ಪಿ ಚಂದ್ರಿಕಾ ಅಂಕಣ – ಅಲ್ಲಿ ಬೀದಿ ಕಟ್ಟಲು ಕುಳಿತೆ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

2

ಮೊದಲಿಂದಲೂ ಮುಸಲ್ಮಾನ ಸ್ನೇಹಿತರ ಜೊತೆ ಬೆಳೆದ ನನಗೆ ಕೇರಿ ಹೊಸದೇ ಆದರೂ ವಾತಾವರಣ ಚಿರಪರಿಚಿತ. ಮಸೀದಿ ಬಿದ್ದ ದಿನವೂ ನನ್ನೂರಿನಲ್ಲಿ ಮುಸಲ್ಮಾನ ಹುಡುಗರ ಹೆಗಲ ಮೇಲೆ ಹಿಂದೂ ಹುಡುಗರ ಕೈ ಇತ್ತು. ಕಣ್ಣುಗಳಲ್ಲಿ ಸ್ನೇಹವಿತ್ತು. ಹೊರಗಿನ ವಿಪರೀತಗಳ ಬಗ್ಗೆ ಇಬ್ಬರಲ್ಲೂ ಆತಂಕವಿತ್ತು. ಆದರೆ ಒಬ್ಬರ ಮೇಲೆ ಒಬ್ಬರಿಗೆ ಅಪನಂಬಿಕೆ ಇರಲಿಲ್ಲ. ಬ್ರಾಹ್ಮಣರ ಮನೆಯ ನನಗೋ, ಮುಸಲ್ಮಾನರು ಮಾಡುವ ಸೀರೊಟ್ಟಿ ಶ್ಯಾವಿಗೆ ಪಾಯಿಸದ ಮೇಲೆ ಅಪಾರ ಪ್ರೀತಿ.

ರಂಜಾನ ಹಬ್ಬದಲ್ಲಿ ಸ್ನೇಹಿತೆ ತಾಜುಮಾ ಮನೆಗೆ ನನ್ನ ಖಾಯಂ ಭೇಟಿ. ತಾಜುಮಾಳ ತಾಯಿ ‘ಬೊಮ್ಮನ್ ಕಾ ಬಚ್ಚಿಕೊ’ ಎಂದು ಬೇರೆಲ್ಲಾ ಖಾದ್ಯಗಳನ್ನು ಮಾಡುವ ಮೊದಲು ಎತ್ತಿಡುತ್ತಿದ್ದರು. ತಾಜುಮಾಗೆ ನಮ್ಮ ಮನೆಯ ತಿಳಿ ಸಾರು ಇಷ್ಟವಾಗುತ್ತಿತ್ತು. ಆದರೆ ಅದನ್ನು ಅವಳು ‘ತುಳಿ ಸಾರು’ ಎನ್ನುತ್ತಿದ್ದಳು. ಅವಳು ಹಾಗೆನ್ನುವಾಗಲೆಲ್ಲಾ ನಾವು ನಗುತ್ತಿದ್ದೆವು. ಎಷ್ಟು ಸಲ ಹೇಳಿದರೂ ಒಮ್ಮೊಮ್ಮೆ ಕಷ್ಟ ಪಟ್ಟು ಸರಿ ಮಾಡಿಕೊಂಡರೂ, ಇನ್ನೊಮ್ಮೆ ಹೇಳುವಾಗ ಹಾಗೇ ಹೇಳುತ್ತಿದ್ದಳು.

ಈ ಸಾಬರಿಗೂ ಕನ್ನಡಕ್ಕು ಯಾಕೋ ಆಗಿಬರಲ್ಲ ಬಿಡು ಎಂದು ಹಾಸ್ಯ ಮಾಡುತ್ತಿದ್ದೆ. ಆಗೆಲ್ಲಾ ಆಕಾಶದ ಹಾಗೆ ತಾಜುಮ ನಕ್ಕು ಬಿಡುತ್ತಿದ್ದಳು, ‘ಈ ಬೊಮ್ಮನ್‌ಗಳೆಲ್ಲಾ ನಾಲಿಗೆನ ತಿಕ್ಕಿ ತಿಕ್ಕಿ ಕಿಲೀನ್ ಮಾಡಿಕೊಂಡಿರ್ತಾರೆ’ ಎನ್ನುತ್ತಿದ್ದ ತಾಜುಮ್ಮಾಳ ಅಮ್ಮಿ ಉನ್ನೀಸಾ; ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದರು. ಪಡಖಾನೆಯಲ್ಲಿ ಜಮುಖಾನದ ಮೇಲೆ ಖಾದ್ಯಗಳನ್ನಿರಿಸಿ ಎಲ್ಲರೂ ಒಟ್ಟಿಗೆ ತಿಂದರೆ, ನನಗೆ ಮಾತ್ರ ಅಡುಗೆಮನೆಯಲ್ಲಿ ಕೂರಿಸಿ ಬೇರೊಂದು ತಟ್ಟೆಯಲ್ಲಿ ಕೊಡುತ್ತಿದ್ದರು.

ಚಿಕ್ಕ ಊರು. ಮನೆಯವರಿಗೆ ಇದು ಹೇಗೋ ಗೊತ್ತಾಗಿಬಿಡುತ್ತಿತ್ತು. ಅಜ್ಜಿ ಪಂಚಗವ್ಯವನ್ನು ಹಿಡಿದು ನಿಂತರೆ ಅದನ್ನು ತಪ್ಪಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಿದ್ದೆ. ಅಜ್ಜಿಯದ್ದು ಉಡದ ಪಟ್ಟು- ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂದು ನನ್ನನ್ನು ಚುಚ್ಚುವ ಹಾಗೆ ಶ್ಲೋಕಗಳನ್ನು ಹೇಳುತ್ತಿದ್ದಳು. ಅನಿವಾರ್ಯಕ್ಕೆ ಕುಡಿಯಲೇಬೇಕಾದ ಸ್ಥಿತಿ ಬಂದುಬಿಡುತ್ತಿತ್ತು. ಅಜ್ಜಿ ಇದನ್ನು ಮಾತ್ರಾ ಯಾವಾಗಲೂ ಜಿದ್ದಾ ಜಿದ್ದಿಯ ಹಾಗೆ ತೆಗೆದುಕೊಳ್ಳುತ್ತಿದ್ದಳು. ನನ್ನ ಸಂಕಟಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ತಾಜುಮಾಗೆ ಚಿಕ್ಕವಯಸ್ಸಿಗೇ ಮದುವೆಯಾಯಿತು. ಅಷ್ಟೇ ಬೇಗ ತಲ್ಲಾಖ್ ಆಗಿ ತವರಿಗೆ ಬಂದುಬಿಟ್ಟಿದ್ದಳು. ಅವರಣ್ಣನೇ ಅವಳನ್ನು ಬೈಕ್‌ನಲ್ಲಿ ಕಾಲೇಜಿಗೆ ಬಿಡುತ್ತಿದ್ದ.

ನಮ್ಮ ಹತ್ತಿರ ಮಾತಾಡಿಹೋದ ಆ ಗಂಡಸು ಥೇಟ್ ತಾಜುಮಾನ ಅಣ್ಣ ಉಮರ್ ಥರಾನೇ ಇದ್ದ. ಅದೇ ಕಣ್ಣುಗಳು ಅವನೇನಾ ಇವನು ಎನ್ನಿಸಿದರೂ ‘ಅವ ಯಾಕೆ ಬರ್ತಾನೆ? ಅದೂ ಬಯಲು ಸೀಮೆಯಿಂದ ಮಂಗಳೂರಿಗೆ’. ಒಳಗೇ ಅನುಮಾನ. ನಮ್ಮೂರಿನ ಎಷ್ಟೋ ಜನ ಮುಸ್ಲಿಮರು ಕೆಲಸ ಹುಡುಕಿಕೊಂಡು ಮಂಗಳೂರಿಗೇ ಬರುತ್ತಿದ್ದರು. ಇಲ್ಲಿಂದ ಬಾಂಬೆ, ದುಬೈಗೆ ಹೋಗುತ್ತಿದ್ದರು.    

ಅಲ್ಲಾ ಹೀಗೆ ವರ್ಷಾ ವರ್ಷ ಮಳೆಗಾಲಕ್ಕೆ ಮನೆಗಳನ್ನು ಕಳಕೊಳ್ಳುವ ಜನ ಇನ್ನೂ ಯಾಕೆ ಇಲ್ಲೆ ಉಳಿದಿದ್ದಾರೆ? ಎನ್ನುವ ಅಚ್ಚರಿ ನಮಗೆ. ಚಿಕ್ಕ ಪುಟ್ಟ ಹುಡುಗಿಯರು, ಹುಡುಗರು ಸಮುದ್ರಕ್ಕೆ ಒಡ್ಡಿದ್ದ ತಡೆಗೋಡೆಯ ಮೇಲೆ ಸಲೀಸಾಗಿ ನಡೆಯುತ್ತಾ ಬರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ತಡೆಗೋಡೆಯನ್ನು ಮೀರಿ ಕಾಣುತ್ತಿದ್ದ ಸಮುದ್ರ ಕಣ್ಣ ಪಾಪೆಯನ್ನೂ ಮೀರಿ ಎದೆಯಲ್ಲಿ ಚಿತ್ರ ಮೂಡಿಸತೊಡಗಿತು. ಮನಸ್ಸಿಗೆ ಒಂದು ಸಮಾಧಾನ ಕೂಡಾ, ನಾವು ಮಾಡಿಕೊಂಡಿದ್ದ ಕಥೆಗೆ ಇದು ಸರಿಯಾದ ಜಾಗ ಆಗಬಲ್ಲದು ಎಂದು.

ಪಳ್ಳಿಗೆ ಅಂಟಿಕೊಂಡ ಹಾಗೆ ಸಮುದ್ರ ನೆಲವನ್ನು ಕೊರೆಯದಂತೆ ಅಡ್ಡಲಾಗಿ ಹಾಕಿರುವ ದೊಡ್ಡ ತಡೆಗೆ ಆ ಕಲ್ಲುಗಳನ್ನು ಎಲ್ಲಿ ತಂದರು? ಹೇಗೆ ಹಾಕಿದರು? ಅಂಥಾ ದೊಡ್ಡ ಗೋಡೆಗಳನ್ನೂ ಸಮುದ್ರದ ಅಲೆಗಳ ಅಬ್ಬರ ಹೇಗೆ ನುಂಗಿಬಿಡುತ್ತದೆ? ಅಲ್ಲೇ ದಡದಲ್ಲಿ ಯಾವ ನಂಬಿಕೆಯಲ್ಲಿ ಮನೆಗಳನ್ನು ಕಟ್ಟಿಕೊಂಡು ರಾತ್ರಿಗಳನ್ನು ನೆಮ್ಮದಿಯಾಗಿ ಕಳೆಯುತ್ತಾರೆ? ಎಂದೆಲ್ಲಾ ಯೋಚಿಸುವಾಗಲೇ ಚಂದ್ರಹಾಸರು ತಡೆಗೋಡೆಯ ಮೇಲೆ ನಿಂತು ‘ಬನ್ನಿ’ ಎಂದು ನಮ್ಮನ್ನು ಕರೆದರು. ಜಾರುವ ಚಪ್ಪಲಿಗಳನ್ನು ನೆಲಕ್ಕೆ ಬಿಟ್ಟರೆ ಅಂಗಾಲು ಸುಟ್ಟುಬಿಡಬಹುದು ಎನ್ನುವ ಭಯ ಬೇರೆ. ಮೆಟ್ಟಿದ್ದ ಚಪ್ಪಲಿಯನ್ನೂ ನಮ್ಮನ್ನೂ ಜೋಪಾನ ಮಾಡಿಕೊಳ್ಳುತ್ತಾ ಬಂಡೆಗಳ ಮೇಲೇರತೊಡಗಿದೆವು. ಇದ್ದಕ್ಕಿದ್ದ ಹಾಗೆ ಕಟ್ಟೆಯೇ ಇಲ್ಲದ ವಿಶಾಲ ಸಮುದ್ರ ಒಮ್ಮೆಗೇ ಗೋಚರಿಸಿ ಮನಸ್ಸು ನಿರಾಳವಾಗಿಬಿಟ್ಟಿತು.

ನಮ್ಮ ಹಿಂದೆ ಮನೆಗಳು ಮರಳ ರಾಶಿ, ಹುಡುಗರು, ಗಂಡಸು, ಹೆಂಗಸು ಎಲ್ಲರೂ ಮರೆತು ಹೋಯಿತು. ಸೂರ್ಯನ ಬಿಸಿಗೆ ಬೀಸುವ ಗಾಳಿಯೂ ಮತ್ತಷ್ಟು ಬಿಸಿಯಾಗಿ ಬೆವರು ದೇಹದಿಂದ ಇಳಿಯ ತೊಡಗಿತು. ಬೇಂದ್ರೆಯವರ ‘ದೀಪ’ ಕವಿತೆ ನೆನಪಾಯಿತು. ‘ನೆತ್ತಿ ಕಾದು ಅಂಗಾಲು ಕಾದು ನಾನಾದೆ ಬತ್ತಿಗೊಂಡ ಬೆಂಕಿ’. ಅದನ್ನು ಹೇಳಿದಾಗ ‘ಎಲ್ಲಿಯ ಸಮುದ್ರ? ಎಲ್ಲಿ ಬೇಂದ್ರೆ?’ ಎಂದರು ಪಂಚಾಕ್ಷರಿ. ‘ಇಲ್ಲ ಇಲ್ಲ ಅವರು ಗೋಕರ್ಣದಲ್ಲಿ ಸೂರ್ಯ ನಮಸ್ಕಾರ ಹಾಕುತ್ತಿರುವ ಅದ್ಭುತವಾದ ಫೋಟೋ ನನ್ನ ಬಳಿಯಿದೆ’ ಎಂದೆ. ‘ಇರಬಹುದು ಬೇಂದ್ರೆಯನ್ನ ನಾವು ಸುಮ್ಮನೆ ಅಳೀಲಿಕ್ಕಾಗಲ್ಲ ಅವರ ಅನುಭವವೇ ವಿಚಿತ್ರ’ ಎಂದರು ಚಂದ್ರಹಾಸ್.

ಪ್ರತಿ ವರ್ಷ ಸರ್ಕಾರ ತಡೆ ಗೋಡೆಯನ್ನು ನಿರ್ಮಿಸಲಿಕ್ಕೆ ಕೋಟ್ಯಾಂತರ ಹಣವನ್ನು ಸುರಿಯುತ್ತಿರುವ ಬಗ್ಗೆ, ಅದರಲ್ಲೂ ದುಡ್ಡು ಹೊಡೆಯುವ ಜನರ ಬಗ್ಗೆ ಒಂದಿಷ್ಟು ಸಂಗತಿಗಳನ್ನು ಹೇಳಿದರು. ನಮಗೋ ಕುತೂಹಲ. ಮತ್ತೆ ಆ ಗೋಡೆ ಎಲ್ಲಿ ಹೋಗುತ್ತದೆ? ಎಂದು. ‘ದಡಕ್ಕೆ ಬಂದು ಬಡಿಯುವ ಅಲೆಗೆ ಸಣ್ಣ ಶಕ್ತಿ ಎಂದುಕೊಳ್ಳಬೇಡಿ, ಇಂಥಾ ದೊಡ್ಡ ಬಂಡೆಗಳನ್ನು ತನ್ನೊಳಗೆ ಜಾರಿಸಿಕೊಂಡುಬಿಡುತ್ತದೆ. ಮನುಷ್ಯನ ಹಠಮಾರಿತನಕ್ಕೆ ಪ್ರಕೃತಿ ಕೊಡುವ ಉತ್ತರವಿದು’ ಎಂದರು.

ಗಾಳಿಗೆ ತನ್ನೆದೆಯ ಮೇಲೆ ಮೂಡುವ ಅಲೆಗಳನ್ನು ತಂದು ದಡಕ್ಕೆ ಹಾಯೆಂದು ಬಿಡುತ್ತಿದ್ದ ಈ ಸಮುದ್ರ ಕೆರಳಿಬಿಟ್ಟರೆ ಅಷ್ಟೆಲ್ಲಾ ಅನಾಹುತ ಆಗಿಬಿಡುತ್ತಲ್ಲಾ ಎಂದುಕೊಂಡೆ. ಹರಿಯುತ್ತಿದ್ದ ಬೆವರು ತಡೆಗೋಡೆಯ ಮೇಲೆ ನಿಂತ ನಮಗೆ ಇನ್ನೂ ನಾವು ನೋಡಬೇಕಿರುವ, ಹುಡುಕಬೇಕಿರುವ ಕಥೆಯಲ್ಲಿ ಕಾಡಿದ ಮನೆ ಬಾಕಿಯಿದೆ ಎನ್ನುವುದನ್ನು ನೆನಪಿಸತೊಡಗಿತು. ಆ ಕೇರಿಯಲ್ಲಿದ್ದ ಗೂಡಂಗಡಿಯ ಬಳಿ ಹೋಗಿ ಲೋಕಲ್ ಸೋಡಾ ಕುಡಿದೆವು. ತಣ್ಣಗಿದ್ದದ್ದರಿಂದ ಜೀವ ಬಂದಂತೆನ್ನಿಸಿತು. ‘ನಾವಿಲ್ಲಿ ಬರಬೇಕೆಂದರೆ ಇಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಹೇಗಾದರೂ ಅವರನ್ನ ಮಾತಾಡಿಸಿ’ ಎಂದು ನನಗೂ, ಚಂಚಲಾಗೂ ಸೂಚನೆ ಕೊಟ್ಟರು ನಿರ್ದೇಶಕರು. ಬೀಡಿ ಹೊಸೆಯುತ್ತಾ ಕೂತಿದ್ದ ಹೆಂಗಸರ ಗುಂಪಿನ ಕಡೆಗೆ ಹೋದೆವು. ಕಿವಿಯ ಅಲೀಖತ್ತು, ತಲೆಗೆ ಕಟ್ಟಿದ್ದ ಬಟ್ಟೆ, ಕೊರಳಲ್ಲಿ ಕರಿಮಣಿ ಸರ, ಬಳೆಗಳಿಲ್ಲದ ಕೈಗಳು, ಅದೊಂದು ಜಗತ್ತನ್ನು ಸೃಷ್ಟಿಸಿಬಿಟ್ಟಿತ್ತು.

ಯಾವ ಕಲಾ ನಿರ್ದೇಶಕನಿಗೂ ಸಾಧ್ಯವಾಗದ ವಾತಾವರಣ, ಯಾವ ಮೇಕಪ್‌ಮನ್‌ಗೂ ಎಟುಕಲಾಗದ ನೋವೇ ಕೊಟ್ಟ ಹೊಳಪಿನ ಕಣ್ಣುಗಳು, ಬೀಡಿ ಸುತ್ತಿ ಸುತ್ತಿ ಬೆರಳುಗಳಿಗೆ ಗುರುತು ಮೂಡಿಸುವ ದಾರ, ತುಂಬು ತೋಳಿನ ರವಿಕೆ… ಒಂದು ಕ್ಷಣ ಅವರಲ್ಲಿ ನಾವಾಗಿದ್ದೆವು. ಕತ್ತರಿಸುತ್ತಿದ್ದ ಎಲೆ, ಸುತ್ತುವ ವೈಖರಿಗೆ ‘ಆಹಾ’ ಎಂದೆ. ತಾಯಿಯ ತೊಡೆಯ ಮೇಲಿದ್ದ ಮಗುವಿನ ಕೆನ್ನೆ ಸವರಿದೆ. ಅಪರಿಚಿತ ಸ್ಪರ್ಷಕ್ಕೆ ಮಗು ಅಳತೊಡಗಿತು. ನಮ್ಮನ್ನು ಕುತೂಹಲದಿಂದ ನೋಡುತ್ತಾ ಮಾತಿಗಿಳಿದರು.

ಹೆಂಗೆಳೆಯರ ಜಗತ್ತೇ ಹಾಗೆ. ‘ನೀವಿಲ್ಲಿಗೆ ಎಂತಕ್ಕೆ ಬಂದದ್ದು?’ ಎನ್ನುವ ಅವರ ಪ್ರಶ್ನೆಗೆ ಸಿನೆಮಾ ತೆಗೆಯಲಿಕ್ಕೆ ಎನ್ನುವ ಉತ್ತರವನ್ನೇ ಕೊಟ್ಟೆ. ‘ಹೌದೋ ಅದರಲ್ಲಿ ನೀವೆಂತ ಮಾಡುದು ಆಕ್ಟಿಂಗಾ?’. ‘ಇಲ್ಲ ನಾನು ಕಥೆ, ಸಂಭಾಷಣೆ ಬರೆದಿದ್ದೇನೆ. ಜೊತೆಗೆ ಈಗ ಆರ್ಟ್ ಡಿರೆಕ್ಷನ್ ಮಾಡಬೇಕು. ಇವರು ಸಹಾಯಕ ನಿರ್ದೇಶಕಿ’ ಎಂದು ಚಂಚಲಾರ ಕಡೆ ಕೈತೋರಿಸಿದೆ. ‘ಎಂಥಾ ಕಥೆ ಬರೀತೀರಾ?’ ಕೇಳಿದರು ಕುತೂಹಲದಿಂದ. ಏನು ಹೇಳುವುದು? ಉಲ್ಲಾಳ ಸೂಕ್ಷ್ಮ ಪ್ರದೇಶ. ಅಲ್ಲಿ ಯಾವಾಗಲೂ ಹಿಂದೂ ಮುಸಲ್ಮಾನರ ಜಗಳ ನಡೆಯುತ್ತಲೇ ಇರುತ್ತದೆ. ಅಂಥಾ ಕಥೆಯನ್ನು ನಿಮ್ಮ ಏರಿಯಾಗೆ ಬಂದು ಶೂಟ್ ಮಾಡ್ತೀವಿ ಎನ್ನಲಾಗುತ್ತದಾ? ಅಕಸ್ಮಾತ್ ಅದೇ ವಿಕೋಪಕ್ಕೆ ಹೋದರೆ? ಈ ಸುಳಿವನ್ನು ಬಿಟ್ಟುಕೊಡದ ಹಾಗೆ ಮಾತಾಡಬೇಕು ಎಂದು ಮುಂಚೆಯೇ ತೀರ್ಮಾನವಾದ ಕಾರಣ ಯೋಚನೆ ಮಾಡಿ ‘ನಿಮ್ಮ ಥರದ ಒಬ್ಬ ಹೆಂಗಸು ಮನೆ ಕಟ್ಟಿಕೊಳ್ಳಲು ನಡೆಸುವ ಹೋರಾಟದ ಕಥೆ’ ಎಂದೆ.

ಅದಕ್ಕೆ ಅವರಲ್ಲಿ ಒಬ್ಬಳು, ‘ಎಂಥಾ ಹೇಳುವುದು? ನೀವು ಸುಮ್ಮನಿರಿ, ನಮ್ಮಂಥವರು ಸಿನಿಮಾದ ಹೀರೋಯಿನ್‌ಗಳಾಗುವುದಾ? ತಮಾಷೆ ಮಾಡುವುದಾ ಹೇಗೆ?’ ಎಂದಳು. ಸಿನಿಮಾ ಎಂದರೆ ರಂಗಿನ ಜಗತ್ತು. ಪ್ರೀತಿ- ಪ್ರೇಮಗಳೇ ಮುಖ್ಯವಾದ ವಿಷಯ, ತೆಳ್ಳಗೆ ಬಳಸುವ ಗಾಢವಾದ ಮೇಕಪ್ ಹಾಕಿಕೊಂಡ ಹೆಣ್ಣುಗಳು ಮಾತ್ರವೇ ಹೀರೋಯಿನ್‌ಗಳು ಎಂದು ಭಾವಿಸಿರುವ ಅವರಿಗೆ, ಹೀಗೆ… ಹೀಗೆ… ಎಂದು ವಿವರಣೆ ಕೊಡುವ ಹೊತ್ತಿಗೆ ನಾನು ಹೈರಾಣಾದೆ.

ನನ್ನ ಬಳಿ ಮಾತಾಡುತ್ತಲೇ ಬೀಡಿ ಸುತ್ತುತ್ತಿದ್ದ ಅವರ ಕೈಚಳಕಕ್ಕೆ ಮನಸೋತು, ಅವರ ಬಳಿಯಿಂದ ಮೊರವನ್ನು ತೆಗೆದುಕೊಂಡೆ. ‘ನೀವು ಬೀಡಿ ಸುತ್ತುತ್ತೀರಾ?’ ಎಂದು ನಗುತ್ತಾ ನನ್ನ ಕೈಗಿತ್ತ ಮೊರದಲ್ಲಿ ಬೀಡಿಯ ಎಲೆ, ಅದನ್ನು ಕತ್ತರಿಸುವ ಕತ್ತರಿ, ತುಂಬಲಿಕ್ಕೆ ಪುಡಿ, ಅದನ್ನು ಮಡಚಲಿಕ್ಕೆ ಸಣ್ಣ ಚಿಮ್ಮಟದ ಥರದ ಹತಾರ ಮತ್ತು ದಾರ ಎಲ್ಲ ಇತ್ತು. ಸುಮಾರು ಪ್ರಯತ್ನಪಟ್ಟೆ. ಆದರೆ ಸುತ್ತಿದ ಎಲೆಯೊಳಗೆ ತುಂಬುವ ಪುಡಿ ಜಾರಿ ಜಾರೇ ಬೀಳುತ್ತಿತ್ತು. ‘ನೀವು ಇಲ್ಲೇ ಇದ್ದುಬಿಡಿ, ಬೀಡಿ ಕಟ್ಟುವುದನ್ನು ಚೆನ್ನಾಗಿ ಕಲೀಬಹುದು’ ಎಂದು ಚಂದ್ರಹಾಸರು ನಗುತ್ತಾ ಹೇಳಿದಾಗ, ‘ಅವರಿಲ್ಲಿ ಇದ್ದುಬಿಟ್ಟರೆ ಅವರ ಗಂಡ ಸುಮ್ಮನೆ ಬಿಡುತ್ತಾರಾ?’ ಎಂದು ಹಾಸ್ಯ ಮಾಡಿ, ‘ಈ ಬೀಡಿ ಕಟ್ಟುವುದರಿಂದ ಏನು ಸಿಗುತ್ತೆ ಬಿಡಿ’ ಎಂದಳು. ‘ನೀವೆಲ್ಲಾ ಇದರಿಂದ ದುಡೀತಿಲ್ವಾ?’ ಎನ್ನುತ್ತಾ ಅವರ ಬಳಿ ತೆಗೆದುಕೊಂಡ ಎಲ್ಲಾ ವಸ್ತುಗಳನ್ನು ಅವರಿಗೇ ವಾಪಾಸು ಮಾಡಿದೆ.

‘ನಮ್ಮ ದುಡಿಮೆ ಯಾವುದಕ್ಕೂ ಬರಲ್ಲ, ಅಬ್ಬಬ್ಬಾ ಎಂದರೆ ಒಂದು ಸೀರೆ’ ಎಂದರು ವಿಶಾಧದಿಂದ. ‘ಮತ್ತೆ ಬರುತ್ತೇನೆ’ ಎಂದು ಅಲ್ಲಿಂದ ಬಂದೆ. ಎಲ್ಲರೂ ಸ್ವಲ್ಪ ಮುಂದೆ ಬಂದೆವು. ಅಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ನಿರ್ದೇಶಕರು ನಿಂತು ಸಂತೋಷದಲ್ಲಿ ‘ಅಲ್ಲಿ ನೋಡಿ’ ಎಂದು ಕೈ ತೋರಿದರು. ನಾವು ನಾಕೂ ಜನ ಮಾತು ಬಾರದವರಂತೆ ಅದ್ಭುತವೊಂದು ಘಟಿಸಿಯೇಬಿಟ್ಟಿತು ಎನ್ನುವಂತೆ ದಂಗಾಗಿ ನಿಂತುಬಿಟ್ಟೆವು. ಕಲ್ಪನೆಯೊಂದು ಕಣ್ಣೆದುರು ಸಾಕಾರಗೊಂಡಂತಿತ್ತು ಆ ಮನೆ.

। ಇನ್ನು ಮುಂದಿನ ವಾರಕ್ಕೆ ।     

‍ಲೇಖಕರು Avadhi

June 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: