ಪಾವನಾ ಎಂಬ ದೊಡ್ಡ ಕನಸು..

ಜಿ ಎನ್ ಮೋಹನ್ 

ಪುಟ್ಟ ಆಕೃತಿ, ದೊಡ್ಡ ಕನಸು..

ಈ ಎರಡೂ ಒಂದುಗೂಡಿದರೆ ಅದಕ್ಕೆ ಪಾವನಾ ಎಂದು ಹೆಸರಿಡಬಹುದೇನೋ .

ಅದು ‘ಸಂವಾದ’ದ ದಿನಗಳು.ಯಾರಿಗೆ ಪತ್ರಿಕೋದ್ಯಮ ಕೈಗೆ ಧಕ್ಕುವುದಿಲ್ಲವೋ ಅಂತಹವರನ್ನು ಮುರಳಿ ಮೋಹನ್ ಕಾಟಿ  ಹುಡುಕಿ ಪತ್ರಿಕೋದ್ಯಮದ ಪಾಠ ಹೇಳಿಕೊಡುತ್ತಿದ್ದರು. ಹಾಗೆ ಅವರೊತ್ತಾಸೆಯ ಮೇರೆಗೆ ನಾನು ಅಲ್ಲಿದ್ದೆ. ನನ್ನ ಎದುರಿಗೆ ಒಂದು ಗುಬ್ಬಚ್ಚಿ ಮರಿ ಕುಳಿತಿತ್ತು. ಆಮೇಲೆ ಗೊತ್ತಾಯಿತು ಅದಕ್ಕೆ ಪಾವನಾ ಅಂತ ಹೆಸರು ಅಂತ.

pavana bhoomiಪತ್ರಿಕೋದ್ಯಮದ ಕನಸುಗಣ್ಣಿದ್ದ ಹಲವರ ಮಧ್ಯೆ ಈ ಪಾವನಾ ನನ್ನ ಮನಸ್ಸಿನಲ್ಲಿ ಉಳಿಯಲು ಕಾರಣ ಆಕೆಗೆ ಪತ್ರಿಕೋದ್ಯಮ ಅಲ್ಲದೆ ಮತ್ತೊಂದು ಕನಸಿತ್ತು. ಬರೆಯುವುದು. ತನ್ನೊಳಗಿನ ಎಲ್ಲಕ್ಕೂ ಕವಿತೆಯ ಬಾಗಿಲಿಡುವುದು. ಆ ಕಾರಣಕ್ಕಾಗಿಯೇ ಪಾವನಾ ನನಗೆ ಅಂದಿಗೂ, ಇಂದಿಗೂ ಇಷ್ಟವಾಗುವ ಹುಡುಗಿ. ಪಾವನಾ ಚಟ ಪಟ ಮಾತನಾಡುವ ಗಮನವಿಟ್ಟು ಆಲಿಸುವ, ಹೇಳಿದ್ದನ್ನು ಸರಿಯಾಗಿ ಗ್ರಹಿಸುವ, ಮುಲಾಜಿಲ್ಲದೆ ಪ್ರಶ್ನೆ ಎಸೆಯುವ ಹುಡುಗಿ.
ಹಾಂ.. ಆ ಕಾರಣಕ್ಕೂಆಕೆ ನನಗೆ ಇಷ್ಟವಾದದ್ದು.

ನಾನು ‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..’ ಎನ್ನುವ ಬ್ರೆಕ್ಟ್ ಬಳಗಕ್ಕೆ ಸೇರಿದವ. ಹಾಗಾಗಿ ಎಲ್ಲರಿಗೂ ಪ್ರಶ್ನಿಸಿದರಷ್ಟೇ ಮಾಹಿತಿ ಎನ್ನುವ ಕಿವಿಮಾತು ಹೇಳುತ್ತಾ ಬರುತ್ತಿದ್ದೆ. ಬೇರೆಯವರಿಗೆ ಪ್ರಶ್ನೆ ಕೇಳುವುದನ್ನು ಕಲಿಸಬೇಕಿತ್ತು. ಆದರೆ ಪಾವನಾಗೆ ಮಾತ್ರ ಅವಳು ಕೇಳುವ ಪ್ರಶ್ನೆಗೆ ನಾನೇ ತಾಯಾರಿ ಮಾಡಿಕೊಂಡು ಉತ್ತರ ಹೇಳಬೇಕಾದ ಅಗತ್ಯ ಬಂದಿತ್ತು

ಪಾವನಾ ನಗು ಚೆನ್ನ. ‘ಅತ್ತಾರ ಅತ್ತುಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ’ ಎಂದು ಬೇಂದ್ರೆ ಹೇಳಿದರೂ ಕೇಳದ ಹುಡುಗಿ. ನಾನು ನಕ್ಕೇ ಸಿದ್ಧ ಎಂದು ಪಟ್ಟು ಹಿಡಿದಾಕೆ. ಹಾಗಾಗಿ ಅವಳು ಇದ್ದರೆ ನಗು ಗ್ಯಾರಂಟಿ.
ಪಾವನಾ ಕವಿತೆ ಬರೆದಳು. ಕವಿತೆಯ ನವ ಸಾಕ್ಷರರು ಹೇಗೆ ಬರೆಯುತ್ತಾರೆ ಎಂದು ಗೊತ್ತಿದ್ದ ನಾನು ಪಾವನಾಳ ಕವಿತೆಯೂ ಹಾಗೆ ಇರಬಹುದು ಎಂದು ಓದುವ ಮುಂಚೆಯೇ ಷರಾ ಬರೆದು ಕೂತಿದ್ದೆ. ಆದರೆ ಯಾವಾಗ ಪಾವನಾ ಸೀಟಿ ಹೊಡೆಯುತ್ತಿರುವ ಫೋಟೋ ಹಾಕಿಕೊಂಡು ಒಂದೊಂದೇ ಕವಿತೆ ತನ್ನ ಗೋಡೆಗೆ ಏರಿಸುತ್ತಾ ಹೋದಳೋ ಒಹ್ ಎನಿಸಿತು.

ಪಾವನಾ ಗಾಲಿಬ್ ಗೂ ಕಿವಿ ಮಾತು ಹೇಳಬಲ್ಲವಳು-

ಈ ಹೊತ್ತು ಕಿಟಕಿಯಾಚೆ

ಇಣುಕದಿರು

ಮಂದಿರ ಮಸೀದಿಗಳ

ಧೂಳು ನಿನ್ನ ಶ್ವಾಸಕ್ಕೂ

ಹೊಕ್ಕೀತು

ನಿದಿರೆ ಮದಿರೆ ಮೈಥುನದ

ಹೊರತಾಗಿ ಇಲ್ಲಿ ಮಿಕ್ಕೆಲ್ಲವೂ

ಪಳೆಯುಳಿಕೆಗಳಾಗಿ

ಗೋರಿ ಹೊದ್ದು

ಮಲಗಿವೆ

ಹಜಾರದ ಯಾವ ದಿಕ್ಕಿಗೂ

ಓಗೊಡಬೇಡ

ಮೊದಲೇ ಹೇಳುತ್ತೇನೆ

ಭಜನೆ ಕೀರ್ತನೆ

ಬಾಂಗ್ ಉಪದೇಶಗಳ

ಹೊರತು ಇಲ್ಲಿ ಏನೂ

ಕೇಳಿಸಲಿಕ್ಕಿಲ್ಲ

ಎಷ್ಟೆಂದರೆ ಹೂ ಅರಳುವ

ಸದ್ದಿರಲಿ..

ನರಳುವ ಸದ್ದೂ

ಕೇಳದಷ್ಟು ..
13177631_957549677647971_3322271206891416342_nಪಾವನಾ, ಭಾವನಾ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಆಕೆಯ ಕವಿತೆಗಳಲ್ಲಿ ಈಜುತ್ತಿದ್ದರೆ ಆಕೆಯ ಭಾವಕೋಶದ ಅರಿವಾಗುತ್ತದೆ. ನಮ್ಮ ವಿಧ್ಯಾರ್ಥಿ ಬದುಕಿನಲ್ಲಿ ಕೈ ಹಿಡಿದು ನಡೆಸಲು, ಅರಿವಿನ ಬೆಳಕು ಹಂಚಲು, ಸಮಾಜವನ್ನು ಅರ್ಥ ಮಾಡಿಕೊಳ್ಳಲು, ಚಳವಳಿಗಳ ಸಾಲೇ ಇತ್ತು. ಆಶ್ಚರ್ಯ, ಪಾವನಾಳಿಗೆ ಸ್ಪಷ್ಟ ನೋಟವಿದೆ, ಯಾವ ದಾರಿ ಹಿಡಿಯಬೇಕು ಎಂದು ಗೊತ್ತಿದೆ. ಮಾತನಾದುತ್ತಿರುವುದರ ಬಗ್ಗೆ ಅರಿವಿದೆ. ಎಲ್ಲಿಂದ ಬಂತು ಈ ಎಲ್ಲಾ..

ಹೀಗೆ ಪಾವನಾಳ ಕವಿತೆ, ಅದರಲ್ಲಿನ ಭಾವ, ಅದರಲ್ಲಿನ ನೋಟ ಎಲ್ಲವನ್ನೂ ಓದುವಾಗಲೇ ನಾಳೆಗೆ ಸಾಕಷ್ಟು ಬೆಳಕಿದೆ ಎನಿಸುವುದು. ಉಸಿರುಗಟ್ಟಿದ್ದೇವೆ ಈ ಕ್ಷಣ ಎಂದ ಮಾತ್ರಕ್ಕೆ ನಾಳೆ ಗಾಳಿ ಆಡುವುದಿಲ್ಲ ಎಂದರ್ಥವಲ್ಲ ಎನಿಸುವಂತೆ ಪಾವನಾ ಕವಿತೆಗಳು ಮಾಡಿಬಿಡುತ್ತವೆ

ನನಗೆ ಕ್ಯಾಸ್ಟ್ರೋ ನೆನಪಾಗುತ್ತಾರೆ ಅವರು ಹೇಳುತ್ತಾರೆ ‘ಮೋಡ ಕವಿದಿದೆ ಎಂದ ಮಾತ್ರಕ್ಕೆ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕೆ ಉದುರಿದರೆ ಪ್ರತಿಯೋಬ್ಬರಿಗೂ ಒಬ್ಬೊಬ್ಬ ಸೂರ್ಯನಿದ್ದಾನೆ’

ಹಾಗೆ ಭರವಸೆಯ ಸಾಲಲ್ಲಿ ನಡೆಯುವಂತೆ ಮಾಡಿದ ಪಾವನಾ, ನಿನ್ನ ಅಲೆಮಾರಿತನದೊಂದಿಗೆ ನಾವೂ ಇದ್ದೇವೆ..

ಇದೇ ಶನಿವಾರ ಸಂಜೆ ೫ ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ
ಪಾವನಾ ಕೃತಿ ಅಲೆಮಾರಿ ಮೀರಾ
ಬಿಡುಗಡೆ ಇದೆ ಬನ್ನಿ 

alemari meera
 

‍ಲೇಖಕರು Admin

May 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Manjula gh

    ನಿಜಕ್ಕೂ ತುಂಬಾ ಒಳ್ಳೆಯ ಕೆಲಸ ನಿಮ್ಮದು ಮೋಹನ್ ಸರ್,,ಪ್ರತಿಭೆಗಳನ್ನು ಗುರ್ತಿಸಿ, ಅವರನ್ನು ಪ್ರೋತ್ಸಾಹಿಸಿ ಬೆಳೆಸುವದರ ಹಿಂದೆ ನಿಮ್ಮ ಶ್ರಮದ ನೆರಳು ಕಾಣುತ್ತೆ ಅದರಿಂದ ಪ್ರಜ್ವಲಿಸುವ ಬೆಳಕಾಗಿ ಪವನಾ ಕಾಣಿಸುತ್ತಾಳೆ,
    ಅಭಿನಂದನೆಗಳು ಪವನಾ,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: