ಪಿ ಚಂದ್ರಿಕಾ ಅಂಕಣ- ಯಾಕೋ ಮನಸ್ಸು ಪ್ರಾರ್ಥಿಸುತ್ತಿತ್ತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

13

ಡೋರಾಳ ಉತ್ಸಾಹ ತುಂಬ ಅಪರೂಪದ್ದು. ಆ ಸಣ್ಣ ದೇಹದಲ್ಲಿ ಪುಟಿಯುವ ಚೈತನ್ಯಕ್ಕೆ ಅವಳ ಸುತ್ತಲೇ ನಾವೂ ಇರಬೇಕು ಅನ್ನಿಸುತ್ತಿತ್ತು. ಅಲ್ಲೇ ಸುತ್ತಮುತ್ತ ಇರುವ ಜಾಗಗಳನ್ನು ಆಕೆ ನಮಗೆ ತೋರಿಸಿದಳು. ನೇತ್ರಾವತಿಯ ಆಸು ಪಾಸಲ್ಲಿ ಕಣ್ಣಿಗೆ ಕಾಣುವ ಪ್ರಕೃತಿಯ ಸೌಂದರ್ಯವನ್ನು ಅವಳು ತೋರಿಸಿಯೇ ನಾವು ನೋಡಬೇಕು ಎನ್ನುವ ವರ್ಣನೆ ಅವಳದ್ದು. ‘ನೀವು ಕವಿ ಆಗಬೇಕಿತ್ತು’ ಎಂದೆ. ಅವಳು ತುಸುವೇ ನಾಚಿಕೆಯಿಂದ, ‘ಅದೆಲ್ಲ ನನ್ನ ಕೈಲಿ ಎಲ್ಲಾಗುತ್ತೆ ಬಿಡಿ, ನಾನು ಓದಿದ್ದರೆ ಅದರ ಮಾತೇ ಬೇರೆಯಿತ್ತು’ ಎಂದಳು. ರಸ್ತೆಯ ಆ ಕಡೆಗೆ ದಾಟಿ ಹೋದರೆ ಸಾಲಾಗಿ ಸಾ ಮಿಲ್ಲುಗಳು.

ಒಂದಿಷ್ಟು ಹಳೆಯವು ನಿಂತು ಹೋಗಿದ್ದರೆ, ಮತ್ತಷ್ಟು ನಡೆಯುತ್ತಿದ್ದವು. ನಮಗೆ ಅದು ತೃಪ್ತಿಯಾಗಲಿಲ್ಲ. ಕೋಡಿಯಲ್ಲಿರುವ ಸಾಮಿಲ್ಲೆ ಎಲ್ಲಕ್ಕಿಂತ ಚೆನ್ನಾಗಿದೆ ಎನ್ನುವ ತರ‍್ಮಾನಕ್ಕೆ ಬಂದೆವು. ಆದರೆ ಡೋರಾ ನಮ್ಮನ್ನು ಬಿಡಲಿಲ್ಲ. ‘ನನ್ನ ಅಣ್ಣನ ಮನೆಯ ಬಳಿ ಒಂದು ಚಂದದ ಸಾಮಿಲ್ಲುಂಟು ನೋಡುವ ಬನ್ನಿ’ ಎಂದಳು. ಒಂದು ಹತ್ತು ಕಿಮೀ ದೂರವಾದ್ದರಿಂದ ನೋಡೇ ಹೊರಡುವ ಎಂದು ಹೊರಟೆವು.

ವಿಶಾಲವಾದ ಸಮುದ್ರತೀರದಿಂದ ಸ್ವಲ್ಪ ಒಳಗೆ ಇರುವ ಜಾಗ ಆಡಂ ಕುದುರು. ನಾನು ನಕ್ಕೆ ‘ಇದು ಯಾಕೆ ಈವ್ ಕುದುರಾಗಲಿಲ್ಲ’ ಅಂತ. ‘ಅಯ್ಯೋ ಆ ಆಡಂ ಅಲ್ಲ ಅದು. ಇಲ್ಲಿ ಆಡಂ ಹಣ್ಣುಗಳು ಬೆಳೆವ ಜಾಗ. ಅದಕ್ಕೆ ಈ ಹೆಸರು’ ಎಂದಳು ಡೋರಾ. ಕಾರನ್ನು ನೆರಳಿರುವ ಜಾಗಕ್ಕೆ ಹಾಕಿ ಕೆಳಗಿಳಿದರೆ ಎಲ್ಲವೂ ಮರಳೇ. ಸಮುದ್ರದ ಮೊರೆತ ಕೇಳುತ್ತಲೇ ಇತ್ತು. ಆ ಮರಳ ದಂಡೆಯನ್ನು ನೋಡುತ್ತಿದ್ದಂತೆ ಈ ಸಮುದ್ರಕ್ಕೆ ಆಳದಲ್ಲಿದ್ದ ಮರಳನ್ನು ಹೊತ್ತು ನೆಲಕ್ಕೆ ಚೆಲ್ಲುವುದನ್ನು ಬಿಟ್ಟರೆ ಬೇರೆ ಏನು ಕೆಲಸವಿದೆ? ಎನ್ನಿಸಿದಾಗ ನಗು ಬಂತು. ಒಳಗಿನ ಮರಳನ್ನು ಬಗೆದು ಹೊರಗೆ ಚೆಲ್ಲಿ ತನ್ನ ಆಳವನ್ನು ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಸಮುದ್ರಕ್ಕೂ ಅನಿವರ‍್ಯವಲ್ಲವಾ? ಪ್ರಕೃತಿ ಎಲ್ಲಕ್ಕೂ ಸಮಾನವಾದ ಬುದ್ಧಿಯನ್ನು ಹೇಗೆ ಕೊಟ್ಟಿರುತ್ತೆ!

ಡೋರಾ ಅಣ್ಣನನ್ನು ಪರಿಚಯ ಮಾಡಿಕೊಟ್ಟಳು. ಅಣ್ಣ ಯಾವುದೋ ಅವಘಡದಲ್ಲಿ ಹೆಚ್ಚು ಓಡಾಡದ ಸ್ಥಿತಿಯಲ್ಲಿದ್ದ. ಇಲ್ಲದಿದ್ದರೆ ಸಮುದ್ರಕ್ಕೆ ಮೀನಿಗೆ ಹೋಗುವವನೇ. ಈಗ ಅತ್ತಿಗೆ ದುಡಿದರೆ ಉಂಟು, ಇಲ್ಲದಿದ್ದರೆ ಕಷ್ಟ ಎನ್ನುವ ಹಾಗಿತ್ತು ಆ ಮನೆಯ ಸ್ಥಿತಿ. ನರ್ಸ್ ಆಗಿದ್ದ ಅತ್ತಿಗೆ ಮಂಗಳೂರಿನ ಯಾವುದೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲೇ ವಾಸ್ತವ್ಯ. ವಾರಕ್ಕೊಮ್ಮೆ ಮಾತ್ರ ಮನೆಗೆ ಬಂದು ಏನು ಬೇಕೋ ಎಲ್ಲವನ್ನು ಒದಗಿಸಿಕೊಟ್ಟು ಹೋಗುತ್ತಿದ್ದಳು. ಡೋರಾನೆ ಟೀ ಮಾಡಿದಳು. ಅದನ್ನು ಕುಡಿಯುವಾಗ ಡೋರಾನ ಅತ್ತಿಗೆಯ ನೋವು ಎಂಥಾದ್ದಿರಬೇಕು ಎಂದು ಸಂಕಟವಾಯಿತು.

ಆಡಂ ಕುದ್ರು ತುಂಬಾ ಯುನೀಕ್ ಆದ ಜಾಗ. ಸಮುದ್ರ ತೀರದಲ್ಲಿ ಸ್ವಲ್ಪವೇ ದೂರದಲ್ಲಿ ಕೇವಲ ಆರೇಳು ಸಾಲುಗಳ ಮನೆಗಳು ಮಾತ್ರ ಇತ್ತು. ‘ಬನ್ನಿ ಸಾಮಿಲ್ ನೋಡುವ’ ಎಂದು ಡೋರಾ ನಮ್ಮನ್ನು ಕರೆದುಕೊಂಡು ಆ ಬೀದಿಗಳನ್ನೆಲ್ಲಾ ತೋರಿಸಿದಳು. ಸಾಮಿಲ್ ತುಂಬಾ ಸಣ್ಣದಿತ್ತು. ಅಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅದು ಅನುಕೂಲವಾಗಿತ್ತು. ಇದ್ದಕ್ಕಿದ್ದ ಹಾಗೆ ಚಂಚಲಾ ಕೂಗಿಕೊಂಡರು. ನಾವು ಗಾಬರಿಯಿಂದ ತಿರುಗಿ ನೋಡಿದರೆ ಒಂದು ಪುಟ್ಟ ಹುಡುಗಿ ಅವರ ಕೈಗಳನ್ನು ಹಿಡಿದುಕೊಂಡಿದ್ದಳು. ಮುಗ್ಧವಾದ ನಗು ಮುಖದ ತುಂಬೆಲ್ಲಾ ಹರಡಿ ತನಗೇನೋ ಸಿಕ್ಕಿತು ಎನ್ನುವ ಭಾವ ಕಾಣುತ್ತಿತ್ತು.

ಸೂಕ್ಷ್ಮವಾಗಿ ಗಮನಿಸಿದರೆ, ಅದೊಂದು ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಿಲ್ಲದ ಹುಡುಗಿ. ನಾವೆಷ್ಟು ಹೇಳಿದರೂ ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. `ನಮ್ಮ ಮನೆಗೆ ಬನ್ನಿ’ ಎನ್ನುತ್ತಾ ಚಂಚಲಾರನ್ನು ಎಳೆದುಕೊಂಡು ಹೋದಳು. ಪಾಪ ಅನ್ನಿಸಿ ಚಂಚಲಾ `ನೀವೂ ಬನ್ನಿ’ ಎಂದು ನನ್ನನ್ನು ಕರೆಯುತ್ತಾ ಅವಳ ಜೊತೆ ಹೋದರು. ನಾನೂ ಹಿಂದೆ ಹೋದೆ. ಅವಳು ಮಾತ್ರ ಅವರನ್ನು ಬಿಡಲೇ ಇಲ್ಲ. ಮನೆ ತುಂಬಾ ಸಣ್ಣದಿತ್ತು. ಆ ಹುಡುಗಿಗೆ ತಿಳಿಯುತ್ತಿತ್ತೋ ಇಲ್ಲವೂ ಮನೆಯೆಲ್ಲ ಹರಡಿಟ್ಟ ಹಾಗಿತ್ತು. ಅಪ್ಪ ದೋಣಿಗೆ ಹೋದರೆ ಅಮ್ಮ ಎಲ್ಲೋ ಕೆಲಸಕ್ಕೆ ಹೋಗುತ್ತಾಳೆ.

ಹುಡುಗಿ ಬಿಸ್ಕೆಟುಗಳನ್ನು ಕೈಗೆ ಕೊಡಲು ಬಂದಳು. ಅವಳ ಬಾಯಿಂದ ಸೋರುತಿದ್ದ ಜೊಲ್ಲು ನಮಗೆ ಮುಜುಗರ ಕೊಟ್ಟಿತು. ಅದೂ ಇದೂ ಹೇಳಿ ಉಪಾಯವಾಗಿ ತಪ್ಪಿಸಿಕೊಂಡು ಬಂದರೆ ಹಿಂದೆ ಬಂದು, ‘ನನ್ನ ಬಿಟ್ಟು ಹೋಗಬೇಡಿ’ ಎಂದು ಕೈಹಿಡಿದು ಎಳೆಯತೊಡಗಿದಳು. ಮನೆಗೆ ಹೋಗು ಎಂದು ಡೋರಾಳ ಅಣ್ಣ ಗದರಿಸಿದ್ದಕ್ಕೆ, ಅಳಲಿಕ್ಕೆ ಶುರು ಮಾಡಿದಳು. ಅಲ್ಲಿದ್ದ ಗಂಡಸೊಬ್ಬರು ಅವಳನ್ನು ಬಲವಂತಕ್ಕೆ ಮನೆಗೆ ಎಳೆದೊಯ್ದರು. ಅವಳ ಅಳು ಮಾತ್ರ ನಮ್ಮ ಕಿವಿಗೆ ಮುಟ್ಟುತ್ತಲೇ ಇತ್ತು. `ಅವಳು ನಿಮ್ಮನ್ನು ಯಾರೋ ತಮ್ಮವರೇ ಎಂದು ಅಂದುಕೊಂಡಿದ್ದಾಳೆ, ನೀವು ಹೊರಡಿ ಪರವಾಗಿಲ್ಲ, ಸ್ವಲ್ಪ ಹೊತ್ತು ಅತ್ತು ಸುಮ್ಮನಾಗುತ್ತಾಳೆ ಎಂದರು ಡೋರಾಳ ಅಣ್ಣ. ಕಾರಿನಲ್ಲಿ ಕೂತರೂ ಅವಳ ಅಳು ಕೇಳುತ್ತಲೇ ಇತ್ತು. ಎಲ್ಲರ ಮನಸ್ಸೂ ಖಿನ್ನವಾಗಿತ್ತು, ಅವಳನ್ನು ಸಂತೈಸಬೇಕಿತ್ತು. ಅವಳು ನಮ್ಮನ್ನು ನಮ್ಮವರು ಅಂದುಕೊಂಡರೆ ನಾವು ಅವಳನ್ನು ಬಿಡಿಸಿಕೊಳ್ಳುವುದರ ಕಡೆಗೇ ಯೋಚಿಸುತ್ತಿದ್ದುದಕ್ಕೆ ನಮ್ಮ ಬಗ್ಗೆ ನಮಗೇ ಬೇಸರ ಅವರನ್ನು ಕಾಡುತ್ತಿತ್ತು.

ಸಂಜೆಯಾದ್ದರಿಂದ ಮಧ್ಯ ದಾರಿಯಲ್ಲಿ ಹೊಟೇಲ್‌ಗೆ ಹೋದೆವು. ಅಲ್ಲಿ ಕುಳಿತು ‘ಕೋಳಿಗಳನ್ನು ಶೂಟಿಂಗ್‌ಗೆ ಬಳಸಿಕೊಳ್ಳಲು ಪರ್ಮಿಷನ್ನಿಗೆ ಹಾಕಬೇಕು. ಒಂದು ವಾರದಲ್ಲಿ ಪರ್ಮಿಷನ್ ಸಿಗುತ್ತೆ’ ಎಂದು ಡೋರಾಳ ಎಲೆಕ್ಷನ್ ಕಾರ್ಡನ್ನು ಕೇಳಿದರು ಪಂಚಾಕ್ಷರಿ. `ಅದಕ್ಕೇನಂತೆ ತಗೊಳ್ಳಿ’ ಎಂದು ಕೊಟ್ಟೇಬಿಟ್ಟಳು ಡೋರಾ. ನಾವು ಯಾರಿಗಾದರೂ ಏನನ್ನಾದರೂ ಕೊಡುವ ಮುಂಚೆ ಹತ್ತು ಸಲ ಯೋಚನೆ ಮಾಡುತ್ತೇವೆ.

ಯಾವ ಯೋಚನೆಯೂ ಇಲ್ಲದೆ ತನ್ನ ಡಾಕ್ಯುಮೆಂಟ್‌ಅನ್ನು ಸಲೀಸಾಗಿ ಕೊಟ್ಟಳಲ್ಲ ಅನ್ನಿಸಿತ್ತು. ಅಷ್ಟರಲ್ಲಿ ಅವಳ ಗಂಡ ಮನೆಗೆ ಬಂದಿದ್ದಾರೆ ಎಂದು ಮಗಳು ಫೋನ್ ಮಾಡಿದಳು. ಅವಳ ಮುಖದಲ್ಲಿ ಮರೆಮಾಚಿದ ಗಾಬರಿಯಿತ್ತು. `ಏನಾದರೂ ಸಮಸ್ಯೆಯಾ?’ ಎಂದೆ. ಅದನ್ನು ಒಪ್ಪಿಕೊಳ್ಳಲು ಅವಳು ಸಿದ್ಧಳಿರಲಿಲ್ಲ. ಗಂಡ ಕುಡುಕನಾ? ಅಥವಾ ಡೋರಾ ನಮ್ಮ ಜೊತೆಗೆ ಬಂದದ್ದಕ್ಕೆ ಗಂಡ ಮಗಳನ್ನು ಬೈದನಾ? ಇವಳಿಗೆ ಹೊಡೆತ ಬೀಳಬಹುದಾ? ನನಗೇ ಗೊತ್ತಿಲ್ಲದೆ ಅವಳ ಸುತ್ತಾಕಥೆ ಹೆಣೆಯತೊಡಗಿದೆ.

ಮಗಳಿಂದ ಬಂದ ಫೋನ್‌ಕಾಲ್‌ನ ನಂತರ ಮನೆಗೆ ಹೋಗಲಿಕ್ಕೆ ಅವಸರ ಮಾಡತೊಡಗಿದಳು. ಅವಳನ್ನು ಮನೆಗೆ ಬಿಟ್ಟು ಹೊರಡುವುದು ಅನಿವರ‍್ಯವಾಗಿತ್ತು. ಜಾಗ ಸರಿಯಾಗಲಿಲ್ಲ ಎನ್ನುವ ಬೇಸರ ಅವಳಿಗಿತ್ತು. ಕಾರನ್ನು ಇಳಿದವಳು `ಮರೀಬೇಡಿ ಈ ಕಡೆ ಬಂದಾಗ ಬನ್ನಿ. ಶೂಟಿಂಗ್‌ಗೆ ಕೋಳಿ ಬೇಕಿದ್ದರೆ ಕೊಡುವ’ ಎಂದೂ ಹೇಳಿದಳು. ಅವಳು ಕಾರನ್ನು ಇಳಿದು ಹೋಗುತ್ತಿದ್ದರೆ, ನನಗೆ ಅವರ ಮನೆಯಲ್ಲಿ ಈಗ ಜಗಳ ಆಗಬಹುದೇ, ಸುಮ್ಮನೆ ಇದ್ದವಳನ್ನು ಕರೆದುಕೊಂಡು ಹೋಗಿ ಏನೆಲ್ಲಾ ಆಯಿತಲ್ಲಾ? ಎನ್ನಿಸಿತು. ಚಂದ್ರಹಾಸ್‌ಗೆ ಅರ್ಥವಾಗಿರಬೇಕು, `ಏನೂ ಆಗಲ್ಲ ಸುಮ್ಮನಿರಿ’ ಎಂದರು. ಮನಸ್ಸು ತಡೆಯದೆ ತಿರುಗಿ ನೋಡಿದರೆ ಅವಳ ಮನೆಯ ಮೇಲೆ ಹಾಕಿದ್ದ ಶಿಲುಬೆಯ ಗುರುತು ಮಬ್ಬು ಕತ್ತಲಲ್ಲೂ ಹೊಳೆಯುತ್ತಿತ್ತು. ಯಾಕೋ ಮನಸ್ಸು ಪ್ರಾರ್ಥಿಸುತ್ತಿತ್ತು, `ದೇವರೆ ಡೋರಾಗೆ ಏನೂ ಆಗದಿರಲಿ.’

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: