ಪಿ ಚಂದ್ರಿಕಾ ಅಂಕಣ- ಶೂಟಿಂಗ್ ಶುರುವಾಗಿ ಮೊದಲ ಬ್ರೇಕ್‌ನಲ್ಲಿ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

16

ಮುಲ್ಕಿಯ ಬೋಳಾ ರಂಗನಾಥರಾವ್ ಅವರ ಮನೆಯಿಂದ ನಮ್ಮ ಶೂಟಿಂಗ್ ಶುರು ಮಾಡಿದ್ದು. ಮನೆಯ ಎಲ್ಲಾ ಭಾಗಗಳನ್ನು ಅವರು ಬಳಸುತ್ತಿರಲಿಲ್ಲ. ಇಬ್ಬರೇ ಇದ್ದಿದ್ದರಿಂದ ಅದನ್ನು ಬಳಸುವ ಅವಶ್ಯಕತೆ ಅವರಿಗಿರಲಿಲ್ಲ. ನಾವೇ ಎಲ್ಲ ಗುಡಿಸಿ ತೊಳೆದು ಮಾಡುತ್ತಿದ್ದೆವು. ಚಂಚಲಾ ಕೂಡ ನಮ್ಮನ್ನು ಸೇರಿಕೊಂಡರು. ‘ಇದು ನಿಮ್ಮ ಕೆಲಸವಲ್ಲ ಬಿಡಿ’ ಎಂದು ಹೇಳಿದರೂ ಕೇಳಲಿಲ್ಲ. ‘ಇಂಥಾ ಕೆಲಸಗಳನ್ನು ಇಷ್ಟು ದೊಡ್ಡ ಮನೆಗೆ ನಾವು ಮೂರೇ ಜನ ಮಾಡಲಿಕ್ಕೆ ತುಂಬಾ ಕಷ್ಟ ಆಗುತ್ತೆ. ಇಲ್ಲೇ ಯಾರಾದರೂ ಸಿಗುತ್ತಾರಾ ನೋಡೋಣ’ ಎಂದು ನಿರ್ದೇಶಕರಿಗೆ ಹೇಳಿದರೂ, ಅವರು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ತುಂಬಾ ಬೇಸರವಾಯಿತು. ಆದರೆ ಒಪ್ಪಿಕೊಂಡ ಕೆಲಸವನ್ನು ಮಾಡದೇ ಬೇರೆ ವಿಧಿಯಿಲ್ಲ.

ಆರಂಭದಲ್ಲಿ ಶೂಟಿಂಗ್ ಸಮಯದಲ್ಲಿ ನನ್ನನ್ನು ‘ನೀವು ಸುಮ್ಮನೆ ಜೊತೆಗಿರಿ’ ಎಂದು ಕರೆದಿದ್ದರು. ‘ಇದೊಂದು ಅನುಭವ ಆಗಲಿ’ ಎಂದು ನಾನೇ ಈ ಕೆಲಸ ಒಪ್ಪಿಕೊಂಡಿದ್ದೆ. ಆಗ ನಾವು ಇಂಥಾ ಕೆಲಸಗಳನ್ನು ಮಾಡಬೇಕು ಎನ್ನುವ ಕಲ್ಪನೆ ಕೂಡಾ ನನಗಿರಲಿಲ್ಲ. ಪುಟ್ಟಣ್ಣ ಮತ್ತು ಪುನೀತನ ಹತ್ತಿರ ಮಾಡಿಸಲಿಕ್ಕೆ ಅರ‍್ಯಾರೂ ಇಂಥಾ ಕೆಲಸಗಳನ್ನು ಮಾಡಿದವರೂ ಅಲ್ಲ. ನನಗೆ ನಿಜಕ್ಕೂ ಅಳು ಬಂತು. ಪುಟ್ಟಣ್ಣನಿಗೆ, ಪುನೀತನಿಗೆ ದಿನಕ್ಕೆ ಐದುನೂರು ರೂಪಾಯಿಯ ಹಾಗೆ ಕೆಲಸ ಒಪ್ಪಿಸಿದ್ದು. ಅವರಿಗೆ ಈ ಕೆಲಸವನ್ನೂ ಹೇಳುವುದು ಹೇಗೆ? ಇಬ್ಬರೂ ಒಳ್ಳೆಯ ಹುಡುಗರು, ನನ್ನ ಸ್ನೇಹಿತ ಕವಿ ವಿ. ಎಂ. ಮಂಜುನಾಥ್ ಕಡೆಯಿಂದ ಬಂದಿದ್ದರು. ಒಬ್ಬೊಬ್ಬರದ್ದೂ ಒಂದೊಂದು ಸ್ವಭಾವ. ಪುನೀತ ಬೆಳಗ್ಗೆ ದೇವಸ್ಥಾನಕ್ಕೆ ಹೋಗದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಬೆಳಗ್ಗೆ ಅಮ್ಮಾ ಎಂದು ನನ್ನ ರೂಂನ ಬಾಗಿಲು ತಟ್ಟುವಾಗ ಅವನ ಹಣೆಯಲ್ಲಿ ಕುಂಕುಮ ಇರುತ್ತಿತ್ತು. ‘ಇವನೇನು ಮೇಡಂ ತುಳಸಿ ಪೂಜೆ ಮಾಡುವ ಮುತ್ತೈದೆಯ ಥರಾ’ ಎಂದು ಪುಟ್ಟಣ್ಣ ರೇಗಿಸುತ್ತಿದ್ದ. ಬಾಬರಿ ಮಸೀದಿ ಬಿದ್ದ ದೃಶ್ಯಗಳ ಚಿತ್ರೀಕರಣಕ್ಕೆ ಕಾಶಿಗೆ ಷೂಟಿಂಗ್‌ಗೆ ಹೋದಾಗ, (ಅಲ್ಲಿ ನನ್ನ ಕೆಲಸ ಅಂತ ಏನೂ ಇರಲಿಲ್ಲವಾದ್ದರಿಂದ ಹೋಗಲಿಲ್ಲ) ದೇವಸ್ಥಾನಕ್ಕೆ ಹೋಗ್ತೀನಿ ಅಂತ ತಪ್ಪಿಸಿಕೊಂಡುಬಿಟ್ಟಿದ್ದನಂತೆ. ಇವನನ್ನು ಹುಡುಕುವಷ್ಟರಲ್ಲಿ ನಮ್ಮ ಜೀವ ಹೋಯ್ತು’ ಎಂದು ಪಂಚಾಕ್ಷರಿ ಹೇಳಿದ್ದರು. ಎಲ್ಲರೂ ನನ್ನನ್ನು ಅನ್ನುತ್ತಾರೆ ತಪ್ಪೇನಮ್ಮಾ’ ಎಂದಿದ್ದ ಪುಟ್ಟ ಹುಡುಗನ ಹಾಗೆ.

ಪುಟ್ಟಣ್ಣ ಮಾತ್ರ ನನ್ನ ಹಾಗೆ. ಹೋಗಬಾರದು ಅಂತೇನಿಲ್ಲ ಆದರೆ ಸಮಯ ನೋಡಿಕೊಂಡು ಆದರೆ ಮಾತ್ರ ಹೋಗುವುದು. ನನ್ನ ಕಷ್ಟ ನೋಡಲಾರದೆ ಇಬ್ಬರೂ ಹುಡುಗರು ಮೇಡಂ ಬನ್ನಿ ಒಪ್ಪಿಕೊಂಡಿದ್ದೀವಿ ಮಾಡೋಣ’ ಎಂದರು. ನನಗೆ ಬೇಸರ ಆಗಿದ್ದು ಎಲ್ಲರೂ ಎಲ್ಲ ಕೆಲಸಗಳನ್ನು ಮಾಡಬೇಕು ಎನ್ನುತ್ತಿದ್ದ ನಿರ್ದೇಶಕರು; ತಾವು ಮಾತ್ರ ಒಂದೂ ಕೆಲಸ ಮಾಡದೆ ಕೂತಿದ್ದು. ಅವರ ಟೆನ್ಷನ್ ಏನಿತ್ತೋ ಅನ್ನಿಸಿದರೂ ಮನಸ್ಸಿಗೆ ಕೆಟ್ಟದನ್ನಿಸುತ್ತಿತ್ತು. ಪಾತುಮ್ಮನ ಮನೆಯನ್ನು ಕಟ್ಟುವಾಗಲೂ ನೀವೇ ಎಲ್ಲಾ ಮಾಡಬೇಕು’ ಎಂದಿದ್ದರು. ಆದರೆ ನಾನು ತಮಾಷೆ ಮಾಡ್ತಾ ಇಲ್ಲ ತಾನೆ? ಮೂರು ಅಡಿ ಮರಳನ್ನು ಎತ್ತಿ ಹಾಕಿ ಗುಡಿಸಲನ್ನು ಕಟ್ಟುವುದು ಅಸಾಧ್ಯದ ಮಾತು’ ಎಂದು ಖಡಕ್ಕಾಗಿ ಹೇಳಿದ್ದರಿಂದ ಆ ಕೆಲಸ ನಮ್ಮ ಮೇಲೆ ಬೀಳಲಿಲ್ಲ.

ಮಾರನೆಯ ದಿನ ನಮ್ಮ ಶೂಟಿಂಗ್‌ನ ಮೊದಲ ದಿನ, ಪೂಜೆ ಆಗಬೇಕು. ಬಾಂಡ್ಲೆ ಸಾಂಬ್ರಾಣಿ ಇದ್ದಿಲು ಎಲ್ಲವನ್ನೂ ಇಟ್ಟುಕೊಂಡು ಪುನೀತ ಸಿದ್ಧವಾಗಿದ್ದ. ಕೇಳಿದರೆ ಕೊಡಲಿಕ್ಕೆ ಅಂತ ಖಾಲಿಯಿದ್ದ ರೊಟ್ಟಿಯ ಬುಟ್ಟಿ, ಅದಕ್ಕೆ ಸುತ್ತಿದ್ದ ಬಟ್ಟೆ, ಎಲೆಯಡಿಕೆ ಚೀಲ ಇತ್ಯಾದಿಗಳನ್ನು ನೋಡಿಕೊಳ್ಳುವಂತೆ ಪುಟ್ಟಣ್ಣನಿಗೆ ಹೇಳಿ, ಹೂವು ಹಣ್ಣು, ಕಾಯಿ ಮತ್ತು ಸ್ವೀಟ್ಸ್ ನ್ನು ತರಲು ನಾನು, ಚಂಚಲಾ ಹೋದೆವು. ಅದೆಲ್ಲಾ ತರುವ ಹೊತ್ತಿಗೆ ಪೂಜೆಯ ಸಿದ್ಧತೆಗಳು ನಡೆಯುತ್ತಿದ್ದವು. ಬಾಂಬೆಯಿಂದ ಬಂದ ಸ್ಪಾಟ್ ರೆಕಾರ್ಡಿಂಗ್ ತಂಡದ ಐದು ಜನ, ಕ್ಯಾಮೆರಾಮನ್ ಅಶೋಕ್ (ನಾನು ಅವನಲ್ಲ ಅವಳು ಚಿತ್ರದ ಕ್ಯಾಮೆರಾಮನ್) ಅವರ ಕಡೆಯ ಇಬ್ಬರು, ಡೈರೆಕ್ಷನ್ ಡಿಪಾರ್ಟ್ಮೆಂಟ್, ಕಾಸ್ಟ್ಯೂಮ್, ಆರ್ಟ್ ಹೀಗೆ ಪ್ರತಿಯೊಂದು ವಿಭಾಗದ ಒಂದಿಷ್ಟು ಜನ ಮತ್ತು ಕಲಾವಿದರು ಎಲ್ಲಾ ಸೇರಿ ಸುಮಾರು ಇಪ್ಪತ್ತೆರಡು ಜನ ಇದ್ದಿರಬಹುದು.

ಚಂಚಲಾ ನನಗೆ ಒಳ್ಳೆಯ ಗೆಳತಿಯಾಗಿಬಿಟ್ಟಿದ್ದರು. ಇಬ್ಬರೂ ಒಂದೇ ರೂಮಿನಲ್ಲಿ ಉಳಿದುಕೊಂಡಿದ್ದೆವು. ನನ್ನ ಸಂಸಾರ ಮಗ ಎಲ್ಲ ವಿಷಯಗಳನ್ನು ನಾನು ಅವರೊಂದಿಗೆ ಹಂಚಿಕೊಂಡರೆ ಅವರೂ ಕೂಡಾ ತಮ್ಮ ಜೀವನಾನುಭವವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಸಿನಿಮಾ ಪಯಣದಲ್ಲಿ ಸುಮಾರು ೨೫ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿತ್ತು. ಯಾರೇ ತುಳು ಸಿನಿಮಾವನ್ನು ಮಾಡುವುದಿದ್ದರೂ ಚಂದ್ರಹಾಸ ಉಲ್ಲಾಳ ಮತ್ತು ಚಂಚಲಾರ ಹೆಸರುಗಳನ್ನು ನೆನಪಿಸಿಕೊಳ್ಳುವುದು ಸಾಮಾನ್ಯ ಸಂಗತಿಯೇ. ಹೀಗಾಗಿ ಅವರು ಈ ಸಿನಿಮಾಕ್ಕೆ ಕೆಲಸ ಮಾಡುವುದು ಅವರ ಸಿನಿಪಯಣದಲ್ಲಿ ಇನ್ನೊಂದು ಸಂಖ್ಯೆಯಾಗಿತ್ತು.

ಶೂಟಿಂಗ್ ಶುರುವಾಗಿ ಮೊದಲ ಬ್ರೇಕ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಾ ಪಂಚಾಕ್ಷರಿ, ‘ಇಲ್ಲಿ ಇರೋರೆಲ್ಲಾ ಕೆಲಸ ಕಲೀಲಿಕ್ಕೆ ಬಂದವರು’ ಎಂದು ಹೇಳುತ್ತಿದ್ದುದನ್ನು ಕೇಳಿದ ಚಂಚಲಾ, ‘ಇಲ್ಲ ತನಗೆ ಆ ಜರೂರತ್ತಿಲ್ಲ’ ಎಂದು ನಿರ್ದೇಶಕರ ಜೊತೆ ಮಾತಾಡಿದ್ದಾರೆ. ಆ ಮಾತು ಬರುತ್ತಿದ್ದಂತೆ ‘ನಾನು ನಿಮಗೆ ಹಣ ಕೊಡ್ತೀನಿ ಅಂತ ಹೇಳೇ ಇಲ್ಲವಲ್ಲ? ನಿಮಗೆ ಇದು ಅನುಭವ ಕೆಲಸ ಮಾಡಿ’ ಎಂದಿದ್ದಾರೆ. ಯಾಕೆ ಅವರು ಹಾಗೆ ಅಂದುಕೊಂಡರೋ ಗೊತ್ತಿಲ್ಲ. ಅಥವಾ ಚಂಚಲಾ ತೋರಿದ ಅತ್ಯುತ್ಸಾಹ ಅವರಿಗೆ ಹಾಗನ್ನಿಸುವಂತೆ ಮಾಡಿತಾ? ಗೊತ್ತಿಲ್ಲ. ಈ ಮಾತನ್ನು ಕೇಳಿದ ಚಂಚಲಾಗೆ ಬೇಸರವಾಗಿದೆ.

ಮೊದಲ ಬಾರಿ ಲೊಕೇಷನ್ ನೋಡಲಿಕ್ಕೆ ನಿರ್ದೇಶಕರೊಬ್ಬರೆ ಹೋದಾಗ ಅವರನ್ನು ತನ್ನ ಸ್ಕೂಟಿಯಲ್ಲಿ ಎಲ್ಲಾ ಕಡೆಗೂ ಸುತ್ತಿಸಿದ್ದನ್ನೂ, ಪೆಟ್ರೋಲನ್ನೂ ತಾವೇ ಹಾಕಿಸಿದ್ದನ್ನು ಹೇಳಿಕೊಂಡು ಬೇಸರ ಮಾಡಿಕೊಂಡರು. ‘ಒಳ್ಳೆಯ ಮನಸ್ಸಿನ ಹುಡುಗಿ. ಚಂದ್ರಣ್ಣನ ಅತ್ತಿಗೆಯ ಪಾತ್ರ ನೀವೇ ಮಾಡಿ’ ಎಂದೆಲ್ಲಾ ನಿರ್ದೇಶಕರು ಹೇಳಿದ್ದರಿಂದ ಪಾಪ ನಮ್ಮದೇ ಸಿನಿಮಾ ಎಂದು ಆಭಿಮಾನದಿಂದ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಇವರು ಹೀಗೆಲ್ಲಾ ಹೇಳುತ್ತಾರಲ್ಲಾ? ಎಂದು ಕೋಪ ಅವರಿಗೂ ಬಂದಿದೆ. ಆದ್ದರಿಂದ ಈ ಸಂಗತಿಯನ್ನು ಅಲ್ಲಿಗೆ ಬಿಟ್ಟಿಲ್ಲ, ಅನುಭವಕ್ಕಾಗಿ ಬಂದಿಲ್ಲ ನನಗೆ ಸಾಕಷ್ಟು ಅನುಭವವಿದೆ’ ಎಂದು ಹೇಳಿ ಬಂದಿದ್ದಾರೆ. ‘ಇಂಥಾ ಮಾತನ್ನು ಕೇಳಿದ ಮೇಲೆ ನಾನು ಹೇಗೆ ಕೆಲಸ ಮಾಡಲಿ’ ಎಂದು ನನ್ನ ಹತ್ತಿರ ಹೇಳಿಕೊಂಡರು. ‘ನಿಮಗೆ ಒಪ್ಪಿಗೆ ಇಲ್ಲ ಎಂದು ಹೇಳಿ ಹೊರಟುಬಿಡಿ, ನಿಮಗೆ ಬೇಸರವಾಗಿದೆ ಎಂದಾದರೂ ಗೊತ್ತಾಗಲಿ’ ಎಂದೆ.

ಚಂದ್ರಹಾಸರು ಇದನ್ನೆಲ್ಲಾ ಗಮನಿಸಿಕೊಂಡು, ‘ನನಗೂ ಇದೇ ಉತ್ತರ ಸಿಕ್ಕರೆ ಏನು ಗತಿ, ಮಾತನಾಡಿ ನೋಡುವ ಇರಿ’ ಎಂದರು. ಚಂಚಲಾ ಅವರ ಮಾತಿಗೆ ಕಾಯಲಿಲ್ಲ, ಯಾರೇ ಸ್ವಾಭಿಮಾನಿಯಾದವರು ಅಂದುಕೊಳ್ಳುವ ಹಾಗೆ, ‘ನಾನು ಹೊರಡುತ್ತೇನೆ’ ಎಂದರು. ನಾನವರ ಕೈಗಳನ್ನು ಹಿಡಿದು, ‘ನನ್ನ ಮನಸ್ಸಿಗೆ ಕಷ್ಟ ಆಗುತ್ತೆ. ಆದರೆ ನಿಮ್ಮನ್ನು ಇರಿ ಎಂದು ಹೇಳಲಿಕ್ಕೆ ನನಗ್ಯಾವ ಅಧಿಕಾರವೂ ಇಲ್ಲ’ ಎಂದೆ ದುಃಖದಿಂದ. ಚಂಚಲಾ ಕೂಡಾ ನನ್ನನು ಬಿಟ್ಟುಹೋಗುವಾಗ ಗದ್ಗದಿತರಾಗಿದ್ದರು. ನಮ್ಮ ಮಧ್ಯೆ ತಿಳಿಯದ ಬಂಧವೊಂದು ಬೆಳೆದಿದೆ ಎಂದು ಆಗಲೇ ಗೊತ್ತಾಗಿದ್ದು. ‘ಹೋಗುತ್ತಿದ್ದೇನೆ ಎಂದು ಹೇಳುವುದು ಬೇಡವಾ?’ ಅಷ್ಟು ನೋವಿನ ನಡುವೆಯೂ ಕೇಳಿದ್ದರು. ‘ನಿಮ್ಮಿಷ್ಟ’ ಎಂದೆ. ಅವರು ಹೋಗುವುದು ನನ್ನೊಳಗೆ ನೋವನ್ನು ಹೆಚ್ಚಿಸುತ್ತಿತ್ತು.

ನನ್ನ ಬ್ಯಾಗಲ್ಲಿದ್ದ ಸೆಂಟ್ ಬಾಟೆಲ್ ತೆಗೆದು ಅವರ ಕೈಗಿಟ್ಟು ‘ಇದರ ಪರಿಮಳದ ಹಾಗೆ ನಮ್ಮ ಬಂಧವಿರಲಿ’ ಎಂದೆ. ರೂಂನಲ್ಲಿ ನಾನು ಸ್ಪ್ರೇಮಾಡಿಕೊಳ್ಳುವಾಗ, ಅದರ ಚಾಕೋಲೇಟ್ ಫ್ಲೇವರ್ ಅವರಿಗೆ ತುಂಬ ಇಷ್ಟವಾಗಿತ್ತು. ಛೇ ನಮ್ಮ ಟೀಂನಿಂದ ಇಂಥಾ ಒಳ್ಳೆಯವರು ಹೋಗುತ್ತಿದ್ದಾರಲ್ಲಾ, ಇನ್ನು ಚಂದ್ರಹಾಸರು ಏನು ಮಾಡುತ್ತಾರೋ ಎನ್ನುವ ಆತಂಕ ಕಾಡಿತ್ತು. ಚಂಚಲಾ ಹೊರಟ ಮೇಲೆ ಚಂದ್ರಹಾಸರು ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಂಡರು. ಚಂದ್ರಹಾಸರಿಗೆ ನಿರ್ದೇಶಕರು ಚಂಚಲಾರಿಗೆ ಅಂದ ಹಾಗೆ ಅನ್ನಲಿಕ್ಕೆ ಸಾಧ್ಯವಿರಲಿಲ್ಲ. ಯಾಕೆಂದರೆ ಲೋಕಲ್ ಜನರ ಜೊತೆ ಸಂಪರ್ಕಕ್ಕಾಗಿ ಅವರು ಇರಲೇಬೇಕಿತ್ತು. ಅನೇಕ ಘರ್ಷಣೆಗಳ ನಡುವೆಯೂ ನಾನೂ, ಚಂದ್ರಹಾಸರು ಟೀಂನಲ್ಲಿ ಉಳಿದುಕೊಂಡೆವು.

ಪಾತುಮ್ಮಾ ಸಿನಿಮಾ ನನಗೆ ಕೊಟ್ಟ ಅತ್ಯಂತ ಆಪ್ತ ಸಂಬಂಧ ಚಂಚಲಾರದ್ದು. ಈಗಲೂ ನಾವಿಬ್ಬರು ಅಪರೂಪಕ್ಕಾದರೂ ಆಪ್ತವಾಗಿ ಮಾತಾಡಿಕೊಳ್ಳುವುದಿದೆ. ಇಷ್ಟಾಗಿಯೂ ನಿರ್ದೇಶಕರು ಯಾಕಷ್ಟು ಕಟುವಾದರು? ಅದೂ ಚಂಚಲಾ ಥರದ ಮೃದುವಾದ ಹುಡುಗಿಯ ಬಗ್ಗೆ. ಏನಾದರೂ ಅಹಂ ಕ್ಲಾಶ್ ಆಯಿತಾ? ಅಥವಾ ಬರಿಯ ಹಣದ ವಿಷಯವಾ? ಎಂದು ಈಗಲೂ ಯೋಚಿಸುತ್ತೇನೆ. ಉತ್ತರ ಮಾತ್ರ ಸಿಕ್ಕಿಲ್ಲ. ಆದರೂ ಪ್ರಾಜೆಕ್ಟೊಂದು ಶುರುವಾದಾಗ ಯಾರು ಯಾರು ಕನಸುಗಳನ್ನು ಇರಿಸಿಕೊಂಡಿರುತ್ತಾರೋ ಅವರೆಲ್ಲಾ ಕೊನೆಯವರೆಗೂ ಇರಬೇಕು. ಆಗ ಅದು ತನ್ನೆಲ್ಲಾ ಉದ್ದೇಶಗಳನ್ನೂ ಪೂರ್ಣಗೊಳಿಸಿಕೊಳ್ಳುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: