ನಿತ್ಯ ನವನವೀನ ಆಲಯ

ಸಿದ್ಧಾರೂಢ ಕಟ್ಟಿಮನಿ ವಿಜಯಪುರ
ಅದೆಷ್ಟು ಬಾರಿ ನೋಡಲಿ ನಿನ್ನ ಮತ್ತೆ ಮತ್ತೆ ಕಡಿಮೆಯಾಗುತ್ತಿಲ್ಲ
ಕುತೂಹಲ ನೀ ಇತಿಹಾಸದ ಕುರುಹು ನನ್ನಲಿ ಪ್ರಶ್ನೆಗಳು
ನಿನ್ನ ಪಾದದಲಿ ಮಲಗಿದರೆ ಅಂಗಾತ ಆಕಾಶವೆಲ್ಲ ನೀನೆ ಆಕ್ರಮಿಸಿಕೊಂಡಂತೆ
ಕಣ್ಕುಕ್ಕಿಸಿ ಮರೆಯಾದ ಬೆಳಕು ಬಿಟ್ಟು ಸೂರ್ಯ, ಚಂದ್ರನ ಹಾಗೆ ನಲಿಯಲು

ನಿನ್ನ ರಾಣ ಮಲಗಿಹನು ಮಣ್ಣ ಮಮತೆಯಲಿ ತನ್ನ ಸಹಕುಟುಂಬ
ಸಮೇತವಾಗಿ ಕೇಳುತಲಿ ಪ್ರವಾಸಿಗರಾಡುವ ಪಿಸುಮಾತುಗಳನು
ಪಿಸುಗುಡುವ ಈ ಸೊಗಸು ಆನಂದದ ಮೊಗಸಾಲೆಯಲಿ
ಸಂಭ್ರಮ ನಿತ್ಯ ನವನವೀನ ಈ ಆಲಯದಲಿ

ನೀನು ನಿಂತಿರುವುದು ಎಂಟು ದಿಕ್ಕುಗಳು ಗೋಚರಿಸುವ
ಅದ್ಭುತ ಹೆಬ್ಬಂಡೆಯ ಮೇಲೆ ತೆಂಗಿನ ಚಿಪ್ಪಿನಾಕಾರದ ಬಿಜ್ಜಳನ
ಈ ವಿಜಯಪುರದಲಿ. ಶಾಹಿಯ ಶಾಯಿ ಒಣಗಿದರೂ, ಅಕ್ಷರ
ನಮಗೆ ಲಭ್ಯ ಪ್ರತಿ ಹೆಜ್ಜೆಗೂ ಏದುಸಿರಿನ ಉಚ್ವಾಸ-ನಿಶ್ವಾಸಗಳ ಸಮರ.

ಜನರಿಗಿಂತ ಎತ್ತರವಾದೆ ಅಂದುಕೊಳ್ಳುವಷ್ಟರಲ್ಲೇ ಎದುರಾದರು ನೋಡು
ಸಾಯುವ ವಯಸ್ಸಲ್ಲೂ ತರುಣ-ತರುಣಿಯಂತೆ ಚೆಡ್ಡಿ ಉಟ್ಟ ವಿದೇಶಿಗರು
ಬಾನಾಡಿಗಳು ನೆಗೆದಾಡುವುದು ಕಣ್ಣಿಗೆ ಹಬ್ಬ ಬಿರುಬಿಸಿಲಿಗೂ
ಬಾಡದ ಹೂವಂತೆ ನೀ ನಗುತ ಸ್ವಾಗತಿಸುವೆ, ನಿನ್ನ ಪ್ರೀತಿ ಅಪಾರ ಅಬ್ಬಬ್ಬಾ.

ನಗರವೇ ಚಿಕ್ಕದಾಗುತ ಸಾಗಿದೆ ನೆಲ ನಕ್ಷತ್ರಗಳಾಗಿ ಗೋಚರಿಸಿವೆ ಕಟ್ಟಡಗಳು
ನಿನ್ನಂಗಳದಲಿ ಅಂದಿನ ದಿನಮಾನಗಳಲಿ ಅಸಂಖ್ಯ ಮೂಟೆಗಳು ಮಲಗಿದ್ದವು
ಈ ನೆಲ ಕಾಯುವ ಸೈನಿಕರ ಆಹಾರವಾಗಿ. ಸಾಕ್ಷಿ ಹೇಳುತಿವೆ ತೋಪುಗಳು
ಕಪ್ಪು ಕಾಳಿ ನದಿಯಂತೆಯೇ ಆಗಿವೆ ರಸ್ತೆಗಳು, ಮನುಷ್ಯರೋ ಇರುವೆಗಳು.

ಮಳೆಯಲಿ ಹೆದರುವರು ನಿನ್ನೆಡೆ ಬಂದಾಗ ತಂಗಾಳಿಯಲಿ ಹಸಿರು
ನೋಡುತ ಪ್ರೇಮಿಗಳು ಹಾಗೆಯೇ ಕನಸುಮೇಲೋಗರ ಮುಗಿಲು ಮುಟ್ಟಿದ
ಮನಸ್ಸು, ಕಾಯುತಿದೆ ಕಾಮನಬಿಲ್ಲು ಹಿಡಿಯಲು ಸದಾ ಸಾಥ್ ನೀಡುತಿದೆ
ಆನಕೊಂಡಾದಂಥ ಉಗಿಬಂಡಿ ಕೂಗುತಾ ಹಗಲಿರುಳು ಆಜಾನ್

ಬಾನಿಗೆ ಹಸ್ತಲಾಘವ ಮತ್ತೂ ಚುಂಬನ ನೀಡುವ ಉತ್ಸಾಹದಿ ಮನ ಉಲ್ಲಾಸದಲಿ
ತಲೆ ತಿರುಗಿಸಿದೆ ನಯನ ತಾನು ಸೆರೆಹಿಡಿದ ಕೆಳಗಿನ ಕುಂಚದಿ ಬರೆದಂಥ ಚಿತ್ತಾರ
ಗೋಳದೊಳಗೆ ಪ್ರತಿಧ್ವನಿಗಳು ಏಳು ಸಲ ಜೈಹಿಂದ್ ಅನ್ನದಾತನಿಗೆ
ಗುಮ್ಮಟವಿದು ಅತ್ಯದ್ಭುತ ಜಗದೊಳಗೆ ಸದಾ ಮೆರೆದು ಮರೆಸುತಿರಲಿ ಜನಮನ ಹೀಗೆ.
ಮುಖಪುಟ ಚಿತ್ರ /ಸಂಗನ ಪಾಟೀಲ್





0 Comments