ಪಿ ಚಂದ್ರಿಕಾ ಅಂಕಣ- ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

11

ಬೆಟ್ಟಂಪಾಡಿಯ ದಾರಿಯುದ್ದಕ್ಕೂ ಸಮುದ್ರದ ಕೊರೆತದಿಂದ ಹಾಳಾಗಿರುವ ಮನೆಗಳು ಒಂದೆಡೆಯಾದರೆ ಅದಕ್ಕೆ ಆತುಕೊಂಡಿದ್ದ ಸಮುದ್ರ ತಂದು ಸುರಿಯುತ್ತಿದ್ದ ಮರಳು ಇನ್ನೊಂದೆಡೆ. ಕೋಳಿಗಳು, ನಾಯಿಗಳು ಮಕ್ಕಳ ಜೊತೆ ಯಾವ ಬೇಧವೂ ಇಲ್ಲದೆ ಬೆರೆತುಹೋಗಿದ್ದವು. ಆ ಮನೆಗಳ ಒಳಗೆ ಹೋದೆವು ಆದರೆ ಹೊರಗೆ ಬರುವವರೆಗೂ ಜೀವ ಕೈಲಿ ಯಾವಾಗ ಬಿದ್ದುಬಿಡುತ್ತವೋ ಎಂದು. ಮರಳು ನಮ್ಮ ಕಾಲನ್ನು ಒಳಗೆ ಎಳೆದುಕೊಳ್ಳುವಷ್ಟು ನಯವಾಗಿರುತ್ತಿದ್ದವು, ಬಿಸಿಲಿನ ಝಳ ನಮ್ಮ ಕಾಲಿಗೆ ಬೇಗ ನಡೆಯುವ ಪಾಠವನ್ನು ಹೇಳುತ್ತಿದ್ದರೆ, ಅಲ್ಲಲ್ಲಿ ತೆಂಗಿನ ಮರಗಳು, ಮನೆಯ ಮುಂದೆ ಹೀಗೇ ಹಾಕಿಕೊಂಡಿದ್ದ ಹೂವಿನ ಗಿಡಗಳು ಬಯಲಲ್ಲಿ ಹಸಿರನ್ನು ತೋರಿಸುತ್ತಿದ್ದವು. ಬಿದ್ದು ಹೋದ ಮನೆಗಳಿಗೆ ಲೆಕ್ಕವೇ ಇಲ್ಲ. ಎಷ್ಟು ಕುಟುಂಬಗಳು ಈ ಮನೆಗಳನ್ನು ಕಳಕೊಂಡು ಅನಾಥವಾಗಿದ್ದಾವೋ? ಎಲ್ಲೋ ದೂರ ಕುಳಿತು ಮಾಡಿದ ಕಥೆ ವಾಸ್ತವಕ್ಕೆ ಬರುತ್ತಿದ್ದ ಹಾಗೆ ಹತ್ತಿರವೇ ಆಗುತ್ತಿತ್ತು.

ಮನೆ ಕಳಕೊಂಡವರ ಕಥೆ ಇಲ್ಲಿ ಎಷ್ಟೊಂದು! ಅಂತಃಕರಣದ ಕಣ್ಣಿಂದ ಜಗತ್ತನ್ನು ನೋಡುವಾಗ ತಾಯ್ತನವೊಂದು ಎಚ್ಚರವಾಗುತ್ತದೆ. ಹಾಗೆ ಎಚ್ಚರಗೊಂಡ ಅರಿವಿಗೆ ಯಾವ ಅಡ್ಡಿಯೂ ಇಲ್ಲದೆ ಎಲ್ಲವೂ ಕಾಣತೊಡಗುತ್ತದೆ. ಇದೆಲ್ಲಾ ಅಲ್ಲ ನನ್ನನ್ನು ಕಾಡುತ್ತಿದ್ದ ಪ್ರಶ್ನೆ. ಅದು ಬೇರೆಯದೇ. ಮನುಷ್ಯ ಯಾಕಿಷ್ಟು ಹಠಮಾರಿ? ಪ್ರಕೃತಿ ಬೇಡ ಎಂದು ಹೇಳಿದರೂ ನಾನು ಸುಮ್ಮನೆ ಬಿಡೊಲ್ಲ ಅಂತ ಎಚ್ಚರಿಕೆ ಕೊಟ್ಟರೂ, ಮತ್ತೆ ಮತ್ತೆ ಅದನ್ನೇ ಮಾಡುತ್ತಾನೆ. ಬೆಟ್ಟ ಕಡೀತಾನೆ. ಹರಿಯೋ ನದಿಗೆ ಒಡ್ಡನ್ನು ಕಟ್ಟುತ್ತಾನೆ, ಹಕ್ಕಿಯಂತೆ ಹಾರ್ತಾನೆ, ಅಲೆಯ ಮೇಲೆ ಜಿಗೀತಾನೆ… ಕಡೆಗೆ ಕೂತ ಕಡೆ ಒಂದೇ ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ. ಇದಕ್ಕೇ ಭಯ ಆಗೋದು ಇದೆಲ್ಲಾ ಒಂದೊಂದು ಹುಚ್ಚಾ?! ಮನುಷ್ಯನ ಈ ಹುಚ್ಚು ಏನೂ ಆಗದೇ ಹೋಗಬಹುದು ಆದರೆ ಎಲ್ಲಕ್ಕೂ ಸಡ್ಡು ಹೊಡೆದು, ಎದೆಯೊಡ್ಡುವ ಅವನ ಛಲಕ್ಕೆ, ಅವನ ಇಚ್ಛಾಶಕ್ತಿಗೆ ಮಾತ್ರ ದೊಡ್ಡ ಉದಾಹರಣೆ.‌

ಎಲ್ಲವನ್ನೂ ದಾಟಿ ತೋಟದ ಮಧ್ಯದಲ್ಲಿ ಆ ಮನೆಗೆ ಬಂದೆವು. ಕಾರು ತೋಟದ ಗೇಟಿನಲ್ಲೇ ನಿಲ್ಲಿಸಬೇಕಾಯಿತು. ಒಳಗೆ ಬರುತ್ತಿರಲಿಲ್ಲ. ಬಂದರೂ ತಿರುಗಿಸಿಕೊಳ್ಳುವುದು ಕಷ್ಟವೇ. ಮರಳು… ಮರಳು, ಎಲ್ಲಿ ನೋಡಿದರೂ ಮರಳೇ. ಚಪ್ಪಲಿ ಹಾಕಿದ್ದರೂ ಕಾಲ ಬೆರಳುಗಳಿಗೆ ಈ ಮರಳು ಅಂಟಿಕೊಳ್ಳುವುದಾರೂ ಹೇಗೆ? ತುಟಿ ಸವರಿಕೊಂಡರೆ ಉಪ್ಪು. ಸಮುದ್ರದ ಮೇಲಿನ ಗಾಳಿಗೆ ತಂಪಿನ ಜೊತೆ ಉಪ್ಪನ್ನೂ ಹೊತ್ತು ತರುವ ಚಟ. ಸಂಬಂಧಕ್ಕೆ ಉಪ್ಪೇ ಕಾರಣವಂತೆ. ಹೀಗೆ ಸುತ್ತುತ್ತಿರುವ ನಮಗೂ, ಈ ಜಾಗಗಳಿಗೂ, ಈ ಮನೆಗಳಿಗೂ ಯಾವ ನಂಟು? ಕಾಣದ ಜನ ಪ್ರೀತಿಯಿಂದ ಮಾತಾಡುತ್ತಾರೆ. ಮನೆಯಲ್ಲಿ ಏನೋ ಮಾಡಿದ್ದನ್ನು ಕೊಡುತ್ತಾರೆ. ನಮ್ಮಲ್ಲಿಗೆ ಬಂದರು ಅಂತಲೋ, ಹಸಿದಿದ್ದಾರೆ ಅಂತಲೋ ಗೊತ್ತಿಲ್ಲ.

ನಾವು ಬರುವ ಸುದ್ದಿ ಕೇಳಿಯೇ ಬೆಟ್ಟಂಪಾಡಿಯ ತೋಟದ ಆ ಮನೆಯಲ್ಲೂ ಚಹಾ ಕುದಿಯುತ್ತಿತ್ತು. ಯಾರೋ ಮಂಗಳೂರಿನಲ್ಲಿದ್ದ ಮುಸಲ್ಮಾನರದ್ದು ಆ ತೋಟ. ಅಲ್ಲಿ ಕಾವಲಿಗಾಗಿ ತಂದಿರಿಸಿದ್ದ ಕುಟುಂಬವದು. ತೆಂಗಿನ ಗೊನೆಗಳು ಸಂವೃದ್ಧವಾಗಿತ್ತು. ಕೆಳಗೆ ನಿಂತು ಮೇಲೆ ನೋಡಿದರೆ, ಅದರ ಗರಿಗಳು ಛತ್ರಿಯ ಹಾಗೆ ಹರಡಿ, ಮಧ್ಯದಲ್ಲಿ ದುಂಡಗೆ ಗರಿಗಳಿಲ್ಲದ ಆ ಜಾಗ ಆಕಾಶವನ್ನು ಸ್ಪಷ್ಟವಾಗಿ ತೋರುತ್ತಿತ್ತು. ಹೀಗೆ ಹುಡುಕಾಟ ನಡೆಸುವಾಗಲೆಲ್ಲಾ ನನಗೊಂದು ವಿಚಿತ್ರ ಅನುಭವ. ಬಾಳಿ ಬದುಕಿದ ಮನೆಯ ಅಪರೂಪದ ಕ್ಷಣಗಳನ್ನು ನಾವು ಹೇಗೆ ನಮ್ಮದನ್ನಾಗಿ ಮಾಡಿಕೊಂಡುಬಿಡುತ್ತೇವಲ್ಲಾ ಎಂದು. ಬಳಸಿ ಹಳತಾದ ಆ ಮನೆಗೆ ಸಹಜವಾದ ವಸ್ತುಗಳು, ಜಗುಲಿ ಗೋಡೆಗಳು ಹಳದಾದಷ್ಟು ಒಂದು ಟೆಕ್ಸ್ಚರ್ ಬಂದುಬಿಟ್ಟಿರುತ್ತದೆ.

ಆ ಮನೆಯ ಓನರ್ ಹೆಸರು ಮರೆತಿದ್ದೇನೆ. ನಾವು ಹೋದಾಗ ಆತನ ಹೆಂಡತಿ ಮತ್ತು ಮಗಳು ಮಾತ್ರ ಇದ್ದರು. ಮನೆ ತುಂಬಾ ಚೆನ್ನಾಗಿತ್ತು. ಶ್ರೀಮಂತಿಕೆಯ ಯಾವ ಲಕ್ಷಣಗಳೂ ಅಲ್ಲಿರಲಿಲ್ಲ. ಗೂಡಲ್ಲಿ ಪೇರಿಸಿದ ಬಟ್ಟೆಗಳು, ಓದುವ ಹುಚ್ಚಿನ ಹುಡುಗಿ ಅಲ್ಲೇ ಪಕ್ಕದಲ್ಲಿ ಜಾಗ ಮಾಡಿಕೊಂಡು ಇಟ್ಟಿದ್ದ ಪುಸ್ತಕಗಳು, ಎಲ್ಲ ಮುಸಲ್ಮಾನರ ಮನೆಯಲ್ಲಿರುವ ಹಾಗೆ ಕಾಬಾದ ಫೋಟೋ, ಅದರ ಅಕ್ಕಪಕ್ಕದಲ್ಲಿ ಹಿಂದೆ ಎಂದೋ ಅಪರೂಪಕ್ಕೆ ತೆಗೆದ ಫ್ಯಾಮಿಲಿ ಫೋಟೋ, ಮಂಚ, ಮಂಚಕ್ಕೆ ಆತುಕೊಂಡಂತೆ ಅಲ್ಲೊಂದು ಸಣ್ಣ ಟೀಪಾಯಿ. ಅದರ ಮೇಲೆ ಕರೆಂಟು ಹೋದಾಗ ಹಚ್ಚುಲು ಸಿದ್ಧವಾಗಿದ್ದ ಲಾಟೀನು ಪದೇ ಪದೇ ಕರೆಂಟು ತೆಗೆಯುತ್ತಾರೆ ಎನ್ನುವುದನ್ನು ಹೇಳುತ್ತಿತ್ತು.

ಒಳಕೋಣೆಗೆ ಆಚೆ ಕಡೆಯಿಂದ ಒಂದು ಬಾಗಿಲು, ತೆರೆದರೆ ಕೋಳಿ, ಆಡುಗಳು. ಅಂಗಳವನ್ನು ಗುಡಿಸಿ ಚೆನ್ನಾಗಿ ಇರಿಸಿಕೊಂಡಿದ್ದರು. ಮನೆಯ ಪಕ್ಕಕ್ಕೆ ಅಡುಗೆಮನೆ. ಅದು ಬೇರೆಯೇ ಎನ್ನಿಸುವ ಹಾಗೆ ಇತ್ತು. ಅಲ್ಲಿ ಮಣ್ಣಿಂದ ಮಾಡಿದ ಒಲೆ ಅದರ ಮೇಲೆ ದುಂಡನೆಯ ಹಂಚಿಟ್ಟು ಪತ್ತರು(ತೆಳುವಾದ ಅಕ್ಕಿಯ ರೊಟ್ಟಿ)ಗಳನ್ನು ರಾತ್ರಿಯ ಊಟಕ್ಕಾಗಿ ಸುಡುತ್ತಿದ್ದರು. ನಮಗೋ ಕುತೂಹಲ ಇಷ್ಟು ತೆಳುವಾಗಿ ಹೇಗೆ ತಟ್ಟುತ್ತಾರೆ ಎಂದು. ತೆಳುವಾದ ಕೈಬೆರಳುಗಳು ಸಲೀಸಾಗಿ ಓಡಾಡುತ್ತಿದ್ದರೆ ವಾದ್ಯವೊಂದರ ಮೇಲೆ ಆಡಿದ ಅನುಭವ. ಆ ರೊಟ್ಟಿಗಳೋ ಧಾರವಾಡದ ಜೋಳದ ರೊಟ್ಟಿಗಿಂತಲೂ ತೆಳು.

ಇಡೀ ರೊಟ್ಟಿಯನ್ನು ಮಡಚಿ ಒಮ್ಮೆಗೇ ಬಾಯಿಗೆ ಹಾಕಿಕೊಳ್ಳಬಹುದು- ಅಷ್ಟು ತೆಳು, ಮತ್ತು ಮೃದು. ಆಕೆ ಅದನ್ನು ತಟ್ಟುತ್ತಿದ್ದ ರೀತಿಯನ್ನು ನೋಡಿದ ಮೇಲೆ ಇದನ್ನು ತಿನ್ನದೇ ಇರಲು ಹೇಗೆ ಸಾಧ್ಯ ಎನ್ನುವಂತಿತ್ತು. ಮಣೆಗೆ ಕಟ್ಟಿದ ತೆಳು ಕಾಟನ್ ಬಟ್ಟೆ ಅದರ ಮೇಲೆ ರೊಟ್ಟಿಯ ಹಿಟ್ಟನ್ನು ಇಟ್ಟು ತಟ್ಟುತ್ತಿದ್ದರೆ ಪುಟ್ಟ ಮಗುವೊಂದನ್ನು ತಟ್ಟಿ ಮಾತಾಡಿಸುತ್ತಿದ್ದ ಹಾಗೆ ಅನ್ನಿಸುತ್ತಿತ್ತು. ಅದನ್ನು ನೋಡುತ್ತಿದ್ದ ನಮಗೆ ತಟ್ಟಲು ಆಕೆ ಕೊಟ್ಟರು. ನಮಗದು ಬಾರದೆ ಒದ್ದಾಡಿದೆವು. ಹಾಗೂ ಹೀಗೂ ಮಾಡಿದ ರೊಟ್ಟಿಯನ್ನು ತಿನ್ನುವ ಎಂದರೆ ಅವತ್ತು ಅವರ ಮನೆಯಲ್ಲಿ ಮೀನಿದ್ದಿದ್ದರಿಂದ ಇನ್ನೊಮ್ಮೆ ಬಂದಾಗ ನಮಗಾಗಿ ತರಕಾರಿ ಮಾಡುವುದಾಗಿ ಆಕೆ ಹೇಳಿದ್ದರು. ನಾನು ಚಂಚಲಾ ಇಬ್ಬರೂ ಸಂಭ್ರಮಿಸಿದ್ದೆವು ಇಷ್ಟು ಒಳ್ಳೆಯವರಲ್ಲಾ ಎಂದು.

ಆಕೆಯ ಕಿವಿಯಲ್ಲಿ ಅಲೀಖತ್ತು ಇರಲಿಲ್ಲ. ಚಿನ್ನದ ಅಲೀಖತ್ತು ಶ್ರೀಮಂತಿಕೆಯ ಸಂಕೇತ ಎಂದೇ ಭಾವಿಸುತ್ತಾರೆ. ಆದರೆ ಆ ಮನೆಯಲ್ಲಿ ಬಡತನವನ್ನೂ ಮೀರಿದ್ದು ಏನೋ ಇತ್ತು. ಅದು ಮನೆಯ ಜನರಲ್ಲಿನ ಪ್ರಸನ್ನತೆಯಿಂದ ಮಾತ್ರ ಸಿಗುವಂಥದ್ದು. ಮಗಳಿಗೆ ತುಂಬಾ ಓದುವ ಹಂಬಲ, ತಂದೆ-ಅಣ್ಣ ಇಬ್ಬರೂ ಗ್ಯಾರೇಜಿನಲ್ಲಿ ಕೆಲಸ ಮುಗಿಸಿ ಬಂದರೆ ತಾಯಿ ಬೆಳಗಿನಿಂದ ಸಂಜೆಯವರೆಗೂ ತೋಟ ನೋಡಿಕೊಂಡು ಬಿದ್ದ ತೆಂಗಿನ ಕಾಯನ್ನು ಒಂದೆಡೆಗೆ ಒಟ್ಟಿ, ಮನೆಯ ಕೆಲಸ ಮಾಡುತ್ತಿದ್ದಳು. ಸಣ್ಣಗಿನ ಆಕೆ ತನ್ನ ಅಳತೆಗೂ ಮೀರಿದ ದೊಗಲೆ ಬ್ಲೌಸ್ ಧರಿಸಿ ತೆಳು ನೈಲಾನ್ ಸೀರೆ ಉಟ್ಟಿದ್ದಳು. ಉಟ್ಟ ಸೀರೆಯಲ್ಲೂ ಅಚ್ಚಕಟ್ಟುತನ ಆಕೆಯ ನಾಜೂಕನ್ನು ತೋರುತ್ತಿತ್ತು. ಇಂಥವರ ಕೈಲಿ ಪಾತ್ರ ಮಾಡಿಸಿಬಿಟ್ಟರೆ ಪಾತ್ರದ ನೈಜತೆ ಏನೂ ಮಾಡದೆಯೂ ಬಂದುಬಿಡುತ್ತದೆ ಎಂದು ನಮಗೆ ಗೊತ್ತಾದರೂ ಪಾತ್ರ ಮಾಡುವಷ್ಟು ಸ್ವಾತಂತ್ರ್ಯ ಆಕೆಗೆ ಇರುವುದಿಲ್ಲ ಎನ್ನುವ ವಾಸ್ತವ ಕೂಡಾ ನಮಗೆ ಗೊತ್ತಿತ್ತು.

ತನ್ನ ಗಂಡನಿಗೆ ಫೋನ್ ಮಾಡಿ ಹೀಗೆ ಬಂದಿದ್ದಾರೆ ಎಂದು ಆಕೆ ಹೇಳುತ್ತಿದ್ದರೆ ಅವಳ ಮಾತಿನಲ್ಲಿ ಒಂದು ಲಯಬದ್ಧತೆ ಇತ್ತು. ಅವರು ಬರುವುದು ತಡ ಆಗುತ್ತೆ ಎಂದಳು. ಚಹಾ ಮತ್ತು ಬಿಸ್ಕೇಟುಗಳು ಎರಡೆರಡು ಬಾರಿ ಆಯಿತು. ಆ ಮನೆಯಲ್ಲಿ ಪಾಪ ಏನಿರುತ್ತೋ ಇಲ್ಲವೋ ಎಂದು ದುಡ್ಡನ್ನು ಕೊಡಲು ಹೋದೆವು. ನೀವು ನಮ್ಮ ಅತಿಥಿಗಳು ಇಷ್ಟು ಕೊಡಲಾರೆವೇ? ಎಂದು ಆಕೆ ಹೇಳಿದಾಗ ಅವರನು ಹಾಗೆ ಯೋಚಿಸಿದ್ದಕ್ಕೆ ನಾಚಿಕೆ ಎನ್ನಿಸಿತು. ಬಡತನ ಎನ್ನುವುದು ಹೊರಗಿನ ಸಂಗತಿ, ಕಾರುಗಳಲ್ಲೇ ಓಡಾಡುವ ದೊಡ್ದ ದೊಡ್ಡ ಮನೆಗಳಲ್ಲಿ ವಾಸಿಸುವ ನಾವುಗಳು ಎಷ್ಟೋ ಸಲ ಒಳಗೆ ಬಡವರಾಗಿರುತ್ತೇವೆ. ಆ ಮನೆಯಲ್ಲಿ ನಮಗೆ ಸಿಕ್ಕಿದ್ದು ಎರಡು ಸಂಗತಿಗಳು.

ಪಾತುಮ್ಮನ ಮಗಳು ಸಲ್ಮಾಳ ಅತ್ತೆ ಮನೆಯಾಗಿ ಶೂಟ್ ಮಾಡಬಹುದು ಎಂದಾಗಿದ್ದು, ಮತ್ತು ರೊಟ್ಟಿ ಮಾಡಲಿಕ್ಕೆ ಜನ ಬೇಕಲ್ಲ ಅದನ್ನು ಕಥೆಯ ಮುಖ್ಯಪಾತ್ರಧಾರಿಯಾದ ಹಿರಿಯ ಕಲಾವಿದೆ ಬಿ. ಜಯಶ್ರೀಯವರಿಗೆ ಹೇಳಿಕೊಡಲಿಕ್ಕೆ ಕೂಡಾ. (ಹೇಳಿಕೊಡಲಿ ಖಂಡಿತಾ ಮಾಡುತ್ತೇನೆ’ ಎಂದು ಉತ್ಸಾಹದಿಂದ ಹೊಗೆಯ ಒಲೆಯಮುಂದೆ ಕಣ್ಣು ತುಂಬಾ ನೀರು ತುಂಬಿಸಿಕೊಂಡು ರೊಟ್ಟಿಗಳನ್ನು ತಟ್ಟಿದ್ದರು.) ತಟ್ಟುವುದನ್ನು ಹೇಳಿಕೊಡಲು ಬೆಟ್ಟಂಪಾಡಿಯಿಂದ ಮುಕ್ಕಚೇರಿಗೆ ಆಕೆ ಬಂದಿದ್ದರು. ಸಂಜೆಯವರೆಗೆ ನಮ್ಮೊಂದಿಗೇ ಇದ್ದು ಆ ದೃಶ್ಯವನ್ನು ತುಂಬಿಕೊಟ್ಟಿದ್ದರು ತಾವೆ ರೊಟ್ಟಿ ಮಾಡಲಿಕ್ಕೆ ಬೇಕಾದ ಹಂಚು ಮಣೆ, ಮಗಚಿ ಹಾಕಲಿಕ್ಕೆ ಸ್ಟೀಲಿನದೊಂದು ಕೈ-ಎಲ್ಲವನ್ನು ತಂದಿದ್ದರು.

ಜೊತೆಗೆ ಸಿದ್ಧವಾಗಿದ್ದ ರೊಟ್ಟಿಗಳನ್ನು ದೃಶ್ಯಕ್ಕೆ ಬೇಕಾದ ಹಸಿ ಹಿಟ್ಟನ್ನು ತಯಾರಿ ಮಾಡಿಕೊಂಡಿದ್ದರು. ಆ ದೃಶ್ಯ ಮಾಡಲಿಕ್ಕೆ ಏನೇನೋ ಕಾರಣಕ್ಕೆ ತಡವಾಯಿತು. ಆಕೆಗೆ ಮತ್ತೆ ಮನೆಗೆ ಹೋಗಿ ಅಡುಗೆ ಮಾಡಲಿಕ್ಕೆ ತಡ ಆಗುತ್ತೆ ಎನ್ನುವ ಆತಂಕ. ಅಂತೂ ಆ ಭಾಗದ ಚಿತ್ರೀಕರಣ ಮುಗಿದಾಗ ಸಂಜೆ ಆರು ಗಂಟೆಯಾಗಿಬಿಟ್ಟಿತ್ತು. ಜಯಶ್ರೀಯವರಿಗೆ ನೆಲದ ಮೇಲೆ ಕುಳಿತು ಮಾಡಲಿಕ್ಕಾಗಲಿಲ್ಲ, ಕಾರಣ ಅವರನ್ನು ಕಾಡುತ್ತಿದ್ದ ಕಾಲು ನೋವು. ಪ್ರಯತ್ನ ಪಡ್ತೀನಿ’ ಎಂದು ನಾವು ಕಥೆ ಹೇಳಲು ಹೋದಾಗ ಹೇಳಿದ್ದರೂ ಶೂಟಿಂಗ್‌ನಲ್ಲಿ ಸಾಧ್ಯವಾಗಲಿಲ್ಲ. ನೆಲದ ಮೇಲೆ ಕುಳಿತುಕೊಳ್ಳದಿದ್ದರೆ ನಾಚ್ಯುರಲ್ ಆಗಿ ಕಾಣದೇ ಹೋಗುತ್ತಿತ್ತು. ಅದಕ್ಕಾಗೆ ಫೈನಲ್ ಮಾಡುವಾಗ ಜಯಶ್ರೀಯವರ ಮುಖಕ್ಕೆ ಈಕೆಯ ರೊಟ್ಟಿ ತಟ್ಟುವ ಕೈಯನ್ನು ಹಾಕಿ ದೃಶ್ಯವನ್ನು ಮ್ಯಾಚ್ ಮಾಡಿದ್ದರು.

ಮತ್ತೊಮ್ಮೆ ನಾವು ಶೂಟ್ ಮಾಡಲಿಕ್ಕೆ ಹೋದಾಗ ನಮಗಾಗಿ ರೊಟ್ಟಿಯ ಜೊತೆ ತರಕಾರಿಯ ಪಲ್ಯವನ್ನು ಮಾಡಿದ್ದರು. ರೊಟ್ಟಿಯ ಮೇಲೆ ಆ ತಾಯ ಕೈ ಬೆರಳುಗಳ ಗುರುತು ಹುಡುಕಿದೆ. ತುಂಬಾ ಸಂತೋಷದಿಂದ ನಾನು ಮತ್ತು ಚಂದ್ರಹಾಸರು ಮಾತ್ರ ಅದನ್ನು ತಿಂದೆವು. ಚಂಚಲ ಇದ್ದಿದ್ದರೆ ತಿನ್ನುತ್ತಿದ್ದರು ಎನ್ನಿಸುತ್ತೆ. ಅಷ್ಟರಲ್ಲಿ ಅವರು ನಮ್ಮ ಟೀಂ ಬಿಟ್ಟು ಹೋಗಿದ್ದರು. ಮಿಕ್ಕವರಿಗೆ ಹೈಜಿನ್ ಇಲ್ಲ ಎನ್ನುವ ಭಾವ ಇದ್ದಿರಬಹುದೇನೋ? ಆದರೆ ನನಗನ್ನಿಸುವುದು ಎಲ್ಲರೂ ಅವರವರಮಟ್ಟಿಗೆ ಚೆನ್ನಾಗೇ ಮಾಡಿರುತ್ತಾರೆ.

ಸಣ್ಣ ಮನೆಗಳವರು ದೊಡ್ಡ ಮನೆಗಳವರಿಗಿಂತ ಕ್ಲೀನ್ ಆಗೇ ಮಾಡಿರುತ್ತಾರೆ, ಮತ್ತು ಅವರಿಗಾಗಿ ಎಂದು ಮಾಡಿಕೊಂಡಿರುತ್ತಾರೆ ಆದ್ದರಿಂದ ಅದರಲ್ಲಿ ಏನನ್ನೋ ಹುಡುಕುವುದು ಸರಿಯಲ್ಲ. ನಾವು ತಿನ್ನುತ್ತಿದ್ದಾಗ ಆಕೆಯ ಕಣ್ಣುಗಳಲ್ಲಿ ಪ್ರೀತಿ ಕಾಣುತ್ತಿತ್ತು. ಅವರಿಗೆ ಏನನ್ನಾದರೂ ಹೇಳಬೇಕು ಅನ್ನಿಸಿತು ‘ಅಮ್ಮಾ ಎಷ್ಟು ಚೆನ್ನಾಗಿ ಮಾಡಿದ್ದೀರಿ’ ಎಂದರೆ ಕೃತಕವಾದೀತು ಅವರ ಕೈಗಳನ್ನು ಒಮ್ಮೆ ಒತ್ತಿ ಹಿಡಿದೆ. ಭಾವಗಳು ಹಾಗೇ ಆಕೆಯ ಮನಸ್ಸಿಗೆ ಪ್ರವಹಿಸಿತು.

‍ಲೇಖಕರು Admin

September 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: