ಪಿ ಚಂದ್ರಿಕಾ ಅಂಕಣ – ಹುಡುಕಾಟ ಒಂದು ರೋಮಾಂಚಕ ಪಯಣ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

21

ಹುಡುಕಾಟ ಎನ್ನುವುದೇ ಒಂದು ವಿಚಿತ್ರವಾದ ಪ್ರಕ್ರಿಯೆ. ಅದೊಂದು ರೋಮಾಂಚಕ ಪಯಣ. ನಮ್ಮ ಸೆಟ್ ನಲ್ಲಿ ಜೀವಂತಿಕೆಯಿಂದ ಓಡಾಡುತ್ತಿದ್ದ ಮೂವರು ಮಕ್ಕಳು, ಅವುಗಳ ಚೇಷ್ಟೆ, ತುಂಟತನ, ಕಳ್ಳಾಟಗಳು ನಮ್ಮನ್ನು ಉಲ್ಲಾಅಸಿತಗೊಳಿಸುತ್ತಿದ್ದವು. ಆ ಮಕ್ಕಳಲ್ಲಿ ಎರಡು ಮಕ್ಕಳು ನಮಗೆ ಸಿಕ್ಕಿದ್ದು ಈ ಕೆಮ್ಮಣ್ಣು ಊಡೆಯಲ್ಲೇ.

ಕೆಮ್ಮಣ್ಣು ಊಡೆಯವರಾದ ಜಿತೇಂದ್ರ ನಮ್ಮ ಸಿನಿಮಾದ ಲೋಕಲ್ ಆದ ಅರೇಂಜ್‌ಮೆಂಟ್‌ಗಳನ್ನು ನೋಡಿಕೊಳ್ಳುತ್ತಿದ್ದರು. ಸದಾ ಗಾಂಭೀರ. ಅವರ ಹೆಂಡತಿ ಮತ್ತು ಮಕ್ಕಳೂ ಶೂಟಿಂಗ್‌ನಲ್ಲಿ ನಮ್ಮ ಜೊತೆಗೇ ಇರುತ್ತಿದ್ದರು. ಇದಕ್ಕೆ ಕಾರಣವೂ ಇತ್ತು. ನಮ್ಮ ಸಿನೆಮಾದಲ್ಲಿ ಪಾತುಮ್ಮಾಳ ಮಗಳು ಸಲ್ಮಾಗೆ ಮೂರುಜನ ಹೆಣ್ಣು ಮಕ್ಕಳು ಎಂದೂ, ನಾಲ್ಕನೆಯದ್ದೂ ಹೆಣ್ಣಾಗಿದ್ದು. ಇನ್ನು ಮಕ್ಕಳಾಗದ ಹಾಗೆ ಸಲ್ಮಾ ಡಾಕ್ಟರ್ ಸಲಹೆಯಂತೆ ಆಪರೇಷನ್ ಮಾಡಿಸಿಕೊಳ್ಳುತ್ತಾಳೆ. ಇದರಿಂದ ಅವಳ ಗಂಡ ಮಹಮದ್ ಕೋಪಗೊಂಡು ತಲ್ಲಾಖ್ ಕೊಟ್ಟುಬಿಡುತ್ತಾನೆ.

ಸ್ಪಂದನಾ ಸಲ್ಮಾ ಪಾತ್ರವನ್ನು ಮಾಡುತ್ತಿದ್ದರು. ಅವರು ನಿನಾಸಂನಿಂದ ಬಂದವರಾಗಿದ್ದು ಅನೇಕ ಸಿನೆಮಾ ಸೀರಿಯಲ್ಲುಗಳಲ್ಲಿ ಪಾತ್ರ ಮಾಡಿದ್ದರು. ಪಾತ್ರಕ್ಕೆ ಜೀವ ತುಂಬುವ ಅಪ್ಪಟ ಪ್ರತಿಭಾವಂತೆ. ಅವರ ಮಗಳು ಸ್ಕ್ರೀನ್ ಟೆಸ್ಟ್ ಮಾಡುವ ಹೊತ್ತಲ್ಲಿ ಜೊತೆಗೆ ಬಂದಿದ್ದರಿಂದ ದೊಡ್ಡ ಮಗಳ ಪಾತ್ರಕ್ಕೆ ಹುಡುಗಿ ಸಿಕ್ಕಿಬಿಟ್ಟಿದ್ದಳು. ಇನ್ನಿಬ್ಬರ ಹುಡುಕಾಟದಲ್ಲಿದ್ದೆವು. ಇನ್ನಿಬ್ಬರು ಮಕ್ಕಳು ಜಿತೇಂದ್ರರವರದ್ದು. ಹೀಗಾಗಿ ಜಿತೇಂದ್ರ ತಮ್ಮ ಜೊತೆ ಮಕ್ಕಳನ್ನೂ ದಿನಾ ಕರೆತರುತ್ತಿದ್ದರು. ಮುದ್ದಾದ ಮಕ್ಕಳು ಮೊಲದ ಮರಿಗಳ ಹಾಗಿದ್ದವು. ಇಡೀ ಸೆಟ್‌ನಲ್ಲಿ ಓಡಾಡುತ್ತಿದ್ದರೆ ಜೀವಸಂಚಾರ ಎನ್ನಿಸುತ್ತಿತ್ತು. ಇನ್ನು ಜಿತೇಂದ್ರ ಅಂತೂ ಪಾದರಸದ ಹಾಗೆ ಓಡಾಡುತ್ತಾ ಅದಾ ಮಾತಾಡುತ್ತಲೇ ಇರುತ್ತಿದ್ದರು.

ಇಂಥಾ ಕೆಲಸ ಅವರಿಂದ ಆಗಲ್ಲ ಎನ್ನುವ ಹಾಗಿರಲಿಲ್ಲ. ಹೇಳಿದ ಮರುಕ್ಷಣ ಫೋನ್ ತೆಗೆದುಕೊಂಡು ನಮ್ಮಿಂದ ದೂರ ಹೋಗಿ ನಿಂತು ಮಾತಾಡತೊಡಗಿದರೆ ಕೆಲಸ ಆದಂತೆಯೇ ಲೆಕ್ಕ. ಜಿತೇಂದರಿದ್ದ ಕಾರಣಕ್ಕೆ ಚಂದ್ರಹಾಸರು ಸ್ಕ್ರೀಪ್ಟ್ ಮತ್ತು ಕಲವಿದರ ಉಚ್ಚಾರಣೆಯ ಕಡೆಗೆ ಗಮನಕೊಡಲಿಕ್ಕೆ ಸಾಧ್ಯಯಿತು. ಆದರೆ ಒಂದು ವಿಷಯದಲ್ಲಿ ಮಾತ್ರಾ ಅವರು ತುಂಬಾ ಕಟ್ಟುನಿಟ್ಟಾಗಿರುತ್ತಿದ್ದರು. ನಿಮಗೆ ಏನು ಬೇಕಾದರೂ ಕೇಳಿ ಮಾಡಿಕೊಡುವ ಆದರೆ ದುಡ್ಡಿನ ವಿಚಾರ ಮಾತ್ರ ನೀವೇ ಮಾತಾಡಿಕೊಳ್ಳಬೇಕು ಎಂದು ಮೊದಲೇ ಹೇಳಿಬಿಡುತ್ತಿದ್ದರು. ನಾನೇ ಎಷ್ಟೋ ಸಲ ಯಾಕೆ ಇಷ್ಟೋಂದು ಭಯ ಎಂದು ತಮಾಷಿ ಮಾಡಿದ್ದೆ ಮೊದಮೊದಲು ಅವರು ಏನನ್ನೂ ಹೇಳಲಿಲ್ಲ. ನಂತರ ತಮಗೆ ಹೀಗೆ ಬೆಂಗಳೂರಿನ ಸಿನಿಮಾ ತಂಡ ಮಾಡಿದ ವಿಷಯವನ್ನು ವಿವರವಾಗಿ ಬಿಚ್ಚಿಟ್ಟಿದ್ದರು. ಯಾರಿಗೋ ಸಹಾಯ ಮಾಡಲಿಕ್ಕೆ ಹೋಗಿ ನಾನ್ಯಾಕೆ ನಿಷ್ಠುರ ಆಗುವುದು ಹೇಳಿ? ಮೇಲಾಗಿ ನನ್ನ ಕೈಯಿಂದಹಣ ಕೊಡುವ ಹಾಗೆ ಆಗಬಾರದಲ್ಲ ಎಂದಿದ್ದರು.

ಜಿತೇಂದ್ರರವರನ್ನು ಭೇಟಿಯಾಗಿದ್ದು ತುಂಬಾ ಆಕಸ್ಮಿಕವಾಗಿ. ನಮಗೆ ಶೂಟಿಂಗ್‌ಗಾಗಿ ಉಳಿದುಕೊಳ್ಳುವ ಜಾಗದ ಹುಡುಕಾಟದಲ್ಲಿದ್ದಾಗ ಎಲ್ಲಿಂದಲೋ ಜಿತೇಂದ್ರರ ಹೆಸರು ಕೇಳಿಬಂದಿತ್ತು. ಉಳಿದುಕೊಳ್ಳಲು ಅವರದ್ದೇ ಕೆಲ ರೂಮುಗಳಿವೆಯೆಂದೂ ಹೀಗೆ ಬಂದವರು ಉಳಿದುಕೊಳ್ಳಬಹುದೆಂದೂ ಯಾರೋ ಹೇಳಿದ್ದರು. ಆ ಜಾಡನ್ನುಹಿಡಿದು ಹೊರಟೆವು. ಹಾದಿಯುದ್ದಕ್ಕೂ ಮನೆಯ ವಿಳಾಸ ಕೇಳುತ್ತಾ ಹೊರಟೆವಾದರೂ, ಮನೆ ತುಂಬಾ ಒಳಗೆ, ಮುಖ್ಯರಸ್ತೆಯಿಂದ ತುಂಬಾ ದೂರದಲ್ಲಿತ್ತು. ನಾವು ಹಾದಿ ತಪ್ಪಿದರೆ ಎನ್ನುವ ಆತಂಕ ನಮ್ಮಲ್ಲಿತ್ತು. ಸಣ್ಣ ಟಾರ್ ರಸ್ತೆ, ಅಕ್ಕಪಕ್ಕದಲ್ಲಿ ತೆಂಗಿನ ತೋಟಗಳು ಸಮೃದ್ಧವಾಗಿದ್ದವು. ಸ್ವಲ್ಪ ದೂರ ದಾಟಿದರೆ ಸಮುದ್ರ. ನನಗೋ ಕುತೂಹಲ, ಉಪ್ಪು ನೀರನ್ನೇ ನೆಲದಾಳದಿಂದ ಎಯ್ಯೊಯ್ದು, ಸೀಯಾಗಿಸಿ ಎಳೆನೀರಲ್ಲಿ ಇರಿಸುವ ಮರದ ಇಚ್ಚಾಶಕ್ತಿ ಎಷ್ಟು ದೊಡ್ಡದಿರಬೇಕು!

ಹಾದಿಯಲ್ಲಿ ಸಿಗುವ ಸಣ್ಣ ಸಣ್ಣ ಹಳ್ಳಿಗಳಲ್ಲಿ ಜಿತೇಂದ್ರರ ಮನೆಯನ್ನು ಹುಡುಕುತ್ತಾ ಹೊರಟೆವು. ಫೋನ್ ಹಿಡಿದು ಮಾತಾಡುತ್ತಲೇ, ಮನೆಯ ಹೊರಗೆ ಬಂದಿದ್ದೇನೆ ನಾನು ಕಾಣುತ್ತೇನಾ ನೋಡಿ’ ಎಂದೆಲ್ಲ ಹೇಳುವಾಗ ನಮಗೆ ಕಂಡಿದ್ದು ಸಮುದ್ರ. ದಡದಲ್ಲೊಂದು ಅದ್ಭುತವಾದ ಮನೆ ಅದರ ಪಕ್ಕದಲ್ಲಿ ಜಿತೇಂದ್ರ ನಿಂತಿದ್ದರು. ನಾನು ಅದೇ ಅವರ ಮನೆ ಎಂದು ಕಾರನ್ನು ಇಳಿದವಳೇ ಆಹಾ ಮನೆ ಎಷ್ಟು ಚೆನ್ನಾಗಿದೆ’ ಎಂದೆ. ಇದು ನನ್ನ ಕಸಿನ್‌ದು ಅವರೆಲ್ಲಾ ಬೆಂಗಳೂರಲ್ಲಿರುತ್ತಾರೆ. ಬಂದಾಗ ಎಂದು ಉಳಿಸಿಕೊಂಡಿದ್ದಾರೆ, ಅದ್ಭುತವಾಗಿದೆ ಮೇಲೆ ನೋಡುವಿರಂತೆ. ಆದರೆ ಶೂಟಿಂಗ್‌ಗೆ ಕೊಡಲ್ಲ. ಒಮ್ಮೆ ನಾನೇ ಕೊಡಿಸಿ ಮನೆಯ ನೆಲವನ್ನೆಲ್ಲ ಗೀಚು ಮಾಡಿ ಹಾಕಿದ್ದರು, ಅದಕ್ಕಾಗಿ ನನ್ನ ಅಣ್ಣನ ಹತ್ತಿರ ಬೈಸಿಕೊಂಡೆ. ಯಾವತ್ತಾದರೂ ಉಳಿಲಿಕ್ಕೆ ಬೇಕಾದರೆ ಕೊಡುವಾ ಕೀ ನನ್ನ ಬಳಿಯೇ ಇದೆ’ ಎಂದಿದ್ದರು.

ನಮ್ಮ ಉದ್ದೇಶಕ್ಕೆ ಸಿಕ್ಕದ ಮೇಲೆ ನೋಡುವುದು ಯಾಕೆ? ಎಂದು ನೋಡಲಿಕ್ಕೆ ಹೋಗಲಿಲ್ಲ. ಆ ಮನೆಯನ್ನು ನೋಡಿದ ಮೇಲೆ ಜಿತೇಂದ್ರರ ಮನೆ ಸಪ್ಪೆ ಎನ್ನಿಸಿತು. ಸಾಕಷ್ಟು ವಿಶಾಲವೇ ಇದ್ದರೂ, ಅಷ್ಟು ಮಾಡ್ರ‍್ರನ್ ಲುಕ್ ಆ ಪರಿಸರಕ್ಕೆ ಹೊಂದುವಂತೆ ಇರಲಿಲ್ಲ. ಮಾರ್ಬಲ್ ಹಾಕಿದ್ದ ನೆಲ ಕಾಲಿಟ್ಟರೆ ಜಾರುವಂತಿತ್ತು. ಸ್ವಂತ ಬಿಸನೆಸ್ ಮಾಡುತ್ತಿದ್ದ ಅವರು ಕೆಮ್ಮಣ್ಣು ಊಡೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂದು ಅವರ ಮನೆಯ ಹಿಂಭಾಗದಲ್ಲಿ ದೊಡ್ಡದೊಂದು ಬಿಲ್ಡಿಂಗ್ ಕಟ್ಟಿದ್ದರು.

ಸಿನಿಮಾ ಮಂದಿ ಈ ಭಾಗಕ್ಕೆ ಶೂಟಿಂಗ್‌ಗೆ ಬಂದರೆ ಉಳಿದುಕೊಳ್ಳಲಿಕ್ಕೆ ಅನುಕೂಲಕರವಾದೀತು ಎನ್ನುವ ಉದ್ದೇಶ ಅವರದಿತ್ತು. ನಮಗೂ ಜಾಗ ಕಡಿಮೆ ದುಡ್ಡಿಗೆ ಸಿಕ್ಕರೆ ಒಳ್ಳೆಯದೇ ಅಲ್ಲವೇ? ನಮಗಾಗಿ ಒಂದಿಷ್ಟು ತಿಂಡಿಯನ್ನು ಮಾಡಿಸಿದ್ದರು. ಜಿತೇಂದ್ರನೇ ನಮಗೆ ತಂದುಕೊಟ್ಟರು. ತುಂಬಾ ಚೆನ್ನಾಗಿತ್ತು. ಸಂಜೆಯಾದ್ದರಿಂದ ನಮಗೂ ಏನಾದರೂ ಬೇಕು ಎನ್ನಿಸುತ್ತಿತ್ತು. ತಿಂಡಿ ಹಿತಕರವಾಗಿತ್ತು. ಮಾತು ಹೀಗೆ ಹಾಗೆ ಹೊರಳಿ ನಿಮಗೆ ಜನರೇಟರ್ ಯುನಿಟ್ ಎಲ್ಲಾ ಬೇಕಲ್ಲವಾ? ನಮ್ಮವರೇ ಇದ್ದಾರೆ ನೋಡಿ ಎಂದಿದ್ದರು.

ಬೇಕುಗಳು ಒಂದು ಸಿನಿಮಾಗೆ ತುಂಬಾ ಇರುತ್ತದೆ ಹಣ ಕೊಟ್ಟರೂ ಸಮಯಕ್ಕೆ ಒದಗಿಸುವವರು ಅಗತ್ಯ. ಒಳ್ಳೆಯದೇ ಆಯಿತು. ತಿಳಿದವರೊಬ್ಬರಿದ್ದಾರೆ ಎಂದರೆ ವ್ಯವಹಾರ ಸ್ಮೂತ್ ಆಗಿ ಹೋಗುತ್ತದೆ. ಬಿಲ್ಡಿಂಗ್ ನೋಡಲು ಬಂದವರು ಯುನಿಟ್ ಬಗ್ಗೆ ಮಾತಾಡತೊಡಗಿದೆವು. ಹೊರಗಿನಿಂದ ಮುದ್ದಾದ ಎರಡು ಪುಟ್ಟ ಪುಟ್ಟ ಮಕ್ಕಳು ಬಂದವು. ಅವನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು ನಾವು ಬಂದಿದ್ದು ಯಾತಕ್ಕೋ ಸಿಕ್ಕುದ್ದು ಮಾತ್ರ ಇನ್ನೇನೋ.

ನಾವು ಕನಸುತ್ತಿದ್ದ ಪಾತ್ರಗಳು ಕಣ್ಣ ಮುಂದೆ ಜೀವಂತವಾಗಿ ಬಂದಾಗ ಹೇಳಲಿಕ್ಕಾಗದ ಸಂತೋಷ. ನಮ್ಮ ಪಾತ್ರಗಳಿಂದ ಅವುಗಳನ್ನು ನೋಡುತ್ತೇವೋ, ಅವುಗಳಿಂದ ನಮ್ಮ ಪಾತ್ರಗಳು ಸ್ಪಷ್ಟವಾಗುತ್ತದೋ ಹೇಳುವುದು ಕಷ್ಟ. ಆಡಿ ಬಂದಿದ್ದವು ಸುಸ್ತಾದ ಮುಖದಲ್ಲಿ ನಮ್ಮನ್ನು ನೋಡಿ ಯಾರಿವರು? ಎನ್ನುವ ಭಾವ ಮಿಂಚುತ್ತಿತ್ತು. ನನ್ನ ಮಕ್ಕಳು’ ಎಂದರು ಜಿತೇಂದ್ರ ಹೇಳದಿದ್ದರೂ ಅರ್ಥವಾಗುತ್ತಿತ್ತು. ಒಳಗಿಂದ ಅವರ ಮನೆಯವರೂ ಚಹಾದ ಕಪ್ಪುಗಳೊಂದಿಗೆ ಬಂದರು. ಏನೆಲ್ಲಾ ಮಾತಾಡುತ್ತಿದದ್ರೂ ನನಗೆ ಆ ಮಕ್ಕಳ ಮೇಲೆ ಕಣ್ಣು. ಮಕ್ಕಣೆ ಧರಿಸಿ ಮುಸ್ಲೀಂ ಮಕ್ಕಳ ಹಾಗೆ ಎದುರು ನಿಂತರೆ ಹೇಗಿರುತ್ತೆ ಎನ್ನುವ ಕಲ್ಪನೆ.

ಮಕ್ಕಳು ಯಾವ ವೇಷ ಧರಿಸಿದರೂ ಚೆನ್ನವೇ. ಕೃಷ್ಣನೋ ರಾಮನೋ, ಏಸುವೋ, ಯಾವ ವೇಷ ಧರಿಸಿದರೂ ಅದೇ ಆಗುವ ಶಕ್ತಿ ಅವುಗಳಿಗಿರುತ್ತದೆ. ಅವರ ತಿಳಿ ಮನಸ್ಸು ಮುಗ್ಧತೆಯನ್ನು ಪ್ರತಿಫಲಿಸುತಿರುತ್ತದೆ. ಪಂಚಾಕ್ಷರಿ ವಹಿವಾಟಿನ ಚಿಂತೆ. ನನಗೆ ಮಾತ್ರ ಆ ಮಕ್ಕಳನ್ನು ಹೇಗೆ ಕೇಳುವುದು? ಅವರು ಆಕ್ಟ್ ಮಾಡಿಸಲ್ಲ ಎಂದರೆ ಏನು ಮಾಡುವುದು ಎನ್ನುವ ಚಿಂತೆ.

ಬಿಲ್ಡಿಂಗ್ ನೋಡಿಕೊಂಡು ಬಂದೆವು. ಸಾದಾರಣವಾಗಿತ್ತು, ಒಂದು ದಿನ ನಾಲ್ಕಾರು ಜನ ಉಳಿಯಲಿಕ್ಕೆ ಯಾವ ತೊಂದರೆಯೂ ಇರಲಿಲ್ಲ. ಆದರೆ ನಾವು ಬಹು ಜನ ಇದ್ದಿದ್ದರಿಂದ ಶೂಟಿಂಗ್‌ನಲ್ಲಿ ಅಲ್ಲೇ ಸ್ಟೇ ಮಾಡುವ ಡೀಲ್ ಕುದುರಲಿಲ್ಲ. ಆದರೆ ಯುನಿಟ್ ಮಾತ್ರ ಫೈನಲ್ ಆಯ್ತು. ಇನ್ನೇನು ಹೊರಡುವಾಗ ನಾನು ಪಂಚಾಕ್ಷರಿಗೆ ಈ ಹುಡುಗರು ನಮ್ಮ ಶೂಟಿಂಗ್‌ಗೆ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ’ ಎಂದೆ. ಜಿತೇಂದ್ರ ಮೊದಲು ಬೇಡ ಬಿಡಿ ಮೇಡಂ’ ಎಂದರು. ನೋಡಿ ಸಾರ್ ನಿಮ್ಮ ಜೊತೆಯೇ ಇರ್ತಾರೆ, ಯಾವ ತೊಂದರೆಯೂ ಆಗಲ್ಲ. ಮೇಲಾಗಿ ನಿಮ್ಮದೇ ಸಿನಿಮಾ ಅಲ್ವಾ?’ ಎಂದೆ.

ಒಮ್ಮೊಮ್ಮೆ ಹೀಗೆ ಮಾತಾಡುವಾಗ ಮನಸ್ಸಿಂದ ಮಾತಾಡಿದರೂ ಎಮೋಷನಲ್ ಬ್ಲಾಕ್‌ಮೇಲ್ ಮಾಡ್ತಾ ಇದೀನೇನೋ ಅನ್ನಿಸಿ ನನಗೆ ನಾಚಿಕೆ ಅನ್ನಿಸುತ್ತೆ. ಆದರೆ ಹುಡುಗರನ್ನು ಹೇಗೆ ಕರೆತರುವುದು? ಎಂದಾಗ ಆ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿ. ಮುಕ್ಕಚೇರಿಯ ಇಬ್ಬರು ಹುಡುಗರನ್ನು ಕೇಳಿದರಾಯ್ತು, ಸಹಜವಾಗಿ ಕಾಣ್ತಾರೆ ಎಂದಿದ್ದರು ಪಂಚಾಕ್ಷರಿ. ಅದು ಆಗದ ಮಾತೆಂದು ನನಗೆ ಗೊತ್ತಿತ್ತು. ನನ್ನ ಮಾತಿನಿಂದ ಜಿತೇಂದ್ರರಿಗೂ ಆಸೆ ಬಂತಾದರೂ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿಲ್ಲ ಎನ್ನಿಸಿತು ಅವರ ಮುಖಭಾವ. ಜಿತೇಂದ್ರ ಅವರ ಹೆಂಡತಿಯನ್ನು ಕೇಳಿದರು.

ನಾನು, ಪಂಚಾಕ್ಷರಿ ಆಕೆಗೂ ಬಲವಂತ ಮಾಡಿದೆವು. ಪಾಪ ಅವರಿಗೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ಆದರೆ ಮಕ್ಕಳಿಗೆ ಸ್ಕೂಲ್ ಹೋಗುತ್ತದಲ್ಲಾ?’ ಎಂದಿದ್ದರು. `ಅದೆಲ್ಲ ನಾವು ನೋಡೋಣ, ಶನಿವಾರ, ಭಾನುವಾರಗಳಂದೇ ಪ್ಲಾನ್ ಮಾಡೋಣ’ ಎಂದಿದ್ದೆ. ಅದಕ್ಕೆ ಪಂಚಾಕ್ಷರಿ ಕೂಡ ಒಪ್ಪಿದ್ದರು. (ಆಮೇಲೆ ಮಕ್ಕಳಿಗೋಸ್ಕರ ಪೇಮೆಂಟ್ ಆರ್ಟಿಸ್ಟ್ಗಳಿಗೆ ಈಗ ಕೊಟ್ಟಿರುವ ಡೇಟ್ಸ್ ಅನ್ನು ಬದಲಿಸಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ನಂತರ ಆ ಮಕ್ಕಳಿಗೆ ರಜಾ ಹಾಕಿಸಿ ಕರೆತರಬೇಕಾಯಿತು. ಜಿತೇಂದ್ರತಿಗೆ ಮಕ್ಕಳನ್ನು ಸಿನೆಮಾದಲ್ಲಿ ಕಾಣಬೇಕು ಅನ್ನಿಸಿದ್ದರಿಂದ ಅವರೂ ಪ್ರತಿ ಮಾತನ್ನ ಹೇಳಲಿಲ್ಲ) ನಮ್ಮ ಬಲವಂತಕ್ಕೆ ಅವರೂ ಮಣಿದ ಹಾಗೆ ಅನ್ನಿಸಿತು. ಹೀಗೆ ನಮಗೆ ಬೇಕಾದ ಮೂರು ಮುದ್ದಾದ ಮಕ್ಕಳು ಸಿಕ್ಕರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: