ಪಿ ಚಂದ್ರಿಕಾ ಅಂಕಣ – ಹೊತ್ತಿದ ಜನರೇಟರ್ ವೈರ್‌ಗಳು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

31

ಉಲ್ಲಾಳ ಇವತ್ತಿಗೂ ಕೋಮು ವಿಷಯದಲ್ಲಿ ಅತೀ ಸೂಕ್ಷ್ಮವಾದ ಪ್ರದೇಶ ಎಂದೇ ಈ ಹೊತ್ತಿಗೂ ಹೆಸರು ಪಡೆದಿದೆ. ಹಿಂದೂ ಮುಸಲ್ಮಾನರ ನಡುವೆ ಯಾಕೆ ಅಲ್ಲಿ ಸೌಹರ್ದ ಇಲ್ಲ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಯಾಕೆಂದರೆ ನಾನು ನೋಡಿದ ಹಿಂದೂಗಳು ಮುಸಲ್ಮಾನರೂ ಇಬ್ಬರೂ ಒಳ್ಳೆಯವರೇ. ಅವರ ಪಾಡಿಗೆ ಅವರು ಜೀವನ ನಡೆಸುತ್ತಿರುತ್ತಾರೆ.

ರಾಜಕೀಯಕ್ಕಾಗಿ ಗಲಾಟೆ ಮಾಡುವವರು ಇಂಥವರನ್ನು ಯಾಕೆ ಬಲಿಪಶು ಮಾಡಬೇಕು? ಇದೆಲ್ಲಾ ಅಲ್ಲಿನ ಜನರಿಗೆಅರ್ಥವಾಗುವುದಿಲ್ಲವಾ ಅಥವಾ ಅವರು ತಮಗ್ಯಾಕೆ ಎಂದು ಸುಮ್ಮನಿದ್ದುಬಿಟ್ಟಿದ್ದಾರಾ? ಹೆಚ್ಚು ಓದದ ಮುಸಲ್ಮಾನರು, ಓದಿನ ಗೊಡವೆಗೇ ಹೋಗದ ಮೀನುಗಾರರಂಥಾ ಕೆಲ ಸಮುದಾಯದ ಜನರು ಬದುಕುತ್ತಿದ್ದಾರೆ ಅವರೆಲ್ಲರೂ ತಮ ತಮಗೆ ತೋಚಿದ ಹಾಗೆ ಬದುಕುತ್ತಿದ್ದಾರೆ. ಹೀಗಿದ್ದೂ ಜಗಳ ಎಲ್ಲಿ ಹುಟ್ಟಿಕೊಳ್ಳುತ್ತದೆ? ಇಂಥ ಸಮುದಾಯದ ಹೊರಗೆ ಆಗುವ ಮದುವೆಗಳು ಗಲಾಟೆಗೆ ಮುಖ್ಯ ಕಾರಣ ಆಗಿರುತ್ತದೆ ಎನ್ನುವುದು ಅಲ್ಲಿನ ಜನರ ಅನಿಸಿಕೆ.

ನಮ್ಮಲ್ಲಿಗೆ ಮದುವೆಯಾಗಿಬಂದರೆ ನಾವೇನೂ ಆ ಹುಡುಗಿಯನ್ನು ಹೊರನೂಕುವುದಿಲ್ಲ ಎನ್ನುವ ಎರಡೂ ವರ್ಗದ ಜನರಿಗೆ ಇದು ದೊಡ್ಡ ಸಮಸ್ಯೆ ಅಲ್ಲ. ಆದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ತಮಗೆ ಬೇಕಾದ ಕಡೆಗೆ ಕೊಟ್ಟು ತಾವು ಹೋಗಿ ಬಂದು ಮಾಡಬೇಕು ಎನ್ನುವುದು ಪೋಷಕರ ಅಭಿಪ್ರಾಯವಾಗಿರುತ್ತೆ ಅದು ಸಾಧ್ಯವಾಗದು ಅಥವಾ ತಮ್ಮ ಕೈಲಿ ಅದು ಆಗದು ಎಂದು ಗೊತ್ತಾದಾಗ ಅವರಲ್ಲಿ ಒಂದು ಆಕ್ರೋಶ ಹುಟ್ಟಿಕೊಳ್ಳುತ್ತದೆ.

ಪೋಷಕರ ಅಂಥಾ ಹೊಟ್ಟೆಉರಿಯಲ್ಲಿ ಅಡುಗೆ ಮಾಡಿಕೊಳ್ಳಲು ಹೊರಟವರ ಬಗ್ಗೆ ಹೇಳುತ್ತಾ ಹೊರಟರೆ ಅದು ಬೇರೆಯದ್ದೇ ಕಥೆಯಾಗುತ್ತದೆ. ಆದರೆ ಅವತ್ತು ಗಲಾಟೆಯಾದದ್ದು ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ. ಟಿಪ್ಪು ಜಯಂತಿ ಸರಕಾರದ ಕಡೆಯಿಂದ ಮಾಡಬೇಕು ಎಂದು ಹೊರಟಾಗ ಸ್ಥಳೀಯವಾದ ಕೆಲ ಯುವಕರು ಆರ್ ಎಸ್ ಎಸ್‌ನ ಜೊತೆ ಸೇರಿ ಮಾಡಬಾರದು ಎಂದು ಸ್ಟ್ರೈಕ್ ಮಾಡಿದ್ದರು. ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿಬಿಟ್ಟಿದ್ದರು. ಕಾನೂನು ಮತ್ತು ಶಿಸ್ತು ಪಾಲನೆಯ ಕಾರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು.

ಈ ಕಾರಣಕ್ಕಾಗೇ ಅವತ್ತು (ತಾರೀಖು ನೆನಪಿಲ್ಲ) ಉಲ್ಲಾಳದಲ್ಲಿ ೧೪೪ಸೆಕ್ಷನ್ ಜಾರಿಯಲ್ಲಿತ್ತು. ಈ ವಿಷಯ ತಿಳಿಯದ ನಾವು ಶೂಟಿಂಗ್‌ಗೆ ಹೋಗಿಬಿಟ್ಟಿದ್ದೆವು. ಉಲ್ಲಾಳದ ಬೀದಿ ಬೀದಿಗಳಲ್ಲಿ ನರಪಿಳ್ಳೆಯೂ ಇಲ್ಲ. ಅಂದು ಸಮುದ್ರದ ತಟದ ಉದ್ದಕ್ಕೂ ಸ್ಕೂಲ್ ಇಲ್ಲದ್ದಕ್ಕೆ ಮಕ್ಕಳ ಗಲಾಟೆ ಜೋರಾಗಿತ್ತು. ಸಣ್ಣ ಪುಟ್ಟ ಕೆಲಸಕ್ಕೆ ಹೋಗುತ್ತಿದ್ದ ಯುವಕರೂ ಅವತ್ತು ಬಿಡುವಾಗಿ ಶೂಟಿಂಗ್ ನೋಡಲಿಕ್ಕೆ ಅಂತ ಬಂದುಬಿಟ್ಟಿದ್ದರು.

ಪಂಚಾಕ್ಷರಿ ವಿಷಯ ತಿಳಿದು ಗಾಬರಿಯಾಗಿ, ಬೇರೆದಾರಿ ಕಾಣದೆ ಉಲ್ಲಾಳದ ಪೋಲೀಸ್ ಸ್ಟೇಷನ್‌ಗೆ ಹೋಗಿದ್ದರು. ಸಾರ್ ಹೀಗೆಲ್ಲಾ ಆಗಿದೆ ಇವತ್ತು ಮತ್ತೆ ವಾಪಾಸು ಹೋಗುವುದು ಎಂದರೆ ಸಾವಿರಗಟ್ಟಲೆಯ ನಷ್ಟ. ಇದು ಕಮರ್ಷಿಯಲ್ ಸಿನೆಮಾ ಅಲ್ಲ ಆದ ನಷ್ಟವನ್ನು ಭರಿಸಲಿಕ್ಕೆ. ಇದು ಬರೀ ಪ್ಯಾಷನ್‌ಗೋಸ್ಕರ ಮಾಡುತ್ತಿರುವುದು. ಅದಲ್ಲದೆ ಕೊನೆಯ ಹೊತ್ತಿಗೆ ಶೂಟಿಂಗ್ ಮಾಡ್ತಾ ಇರೋದ್ರಿಂದ ಸೆನ್ಸಾರ್ ಆಗಲಿಕ್ಕೆ ತೊಂದರೆ ಆಗುತ್ತೆ. ಹಾಗೇನಾದ್ರೂ ಆದ್ರೆ ಮುಂದಿನ ವರ್ಷಕ್ಕೆ ಈ ಸಿನೆಮಾ ಸೇರುತ್ತೆ.

ಅವಾರ್ಡಿಗೆಲ್ಲಾ ಕಳಿಸಲಿಕ್ಕೆ ಆಗುವುದಿಲ್ಲ. ಇದನ್ನ ಥೇಟರ್‌ನಲ್ಲಿ ರಿಲೀಸ್ ಮಾಡಲಿಕ್ಕಾಗುವುದಿಲ್ಲ. ಬಂಡವಾಳ ಹಾಕಿ ಕಾಯುವುದು ಅಂದ್ರೆ ಕಷ್ಟ ಆಗುತ್ತೆ’ ಎಂದೆಲ್ಲಾ ಅಲವತ್ತುಕೊಂಡ ಮೇಲೆ ಎಸ್ ಐಗೆ ಏನನ್ನಿಸಿತೋ? ಆಯ್ತು, ನಿಮಗೇನೂ ಗೊತ್ತಿಲ್ಲ ಅನ್ನುವ ಹಾಗೆ ಕೆಲಸ ಮಾಡಿಕೊಳ್ಳಿ. ಆದ್ರೆ ಏನಾದ್ರೂ ತೊಂದ್ರೆ ಆದ್ರೆ ಮಾತ್ರ ನಾವು ಜವಾಬ್ದಾರಿಯಲ್ಲ’ ಎಂದರಂತೆ. ಅಷ್ಟು ಹೇಳಿದರಲ್ಲ, ಅವರಿಂದ ತಡೆ ಬರದಿದ್ದರೆ ಅಷ್ಟೇ ಸಾಕು, ಒಂದು ದಿನ ಎಚ್ಚರಿಕೆಯಲ್ಲಿ ಕೆಲಸ ಮಾಡಿದ್ರೆ ಆಯ್ತು ಎಂದು ಪಂಚಕ್ಷರಿ ವಾಪಾಸು ಬಂದಿದ್ದಾರೆ.

ಪಂಚಾಕ್ಷರಿ ವಾಪಾಸು ಬರುವ ಹೊತ್ತಿಗೆ ಹನ್ನೆರಡು ಗಂಟೆಯ ಮೇಲಾಗಿದೆ. ಅವತ್ತು ಬಿಸಿಲು ತುಸು ಹೆಚ್ಚೇ ಇತ್ತು. ಇಂಥಾ ಹೊತ್ತಲ್ಲಿ ಐಸ್ ಕ್ರೀಂ ಗಾಡಿಯವರಿಗೆ ಒಳ್ಳೆಯ ವ್ಯಾಪಾರ. ಆ ಬಿಸಿಲಿನ ಎದುರು ಯಾವ ರೀತಿ ಮಾಡ್ತಾರೋ, ಏನು ನೀರೋ, ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಎಲ್ಲರೂ ಸಣ್ಣ ಮಕ್ಕಳಂತೆ ಮುಗಿಬಿದ್ದು ತೆಗೆದುಕೊಂಡು ತಿಂದೆವು. ನಾಲಿಗೆಯಲ್ಲಿ ಉಳಿದ ಬಣ್ಣ ನಾವು ತಿಂದ ಐಸ್‌ನ ಕುರುಹನ್ನು ಹೇಳುತ್ತಿತ್ತು.

ಅಷ್ಟರಲ್ಲಿ ಅಲ್ಲಿಗೆ ಬಂದ ಹಸೀನಮ್ಮಾ, ನನ್ನನ್ನು ಪಕ್ಕಕ್ಕೆ ಕರೆದು, ಇವತ್ತು ಊಟ ಸ್ವಲ್ಪ ಕಡಿಮೆ ತರಿಸಿ, ಉಲ್ಲಾಳದ ತನ್ನ ಅಕ್ಕನ ಗಂಡನ ಹೊಟೇಲಿನಲ್ಲಿ ವಿಷಯ ಗೊತ್ತಾಗುವ ಮೊದಲೇ ಬೆಳಗ್ಗೆಯೇ ಮಾಡಿಟ್ಟ ಪರೋಟಾಗಳು ಮತ್ತು ನಂಚಿಕೊಳ್ಳಲು ಮೀನು ಮತ್ತು ಮಾಂಸದ ಪದಾರ್ಥ ಇದೆ, ಇಲ್ಲಿಗೆ ಕಳಿಸಲಿಕ್ಕೆ ಹೇಳಿದ್ದೇನೆ’ ಎಂದು ತಿಳಿಸಿದ್ದಳು. ಇವತ್ತು ಶೂಟಿಂಗ್ ಏನಾಗುತ್ತೋ ಗೊತ್ತಿಲ್ಲ, ಮಧ್ಯಾಹ್ನ ಒಳ್ಳೆ ಗಡದ್ದು ಊಟ ಮಾತ್ರ ಖಾಯಂ ಎಂದು ತೀರ್ಮಾನಕ್ಕೆ ವಿಷಯ ತಿಳಿದ ಎಲ್ಲರೂ ಬಂದುಬಿಟ್ಟಿದ್ದರು. ಇವತ್ತು ಹೊಟೇಲ್ ಬಿಸನೆಸ್ ಹಾಗಾಂದ್ರೆ ಲಾಸಾ?’ ಎಂದು ಹಸೀನಮ್ಮನನ್ನು ಕೇಳಿದೆ.ಏನು ಮಾಡುವುದು ಹೇಳಿ.

ದಿನಾ ಲಾಭಾನೇ ಬರಲಿಕ್ಕಾಗುತ್ತದಾ ತೀರಾ ಹಾಳಾಗಿ ಎಸೆಯುವ ಬದಲು, ನಿಮಗಾದರೂ ಉಪಯೋಗವಾಗುತ್ತಲ್ಲ. ಅದಕ್ಕೆ ಇಲ್ಲಿಗೆ ಕಳಿಸಲು ಹೇಳಿದೆ’ ಎಂದಿದ್ದಳು ಆಕೆ. ಹಣದ ಬಗ್ಗೆ ಕೇಳಿದಾಗ. ಬೇಡ’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಳು. ವಿಷಯ ತಿಳಿದಾಗಿನಿಂದ ಮಧ್ಯಾಹ್ನದ ಊಟದ ನೆನಪಲ್ಲೇ ಎಲ್ಲರೂ ಮುಳುಗಿಬಿಟ್ಟಿದ್ದರು. ಆದರೆ ಅನ್ನ ಇರಲಿಲ್ಲ ಎನ್ನುವ ಕಾರಣಕ್ಕೆ ಅಲ್ಲೇ ನಾವು ಶೂಟಿಂಗ್‌ಗಾಗಿ ತೆಗೆದುಕೊಂಡು ಹೋಗಿದ್ದ ಪಾತ್ರೆಯೊಂದರಲ್ಲಿ, ಅಲ್ಲೇ ಸಿಕ್ಕ ತೆಂಗಿನ ಮಟ್ಟೆ ಗರಿಗಳಿಂದ ಬೆಂಕಿಹಚ್ಚಿ ಅನ್ನ ಮಾಡಿಕೊಂಡು ಬಿಟ್ಟಿದರು ಹುಡುಗರು.

ದುರಾದೃಷ್ಟವೆಂದರೆ ಅವತ್ತು ಯಾವ ಹೋಟೇಲೂ ತೆಗೆದಿರಲಿಲ್ಲವಾದ್ದರಿಂದ ಸಸ್ಯಾಹಾರಿಗಳಾದ ನಾವು ಕೆಲವರಿಗೆ ಊಟಕ್ಕೆ ತೊಂದರೆಯಾಯಿತು. ಅಲ್ಲೇ ಅಂಗಡಿಯಿಂದ ಮೊಸರಿನ ಪ್ಯಾಕೇಟನ್ನ ತಂದು ಅನ್ನವನ್ನೇ ತಿಂದಿದ್ದೆವು. ಅವರೆಲ್ಲರ ಬಯಕೆಯಂತೆ ಊಟ ತುಂಬಾ ಚೆನ್ನಾಗಿತ್ತಂತೆ. ಹಸೀನಮ್ಮನಿಗೆ ಅವತ್ತು ಥ್ಯಾಂಕ್ಸ್ ಮೇಲೆ ಥ್ಯಾಂಕ್ಸ್ ಹೇಳಿದ್ದರು. ಅವತ್ತು ನಾವು ಭಯ ಪಟ್ಟ ಹಾಗೆ ಏನೂ ನಡೆಯಲಿಲ್ಲ. ಸಂಜೆಯ ವರೆೆಗೂ ಯಾವ ತೊಂದರೆಯೂ ಇಲ್ಲದೆ ಶೂಟಿಂಗ್ ನಡೆಯಿತು.

ಸಮುದ್ರದ ತಡೆಗೋಡೆಯ ಮೇಲೆ ಕುಳಿತ ಯುವಕರ ಗುಂಪು ಗುಜು ಗುಜು ಮಾಡುವಾಗಲೆಲ್ಲ ನಾವು ಅವರಲ್ಲಿ ಗಲಾಟೆ ಮಾಡದಿರುವಂತೆ ವಿನಂತಿಸಿಕೊಂಡೆವು. ಅವರೆಲ್ಲರೂ ರಿಲಾಕ್ಸ್ ಆಗಿದ್ದರು. ಹಾಗಾಗಿ ಏನೂ ಕಿರಿಕಿರಿ ಮಾಡಲಿಲ್ಲ. ಇನ್ನು ಹೆಂಗಸರಿಗೆ ಮಾತ್ರ ಆ ದಿವಸ ಬಿಡುವಿಲ್ಲದ ಕೆಲಸ. ಗಂಡಸರೆಲ್ಲಾ ಮನೆಯಲ್ಲಿದ್ದರಲ್ಲಾ, ಏನಾದರೂ ವಿಶೇಷ ಮಾಡುವ ಹುಕಿಯಲ್ಲಿದ್ದರು. ಅವರ್ಯಾರಲ್ಲೂ ಹೊರಗೆ ಎರಡು ಕೋಮಿನ ಮಧ್ಯೆ ಗಲಾಟೆ ಆಗಿದೆ ಎನ್ನುವುದರ ಬಗ್ಗೆ ಕುತೂಹಲವೂ ಇರಲಿಲ್ಲ. ನಾವಾಗೇ ಕೇಳಿದ್ದಕ್ಕೆ ಟಿಪ್ಪು ಜಯಂತಿ ಮಾಡಿದರೆ ಸಂತೋಷ ಅದಕ್ಕಾಗಿ ಯಾಕೆ ಜಗಳ ಆಡಬೇಕು? ನಮ್ಮ ಭಾವನೆ ಅರ್ಥ ಮಾಡಿಕೊಳ್ಳಲಿ. ಬೇರೆ ಯಾರ ಯಾರದ್ದೊ ಜಯಂತಿ ಮಾಡುವಾಗ ನಾವು ಗಲಾಟೆ ಮಾಡಿದ್ದೀವಾ? ಇಲ್ಲವಲ್ಲಾ!’ ಎಂದಿದ್ದರು ಒಂದಿಬ್ಬರು.

ಇತಿಹಾಸಕ್ಕೆ ಸಕತ್ತು ಮರೆವು. ಶೃಂಗೇರಿ ಶಾರದಾಂಬನ ಮೂಲ ವಿಗ್ರಹ ಪೇಶ್ವೆಗಳ ಕಾಲದಲ್ಲಿ ಧ್ವಂಸ ಮಾಡುತ್ತಾರೆ. ಮಠದವರು ಟಿಪುö್ಪವಿನ ಮೊರೆ ಹೋದಾಗ ಏನು ಮಾಡಲಿ? ನಿಮ್ಮವರೇ ನಿಮ್ಮ ದೇವರನ್ನು ಒಡೆದು ಹಾಕಿದ್ದು ಎನ್ನುತ್ತಾನೆ. ನಂತರ ಅವರನ್ನು ಓಡಿಸಿ, ಈಗಿರುವ ಅಮ್ಮನವರ ವಿಗ್ರಹವನ್ನು ಮೈಸೂರು ಸಂಸ್ಥಾನದಿಂದ ಮಾಡಿಸಿಕೊಡುತ್ತಾನೆ. ಇದನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಬಪ್ಪನಾಡು ದುರ್ಗಾಪರಮೇಶ್ವರಿಯ ದೇವಸ್ಥಾನನ್ನು ಕಟ್ಟಿಸಿದವನು ಒಬ್ಬ ಮುಸ್ಲಿಂ ವ್ಯಾಪಾರಿ, ಸಂತ ಕಬೀರ ನಮ್ಮವನಲ್ಲ ಎನ್ನುವ ಧೈರ್ಯ ಯಾರಿಗಿದೆ? ಶಿಶುನಾಳ ಶರೀಫರ ಪದಗಳು ಯಾರಿಗೆ ಪ್ರಿಯವಲ್ಲ? ಇಲ್ಲಿ ಹೊಂದಾಣಿಕೆಯ ಯಾವುದೋ ತಂತುವಿದೆ. ಅತಿಮಾನುಷವಾದ ಗಾನವೊಂದು ಪ್ರೀತಿಯ ರಾಗವನ್ನು ಆಲಾಪಿಸುತ್ತಿದೆ. ರಕ್ತವನ್ನೇ ಹರಿಸಬೇಕು ಎಂದು ತೀರ್ಮಾನಿಸಿದ್ದರೆ ಎಲ್ಲವನ್ನೂ ಮರೆಯಿರಿ ಎಂತಲೇ ಹೇಳಬೇಕಾಗುತ್ತದೆ.

ಅವತ್ತಿನ ಶೂಟಿಂಗ್ ಸಂಜೆ ಎಂಟರವರೆಗೂ ಆಗುವ ಸಾಧ್ಯತೆ ಕಾಣತೊಡಗಿತ್ತು. ಯಾಕೆಂದರೆ ಶುರುವಾಗಿದ್ದೆ ಹನ್ನೆರಡನ್ನು ದಾಟಿ. ಜನರೇಟರ್ ನಾವು ಚಿತ್ರೀಕರಣ ಮಾಡುತ್ತಿದ್ದ ಜಾಗದಿಂದ ಕೆಲ ಫರ್ಲಾಂಗುಗಳ ದೂರದಲ್ಲಿತ್ತು. ಒಳಗೆ ಬರಲು ಜಾಗವಿರದಿದ್ದ ಕಾರಣ ಅನಿವಾರ್ಯವಾಗಿತ್ತು. ದೃಶ್ಯವೊಂದು ಮುಗಿಯಿತು. ಇನ್ನೊಂದು ದೃಶ್ಯಕ್ಕೆ ಶಿಫ್ಟ್ ಆಗಬೇಕು ಎಂದು ನಾವು ತಯಾರಾಗುತ್ತಿದ್ದೆವು. ಆಗ ಸುಮಾರು ಏಳರ ಹೊತ್ತಿರಬೇಕು. ಪಂಚಾಕ್ಷರಿ ಯಾರ ಜೊತೆಗೋ ಫೋನ್‌ನ ಮಾತಿನಲ್ಲಿದ್ದರು. ಜನರೇಟರ್ ಇರುವ ಕಡೆಯಿಂದ ಜೋರಾಗಿ ಗಲಾಟೆ ಕೇಳಿಸತೊಡಗಿತು. ಇಷ್ಟು ದಿನಗಳಲ್ಲಿ ಒಂದು ದಿನವೂ ಹೀಗೆ ಆತಂಕದ ಗಲಾಟೆಯ ಸಣ್ಣ ಘಟನೆಯೂ ನಡೆದಿಲ್ಲ.

ಇವತ್ತು ೧೪೪ ಸೆಕ್ಷನ್ ಬೇರೆ ಜಾರಿ ಇದೆ ಇವತ್ತೇ ಹೀಗಾ? ಎಂದು ಆತಂಕಗೊಳ್ಳುವಾಗಲೇ ಕೆಲವರು ಓಡಿದ್ದರು. ಜಿತೇಂದ್ರ ಗಾಬರಿಯಿಂದ ಜನರೇಟರ್ ಗಾಡಿಗೆ ಬೆಂಕಿ ಹಚ್ಚಿಬಿಟ್ಟಿದ್ದಾರೆ. ಇನ್ನೇನು ಶೂಟಿಂಗ್ ಮಾಡುವುದು’ ಎಂದು ಕೂಗಿಕೊಂಡರು. ನಮಗೆಲ್ಲಾ ನಿಜಕ್ಕೂ ತುಂಬಾ ಆತಂಕವಾಯಿತು. ಅರೆ ಯಾರು ಬೆಂಕಿ ಹಚ್ಚುತ್ತಾರೆ? ಹಚ್ಚುವ ಜರೂರಾದರೂ ಯಾರಿಗಿದೆ? ಏನಾದರೂ ಆದರೆ ನಾಳೆ ಯಾರಿಗೆ ಉತ್ತರ ಕೊಡಬೇಕು? ಎಂದೆಲ್ಲಾ ಗಾಬರಿಗೆ ಬಿದ್ದಿದ್ದೆವು. ಆ ಮಾತನ್ನ ಕೇಳಿದ ತಕ್ಷಣ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಂಗಾದರು. ಇದು ಯಾರಿಗೆ ಹೇಳಿದ ಮಾತು ಎಂದು ಜಿತೇಂದ್ರ ಬಾಯಿಬಿಟ್ಟು ಹೇಳದಿದ್ದರೂ ಎಲ್ಲರಿಗೂ ಅರ್ಥವಾಗಿತ್ತು. ಆದರೆ ಅಲ್ಲೇನಾಗಿದೆ ಎಂದು ಗೊತ್ತಾಗದೆ ಏನು ಹೇಳುವುದು? ಹಾಗಂದ ಜಿತೇಂದ್ರ ಮತ್ತೆ ಜನರೇಟರ್ ಇರುವ ಕಡೆಗೆ ಓಡಿದರು.

ನಾನು ಒಂದು ಕ್ಷಣ ಬಾವಿ ಕಟ್ಟೆಗೆ ಒರಗಿ ನಿಂತೆ. ಯಾಕೆಂದರೆ ಹಾಗೆ ಯಾರಾದರೂ ಬೆಂಕಿಯೇ ಹಚ್ಚಿದ್ದರೆ ಮುಂದಿನ ಪರಿಣಾಮ ಏನಾಗಿರುತ್ತೆ ಎನ್ನುವುದನ್ನು ಊಹಿಸಿಯೇ ನಾನು ಕಂಗಾಲಾಗಿದ್ದೆ. ಜಿತೇಂದ್ರ ಕೂಗಾಡಿದ್ದನ್ನ ಕೇಳಿದ ಮೇಲೆ ನಾವು ಜೀವಂತವಾಗಿ ಇಲ್ಲಿಂದ ಹೊರೆಗೆ ಹೋಗುತ್ತೇವಾ? ಇಲ್ಲವಾ? ಎನ್ನುವ ಅನುಮಾನ ಬಂದುಬಿಟ್ಟಿತ್ತು. ಮನಸ್ಸೇ ಹಾಗೆ ಕೆಟ್ಟದನ್ನೇ ಮೊದಲು ಯೋಚಿಸುವುದು. ನನ್ನನ್ನು ಗಮನಿಸಿದ ಇಬ್ಬರು ಯುವಕರು ನನ್ನ ಬಳಿಗೆ ಬಂದು, ಆತಂಕ ಪಡಬೇಡಿ. ನೀವಿಲ್ಲಿಗೆ ನಮ್ಮವರಾಗಿ ಬಂದಿದ್ದೀರಿ. ಇಲ್ಲಿಂದ ಸೇಫ್ ಆಗಿ ಹೋಗುತ್ತೀರಿ. ಅಷ್ಟು ಭರವಸೆ ಮಾತ್ರ ನಮ್ಮದು’ ಎಂದಿದ್ದರು. ಮೀಸೆಯೂ ಸರಿಯಾಗಿ ಮೂಡದ ಆ ಯುವಕರು ನಮ್ಮಿಂದ ನಿಮಗೆ ತೊಂದರೆಯಿಲ್ಲ’ ಎನ್ನುವುದನ್ನು ಖಚಿತವಾಗಿ ಹೇಳಿದ್ದರು.

ಜನರೇಟರ್ ಗಾಡಿಯ ಹತ್ತಿರ ಹೋಗಿ ನೋಡಿದಾಗ ಪ್ಲಾಸ್ಟಿಕ್ ಸುಟ್ಟ ವಾಸಾನೆ ಬರುತ್ತಿತ್ತು. ಏನಾಗಿದೆ ಎಂದು ಹತ್ತಿರ ಹೋದಾಗ, ‘ಅತಿಯಾದ ಶಾಖದಿಂದ ವೈರ್ ಸುಟ್ಟುಹೋಗಿದೆ’ ಎಂದಿದ್ದರು ಜನರೇಟರ್ ಹುಡುಗರು. ಹೀಟ್ ಪ್ರೂಫ್ ಇದ್ದರೂ ಒಮ್ಮೊಮ್ಮೆ ಹೀಗಾಗುವುದುಂಟು ಎಂದು ವಿವರಿಸುತ್ತಿದ್ದರು. ಅಲ್ಲಿಗೆ ಯಾರೂ ಬೆಂಕಿ ಇಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಜಿತೇಂದ್ರರನ್ನ ಹುಡುಕಿದೆ ಆದರೆ ಅವರೆಲ್ಲೂ ಕಾಣಲಿಲ್ಲ. ಅರೆ ಅವರೇಕೆ ಹೀಗೆ ಹೇಳಿದರು?’ ಎಂದು ಆಶ್ಚರ್ಯವೂ ಆಯಿತು. ನಾವು ಗಾಡಿಯನ್ನು ಹತ್ತಿ ಪರೀಕ್ಷೆ ಮಾಡಿದೆವು. ನಮಗೆ ಏನು ಗೊತ್ತಾಗಬೇಕು? ಸುಟ್ಟಿರುವ ವೈರುಗಳು ಮಾತ್ರ ಕಾಣುತ್ತಿದ್ದವು. `ವೈರ್ ಬರ್ಸಟ್ ಆಗಿದ್ರೆ ನಾಳೆ ಶೂಟಿಂಗ್ ಇರಲ್ಲ’ ಎನ್ನುತ್ತಿದ್ದರು ಜನರೇಟರ್‌ನವರು. ಮುಂದಿನದ್ದು ಏನಾದರೂ ಆಗಲಿ, ಆದರೆ ಬೆಂಕಿ ಯಾರೂ ಹಚ್ಚಿಲ್ಲ ಎನ್ನುವ ನಿರಾಳತೆ ಮಾತ್ರ ನಮ್ಮಲ್ಲಿ ಉಳಿದಿತ್ತು. ಚಂದ್ರಹಾಸರು ಮಾತ್ರ ಎಂಥಾ ಜನಾರೀ ತಿಳೀಯದೇ ಮಾತನಾಡುವುದಾ? ಎಂದು ಬೇಸರ ವ್ಯಕ್ತಪಡಿಸಿದ್ದರು.

ಜಿತೇಂದ್ರ ಕೂಡ ಬೇಕಾಗಿ ಏನೂ ಆ ಮಾತನ್ನು ಹೇಳಿರಲಿಲ್ಲ, ನಾಲ್ಕಾರು ಯುವಕರು ಏನನ್ನೋ ನೋಡುವ ಕುತೂಹಲದಿಂದ ಜನರೇಟರ್ ಗಾಡಿಯನ್ನು ಹತ್ತಿದ್ದರಂತೆ. ಅದನ್ನು ನೋಡಿದ ಜಿತೇಂದ್ರ ಅವರನ್ನು ಬೈದು ಕೆಳಗಿಳಿಸಿದ್ದಾರೆ. ಅದಾಗಿ ಸ್ವಲ್ಪ ಹೊತ್ತಿಗೇ ಈ ಘಟನೆ ನಡೆದಿದೆ. ಆದ್ದರಿಂದ ಅವರೇ ಮಾಡಿದ್ದಾರೆ ಎನ್ನುವ ತೀರ್ಮಾನಕ್ಕೆ ಅವರೂ ಬಂದುಬಿಟ್ಟಿದ್ದರು. ಗಲಟೆಯನ್ನು ಮಾಡಿಬಿಟ್ಟಿದ್ದಾರೆ.

ನಂತರ ಯಾರೂ ಇದನ್ನು ಮಾಡಿಲ್ಲ ಎಂದು ಗೊತ್ತಾದ ತಕ್ಷಣ ಮಾತಿಲ್ಲದೆ ಅವರ ಕಾರನ್ನು ಹತ್ತಿ ಹೋಗಿಯೂ ಬಿಟ್ಟಿದ್ದಾರೆ. ನೋಡಿದ್ದೂ ಸುಳ್ಳಾಗಬಹುದು ಎನ್ನುವುದು ಇಂಥಾ ಸಂದರ್ಭಕ್ಕೆ ಹೇಳಿರುವುದಲ್ಲವೇ? ಆದರೆ ಜಿತೇಂದ್ರ ಅವರು ತಿಳಿಯದೇ ಆಡಿದ ಆ ಒಂದು ಮಾತು ಯಾರಲ್ಲೂ ಕಿಚ್ಚನ್ನು ಹಚ್ಚಲಿಲ್ಲ ಎನ್ನುವುದೇ ದೊಡ್ಡ ಸಮಾಧಾನದ ಸಂಗತಿ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

February 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: