ಪಾಲಹಳ್ಳಿ ವಿಶ್ವನಾಥ ಕಥೆ – ಡಾನ್ ಕ್ಯಾಮಿಲೊ…

ಪಾಲಹಳ್ಳಿ ವಿಶ್ವನಾಥ

ಜೊವಾನಿ ಗ್ವರೇಶಿ (1908 – 1968) ಇಟಲಿಯ ಒಬ್ಬ ಪ್ರಸಿದ್ಧ ಪತ್ರಕರ್ತರು, ವ್ಯಂಗ್ಯಚಿತ್ರಕಾರರು ಮತ್ತು ಹಾಸ್ಯಲೇಖಕರು. ಅವರ ಖ್ಯಾತ ಸೃಷ್ಟಿ ಪಾದ್ರಿ ಡಾನ್ ಕ್ಯಾಮಿಲೊ. ಈ ಪಾದ್ರಿಯ  ಪುಟ್ಟ ಪ್ರಪಂಚ ಇರುವುದು  ಪೊ ನದಿಯ ಕಣಿವೆಯಲ್ಲಿ, ಇದು ಉತ್ತರ ಇಟಲಿಯ ಬಯಲು ಪ್ರದೇಶದ ಯಾವುದೇ ಪುಟ್ಟ ಊರು ಇರಬಹುದು. ಇಲ್ಲಿ ಹವಾ ಹೆಚ್ಚು ಬದಲಾಗುವುದೇ ಇಲ್ಲ. ನೋಟವೂ ಅಷ್ಟೇ. ಊರಿನ  ಪಾದ್ರಿ ಡಾನ್ ಕ್ಯಾಮಿಲೊ  ಮತ್ತು ಅವನ ಎದುರಾಳಿ ಪೆಪ್ಪೋನ್ ಈ ಕಥೆಗಳ ಮುಖ್ಯಪಾತ್ರಗಳು ಪೆಪ್ಪೋನ್ ಕೆಂಪು ಪಕ್ಷದವನು.

ಪಾದ್ರಿಯು ಯಾವ ಪಕ್ಷಕ್ಕೂ ಸೇರಿರದಿದ್ದರೂ ಅವನ ಒಲವು ಬಿಳಿ ಪಕ್ಷದ ಕಡೆ. ಕೆಂಪು, ಬಿಳಿ ಹೆಸರುಗಳು ಮಾತ್ರ. ಪಾದ್ರಿಗಾಗಲಿ ಪೆಪ್ಪೋನಿನಾಗಲಿ ರಾಜಕೀಯ ನಂಬಿಕೆಗಳಿಗಿಂತ ಮುಖ್ಯವಾದದ್ದು ಊರಿನ ಒಳಿತು. ಊರಿನ ಹಿತಕ್ಕಾಗಿ ಏನನ್ನೂ ಮಾಡಲು ಸಿದ್ಧ. ಜಗಳವಾಡಲೂ ಕೂಡ! ಇಬ್ಬರೂ ಧೃಡ ಕಾಯರು, ಚಿಕ್ಕವರಿದ್ದಾಗ  ಇಬ್ಬರೂ ಜಟ್ಟಿಗಳಾಗಿದ್ದರು. ಹಠವಾದಿಗಳು. ಮೂರನೆಯ ಪಾತ್ರ ಏಸು ಕ್ರಿಸ್ತ.  ಕ್ರಿಸ್ತನು ಚರ್ಚ್‌ನಲ್ಲಿನ ದೊಡ್ಡ ಶಿಲುಬೆಯಿಂದ  ಊರಿನಲ್ಲಿ ನಡೆಯುವುದನ್ನು ವೀಕ್ಷಿಸುತ್ತಿರುತ್ತಾನೆ.

ಪಾದ್ರಿ ಕ್ಯಾಮಿಲೊಗೆ  ಕ್ರಿಸ್ತನ ಜೊತೆ ಮಾತನಾಡುವ ಅಬ್ಯಾಸ. ಒಂದೊಂದು ಬಾರಿ ಕ್ರಿಸ್ತ  ಉತ್ತರವನ್ನೂ  ಕೊಡುತ್ತಾನೆ. ಈ ಕಥೆಗಳ  ಕ್ರಿಸ್ತ ಐತಿಹಾಸಿಕ ಏಸುಕ್ರಿಸ್ತನಲ್ಲ, ಗ್ವರೇಶಿ ಹೇಳಿದಂತೆ ‘ನನ್ನ  ಸಾಕ್ಷಿಪ್ರಜ್ಞೆಯಷ್ಟೆ!ʼ ಬೇರೆ ಹಲವಾರು ಪುಸ್ತಕಗಳ ಜೊತೆ ಗ್ವರೇಶಿ ನಾಲ್ಕು ಡಾನ್ ಕ್ಯಾಮಿಲೊ ಪುಸ್ತಕಗಳನ್ನು ಬರೆದರು. 1960ರ ದಶಕದಲ್ಲಿ ನಮ್ಮಲ್ಲಿ ಕೆಲವರು ಈ ಪುಸ್ತಕಗಳನ್ನೆಲ್ಲಾ ಓದಿದ್ದೆವು, ಗ್ವರೇಶಿಯವರು ಬರೆದ ಮೊಟ್ಟ ಮೊದಲ ಕ್ಯಾಮಿಲೊ ಕಥೆಯ ಭಾವಾನುವಾದ ಇದು.

1950-60ರ ದಶಕದ  ಶೀತಲ ಯುದ್ಧದ ಸಮಯದಲ್ಲಿ ಬಲ ಮತ್ತು ಎಡ  ಪಕ್ಷಗಳ ಬಣಗಳ  ನಡುವಿನ ವೈರುಧ್ಯವನ್ನು  ಒಂದು ಪುಟ್ಟೂರಿನಲ್ಲಿ ವಿಡಂಬನೆಯೊಂದಿಗೆ ಸಾಮಾನ್ಯ ಮಾನವರ ಮಧ್ಯ ರೂಪಿಸಲಾಗಿತ್ತು. ಎರಡೂ ಬದಿಗಳನ್ನು ತಮಾಷೆಯಾಗಿ ಕಾಣುವಂತೆ ಮಾಡುವ  ಅವರ ಕೌಶಲ್ಯವು  ಲೇಖಕರಿಗೆ ವ್ಯಾಪಕ ಓದುಗರನ್ನು  ಗಳಿಸಿಕೊಟ್ಟಿತು. ಪ್ರಪಂಚ  ಬದಲಾಗಿದೆ ಎನ್ನುತ್ತಾರೆ. ಆದರೆ ಮನುಷ್ಯ ನಿಜವಾಗಿಯೂ ಬದಲಾಗಿದ್ದಾನೆಯೇ? ಮತ್ತೆ ಯುದ್ಧ ನಡೆಯುತ್ತಿದೆ. ಹಳೆಯ ನಂಬಿಕೆಗಳನ್ನು, ಹಳೆಯ ನಡೆವಳಿಕೆಗಳನ್ನು ಮನುಷ್ಯ ಬಿಟ್ಟಿಲ್ಲ. ಆದ್ದರಿಂದ  ಡಾನ್ ಕ್ಯಾಮಿಲೊ ಕಥೆಗಳು ಈಗಲೂ ಪ್ರಸ್ತುತ.

ಚುನಾವಣೆ ಬಂದು ಹೋಗಿತ್ತು. ಎಂದಿನಂತೆ ಬಿಳಿ ಮತ್ತು ಕೆಂಪು ಪಕ್ಷಗಳ ಮಧ್ಯೆ ವಾಗ್ವಾದ, ಹಲವಾರು ಜಗಳಗಳು  ನಡೆದಿದ್ದವು.  ಆ ಸಮಯದಲ್ಲಿ ಪಾದ್ರಿ ಡಾನ್ ಕ್ಯಾಮಿಲೊ ಚರ್ಚಿನಲ್ಲಿ ಒಂದೆರಡು ಬಾರಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ  ಬಿಳಿ ಪಕ್ಷದ ಕಡೆ ಮಾತನಾಡಿದ್ದ. ಏನೇ ಅಗಲಿ, ಕೆಂಪು ಪಕ್ಷ ಗೆದ್ದಿತ್ತು ಮತ್ತು ಅದರ ನಾಯಕ ಪೆಪ್ಪೋನ್ ಊರಿನ ಮಹಾಪೌರನಾಗಿದ್ದ. 

 ಎಂದಿನಂತೆ ಪಾದ್ರಿ ತನ್ನ ಕೆಲಸವೆಲ್ಲಾ ಮುಗಿದ ನಂತರ ಗೋಡೆಯ ಮೇಲಿದ್ದ ಶಿಲುಬೆಗೇರಿದ ಏಸುಕ್ರಿಸ್ತನ ಜೊತೆ ಮಾತು ಶುರುಮಾಡಿದ 

“ಓದು ಬರಹ ಬರದವರೆಲ್ಲ ನಗರಸಭೆಯ ಸದಸ್ಯರಾಗಿಬಿಟ್ಟಿದಾರೆ. ಅದು ಸಾಲದಂತೆ ಪೆಪ್ಪೋನ್ ಮೇಯರ್ ಕೂಡ!.”
“ಕ್ಯಾಮಿಲೊ , ಓದು ಬರಹ ಅಷ್ಟೇನೂ ಮುಖ್ಯವಲ್ಲ, ಒಳ್ಳೆಯದು ಮಾಡಲು ಮನಸ್ಸು, ಉತ್ಸಾಹವಿದ್ದರೆ ಸಾಕು” 

“ಆದರೂ ಪೆಪ್ಪೋನ್ ಮಹಾಪೌರ?”

“ಅವನೇನೂ ಕೆಟ್ಟವನಲ್ಲ ಕ್ಯಾಮಿಲೊ” 

“ಪ್ರಭು, ನಿಮಗೆ  ಯಾರೂ ಕೆಟ್ಟವರಲ್ಲ”

ಸಂಜೆ ಸೈಕಲಿನಲ್ಲಿ ಬಜಾರಿಗೆ ಹೋಗಿ ತರಕಾರಿ ತೆಗೆದುಕೊಂಡು ವಾಪಸ್ಸು ಚರ್ಚಿಗೆ ಬರುತ್ತಿರುವಾಗ ಯಾರೋ   ಹಿಂದಿನಿಂದ ಬಂದು ಪಾದ್ರಿಯ ತಲೆಯ ಮೇಲೆ ಕೋಲಿನಿಂದ ಹೊಡೆದರು. ಕ್ಯಾಮಿಲೊ ಸೈಕಲಿನಿಂದ ಬಿದ್ದ. ತಲೆ ಬುರುಡೆ ಮೇಲೆ ಪುಟ್ಟ ಗಾಯವಾಗಿತ್ತು. ಚರ್ಚಿಗೆ  ಬಂದು ಏಸುವಿನ ಜೊತೆ ಮಾತಲಾಡಲು ಶುರುಮಾಡಿದ “

“ಏನಾಯಿತು ಗೊತ್ತಲ್ಲವೆ? ಯಾರೋ ನನಗೆ ಹೊಡೆದರು” 

ಏನೂ ಉತ್ತರ ಬರಲಿಲ್ಲ. 

“ಪ್ರಭು, ಈಗ ಏನು ಮಾಡಲಿ?”

“ಏನಿಲ್ಲ, ಏಟು ಬಿದ್ದಿರುವ ಜಾಗಕ್ಕೆ ಮುಲಾಮು ಹಚ್ಚಿಕೊ.. ಡಾನ್ ಕ್ಯಾಮಿಲೊ! ನಮ್ಮ ನಿಯಮ ಮರೆಯಬೇಡ, ಯಾರು ಏನು ಮಾಡಿದರೂ ಕ್ಷಮಿಸಬೇಕು”

“ಪ್ರಭು, ನನಗೆ ಏಟು ಬಿದ್ದರೆ, ನಿಮಗೂ ಏಟು ಬಿದ್ದಹಾಗಲ್ಲವೆ? ಅದೇ ನನಗೆ ಹೆಚ್ಚು ಯೋಚನೆ”

“ಅಲ್ಲ ಕ್ಯಾಮಿಲೊ, ನನ್ನನ್ನು ಶಿಲುಬೆಗೆ ಹಾಕಿದವರನ್ನು ನಾನು ಕ್ಷಮಿಸಲಿಲ್ಲವೇ”

“ಬೈಬಲಿನಲ್ಲಿ..”. 

“ಏನು ಕ್ಯಾಮಿಲೊ, ನನಗೇ  ಬೈಬಲು ಹೇಳಲು ಬರುತ್ತಿದ್ದೀಯ.”

“ಮುಂದೆ ಏಂದಾದರೂ ನನ್ನ ತಲೆಗೆ ಏಟುಬಿದ್ದು ತಲೆಬುರುಡೆ ಒಡೆದರೆ ನೀವೇ ಜವಾಬ್ದಾರಿ.”

“ಹೋಗಲಿ ಬಿಡು. ನಿನಗೇ ಇದು ಒಂದು ಪಾಠ ಈ ಸೂರಿನ ಕೆಳಗೆ ರಾಜಕೀಯ ತರಬೇಡ”

ಡಾನ್ ಕ್ಯಾಮಿಲೋಗೆ ಸಮಾಧಾನವಾಗದಿದ್ದರೂ ಸುಮ್ಮನಾದ. ಆದರೂ ತನ್ನ ತಲೆಗೆ ಯಾರು  ಹೊಡೆದಿರಬಹುದೆಂದು ಯೋಚಿಸುತ್ತಲೇ ಇದ್ದ. ಮಾರನೆಯ ದಿನ ಚರ್ಚಿನ ಬಾಗಿಲು ತೆಗೆದು  ಯಾರೋ ತಪ್ಪೊಪ್ಪಿಗೆಯ ಕೋಣೆಯತ್ತ ಹೋದ ಸದ್ದಾಯಿತು (ಯಾರಾದರೂ ತಪ್ಪು ಮಾಡಿದರೆ ಚರ್ಚಿಗೆ ಬಂದು ಆ ಕೋಣೆಯಲ್ಲಿ ಪಾದರಿಯ ಮುಂದೆ ತಪ್ಪು ಒಪ್ಪಿಕೊಂಡರೆ ಅವರಿಗೆ ಕ್ಷಮೆ ಸಿಗುತ್ತದೆ). ಪುಟ್ಟೂರಲ್ಲವೇ? ಧ್ವನಿಯಿಂದಲೇ ಕ್ಯಾಮಿಲೊಗೆ ಅದು ಪೆಪ್ಪೋನ್ ಎಂದು ತಿಳಿಯಿತು. ಅದಲ್ಲದೆ ದೂರದಿಂದ ನೋಡಿದ್ದ ಕೂಡ ಸರಿ, ಡಾನ ಕ್ಯಾಮಿಲೊ ಕೋಣೆಗೆ ಹೋಗಿ ಪರದೆಯ ಹಿಂದೆ ನಿಂತ 

“ಪಾದ್ರಿ, ನಾನು .. 

“ಬಹಳ ದಿನಗಳಿಂಧ ನೀವು ಈ ಕಡೆ ಬಂದೇ ಇಲ್ಲ? 

“ಐದಾರು ವರ್ಷಗಳಾಗಿರಬಹದು”

“ತಾವು ತಪ್ಪು ಮಾಡೇ ಇಲ್ಲವೋ ಏನೋ “ 

“ಇಲ್ಲ, ಬಹಳ  ತಪ್ಪುಗಳನ್ನು ಮಾಡಿದ್ದೇನೆ.” 

“ಉದಾಹರಣೆಗೆ?“

 “ಮೊನ್ನೆಯದು ದೊಡ್ಡ ತಪ್ಪು”

“ಅಂತಹದ್ದು ಏನು’ 

“ಮೊನ್ನೆ ಸಂಜೆ ನಾನು ಪಾದ್ರಿಯ ತಲೆಯ ಮೇಲೆ ಕೋಲಿನಿಂದ ಹೊಡೆದೆ’ 

“ಪಾದ್ರಿಗೆ ಹೊಡೆದರೆ ದೇವರಿಗೆ ಹೊಡೆದಹಾಗಲ್ಲವೆ?”

“ಆ ತರಹ ಅಲ್ಲ, ನಾನು ಪಾದ್ರಿ ಕ್ಯಾಮಿಲೋವನ್ನು ಹೊಡೆಯಲಿಲ್ಲ. ವಿರೋಧಿ ಪಕ್ಷದ ಕಡೆ ಮಾತಾಡುವ  ವ್ಕಕ್ತಿಯನ್ನು ಹೊಡೆದೆ. ಹೌದು, ತಪ್ಪಾಯಿತು.“ 

ಕ್ಯಾಮಿಲೋವಿಗೆ ಅಲ್ಲೇ  ಒಂದು ಏಟು ಹಾಕೋಣ ಎನ್ನಿಸಿತು. ಆದರೆ ಹೇಗೋ ತಡೆದುಕೊಂಡು “ಸರಿ, ಹೊರಗೆ ಬಂದು 100 ಮಂತ್ರಗಳನ್ನು ಹೇಳು” ಎಂದ. ಪೆಪ್ಪೋನ್ ಹೊರಬಂದು ಕ್ರಿಸ್ತನ ವಿಗ್ರಹದ ಮುಂದೆ ತಲೆ ಬಾಗಿ ಕುಳಿತು ಮಂತ್ರಗಳನ್ನು ಹೇಳಲು ಶುರುಮಾಡಿದ. ಅವನು ಹಾಗೆ ಕುಳಿತಿದ್ದನ್ನು ನೋಡಿ ಕ್ಯಾಮಿಲೋವಿಗೆ ಹಳೆಯ ಜಗಳಗಳು ನೆನಪಾದವು. ಸೇಡು ತೀರಿಸಿಕೊಳ್ಳುವ ಆಮಿಷ ಉಂಟಾಯಿತು.

“ಬೇಡ ಕ್ಯಾಮಿಲೊ” ಶಿಲುಬೆಯಿಂದ ಕ್ರಿಸ್ತನ ಧ್ವನಿ ಬಂದಿತು.

“ಇಲ್ಲ, ಇವನಿಗೆ ಹೊಡೆಯಲೇ ಬೇಕು. ಅವನು ದೊಣ್ಣೆಯಿಂದ ಹೊಡೆದ. ನಾನು ಬರೀ ಕೈನಿಂದ ಹೊಡೆಯುತ್ತೇನೆ.”

“ನಿನ್ನ ಕೈ ಇರುವುದು ಜನರಿಗೆ ಸಹಾಯಮಾಡಲು, ಹೊಡೆಯಲು ಅಲ್ಲ”

  ಕಣ್ಣು ಮುಚ್ಚಿ ಕುಳಿತಿದ್ದ ಪೆಪೋನಿನ ಹಿಂದೆಯೇ ಕ್ಯಾಮಿಲೊ ನಿಂತಿದ್ದ.

“ಪ್ರಭು ಹೇಳಿದ್ದು ಕೈನಿಂದ ಹೊಡೆಯಬೇಡ ಎಂದು, ಕಾಲಿನ ಬಗ್ಗೆ ಏನೂ ಹೇಳಲಿಲ್ಲವಲ್ಲ.”

ಪಾದ್ರಿ ಗೋಡೆಯ ಮೇಲಿನ ಕ್ರಿಸ್ತನತ್ತ ನೋಡಿದ 

“ಒಂದು! ಅಷ್ಟೇ ಕ್ಯಾಮಿಲೊ! ಒಂದು! ”

ʼಸರಿʼ ಎಂದು ಕ್ಯಾಮಿಲೊ ಪೆಪ್ಪೋನಿಗೆ ಒಂದು ಒದೆ ಕೊಟ್ಟ, ಜೋರಾಗಿಯೇ ಇತ್ತು. ಹೊಡೆತಕ್ಕೆ ಪೆಪ್ಪೋನ್ ಮುಂದೆ ಬಿದ್ದ. ಮುಖಕ್ಕೆ ಏಟೂ ಬಿದ್ದಿತು. ಸಾವರಿಸಿಕೊಂಡು ಎದ್ದು ಕ್ಯಾಮಿಲೋವಿಗೆ 

‘ನಾನು ಇದನ್ನೇ ಹತ್ತು ನಿಮಿಷಗಳಿಂದ ಎದಿರು ನೋಡುತ್ತಿದ್ದೆ. ಈಗ ತೃಪ್ತಿಯಾಯಿತು.”

ಪಾದ್ರಿ “ನನಗೂ ತೃಪ್ತಿ ಆಯಿತು” ಎಂದ. 

ಮೇಲೆ ಶಿಲುಬೆಯತ್ತ ನೋಡಿದ ಕ್ಯಾಮಿಲೊವಿಗೆ ಪ್ರಭುವಿನಿಂದ ಏನೂ  ಉತ್ತರ ಸಿಗಲಿಲ್ಲ.

‍ಲೇಖಕರು Admin

November 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: