ಪರಿ

ನಾನು ತೀರಾ ಹತ್ತಿರದಿಂದ ಕಂಡ ನನ್ನೊಳಗೆ ಮನೆ ಮಾಡಿಕೊಂಡಿರುವ ಹುಡುಗಿ ಚಿಟ್ಟಿ ಅಲಿಯಾಸ್ ಸಿರೀಶ. ಸಿರಿಯೇ ಇಲ್ಲದ ಮನೆಯೊಂದರಲ್ಲಿ ಸಿರಿಯ ಹೆಸರಲ್ಲಿ ಕರೆಯುತ್ತಿದ್ದ ಹುಡುಗಿ ಅವಳು. ಒಂದರ್ಥದಲ್ಲಿ ಅವಳು ದುರಾದೃಷ್ಟದ ಹುಡುಗಿಯೇ. ಅವಳು ಹುಟ್ಟಿದ ಕೆಲವೇ ತಿಂಗಳಿನಲ್ಲಿ ಅಪ್ಪ ಬೇರೆ ಮದುವೆ ಮಾಡಿಕೊಂಡ ವಿಷಯ ಅಮ್ಮನ ಕಿವಿಗೆ ಬಿದ್ದಿತ್ತು. ಹಸೀ ಬಾಣಂತಿ ಅತ್ತು ಅತ್ತೂ ಮೈ ನಂಜಾಗುತ್ತೆ ಮತ್ತೆ ನಿನ್ನ ಮಗುವಿಗೇ ಅದರಿಂದ ಕಷ್ಟ ಎಂದು ಮುತ್ತಜ್ಜಿ ಹೇಳಿದ್ದರಿಂದ ಅವಳ ಅಮ್ಮ ನೋವನ್ನ ಸಹಿಸಿಕೊಂಡು ಕತ್ತಲೆಯ ಕೋಣೆಯಲ್ಲೇ ಕಾಲ ಕಳೀತಿದ್ದಳಂತೆ. ಅವಳ ಹಿಂದೆ ಒಬ್ಬ ತಂಗಿ ಒಬ್ಬ ತಮ್ಮ ಜಾಸ್ತಿ ಅಂತರಗಳೇ ಇಲ್ಲದೆ ಹುಟ್ಟಿದ್ದರು. ಹಾಗಾಗಿ ಅವಳು ಬಹುಬೇಗ ದೊಡ್ಡವಳಾಗಿಬಿಟ್ಟಿದ್ದಳು.
ಮನೆಗೆ ಹಿರಿಯವಳಾದ ಚಿಟ್ಟಿ ಹುಟ್ಟಿದಾಗ ಅಪ್ಪನ ಮನೆಯ ಕಡೆಯಾಗಲೀ ಅಮ್ಮನ ಮನೆಯ ಕಡೆಯಾಗಲೀ ಸಣ್ಣ ಮಕ್ಕಳೇ ಇರಲಿಲ್ಲ. ಮೊದಲ ಸಲ ನೋಡಲು ಬಂದಿದ್ದ ಅವಳ ಸೋದರ ಅತ್ತೆ ಗುಂಡಮ್ಮ ಅಂತ ಕರೆದಿದ್ದರಂತೆ. ಇನ್ನ ಗುಂಡಮ್ಮ ಅನ್ನೋ ಹೆಸರು ಎಲ್ಲಿ ಶಾಶ್ವತವಾಗಿಬಿಡುತ್ತೋ ಎನ್ನುವ ಹೆದರಿಕೆಯಿಂದ ಅಮ್ಮ ನನ್ನನ್ನು ಚಿಟ್ಟಿ ಅಂತ ಕೂಗೋಕ್ಕೆ ಶುರು ಮಾಡಿದಳಂತೆ. ತೆಲುಗು ಮನೆಯಿಂದ ಬಂದಿದ್ದ ಅಮ್ಮನಿಗೆ ಆ ಹೆಸರು ಸಹಜವಾಗೇ ಆಪ್ಯಾಯಮಾನವಾಗಿತ್ತು. ಅಂಧಕಾರದ ತನ್ನ ಬದುಕಿಗೆ ಚಿಕ್ಕ ಬೆಳಕನ್ನ ತಂದವಳು ಚಿಟ್ಟೆ.
ಚಿಟ್ಟಿ ಅಂದ್ರೆ ಚಿಕ್ಕ, ಸಣ್ಣ ಮುಗ್ಧವಾದ ಎನ್ನುವ ಎಲ್ಲ ಅರ್ಥಗಳೂ ತೆಲುಗಿನಲ್ಲಿದೆ. ಹೂವಿನ ಎಸಳಿನ ಹಾಗೆ ಮೃದುವಾಗಿದ್ದ, ಕೆಂಪಗೆ ಗುಂಡಗೆ ಇದ್ದ ಚಿಟ್ಟಿಯನ್ನ ನೋಡೋಕ್ಕೆ ಅಂತ ಅಕ್ಕಪಕ್ಕದ ಮನೆಯವರು ಸದಾ ಬರುತ್ತಿದ್ದರಂತೆ. ಅವರೆಲ್ಲ ಬಂದು ಹೋದಮೇಲೆ ಮುತ್ತಜ್ಜಿ ಯಾವ ಕೆಟ್ಟ ಕಣ್ಣೂ ಅವಳನ್ನ ನಲುಗಿಸೀತೋ ಎಂದು ದೃಷ್ಟಿ ತೆಗೆದು ಹಾಕುತ್ತಿದ್ದಳಂತೆ.
ಇಂಥಾ ಚಿಟ್ಟಿಗೆ ಮೊದಲ ಗಂಡಾಂತರ ಒದಗಿ ಬಂದಿದ್ದೆ ಹದಿನೈದು ದಿನಗಳ ಮಗು ಇದ್ದಾಗ. ಹಾಲು ಮೈನ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಸಾಂಬ್ರಾಣಿಯ ಹೊಗೆಯಲ್ಲಿ ಹೊರಳಾಡಿಸಿ ತೊಟ್ಟಿಲಲ್ಲಿ ಮಲಗಿಸಿ ಲಾಲಿ ಹಾಡಿದ ನಂತರ ಅಮ್ಮ ಊಟಕ್ಕೆ ಕೂತಿದ್ದಾಳೆ. ಆಗ ಅದ್ಯಾವ ಮಾಯದಲ್ಲಿ ದೊಡ್ಡ ಬೇಟೆ ಜಾತಿಯ ನಾಯೊಂದು ತೊಟ್ಟಿಲ ಬಳಿಗೆ ಬಂದು ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿಟ್ಟಿದ್ದ ಅವಳನ್ನ ಮೂಸಿತ್ತಾ ನಿಂತಿತ್ತಂತೆ ಏನೋ ಬುಸ ಬುಸ ಶಬ್ದ ಕೇಳಿತಲ್ಲಾ ಹಾವೇನಾದ್ರೂ ಬಂತಾ ಅಂತ ತಿರುಗಿ ನೋಡಿದ ಅಮ್ಮನಿಗೆ ಕಂಡಿದ್ದು ತನ್ನ ಚಿಟ್ಟಿ ಕಂದನನ್ನ ಮೂಸುತ್ತಾ ನಿಂತಿದ್ದ ರಾಕ್ಷಸ ನಾಯಿ.
ಅವಳನ್ನ ಕಾಪಾಡಲಿಕ್ಕೆ ಅಮ್ಮ ಅಲ್ಲೇ ಇಟ್ಟಿದ್ದ ಬಡಗೆಯನ್ನ ತೆಗೆದುಕೊಂಡು ಒಂದೇ ಸಮನೆ ನಾಯ ಮೇಲೆ ಆಕ್ರಮಣ ಮಾಡಿದ್ದಾಳೆ . ನಾಯಿ ಆ ರೌದ್ರಾವತಾರಕ್ಕೆ ಹೆದರಿ ಓಡಿ ಹೋಯ್ತಂತೆ. ಆದರೆ ಅಮ್ಮನ ಭಯ ಮಾತ್ರ ಕಡ್ಮೆ ಆಗಲೇ ಇಲ್ಲ. ಆಮೇಲೆ ಚಿಟ್ಟೆ ಹೊಟ್ಟೆಯ ಮೇಲೆ ತೆವಳುತ್ತಾ ನಿಂತು ತಟ್ಟಾಡುತ್ತಾ ನಡೆದು ದೃಢವಾಗುವವರೆಗೂ ಕಣ್ನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಳಂತೆ. ಇಂಥಾ ಚಿಟ್ಟಿ ಇನ್ನು ಮುಂದೆ ಮೈ ತಾಳಲಿದ್ದಾಳೆ.
ಚಿಟ್ಟಿ -೧

ಓ ಎನ್ನುತ್ತಾ ಅಷ್ಟು ದೂರಕ್ಕೆ ಮಲಗಿದ್ದ ರಸ್ತೆಯ ತುದಿಯನ್ನ ನಿರುಕಿಸುತ್ತಾ ನಿಂತಿದ್ದ ಚಿಟ್ಟಿಗೆ ಕ್ಷಣ ಕ್ಷಣಕ್ಕೂ ನಿರಾಸೆ ಆವರಿಸುತ್ತಿತ್ತು. ತನ್ನನ್ನು ಇಲ್ಲಿ ಕಾಯಿಸ್ತಾ ಹೀಗೆ ಬಿಸಿಲಲ್ಲಿ ನಿಲ್ಲಿಸಿ ನೆಲ್ಲಿಕಾಯಿ ಉಪ್ಪಿನಕಾಯನ್ನ ತೊಳೆದು ತರ್ತೀನಿ ಅಂತ ಹೋಗಿದ್ದ ಮಂಗಳಿ ಇನ್ನೂ ಬರದೇ ಹೋಗಿದ್ದರ ಹಿಂದೆ ಯಾವುದೋ ಕುತಂತ್ರ ಅಡಗಿದ್ದಿದ್ದು ಅವಳಿಗೆ ಸ್ಪಷ್ಟವಾಗ ತೊಡಗಿತ್ತು. ಕೋಪ ಅಸಹಾಯಕತೆಯಾಗಿ, ಅದು ಅಳುವಾಗಿ ಕೆನ್ನೆ ಮೇಲೆ ಜಾರಿದ ಹನಿಯನ್ನ ಒರೆಸಿಕೊಳ್ಳುವಾಗಲೇ ದೂರಕ್ಕೆ ಕಾಣಿಸಿದ ಕೆಂಪು ಲಂಗ ಸ್ವಲ್ಪ ಸಮಾಧಾನವನ್ನ ತಂದಿತ್ತು. ‘ಆಟಕ್ಕೂ ಬರ್ದೆ ಇಲ್ಯಾಕೆ ನಿಂತ್ಯೆ’ ಎಂದ ಭಾರತಿಯ ಮಾತಿಗೆ ಒಳಗಿದ್ದ ಕೋಪವೆಲ್ಲಾ ಹೊರಕ್ಕೆ ಪಟ್ಟೆಂದು ಬಂದು ‘ಆ ಮಂಗ್ಳಿ ನೆಲ್ಲಿಕಾಯಿ ಉಪ್ಪಿನ ಕಾಯಿ ತರ್ತೀನಿ ಅಂತ ಹೋದ್ಲು. ಇಷ್ಟ್ ಹೊತ್ಟ್ಟಾದ್ರೂ ಬರ್ಲೇ ಇಲ್ಲ’ ಎನ್ನುತ್ತಾ ಅರ್ಧ ಅಳು ಅರ್ಧ ಸಿಟ್ಟಿನಿಂದ ಹೇಳಿದಾಗ-‘ ಓ ಅದಕ್ಕೇನಾ ಮಂಗ್ಳೀಗೆ ಸರ್ಯಾಗ್ ಲಾತ ಬಿಳ್ತಾ ಇರೋದು. ಅವ್ರಮ್ಮಾ ಊರಲ್ಲಿರೋರ್ನೆಲ್ಲಾ ಸೇರ್ಸಿ ಬೈತಾ ಬಿದ್ದಿದ್ದಾಳೆ’ ಎಂದ ಭಾರತಿಯ ಉದ್ಗಾರದ ಮಾತಿಗೆ ಚಿಟ್ಟಿಯ ಕೋಪ ಮಂಜಿನ ಹಾಗೆ ಕರಗಿಹೋಗಿ ಕಳವಳ ಮನೆ ಮಾಡಿತ್ತು. ‘ಹೌದಾ ಮಂಗ್ಳಿಗೆ ಅವ್ರಮ್ಮಾ ಹೊಡೀತಾ ಇದಾಳಾ? ಪಾಪ ನಾನು ಅವಳ ಬಗ್ಗೆ ತಪ್ಪು ತಿಳಿದ್‌ಬಿಟ್ಟಿದ್ದೆ’ ಎನ್ನುತ್ತಾ ಭಾರತಿಯ ಕಡೆ ನೋಡಿದಾಗ ಅವಳ ದೊಡ್ದ ಕಣ್ಣುಗಳಲ್ಲಿ ಮಂಗಳಿಯ ಬಗ್ಗೆ ವಿಷಾದ ಮಡುಗಟ್ಟಿತ್ತು . ‘ನನ್ನ ಬಗ್ಗೆ ಬಾಯಿ ಬಿಟ್ಟಳಾ’ ಎಂಬ ಚಿಟ್ಟಿಯ ಪ್ರಶ್ನೆಗೆ ‘ನಿನ್ನ ಯಾವತ್ತಾದ್ರೂ ಬಿಟ್ಟು ಕೊಟ್ಟಿದ್ದಿದ್ಯಾ’ ಎನ್ನುವಲ್ಲಿನ ಭಾರತಿಯ ಮಾತುಗಳಲ್ಲೂ, ಮಂಗಳಿ ತಿಂದ ಒದೆಗಳಲ್ಲಿಯೂ ಚಿಟ್ಟಿಗೆ ಸ್ನೇಹದ ಅನಂತ ಅವಕಾಶ ಕಂಡಿದ್ದು ಮಾತ್ರಾ ಸತ್ಯವಾಗಿತ್ತು

ಇತ್ತ ಒದೆ ತಿಂದು ಮುಲುಕುತ್ತಾ ಕಣ್ಣ ನೀರನ್ನ ಧಾರಾಕಾರ ಹರಿಸುತ್ತಾ ಕೂತಿದ್ದ ಮಂಗಳಿಯನ್ನ ನೋಡಿದ ವೆಂಕಣ್ಣಾಚಾರರಿಗೆ ಪಾಪಾ ಅನ್ನಿಸಿ ವಟಗುಟ್ಟತ್ತಲೇ ಇದ್ದ ಹೆಂಡತಿಗೆ ‘ಲೇ ಯಾಕೆ ಮಗೂನ ಹೀಗ್ ಹೊಡೆದ್ ಹಾಕಿದ್ದೀಯಾ’ ಅಂತ ಒಂದು ಮಾತನ್ನ ಅಂದಿದ್ದೇ ತಡ ಕಮಲಮ್ಮನಿಗೆ ಎಲ್ಲಿತ್ತೋ ಕೋಪ ತಿಳೀಲಿಲ್ಲ. ವೆಂಕಣ್ಣಾಚಾರರ ಮೇಲೆ ಕವ್ವೆಂದು ‘ವರ್ಷಪೂರ್ತಿಗಾಗಿ ಅಂತ ಮಾಡಿಟ್ಟಿದ್ದ ಉಪ್ಪಿನ ಕಾಯ ಒಳಗೆ ಕೊಳಕು ಕೈಯ್ಯನ್ನ ಹಾಕಿದ್ರೆ ಏನ್ ಗತಿ ಉಪ್ಪಿಗೆ ಉಪ್ಪೂ ಹಾಳು ಕಾಯಿಗೆ ಕಾಯೂ ಹಾಳು. ಯಾವ್ದೋ ರಂಡೆ ಹೇಳಿರ್ತಾಳೆ ತಗೊಂಡ್ ಬಾ ಅಂತ ಇವ್ಳು ಸೀದಾ ಜಾಡಿಗೆ ಕೈ ಹಾಕಿದ್ಲು. ಇವ್ಳನ್ನ ತುಂಬಾ ಮುದ್ದಿಸ್ಬೇಡಿ, ಹಾ ಇಷ್ತೆಲ್ಲಾ ಆಗ್ತಾ ಇರೋದೇ ನಿಮ್ಮ ಕಾರಣಕ್ಕಾಗಿ. ನೀವು ಸರಿಯಿದ್ದಿದ್ದರೆ ಇದೆಲ್ಲಾ ಆಗ್ತಾ ಇತ್ತಾ?’ ಎನ್ನುತ್ತಾ ಗಂಡನ ಮೇಲೆ ಹೋದಾಗ ವೆಂಕಣ್ಣಾಚಾರ ಕೈ ಅವರ ಬೊಕ್ಕಾ ತಲೆ ಮೇಲೆ ಆಡಿ ಮಾತಾಡಿದ್ರೆ ಇನ್ನೇನು ಗ್ರಹಚಾರವೋ ಎಂದು ಹೆಗಲಿನ ಟವಲ್ಲನ್ನ ಜಾಡಿಸಿ ಸೀದಾ ಹಿತ್ತಲಿಗೆ ಸಾಗಿದ್ದರು. ಮಂಗಳಿ ಮಾತ್ರ ಅಪ್ಪ ಅಮ್ಮರ ಮಾತಿಗೆ ಮತ್ತಷ್ಟು ಬಿಕ್ಕುತ್ತಾ ಮೂಲೆಯಲ್ಲಿ ಕೂತಿದ್ದಳು.
‘ಎಲ್ಲೆ ನಿನ್ನ ಮಗಳು?’ ಎನ್ನುತ್ತಾ ಅಜ್ಜಿ ಹತ್ತು ಸಲ ಕೇಳಿದ್ದರ ಪರಿಣಾಮ ಸಪ್ಪಗೆ ಮನೆಗೆ ಬಂದ ಚಿಟ್ಟಿಯನ್ನ ನಿಟಾ ನಿಲುವಲ್ಲಿ ನಿಲ್ಲಿಸಿ ‘ಅಮ್ಮಾ ಮುಸ್ಸಂಜೆ ಹೊತ್ತಲ್ಲಿ ಆಡ್ಬೇಡ ಅಂತ ನಿಂಗೆ ಹೇಳಿರಲಿಲ್ವಾ? ಯಾಕೆ ತಡ ಮಾಡ್ ಬಂದೆ? ಎನ್ನುತ್ತಾ ಸಹಸ್ರನಾಮ ಮಾಡುವಾಗ ಚಿಟ್ಟಿಗೆ ದುಃಖ ಉಮ್ಮಳಿಸಿ ತನ್ನ ಕಾರಣಕ್ಕೆ ಮಂಗಳಿ ತಿಂದ ಒದೆಗಳನ್ನೂ ನೆನೆಸಿಕೊಂಡು ಅಮ್ಮನನ್ನ ಹಿಡಿದುಕೊಂಡು ಹೋ ಅಂತ ಅತ್ತುಬಿಟ್ಟಿದ್ದಳು. ಹನ್ನೆರಡರ ಪ್ರಾಯದ ತನ್ನ ಮಗಳು ಹೀಗೆ ಅಳೋದಕ್ಕೆ ಕಾರಣ ಏನು ಅಂತ ತಿಳಿಯದ ಅಮ್ಮ ‘ಏನಾಯ್ತೇ ಚಿಟ್ಟಿ?’ ಎನ್ನುತ್ತಾ ಅವಳನ್ನ ತಬ್ಬಿ ನಿಂತಾಗ -ಹೀಗ್ ಹೀಗಾಯ್ತು ಅನ್ನೋದನ್ನ ಅಮ್ಮಂಗೆ ಹೇಳಿದ್ರೆ ಬೈದೇ ಬಿಡ್ತಾಳಾ ಅಪ್ಪಂಗೆ ಹೇಳಿ ನನ್ನ ಮನೆಯಿಂದ ಹೊರಗೇ ಹೋಗದ ಹಾಗೇ ಮಾಡಿ ಬಿಡ್ತಾಳೆ ಎಂದುಕೊಂಡು ಎಂದೋ ಒಂದು ದಿನ ಆಚೆ ಬೀದಿಯ ತನಗಿಂತ ನಾಕು ವರ್ಷ ದೊಡ್ಡವ ಜೋಸಫ್ ಬರ್ತೀಯೇನೇ ಎಂದು ಅಸಹ್ಯವಾಗಿ ಕರೆದದ್ದನ್ನ ನೆನೆಸಿಕೊಂಡು ಇನ್ನಷ್ಟು ದುಃಖವನ್ನ ತಂದುಕೊಂಡು ಅಮ್ಮನಿಗೆ ಉಪ್ಪುಕಾರ ಬೆರೆಸಿ ಹೇಳೇಬಿಟ್ಟಳು.
ಅಮ್ಮನಿಗೆ ನಖಶಿಖಾಂತ ಉರಿದುಹೋಯಿತು. ತಮ್ಮಂತ ನಿಷ್ಠಾವಂತ ಬ್ರಾಹ್ಮಾಣರ ಮನೆಯ ಅದೂ ಮೈ ನೆರೆಯದ ಹುಡುಗಿಯನ್ನೂ ಒಬ್ಬ ಕಿರಸ್ತಾನರವ ಕರ್ಯೋದು ಅಂದ್ರೆನು? ಇವತ್ತು ಆ ಮೇರಿಯಮ್ಮನಿಗೆ ಹೇಳಿ ಅವನ ಗಾಳಿ ಬಿಡುಸ್ತೀನಿ ಅಂತ ಹೊರಟ ಅವಳನ್ನ ನೋಡಿ ಚಿಟ್ಟಿಗೆ ಇದ್ಯಾಕೋ ಬೇರೆ ದಾರೀನೇ ಹಿಡೀತಾ ಇದೆ ಅನ್ನಿಸಿ ಇನ್ನಷ್ಟು ದುಃಖ ಆವರಿಸಿಬಿಟ್ಟಿತ್ತು. ಅಷ್ಟರಲ್ಲಿ ಬಂದ ಅಪ್ಪ ‘ನೀನ್ ಹೀಗೆ ಬಾಯ್ಮಾಡಿದ್ರೆ ನಮ್ಮ ಮರ್ಯಾದೇನೇ ಅಲ್ವಾ ಹೋಗೋದು? ಹುಡ್ಗಿ ವಯಸ್ಸಿಗೆ ಬರ್ತಾ ಇದಾಳೆ ಅವಳಿಗೆ ತಿಳುವಳಿಕೆ ಕೊಡು. ಒಬ್ಬಳನ್ನೆ ಬಿಡ್ಬೇಡ. ಅದೆಲ್ಲಾ ಬಿಟ್ಟು ಇದೇನು ನಿನ್ನ ರಾಮಾಯ್ಣ’ ಎನ್ನುತ್ತಾ ಅಪ್ಪ ರೇಗಿದ ನಂತರ ಅಮ್ಮಾ ಗೊಣಗುತ್ತಲೆ ಒಳಗೇ ಹೋದಳು. ಚಿಟ್ಟಿಗೆ ನಿರಾಳ. ಇನ್ನೆಂದೂ ಜೋಸಫನ ವಿಷಯ ಎತ್ತಲೇಬಾರದು ಎನ್ನುವ ನಿರ್ಧಾರಕ್ಕೆ ಆಗಲೇ ಬಂದುಬಿಟ್ಟಿದ್ದಳು. ಅದು ಅವಳ ಜೀವನದ ದೊಡ್ಡ ತಿರುವಾಗುವ ಸಂಗತಿ ಅನ್ನೋದು ಅವಳಿಗೆ ತಿಳಿಯಲು ಸಾಧ್ಯವೇ ಇರಲಿಲ್ಲ . ಅವಳ ಮನಸ್ಸಿನ ತುಂಬಾ ತುಂಬಿದ್ದು ಮಂಗಳಿ, ಅವಳ ಅಳು ಮಾತ್ರ. ನಾಳೆ ಅವಳನ್ನ ಮಾತಾಡ್ಸಿ ಸಮಾಧಾನ ಮಾಡ್ಬೇಕು ಅಂದುಕೊಂಡೇ ಅಮ್ಮ ಕೊಟ್ಟ ಅನ್ನವನ್ನ ರುಚಿಯನ್ನೂ ನೋಡದೆ ನುಂಗಿಬಿಟ್ಟಿದ್ದಳು.
ರಾತ್ರಿ ಊಟ ಮುಗಿಸಿ ಮಲಗಿದ ಚಿಟ್ಟಿಗೆ ಬೆಳಗಾಗಿದ್ದು ತಿಳಿದಿದ್ದೇ ಅಮ್ಮನ ಅಳುವಿಂದ. ‘ರತ್ನೈ ಕಲ್ಪಿತ ಮಾಸನಂ ಹಿಮಜಲೈ ಸ್ನಾನಂಚ ದಿವ್ಯಾಂಬರಂ॒’ ಹಾಳ್ ರಂಡೆ ಬೆಳಗ್ಗೆ ಬೆಳಗ್ಗೇನೇ ಯಾಕೆ ಅಳ್ತೀಯಾ ಹೊತ್ತಿಲ್ಲ ಗೊತ್ತಿಲ್ಲ ಹೊರಗ್ ಹೋಗೋ ಗಂಡನ್ನ ನಿಲ್ಸಿ ಹಿಂಗೆಲ್ಲಾ ರಂಪ ಮಾಡಿದ್ಯಲ್ಲ ನನ್ನ್ ಮಗ ಆಗೋ ಹೊತ್ಗೆ ಬಿಟ್ಟ ಇಲ್ಲ ಅಂದಿದ್ರೆ . . . . . . ‘ನಿತ್ಯಾನಂದಕರೀ ವರಾಭಯಕರಿ’ ಎನ್ನುತ್ತಾ ರಾಗದ ಜೊತೆ ಕೋಪ ಬೆರೆಸಿ ಚಿಟ್ಟೆಯ ಅಜ್ಜಿ ಶ್ಲೋಕವನ್ನ ಹೇಳತೊಡಗಿದಾಗ ಅಮ್ಮ ಇನ್ನೂ ಕಣ್ಣು ಬಿಡದ ಚಿಟ್ಟಿಯನ್ನ ಹೊಡೆಯುತ್ತಾ ‘ಏಳೇ ಸ್ಕೂಲಿಗೆ ಹೊತ್ತಾಯ್ತು ಎಷ್ಟ್ ಹೊತ್ತು ಮಲ್ಗೊದು? ನೀನೇನು ಮಹಾರಾಜನ ಮೊಮ್ಮಗಳಾ? ಎಂದಾಗ ಏನಾಗ್ತಾ ಇದೆ ಅಂತ ಅರ್ಥವಾಗದೆ- ಆಗತಾನೆ ಕಣ್ಣು ಬಿಡ್ತಾ ಇದ್ದ ಚಿಟ್ಟಿಗೆ ಗಾಬರಿ, ಜೊತೆಗೆ ಅಳು ಎರಡೂ ಸೇರಿ ಕೀರಲು ಧ್ವನಿಯಿಂದ ಕಿರುಚತೊಡಗಿದ್ದಳು. ಗಂಡನ ಮೇಲಿನ ಸಿಟ್ಟಿಗೆ ಮೊಮ್ಮಗಳನ್ನ ಹೊಡದದ್ದಕ್ಕೆ ಅಜ್ಜಿಗೆ ಕೋಪ ಬಂದು ಮಡಿ ಉಟ್ಟಿದ್ದನ್ನೂ ಮರೆತು ಬಂದು ಅಮ್ಮನ ಕೈಯ್ಯನ್ನ ಹಿಡಿದು ಎಳೆದು ನಿನ್ನ ಕೈ ಕತ್ತರಿಸಿ ಬಿಟ್ಟೇನು ಹುಷಾರ್ ಎನ್ನುತ್ತಾ ಎರಡು ಏಟನ್ನ ಹಾಕಿದಾಗ ಅಮ್ಮ ಎದುರು ಮಾತಾಡದೆ ಅಳುತ್ತಾ ಹಾಸಿಗೆಯನ್ನ ಮಡಚತೊಡಗಿದ್ದಳು . ಏನಾಗ್ತಾ ಇದೆ ಎಂದು ಗಾಬರಿಯಿಂದ ನೋಡುತ್ತಾ ಕುಳಿತಿದ್ದ ಚಿಟ್ಟಿಗೆ ‘ಏಳೇ ನಿಂಗೇಂತ ಅಕ್ಕಿ ರೊಟ್ಟಿನ ಮುತ್ತಗದೆಲೇಲಿ ಸುಟ್ಟಿಟ್ಟಿದ್ದೀನಿ. ಬೆಣ್ಣೆ ಸವ್ರಿ ಕೊಡ್ತೀನಿ’ ಎಂದಾಗ ಅಜ್ಜಿಯಷ್ಟು ಒಳ್ಳೆಯವಳು ಇನ್ಯಾರು ಇಲ್ಲ ಅನ್ನಿಸಿಬಿಟ್ಟಿತ್ತು . ಅಮ್ಮ ಯಾಕೆ ಅಳುತ್ತಿದ್ದಳು? ಅಜ್ಜಿ ಯಾಕೆ ಅವಳನ್ನ ಬೆಯುತ್ತಿದ್ದಳು ಎಲ್ಲವನ್ನೂ ಮರೆತು ಬಚ್ಚಲ ಮನೆಯ ಕಡೆಗೆ ಓಡಿದ್ದಳು.
ಹುರಳಿಯ ಕಾಳನ್ನ ಹುರಿದು ಶರ್ಟಿನ ಜೇಬಿಗೆ ತುಂಬಿಕೊಂಡ ಭಾರತಿ ಸ್ಕೂಲಿಗೆ ಕರೆಯೋಕ್ಕೆ ಬಂದಾಗ ‘ಪುಟ್ಟೀನ ಕರ್ಕೊಂಡ್ ಹೋಗೆ ಮತ್ತೆ ಅವಳನ್ನ ಬಿಡೋಕ್ಕೆ ಸ್ಕೂಲಿನತನಕ ನಾನು ಬರೋಕ್ಕಾಗಲ್ಲ’ ಎನ್ನುತ್ತಾ ಸೊಂಟದಲ್ಲಿದ್ದ ತಮ್ಮನನ್ನ ಸರಿಯಾಗಿ ಕೂಡಿಸಿಕೊಳ್ಳುತ್ತಾ ಅಮ್ಮ ಹೇಳಿದಾಗ ಹೂಂ ಎಂದು ಹರಿದುಹೋದ ಬ್ಯಾಗನ್ನ ಹೆಗಲಿಗೆರಿಸಿ ‘ಬಂದೇ ಇರೇ’ ಎನ್ನುತ್ತಾ ಬಂದ ಪುಟ್ಟಿಯನ್ನೂ ಎಳೆದುಕೊಳ್ಳುತ್ತಾ ಸಾಗುವಾಗ ಅಜ್ಜಿ ಅವಳನ್ನ ‘ಏಯ್ ನಿಲ್ಲೇ’ ಎನ್ನುತ್ತಾ ಭಾರತಿಯನ್ನ ನಿಲ್ಲಿಸಿ -ಬರೋ ವಯಸ್ಸಿಗೆ ಎಲ್ಲಾ ಬರುತ್ತೆ. ಕಂಡೋರ್ ಕಣ್ಣು ಕುಕ್ಕುತ್ತೆ. ಇನ್ನು ಮುಂದೆ ನೀನು ಹೀಗೆಲ್ಲಾ ಮೇಲಿನ ಜೇಬಿಗೆ ಏನೇನೆಲ್ಲಾ ತುಂಬಿಕೊಂಡು ಬರಬೇಡ ಆಯ್ತಾ ಎಂದಾಗ ಚಿಟ್ಟಿಗೆ ಅಚ್ಚರಿ. ಭಾರತಿ ಅವಮಾನದಿಂದ ಮುಖವನ್ನ ಊದಿಸಿಕೊಂಡು ‘ನಿಮ್ಮಜ್ಜಿ ಸರಿಯಿಲ್ಲ ಕಣೆ’ ಎನ್ನುತ್ತಾ ಚಿಟ್ಟಿಯನ್ನ ಬಿಟ್ಟು ಸಾಗಿದ್ದಳು. ಚಿಟ್ಟಿ ಮೊದಲ ಬಾರಿಗೆ ಇದೆಲ್ಲಾ ಯಾಕೆ ಹೀಗೆ ಎನ್ನುವ ದೊಡ್ಡ ಗೊಂದಲಕ್ಕೆ ಸಿಕ್ಕಿ ಬಿದ್ದಿದ್ದಳು.
(ಮುಂದುವರೆಯುವುದು…)

‍ಲೇಖಕರು avadhi

July 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. narayan raichur

    kadambariya hesare chennagide-istavagutte : aarambha kutuhalavannu munduvarisikondu hogutte ; “Nityandakari – varaa bhayakari ” hidisitu ; shubhechchegalu !!- narayana raichur

    ಪ್ರತಿಕ್ರಿಯೆ
  2. Nalina venkatanag

    “ಚಿಟ್ಟಿ ” ಹೆಸರೇ ಬಹಳ ಅಪ್ಯಾಯಮಾನವಾಗಿದೆ . ಒಳ್ಳೆಯ ಆರಂಭ .

    ಪ್ರತಿಕ್ರಿಯೆ
  3. ಆನಂದ್ ಸಭಾಪತಿ

    ಚೆಂದ ಇದೆ
    ಕುಟುಂಬದ ಚಿತ್ರಣ ನನ್ನ ಚಿಕ್ಕವಯಸ್ಸಿನ ದಿನಗಳನ್ನು ನೆನಪು ಮಾಡುತ್ತದೆ ಪಾತ್ರಗಳು ತುಂಬಾ ಆಪ್ತ ಎನ್ನಿಸಿತು. ಕುತೂಹಲ ಕೆರಳಿಸುತ್ತೆ ಅನ್ನಿಸುತ್ತೆ.ಓದುವುದೇ ಚಟವಿಲ್ಲದ ನಾನೂ ಒಬ್ಬ ನಿಮ್ಮ ಓದುಗನಾದೆ. ಧನ್ಯವಾದಗಳು.

    ಪ್ರತಿಕ್ರಿಯೆ
  4. lalitha siddabasavaiah

    ಚಂದ್ರಿಕಾ,ಇದು ಸೊಗಸಾದ ಶುರುವು, ನಿಮ್ಮ ಗದ್ಯ ತುಂಬ ಸೊಗಸಾಗಿದೆ, ಬೆಣ್ಣೆ ಸವರಿ ಎಲೆಯೊಳಗೆ ಸುತ್ತಿಟ್ಟ ಆಕ್ಕಿರೊಟ್ಟಿಯ ಹಾಗೆ.ಮುಂದಿನ ಕಂತಿಗೆ ಕಾಯುವೆ .

    ಪ್ರತಿಕ್ರಿಯೆ
  5. ಉದಯಕುಮಾರ್ ಹಬ್ಬು

    ಕಾದಂಬರಿಯ ಪ್ರಾರಂಭ ಚೆನ್ನಾಗಿ ಮೂಡಿ ಬಂದಿದೆ. ಕುತೂಹಲವುಂಟುಮಾಡಿದೆ. ಮುಂದಿನ ಕಾಂತಿಗಾಗಿ ಕಾಯುವಂತೆ ಮಾಡಿದೆ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: